ಅಲೆಮಾರಿಯ ಡೈರಿ
ಸಂತೋಷಕುಮಾರ ಮೆಹೆಂದಳೆ
mehandale100@gmail.com
ಪ್ರತಿ ಹುಣ್ಣಿಮೆಯ ರಾತ್ರಿ ಅವಳಿ ಬೆಟ್ಟಗಳ ಅಡಿಯಲ್ಲಿ ಬೋಟಿಂಗ್‌ನಲ್ಲಿ ಪಯಣಿಸುವ ಅನುಭವ ಅನನ್ಯ. ಕಾರಣ ಸ್ಪಷ್ಟ ಬೆಳದಿಂಗಳ ರಾತ್ರಿಗೆ ಲಕಲಕನೆ ಹೊಳೆಯುವ ಸ್ಫಟಿಕದ ಬೆಟ್ಟಗಳ ಅಡಿಯಲ್ಲಿ ತಣ್ಣಗಿನ ನೀರ ಮೇಲಿನ ಪಯಣ ಅಪರೂಪದ ಅನುಭವ.
ಹತ್ತು ಹಲವು ಮಾತಿಯುಳ್ಳ ಪ್ರವಾಸ ಮಾಡುತ್ತಲೇ ಇರುತ್ತೇವೆ. ಆದರೆ ಅದೇ ಸ್ಥಳದಲ್ಲಿ ಕೆಲವೊಮ್ಮೆ ಆಫ್ ಬೀಟ್ ಸ್ಥಳಗಳು ಉಳಿದು ಹೋಗುತ್ತವಲ್ಲ. ಆಗ ನಿಜವಾದ ಅಲೆಮಾರಿಗೆ ಬೆಂಕಿ ಬೀಳುತ್ತದೆ. ಮೈ- ಮನಸ್ಸು ಚಡಪಡಿಸಿ ಬಿಡುತ್ತದೆ. ಕಾರಣ ಪ್ರವಾಸ ಎನ್ನುವುದು ಕೇವಲ ಓಡಾಟವಾಗಿರುವುದೇ ಇಲ್ಲ. ಏನಿದ್ದರೂ ಅಲ್ಲೊಂದು ಬದುಕು, ಜೀವನ ಮತ್ತು ಮನದಲ್ಲೊಂದು ಪುಳಕವಾಗುಳಿಯಬಲ್ಲ ಅನುಭೂತಿ.
ಹಾಗಿದ್ದಾಗಲೇ ಅಲೆಮಾರಿಯೊಬ್ಬ ಭಾರತದ ಸರಹದ್ದಿಗೋ, ಮಧ್ಯ ಭಾರತದಲ್ಲೋ, ಧಾರ್ಮಿಕ ಕ್ಷೇತ್ರಗಳಿಗೆ ಹೋದಾಗ್ಯೂ ಅಲ್ಲೊಂದು ಕತೆಯನ್ನೋ ಐತಿಹ್ಯ ವನ್ನೊ ಹುಡುಕುವುದರ ಜತೆಗೆ ಬದುಕು ಭಿನ್ನ ಮತ್ತು ವೈವಿಧ್ಯ ವನ್ನೂ ಅನುಭಸಲು ಹಾತೊರೆಯುತ್ತಾನೆ. ತೀರ ಬೆಳ್ಳಂಬೆಳಗ್ಗೆ ಹೋದಲ್ಲೆಲ್ಲ ಸ್ಥಳೀಯ ರಸ್ತೆ ಪಕ್ಕದ ಟೀ, ಅದರಾಚೆಗೆ ಮಾರುವ ಜಿಲೇಬಿ, ಕಚೋರಿ, ಇಲ್ಲ ಮಸಾಲೆ ವಾಸನೆ ಸೂಸುವ ಡಿಪ್ ವಡೆ ಸಾಂಬಾರು, ಬನ್ಸ್ ಇತ್ಯಾದಿ ಆದರೂ ಸರಿನೆ, ಅವೆಲ್ಲ ಇಲ್ಲದಿದ್ದರೂ ಆಗಲೇ ಬದುಕಿನ ಬಂಡಿಯ ಭಾರ ಹೊರಲು ಹೊರಡುವ ಜನಗಳ ಸಂತೆಯೂ ಅಲೆಮಾರಿಗೆ ಒಂದು ಕುತೂಹಲಕ್ಕೂ, ಕತೆಗಳ ಹುಟ್ಟಿಗೂ ಕಾರಣ ವಾಗಬಲ್ಲದೇ ವಿನಃ ಸರಿಯಾಗಿ ಕೌಂಟರ್ ತೆಗೆಯುವ ಹೊತ್ತಿಗೆ ಹೋಗಿ ಅಲ್ಲಿನ ಟಿಕೇಟು ಕೊಟ್ಟು ಪುರಾತತ್ವ ಇಲಾಖೆಯೋ, ಪ್ರವಾಸೋದ್ಯಮ ಇಲಾಖೆಯೋ ಇಲ್ಲೆಲ್ಲ ನೋಡಿ ಎಂದು ತೋರಿಸುತ್ತಿರುವುದನ್ನು ನೋಡಿ ಬರುವವನು ಪ್ರವಾಸಿಯೇ ಆಗುವುದಿಲ್ಲ.
