ಶರದೃತುವಿನ ಆಗಮನ ಪ್ರಕೃತಿಗೂ, ರಾಮನ ಮನಸಿಗೂ
- ನಾರಾಯಣ ಯಾಜಿ

ಧರ್ಮಮರ್ಥಂ ಚ ಕಾಮಂ ಚ ಯಸ್ತು ಕಾಲೇ ನಿಷೇವತೇ
ವಿಭಜ್ಯ ಸತತಂ ವೀರ ಸ ರಾಜಾ ಹರಿಸತ್ತಮ ৷৷ ಕಿ.38.20৷৷
ವೀರನೇ, ಕಪಿಶ್ರೇಷ್ಠನೇ, ಯಾವಾನು ಧರ್ಮಾಚರಣೆಯ, ಅರ್ಥಸಂಗ್ರಹಣೆಯ, ಕಾಮವನ್ನು ಕಾಲೋಚಿತವಾಗಿ ವಿಭಾಗಿಸಿಕೊಂಡು ಆಯಾ ಕಾಲದಲ್ಲಿಯೇ ಅದನ್ನು ಸೇವಿಸುವನೋ ಅವನೇ ರಾಜನೆನಿಸಿಕೊಳ್ಳುವುದಕ್ಕೆ ಯೋಗ್ಯನು.
ರಾಮ ಸುಗ್ರೀವನಿಗೆ ರಾಜನಾದವ ಹೇಗಿರಬೇಕು ಎನ್ನುವದರ ಸಾರ ಸಂಗ್ರಹವನ್ನು ಇದೊಂದೇ ಶ್ಲೋಕದಲ್ಲಿ ವಿವರಿಸಿದ್ದಾನೆ. ಹೊಸದಾಗಿ ಅರಸನಾದವ ತನ್ನ ಕರ್ತವ್ಯವನ್ನು ಮರೆತರೆ ಆಡಳಿತದ ಪಟ್ಟು ಸಡಿಲವಾಗುವುದು. ಬಲಿಷ್ಠನಾದ ಅರಸನ ವಧೆಯದಾಗ ಆ ಸುದ್ಧಿ ಶತ್ರುಗಳಿಗೆ ತಲುಪಿ ಅಥವಾ ರಾಜ್ಯದಲ್ಲಿಯೇ ಬಂಡಾಯ ಏಳುವವರೂ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ ಎಂದು ರಾಜನೀತಿ ಎಚ್ಚರಿಸುತ್ತದೆ. ತನ್ನ ಚಕ್ರಾಧಿಪತ್ಯವನ್ನು ಭದ್ರಪಡಿಸಿಕೊಳ್ಳುವುದು ರಾಜನ ಆದ್ಯ ಕರ್ತವ್ಯ ಎನ್ನುವ ಎಚ್ಚರಿಕೆಯನ್ನು ರಾಮ ಸುಗ್ರೀವನಿಗೆ ಮಿತ್ರನೋರ್ವ ಎಚ್ಚರಿಸುವ ರೀತಿಯಲ್ಲಿ ತಿಳಿಸುತ್ತಿದ್ದಾನೆ.
ಅಯೋಧ್ಯಾಕಾಂಡದ ನೂರನೆಯ ಸರ್ಗದಲ್ಲಿ ರಾಮ ಭರತನಿಗೆ ರಾಜನೀತಿಯನ್ನು ವಿಸ್ತಾರವಾಗಿ ವಿವರಿಸಿದ್ದಾನೆ. ಅದರ ಸಂಗ್ರಹ ರೂಪ ಇಲ್ಲಿದೆ. ಇದಕ್ಕೆ ಕಾರಣ ಅಯೋಧ್ಯೆಯ ಅರಸರ ಗುಣ; ಸತ್ಯವನ್ನೇ ಯವಾಗಲೂ ಮಾತಾಡುವುದರಿಂದ ಅವರು ಮಿತಭಾಷಿಗಳು. (ಸತ್ಯಾಯ ಮಿತಭಾಷಿಣಾಂ-ಕಾಳಿದಾಸ), ವಾಚಾಳಿಗಳಾದವರು ಬಾಯಿತಪ್ಪಿ ಸುಳ್ಳುಮಾತುಗಳನ್ನು ಬಡಾಯಿರೂಪದಲ್ಲಿ ಆಡಿಬಿಡುವ ಸಾಧ್ಯತೆಯುಂಟು. ರಾಮನೂ ಸಹ ಮಿತಭಾಷಿಯೇ. ಆಡಬೇಕಾದ ಮಾತುಗಳನ್ನು ಕೆಲವೇ ಶಬ್ದಗಳಲ್ಲಿ ಹೇಳಿಬಿಡುತ್ತಾನೆ. ಭೋಗದಲ್ಲಿ ಮೈ ಮರೆತ ಸುಗ್ರೀವನಿಗೆ ಸೀತಾನ್ವೇಷಣೆಗೆ ಒದಗುವೆನೆನ್ನುವ ಭಾಷೆಯನ್ನು ನೆನಪಿಸಲು ಲಕ್ಷ್ಮಣ ಹೋಗಿ ಸುಗ್ರೀವನನ್ನು ಎಚ್ಚರಿಸಬೇಕಾಯಿತು. ತಾರೆಯ ಜಾಣತನದ ಸಂಧಾನದಿಂದ ಆತ ಲಕ್ಷ್ಮಣನ ಕ್ರೋಧದಿಂದ ಬಚಾವಾದ. ತಾರೆಯೂ ಸಹ ಸುಗ್ರೀವನಿಗೆ ಹಿತವಚನಗಳನ್ನು ಹೇಳಿರಲು ಸಾಕು. ಸುಗ್ರೀವನಿಗೆ ತಲೆಯಲ್ಲಿದ್ದ ಅಮಲೆಲ್ಲವೂ ಜರ್ರನೆ ಇಳಿಯಿತು. ಸಿತಾನ್ವೇಷಣೆಯ ವಿಷಯಲ್ಲಿ ಈ ಮೊದಲೇ ಹನುಮಂತ ಎಚ್ಚರಿಸಿದ್ದ. ಆಗ ನೀಲನನ್ನು ಕರೆದು ಇನ್ನು ಹದಿನೈದು ದಿನಗಳೊಳಗಾಗಿ ಪ್ರಪಂಚದಲ್ಲಿದ್ದ ವಾನರರೆಲ್ಲರೂ ಕಿಷ್ಕೆಂಧೆಗೆ ಬಂದು ಸೇರಬೇಕೆಂದು ಆಜ್ಞೆ ಹೊರಡಿಸಿ ಪುನಃ ಅಂತಃಪುರವನ್ನು ಸೇರಿಕೊಂಡಿದ್ದ. ರಾಮಕಾರ್ಯದ ಕುರಿತು ಎಚ್ಚರಿಸಿದ್ದು ಹನುಮಂತ, ಈ ಕೆಲಸವನ್ನು ಮಾಡಲು ಹೇಳಿರುವುದು ನೀಲನಿಗೆ. ಒಂದುವೇಳೆ ಸಮಯಕ್ಕೆ ಸರಿಯಾಗಿ ಬರದೇ ಇದ್ದರೆ ಅವರಿಗೆ ಮರಣದಂಡನೆ ಎನ್ನುವ ಆಜ್ಞೆಯನ್ನು ವಿಧಿಸಲು ಹೇಳಿದ್ದ.
ರಾಜಶಾಸನ ಬಿಗಿಯಾಗುವುದು ಅದನ್ನು ಅನುಷ್ಟಾನಕ್ಕೆ ತರುವ ಅಧಿಕಾರಿಗಳನ್ನು ಅವಲಂಬಿಸಿರುತ್ತದೆ. ಮಧುಪಾನದಲ್ಲಿ ತೇಲಾಡುತ್ತಿರುವವನ ಮಾತುಗಳು, ಕಾರ್ಯರೂಪಕ್ಕೆ ಬರಲಿಲ್ಲ! ಈಗ ಲಕ್ಷ್ಮಣನ ಕ್ರೋಧದ ಬಿಸಿ ಸುಗ್ರೀವನಿಗೆ ತಟ್ಟಿದೆ. ತಪ್ಪಿಸಿಕೊಳ್ಳಲು ತೊದಲು ಮಾತುಗಳನ್ನಾಡುತ್ತಾನೆ. ಒಂದೇ ಬಾಣದಿಂದ ಸಪ್ತಮಹಾವೃಕ್ಷಗಳನ್ನು ಸೀಳಿದ ಮಹಾ ಪರಾಕ್ರಮಿಯಾದ ಶ್ರೀರಾಮನಿಗೆ ಯಾರ ಸಹಾಯವಾದರೂ ಯಾಕೆ ಬೇಕು” ಎನ್ನುವ ಬೇಜವಾಬ್ದಾರಿಯ ಮಾತು ಆತನ ಬಾಯಿಯಿಂದ ಹೊರಬರುತ್ತದೆ. ಗಂಭೀರತೆ ಅರ್ಥವಾದ ಕೂಡಲೇ, ರಾವಣನ ಸಂಹಾರಕ್ಕಾಗಿ ರಾಮನನ್ನು ಅನುಸರಿಸುವುದಷ್ಟೇ ತನ್ನ ಕೆಲಸ ಎನ್ನುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸುತ್ತಾನೆ. ಈಗ ಹಾಗಿಲ್ಲ, ಹನುಮಂತನನ್ನು ಕರೆದು “ಪ್ರಪಂಚದಲ್ಲಿರುವ ಎಲ್ಲಾ ವಾನರರೂ ಹತ್ತು ದಿವಸದೊಳಗೆ ಬಂದು ಸೇರತಕ್ಕದ್ದು, ತಪ್ಪಿದರೆ ಮರಣದಂಡನೆ” ಎನ್ನುವ ಕಠೋರ ಆಜ್ಞೆಯನ್ನು ಹೊರಡಿಸುತ್ತಾನೆ. ಸುಗ್ರೀವನ ಆಜ್ಞೆಯನ್ನು ಹನುಮಂತ ನಿಷ್ಟುರವಾಗಿ ಅನುಷ್ಠಾನಕ್ಕೆ ತರುತ್ತಾನೆ. “ಸುಗ್ರೀವಾಜ್ಞೆ” ಎನ್ನುವ ಹೆಸರು ಅಲ್ಲಿಂದ ಜಾರಿಗೆ ಬಂತು.
