ಒಡಲಾಳ
ಸುರೇಂದ್ರ ಪೈ, ಭಟ್ಕಳ
ಕೆಲವು ದಿನಗಳ ಹಿಂದಷ್ಟೇ ಒಡಿಶಾದಲ್ಲಿ ಜಿತು ಮುಂಡಾ ಬ್ಯಾಂಕ್‌ನಿಂದ ಹಣ ಪಡೆಯಲು ಸತ್ತ ತನ್ನ ಸಹೋದರಿಯ ಶವವನ್ನು ಅಗೆದು ಹೆಗಲ ಮೇಲಿರಿಸಿಕೊಂಡು ಬ್ಯಾಂಕ್‌ನತ್ತ ಸಾಗಿದ ಘಟನೆ ನಮ್ಮ ವ್ಯವಸ್ಥೆಯ ಅಮಾನವೀಯ ಮುಖದ ಪರಿಚಯ ಮಾಡಿಸಿದ್ದು ಯಾರು ಮರೆತಿರಲಿಕ್ಕಿಲ್ಲ. ಈ ಘಟನೆ ಮರೆಯುವ ಮುನ್ನವೇ ಇದೀಗ ಮೇ.3ರಂದು ಎನ್‌ಟಿಎ ನಡೆಸಿದ್ದ ನೀಟ್ 2026ರ ವೈದ್ಯ ಕೀಯ ಪ್ರವೇಶ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಕಾರಣ ರದ್ದು ಮೂಲಕ 22 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ವ್ಯವಸ್ಥಿತವಾಗಿ ಮಣ್ಣು ಮಾಡಲಾಗಿದೆ.
ನಮ್ಮ ದೇಶದಲ್ಲಿ ವಿವಾದ ಹಾಗೂ ಹಗರಣಗಳು ಹೊಸತೇನಲ್ಲ. ಅದು ಮತದಾತನ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ವಿವಾದವಾಗಿರಲಿ, ಪ್ರಶ್ನೆಪತ್ರಿಕೆ ಸೋರಿಕೆಗರಣ ವಾಗಿರಲಿ, ಉಚಿತ ಗ್ಯಾರಂಟಿ ಹಾಗೂ ಭ್ರಷ್ಟಾಚಾರವಾಗಲಿ ಎಲ್ಲವೂ ಒಂದೆರಡು ದಿನ ಸುದ್ದಿಯಾಗಿ ಮಣ್ಣು ಸೇರುತ್ತದೆ.
ಹಾಗಂತ ಪ್ರಶ್ನಿಸಬೇಕಾದ ಸಮಯದಲ್ಲಿ ಪ್ರಶ್ನಿಸದೇ, ತಪ್ಪನ್ನು ವಿರೋಧಿಸಬೇಕಾದ ಸಮಯದಲ್ಲಿ ವಿರೋಧಿಸದೇ ಹೋದರೆ ನಾವು ನಮ್ಮ ಅಸ್ತಿತ್ವ ಕಳೆದುಕೊಳ್ಳಬೇಕಾಗುತ್ತದೆ. ಅದನ್ನೇ ಒಪ್ಪಿಕೊಂಡರೆ ಪ್ರಜಾಪ್ರಭುತ್ವ ವ್ಯವಸ್ಥೆ ಕೇವಲ ನಾಮಕಾವಸ್ತೆಯಾಗಿ ಸರ್ವಾಧಿಕಾರಿ ಧೋರಣೆಗೆ ಒಳಗಾಗಬೇಕಾಗಬಹುದು.
ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಭಾರತದಲ್ಲಿ ವೈದ್ಯಕೀಯ ಪ್ರವೇಶಕ್ಕಾಗಿ ನಡೆಯುವ ಅತ್ಯಂತ ಪ್ರಮುಖ ಪರೀಕ್ಷೆ. ಆದರೆ, ಕಳೆದ ಕೆಲವು ವರ್ಷಗಳಿಂದ ಈ ಪರೀಕ್ಷೆಯು ಪ್ರಶ್ನೆಪತ್ರಿಕೆ ಸೋರಿಕೆ, ನಕಲು, ಮೌಲ್ಯ ಮಾಪನದಲ್ಲಿನ ಲೋಪ ದೋಷ ಮತ್ತು ಸಾಲು ಸಾಲು ಹಗರಣ ಗಳಿಂದಾಗಿ ತೀವ್ರ ವಿವಾದಕ್ಕೊಳಗಾಗಿ ವಿಶ್ವಾಸಾರ್ಹತೆ ಕಳೆದುಕೊಂಡಿದೆ.
