ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Keshava Prasad B Column: ನೆಹರೂ-ಮೋದಿ ಆರ್ಥಿಕ ನೀತಿ: ನಮಗೀಗ ಯಾವುದಗತ್ಯ ?

ಮೋದಿನಾಮಿಕ್ಸ್ ಎಂಬುದು ಆರ್ಥಿಕ ವಿವೇಚನೆ ಮತ್ತು ಕಲ್ಯಾಣ ನೀತಿಗಳ ಮಿಶ್ರಣ ವಾಗಿದೆ. ರಾಜಕೀಯವಾಗಿ ಇದರ ಮೇಲೆ ಅನೇಕ ಅಪಪ್ರಚಾರಗಳು ನಡೆದರೂ, ವಾಸ್ತವದಲ್ಲಿ ಇದು ಭಾರತದ ಮ್ಯಾಕ್ರೋ-ಎಕನಾಮಿಕ್ ಸ್ಥಿರತೆಯನ್ನು ಬಲಪಡಿಸಿದೆ. ಆದರೆ, ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ, ಗ್ರಾಮೀಣ ಭಾಗದ ಆರ್ಥಿಕ ಒತ್ತಡ ಮತ್ತು ಯುವಕ ರಿಗೆ ಗುಣಮಟ್ಟದ ಉದ್ಯೋಗ ಸೃಷ್ಟಿಯ ಸವಾಲುಗಳನ್ನು ಸಂಪೂರ್ಣವಾಗಿ ನಿವಾರಿಸಲು ಸರಕಾರ ಇನ್ನೂ ಶ್ರಮಿಸಬೇಕಾಗಿದೆ.

ಮನಿ ಮೈಂಡೆಡ್

ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ನೀತಿಯು ‘ಮೋದಿನಾಮಿಕ್ಸ್’ ಎಂದು ಜನಪ್ರಿಯವಾಗಿದೆ. ಇದರ ಸುತ್ತ ದೊಡ್ಡ ಮಟ್ಟದ ಚರ್ಚೆಗಳು, ಪರ-ವಿರೋಧದ ವಾದ ಗಳು ಮತ್ತು ಕೆಲವು ಅಪಪ್ರಚಾರಗಳು ಸೃಷ್ಟಿಯಾಗಿವೆ.

ಹಾಗಾದರೆ ಏನಿದು? ಮೋದಿನಾಮಿಕ್ಸ್‌ನ ಮುಖ್ಯ ಉದ್ದೇಶಗಳಲ್ಲಿ ದೇಶದ ಮೂಲ ಸೌಕರ್ಯ ಅಭಿವೃದ್ಧಿ, ಡಿಜಿಟಲೀಕರಣ ಮತ್ತು ಜನಕಲ್ಯಾಣ ಯೋಜನೆಗಳನ್ನು ಗುರುತಿಸ ಬಹುದು. ಮೊದಲನೆಯದಾಗಿ ಹೆದ್ದಾರಿಗಳು, ರೈಲ್ವೆ, ವಿಮಾನ ನಿಲ್ದಾಣಗಳು ಮತ್ತು ಬಂದರು ಗಳ ನಿರ್ಮಾಣ ಮತ್ತು ಆಧುನೀಕರಣಕ್ಕೆ ದಾಖಲೆ ಮಟ್ಟದ ಹಣ ಹಂಚಿಕೆ ಯಾಗಿದೆ. ಉದಾಹರಣೆಗೆ ಇತ್ತೀಚಿನ ಬಜೆಟ್‌ನಲ್ಲಿ ಬಂಡವಾಳ ವೆಚ್ಚವನ್ನು 12.2 ಲಕ್ಷ ಕೋಟಿಗೆ ಏರಿಸಲಾಗಿದೆ.

