ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Pralhad Joshi Column: ನರೇಂದ್ರ ಮೋದಿ @12: ವಿಕಸಿತ ಭಾರತದ ಹಾದಿ

‘ಸಬ್ ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್’ ಧ್ಯೇಯಘೋಷದ ಫಲವಾಗಿ ಭಾರತವಿಂದು ಅಂಬಾರಿ ಸ್ಥಾನವನ್ನಲಂಕರಿಸಿದೆ. ಒಂದು ಕಾಲದಲ್ಲಿ ಪ್ರಪಂಚದ ಐದು ದುರ್ಬಲ ರಾಷ್ಟ್ರ ಗಳಲ್ಲಿ ಒಂದಾಗಿದ್ದ, ಭಯೋತ್ಪಾದನಾ ದಾಳಿ ವೇಳೆ ಮೇಣದ ಬತ್ತಿ ಹಚ್ಚುತ್ತಿದ್ದ ಭಾರತದ ಆ ದಿನಗಳೀಗ ಕರಗಿ ಹೋಗಿವೆ. 21ನೇ ಶತಮಾನದ ಭಾರತ, ನರೇಂದ್ರ ಮೋದಿ ಸಾರಥ್ಯದಲ್ಲಿ ಬಲಿಷ್ಠ ಆರ್ಥಿಕತೆಯತ್ತ ಅಶ್ವಮೇಧವಾಗಿ ಮುನ್ನುಗ್ಗುತ್ತಿದೆ.

ಮೋದಿ ಮೋಡಿ

ಪ್ರಲ್ಹಾದ್‌ ಜೋಶಿ

(ಕೇಂದ್ರ ಆಹಾರ ಮತ್ತು ನಾಗರಿಕ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು)

‘ಕಮಲೇ ಕಮಲೋತ್ಪತ್ತಿಃ’ ಎಂಬ ಸಂಸ್ಕೃತದ ಈ ಪ್ರಸಿದ್ಧ ನುಡಿಗಟ್ಟು ನಮ್ಮೆಲ್ಲರ ಹೆಮ್ಮೆ ಯ, ನಲ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಕ್ಷರಶಃ ಅನ್ವಯಿಸುತ್ತದೆ. ಭಾರತವೇ ಒಂದು ಸುಂದರವಾದ ಕಮಲ, ಅದರಲ್ಲಿ ಮೋದಿ ಅವರೂ ಮತ್ತೊಂದು ಕಮಲವಾಗಿ ಅರಳಿ ವಿಶ್ವಕ್ಕೇ ಸೌಂದರ್ಯ, ಪರಿಮಳವ ಪಸರಿಸಿದ್ದಾರೆಂದರೆ ಬಹುಶಃ ಅತಿಶಯೋಕ್ತಿ ಯಲ್ಲ.

ಅತ್ಯಂತ ಬಡ ಕುಟುಂಬದಲ್ಲಿ ಜನಿಸಿ ಹಳ್ಳಿಯಿಂದ ದಿಲ್ಲಿಗೆ ಬಂದು, ವಿಶ್ವ ಸುತ್ತಿ, ಕೋಶ ಓದಿ ಜಗತ್ತೇ ಜಪಿಸುವಂತೆ ಪ್ರಚಲಿತಕ್ಕೆ ಬಂದ ಮೋದಿಜಿ, ಹೂವಿನ ಜತೆ ನಾರು ಸ್ವರ್ಗ ಸೇರಿತು ಎಂಬಂತೆ ತಾಯ್ನಾಡನ್ನು ವಿಶ್ವ ಪ್ರಸಿದ್ಧಿಪಡಿಸಿದ ಕೀರ್ತಿಪಾತ್ರರು.

‘ಸಬ್ ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್’ ಧ್ಯೇಯಘೋಷದ ಫಲವಾಗಿ ಭಾರತ ವಿಂದು ಅಂಬಾರಿ ಸ್ಥಾನವನ್ನಲಂಕರಿಸಿದೆ. ಒಂದು ಕಾಲದಲ್ಲಿ ಪ್ರಪಂಚದ ಐದು ದುರ್ಬಲ ರಾಷ್ಟ್ರಗಳಲ್ಲಿ ಒಂದಾಗಿದ್ದ, ಭಯೋತ್ಪಾದನಾ ದಾಳಿ ವೇಳೆ ಮೇಣದ ಬತ್ತಿ ಹಚ್ಚುತ್ತಿದ್ದ ಭಾರತದ ಆ ದಿನಗಳೀಗ ಕರಗಿ ಹೋಗಿವೆ. 21ನೇ ಶತಮಾನದ ಭಾರತ, ನರೇಂದ್ರ ಮೋದಿ ಸಾರಥ್ಯದಲ್ಲಿ ಬಲಿಷ್ಠ ಆರ್ಥಿಕತೆಯತ್ತ ಅಶ್ವಮೇಧವಾಗಿ ಮುನ್ನುಗ್ಗುತ್ತಿದೆ.