ಲಕ್ಷ್ಮಣ ರಾಮನನ್ನು ಭೇಟಿಯಾಗು, ಹೆದರಬೇಡ ಎನ್ನುವ ಧೈರ್ಯವನ್ನು ಕೊಟ್ಟ ಮೇಲೆ ಪಲ್ಲಕ್ಕಿಯ ಮೇಲೆ ಲಕ್ಷ್ಮಣನನ್ನು ಕುಳ್ಳಿರಿಸಿ ಜೊತೆಗೆ ತಾನೂ ಅವನ ಸಂಗಡ ಕುಳಿತು ರಾಮನಲ್ಲಿ ಹೋಗಿ ನಮಸ್ಕರಿಸಿದಾಗ ರಾಮ ಮೃದುವಾಗಿಯೇ ಕೊಟ್ಟ ಚಾಟಿಯೇಟು “ರಾಜನಾದವ ಹೇಗಿರಬೇಕು" ಎನ್ನುವದು ಮೇಲಿನ ಶ್ಲೋಕದ ಅರ್ಥ. ಇಲ್ಲಿ’ತನ್ನ ಸಹಾಯ ರಾಮನಿಗೇಕೆ ಬೇಕು’ ಎಂದು ಲಕ್ಷ್ಮಣನಿಗೆ ಸುಗ್ರೀವ ಹೇಳಿದುದಕ್ಕೆ ಕೊಟ್ಟ ಉತ್ತರವೂ ಇದೆ. ಲಂಕೆ ಯಾವ ದಿಕ್ಕಿನಲ್ಲಿದೆ ಎನ್ನುವುದು ರಾಮನಿಗೆ ತಿಳಿದುಕೊಳ್ಳಬೇಕಾಗಿದೆ. ಅದು ಸುಗ್ರೀವನಿಗೆ ಮಾತ್ರ ತಿಳಿದಿದೆ. ಆತನನ್ನು ಬಿಡುವಂತಿಲ್ಲ ಹಾಗಾಗಿ ಮೃದುಮಾತಿನಲ್ಲಿಯೇ ರಾಜನ ಕರ್ತವ್ಯವನ್ನು ತಿಳಿಸುವ ಮೂಲಕ ಸುಗ್ರೀವನನ್ನು ಸೀತಾನ್ವೇಷಣೆಗಾಗಿ ಅನುಗೊಳಿಸುತ್ತಿದ್ದಾನೆ.
ಸುಗ್ರೀವ ರಾಮಕಾರ್ಯಕ್ಕಾಗಿ ವಾನರರನ್ನು ಕರೆಯಲು ಹೇಳುವಾಗ ವಾನರರು ಪ್ರಪಂಚದ ಯಾವ ಯಾವ ಕಡೆ ವಾಸಿಸುತ್ತಾರೆ ಎಂದು ತಿಳಿದುಬರುತ್ತದೆ. ಉತ್ತರದಲ್ಲಿನ ಹಿಮವತ್ಪರ್ವತ, ಕೈಲಾಸ ಪರ್ವತ, ಉತ್ತರ ಮತ್ತು ದಕ್ಷಿಣ ಭಾರತದ ನಡುವೆ ಇರುವ ವಿಂದ್ಯ ಪರ್ವತ, ದಕ್ಷಿಣದ ಕೊನೆಯಲ್ಲಿರುವ ಮಹೇಂದ್ರ ಪರ್ವತ ಮತ್ತು ಮಂದರ ಪರ್ವತ ಇವುಗಳಲ್ಲಿರುವ ವಾನರರನ್ನು ಬರಲು ಹೇಳುತ್ತಾನೆ. ಇವುಗಳಲ್ಲಿ ಮಂದರ ಪರ್ವತವನ್ನು ಸಮುದ್ರ ಮಥನದ ಕಾಲದಲ್ಲಿ ಕಡಗೋಲನ್ನಾಗಿ ಇರಿಸಿ ಕಡೆದಿದ್ದಾರೆ. ಈಗ ಎಲ್ಲಿದೆ ಎಂದು ಹೇಳುವುದು ಕಷ್ಟ. ವಾನರರ ಸಾಮ್ರಾಜ್ಯವನ್ನು ವಾಲಿಸುಗ್ರೀವರ ತಂದೆ ಋಕ್ಷರಜಸ್ಸ್ ಕಿಷ್ಕಿಂಧೆಯನ್ನು ಕೇಂದ್ರೀಕರಿಸಿ ಕಟ್ಟಿದ್ದಾನೆ. ಆದರೆ ವಾಲಿ ಸುಗ್ರೀವ ಜನಿಸಿದ್ದು ಕಿಷ್ಕಿಂಧೆಯಲ್ಲಲ್ಲ. ಬಾಲಿ ದ್ವೀಪವಾಸಿಗಳು ವಾಲಿ ತಮ್ಮಲ್ಲಿ ಜನಿಸಿದ್ದಾನೆ ಎಂದು ನಂಬಿದ್ದಾರೆ. ಅದರ ಕುರಿತು ವಿವರವಾಗಿ ಮೊದಲೇ ಬರೆದಿರುವೆ. ಹಾಗಾಗಿ ಸುಗ್ರೀವ ಹೇಳಿದ ಪರ್ವತಗಳನ್ನು ಇಂದಿನ ಭಾರತದ ಸೀಮೆಯೊಳಗೆ ಗುರುತಿಸಲಾಗದು.