ಇದನ್ನೂ ಓದಿ: Surendra Pai Column: 100% ಫಲಿತಾಂಶ: ದಾಖಲಾತಿ ಹೆಚ್ಚಿಸುವುದೇ ?
2017ರಲ್ಲಿ ನೀಟ್ ಪರೀಕ್ಷೆ ಆರಂಭವಾದ ಹೊಸತರ ತಾಂತ್ರಿಕ ಮತ್ತು ಭದ್ರತಾ ಲೋಪಗಳು ಮುನ್ನೆಲೆಗೆ ಬಂದಿದ್ದವು. ಪ್ರಾದೇಶಿಕ ಭಾಷೆಗಳಲ್ಲಿ ನೀಡಲಾಗಿದ್ದ ಪ್ರಶ್ನೆಪತ್ರಿಕೆಗಳಲ್ಲಿ ಭಾಷಾಂತರದ ಭಾರಿ ದೋಷಗಳಿದ್ದವು. ಅದೇ ವರ್ಷ ಬಿಹಾರ ಮತ್ತು ರಾಜಸ್ಥಾನಗಳಲ್ಲಿ ಪರೀಕ್ಷಾ ಕೇಂದ್ರಗಳಿಂದ ಪ್ರಶ್ನೆಪತ್ರಿಕೆ ಮೊಬೈಲ್ ಮೂಲಕ ಹೊರಗೆ ಕಳುಹಿಸಿ, ಉತ್ತರಗಳನ್ನು ಪಡೆದುಕೊಳ್ಳುತ್ತಿದ್ದ ಕೆಲವು ಗ್ಯಾಂಗ್‌ಗಳನ್ನು ಪೊಲೀಸರು ಬಂಧಿಸಿದ್ದರು.
2019ರ ‘ಡಮ್ಮಿ ಅಭ್ಯರ್ಥಿಗಳ’ದಂಧೆಯ ಪ್ರಕರಣ ಬೆಳಕಿಗೆ ಬಂತು. ಅಸಲಿ ವಿದ್ಯಾರ್ಥಿಗಳ ಬದಲಿಗೆ ಹಣ ಪಡೆದು ಬೇರೆ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 2021-23ರ ಅವಧಿಯಲ್ಲಿ ನೀಟ್ ಪರೀಕ್ಷಾ ಅಕ್ರಮಗಳು ಕೇವಲ ಸ್ಥಳೀಯ ಮಟ್ಟದಲ್ಲಿ ಉಳಿಯದೆ, ವ್ಯವಸ್ಥಿತ ಜಾಲವಾಗಿ ರೂಪಾಂತರ ಗೊಂಡವು. ಇದಕ್ಕೆ 2021ರ ಜೈಪುರ ಮತ್ತು ವಾರಣಾಸಿ ಪ್ರಕರಣವೇ ಸಾಕ್ಷಿ.
ರಾಜಸ್ಥಾನದ ಜೈಪುರದ ಪರೀಕ್ಷಾ ಕೇಂದ್ರವೊಂದರಿಂದ ಪರೀಕ್ಷೆ ಆರಂಭವಾದ ಕೆಲವೇ ನಿಮಿಷ ಗಳಲ್ಲಿ ಪ್ರಶ್ನೆ ಪತ್ರಿಕೆಯ ಫೋಟೊ ವಾಟ್ಸಾಪ್ ಮೂಲಕ ಹೊರಗೆ ಕಳುಹಿಸಿ, ಉತ್ತರಗಳನ್ನು ಸಿದ್ಧಪಡಿಸಿ ಅಭ್ಯರ್ಥಿಗೆ ತಲುಪಿಸಲಾಗಿತ್ತು. ವಾರಣಾಸಿಯಲ್ಲೂ ಇಂತಹದೇ ಡಮ್ಮಿ ಅಭ್ಯರ್ಥಿ ದಂಧೆ ಪತ್ತೆಯಾಗಿತ್ತು. ಆಗ ಸಿಬಿಐ ದಾಳಿಯಲ್ಲಿ ಪರೀಕ್ಷಾ ಕೇಂದ್ರಗಳ ಸಿಬ್ಬಂದಿಯೊಂದಿಗೆ ಶಾಮೀಲಾಗಿ, ಅಭ್ಯರ್ಥಿಗಳ ಗುರುತಿನ ಚೀಟಿ ತಿದ್ದಿ, ಲೇಪನ ತಂತ್ರಜ್ಞಾನ ಬಳಸಿ ಬೇರೆಯವರನ್ನು ಪರೀಕ್ಷೆಗೆ ಕೂರಿಸುತ್ತಿದ್ದ ದೊಡ್ಡ ಜಾಲ ಸಿಬಿಐ ಪತ್ತೆ ಹಚ್ಚಿತು. ಒಬ್ಬೊಬ್ಬ ಅಭ್ಯರ್ಥಿಯಿಂದ 20ಲಕ್ಷ ದವರೆಗೆ ಹಣ ವಸೂಲಿ ಮಾಡಲಾಗಿತ್ತು.