ಉಗ್ರರಿಗೆ ‘ಆಕಾಶ್- ಪೃಥ್ವಿ- ಬ್ರಹ್ಮೋಸ್’ ಸ್ವರೂಪದಲ್ಲಿ ನರಕ ತೋರಿಸುತ್ತಿದೆ. ಕೋವಿಡ್ ಮಹಾಮಾರಿ, ಭಯೋತ್ಪಾದನೆ, ಯುದ್ಧ ಬಿಕ್ಕಟ್ಟು, ಹಣದುಬ್ಬರ, ಪ್ರಕೃತಿ ವಿಕೋಪದಂತಹ ಆಪತ್ತನ್ನೂ ಮೀರಿ ‘ನಮೋ ಸುರಕ್ಷಾ’ ಕವಚದಲ್ಲಿ 2047ಕ್ಕೆ ವಿಕಸಿತದತ್ತ ದಾಪುಗಾಲಿ ರಿಸಿದೆ ನವ ಭಾರತ.

ಇದನ್ನೂ ಓದಿ: Leena Joshi Column: ಚೀನಾ ಪ್ರಾಬಲ್ಯದ ಕರೆನ್ಸಿ ನಮಗೆ ಬೇಕಿಲ್ಲ

ಅಭಿವೃದ್ಧಿಯ ಗಿರಿ ಶಿಖರದಲ್ಲಿ: ಮೋದಿ ಅವರ ಸಾರ್ಥಕ 12 ವರ್ಷಗಳ ಆಡಳಿತದಲ್ಲಿ ಭಾರತ ಮೂಲಸೌಕರ್ಯ ಅಭಿವೃದ್ಧಿ, ತಂತ್ರಜ್ಞಾನ, ರಕ್ಷಣಾ ವಲಯ, ಆರೋಗ್ಯ ಕ್ಷೇತ್ರ, ಕೃಷಿ- ನೀರಾವರಿ, ಸಾರಿಗೆ-ಸಂಪರ್ಕ, ಉತ್ಪಾದನೆ- ಉದ್ಯಮ, ರಫ್ತು, ಸೌರ ಕ್ರಾಂತಿ ಹೀಗೆ ಸರ್ವ ಶ್ರೇಷ್ಠವಾಗಿ ಅಭಿವೃದ್ಧಿಯ ಗಿರಿ ಶಿಖರವೇರಿದೆ. ಆಧುನಿಕ ಭಾರತದ ಆರ್ಥಿಕ-ಅಭಿವೃದ್ಧಿ, ರಾಷ್ಟ್ರೀಯ ಭದ್ರತೆ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು ಜಾಗತಿಕ ವಾಗಿ ಸಹ ಪ್ರತಿಧ್ವನಿಸುತ್ತಿವೆ.

ಬಲಿಷ್ಠ ಆರ್ಥಿಕತೆಯತ್ತ: ನಮ್ಮ ನೈಜ ಜಿಡಿಪಿ 2025-26ನೇ ಹಣಕಾಸು ವರ್ಷದಲ್ಲಿ ರೂ.323.12 ಲಕ್ಷ ಕೋಟಿಗೆ ತಲುಪಿದೆ. ನಾಮ ಮಾತ್ರ ಜಿಡಿಪಿ ( Nominal GDP) ಪ್ರಸ್ತುತ ಬೆಲೆಗಳ ಆಧಾರದ ಮೇಲೆ ರೂ.346.36 ಲಕ್ಷ ಕೋಟಿಯಾಗಿದ್ದು, ಶೇ.8.9ರಷ್ಟು ಪ್ರಗತಿ ಸಾಧಿಸಿದೆ. ಸೇವಾ ವಲಯ (ಶೇ.53.6ಕ್ಕೇರಿದೆ) ಮತ್ತು ಎಂಎಸ್‌ಎಂಇಗಳ (ಶೇ.31ಕ್ಕಿಂತ ಹೆಚ್ಚು) ಕೊಡುಗೆ ಮಹತ್ತರವಾಗಿದೆ.

