ಕಾನೂನ್ ಸೆನ್ಸ್
ತಿಮ್ಮಣ್ಣ ಭಾಗವತ್
“ಧರ್ಮೈಕತಾನಾಃ ಪುರುಷಾ ಯದಾಸನ್ ಸತ್ಯವಾದಿನಃ| ತದಾ ನ ವ್ಯವಹಾ ರೋಭೂನ್ನದ್ವೇಷೋ ನಾಪಿ ಮತ್ಸರಃ|| ನಷ್ಟೇ ಧರ್ಮೇ ಮನುಷ್ಯಾಣಾಂ ವ್ಯವಹಾರಃ ಪ್ರವರ್ತತೇ| ದೃಷ್ಟಾ ಚ ವ್ಯವಹಾರಾಣಾಂ ರಾಜಾ ದಂಡಧರ ಸ್ಮೃತಃ||". ಅನ್ಯಾಯ ಅಸತ್ಯ, ಅಧರ್ಮಗಳೇ ಇಲ್ಲದ ಸತ್ಯಯುಗದ ಕಾಲದಲ್ಲಿ ನ್ಯಾಯ ವ್ಯವಸ್ಥೆಯ ಅಗತ್ಯವೇ ಇರಲಿಲ್ಲ. ಆದರೆ ಕ್ರಮೇಣ ಧರ್ಮ ಪೃವೃತ್ತಿ ಕಡಿಮೆಯಾಗಿ ಜನರಲ್ಲಿ ಅನ್ಯಾಯ, ಮೋಸ ವಂಚನೆಗಳ ಪೃವೃತ್ತಿ ಜಾಸ್ತಿಯಾದಾಗ ಅದರಿಂದ ಉಂಟಾಗುವ ವ್ಯಾಜ್ಯಗಳನ್ನು ಬಗೆಹರಿಸಿ ನ್ಯಾಯ ನೀಡಲು ಮತ್ತು ಅಪರಾಧಿಗಳನ್ನು ಶಿಕ್ಷಿಸಲು ರಾಜರಿಗೆ ದಂಡಾಧಿಕಾರ ನೀಡಲ್ಪಟ್ಟಿತು.
ಒಂದು ಲಕ್ಷಕ್ಕೂ ಅಧಿಕ ಶ್ಲೋಕಗಳನ್ನೊಳಗೊಂಡ ಮನು-ಸ್ಮೃತಿಯ ಸಾರವನ್ನು ದೇವರ್ಷಿ ನಾರದರು 12000 ಶ್ಲೋಕಗಳಲ್ಲಿ ವಿವರಿಸಿದರು. ಮುಂದೆ ಮಾರ್ಕಂಡೇಯ ಮಹರ್ಷಿಗಳು 8000 ಶ್ಲೋಕಗಳಲ್ಲೂ, ಆನಂತರ ಮಹರ್ಷಿ ಭಾರ್ಗವರು 4000 ಶ್ಲೋಕಗಳಲ್ಲೂ ಅದರ ಸಾರವನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ವಿವರಿಸಿದರು ಎಂದು ಹೇಳಲಾಗಿದೆ.
ತಮ್ಮ ಕಾನೂನೇ ಶ್ರೇಷ್ಠವೆಂದು ನೆಪೋಲಿಯನ್ ಕೋಡ್, ಬ್ರಿಟಿಷ್ ಕಾಮನ್-ಲಾ ಆಧರಿಸಿ 1898ರಲ್ಲಿ ಲಾರ್ಡ್ ಮೆಕಾಲೆ ರಚಿಸಿದ ಭಾರತೀಯ ದಂಡ ಸಂಹಿತೆ ಹಾಗೂ 1860ರಲ್ಲಿ ರಚಿತವಾದ ಸಿವಿಲ್ ಪ್ರೊಸೀಜರ್ ಕೋಡ್‌ಗಳಲ್ಲಿರುವ ಕಲಮುಗಳಿಗೆ ಸಮಾನವಾದ ಅನೇಕ ಕಲಮುಗಳು ಮತ್ತು ಕಾನೂನು ಶಬ್ದಗಳು ಸಹಸ್ರಾರು ವರ್ಷಗಳ ಹಿಂದೆ ರಚಿತವಾದ ಮನುಸ್ಮೃತಿ ಆಧಾರಿತ ನಾರದ ಸ್ಮೃತಿಯಲ್ಲಿವೆ ಅಂದರೆ ನಮ್ಮ ಋಷಿಗಳ ಅಗಾಧ ಜ್ಞಾನದ ಕುರಿತು ನಾವು ಹೆಮ್ಮೆ ಪಡಬೇಕು.
ಇದನ್ನೂ ಓದಿ: Thimmanna Bhagawath Column: ಮತದಾರರ ಹೃದಯ ಗೆದ್ದರೆ ವೋಟ್ ಚೋರಿಯ ಅಗತ್ಯವೇಕೆ ?
ನಾವೆಲ್ಲ ಯಕ್ಷಗಾನದಲ್ಲಿ ನೋಡಿದ ಅಥವಾ ಪುರಾಣಗಳಲ್ಲಿ ಒದಿದ ನಾರದ ಮುನಿಗಳೇ ಇದನ್ನು ರಚಿಸಿದರೋ ಅಥವಾ ಆ ನಾರದರು ಬೇರೆಯೋ ಎಂಬುದು ಸ್ಪಷ್ಟವಿಲ್ಲವಾದರೂ ಆ ಗೊಂದಲ ಈ ಗ್ರಂಥದ ಮೌಲ್ಯವನ್ನು ಕಡಿಮೆ ಮಾಡುವದಿಲ್ಲ. ನಾರದ ಸ್ಮೃತಿಯು ವ್ಯಾಜ್ಯಗಳ ತೀರ್ಮಾನ ಮತ್ತು ನ್ಯಾಯನಿರ್ಣಯಗಳ ಕುರಿತಾದ ಅತೀ ಪ್ರಾಚೀನ ಗ್ರಂಥವೆಂದು ಪರಿಗಣಿತವಾಗಿದೆ.
ಧಾರ್ಮಿಕ ತತ್ವ ಹಾಗೂ ಸೂತ್ರಗಳನ್ನು ಆಧರಿಸಿದ್ದರೂ, ಇದು ನ್ಯಾಯ ವ್ಯವಸ್ಥೆಯನ್ನು ಅದರಿಂದ ಪ್ರತ್ಯೇಕಿಸಿ ನ್ಯಾಯ ತೀರ್ಮಾನದ ಕುರಿತು ವ್ಯವಸ್ಥಿತವಾದ ನಿಯಮಗಳನ್ನು ಒದಗಿಸುತ್ತದೆ. 1)ಸಾಲ ವಸೂಲಿ 2)ಭೋಗ್ಯ ಮತ್ತು ಅಡಮಾನ ವಸ್ತುಗಳ ಕುರಿತು 3)ಜಂಟಿ ಕಾರ್ಯದ ಉತ್ಪನ್ನಗಳ ಹಂಚಿಕೆ 4) ಕೊಟ್ಟ ವಸ್ತುಗಳನ್ನು ಹಿಂಪಡೆಯುವ ಕುರಿತು 5)ಸೇವೆ ಮಾಡಲು ಒಪ್ಪಿ ಅದನ್ನು ಮಾಡದೇ ಇರುವದು 6)ಕೆಲಸ ಮಾಡಿಸಿಕೊಂಡು ಕೂಲಿ ನೀಡದಿರುವದು 7)ಮಾಲಕತ್ವವಿಲ್ಲದೆ ಮಾರಾಟ 8)ಮಾರಾಟ ಮಾಡಿದ ವಸ್ತುವನ್ನು ಖರೀದಿಸಿದವರಿಗೆ ನೀಡದಿರುವದು 9) ಖರೀದಿ ಒಪ್ಪಂದದ ಉಲ್ಲಂಘನೆ 10)ಮೋಸ ಮತ್ತು ಕಪಟತನ 11)ಜಮೀನು ಗಡಿಯ ವಿವಾದಗಳು 12)ಗಂಡು ಹೆಣ್ಣಿನ ಸಂಬಂಧದ ವಿವಾದ 13)ಹಿಸ್ಸೆ ಮತ್ತು ಉತ್ತರಾಧಿಕಾರ 14)ಹಲ್ಲೆ ಮತ್ತು ಅತ್ಯಾಚಾರ 15) ಹೊಡೆದಾಟ 16) ಮಾನಹಾನಿ, ಬೈಗುಳ 17) ಜೂಜು ಮತ್ತು ಪಂದ್ಯ (ಬೆಟ್ಟಿಂಗ್) 18) ಇತರ ವ್ಯಾಜ್ಯಗಳು ಎಂಬ 18 ವಿವಿಧ ಪ್ರಕಾರದ ವ್ಯವಹಾರಗಳು ಅಂದರೆ ಮೊಕದ್ದಮೆಗಳ ಕುರಿತು ಪ್ರತ್ಯೇಕ ವಿವರಣೆಗಳಿವೆ.