2024ರ ನೀಟ್ ಪರೀಕ್ಷೆಯ ಮಹಾಹಗರಣವು ಭಾರತೀಯ ಶಿಕ್ಷಣ ರಂಗವನ್ನೇ ತಲ್ಲಣಗೊಳಿಸಿತು. ಈ ವರ್ಷದ ಅಕ್ರಮಗಳು ದೇಶದ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯ ಪಾರದರ್ಶಕತೆಯನ್ನೇ ಬುಡಮೇಲು ಮಾಡಿ ದೇಶಾದ್ಯಂತ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾದವು.
ಪಾಟ್ನಾದಲ್ಲಿ ಪರೀಕ್ಷೆಗೆ ಮುನ್ನ ದಿನವೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಭ್ಯರ್ಥಿಗಳಿಗೆ ಉತ್ತರ ಗಳನ್ನು ನೆನಪಿಟ್ಟುಕೊಳ್ಳಲು (Rote learning) ನೀಡಲಾಗಿತ್ತು ಎಂದು ಪೊಲೀಸರು ಸಾಕ್ಷ್ಯ ಸಮೇತ ಪತ್ತೆಹಚ್ಚಿದರು. ಗುಜರಾತ್‌ನ ಗೋದ್ರಾದಲ್ಲಿ ಪರೀಕ್ಷಾ ಕೇಂದ್ರದ ಶಿಕ್ಷಕರೇ ವಿದ್ಯಾರ್ಥಿಗಳಿಗೆ ಓಎಂಆರ್ ಶೀಟ್ ತುಂಬಲು ಸಹಾಯ ಮಾಡುತ್ತಿದ್ದ ದಂಧೆ ಬೆಳಕಿಗೆ ಬಂತು.
ಇದಕ್ಕಿಂತಲೂ ಹಾಸ್ಯಾಸ್ಪದ ವಿಚಾರವೆಂದರೆ ಫಲಿತಾಂಶ ಬಂದಾಗ ಬರೋಬ್ಬರಿ 67 ವಿದ್ಯಾರ್ಥಿಗಳು 720ಕ್ಕೆ 720 ಪೂರ್ಣ ಅಂಕ ಪಡೆದು ಮೊದಲ ರ‍್ಯಾಂಕ್ ಹಂಚಿಕೊಂಡರು. ಇದರಲ್ಲಿ ಒಂದೇ ಪರೀಕ್ಷಾ ಕೇಂದ್ರದ ಆರು ವಿದ್ಯಾರ್ಥಿಗಳಿದ್ದರು. ಅಷ್ಟೇ ಅಲ್ಲದೇ ಸಮಯ ನಷ್ಟದ ಕಾರಣಕ್ಕೆ 1563 ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲು ಹೋಗಿ ನೀಟ್ ಪರೀಕ್ಷೆಯಲ್ಲಿ ಅಸಾಧ್ಯವಾದ 718 ಮತ್ತು 719 ಅಂಕಗಳನ್ನು ನೀಡಲಾಯಿತು. ಆದರೆ, ಮರು ಪರೀಕ್ಷೆ ನಡೆಸಲಿಲ್ಲ. ಈಗ 2026ರಲ್ಲೂ ಮತ್ತೆ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ. ಈ ಬಾರಿ ಮರು ಪರೀಕ್ಷೆಗೆ ಮುಂದಾಗಿದೆ.