ಅದೊಂದು ಯೋಜನ ಬದ್ಧ ತಿರುಗಾಟ ಮತ್ತು ಒಂದಷ್ಟು ಸೆಲೀಗೂ ಪೋಸಿಗೂ ಒಗ್ಗುವ ಫೋಟೊಗಳ ಹುಟ್ಟಿಗೆ ಕಾರಣವಾಗುತ್ತದೆ ಅಷ್ಟೇ. ಹೊರತಾಗಿ ಹೇಳಲು ಹೇಳಿಕೊಳ್ಳಲು ಅಲ್ಯಾವ ಕಥೆಯೂ ಹುಟ್ಟಿರುವುದೇ ಇಲ್ಲ. ಹಾಗಾಗೇ ನನ್ನ ತಿರುಗಾಟದ ಆಚೆಗೂ ಉಳಿಯುವ ಅಪರಾತ್ರಿಯ ಹೊತ್ತಿನಲ್ಲೂ ನಾನು ಹೆಚ್ಚಾಗಿ ಮತ್ತಿಷ್ಟು ಆಫ್ ಬೀಟ್ ಸಿಟ್‌ಗಳ ಪಟ್ಟಿ ಇಟ್ಟುಕೊಂಡೇ ಇರುತ್ತೇನೆ. ಅದರಲ್ಲಿ ರಾತ್ರಿಯ ರೈಲ್ವೆ ಬದುಕನ್ನು ನೋಡುವುದೇ ಇರಬಹುದು ಅಥವಾ ಇಂದೋರಿನ ಫುಸ್ಟ್ರೀಟ್‌ನಿಂದ ಹಿಡಿದು ರಾತ್ರಿ ಮಾತ್ರ ರಸ್ತೆಗೆ ಬರುವ ಆಮ್ಲೆಟ್ ಮಸಾಲೆ ದೋಸೆಗಳ ಅಂಗಡಿಯೇ ಇರಬಹುದು. ಅಲ್ಲೆಲ್ಲ ಹೋದಾಗ ಅವನ್ನೆಲ್ಲ ಬಿಸಿ ಬಿಸಿ ಬಾಯಿ ಸುಡುವಾಗಲೇ ತಿನ್ನದಿದ್ದರೆ, ಆ ರುಚಿ ಅದರ ಲೋಕಲ್ ಘಮ ಇವನ್ನೆಲ್ಲ ಎಟುಕಿಸಿಕೊಳ್ಳದಿದ್ದರೆ ಅದೆಂಥಾ ಮಜಾ.