ವಾನರರ ಪ್ರಾದೇಶಿಕ ಬೇಧದ ಜೊತೆಗೆ ಅವರ ಆಹಾರದ ಕ್ರಮದ ವೈವಿಧ್ಯತೆಗಳನ್ನೂ ಸುಗ್ರೀವ ತಿಳಿಸುತ್ತಾನೆ. ವಾನರರ ಸಂಖ್ಯೆಯನ್ನು ಸುಗ್ರೀವ ವಿವರಿಸುವುದು ಲಕ್ಷಕೋಟಿಸಾವಿರದ ಆಚೆಗೆ. ಒಂದು ಹಂತ ದಾಟಿದ ಮೇಲೆ ಸಂಖ್ಯೆಯೆಂದರೆ ಊಹೆಯೇ. ಒಟ್ಟಾರೆಯಾಗಿ ಜಗತ್ತಿನ ಎಲ್ಲ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ವಾನರರು ಬಂದು ಸೇರಿದ್ದಾರೆ ಎನ್ನುವುದು ಸೂಕ್ತ. ರಾಮನಲ್ಲಿ ಬಂದವನೇ, ತನ್ನ ತಪ್ಪನ್ನು ಮನ್ನಿಸುವಂತೆ ಬೇಡಿಕೊಂಡು, ವಾನರರ ಸೈನ್ಯವನ್ನು ಸಂಗ್ರಹ ಮಾಡುವ ತನ್ನ ಕಾರ್ಯವಿಧಾನವನ್ನು ವಿವರಿಸುತ್ತಾನೆ. ಇಲ್ಲಿಂದ ಮುಂದೆ ಸುಗ್ರೀವ ಹಳೆಯ ಸುಗ್ರೀವನಾಗಿ ಉಳಿದಿಲ್ಲ. ಗಂಭೀರವಾಗಿಯೇ ವ್ಯವಹರಿಸುತ್ತಾನೆ. ರಾವಣ ಆತನಿಗೆ ತನ್ನ ಪಕ್ಷಕ್ಕೆ ಬರಲು ಆಮಿಷವನ್ನು ತೋರಿದಾಗಲೂ ವಾಲಿಯಂತೆ ಹಲ್ಲುಕಿಸಿದು ಮೈತ್ರಿಯನ್ನು ಮಾಡಿಕೊಳ್ಳದೇ ತಿರಸ್ಕರಿಸುತ್ತಾನೆ. ಸುಗ್ರೀವ ಸೀತಾನ್ವೇಷಣೇಯ ವಿಷಯದಲ್ಲಿ ಕಾರ್ಯವಿಧಾನವನ್ನು ವಿವರಿಸಿದಾಗ ರಾಮನಿಗೆ ಸಮಾಧಾನ ಮಾತ್ರವಲ್ಲ; ಆ ಸಮಯದಲ್ಲಿ ಸುಂದರವಾಗಿಯೂ ಕಾಣುತ್ತಿದ್ದನಂತೆ.
ಕಬಂಧ ರಾಮನಲ್ಲಿ “ಸುಗ್ರೀವನ ಮೈತ್ರಿ ಮಾಡಿಕೊ, ಆತನಿಗೆ ಪ್ರಪಂಚದ ಎಲ್ಲಾ ಪ್ರದೇಶದ ಪರಿಚಯ ಇದೆ, ಆತ ನಿನಗೆ ಸಹಾಯ ಮಾಡುತ್ತಾನೆ” ಎಂದಿದ್ದ. ಋಷ್ಯಮೂಕದಲ್ಲಿ ರಾಮ ಸುಗ್ರೀವನ್ನು ಭೇಟಿ ಆದಾಗ ರಾವಣ ಎಲ್ಲಿರುತಾನೆ ಎನ್ನುವುದು “ನ ಜಾನೇ ನಿಲಯಂ ತಸ್ಯ ಸರ್ವಥಾ ಪಾಪರಕ್ಷಸಃ.” ನನಗೆ ಆ ಪಾಪಿ ರಾಕ್ಷಸ ಎಲ್ಲಿ ಇದ್ದಾನೆ ಎನ್ನುವುದೇ ತಿಳಿದಿಲ್ಲ ಎನ್ನುವ ಮಾತುಗಳನ್ನಾಡಿದ್ದ. ಈಗ ಸುಗ್ರೀವನ ಪ್ರಪಂಚ ಜ್ಞಾನ ಹೊರಬರುತ್ತದೆ. ಆತ ವಾನರರು ಎಲ್ಲೆಲ್ಲಿ ಇರುತ್ತಾರೆ ಎನ್ನುವುದರಿಂದ ಹಿಡಿದು ಅವರ ಆಹಾರ ಕ್ರಮ ಮತ್ತು ಮೈ ಬಣ್ಣ, ಸ್ವಭಾವ ಇವೆಲ್ಲವುಗಳನ್ನು ಹೇಳುವುದಲ್ಲದೇ ಬಂದಂತಹ ವಾನರರ ಪ್ರಮುಖರಾದ ವಿನುತ, ಶತಬಲ, ಸುಶೇಣ, ಕೇಸರಿ ಮೊದಲಾದವರ ಸಾಮರ್ಥ್ಯ ಆತನಿಗೆ ಚನ್ನಾಗಿ ತಿಳಿದಿದೆ.