ಸೂತ್ರಗಳ ರೂಪದಲ್ಲಿರುವ ಇಡೀ ನಾರದ ಸ್ಮೃತಿಯನ್ನು ಅರ್ಥ ಮಾಡಿಕೊಂಡು ಅದರಲ್ಲಿರುವ ಅಂಶ ಗಳನ್ನು ವಿವರಿಸಿಲು ಅನೇಕ ಪುಸ್ತಕಗಳನ್ನೇ ಬರೆಯಬೇಕಾದೀತು. ಅದಕ್ಕೆ ಸಂಸ್ಕೃತ ಭಾಷೆಯ ಜ್ಞಾನವೂ ಅಗತ್ಯ. ಮೊಕದ್ದಮೆಗಳ ಪ್ರಾಥಮಿಕ ನಿಯಮಗಳ ಕುರಿತಾಗಿರುವ ಪ್ರಥಮ ಅಧ್ಯಾಯ ದಲ್ಲೇ 74 ಶ್ಲೋಕಗಳಿವೆ.
ಆ ಪೈಕಿ ಕೆಲವು ಮುಖ್ಯ ನಿಯಮಗಳು ಹೀಗಿವೆ: “ಲಿಖಿತಂ ಸಾಕ್ಷಿಣಶ್ಬೈವ ದ್ವೌವಿಧಿಪರಿಕೀರ್ತಿತೌ| ಸಂದಿಗ್ದಾರ್ಥವಿಶುದ್ಯರ್ಥ ದ್ವಯೋರ್ವಿವಾದಮಾನಯೋಃ||" ಸಾಕ್ಷ್ಯಗಳಲ್ಲಿ (Evidence) ಎರಡು ವಿಧ - ಲಿಖಿತ ದಾಖಲೆ ಮತ್ತು ಮೌಖಿಕ ಸಾಕ್ಷಿ. ಈ ಎರಡರ ಪೈಕಿ ಒಂದು ಇದ್ದರೂ ವಿವಾದ ಬಗೆಹರಿಸಲು ಅದು ಸಾಧನವಾಗುವದು. “ಭುಕ್ತಿ" ಅಂದರೆ ವಿವಾದಿತ ವಸ್ತುವಿನ ಸ್ವಾಧೀನತೆ ಅಥವಾ ಅನುಭೋಗ ಕೂಡಾ ಸಾಕ್ಷ್ಯವೆಂದು ಪರಿಗಣಿಸಲ್ಪಡುತ್ತದೆ.
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಆಧುನಿಕ ಕಾನೂನುಗಳಲಿರುವಂತೆ ಸಾಕ್ಷ್ಯ (Evidence), ಸಾಕ್ಷಿ (Witness) ಮತ್ತು ಪುರಾವೆ (ಅಂದರೆ ಲಿಖಿತ ದಾಖಲೆ)ಗಳನ್ನು ಪ್ರತ್ಯೇಕವಾಗಿ ಪರಿಗಣಿಸ ಲಾಗಿದೆ. ಮೊಕದ್ದಮೆಗಳಲ್ಲಿ ಮುಖ್ಯವಾಗಿ ಎರಡು ವಿಧ: “ಸೋತ್ತರೋನುತ್ತರಶ್ಬೈವ ಸವಿಜ್ಷೇಯೋ ದ್ವಿಲಕ್ಷಣಃ| ಸೋತ್ತರೋಭ್ಯಧಿಕೋ ಯತ್ರ ವಿಲೇಖಾ ಪೂರ್ವಕ ಪಣಃ||" ಸೋತ್ತರ (ಸ-ಉತ್ತರ) ವೆಂದರೆ ವಾದಿಯು ಪ್ರಸ್ತುತಪಡಿಸಿದ ದೂರಿನಲ್ಲಿ ದಾಖಲಿಸಿದ ಆರೋಪಗಳಿಗ ಲಿಖಿತ ರೂಪದ ಉತ್ತರವಿರುವ (Statement of Objection) ಪ್ರಕರಣ ಅಂದರೆ ಆಧುನಿಕ ಕಾನೂನಿನ ಪ್ರಕಾರ ವಿರೋಧಿಸಲ್ಪಟ್ಟ ದಾವೆ (contested law suit).
