ಮನಿ ಮೈಂಡೆಡ್
ಭಾರತವನ್ನು ಸಾವಿರಾರು ವರ್ಷಗಳ ಪ್ರಾಚೀನ ಇತಿಹಾಸವಿರುವ, ಕೋಟ್ಯಂತರ ಆಕಾಂಕ್ಷೆಗಳನ್ನು ಹೊತ್ತು ಸಾಗುತ್ತಿರುವ ಒಂದು ಬೃಹತ್ ರಥ ಎಂದು ಕಲ್ಪಿಸಿಕೊಳ್ಳಿ. ಪರಕೀಯರ ಸ್ವಾಧೀನದಿಂದ ಸ್ವಾತಂತ್ರ್ಯ ಪಡೆದ ಬಳಿಕವೂ ಹಲವು ದಶಕಗಳ ಕಾಲ ಈ ರಥವು ಕಲ್ಲು-ಮುಳ್ಳಿನ ಹಾದಿಯಲ್ಲಿ, ಹಳೆಯ ಮತ್ತು ಕಿರಿದಾದ ದಾರಿಗಳಲ್ಲಿ ಮುಂದೆ ಸಾಗಲು ಕಷ್ಟಪಡುತ್ತಿತ್ತು. ಆದರೆ ಕಳೆದ ಹನ್ನೆರಡು ವರ್ಷಗಳಿಂದ ಒಬ್ಬ ನಿಪುಣ ಮಹಾಶಿಲ್ಪಿ ಬಂದು ಈ ಇಡೀ ದೇಶಾದ್ಯಂತ ಭಾರತವೆಂಬೋ ಈ ಮಹಾರಥದ ಎದುರಿದ್ದ ಕಲ್ಲು-ಮುಳ್ಳಿನ ಹಾದಿಯನ್ನು ಸರಿಪಡಿಸಿ ಸುಗಮಗೊಳಿಸುತ್ತಿದ್ದಾನೆ.
ಆತ ಗುಜರಾತ್‌ನಲ್ಲಿ ಬರೋಬ್ಬರಿ 13 ವರ್ಷಗಳ ಕಾಲ ತನ್ನ ಕೆಲಸವನ್ನು ಯಶಸ್ವಿಯಾಗಿ ಮುಗಿಸಿ ಬಂದಿದ್ದ. ಒಟ್ಟು 25 ವರ್ಷಗಳ ವೃತ್ತಿಪರ ಅನುಭವ! ಆ ಮಹಾ ಶಿಲ್ಪಿಯ ಕೆತ್ತನೆಯನ್ನು ನೋಡಿ. ದೇಹದಲ್ಲಿ ರಕ್ತ ಸರಿಯಾಗಿ ಹರಿದರೆ ಮಾತ್ರ ಅಂಗಾಂಗಗಳು ಚುರುಕಾಗಿರುತ್ತವೆ. ಹಾಗೆಯೇ, ದೇಶದ ಮೂಲೆಮೂಲೆಗಳನ್ನು ಬೆಸೆಯಲು ನಿರ್ಮಿಸಲಾಗುತ್ತಿರುವ ಆರು-ಪಥಗಳ ಎಕ್ಸ್‌ಪ್ರೆಸ್‌ವೇಗಳು ಮತ್ತು ಹೈವೇಗಳು ದೇಶದ ರಕ್ತನಾಳಗಳು.
ಹಿಂದೆ ದಿನಗಟ್ಟಲೆ ಹಿಡಿಯುತ್ತಿದ್ದ ಪ್ರಯಾಣದ ಅವಧಿಯೀಗ ಗಂಟೆಗಳಿಗೆ ಇಳಿದಿದೆ. ಇದು ಕೇವಲ ಡಾಂಬರು ರಸ್ತೆಗಳಲ್ಲ, ಬದಲಿಗೆ ಆರ್ಥಿಕತೆಯ ವೇಗವನ್ನು ಹೆಚ್ಚಿಸುವ ಜೀವನಾಡಿಗಳು. ದೇಶದ ಮೂಲೆಮೂಲೆಗೆ ಚಲಿಸುವ ರೈಲು ಜಾಲವು ಈ ಮಹಾರಥದ ಉಕ್ಕಿನ ನರಗಳಿದ್ದಂತೆ.