ರಾಮನಿಗೆ ಯುದ್ಧಕ್ಕೆ ಹೋಗುವ ಮೊದಲು ಸೀತೆ ಬದುಕಿದ್ದಾಳೆಯೋ, ಇದ್ದರೆ ಎಲ್ಲಿರಬಹುದು ಎನ್ನುವ ವಿಷಯವನ್ನು ಮೊದಲು ತಿಳಿಯಬೇಕಾಗಿದೆ. ಹಾಗಾಗಿ ಆತ ಸೀತಾನ್ವೇಷಣೆಗೆ ಮೊದಲ ಪ್ರಾಶಸ್ತ್ಯವನ್ನು ಕೊಡುತ್ತಾನೆ. ಸುಗ್ರೀವ ವಾಲಿಯ ಆಡಳಿತದಲ್ಲಿ ಮಂತ್ರಿಯಾಗಿದ್ದವ. ವಾಲಿ ರಾಜಕಾರಣಕ್ಕಿಂತಲೂ ಮದೋನ್ಮತ್ತನಾಗಿ ತಿರುಗಾಡಿದ್ದೇ ಹೆಚ್ಚು. ರಾಜಕಾರಣದ ಪಟ್ಟುಗಳು ಸುಗ್ರೀವನಿಗೆ ಚನ್ನಾಗಿ ತಿಳಿದಿತ್ತು. ರಾಮ ಆತನಿಗೆ ಅದನ್ನೇ ಹೇಳುವುದಲ್ಲದೇ ಅರ್ಥಶಾಸ್ತ್ರದಲ್ಲೂ ಸುಗ್ರೀವ ಶ್ರೇಷ್ಠನಾಗಿದ್ದ ಎನ್ನುತ್ತಾನೆ. ಇನ್ನು ತಡಮಾಡಬಾರದು ವಾನರರನ್ನು ಸೀತಾನ್ವೇಷಣೆಗಾಗಿ ನಾಲ್ಕೂ ದಿಕ್ಕುಗಳಿಗೂ ಕಳಿಸುತ್ತಾನೆ. ಹಾಗೆ ಕಳುಹಿಸುವಾಗ ಎಲ್ಲೆಲ್ಲಿ, ಹೇಗೆ ಹೇಗೆ ಹೋಗಬೇಕು, ಹೋಗುವ ಹಾದಿಯಲ್ಲಿ ಸಿಗುವ ನದಿ ಪರ್ವತ ಪಟ್ಟಣಗಳ ವಿವರಗಳನ್ನು ತಿಳಿಸುತ್ತಾನೆ. ನೀರಿನ ಮದ್ಯದಲ್ಲಿ ವಾಸಿಸುವ ಘೋರರೂಪಿಗಳಾದ ನರವ್ಯಾಘ್ರ, ಹಿಮಾಲಯದಲ್ಲಿ ದೇವತೆಗಳ ಯಜ್ಞಮಾಡಿದ ಶೇಷದದಿಂದ ಜನಿಸಿದ ಸಿಗುವ ವಿಶಿಷ್ಠವಾದ ಫಲಗಳು, ಅವುಗಳನ್ನು ತಿಂದರೆ ಒಂದು ತಿಂಗಳತನಕ ಹಸಿವಾಗುವುದಿಲ್ಲ ಎನ್ನುವ ಸೂಚನೆ ಇವೆಲ್ಲವೂ ಬೆರಗನ್ನು ಹುಟ್ಟಿಸುತ್ತದೆ. ಹೀಗೆ ಇವರೆಲ್ಲರನ್ನು ದಿಕ್ಕುದಿಕ್ಕುಗಳಿಗೆ ಕಳುಹಿಸಿದವ ದಕ್ಷಿಣ ದಿಕ್ಕಿಗೆ ಮಾತ್ರ ಕಾರ್ಯನಿರ್ವಹಣೆಯಲ್ಲಿ ಸಮರ್ಥರಾದ ನೀಲ, ಹನುಮಂತ, ಜಾಂಬವಂತ ಮೊದಲಾದವರನ್ನು ಆಯ್ಕೆಮಾಡಿ ಅವರಿಗೆ ಅಂಗದನನ್ನು ನಾಯಕನ್ನಾಗಿ ಕಳಿಸುತ್ತಾನೆ. ಹಾಗೆ ಹೋಗುವ ಅವರಲ್ಲಿ ಮಾತ್ರ ದಕ್ಷಿಣ ದಿಕ್ಕಿನಲ್ಲಿಯೇ ನೂರು ಯೋಜನ ವಿಸ್ತೀರ್ಣವಾದ ಲಂಕೆಯಿದೆ ಎಂದು ಅದರ ಸಂಪೂರ್ಣ ವಿವರ ಹೇಳುತ್ತಾನೆ. ಸಮುದ್ರದ ಮದ್ಯದಲ್ಲಿ ನೆರಳನ್ನು ಹಿಡಿದು ಭಕ್ಷಿಸುವ ಅಂಗಾರಕಾ (ಸಿಂಹಿಣಿ) ಎನ್ನುವ ರಾಕ್ಷಸಿ ಇದ್ದಾಳೆ ಎನ್ನುವ ಎಚ್ಚರಿಕೆಯನ್ನೂ ಕೊಡುತ್ತಾನೆ. ಸಮುದ್ರೋಲ್ಲಂಘನದಲ್ಲಿ ಹನುಮಂತ ಈಕೆಯನ್ನು ಎದುರಿಸಿದ್ದ. ಆ ರಾಕ್ಷಸಿಯನ್ನು ತಪ್ಪಿಸಿಕೊಂಡು ಹೋದಾಗ ಸಿಗುವುದೇ ದುಷ್ಟನಾದ ರಾವಣನ ಲಂಕೆ ಎನ್ನುತ್ತಾನೆ.