ಅನುತ್ತರವೆಂದರೆ ವಿರೋಧಿಸಲ್ಪಡದ ಪ್ರಕರಣ. ಸೋತ್ತರದಲ್ಲಿ ಆರೋಪವನ್ನು ಸಾಕ್ಷ್ಯಗಳ ಮೂಲಕ ಸಾಬೀತು ಪಡಿಸಬೇಕಾಗುತ್ತದೆ. ಆದರೆ ಅನುತ್ತರದಲ್ಲಿ ಅದು ಉಪೇಕ್ಷಿಸಲ್ಪಟ್ಟ (Ex-parte) ಪ್ರಕರಣ ಅಥವಾ ಆರೋಪವನ್ನು ಒಪ್ಪಿಕೊಂಡಂತೆಯೂ ಪರಿಗಣಿಸಬಹುದು. ಸಪಣವೆಂದರೆ ಸೋತ ವ್ಯಕ್ತಿ ಗೆದ್ದವನಿಗೆ ದಂಡ ನೀಡಬೇಕೆಂಬ ಶರತ್ತು.
“ಸಾರಸ್ತು ವ್ಯವಹಾರಾಣಾಂ ಪ್ರತಿಜ್ಞಾ ಸಮುದಾಹತಾ| ತದ್ಧಾನೌ ಹೀಯತೇ ವಾದೀ ತರಸ್ತಾಮುತ್ತರೋ ಭವೇತ್||" ಸಿಆರ್‌ಪಿಸಿ ಮತ್ತು ಸಿಪಿಸಿಯನ್ವಯ ಸಲ್ಲಿಸಬೇಕಾದ sworn-in affidavit ನಂತೆಯೇ ಪ್ರತಿಜ್ಞಾ ಪೂರ್ವಕ ಅರ್ಜಿ ಅಂದರೆ Plaint ಅನ್ನು ಸಲ್ಲಿಸಬೇಕು ಮತ್ತು ನ್ಯಾಯಪ್ರಕ್ರಿಯೆಗೆ ಅದೇ ಸಾರವಾಗುತ್ತದೆ (basis of suit proceedings).
ಅಂಥ ಅರ್ಜಿ ದೋಷಯುಕ್ತವಾಗಿದ್ದರೆ ವಾದಿಯು ಸೋಲುತ್ತಾನೆ. ಈಗಿನ ಮ್ಯಾಜಿಸ್ಟ್ರೇಟ್, ಸೆಶನ್ಸ್, ಹೈಕೋರ್ಟ್, ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರಪತಿಗಳಿರುವಂತೆ ಕುಲ, ಶ್ರೇಣಿ, ಗಣ, ಮನೋನೀತ ಮತ್ತು ಸ್ವತಃ ರಾಜ ಎಂಬ ಐದು ಶ್ರೇಣಿಯ ನ್ಯಾಯಾಲಯದ ಹಂತಗಳನ್ನು ಅದು ವಿಧಿಸುತ್ತದೆ.
ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಪುನರ್ವಿಚಾರ ಅಂದರೆ ಮೇಲ್ಮನವಿಯ ಅವಕಾಶ ವನ್ನೂ ಈ ಸ್ಮೃತಿಯು ಕಲ್ಪಿಸಿದೆ. ಈಗ ರಾಷ್ಟ್ರಪತಿಗಳಿಗಿರುವಂತೆ ಕ್ಷಮಾದಾನ ಮತ್ತು ಶಿಕ್ಷೆಯನ್ನು ಕಡಿಮೆ ಮಾಡುವ ಅಧಿಕಾರವನ್ನೂ ರಾಜನಿಗೆ ನೀಡಲಾಗಿದೆ. ನ್ಯಾಯ ನಿರ್ಣಯದ ಕುರಿತು ವಿವಿಧ ಸೂತ್ರಗಳಿವೆ.