ವಾರಾಣಸಿಯ ಗಲ್ಲಿಗಳಲ್ಲಿಯೂ ಹೀಗೆಯೇ ಬೆಳಗಿನ ಜಾವವೇ ತೆರೆಯುವ, ಬಿಸಿಲೇರಿದ ಮೇಲೆ ತೆರೆಯುವ ಮತ್ತು ಸಂಜೆಯಾಗುವ ಮೊದಲೇ ಮುಚ್ಚುವ, ಹಾಗೇ ರಾತ್ರಿ ಎಂಟರ ನಂತರ ರಸ್ತೆಗಿಳಿಯುವ ತಿನಿಸುಗಳ ಹಲವು ವೈರಟಿ ಅಂಗಡಿಗಳ ಲೆಕ್ಕಾಚಾರವೇ ಬೇರೆ. ಪ್ರತೀ ಸಮಯವೂ ಭಿನ್ನ. ಯಾವುದನ್ನು ಬಿಟ್ಟು ಹೊರಟರೂ ಒಂದಲ್ಲ ಒಂದು ಕಳೆದುಕೊಳ್ಳುತ್ತೀರಿ. ನಮ್ಮ ಬೆಂಗಳೂರಿನ ಸನಿಹವೇ ನೋಡಿ ಬೆಳಗ್ಗಿನ ನಾಲ್ಕು ನಾಲ್ಕೂವರೆಯಿಂದಲೇ ಅದ್ಯಾವುದೋ ದಮ್
ಬಿರಿಯಾನಿಗೆ ಲೈನು ನಿಲ್ಲುವ ತಿನಿಸಿನ ಆಸಕ್ತರು ಎಷ್ಟಿಲ್ಲ..? ಅಲ್ಲಲ್ಲೆ ಪೋಸನ್ನು ತಂದು ಜಾಲತಾಣದಲ್ಲೂ ಹರಿಬಿಡುವವರೂ ಲೆಕ್ಕದ ಹೊರಗೆ. ಆದರೆ ಸೂರ್ಯ ದೇವನ ಮಕ್ಕಳಿಗೆ ಆ ಭಾಗ್ಯವಿಲ್ಲ ಅಷ್ಟೆ.
ಇಂಥದ್ದೆ ಒಂದು ತಿರುಗಾಟದಲ್ಲಿ ತೀರ ಬೆಳ್‌ಬೆಳಗ್ಗೆ ನರ್ಮದೆಯ ಮಡಿಲಲ್ಲಿ ಚಿಕ್ಕ ಚಿಕ್ಕ ದೋಣಿಗಳಲ್ಲಿ ನೀರಿಗಿಳಿದರೆ ಎರಡೂ ಕಡೆಯಲ್ಲಿ ಬಂಗಾರದ ಶಿಲಾ ಪಾತಳಿ ಗಳನ್ನು ಜೋಡಿಸಿದ ದೃಶ್ಯ ವೈಭವ ಕಾಣಬಹುದು. ಸರಿಯಾಗಿ ಬಿಸಿಲು ಮೇಲೇರಿ ನಿಂತಾಗ, ಅದೇ ನದಿಯಲ್ಲಿ ಕಾಲಾಡಿಸಿದರೆ ಎರಡೂ ಕಡೆಯಲ್ಲಿ ಹಾಲ್ನೊರೆ ಯಂತಹ ಅಚ್ಚ ಹಂಸ ಬಿಳುಪು ಶಿಲಾ ಗೋಡೆಗಳ ದೃಶ್ಯ ವರಿಸಲಸಾಧ್ಯ. ಅದು ನರ್ಮದೆಯ ಮಡಿಲಲ್ಲಿರುವ ಬೇಡಾ ಘಾಟ್‌ನ ಮಾರ್ಬಲ್ ರಾಕ್ಸ್ ಪ್ರದೇಶ. ಇದನ್ನು ಸಾಮಾನ್ಯ ಪ್ರವಾಸಿಗರು ದರ್ಶಿಸುವುದು ಇದ್ದೇ ಇದೆ. ಇಲ್ಲಿಯೇ ಹಿಂದಿ ಚಿತ್ರ ಅಶೋಕ ಚಿತ್ರೀಕರಣ ಆದ ಮೇಲೆ ಇನ್ನಿಲ್ಲದ ಪ್ರಸಿದ್ಧಿಗೆ ಬಂತು ಕೂಡ.