ಎರಡನೆಯದಾಗಿ, ಡಿಜಿಟಲ್ ಮೂಲಸೌಕರ್ಯಕ್ಕೆ ನೀಡಿದ ಆದ್ಯತೆ ಚಾರಿತ್ರಿಕ. ಯುಪಿಐ (ಯುನಿಫೈಡ್ ಪೇಮೆಂಟ್ಸ್‌ ಇಂಟರ್‌ʼಫೇಸ್), ಡಿಜಿಟಲ್ ಇಂಡಿಯಾ ಮತ್ತು ಜನ್‌ಧನ್ ಖಾತೆಗಳ ಮೂಲಕ ಆರ್ಥಿಕತೆಯನ್ನು ಕ್ರಾಂತಿಕಾರಕವಾಗಿ ಸಂಘಟಿತಗೊಳಿಸಲಾಗಿದೆ. ಇದರ ಪ್ರಯೋಜನ ಮತ್ತು ಸಕಾರಾತ್ಮಕ ಪರಿಣಾಮಗಳು ಹಲವಾರು. ಇಡೀ ಜಗತ್ತು ನಿಬ್ಬೆರಗಾಗಿ ಇದನ್ನು ನೋಡಿದೆ.

ಮೂರನೆಯದಾಗಿ ಸಮಾಜ ಕಲ್ಯಾಣ ಅಧರಿತ ಅರ್ಥಶಾಸ್ತ್ರ. ನೇರ ನಗದು ವರ್ಗಾವಣೆ (ಡಿಬಿಟಿ), ಉಚಿತ ಪಡಿತರ, ಆಯುಷ್ಮಾನ್ ಭಾರತ್, ಮತ್ತು ಸ್ವಚ್ಛ ಭಾರತ್ ಅಡಿಯಲ್ಲಿ ಶೌಚಾಲಯಗಳ ನಿರ್ಮಾಣ ದಾಖಲೆಯ ಮಟ್ಟದಲ್ಲಿ ನಡೆಯಿತು.

ನಾಲ್ಕನೆಯದಾಗಿ, ಆತ್ಮನಿರ್ಭರ ಭಾರತ. ‘ಮೇಕ್ ಇನ್ ಇಂಡಿಯಾ’ ಮತ್ತು ಪಿಎಲ್ಐ ( Productivity Linked Incentive) ಯೋಜನೆಗಳ ಮೂಲಕ ದೇಶೀಯ ಉತ್ಪಾ ದನೆಗೆ ಮತ್ತು ರಫ್ತಿಗೆ ಆದ್ಯತೆ ನೀಡಲಾಯಿತು.

ಇದನ್ನೂ ಓದಿ: Keshava Prasad B Column: ಮೋದಿಯುಗದಲ್ಲಿ ಲಾಭದ ಹಳಿಗೆ ಮರಳಿದ ಸಾರ್ವಜನಿಕ ಬ್ಯಾಂಕ್‌ʼ !

ಐದನೆಯದಾಗಿ, ರಚನಾತ್ಮಕ ಆರ್ಥಿಕ ಸುಧಾರಣೆಗಳು. ಸ್ವತಂತ್ರ ಭಾರತದ ಅತಿ ದೊಡ್ಡ ಪರೋಕ್ಷ ತೆರಿಗೆ ಸುಧಾರಣೆಯಾಗಿರುವ ಜಿಎಸ್‌ಟಿ ಜಾರಿಯಾಗಿರುವುದು ಗಮನಾರ್ಹ. ಇನ್‌ಸಾಲ್ವೆನ್ಸಿ ಮತ್ತು ದಿವಾಳಿ ನೀತಿ ಸಂಹಿತೆ (ಐಬಿಸಿ) ಮೂಲಕ ಉದ್ಯಮ ಸ್ನೇಹಿ ವಾತಾ ವರಣಕ್ಕೆ ಸಹಕಾರಿಯಾಗಿದೆ. ಮೋದಿ ಸರಕಾರದ ಆರ್ಥಿಕ ನೀತಿಗಳ ಕುರಿತು ಪ್ರತಿ ಪಕ್ಷಗಳು ಮತ್ತು ಕೆಲವು ಆರ್ಥಿಕ ತಜ್ಞರು ಮಾಡುವ ಪ್ರಮುಖ ಟೀಕೆಗಳು ಮತ್ತು ವಾಸ್ತವ ವನ್ನು ಗಮನಿಸೋಣ.