ಉದಾಹರಣೆಗೆ ಚತುಷ್ಪಾದಗಳು - ಅಂದರೆ ಧರ್ಮ (Equity), ವ್ಯವಹಾರ- ನ್ಯಾಯಾಲಯದ ಮುಂದೆ ಮಂಡಿಸಲಾದ ವಾದ-ಪ್ರತಿವಾದಗಳು, ಚರಿತ್ರ - ಸಾಕ್ಷ್ಯಗಳು, ಇಬ್ಬರ ನಡುವೆ ನಡೆದ ವ್ಯವಹಾರದ ಶರತ್ತುಗಳು ಮತ್ತು ಎಲ್ಲಕ್ಕಿಂತ ಮಿಗಿಲಾಗಿ ರಾಜಶಾಸನ (Law) ಗಳನ್ನು ಪರಿಗಣಿಸ ಬೇಕು. ಅದರಂತೆ ಚತುಸ್ಥಾನೀಯ, ಚತುಸ್ಸಾಧನ, ಚತುರ್ವರ್ಣ ಮುಂತಾದ ಅನೇಕ ಸಂಗತಿಗಳನ್ನು ಆಧಾರವಾಗಿಸಿ ನ್ಯಾಯನಿರ್ಣಯ ನೀಡಬೇಕೆಂದಿದೆ.
“ಕರ್ತೃನಥೋ ಸಾಕ್ಷಿಣಶ್ಚ ಸಭ್ಯಾನ್ ರಾಜಾನಮೇವಚ| ವ್ಯಾಪ್ನೋತಿ ಪಾದಶೋ ಯಸ್ಮಾಚ್ಚತುರ್ವ್ಯಾಪೀ ತತಃ ಸ್ಮತಃ||" ಕರ್ತೃ ಅಂದರೆ ವಾದಿ-ಪ್ರತಿವಾದಿಗಳು, ಸಭಾ-ಸದಸ್ಯರು ಅಂದರೆ ಈಗಿನ ವಕೀಲರು ಅಥವಾ ಜ್ಯೂರಿಗಳು, ಸಾಕ್ಷಿಗಳು ಮತ್ತು ನ್ಯಾಯಾಧೀಶರು ಹೀಗೆ ನಾಲ್ಕು ಪಾದಗಳಿಗೆ ನ್ಯಾಯಪ್ರಕ್ರಿಯೆ ವ್ಯಾಪಿಸುತ್ತದೆ. ಉದ್ಘಾಟನ ಅಂದರೆ ವಾದಿ-ಪ್ರತಿವಾದಿಗಳ ಮೂಲಕ ನ್ಯಾಯಪ್ರಕ್ರಿಯೆಯ ಪ್ರಾರಂಭ, ಪ್ರತಿಷ್ಠಾಪನ-ಸಾಕ್ಷ್ಯಗಳ ಮಂಡನೆ, ನಿಮಾಲನ’ ಅಂದರೆ-ಸಭಾಸದಸ್ಯರು ಅಂದರೆ ಜ್ಯೂರಿಗಳು ಅಥವಾ ವಕೀಲರಿಂದ ಪ್ರಕರಣದ ಕುರಿತು ತಮ್ಮ ತಮ್ಮ ಅಭಿಪ್ರಾಯ ಮಂಡನೆ ಮತ್ತು ಅಂತಿಮವಾಗಿ ನಿರ್ಣಯ ವಿಜ್ಞಾಪನ: ನ್ಯಾಯಾಧೀಶರಿಂದ ನ್ಯಾಯ ನಿರ್ಣಯದ ಘೋಷಣೆ.