ತತ್ರ ಸರ್ವಾತ್ಮನಾ ಸೀತಾ ಮಾರ್ಗಿತವ್ಯಾ ವಿಶೇಷತಃ.
ಸ ಹಿ ದೇಶಸ್ತು ವಧ್ಯಸ್ಯ ರಾವಣಸ್ಯ ದುರಾತ್ಮನಃ৷৷ಕಿ.41.25৷৷
ಆ ದ್ವೀಪದ ಎಲ್ಲಾ ಭಾಗದಲ್ಲಿಯೂ ನೀವು ಸೀತೆಯನ್ನು ಹುಡುಕಬೇಕು. ಅದು ದುರಾತ್ಮನಾದ, ವಧಾರ್ಹನಾದ ರಾಕ್ಷಸಾಧಿಪತಿಯಾದ ರಾವಣನ ನಿವಾಸವಾಗಿದೆ.
ರಾಮನ ಭೇಟಿಯಾದಾಗ ತನಗೆ ರಾವಣ ಎಲ್ಲಿದ್ದಾನೆ ಎಂದು ತಿಳಿಯದು ಎಂದವ ಈಗ ಸರಾಗವಾಗಿ ರಾವಣ ಮತ್ತು ಆತನ ಲಂಕೆಯ ವರ್ಣನೆ ಮಾಡಿಬಿಡುವುದು ಕಂಡುಬರುತ್ತದೆ. ಇದಕ್ಕೆ ಕಾರಣವನ್ನು ಟೀಕಾಕಾರರು ಹೇಳುವುದು ಹೀಗೆ “ಸುಗ್ರೀವನಿಗೆ ಈ ಮೊದಲೇ ರಾಮನಿಗೆ ರಾವಣನ ಲಂಕೆಯ ವಿಷಯ ಹೇಳಿಬಿಟ್ಟರೆ ತನಗೆ ರುಮೆ ಮತ್ತು ತಾನು ಒಂದು ಕಣ್ಣಿಟ್ಟಿದ್ದ ಮತ್ತು ಬಹುಕಾಲದಿಂದ ಆಸೆಪಟ್ಟ ತಾರೆಯನ್ನೂ ಹೊಂದಬಹುದೆನ್ನುವದು ಕೈತಪ್ಪಿ ಹೋದರೆ ಎನ್ನುವ ಸಂಶಯ. ವಾಲಿ ಬದುಕಿದ್ದರೆ ತಾರೆ ತನಗೆ ದಕ್ಕಲಾರಳು ಎನ್ನುವುದು ತಿಳಿದಿತ್ತು. ಈ ಕಾರಣಕ್ಕಾಗಿ ಆತ ವಾಲಿಯ ವಧೆಯಾಗಲೇ ಬೇಕೆಂದು ಬಯಸಿದ್ದ. ಹೀಗಾಗಿ ರಾವಣ ಎಲ್ಲಿದ್ದಾನೆ ಎಂದು ತಿಳಿದಿಲ್ಲ ಎಂದವ ತನ್ನ ಕಾರ್ಯವಾದ ಮೇಲೆ ಲಂಕೆಯ ಸಂಪೂರ್ಣ ಮಾಹಿತಿಯನ್ನು ನೀಡುತ್ತಾನೆ.
ಲಂಕೆ ಎಲ್ಲಿದೆ ಎಂದು ತಿಳಿದಿದೆ ಎನ್ನುವುದು ಸ್ಪಷ್ಟವಾದ ಹಿನ್ನೆಲೆಯಲ್ಲಿ ಬೇರೆ ಬೇರೆ ದಿಕ್ಕಿಗೆ ಯಾಕೆ ಕಳುಹಿಸಿದ ಎನ್ನುವ ಪ್ರಶ್ನೆಯೂ ಎದುರಾಗುತ್ತದೆ. ರಾವಣ ಲಂಕೆಯಲ್ಲಿಯೇ ಸೀತೆಯನ್ನು ಇರಿಸಿದ್ದಾನೆ ಎನ್ನುವುದು ಆತನಿಗೆ ಖಚಿತವಾಗಿದೆ. ಆದರೆ ಎಲ್ಲಿಯಾದರೂ ಬೇರೆ ಕಡೆ ಇರಿಸಿದ್ದರೆ ಎನ್ನುವ ಸಂಶಯವನ್ನೂ ರಾಜನೀತಿಜ್ಞರು ಮರೆಯಬಾರದು. ಈ ಕಾರಣಕ್ಕಾಗಿ ಸುಗ್ರೀವ ಎಲ್ಲಾ ದಿಕ್ಕುಗಳಿಗೂ ಸೀತೆಯನ್ನು ಹುಡುಕಲು ಕಳುಹಿಸಿದ್ದ ಎನ್ನುವ ವಿವರಣೆಯೇ ಸರಿ. ಬೇರೆ ಕಾರಣವನ್ನು ಕೊಡುವ ಟೀಕಾಕಾರರ ವಾದಕ್ಕೆ ಸರಿಯಾದ ಪುಷ್ಟಿ ಸಿಗುವುದಿಲ್ಲ. ಸೀತೆಯನ್ನು ಹುಡುಕಲು ಆತ ವಾನರರಿಗೆ ಒಂದು ಮಾಸದ ಅವಧಿಯನ್ನು ಕೊಟ್ಟಿದ್ದ. ಯಾರು ಒಂದು ಮಾಸದ ಅವಧಿಯಲ್ಲಿ ಸೀತೆಯನ್ನು ತಾನು ಕಂಡಿದ್ದೇನೆ – ’ಸೀತಾ ದೃಷ್ಟ್ವಾ’ ಎಂದು ಹೇಳುವನೋ, ಆತ ಸುಗ್ರೀವನಿಗೆ ಸಮಾನವಾದ ಭೋಗಗಳನ್ನು ಅನುಭವಿಸುತ್ತಾನೆ ಎನ್ನುವ ಬಹುಮಾನವನ್ನು ಸಹ ಘೋಷಿಸಲಾಗುತ್ತದೆ.