ಇದನ್ನೂ ಓದಿ: Keshava Prasad B Column: ಆರ್ಥಿಕ ಅಭಿವೃದ್ಧಿಗೆ ಉಗ್ರವಾದದ ದಮನ ಅಷ್ಟೇ ಮುಖ್ಯ !
ವಂದೇ ಭಾರತ್ ಮುಂತಾದ ಅತಿವೇಗದ ರೈಲುಗಳು, ಬುಲೆಟ್ ರೈಲು ಕನಸುಗಳು ಮತ್ತು ನಿಲ್ದಾಣ ಗಳ ಆಧುನೀಕರಣವು ದೇಶದ ವೇಗಕ್ಕೆ ಹೊಸ ರೆಕ್ಕೆಗಳನ್ನು ನೀಡಿವೆ. ಹಳೆಯದರ ಜತೆಗೆ ಅತ್ಯಾಧು ನಿಕ ತಂತ್ರಜ್ಞಾನ ಬೆರೆತು ಪ್ರಯಾಣಿಕರಿಗೆ ಹೊಸ ಅನುಭವ ನೀಡುತ್ತಿದೆ. ಬುಲೆಟ್ ರೈಲು ಬರುತ್ತೆ ಅಂದಾಗ ಹಲವರು ಇನ್ನೊಂದೈವತ್ತು ವರ್ಷ ಕಳೆದ ನಂತರವೇ? ಎಂದು ಟೀಕಿಸಿದ್ದವರು ಈಗ ಬಾಯಿ ಮುಚ್ಚಿಕೊಂಡಿದ್ದಾರೆ.
ಏಕೆಂದರೆ 2027ರ ಆಗ ವೇಳೆಗೆ ಭಾರತದ ಮೊದಲ ಬುಲೆಟ್ ರೈಲು ಸಂಚಾರವಾಗುವ ನಿರೀಕ್ಷೆ ಇದೆ. ಕೆಲಸ ಭರದಿಂದ ಸಾಗಿದೆ. ಈ ಎಲ್ಲಾ ಬದಲಾವಣೆಗಳು ಕೇವಲ ಇಟ್ಟಿಗೆ ಮತ್ತು ಸಿಮೆಂಟ್‌ಗಳ ಜೋಡಣೆಯಲ್ಲ. ಇದು ಶತಮಾನಗಳ ಕನಸುಗಳನ್ನು ಹೊತ್ತ ಭಾರತೀಯರ ಬದುಕಿನ ಗತಿಯನ್ನು ಬದಲಾಯಿಸುತ್ತಿರುವ ಒಂದು ಹೊಸ ಯುಗದ ಶಿಲ್ಪಕಲೆ. ಭಾರತದ ಮೂಲಸೌಕರ್ಯದ ಈ ರೂಪಾಂತರವು ದೇಶವನ್ನು ಜಾಗತಿಕ ನಕ್ಷೆಯಲ್ಲಿ ಮುಂಚೂಣಿಗೆ ತಂದು ನಿಲ್ಲಿಸಿದೆ. ಇದರ ಹಿಂದಿರುವ ಮಹಾ ಶಿಲ್ಪಿಯ ಹೆಸರು ಪ್ರಧಾನಿ ನರೇಂದ್ರ ಮೋದಿ.