ಇದು ಕೇವಲ ಕಾರ್ಪೊರೇಟ್‌ಗಳು ಮತ್ತು ಶ್ರೀಮಂತರ ಪರವಾದ ಸರಕಾರ ಎಂಬ ಟೀಕೆ ಇದೆ. ಸರಕಾರವು ಕೇವಲ ಅದಾನಿ, ಅಂಬಾನಿಯಂತಹ ದೊಡ್ಡ ಉದ್ಯಮಿಗಳಿಗೆ ಮಾತ್ರ ಬೆಂಬಲ ನೀಡುತ್ತಿದೆ, ಬಡವರನ್ನು ನಿರ್ಲಕ್ಷಿಸಿದೆ. ಕಾರ್ಪೊರೇಟ್ ತೆರಿಗೆ ಕಡಿತಗೊಳಿಸಿ ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿ ಮಾಡುತ್ತಿದೆ ಎಂಬ ಅಪಪ್ರಚಾರ. ವಾಸ್ತವ ವಾಗಿ ಉದ್ಯಮಗಳಿಗೆ ತೆರಿಗೆ ಕಡಿತ ಮಾಡಿದ್ದು ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸಲು. ಅದೇ ಸಮಯದಲ್ಲಿ, ಜನ್‌ಧನ್- ಆಧಾರ್- ಮೊಬೈಲ್ ಮೂಲಕ ಮಧ್ಯವರ್ತಿ ಗಳ ಕಾಟವಿಲ್ಲದೆ 34 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ನೇರವಾಗಿ ಬಡವರ ಖಾತೆಗೆ (ಡಿಬಿಟಿ) ತಲುಪಿಸಲಾಗಿದೆ.

ಮುದ್ರಾ ಯೋಜನೆ ಮೂಲಕ ಕೋಟ್ಯಂತರ ಸಣ್ಣ ಉದ್ಯಮಿಗಳಿಗೆ ಗ್ಯಾರಂಟಿ ರಹಿತ ಸಾಲ ನೀಡಲಾಗಿದೆ. ವಿಶ್ವಬ್ಯಾಂಕ್ ವರದಿಗಳ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಸುಮಾರು 25 ಕೋಟಿ ಜನರು ನಾನಾ ಆಯಾಮಗಳ ಬಡತನದಿಂದ ಹೊರ ಬಂದಿದ್ದಾರೆ.

Nehru and Modi

ಎರಡನೆಯದಾಗಿ, ಜಿಡಿಪಿ ಬೆಳವಣಿಗೆ ಕೇವಲ ಅಂಕಿ-ಅಂಶಗಳ ಮಾಯಾಜಾಲ ಯಥಾರ್ಥ ವಲ್ಲ ಎಂಬ ಟೀಕೆ ಇದೆ. ಭಾರತದ ಜಿಡಿಪಿ ಬೆಳವಣಿಗೆಯ ದರ ಸುಮಾರು 7 ಪರ್ಸೆಂಟ್‌ ಗಿಂತ ಹೆಚ್ಚು ಎನ್ನುವುದು ಕೇವಲ ಕಾಗದದ ಮೇಲಿದೆ. ತಳಮಟ್ಟದಲ್ಲಿ ಆರ್ಥಿಕತೆ ಕುಸಿದಿದೆ ಮತ್ತು ಶ್ರೀಮಂತ ಹಾಗೂ ಬಡವರ ನಡುವಿನ ಕಂದಕ ಹೆಚ್ಚಾಗಿದೆ ಎನ್ನುತ್ತಾರೆ ಪ್ರತಿಪಕ್ಷಗಳ ಮುಖಂಡರು. ಆದರೆ ವಾಸ್ತವವಾಗಿ, ಜಾಗತಿಕ ಆರ್ಥಿಕ ಹಿಂಜರಿತ ಮತ್ತು ಪಶ್ಚಿಮ ಏಷ್ಯಾದ ಸಂಘರ್ಷಗಳ ನಡುವೆಯೂ ಭಾರತವು ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುಂದುವರಿದಿದೆ.

ಜಿಎಸ್‌ಟಿ ಸಂಗ್ರಹವು ಪ್ರತಿ ತಿಂಗಳು ಸರಾಸರಿ 1.7 ಲಕ್ಷ ಕೋಟಿ ದಾಟುತ್ತಿರುವುದು ಮತ್ತು ಡಿಜಿಟಲ್ ಪಾವತಿಗಳ (ಯುಪಿಐ) ಗಣನೀಯ ಬೆಳವಣಿಗೆಯನ್ನು ಬಿಂಬಿಸಿದೆ. ಮೂರನೆಯ ದಾಗಿ ನೋಟು ಅಮಾನ್ಯೀಕರಣ ಸಂಪೂರ್ಣ ವಿಫಲ ಎನ್ನುವ ಆರೋಪವನ್ನು ಈಗಲೂ ಅನೇಕ ಮಂದಿ ಮಾಡುತ್ತಾರೆ. ಇದರಲ್ಲಿ ಅರೆಬರೆ ತಿಳುವಳಿಕೆಯ ಪತ್ರಕರ್ತರನ್ನೂ ಗಮನಿಸ ಬಹುದು.