ಪರಿಣಾಮ ಭಾರತ ಸೇವಾ ಆಧಾರಿತ ಆರ್ಥಿಕತೆಯತ್ತ ಸೂಪರ್ - ವಂದೇ ಭಾರತ್ ರೈಲಿನಂತೆ ಸಾಗುತ್ತಿದೆ. ದೇಶಾದ್ಯಂತ ಏಕ ತೆರಿಗೆ ವ್ಯವಸ್ಥೆ ಜಿಎಸ್‌ಟಿ ಜಾರಿಗೊಳಿಸಿ ಆರ್ಥಿಕತೆ ಸ್ವರೂಪವನ್ನೇ ಬದಲಿಸಿದರು ಮೋದಿ. ತೆರಿಗೆ ಆದಾಯ ರೂ.22ಲಕ್ಷ ಕೋಟಿಗೇರಿದರೆ, 2026ರ ಏಪ್ರಿಲ್‌ನಲ್ಲಿ ಭಾರತದ ಜಿಎಸ್‌ಟಿ ಸಂಗ್ರಹ ಸಾರ್ವಕಾಲಿಕ ಗರಿಷ್ಠ ಮಟ್ಟ ರೂ.2.43 ಲಕ್ಷ ಕೋಟಿಗೆ ತಲುಪಿದೆ.

ಕೋವಿಡ್ ಸಂಕಷ್ಟದ ಕಾಲಘಟ್ಟದಲ್ಲಿ ಶೇ.4.8ಕ್ಕೆ ಕುಸಿದಿದ್ದ ಜಿಡಿಪಿ ಐದೇ ವರ್ಷದಲ್ಲಿ ದುಪ್ಪಟ್ಟಾಗಿದ್ದು, ಶೇ.7.7ರಷ್ಟು ಬೆಳವಣಿಗೆ ದಾಖಲಿಸಿದೆ. ಅಗಾಧ ಮೂಲಸೌಕರ್ಯ: ಭಾರತ 2026ರ ವೇಳೆಗೆ ಮೂಲಸೌಕರ್ಯ ಕ್ಷೇತ್ರದಲ್ಲಿ ಅಭೂತ ಪೂರ್ವ ಸಾಧನೆ ತೋರಿದೆ.

ಸ್ವಾತಂತ್ರ್ಯಾ ನಂತರವೂ ಕತ್ತಲೆಯಲ್ಲಿದ್ದ 18 ಸಾವಿರ ಕುಗ್ರಾಮಗಳಿಗೆ ವಿದ್ಯುತ್ ಬೆಳಕು ಚೆಲ್ಲಿದೆ. ರಾ.ಹೆದ್ದಾರಿ ನಿರ್ಮಾಣ 1.47 ಲಕ್ಷ ಕಿ.ಮೀ.ಗೆ ವಿಸ್ತರಿಸಿದೆ. ನಿರ್ಮಾಣ ವೇಗ 93 ಕಿ.ಮೀ.ನಿಂದ 3052 ಕಿ.ಮೀ.ಗೆ ತಲುಪಿದೆ. 2004ಕ್ಕೆ ಹೋಲಿಸಿದರೆ ಶೇ.130ರಷ್ಟು ಅಧಿಕ ವಾಗಿದೆ. ರೈಲು ಜಾಲವೂ ಅಪರಿಮಿತ ವಿಸ್ತರಣೆಗೊಂಡಿದೆ.

modi and Pralhad

ರೈಲು ಜಾಲದ ಶೇ.99.6ರಷ್ಟು ವಿದ್ಯುದ್ದೀಕರಣ ಹಾಗೂ ದೆಹಲಿ, ಮುಂಬೈ, ಚೆನ್ನೈ, ಪುಣೆ ಯಂತಹ ಮಹಾನಗರ ಗಳಲ್ಲಿ ಹೆಚ್ಚುವರಿಯಾಗಿ 300 ಕಿ.ಮೀ. ಹೆಚ್ಚು ಹೊಸ ಮೆಟ್ರೋ ಮತ್ತು ಪ್ರಾದೇಶಿಕ ಕ್ಷಿಪ್ರ ರೈಲು ಕಾರಿಡಾರ್‌ ಆರಂಭವಾಗಿದೆ.