ಯಾವುದೇ ಒಂದು ರಾಷ್ಟ್ರದ ಇತಿಹಾಸದಲ್ಲಿ 25 ವರ್ಷಗಳೆಂಬುದು ಒಂದು ಸುದೀರ್ಘ ಅವಧಿ. ಈ ಕಾಲಘಟ್ಟದಲ್ಲಿ ಒಂದು ತಲೆಮಾರು ಬೆಳೆದು ದೊಡ್ಡದಾಗುತ್ತದೆ, ನಗರಗಳ ರೂಪ ಬದಲಾಗುತ್ತದೆ, ತಂತ್ರಜ್ಞಾನವು ಜನರ ಜೀವನಶೈಲಿಯನ್ನು ಸಂಪೂರ್ಣವಾಗಿ ಪರಿವರ್ತಿಸುತ್ತದೆ. ಗುಜರಾತ್‌ನ ವಡ್ನಗರದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಬೆಳೆದ ನರೇಂದ್ರ ಮೋದಿಯವರು 2001ರ ಅಕ್ಟೋಬರ್ 7ರಂದು ಮೊದಲ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
ಅಂದು ಯಾರೂ ನಿರೀಕ್ಷಿಸದ ಆ ರಾಜಕೀಯ ಪ್ರಯಾಣವು ಇಂದು ದೇಶದ ಸರ್ವಾಂಗೀಣ ವಿಕಾಸದ ಐತಿಹಾಸಿಕ ಮೈಲಿಗಲ್ಲಾಗಿ ರೂಪುಗೊಂಡಿದೆ. ಗುಜರಾತ್ ಮುಖ್ಯಮಂತ್ರಿಯಾಗಿ ಸುಮಾರು 13 ವರ್ಷಗಳು ಮತ್ತು ಭಾರತದ ಪ್ರಧಾನಮಂತ್ರಿಯಾಗಿ 12 ವರ್ಷಗಳ ಅವಧಿಯನ್ನು (ಒಟ್ಟಾರೆ 25 ವರ್ಷಗಳ ಆಡಳಿತ) ಪೂರೈಸಿರುವ ನರೇಂದ್ರ ಮೋದಿಯವರು, ದೇಶದ ಮೂಲಸೌಕರ್ಯ ಮತ್ತು ಆರ್ಥಿಕತೆಯಲ್ಲಿ ಅದ್ಭುತವಾದ ಕ್ರಾಂತಿಯನ್ನುಂಟು ಮಾಡಿದ್ದಾರೆ.
ಕೇವಲ ನೀತಿ ನಿರೂಪಣೆಗೆ ಸೀಮಿತವಾಗದೆ, ಮಣ್ಣಿನಿಂದ ಗಗನದವರೆಗೆ ಪ್ರತಿಯೊಂದು ರಂಗದಲ್ಲೂ ಅಭಿವೃದ್ಧಿಯ ಹೊಸ ಅಲೆ ಎಬ್ಬಿಸಲಾಗಿದೆ. ಹಾಗೂ ಅದು ಕಣ್ಣಿಗೆ ಕಾಣುವುದರಿಂದ ಬೇರೆ ಯಾವುದೇ ಅಪಪ್ರಚಾರಗಳು ಅವುಗಳೆದುರು ಧೂಳಿಪಟವಾಗುತ್ತಿವೆ. ನೀವೇ ಗಮನಿಸಿ, ದೇಶದ ಆರ್ಥಿಕ ಪ್ರಗತಿಗೆ ಸಾರಿಗೆ ವ್ಯವಸ್ಥೆಯು ಜೀವನಾಡಿ.
ಕಳೆದ ಒಂದು ದಶಕದಲ್ಲಿ (ವಿಶೇಷವಾಗಿ 2014ರ ನಂತರ) ಸಾರ್ವಜನಿಕ ಬಂಡವಾಳ ಹೂಡಿಕೆ ಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ವಾರ್ಷಿಕ ಮೂಲಸೌಕರ್ಯ ಬಂಡವಾಳ ವೆಚ್ಚವು 2 ಲಕ್ಷ ಕೋಟಿ ರುಪಾಯಿಗಳಿಂದ ಸುಮಾರು 12.2 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದು ದೀರ್ಘಕಾಲೀನ ಮೂಲಸೌಕರ್ಯ ಸೃಷ್ಟಿಗೆ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ.
ಭಾರತವು ಇಂದು ಅಮೆರಿಕದ ನಂತರ ವಿಶ್ವದ ಎರಡನೇ ಅತಿ ದೊಡ್ಡ ರಸ್ತೆ ಜಾಲವನ್ನು ಹೊಂದಿದೆ. ರಾಷ್ಟ್ರೀಯ ಹೆದ್ದಾರಿಗಳ ಒಟ್ಟು ಉದ್ದವು 1.46 ಲಕ್ಷ ಕಿಲೋಮೀಟರ್‌ಗಳಿಗೂ ಹೆಚ್ಚು ವಿಸ್ತರಿಸಿದೆ. ದೆಹಲಿ-ಮುಂಬಯಿ, ದಿಲ್ಲಿ-ಅಮೃತಸರ-ಕತ್ರಾ ಮತ್ತು ಇತರ ಹೈ-ಸ್ಪೀಡ್ ಕಾರಿಡಾರ್ ಗಳು ಸರಕು ಸಾಗಣೆ ವೆಚ್ಚವನ್ನು ತಗ್ಗಿಸಿ, ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡಿವೆ.
ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನಂತಹ ಕಠಿಣ ಭೂಪ್ರದೇಶಗಳಲ್ಲಿ ಎಲ್ಲಾ ಹವಾಮಾನದಲ್ಲೂ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಮಹತ್ವದ ಯೋಜನೆಗಳು ಸಾಕಾರಗೊಂಡಿವೆ. ವಿಶ್ವದ ಅತ್ಯಂತ ಎತ್ತರದ ಹೆದ್ದಾರಿ ಸುರಂಗವಾದ ಅಟಲ್ ಸುರಂಗ, ಚೆನಾನಿ-ನಶ್ರೀ ಸುರಂಗ, ಜಡ್-ಮೋರ್ ಸುರಂಗ ಹಾಗೂ ಜಮ್ಮು-ಶ್ರೀನಗರ ನಡುವಿನ ಸಂಪರ್ಕವನ್ನು ಸುಲಭಗೊಳಿಸಿದ ಎಂಜಿನಿಯರಿಂಗ್ ಅದ್ಭುತಗಳು ದೇಶದ ಭದ್ರತೆಗೆ ಮತ್ತು ಪ್ರವಾಸೋದ್ಯಮಕ್ಕೆ ಹೊಸ ಜೀವ ತುಂಬಿವೆ.
ಅಸ್ಸಾಂ ಮತ್ತು ಅರುಣಾಚಲ ಪ್ರದೇಶವನ್ನು ಸಂಪರ್ಕಿಸುವ ಧೋಲಾ-ಸದಿಯಾ ಸೇತುವೆ, ಚೆನಾಬ್ ನದಿಯ ಮೇಲಿನ ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆ, ಮತ್ತು ಮಿಜೋರಾಮ್ನ ಬೈರಬಿ-ಸೈರಂಗ್ ರೈಲು ಮಾರ್ಗವು ದಶಕಗಳಿಂದ ಮೂಲಸೌಕರ್ಯದಿಂದ ವಂಚಿತವಾಗಿದ್ದ ಈಶಾನ್ಯ ಭಾರತವನ್ನು ಮುಖ್ಯವಾಹಿನಿಗೆ ತಂದಿದೆ.
ದೇಶದ ಎಲ್ಲ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ಸಾಧ್ಯವಾಗಿದೆ. ಭಾರತೀಯ ರೈಲ್ವೆಯು ಕೇವಲ ಪ್ರಯಾಣ ಸಾಧನವಾಗಿರದೆ, ದೇಶದ ಆರ್ಥಿಕತೆಯ ಬೆನ್ನೆಲುಬಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ರೈಲ್ವೆ ವಲಯದಲ್ಲಿ ಆಗಿರುವ ರೂಪಾಂತರವು ಅಭೂತಪೂರ್ವವಾಗಿದೆ. ಸ್ವಾತಂತ್ರ್ಯದ ನಂತರ ಕೇವಲ ಶೇ.20ರಷ್ಟು ಮಾತ್ರ ವಿದ್ಯುದೀಕರಿಸಲ್ಪಟ್ಟಿದ್ದ ರೈಲ್ವೆ ಜಾಲವು, ಈಗ ಶೇ.99.6ರಷ್ಟು ವಿದ್ಯುದ್ದೀಕರಣ ಸಾಧಿಸಿದೆ.
ಇದು ಕಲ್ಲಿದ್ದಲು ಮೇಲಿನ ಅವಲಂಬನೆಯನ್ನು ತಗ್ಗಿಸಿ, ಪರಿಸರ ಸ್ನೇಹಿ ರೈಲು ಸಂಚಾರಕ್ಕೆ ಕಾರಣವಾಗಿದೆ. ಭಾರತೀಯ ತಂತ್ರಜ್ಞಾನದಲ್ಲಿ ನಿರ್ಮಿಸಲಾದ ‘ವಂದೇ ಭಾರತ್’ ರೈಲುಗಳು ಪ್ರಯಾಣಿಕರಿಗೆ ವಿಮಾನದ ಅನುಭವವನ್ನು ನೀಡುತ್ತಿವೆ. ವಂದೇ ಭಾರತ್ ಸ್ಲೀಪರ್ ರೈಲುಗಳು ದೂರಯಾಣದ ಕಲ್ಪನೆಯನ್ನೇ ಬದಲಿಸಿವೆ. ಇದರೊಂದಿಗೆ, ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರಿಗಾಗಿ ಪ್ರಾರಂಭಿಸಲಾದ ‘ಅಮೃತ್ ಭಾರತ್ ಎಕ್ಸ್‌ಪ್ರೆಸ್’ ರೈಲುಗಳು ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಸೌಲಭ್ಯ ಕಲ್ಪಿಸುತ್ತಿವೆ.