2017 ರಿಂದ ಪ್ರಸ್ತುತ 2026ರ ನೀಟ್ ಪರೀಕ್ಷೆ ಅಕ್ರಮದ ಸಂಪೂರ್ಣ ಚಿತ್ರಣ ಅವಲೋಕಿಸಿದ ಬಳಿಕ ಹಲವು ಪ್ರಶ್ನೆಗಳು ಕಾಡುತ್ತವೆ. ನೀಟ್ ಪರೀಕ್ಷೆ ನಡೆಸುವ ಜವಾಬ್ದಾರಿ ಹೊಂದಿದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಘೆSಅ) ಸ್ವಾಯತ್ತ ಸಂಸ್ಥೆಯಾಗಿದ್ದರೂ, ಸತತ ಅಕ್ರಮಗಳನ್ನು ತಡೆಯುವಲ್ಲಿ ತೋರಿದ ನಿರ್ಲಕ್ಷ್ಯವೇ ಅಕ್ರಮಕ್ಕೆ ದಾರಿ ಮಾಡಿಕೊಟ್ಟಿರುವುದು. ಅದಕ್ಕೂ ಮಿಗಿಲಾಗಿ ಈ ವಿಷಯದ ಕುರಿತಂತೆ ಕೇಂದ್ರ ಶಿಕ್ಷಣ ಸಚಿವರು ಹಾಗೂ ಕೇಂದ್ರ ಸರಕಾರದ ಮೌನ ನಿಜಕ್ಕೂ ಅಚ್ಚರಿ ತಂದಿದೆ.
ಕಳೆದ 10 ವರ್ಷಗಳ ಅವಧಿಯಲ್ಲಿ ಕೇಂದ್ರ ಸರಕಾರ ನಡೆಸಿದ ವಿವಿಧ ಪರೀಕ್ಷೆಯ ಪೈಕಿ 89 ಬಾರಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು 48 ಮರುಪರೀಕ್ಷೆಗಳು ನಡೆದಿವೆ. ಈ ಕುರಿತು ಶಿಕ್ಷಣ ಸಚಿವರಾಗಲಿ, ಕೇಂದ್ರ ಸರಕಾರವಾಗಲಿ ಆತಂಕದಲ್ಲಿರುವ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕೆಲಸವನ್ನಾಗಲಿ, ಪದೇಪದೆ ಪರೀಕ್ಷಾ ವ್ಯವಸ್ಥೆಯೇ ರಾಜಿಯಾಗುವುದನ್ನು ತಪ್ಪಿಸಲು ಯಶಸ್ಸು ಕಂಡಿಲ್ಲ.
ದೇಶದಲ್ಲಿ 22 ಲಕ್ಷ ವಿದ್ಯಾರ್ಥಿಗಳ ಪರಿಶ್ರಮಕ್ಕೆ ದ್ರೋಹವಾಗಿದೆ. ವಿದ್ಯಾರ್ಥಿಗಳ, ಪಾಲಕರ ಜತೆ ನಿಲ್ಲಬೇಕಿದೆ. ಕೇಂದ್ರದ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಿ, ಮಕ್ಕಳಿಗೆ ಧೈರ್ಯ ತುಂಬಿ ಎಂದು ಹೇಳಬಹುದಿತ್ತಲ್ಲ. ಮಾಧ್ಯಮದವರು ಪ್ರಶ್ನೆ ಕೇಳಲು ಮುಂದಾ ದಾಗ ಅಲಂಕಾರದ ಗೊಂಬೆಯಂತೆ ಕಾರಿನಲ್ಲಿ ಕುಳಿತು ಹೊರಟ ಕೇಂದ್ರ ಶಿಕ್ಷಣ ಸಚಿವರ ವರ್ತನೆ ಒಪ್ಪತಕ್ಕದ್ದಲ್ಲ.
ತಮ್ಮ ಖಾತೆ, ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗದ ಮೇಲೆ ನೈತಿಕ ಹೊಣೆ ಗಾರಿಕೆ ಹೊತ್ತು ರಾಜೀನಾಮೆ ನೀಡುವುದನ್ನು ಬಿಟ್ಟು, ಇದಕ್ಕೂ ತಮಗೂ ಸಂಬಂಧವಿಲ್ಲದಂತೆ ವರ್ತಿಸಿದ್ದನ್ನು ಇಂದಿನ ಪೀಳಿಗೆಯವರು ಗಮನಿಸಿದ್ದಾರೆ.