ಜಾಗತಿಕ ರಕ್ಷಣೆಯಲ್ಲೂ ಆಪ್ತ ರಕ್ಷಕ: ಹಿಂದೂಸ್ತಾನ ಮಾತ್ರವಲ್ಲ; ಜಾಗತಿಕ ರಕ್ಷಣೆ ಯಲ್ಲೂ ಮೋದಿ ಆಪ್ತ ರಕ್ಷಕರು. ಕೋವಿಡ್ ಮಹಾಮಾರಿ ಆಕ್ರಮಣ ವೇಳೆ ಜಗತ್ತಿಗೇ ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕಾಸ್ತ್ರ ಕೊಟ್ಟು ಭಾರತವನ್ನು ಸಂಜೀವಿನಿ ಯಾಗಿಸಿ ದರು. 95 ರಾಷ್ಟ್ರಗಳಿಗೆ 65.5 ಮಿಲಿಯನ್ ಲಸಿಕೆ ರವಾನಿಸಿ ವಿದೇಶಿಗರ ಹೃದಯ ವಾಸಿ ಯಾದರು.

ಭಾರತದ 140 ಕೋಟಿ ಜನಕ್ಕೆ ಉಚಿತ ಲಸಿಕೆ ಹಂಚಿ ಕಾಪಾಡಿದ್ದಲ್ಲದೆ, ‘ವಂದೇ ಭಾರತ್ ಮಿಷನ್’ ಸ್ಥಾಪಿಸಿ ವಿದೇಶದಲ್ಲಿದ್ದ 2.5 ಲಕ್ಷ ಭಾರತೀಯರನ್ನು ರಕ್ಷಿಸಿದ ಹೆಗ್ಗಳಿಕೆಗೆ ಪಾತ್ರ ರಾದರು. ಪ್ರಪಂಚದ ಅತಿ ದೊಡ್ಡ ಮಿಲಿಟರಿ ಪಡೆಯೊಂದಿಗೆ ಭಾರತವನ್ನು ಸಶಕ್ತ ಗೊಳಿಸಿದ ಕೀರ್ತಿ ಮೋದಿ ಅವರದ್ದಾಗಿದೆ.

‘ಆಪರೇಷನ್ ಸಿಂದೂರ’ ಬಳಿಕ 40ಕ್ಕೂ ಹೆಚ್ಚು ದೇಶಗಳಿಗೆ ರಕ್ಷಣಾ ಸಾಮಗ್ರಿ ರಫ್ತು ಮಾಡುತ್ತ ಜಾಗತಿಕ ಶಕ್ತಿಯಾಗಿ ಹೊರ ಹೊಮ್ಮಿದೆ ಭಾರತ. ರಕ್ಷಣಾ ವಲಯಕ್ಕೆ ರೂ.7.85 ಲಕ್ಷ ಕೋಟಿ ಬಜೆಟ್ ಮೀಸಲಿಟ್ಟು, ರಫ್ತಿನಲ್ಲಿ ರೂ.38,424 ಕೋಟಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ ಭಾರತ, ರಕ್ಷಣಾ ವಲಯಕ್ಕೆ ಅತಿ ಹೆಚ್ಚು ವೆಚ್ಚ ಮಾಡುವ 5ನೇ ರಾಷ್ಟ್ರವಾಗಿದೆ.

‘ಮೇಕ್ ಇನ್ ಇಂಡಿಯಾ’ ಇದೀಗ ಶೇ.65 ರಷ್ಟು ರಕ್ಷಣಾ ಉಪಕರಣಗಳನ್ನು ದೇಶೀಯವಾಗೇ ಉತ್ಪಾದಿಸುತ್ತಿದ್ದು, ಬ್ರಹ್ಮೋಸ್, ಆಕಾಶ್, ತೇಜಸ್ ಕ್ಷಿಪಣಿಗಳನ್ನೂ ರಫ್ತು ಮಾಡುವಷ್ಟು ಪ್ರಬಲವಾಗಿ ಬೆಳೆದಿದೆ. ಭಾರತೀಯ ಸೇನೆ ವಿಶ್ವಸಂಸ್ಥೆ ಶಾಂತಿಪಾಲನಾ ಕಾರ್ಯಾಚರಣೆ ಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಲ್ಲದೆ, ಹಿಂದೂ ಮಹಾ ಸಾಗರ ಪ್ರದೇಶ ದಲ್ಲಿ ಭದ್ರತೆ ಒದಗಿಸುವಲ್ಲಿ ‘ನೆಟ್ ಸೆಕ್ಯುರಿಟಿ ಪ್ರೊವೈಡರ್’ ಆಗಿರುವುದು ನಮ್ಮ ರಕ್ಷಣಾ ವ್ಯವಸ್ಥೆ ಗೊಂದು ಹೆಮ್ಮೆಯ ಗರಿ.