ಮಧ್ಯಪ್ರದೇಶದ ಮಡಿಲಲ್ಲಿರುವ ನರ್ಮದೆಯ ತೀರದಲ್ಲಿರುವ ಬೇಡಾಘಾಟ್ ಜಾಗತಿಕವಾಗಿ ಮಾರ್ಬಲ್‌ರಾಕ್ಸ್ ಎಂದೇ ಪ್ರಸಿದ್ಧಿ. ಸಧ್ಯಕ್ಕೆ ದಕ್ಷಿಣ ಆಫ್ರಿಕೆಯ ‘ವೈಜೂ’ ಪ್ರಾಂತ್ಯವನ್ನು ಹೊರತುಪಡಿಸಿದರೆ ಮಧ್ಯಪ್ರದೇಶದ ಮಾರ್ಬಲ್ ರಾಕ್ಸ್ ಮಾತ್ರವೇ ಹೀಗೆ ಪ್ರಾಕೃತಿಕವಾಗಿ ಕಾಣಸಿಗುತ್ತಿರುವ ಸ್ಫಟಿಕದ ಕಲ್ಲಿನ ಹಲಿಗೆಗಳ ವೈಚಿತ್ರ. ಹಲವು ಚಿತ್ರೀಕರಣಕ್ಕೂ ಆಕರ್ಷಣೆಯ ತಾಣವಾಗಿರುವ ಮಾರ್ಬಲ್ ರಾಕ್ಸ್ ಸದ್ಯ ಭಾರತದಲ್ಲಿ ಲಭ್ಯವಿರುವ ಏಕೈಕ ಮಾರ್ಬಲ್ಸ್ ಬೆಟ್ಟ. ಎರಡೂ ಕಡೆಯಲ್ಲಿ ಮಾರ್ಬಲ್ಸ್ ಪಾತಳಿಯನ್ನು ಕೊರೆದು ಮಧ್ಯ ಹಾಯ್ದುಬರುವ ನರ್ಮದಾ ನದಿ ವರ್ಷದುದ್ದಕ್ಕೂ ಹರಿಯುವ ಜಲಧಾರೆ.
ಅಚ್ಚ ಬಿಳುಪಿನ ಕಠಿಣ ಶಿಲೆಯ ಮಾರ್ಬಲ್ಸ್ ಬಂಡೆಗಳು ಅಪರೂಪದ ಪ್ರಾಕೃತಿಕ ರಹಸ್ಯ. ಸಾಮಾನ್ಯವಾಗಿ ‘ಮಖರಾನ’ ಎಂದು ಕರೆಸಿಕೊಳ್ಳುವ ಅಚ್ಚ ಬಿಳುಪಿನ ಮಾರ್ಬಲ್ಸ್‌ಗಳು ಇತಿಹಾಸದಲ್ಲಿ ಖ್ಯಾತಿಗೆ ಬಂದಿದ್ದು ಶಹಜಾನ್ ಆಗ್ರಾದಲ್ಲಿ ಶಿವಮಂದಿರವನ್ನು ಕೆಡು ಅದರ ಮೇಲೆ ತಾಜ್‌ಮಹಲ್ ಅನ್ನು ನಿರ್ಮಿಸಿದ ಮೇಲೆ. ಅಲ್ಲಿ
ಬಳಸಲಾಗಿರುವ ಸಂಪೂರ್ಣ ಶಿಲೆಗಳನ್ನು ರಾಜಸ್ಥಾನದ ‘ಮಖರಾನಾ’ ಎಂಬಲ್ಲಿಂದ ಗಣಿಗಾರಿಕೆ ನಡೆಸಿ ಪೂರೈಸಲಾಗಿತ್ತು. ಭೂಮಿಯ ನೂರು ಅಡಿಗೂ ಆಳದಲ್ಲಿ ಪದರು ಪದರಾಗಿ ನೂರು ನೂರು ಅಡಿಯ ಅಖಂಡ ಶಿಲಾ ಪದರಗಳಾಗಿ ರಚನೆಗೊಂಡಿರುವ ಈ ಮಾರ್ಬಲ್ಸ್ ಬಂಡೆಗಳ ಸಮೂಹ ಸದ್ಯ ಬೇಡಾಘಾಟ್ ನಲ್ಲಿ ಬಾಹ್ಯವಾಗಿ ಲಭ್ಯವಿರುವುದು ಸೋಜಿಗ.