ಒಮ್ಮೆ ತಪ್ಪಾಗುವುದು, ಎಡವುದು ಸಹಜ. ಅದರಿಂದ ಪಾಠ ಕಲಿತು ವ್ಯವಸ್ಥೆ ಬಲಗೊಳಿಸುವತ್ತ ಕಾರ್ಯೋನ್ಮುಖರಾಗುವುದು ಸರಕಾರದ ಕೆಲಸ. ಆದರೆ, ಪ್ರಸುತ್ತ ಕೇಂದ್ರ ಸರಕಾರದ ಗಮನ ಚುನಾವಣಾ ರ‍್ಯಾಲಿ, ಚುನಾವಣಾ ರಣತಂತ್ರ, ಮತದಾತರನ್ನು ತಮ್ಮ ಮೋಡಿಯ ಮಾತಿನ ಮೂಲಕ ಸೆಳೆಯುವ ಕಾರ್ಯಕ್ಕೆ ಹೆಚ್ಚು ಆದ್ಯ ನೀಡುತ್ತಿದೆ.
ಪರೀಕ್ಷೆಯ ಗಾಂಭಿರ್ಯತೆ ಅರಿತ ಯಾರಾದರೂ ಸರಿಯೇ ಮಕ್ಕಳ ಶ್ರಮಕ್ಕೆ ಅನ್ಯಾಯವಾಗಕೂಡದು ಎಂದು ಮುನ್ನಚ್ಚರಿಕೆಯ ಕ್ರಮವಹಿಸುತ್ತಾರೆ. ನಮ್ಮಲ್ಲಿ ರಾಜಕೀಯಕ್ಕೆ ಸೇರಲು ವಿದ್ಯಾರ್ಹತೆಯ ಬೇಕಿಲ್ಲ. ಅದುವೇ ಒಬ್ಬ ಶಿಕ್ಷಕ, ವೈದ್ಯ, ವಕೀಲ, ಎಂಜಿನಿಯರ್ ಇತ್ಯಾದಿ ಕ್ಷೇತ್ರದಲ್ಲಿ ಕಾರ್ಯ ನಿರ್ವ ಹಿಸಲು ನಿಗದಿತ ವಿದ್ಯಾರ್ಹತೆಯ ಅಗತ್ಯವಿದೆ. ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಸಾಲ ಮಾಡಿದ ಪಾಲಕರು, ಭವಿಷ್ಯದ ಕನಸನ್ನು ನಿಜವನ್ನಾಗಿಸಲು ಹಗಲಿರುಳು ಪರಿಶ್ರಮ ವಹಿಸಿ ಓದಿದ ಮಕ್ಕ ಳಿಗೆ ತಮ್ಮ ವ್ಯವಸ್ಥೆ ವೈಫಲ್ಯದ ಕಾರಣ ಏಕಾಏಕಿಯಾಗಿ ಮರು ಪರೀಕ್ಷೆ ಮಾಡುತ್ತೇವೆ ಎಂದರೆ ಹೇಗಾಗಬೇಡ.
ಒಂದು ವೇಳೆ ನೀವು ಚುನಾವಣೆಯಲ್ಲಿ ಗೆದ್ದ ಕ್ಷೇತ್ರದಲ್ಲಿ ಚುನಾವಣಾ ಆಯೋಗದವರು ಮತಕಳವು ಆದ ಕಾರಣ ಮರು ಚುನಾವಣೆ ಮಾಡುತ್ತೇನೆ ಎಂದರೆ ಗೆದ್ದ ಪಕ್ಷದವರು ಒಪ್ಪುತ್ತಾರೆಯೇ?ಸ್ಪರ್ಧಾ ತ್ಮಕ, ನೇಮಕಾತಿ ಪರೀಕ್ಷೆಯಾಗಲಿ ಪರೀಕ್ಷಾ ಅಕ್ರಮ ಎಸಗಲು ಎರಡು ಹಂತಗಳಿವೆ.