ಸೌರಶಕ್ತಿಯಲ್ಲಿ 2ನೇ ಬೃಹತ್ ದೇಶ: ಅಂತಾರಾಷ್ಟ್ರೀಯ ಸೌರ ಒಕ್ಕೂಟದ ನಾಯಕತ್ವ ವಹಿಸಿಕೊಂಡ ಭಾರತ, ಸೌರಶಕ್ತಿ ಉತ್ಪಾದನೆಯಲ್ಲಿ ಅಗಾಧ ಬೆಳವಣಿಗೆ ಕಂಡಿದ್ದು, ಅಮೇರಿಕಾವನ್ನೇ ಹಿಂದಿಕ್ಕಿ ಜಾಗತಿಕವಾಗಿ 2ನೇ ಸ್ಥಾನ ಅಲಂಕರಿಸಿದೆ.

ಪ್ರಸ್ತುತ ಸೌರಶಕ್ತಿ ಸಾಮರ್ಥ್ಯ 150 ಗಿಗಾವ್ಯಾಟ್ ಗಡಿ ದಾಟಿದ್ದು, 2014ಕ್ಕೆ ಹೋಲಿಸಿದರೆ 56 ಪಟ್ಟು ಅಧಿಕವಾಗಿದೆ. 40 ಲಕ್ಷ ಮನೆಗ ಳಿಗೆ ಸೌರ ಬೆಳಕು ಬೀರಿರುವ ‘ಸೂರ್ಯಘರ್’ 1 ಕೋಟಿ ಸೌರ ಮೇಲ್ಚಾವಣಿ ಗುರಿ ಸಾಧನೆಗೆ ಸನಿಹದ ಸಾಗುತ್ತಿದೆ. ಪರಿಸರ ಸಂರಕ್ಷಣೆ ಮತ್ತು ಆ ನಿಟ್ಟಿನ ಪ್ರಯತ್ನಕ್ಕಾಗಿ ವಿಶ್ವ ಸಂಸ್ಥೆಯಿಂದ ‘ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿ’ಗೆ ಪಾತ್ರರಾಗಿದ್ದಾರೆ ಮೋದಿ.

ಆಡಳಿತದಲ್ಲಿ ಹೊಸ ಅಧ್ಯಾಯ: ಬುದ್ಧನ ನಾಡಿನಲ್ಲಿ ಜನಿಸಿ ಸರ್ವರ ಪ್ರೀತಿ-ಸ್ನೇಹ, ಶ್ರೀಸಾಮಾನ್ಯರ ಬದುಕು-ಬವಣೆ, ಕಠಿಣ ಪರಿಶ್ರಮ-ಪರಿತಾಪಗಳ ನಡುವಣ ಅನನ್ಯ ಜೀವನುಭವ-ಆಡಳಿತಾನುಭವವುಳ್ಳ ವಿಶ್ವಶ್ರೇಷ್ಠ ನಾಯಕರಾಗಿ ಹೊರಹೊಮ್ಮಿದ್ದಾರೆ. ‘ಭಾರತದ ಸುದೀರ್ಘಾವಧಿ ಚುನಾಯಿತ ಪ್ರಧಾನ ಮಂತ್ರಿ’ ಹೆಗ್ಗಳಿಕೆಗೂ ಪಾತ್ರರಾಗಿ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ.

ಭಾರತದ ಪ್ರಜಾಪ್ರಭುತ್ವದಲ್ಲಿ ಇದೊಂದು ಅಭೂತಪೂರ್ವ ಘಳಿಗೆಯಾಗಿ ಉಳಿಯಲಿದೆ. ವಿಶ್ವದ ಅತಿ ದೊಡ್ಡ ಪಕ್ಷದ ನೇತಾರರಾಗಿ 2014ರ ಮೇ 26ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ನರೇಂದ್ರ ಮೋದಿ ( Longest Serving PM) ಆಡಳಿತದಲ್ಲಿ 2026 ಜೂನ್ 10ಕ್ಕೆ 4399 ದಿನಗಳನ್ನು ಪೂರೈಸುತ್ತಿದ್ದಾರೆ.