ಮೂಲತಃ ಸುಣ್ಣದ ಕಲ್ಲು ಮತ್ತು ಮರಳಿನ ಸಂಯೋಜನೆಯಿಂದಾಗಿ ಬಿಗಿಯಾದ ಬಂಧವಾಗಿ ಮಾರ್ಪಡುವ ಶಿಲಾಬಂಧದ ರಸಾಯನ ಶಕ್ತಿಯ ಕ್ಷಮತೆ ಗರಿಷ್ಠ ಮಟ್ಟದ್ದು. ಹಾಗಾಗೇ ಹಗಲ ಬಿರುಬಿಸಿಲಿನಲ್ಲೂ ಈ ಶಿಲೆಗಳು ಮುಟ್ಟಿದರೆ ತಣ್ಣಗೆ ಕೊರೆಯುತ್ತಿರುತ್ತವೆ. ಇದೇ ಅನುಭವ ಸದ್ಯ ದೆಹಲಿಯ ಹೊರ ವಲಯದಲ್ಲಿರುವ ಮೂಲ ಅಕ್ಷರಧಾಮ್‌ನ ಹೊರಂಗಾಣ ವಿನ್ಯಾಸದಲ್ಲಿ ಬಳಸಿರುವ ಶಿಲೆಯಲ್ಲೂ ಕಾಣಬಹುದಾಗಿದೆ. ಮಧ್ಯ ಪ್ರದೇಶದಲ್ಲಿರುವ ಬೇಡಾಘಾಟ್ ಜಿಲ್ಲಾ ಕೇಂದ್ರ ವಾದ ಜಬಲ್ಪುರದಿಂದ ೨೮ಕಿ.ಮೀ. ದೂರದಲ್ಲಿದೆ.
ಬ್ರಿಟಿಷ್ ಕ್ಯಾಪ್ಟನ್ ಜೆ.ಫಾರೆಸ್ಟಿ ದಾಖಲಿಸುವಂತೆ ಬೇಡಾಘಾಟ್ ‘ಮಧ್ಯ ಭಾರತದಲ್ಲಿರುವ ಅದ್ಭುತ’ ೧೮೧೨ರ ಸುಮಾರಿಗೆ ಮೊದಲ ಬಾರಿಗೆ ಹೊರಜಗತ್ತಿಗೆ ಈ ಸೋಜಿಗ ಪರಿಚಯಿಸುವ ಪ್ರಯತ್ನ ನಡೆದಿದ್ದು ಗೋಚರಿಸುತ್ತದಾದರೂ ಕಾಲಕಾಲಕ್ಕೆ ಬೇಡಾಘಾಟ್ ನೈಸರ್ಗಿಕ ದಾಳಿಗೂ ಮತ್ತು ಮಾನವರ ದೌರ್ಜನ್ಯಕ್ಕೂ ಈಡಾದದ್ದೇ ಹೆಚ್ಚು. ಸರಿ ಸುಮಾರು ಹನ್ನೆರಡು ಕಿ.ಮೀ. ಹೆಚ್ಚಿನ ವ್ಯಾಪ್ತಿಯಲ್ಲಿ ಪಸರಿಸಿದ್ದ ನೂರು ಮೀ. ಗೂ ಹೆಚ್ಚಿನ ಎತ್ತರದ ಅಗಾಧ ವ್ಯಾಪ್ತಿಯನ್ನು ಹೊಂದಿದ್ದ
ಮಾರ್ಬಲ್ಸ್ ರಾಕ್ ಇವತ್ತು ಕೆಲವೇ ಕೆಲವು ಮೀ. ಆಸುಪಾಸಿನಲ್ಲಿದೆ. ಎತ್ತರ ಸುಮಾರಾಗಿ ಎಂಬತ್ತು ಮೀ. ಹತ್ತಿರದಲ್ಲಿದ್ದರೆ, ನದಿಯ ಇಕ್ಕೆಲಗಳಲ್ಲಿ ಆಳ ಕಣಿವೆಯ ಪ್ರದೇಶವಾಗಿದ್ದರಿಂದ ಮಾತ್ರ ಉಳಿದಿರುವ ಸಾಧ್ಯತೆ ನಿಚ್ಚಳವಾಗಿ ಕಾಣುತ್ತದೆ.