ಹೀಗೆ ನಾಲ್ಕು ಹಂತಗಳು ನ್ಯಾಯ ಪ್ರಕ್ರಿಯೆಯಲ್ಲಿರುತ್ತವೆ ಎಂದು ಹೇಳಲಾಗಿದೆ. ಶಂಕೆಯ ಆಧಾರದಲ್ಲಿ ರೂಪಿಸಲಾಗುವ (Suspicion – or circumstantial) ಶಂಕಾಭಿಯೋಗ ಮತ್ತು ಸಾಕ್ಷಿ-ಪುರಾವೆಗಳ ಆಧಾರದಲ್ಲಿ ಮಾಡುವ ತತ್ವಾಭಿಯೋಗವೆಂಬ (based on facts and evidence) ಎರಡು ಬಗೆಯ ದೋಷಾರೋಪಣೆ ಅಥವಾ ಚಾರ್ಜ್‌ಶೀಟ್ ಸಲ್ಲಿಸುವ ನಿಯಮವಿದೆ. “ಧರ್ಮಶಾಸ್ತ್ರ ಪುರಸ್ಕೃತ್ಯ ಪ್ರಾದ್ವಿವಾಕಮತೇ ಸ್ಥಿತಃ| ಸಮಾಹಿತಮತಿ: ಪಶ್ಯೇದ್ ವ್ಯವಹಾರಾನನುಕ್ರಮೇತ್||" ಧರ್ಮಶಾಸ್ತ್ರಗಳು (Law and legal procedure/code, ನ್ಯಾಯಶಾಸ್ತ್ರ ಪರಿಣಿತರು ನಿರ್ಧರಿಸಿದ ಅಭಿಪ್ರಾಯ (Arguments and Legal precedence) ಮತ್ತು ಶಾಂತ ಮನಸ್ಸಿನಿಂದ ತನ್ನ ವಿವೇಚನೆ ಯನ್ನು (Judicial Discretion) ಬಳಸಿ ರಾಜ ಅಥವಾ ನ್ಯಾಯಾಧೀಶನು ಮೊಕದ್ದಮೆಯ ವಿಚಾರಣೆಯನ್ನು ನಡೆಸಬೇಕು.
“ಯತ್ರ ವಿಪ್ರತಿಪತ್ತಿ: ಸ್ಯಾತ್ ಧರ್ಮಶಾಸ್ತ್ರಾರ್ಥಶಾಸ್ತ್ರಯೋಃ| ಅರ್ಥಶಾಸ್ತ್ರೋಕ್ತಮುತ್ಸಜ್ಯ ಧರ್ಮಶಾಸ್ತ್ರೋಕ್ತಮಾಚರೇತ್||" ದರ್ಮಶಾಸ್ತ್ರ ಮತ್ತು ಅರ್ಥಶಾಸ್ತ್ರಗಳ ನಡುವೆ ಭಿನ್ನಾಭಿಪ್ರಾಯ ಬಂದಾಗ ಧರ್ಮಶಾಸ್ತ್ರದಲ್ಲಿ ಹೇಳಿದ್ದನ್ನು ಅನುಸರಿಸಬೇಕು. “ಧರ್ಮಶಾಸ್ತ್ರವಿರೋಧೇ ತು ಯುಕ್ತಿಯುಕ್ತೋ ವಿಧಿ ಸ್ಮೃತಃ| ವ್ಯವಾಹಾರೋ ಹಿ ಬಲವಾನ್ ಧರ್ಮಸ್ತೇನಾವಹೀಯತೇ||" ವಿಭಿನ್ನ ದರ್ಮಶಾಸ್ತ್ರಗಳ ನಡುವೆ ಅಥವಾ ಧರ್ಮಶಾಸ್ತ್ರ ಮತ್ತು ಲೋಕರೂಢಿಯ ನಡುವೆ ವಿರೋಧ ವಿದ್ದಾಗ ನ್ಯಾಯಾಧೀಶನು ತನ್ನ ವಿವೇಚನೆಯನ್ನು ಬಳಸಿ ತರ್ಕಿಸಬೇಕು.
ಧರ್ಮಶಾಸ್ತ್ರಕ್ಕಿಂತ ಲೋಕರೂಢಿ ಮತ್ತು ಶಿಷ್ಟಜನರ ಆಚಾರವನ್ನು ಆಧಾರವಾಗಿರಿಸಿಕೊಳ್ಳಬೇಕು. ಬಂಧನ ಮತ್ತು ನಿರ್ಭಂಧಗಳ ಕುರಿತು ವಿಸ್ತೃತವಾದ ನಿಯಮಾವಳಿಗಳಿವೆ. ಉದಾಹರಣೆಗೆ ಸ್ಥಾನಾಸೇದ (House Arrest), ಕಾಲಾಸೇದ, ಕರ್ಮಾಸೇದ ಮತ್ತು ಪ್ರವಾಸಾಸೇದದಂಥ ನಿರ್ಭಂಧ ಗಳಿವೆ. ಬಂಧನವನ್ನು ಯಾವಾಗ ಮಾಡಬಾರದು, ಯಾರನ್ನೆಲ್ಲ ಬಂಧಿಸಬಾರದು ಎಂಬ ಕುರಿತು ಸ್ಪಷ್ಟ ನಿರ್ದೇಶನಗಳಿವೆ.