2001ರಿಂದ ಮೇ 2014ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿ ಸಾರ್ವಜನಿಕ ಅಧಿಕಾರಾ ವಧಿಯಲ್ಲಿ ಒಟ್ಟು 8930 ದಿನಗಳನ್ನು ದಾಟುವ ಮೂಲಕ ಜನರಿಂದ ಚುನಾಯಿತರಾದ ಸುದೀರ್ಘಾವಧಿ ‘ಸರ್ಕಾರದ ಮುಖ್ಯಸ್ಥರು’ ಎಂಬ ಜಾಗತಿಕ ಮನ್ನಣೆಗೂ ಪಾತ್ರರಾಗಿದ್ದಾರೆ.

ಇಂದಿರಾ, ನೆಹರು ದಾಖಲೆ ನೇಪಥ್ಯಕ್ಕೆ: ಸ್ವತಂತ್ರ ಭಾರತದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಂತರ ಸತತ 4398 ದಿನಗಳ ಕಾಲ ದೇಶವಾಳಿದ ಜವಾಹರಲಾಲ್ ನೆಹರೂ ಅವರ ಆರು ದಶಕದ ದಾಖಲೆ ಹಾಗೂ ಇಂದಿರಾ ಗಾಂಧಿ ಅವರ 4077 ದಿನಗಳ ಅಧಿಕಾರಾ ವಧಿ ದಾಖಲೆಯನ್ನು ಮೀರಿಸಿದ ಏಕೈಕ ಪ್ರಧಾನಿಯಾಗುಳಿದಿದ್ದಾರೆ.

ಭಾರತದಂತಹ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ, ಅದರಲ್ಲೂ ಅತ್ಯಧಿಕ 744 ರಾಜಕೀಯ ಪಕ್ಷಗಳಿರುವ ಪ್ರಸ್ತುತ ಕಾಲಘಟ್ಟದಲ್ಲಿ ಸತತ 3ನೇ ಅವಧಿ ಆಡಳಿತದ ಚುಕ್ಕಾಣಿ ಹಿಡಿದ ‘ಕಾಂಗ್ರೆಸ್ಸೇತರ ಮೊದಲ ನಾಯಕ’ ಎಂಬ ಹೆಗ್ಗಳಿಕೆ. ಇದ ಮೋದಿ ಅವರ ರಾಜಕೀಯ ಬದ್ಧತೆ, ಪ್ರಬುದ್ಧತೆ ಹಾಗೂ ಭಾರತೀಯರಿಗಿರುವ ಪ್ರಜಾಪ್ರಭುತ್ವದ ಮೇಲಿನ ಗೌರವ-ವಿಶ್ವಾಸಕ್ಕೆ ಕೈಗನ್ನಡಿ.

ಟೆಕ್ನೋ ಸೇವಿ ನಾಯಕ: ಆಧುನಿಕ ಭಾರತದ ಪ್ರಧಾನಿಯಾಗಿ ಅಂತರ್ಜಾಲ ಮೂಲಕವೇ ವರ್ಚಸ್ಸು ವೃದ್ಧಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜನಸಂಪರ್ಕದ ಪಥವೇ ವಿಶಿಷ್ಟ. ಯಾವತ್ತೂ ನೇರವಾಗಿ ಜನಸಂಪರ್ಕಕ್ಕೆ, ಸಂದೇಶ ರವಾನಿಸಲು ಆರಿಸಿಕೊಂಡ ಮಾರ್ಗ ಸಾಮಾಜಿಕ ಜಾಲತಾಣ. ಸರಕಾರದೊಂದಿಗೆ ಜನರ ನೇರ ಸಹಭಾಗಿತ್ವವನ್ನು ಯೋಚಿಸಿ ‘MyGov’ ಮೂಲಕ ಅದಕ್ಕೊಂದು ವೇದಿಕೆ ಕಲ್ಪಿಸಿಕೊಟ್ಟರು.