ಮೊದಲನೇಯದು ಮೈಕ್ರೋ ಹಂತ. ಇಲ್ಲಿ ಪರೀಕ್ಷಾ ಕೇಂದ್ರದಲ್ಲಿ ನಡೆಯುವ ಅಕ್ರಮ ತಡೆಯಲು ಕಠಿಣ ಕ್ರಮಕೈಗೊಳ್ಳಲಾಗುತ್ತದೆ. ಮೆಟಲ್ ಡಿಟೆಕ್ಟರ್ʼಗಳ ಮೂಲಕ ವಿದ್ಯಾರ್ಥಿಗಳ ಉಡುಪು, ಪಾದರಕ್ಷೆ ತಪಾಸಣೆ ಮಾಡಲಾಗುತ್ತದೆ. ಕೆಲವು ಕಡೆ ಧಾರ್ಮಿಕ ಆಚರಣೆಯ ವಸ್ತು, ಪೆಂಡೆಂಟ್ ಮತ್ತು ಕಿವಿಯೋಲೆಗಳನ್ನೂ ಕಳಚಿಸಲಾಗುತ್ತದೆ.
ಪಾರದರ್ಶಕ ವಾಟರ್ ಬಾಟಲ್ ಬಳಕೆ, ಅರ್ಧ ತೋಳಿನ ಶರ್ಟ್, ಜೇಬುಗಳಿಲ್ಲದ ಪ್ಯಾಂಟ್ ಧರಿಸಬೇಕು, ಶೂ ಹಾಕುವಂತಿಲ್ಲ ಇತ್ಯಾದಿ ನಿಯಮವಿರುತ್ತದೆ. ಇನ್ನೂ ಪ್ರತಿ ಕೊಠಡಿಯಲ್ಲೂ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಕಣ್ಗಾವಲು ಇಡಲಾಗುತ್ತದೆ. ಇಲ್ಲಿ ವಿದ್ಯಾರ್ಥಿಯ ತಾನೊಬ್ಬನೇ ನೇರವಾಗಿ ಅಕ್ರಮ ಮಾರ್ಗದ ಮೂಲಕ ಪರೀಕ್ಷಾ ಅಕ್ರಮ ಎಸಗಲು ಸಾಧ್ಯವಿಲ್ಲ. ಈ ಕ್ರಮಗಳು ಪ್ರಾಮಾಣಿಕವಾಗಿ ಓದಿದ ವಿದ್ಯಾರ್ಥಿಗಳಲ್ಲಿ ಅತಿಯಾದ ಭಯ, ಮಾನಸಿಕ ಒತ್ತಡ ಮತ್ತು ಅಪಮಾನದ ಭಾವನೆ ಉಂಟುಮಾಡುತ್ತವೆ. ಹಾಗಂತ ಇದಕ್ಕೆಲ್ಲಾ ಹಿಂದಿನ ಬಾರಿ ಅಭ್ಯರ್ಥಿಗಳು ಪರೀಕ್ಷಾ ನಿಯಮ ಉಲ್ಲಂಘಿಸಿ ಅಕ್ರಮವೆಸಗಿದ್ದೇ ಕಾರಣ.
ಎರಡನೇಯದು ಮ್ಯಾಕ್ರೋ ಹಂತ. ಇಲ್ಲಿ ಅಸಲಿ ಅಪರಾಧಿಗಳಾದ ಅಧಿಕಾರಿಗಳು ಮತ್ತು ಮಾಫಿಯಾ ದಂಧೆಕೋರರು ಹಗರಣ ನಡೆಸುತ್ತಾರೆ. ಇಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಮೇಲೆ ಕೈಗೊಳ್ಳುವ ಮುನ್ನೆಚ್ಚರಿಕೆ ಕ್ರಮಗಳು ಕೇವಲ ‘ಕಣ್ಣೊರೆಸುವ ತಂತ್ರ.’ ವ್ಯವಸ್ಥೆಯು ತಾನು ತುಂಬಾ ಕಟ್ಟುನಿಟ್ಟಾಗಿದೆ ಎಂದು ತೋರಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಪೀಡಿಸುತ್ತದೆ. ಇದು ‘ಶಿಕ್ಷಣ ಮಾಫಿಯಾ’.
ಈ ಹಂತದಲ್ಲಿ ಪತ್ರಿಕೆ ಸೋರಿಕೆಯಾದ ತಕ್ಷಣವೇ ಪರೀಕ್ಷಾ ಪ್ರಾಧಿಕಾರ ಮತ್ತು ಶಿಕ್ಷಣ ಸಚಿವಾಲ ಯದ ಹಿರಿಯ ಅಧಿಕಾರಿಗಳು ಯಾವುದೇ ಲೀಕ್ ಆಗಿಲ್ಲ, ಪರೀಕ್ಷೆ ಪಾರದರ್ಶಕವಾಗಿದೆ ಎಂದು ಮಾಧ್ಯಮಗಳ ಮುಂದೆ ಸುಳ್ಳು ಹೇಳಿಕೆ ನೀಡಿ ಸಾಕ್ಷ್ಯ ಸಂಗ್ರಹಕ್ಕೆ ಕಾಲಾವಕಾಶ ಒದಗಿಸಿಕೊಡುತ್ತಾರೆ.