ಸಾಮಾನ್ಯವಾಗಿ ಒಂದು ತುದಿಯಿಂದ ಇನ್ನೊಂದು ತುದಿಯತ್ತ ಸಾಗಿ ಹೋಗುವ ಗಂಟೆಗಳ ಕಾಲದ ಯಾನ ಕೊನೆಯಾಗುವುದು ‘ಬಂದರ್ ಕೋಡ್ನಿ’ ಎಂದರೆ ಮಂಗಗಳು ಹಾರುವ ಕಣಿವೆ ಎನ್ನುವ ತುದಿಯತ್ತ. ಈ ತುದಿಯಲ್ಲಿ ಎರಡೂ ಕಡೆಯಿಂದ ಆವರಿಸಿಕೊಂಡಿರುವ ಮಾರ್ಬಲ್ಸ್‌ರಾಕ್ ನ ಒಂದು ತುದಿಯಿಂದ ಇನ್ನೊಂದೆಡೆಗೆ ಮಂಗಗಳು ಹಾರಿಕೊಂಡು ದಾಟುವಷ್ಟು ಹತ್ತಿರವಾಗಿವೆ. ಹಾಗಾಗಿ ‘ಬಂದರ್ ಕೋಡ್ನಿ’ಯ ಈ ತುದಿಯವರೆಗೆ ಹರಿದು ಬರುವ ನಾವೆ ಅಲ್ಲಿಂದ ಬೆಟ್ಟದ ಇನ್ನೊಂದು ಬುಡದವರೆಗೆ ಚಲಿಸುತ್ತದೆ.
ನಾಗರಿಕತೆ ಬೆಳೆದಿರುವ ಲಕ್ಷಣವಾಗಿ ಸಾಕಷ್ಟು ಅಲ್ಲಲ್ಲಿ ಸಕಲ ತಾಜ್ಯಗಳೂ ಕಂಡು ಬರುತ್ತವೆಯಾದರೂ ಪ್ರತಿ ಹುಣ್ಣಿಮೆಯ ರಾತ್ರಿ ಅವಳಿ ಬೆಟ್ಟಗಳ ಅಡಿಯಲ್ಲಿ ಬೋಟಿಂಗ್‌ನಲ್ಲಿ ಪಯಣಿಸುವ ಅನುಭವ ಅನನ್ಯ. ಕಾರಣ ಸ್ಪಷ್ಟ ಬೆಳದಿಂಗಳ ರಾತ್ರಿಗೆ ಲಕಲಕನೆ ಹೊಳೆಯುವ ಸಟಿಕದ ಬೆಟ್ಟಗಳ ಅಡಿಯಲ್ಲಿ ತಣ್ಣಗಿನ ನೀರ ಮೇಲಿನ ಪಯಣ ಅಪರೂಪದ ಅನುಭವ. ಸಾಮಾನ್ಯವಾಗಿ ಹುಣ್ಣಿಮೆಯ ರಾತ್ರಿಗೆ ಜಮಾಯಿಸುವ ಪ್ರವಾಸಿಗರ ಗುಂಪಿನಿಂದಾಗಿ ಕೊಂಚ ಬೆಲೆಯೂ ದುಬಾರಿ.