ರೈಲ್ವೆ ಸುರಕ್ಷತೆಯನ್ನು ಹೆಚ್ಚಿಸಲು ಭಾರತವೇ ಸ್ವತಃ ಅಭಿವೃದ್ಧಿಪಡಿಸಿರುವ ‘ಕವಚ್’ ಆಟೋ ಮ್ಯಾಟಿಕ್ ರೈಲು ರಕ್ಷಣಾ ವ್ಯವಸ್ಥೆಯು ಸಾವಿರಾರು ಕಿಲೋಮೀಟರ್‌ಗಳಲ್ಲಿ ಅಳವಡಿಸಲ್ಪಡುತ್ತಿದೆ. ಪರಿಣಾಮವಾಗಿ, ರೈಲು ಅಪಘಾತಗಳ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಭಾರತದ ನಗರಗಳ ಜನಸಂಖ್ಯೆ ವೇಗವಾಗಿ ಬೆಳೆಯುತ್ತಿದ್ದು, ಸಾರಿಗೆ ದಟ್ಟಣೆಯನ್ನು ನಿವಾರಿಸಲು ಮೆಟ್ರೋ ರೈಲು ಜಾಲವು ಅದ್ಭುತ ಪರಿಹಾರವಾಗಿ ಹೊರಹೊಮ್ಮಿದೆ.
2014ರಲ್ಲಿ ಕೇವಲ ಕೆಲವೇ ನಗರಗಳಿಗೆ ಸೀಮಿತವಾಗಿದ್ದ ಮೆಟ್ರೋ ಜಾಲವು ಇಂದು ದೇಶದ 26ಕ್ಕೂ ಹೆಚ್ಚು ಪ್ರಮುಖ ನಗರಗಳಿಗೆ ವಿಸ್ತರಿಸಿದೆ. ಒಟ್ಟು ಮೆಟ್ರೋ ಮಾರ್ಗದ ಉದ್ದವು 1155 ಕಿಲೋ ಮೀಟರ್‌ಗಳನ್ನು ದಾಟಿದೆ. ಕೋಲ್ಕತ್ತಾದಲ್ಲಿ ನಿರ್ಮಿಸಲಾದ ಭಾರತದ ಮೊದಲ ನೀರೊಳಗಿನ ಮೆಟ್ರೋ ಸುರಂಗವು ತಂತ್ರಜ್ಞಾನದ ನಿದರ್ಶನವಾಗಿದೆ.
ಮೇಕ್ ಇನ್ ಇಂಡಿಯಾ ಯೋಜನೆಯಡಿ ಬೆಂಗಳೂರಿನ ‘ಬೆಮಲ್’ ಮೂಲಕ ಸಾವಿರಾರು ಮೆಟ್ರೋ ಕೋಚ್‌ಗಳನ್ನು ದೇಶದ ತಯಾರಿಸಲಾಗುತ್ತಿದ್ದು, ಇದು ಸ್ಥಳೀಯ ಉದ್ಯೋಗ ಮತ್ತು ಉತ್ಪಾದನೆಗೆ ಭಾರಿ ಉತ್ತೇಜನ ನೀಡಿದೆ. ಮೂಲಸೌಕರ್ಯ ಎಂದರೆ ಕೇವಲ ಕಾಂಕ್ರೀಟ್ ರಸ್ತೆಗಳು ಮತ್ತು ಕಟ್ಟಡಗಳಲ್ಲ. ಡಿಜಿಟಲ್ ಮೂಲಸೌಕರ್ಯವು ದೇಶದ ಆರ್ಥಿಕ ಸ್ವರೂಪವನ್ನೇ ಬದಲಿಸಿದೆ. ಮೋದಿಯವರು ಜ್ಯಾಮ್ ತ್ರಿಮೂರ್ತಿ ಪರಿಕಲ್ಪನೆಯನ್ನು ಪರಿಚಯಿಸಿದರು.