ಒಮ್ಮೆ ದೋಷಾರೋಪಣೆ ಆದ ವ್ಯಕ್ತಿಯ ಮೇಲೆ ಅದೇ ವಿಷಯದ ಕುರಿತು ಪುನಃ ದೋಷಾರೋಪಣೆ ಮಾಡಬಾರದು. ಉದಾಹರಣೆಗೆ ಚಿನ್ನದ ಜೊತೆ ಧಾನ್ಯವನ್ನು ಕದ್ದಿರುವ ಸಂದರ್ಭದಲ್ಲಿ ಚಿನ್ನದ ಕಳುವಿನ ಆರೋಪ ಮಾಡಿದ ನಂತರ ಧಾನ್ಯದ ಕಳುವಿನ ಕುರಿತು ಪುನಃ ಆರೋಪಮಾಡುವ ಹಾಗಿಲ್ಲ. ಇದು ಆಧುನಿಕ ಕಾನೂನಿನ Double jeopardy ಮತ್ತು Res judicata ನಿಯಮಗಳಿಗೆ ಸಮಾನವಾಗಿದೆ.
ಆರೋಪ ಸಾಬೀತಾದರೆ ಆರೋಪಿಗೆ ಯಾವ ಶಿಕ್ಷೆ ಕೊಡಬಹುದೋ ಅದೇ ಶಿಕ್ಷೆಯನ್ನು ಸುಳ್ಳು ಸಾಕ್ಷಿ ಹೇಳಿದವನಿಗೆ ನೀಡಬೇಕೆಂದಿದೆ. ಪಕ್ಷಪಾತದಿಂದ ಅಥವಾ ರಾಗದ್ವೇಷಗಳ ಕಾರಣಕ್ಕೆ ಯಾವುದೇ ಸಭಾಸದರು ಅಂದರೆ ಈಗಿನ ಕಾನೂನಿನಲ್ಲಿ ಜ್ಯೂರಿ ಅಥವಾ ವಕೀಲರು, ಉದ್ದೇಶ ಪೂರ್ವಕವಾಗಿ ತಪ್ಪು ವಾದ ಅಥವಾ ಅಭಿಪ್ರಾಯ ವ್ಯಕ್ತಪಡಿಸಿದರೆ ಅವರಿಗೂ ದಂಡನೆ ವಿಧಿಸಬೇಕೆಂಬ ನಿಯಮವಿದೆ.
“ಪುರುಷಾಃ ಸಂತಿ ಯೇ ಲೋಭಾನ್ ಪ್ರಬೂಯುಃ ಸಾಕ್ಷ್ಯಮನ್ಯಥಾ| ಸಂತಿ ಚಾನ್ಯೇ ದುರಾತ್ಮಾನಃ ಕೂಟಲೇಖ್ಯಕೃತೋ ಜನಾಃ||" ಅಗ್ನಿ, ಜಲಗಳ ಸಾಕ್ಷಿಯಾಗಿ ಪ್ರಮಾಣ ಮಾಡಿದರೂ ಲೋಭದಿಂದ ಸುಳ್ಳು ಸಾಕ್ಷಿ ಹೇಳುವ ಹಾಗೂ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸುವ ದುರ್ಜನರಿದ್ದಾರೆ. ಇಂಥ ವಿಷಯಗಳ ಕುರಿತು ನ್ಯಾಯಾಧೀಶರು ಜಾಗ್ರತೆ ವಹಿಸಬೇಕು. ಅದೇ ರೀತಿ, ಸರಳ ಪ್ರಾಮಾಣಿಕ ಜನರು ಆರೋಪಿ ಗಳಾದಾಗ ಪರಿಣಾಮಕಾರೀ ಸಂವಹನದ ಕೊರತೆಯಿಂದ ತಮ್ಮ ನಿರ್ದೋಷಿತ್ವವನ್ನು ನ್ಯಾಯಾಲಯಕ್ಕೆ ಮನನ ಮಾಡಿಕೊಡಲು ವಿಫಲರಾಗಬಹುದು.