ಆದರೆ ಈ ಬಗ್ಗೆ ಅಽಕೃತ ಪಯಣ ಮತ್ತು ನಾವೆ ಎರಡೂ ಲಭ್ಯವಿಲ್ಲ. ಏನಿದ್ದರೂ ಸ್ಥಳೀಯ ಪ್ರವಾಸಿ ಕೇಂದ್ರಗಳ ಹಿಡಿತದಲ್ಲಿ ಈ ರಾತ್ರಿ ಪಯಣ ನಡೆಯುತ್ತಿದ್ದು, ಮೊದಲೇ ಆಯ್ದ ತಂಡಗಳನ್ನು ಆಯಾ ಆಯೋಜಕರು ನದಿ ತೀರಕ್ಕೆ ರಾತ್ರಿ ಹನ್ನೊಂದರ ಮೇಲೆ ಕರೆ ತಂದು ಮಧ್ಯ ರಾತ್ರಿ ರೌಂಡು ಹೊಡೆಸುವ ನಿಶಬ್ದ ಸವಾರಿ ಆರಂಭಿಸುತ್ತಾರೆ.
ಈ ಸೌಲಭ್ಯ ಬೇಕೆಂದರೆ ಆಯೋಜಕರು, ಬೆಡಾಘಾಟ್ ನೊಂದಿಗೆ ಹೊಂದಿಕೊಂಡಿರುವ ಇನ್ನಿತರ ಎರಡು ಸ್ಥಳಗಳಾದ ದುಂಧರ್ ಫಾಲ್ಸ್ ಮತ್ತು ಯೋಗಿನಿ ದೇವಸ್ಥಾನ ಸೇರಿಸಿ ನಿಮ್ಮ ವ್ಯವಹಾರ ಕುದುರಿಸುವುದರಿಂದ, ಈ ವ್ಯಾಪ್ತಿಯೊಳಗೆ ಬರುವ ಪ್ಯಾಕೇಜ್ ಪ್ರವಾಸಿಗರಿಗೆ ಮಾತ್ರ ಹೆಚ್ಚುವರಿ ಹಣ ಇತ್ಯಾದಿ ವ್ಯವಹಾರದ ನಂತರ ಈ ಅಪರಾತ್ರಿಯ ಅಲೆಗಳ ಮೇಲಿನ ಪಯಣ ಸಾಧ್ಯವಾಗುತ್ತದೆ. ಹೆಚ್ಚಾಗಿ ಎಲ್ಲ ವಾಹನಗಳು ಜಬಲ್ಪುರದಿಂದ ಬೇಡಾಘಾಟ್ ಹಳ್ಳಿಯ ವರೆಗೂ ಸಂಚರಿಸುತ್ತವೆ. ಮಧ್ಯ ಪ್ರದೇಶದ ಜಬಲ್ಪುರ, ಸುತ್ತಲಿನ ಎಲ್ಲ ರಾಜ್ಯಗಳೊಂದಿಗೆ ಮತ್ತು ನಗರದೊಂದಿಗೆ ಉತ್ತಮ ಸಾರಿಗೆ ಸೌಕರ್ಯವನ್ನು ಹೊಂದಿದ್ದು, ರೈಲು ಸಾರಿಗೆ ಸೇರಿದಂತೆ ರಾಜ್ಯದ ಪ್ರಮುಖ ಹೆದ್ದಾರಿಗಳು ಜಬಲ್ಪುರಕ್ಕೆ ಉತ್ತಮ ಸಂಪರ್ಕ ಕಲ್ಪಿಸುತ್ತವೆ.
ಸಾಂಸ್ಕೃತಿಕವಾಗಿ ಮತ್ತು ಮಾರುಕಟ್ಟೆಯ ದೃಷ್ಟಿಯಿಂದ ಕೂಡಾ ಜಬಲ್ಪುರ ಸುಂದರ ಹಾಗು ಆಹ್ಲಾದವನ್ನುಂಟು ಮಾಡುವ ನಗರ. ಆದರೂ ಅಪರಾತ್ರಿಯಲ್ಲಿ ಬಂದರ ಕೋಡ್ನಿಯ ಬುಡಕ್ಕೊಮ್ಮೆ ಅಲೆಗಳ ಮೇಲೆ ಸಾಗಿ ಬರದಿದ್ದರೆ ಅಲೆಮಾರಿಯಾಗಿ ಯಾಕಾದರೂ ಸುತ್ತಬೇಕು ಅಲ್ಲವಾ..?