ಪ್ರಸುತ್ತ ನಡೆದಿದ್ದು ಇದುವೇ. ಮುಂದಿನ ಹಂತದಲ್ಲಿ ಯಾವುದೇ ತಟಸ್ಥ ತನಿಖೆಗೂ ಮುನ್ನವೇ ಇಲಾಖೆಯ ಒಳಗಿನ ಅಧಿಕಾರಿಗಳದ್ದೇ ಒಂದು ಸಮಿತಿ ರಚಿಸಿ, ನಮ್ಮ ಕಡೆಯಿಂದ ಯಾವುದೇ ತಪ್ಪಾಗಿಲ್ಲ ಎಂದು ಕ್ಲೀನ್ ಚೀಟ್ ಕೊಟ್ಟುಕೊಳ್ಳುವ ಸಂಸ್ಕೃತಿ ಅಧಿಕಾರಿಗಳ ಮಟ್ಟದಲ್ಲಿದೆ.
2024ರ ನೀಟ್ ಅಕ್ರಮದಲ್ಲೂ ಇದುವೇ ಆಗಿದ್ದು ಎಂಬುದನ್ನು ನಾವು ಗಮನಿಸಬೇಕು. ನೀಟ್ ಪರೀಕ್ಷೆಯ ಇಡೀ ವಿವಾದದಲ್ಲಿ ಕೇಂದ್ರ ಸರಕಾರದ ರಾಜಕೀಯ ಇಚ್ಛಾಶಕ್ತಿಯ ಕೊರತೆ, ಮೊಂಡು ತನ ಮತ್ತು ವ್ಯವಸ್ಥಿತ ನಿರ್ಲಕ್ಷ ಎದ್ದು ಕಾಣುತ್ತದೆ. ದೇಶದಲ್ಲಿ ಕಾನೂನು ಇದ್ದೂ ಇರದಂತ ಸ್ಥಿತಿ ಇದೆ. ದೇಶದಲ್ಲಿ ಪರೀಕ್ಷಾ ಅಕ್ರಮಗಳನ್ನು ತಡೆಯಲು ಕೇಂದ್ರ ಸರಕಾರ ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ-2024’ ಅನ್ನು ಸಂಸತ್ತಿನಲ್ಲಿ ಪಾಸ್ ಮಾಡಿತ್ತು.
ಆದರೆ, ನೀಟ್(2024) ಹಗರಣ ಸ್ಫೋಟಗೊಳ್ಳುವವರೆಗೂ ಈ ಕಾಯ್ದೆ ಜಾರಿಗೆ ತರದೆ ಮೂಲೆಗೆ ತಳ್ಳಲಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಸುಮಾರು 2.4 ಲಕ್ಷ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿ ನಿಯೋಜಿಸಿತ್ತು. ಎರಡು ಹಂತಗಳ ಚುನಾವಣೆಗೆ 2407 ಕಂಪನಿಗಳಿಗೂ ಹೆಚ್ಚು ಕೇಂದ್ರ ಪಡೆ ಬಳಸಿಕೊಂಡಿತ್ತು. ಅದುವೇ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಕನಿಷ್ಠ ಮಟ್ಟದ ಭದ್ರತಾ ವ್ಯವಸ್ಥೆ ನೀಡಿದ್ದರೂ ಅಕ್ರಮ ತಡೆಗಬಹುದಿತ್ತು. ಮರು ಪರೀಕ್ಷೆಯಲ್ಲೂ ಅಕ್ರಮ ನಡೆಯದು ಎನ್ನುವುದಕ್ಕೆ ಏನಿದೆ ಆಧಾರ? ಅದನ್ನು ನಡೆಸಲು ಕೋಟ್ಯಂತರ ರುಪಾಯಿ ವ್ಯಯಿಸುವುದು ಜನರ ತೆರಿಗೆ ಹಣವನ್ನಲ್ಲವೇ?