ಪ್ರಕರಣ ವಿಚಾರಣೆಯ ಹಂತದಲ್ಲಿರುವಾಗ ಬಲಿಷ್ಠನಾದ ಪ್ರತಿವಾದಿ ಅಥವಾ ಆರೋಪಿಯಿಂದ ತನಗೆ ತೊಂದರೆಯಾಗಬಹುದೆಂದು ವಾದಿ ಅಥವಾ ದೂರುದಾರನು ನ್ಯಾಯಾಲಯದಿಂದ ರಕ್ಷಣೆ ಕೋರಬಹುದು ಎಂದಿದೆ. ವಾದಿಯ ದೂರು ಅಥವಾ ಅರ್ಜಿಗೆ ಉತ್ತರ ನೀಡಲು ಪ್ರತಿವಾದಿಗೆ ಜಾಸ್ತಿಯೆಂದರೆ ಒಂದು ವಾರ ಸಮಯಾವಕಾಶ ನೀಡಬಹುದೆಂದಿದೆ.
ವಾದಿ ಅಥವಾ ಪ್ರತಿವಾದಿಯ ಪರವಾಗಿ ನ್ಯಾಯಾಲಯದಲ್ಲಿ ವಾದಿಸಲು ಅಧಿಕೃತ ಅಧಿಕಾರ ಪತ್ರವಿಲ್ಲದೆ (ವಕಾಲತ್-ನಾಮ) ಯಾರಿಗೂ ಅವಕಾಶವಿಲ್ಲ. ಅಂಥ ಸಭಾಸದರು (ವಕೀಲರು) ಹೊಂದಿರಬೇಕಾದ ಅರ್ಹತೆಗಳನ್ನು ಕೂಡಾ ಸ್ಪಷ್ಟಪಡಿಸಲಾಗಿದೆ. ಸಹಸ್ರಾರು ವರ್ಷಗಳ ಹಿಂದೆ ರಚಿತವಾದ ಈ ಸ್ಮೃತಿಯಲ್ಲಿ ನಿಗದಿಪಡಿಸಲಾದ ನಿಯಮಗಳು ಮತ್ತು ಪ್ರಸಕ್ತ ನ್ಯಾಯವ್ಯವಸ್ಥೆಗೆ ಇರುವ ಸಾಮ್ಯ ನಿಜಕ್ಕೂ ಆಶ್ಚರ್ಯ ಪಡುವಂತದ್ದು.
ಅತ್ಯಾಧುನಿಕ ತನಿಖಾ ವ್ಯವಸ್ಥೆ, ಡಿಜಿಟಲ್ ವ್ಯವಸ್ಥೆಗಳಿದ್ದರೂ ನ್ಯಾಯ ನೀಡಿಕೆಯ ವೈಫಲ್ಯ ಅಥವಾ ಅತೀ ವಿಳಂಬವಾಗುತ್ತಿರುವ ಸಂದರ್ಭದಲ್ಲಿ ನಮ್ಮ ಪುರಾತನ ನ್ಯಾಯವ್ಯವಸ್ಥೆಯ ಅಡಿಪಾಯವಾಗಿರುವ ಮನುಸ್ಮೃತಿ, ನಾರದಸ್ಮೃತಿ, ಯಾಜ್ಞವಲ್ಕ್ಯಸ್ಮೃತಿ, ವಸಿಷ್ಠಸ್ಮೃತಿಯಂಥ ಆಕರ ಗ್ರಂಥಗಳು ಇಂದಿಗೂ ಪ್ರಸ್ತುತವೆನಿಸುವದು ನಮಗೆಲ್ಲ ಹೆಮ್ಮೆಯ ವಿಷಯ. ಪೂರ್ವಾಗ್ರಹ ಗಳನ್ನು ಬದಿಗಿರಿಸಿ ಅಂಥ ಗ್ರಂಥಗಳನ್ನು ಕಾನೂನು ಪದವಿಯ ಪಠ್ಯಕ್ರಮದಲ್ಲಿ ಅಳವಡಿಸಬೇಕು. ಸತ್ಯ, ಧರ್ಮಗಳ ಆಧಾರದಲ್ಲಿ ನ್ಯಾಯನಿರ್ಣಯ ಮಾಡುವದನ್ನು ಒತ್ತಿ ಹೇಳುವ, ನ್ಯಾಯ ನಿರ್ಣಯದಲ್ಲಿ ವಿಳಂಬವನ್ನು ಖಂಡಿಸುವ ಈ ಸ್ಮೃತಿಗಳನ್ನು ಈಗಿನ ನ್ಯಾಯಾಧೀಶರಿಗೆ ಕಡ್ಡಾಯವಾಗಿ ಪಾಠ ಮಾಡಬೇಕು.