ಇಷ್ಟೆಲ್ಲಾ ಮಾತುಗಳನ್ನು ಕೇಳುತ್ತಾ ಸುಮ್ಮನಿದ್ದ ರಾಮನಿಗೆ ಆನಂದ ಮತ್ತು ಆಶ್ಚರ್ಯ ಎರಡೂ ಆಗುತ್ತದೆ. ಸುಗ್ರೀವ ವಾನರರಿಗೆ ಪ್ರಪಂಚದ ಎಲ್ಲಾ ಸ್ಥಳಗಳ ಪರಿಚಯ ವಿವರಿಸುವಾಗ ನಾಲ್ಕೂ ದಿಕ್ಕಿನಲ್ಲಿ ಎಲ್ಲಿಯವರೆಗೆ ಹೋಗಲು ಸಾಧ್ಯವೆನ್ನುವ ವಿಷಯ ಋಷ್ಯಮೂಕದಲ್ಲಿ ಇರುವವನಿಗೆ ತಿಳಿದಿದ್ದಾರೂ ಹೇಗೆ ಎನ್ನುವ ಆಶ್ಚರ್ಯವೂ ಉಂಟಾಯಿತು. ಅದನ್ನೇ ಆತ ಸುಗ್ರೀವನಲ್ಲಿ “ಕಥಂ ಭವಾನ್ವಿಜಾನೀತೇ ಸರ್ವಂ ವೈ ಮಣ್ಡಲಂ ಭುವಃ- ಇಡೀ ಭೂಮಂಡಲದ ಪರಿಚಯವನ್ನು ನೀನು ಹೇಗೆ ತಿಳಿದುಕೊಂಡೆ” ಎಂದು ಕೇಳುತ್ತಾನೆ. ಅಗ ಸುಗ್ರೀವ ವಾಲಿ ಅಟ್ಟಿಸಿಕೊಂಡು ಬಂದಾಗಿನ ಕಥೆಯನ್ನು ಹೇಳಿ, ಜೀವಭಯದಿಂದ ಆಗ ಇಡೀ ಭೂಮಂಡಲವನ್ನು ಸುತ್ತಿದ ವಿವರವನ್ನು ಪ್ರಾಮಾಣಿಕವಾಗಿ ವಿವರಿಸುತ್ತಾನೆ. ಸುಗ್ರೀವ ಇದೀಗ ರಾಮಕಾರ್ಯಕ್ಕಾಗಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾನೆ.
ವಾನರರು ಸೀತಾನ್ವೇಷಣೆಗೆ ಹೊರಟು ನಿಂತದ್ದನ್ನು ಕಂಡಾಗ ಖಂಡಿತವಾಗಿ ಸೀತೆ ಸಿಗುತ್ತಾಳೆ ಎನ್ನುವ ಭರವಸೆ ರಾಮನಲ್ಲಿ ಮೂಡಿತು. ಅಂಗದ, ಜಾಂಬವ ಹನುಮಂತರಂತಹ ಬಲಿಷ್ಠರನ್ನೇ ಸುಗ್ರೀವ ಈ ಕಾರಣಕ್ಕಾಗಿಯೇ ನಿಯುಕ್ತಿಗೊಳಿಸಿದ್ದಾನೆ ಎನ್ನುವುದನ್ನು ಊಹಿಸಿದ. ಸುಗ್ರೀವ ಹನುಮಂತನಿಗೆ ಕೊನೆಯದಾಗಿ
ತ್ವಯ್ಯೇವ ಹನುಮನ್ನಸ್ತಿ ಬಲಂ ಬುದ್ಧಿಃ ಪರಾಕ್ರಮಃ.