2016ರ ನೋಟು ಅಮಾನ್ಯತೆಯಿಂದಾಗಿ ಕಪ್ಪುಹಣ ಪತ್ತೆಯಾಗಲಿಲ್ಲ. ಬದಲಿಗೆ ಸಣ್ಣ ಉದ್ಯಮಗಳು ನಾಶವಾಯಿತು. ಮತ್ತು ಜಿಡಿಪಿ ಕುಸಿಯಿತು ಎಂಬುದು ಅವರ ಆಪಾದನೆ. ಆದರೆ ಆಗಿದ್ದೇನು? ತಾತ್ಕಾಲಿಕವಾಗಿ ನೋಟು ಅಮಾನ್ಯತೆಯಿಂದ ಜನರಿಗೆ ತೊಂದರೆ ಯಾಗಿದ್ದು ಮತ್ತು ಸಣ್ಣ ಉದ್ಯಮಗಳ ಮೇಲೆ ಪರಿಣಾಮ ಬೀರಿದ್ದು ನಿಜ. ಆದರೆ ದೀರ್ಘಾ ವಧಿಯಲ್ಲಿ, ಇದು ಭಾರತೀಯ ಆರ್ಥಿಕತೆಯನ್ನು ಡಿಜಿಟಲೀಕರಣದತ್ತ ಮುನ್ನಡೆಸಲು ಭದ್ರವಾದ ಅಡಿಪಾಯ ಹಾಕಿತು. ತೆರಿಗೆ ಪಾವತಿಸುವವರ ಸಂಖ್ಯೆ ಹೆಚ್ಚಾಯಿತು. ನಗದು ಆಧಾರಿತವಾಗಿದ್ದ ಆರ್ಥಿಕತೆಯು ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಬರುವಂತಾಯಿತು.

ನಾಲ್ಕನೆಯದಾಗಿ, ಉದ್ಯೋಗ ಸೃಷ್ಟಿ ಸಂಪೂರ್ಣ ಶೂನ್ಯವಾಗಿದೆ ಎಂಬ ಆರೋಪ. ದೇಶ ದಲ್ಲಿ ನಿರುದ್ಯೋಗ ದರವು ದಾಖಲೆ ಮಟ್ಟದಲ್ಲಿದೆ, ಯುವಕರಿಗೆ ಕೆಲಸ ಸಿಗುತ್ತಿಲ್ಲ ಮತ್ತು ‘ಮೇಕ್ ಇನ್ ಇಂಡಿಯಾ’ ವಿಫಲವಾಗಿದೆ ಎನ್ನುತ್ತಾರೆ ಪ್ರತಿಪಕ್ಷ ನಾಯಕರು. ಆದರೆ ವಾಸ್ತವ ವಾಗಿ, ಸಾಂಪ್ರದಾಯಿಕ ‘ಸರಕಾರಿ ಉದ್ಯೋಗಗಳ’ ಸಂಖ್ಯೆ ಸೀಮಿತವಾಗಿದ್ದರೂ, ಸ್ಟಾರ್ಟಪ್, ಗಿಗ್ ಎಕಾನಮಿ (ಡೆಲಿವರಿ ಬಾಯ್ಸ, ಫ್ರೀಲಾನ್ಸರ್ಸ್), ಮತ್ತುಮೂಲಸೌಕರ್ಯ (ರಸ್ತೆ, ರೈಲ್ವೆ ನಿರ್ಮಾಣ) ವಲಯದಲ್ಲಿ ಕೋಟ್ಯಂತರ ಪರೋಕ್ಷ ಉದ್ಯೋಗಗಳು ಸೃಷ್ಟಿ ಯಾಗಿವೆ.