ಮನ್‌ಕೀ ಬಾತ್, ಪರೀಕ್ಷಾ ಚರ್ಚಾ ಮೂಲಕ ನೇರ ಸಂವಾದ ರಚಿಸಿದರು. ಇದೀಗ 4 ಕೋಟಿ ನೋಂದಣಿಗಳನ್ನು ದಾಟಿದ್ದು, ಮತ್ತೊಂದು ಗಿನ್ನೆಸ್ ವಿಶ್ವ ದಾಖಲೆ ಬರೆದಿದೆ. ವೆಬ್, ಫೇಸ್ಬುಕ್, ಟ್ವೀಟರ್, ಲಿಂಕ್ಡ್‌ ಇನ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್, ವಾಟ್ಸಪ್ ಹೀಗೆ ‘ಡಿಜಿಟಲ್ ಇಂಡಿಯಾ’ಉಪಕ್ರಮಗಳಲ್ಲಿ ಮುಖ್ಯವಾಹಿನಿಗೆ ಬಂದು ಜನತೆಯ ಜೊತೆ ಸಂಪರ್ಕ ಹೊಂದುತ್ತಾರೆ.

ಹೀಗಾಗಿ ಮೋದಿಜಿ ಅವರನ್ನು ದೇಶದ ಅತ್ಯಂತ ಟೆಕ್ನೋ ಸೇವಿ ನಾಯಕ ಎಂದೇ ಬಿಂಬಿಸ ಲಾಗಿದೆ. ತಮ್ಮೊಂದಿಗೆ ಜನರ ಜೀವನದಲ್ಲೂ ಡಿಜಿಟಲ್ ಸಾಕ್ಷರತೆ ಬಿತ್ತುತ್ತಿರುವ ಮೋದಿ ಅವರ ‘ಡಿಜಿಟಲ್ ಇಂಡಿಯಾ’ ಆಡಳಿತ ಶೈಲಿಯು ಆಧಾರ್, DBT, UPI, DigiLocker, UMANG, GEM, ONDC ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಸೋರಿಕೆ ತಡೆಗಟ್ಟಿ ಪಾರದರ್ಶಕತೆಯನ್ನು ಹಾಸು ಹೊಕ್ಕಾಗಿಸಿದ ಎನ್ನುವುದಲ್ಲಿ ಎರಡು ಮಾತಿಲ್ಲ.

ನೆಹರು V/s ಮೋದಿ ಕಾಲ

6 ದಶಕಗಳ ಹಿಂದಿನ ನೆಹರು ಆಡಳಿತಾವಧಿ ಮತ್ತು ಪ್ರಧಾನಿ ಮೋದಿಯವರ ಪ್ರಸ್ತುತ ಆಡಳಿತಾವಧಿ ಸಾಮ್ಯತೆ ನೋಡಿದರೆ ಅಜಗಜಾಂತರವಿದೆ. ನೆಹರೂ ಯುಗ (1952-1964)ದಲ್ಲಿ ಭಾರತ ಕೇವಲ 34 ಕೋಟಿ ಜನಸಂಖ್ಯೆ ಹೊಂದಿತ್ತು. ಆದರೀಗ 146 ಕೋಟಿ ಮಿಕ್ಕಿದೆ. ಮತದಾರರೂ ಅಷ್ಟೇ 17 ಕೋಟಿ ಸನಿಹದಲ್ಲಿದ್ದ ಸಂಖ್ಯೆ 2026ರ ವೇಳೆಗೆ 96.88 ಕೋಟಿ ಮೀರಿದೆ. ಕೇವಲ 53 ರಾಜಕೀಯ ಪಕ್ಷಗಳಿದ್ದ ಸಂಖ್ಯೆ ಏಳೂವರೆ ದಶಕದಲ್ಲಿ 744 ನ್ನು ದಾಟಿದೆ. ಇನ್ನು, ಅಂದಿದ್ದ ಕಾಂಗ್ರೆಸ್ ಏಕಸ್ವಾಮ್ಯ ರಾಜಕೀಯ ಸನ್ನಿವೇಶ ಸಂಪೂರ್ಣ ಬದಲಾಗಿದೆ. ಮೋದಿ ಯುಗದಲ್ಲಿ ತೀವ್ರ ಪೈಪೋಟಿ, ಪ್ರಾದೇಶಿಕ ಪಕ್ಷಗಳ ಬಲ ಹಾಗೂ ಸಮ್ಮಿಶ್ರ ರಾಜಕಾರಣದ ಸವಾಲು ಹೀಗೆ ನೆಹರು- ನಮೋ ಯುಗಾಂತರ ಆನೆ-ಆಮೆ ಗಾತ್ರ ದಷ್ಟಿದೆ.