ಜನ್ ಧನ್- ಆಧಾರ್-ಮೊಬೈಲ್ ಜೋಡಣೆಯಿಂದ ಸರಕಾರಿ ಸೌಲಭ್ಯಗಳು ನೇರವಾಗಿ ಫಲಾನು ಭವಿಯ ಕೈಸೇರುವಂತಾಯಿತು. ಭಾರತದ ಯುಪಿಐ ಪಾವತಿ ವ್ಯವಸ್ಥೆಯು ಇಂದು ವಿಶ್ವದ ಅತಿ ದೊಡ್ಡ ರಿಯಲ್ ಟೈಮ್ ಪೇಮೆಂಟ್ ವ್ಯವಸ್ಥೆಯಾಗಿ ಜನಪ್ರಿಯವಾಗಿದೆ. ಬೀದಿ ಬದಿಯ ಕಾಯಿಪ ಮಾರಾಟಗಾರರಿಂದ ಹಿಡಿದು ದೊಡ್ಡ ವ್ಯಾಪಾರಿಗಳವರೆಗೆ ಎಲ್ಲರೂ ಡಿಜಿಟಲ್ ವಹಿವಾಟು ನಡೆಸುತ್ತಿದ್ದಾರೆ.
ಸಿಂಗಾಪುರ, ಯುಎಇ, ಫ್ರಾನ್ಸ್ ಸೇರಿದಂತೆ ಹಲವು ದೇಶಗಳಲ್ಲಿ ಯುಪಿಐ ವಿಸ್ತರಣೆಯಾಗಿರುವುದು ಭಾರತದ ತಾಂತ್ರಿಕ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಭಾರತವನ್ನು ಜಾಗತಿಕ ಉತ್ಪಾದನಾ ಹಬ್ ಮಾಡಲು ಪಿಎಲ್ಐ ಯೋಜನೆಗಳು ನೆರವಾಗಿದ್ದು, ಆಪಲ್ ಸೇರಿದಂತೆ ಜಾಗತಿಕ ದಿಗ್ಗಜ ಕಂಪನಿಗಳು ಭಾರತದ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ತಯಾರಿಸುತ್ತಿವೆ.
ಆರ್ಥಿಕ ಅಭಿವೃದ್ಧಿಯು ಕಟ್ಟಕಡೆಯ ವ್ಯಕ್ತಿಗೆ ತಲುಪಬೇಕು ಎನ್ನುವ ದೃಷ್ಟಿಯಿಂದ ಸಾಮಾಜಿಕ ಮೂಲಸೌಕರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯ ಮೂಲಕ ಕೋಟ್ಯಂತರ ಬಡ ಕುಟುಂಬಗಳಿಗೆ ಸ್ವಂತ ಸೂರು ಕಲ್ಪಿಸಲಾಗಿದೆ. ಉಜ್ವಲ ಯೋಜನೆ ಮತ್ತು ಜಲ ಜೀವನ್ ಮಿಶನ್ ಮೂಲಕ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಹಾಗೂ ಅಡುಗೆ ಅನಿಲ ತಲುಪಿಸುವ ಮೂಲಕ ಗ್ರಾಮೀಣ ಮಹಿಳೆಯರ ಜೀವನಮಟ್ಟವನ್ನು ಸುಧಾರಿಸಲಾಗಿದೆ. ಭಾರತವು 2047ಕ್ಕೆ ಅಭಿವೃದ್ಧಿ ಹೊಂದಿದ ದೇಶವಾಗಬೇಕು ಎಂಬ ಮಹತ್ತ್ವಾಕಾಂಕ್ಷೆಯ ಕನಸನ್ನು ಪ್ರಧಾನಿ ಮೋದಿಯವರು ಬಿತ್ತಿzರೆ. ಸುಮ್ಮನೆ ಹೇಳಿ ಬಿಡುವ ಜಾಯಮಾನವಂತೂ ಅವರದ್ದಲ್ಲ.
ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಆಡಳಿತದ 25 ವರ್ಷಗಳ ಮೈಲಿಗಲ್ಲನ್ನು ಸ್ಮರಿಸುತ್ತಾ, ಮುಂಬರುವ ದಿನಗಳಿಗಾಗಿ 5 ಮಹತ್ವಾಕಾಂಕ್ಷೆಯ ಗುರಿಗಳನ್ನು ಘೋಷಿಸಿದ್ದಾರೆ. ಅವುಗಳೆಂದರೆ- ಪ್ರಸ್ತುತ ವಿಶ್ವದ 6ನೇ ಅತಿ ದೊಡ್ಡ ಆರ್ಥಿಕತೆಯಾಗಿರುವ ಭಾರತವನ್ನು ವಿಶ್ವದ ಮೊದಲ ಮೂರು ಆರ್ಥಿಕತೆಗಳಲ್ಲಿ ಒಂದಾಗಿ ಅಭಿವೃದ್ಧಿಪಡಿಸುವುದು.
ಆತ್ಮನಿರ್ಭರ ಭಾರತ ಅಡಿಯಲ್ಲಿ ಆಮದುಗಳ ಮೇಲಿನ ಅವಲಂಬನೆಯನ್ನು ತಗ್ಗಿಸಿ, ದೇಶದ ಎಲ್ಲವನ್ನೂ ಉತ್ಪಾದಿಸುವುದು. ಭಾರತವನ್ನು ಕೇವಲ ಬಳಕೆದಾರರ ಮಾರುಕಟ್ಟೆಯನ್ನಾಗಿ ಮಾಡದೆ, ಜಾಗತಿಕ ಕೈಗಾರಿಕಾ ಕೇಂದ್ರವನ್ನಾಗಿ ರೂಪಿಸುವುದು. ಭವಿಷ್ಯದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಭಾರತದಲ್ಲಿ ಯಶಸ್ವಿಯಾಗಿ ಆಯೋಜಿಸುವುದು. ಹಾಗೂ ಭಾರತೀಯ ಗಗನಯಾನಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸುವುದು. ಈ ಎಲ್ಲಾ ಗುರಿಗಳನ್ನು ಸಾಧಿಸಲು ದೇಶದ ಯುವಜನತೆಯಲ್ಲಿ ವಿಶ್ವಾಸ ತುಂಬುತ್ತಾ, ನಾವು ಇದನ್ನು ಸಾಧಿಸಬಲ್ಲೆವು (We will do it) ಎನ್ನುವ ಹೊಸ ಘೋಷಣೆಯನ್ನು ಪ್ರಧಾನಿ ಮೋದಿ ಮಾಡಿದ್ದಾರೆ.
ಎಷ್ಟು ಸೊಗಸಾಗಿದೆಯಲ್ಲವೇ. ಒಂದು ಕ್ಷಣ ರಾಜಕೀಯ ಹೊರತಾಗಿ ಯೋಚಿಸಿ. ಕಳೆದ 25 ವರ್ಷಗಳ ನರೇಂದ್ರ ಮೋದಿಯವರ ನಾಯಕತ್ವದ ಪ್ರಯಾಣವು ಭಾರತದ ಕೋಟ್ಯಂತರ ಜನರ ಆಶೋತ್ತರಗಳಿಗೆ ಜೀವ ತುಂಬಿದ ಕಾಲಘಟ್ಟವಾಗಿದೆ. ಸವಾಲುಗಳು ಏನೇ ಇರಲಿ, ದೂರದೃಷ್ಟಿಯ ಯೋಜನೆಗಳ ಮೂಲಕ ಭಾರತವು ಮುನ್ನಡೆಯುತ್ತಿದೆ. ತಿಂಗಳಿಗೆ ಎರಡು ಲಕ್ಷ ಕೋಟಿಗೂ ಹೆಚ್ಚು ಜಿಎಸ್‌ಟಿ ಸಂಗ್ರಹವಾಗುತ್ತಿರುವುದೇ ಆರ್ಥಿಕತೆ ಚುರುಕಾಗಿರುವುದಕ್ಕೆ ಸಾಕ್ಷಿಯಾಗಿದೆ.
ಇಂದಿನ ಮೂಲಸೌಕರ್ಯ ಕ್ರಾಂತಿಯು ನಾಳಿನ ‘ವಿಕಸಿತ ಭಾರತ 2047’ ಕನಸಿಗೆ ಬಲವಾದ ಬುನಾದಿಯಾಗಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.