ದೇಶಕಾಲಾನುವೃತ್ತಿಶ್ಚ ನಯಶ್ಚ ನಯಪಣ್ಡಿತ৷৷ಕಿ.44.7৷৷
ಎಲೈ ಹನುಮನೆ! ನಿನಗೆ ತಿಳಿಯದ ನೀತಿಗಳಿಲ್ಲ. ಬಲ, ಬುದ್ಧಿ, ಪರಾಕ್ರಮ, ದೇಶ-ಕಾಲಾನುಶರಣವೂ, ನ್ಯಾಯ ನೀತಿಗಳೂ ನಿನ್ನಲ್ಲಿ ಸ್ಥಿರವಾಗಿದೆ. ಆದುದರಿಂದ ನಿನ್ನಿಂದಲೇ ಈ ಕಾರ್ಯಸಾಧನೆಯಾಗಬೇಕಾಗಿದೆ.
ಎನ್ನುವ ಮಾತುಗಳನ್ನು ಕೇಳಿದ ಮೇಲೆ ಸುಗ್ರೀವನಿಗೆ ಲಂಕೆ ಮತ್ತು ರಾವಣನ ಗುಣಸ್ವಭಾವದ ಪರಿಚಯ ಚನ್ನಾಗಿ ಇದೆ ಎನ್ನುವುದು ರಾಮನಿಗೆ ಖಾತರಿಯಾಯಿತು. ಸುಗ್ರೀವನೊಡನೆ ಸೌಲ್ಹ್ಯಕ್ಕೂ ಸಹ ಹನುಮಂತನೇ ಕಾರಣನಾಗಿದ್ದ. ಈಗ ಸೀತೆಯನ್ನೂ ಸಹ ಈತನೇ ತನಗೆ ಹುಡುಕಿಕೊಡುತಾನೆ ಎನ್ನುವದನ್ನು ರಾಮನಿಗೆ ಮನದಟ್ಟಾಯಿತು. ಸೀತೆಗೆ ಹನುಮನ ವಿಷಯದಲ್ಲಿ ಸಂಶಯವುಂಟಾಗಬಾರದು, ರಾಮನೇ ಕಳುಹಿಸಿದ್ದಾನೆ ಎನ್ನುವುದು ಆಕೆಗೆ ತಿಳಿಯಬೇಕಾದರೆ ಗುರುತನ್ನು ಕೊಡಬೇಕಾಗಿದೆ ಎನ್ನುವ ಕಾರಣದಿಂದ
ದದೌ ತಸ್ಯ ತತಃ ಪ್ರೀತಸ್ಸ್ವನಾಮಾಙ್ಕೋಪಶೋಭಿತಮ್.
ಅಙ್ಗುಲೀಯಮಭಿಜ್ಞಾನಂ ರಾಜಪುತ್ರ್ಯಾಃ ಪರನ್ತಪಃ৷৷ಕಿ.44.12৷৷
ಶತ್ರುವಿಗೆ ತಾಪವನ್ನು ಕೊಡುವ ಶ್ರೀರಾಮನು ಪರಮ ಹರ್ಷಿತನಾಗಿ ರಾಜಪುತ್ರಿಯಾದ ಸೀತೆಗೆ ತನ್ನ ನೆನಪನ್ನುಂಟುಮಾಡುವ ತನ್ನ ನಾಮವನ್ನು ಕೆತ್ತಲ್ಪಟ್ಟ- ’ಶ್ರೀರಾಮ’ ಎನ್ನುವ ಗುರುತಿನ ಉಂಗುರವನ್ನು ಕೊಡುತ್ತಾ, ಮೊದಲಬಾರಿ ನಿನ್ನನ್ನು ನೋಡಿದಾಗ ಸೀತೆಯು ಭಯಪಡುವುದಾಗಲಿ, ಸಂದೇಹವನ್ನಾಗಲೀ ಹೊಂದಬಹುದು. ನಾನು ಕೊಟ್ಟ ಈ ಉಂಗುರವನ್ನು ನೀನು ಆಕೆಗೆ ನೀಡಿದರೆ ಆಕೆಯ ಸಂದೇಹವೂ, ಭಯವೂ ನೀಗುವುದು. ನಿನ್ನನ್ನು ನಂಬುವಳು” ಎಂದು ಆ ಉಂಗುರವನ್ನು ಕೊಟನು ಹನುಮಂತ ಅದನ್ನು ಭಕ್ತಿಯಿಂದ ಕಣ್ಣಿಗೆ ಒತ್ತಿಕೊಂಡು ಅಲ್ಲಿಂದ ಹೊರಟನು.
ಇನ್ನು ಮುಂದಿನ ಭಾಗವೇ ಗೋಪಾಲಕೃಷ್ಣರು ’ವರ್ಧಮಾನ’ ಎನ್ನುವ ಕವನದಲ್ಲಿ ಹೇಳಿದ ರಾಮ ಸೀತೆಯರ ಕತ್ತಲೆ ಕಳೆದು ಸುಂದರ ಬದುಕಿನ ಮುನ್ನೋಟವಾದ “ಸುಂದರ ಕಾಂಡ”, ಅದೇ “ಹನುಮದ್ವಿಕಾಸಕ್ಕೆ ಇಲ್ಲ ಎಲ್ಲೆ”.
ಇದನ್ನೂ ಓದಿ: Narayana Yaji Column: ರಾಮಾಯಣದ ತಾರೆ: ಪ್ರಬುದ್ಧ ಸಂಧಾನಕಾರಳು ಮತ್ತು ಸುಗ್ರೀವನ ಆಪ್ತಮಿತ್ರೆ