ಭಾರತವು ಇಂದು ವಿಶ್ವದ 3ನೇ ಅತಿ ದೊಡ್ಡ ಸ್ಟಾರ್ಟಪ್ ಹಬ್ ಆಗಿದೆ. ಆದಾಗ್ಯೂ, ಪ್ರತಿ ವರ್ಷ ಉದ್ಯೋಗ ಮಾರುಕಟ್ಟೆಗೆ ಬರುವ ಲಕ್ಷಾಂತರ ಪದವೀಧರರಿಗೆ ಅವರ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಮತ್ತು ಉತ್ಪಾದನಾ ವಲಯದಲ್ಲಿ ನಿರೀಕ್ಷಿತ ಮಟ್ಟದ ಉದ್ಯೋಗ ಸೃಷ್ಟಿಸು ವುದು ಇಂದಿಗೂ ಸರಕಾರದ ಮುಂದಿರುವ ಸವಾಲಾಗಿದೆ.

ಮೋದಿನಾಮಿಕ್ಸ್ ಎಂಬುದು ಆರ್ಥಿಕ ವಿವೇಚನೆ ಮತ್ತು ಕಲ್ಯಾಣ ನೀತಿಗಳ ಮಿಶ್ರಣ ವಾಗಿದೆ. ರಾಜಕೀಯವಾಗಿ ಇದರ ಮೇಲೆ ಅನೇಕ ಅಪಪ್ರಚಾರಗಳು ನಡೆದರೂ, ವಾಸ್ತವ ದಲ್ಲಿ ಇದು ಭಾರತದ ಮ್ಯಾಕ್ರೋ-ಎಕನಾಮಿಕ್ ಸ್ಥಿರತೆಯನ್ನು ಬಲಪಡಿಸಿದೆ. ಆದರೆ, ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ, ಗ್ರಾಮೀಣ ಭಾಗದ ಆರ್ಥಿಕ ಒತ್ತಡ ಮತ್ತು ಯುವಕ ರಿಗೆ ಗುಣಮಟ್ಟದ ಉದ್ಯೋಗ ಸೃಷ್ಟಿಯ ಸವಾಲುಗಳನ್ನು ಸಂಪೂರ್ಣವಾಗಿ ನಿವಾರಿಸಲು ಸರಕಾರ ಇನ್ನೂ ಶ್ರಮಿಸಬೇಕಾಗಿದೆ.

ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಅವರ ಆರ್ಥಿಕ ನೀತಿಯನ್ನು ‘ನೆಹರುವಾದಿ ಸಮಾಜವಾದ’ ಅಥವಾ ‘ಮಿಶ್ರ ಆರ್ಥಿಕತೆ’ ಎಂದು ಕರೆಯುವ ಪರಿಪಾಠ ವಿದೆ. ಸ್ವಾತಂತ್ರ್ಯ ಸಿಕ್ಕಾಗ ಬಡತನ ಮತ್ತು ಬ್ರಿಟಿಷರ ಶೋಷಣೆಯಿಂದ ಜರ್ಜರಿತವಾಗಿದ್ದ ಭಾರತವನ್ನು ಮುನ್ನಡೆಸಲು ಅವರು ಈ ನೀತಿಯನ್ನು ರೂಪಿಸಿದರು. ಅವರು ಸೋವಿ ಯತ್ ಒಕ್ಕೂಟದ (ರಷ್ಯಾ) ಮಾದರಿಯಿಂದ ಪ್ರಭಾವಿತರಾಗಿದ್ದರು.

ಅಭಿವೃದ್ಧಿಯಲ್ಲಿ ಸರಕಾರ (ಸಾರ್ವಜನಿಕ ವಲಯ) ಮತ್ತು ಖಾಸಗಿ ವಲಯ ಎರಡೂ ಜೊತೆಯಾಗಿ ಕೆಲಸ ಮಾಡುವ ಮಾದರಿ ಅವರದ್ದಾಗಿದ್ದರೂ, ಪ್ರಮುಖ ನಿರ್ಧಾರಗಳು ಸರಕಾರದ ಕೈಯಲ್ಲಿದ್ದವು. 1951ರಲ್ಲಿ ಪಂಚ ವಾರ್ಷಿಕ ಯೋಜನೆಗಳಿಗೆ ಯೋಜನಾ ಆಯೋಗವನ್ನು ಸ್ಥಾಪಿಸಿದರು. ನೆಹರೂ ಅವರು ಬೃಹತ್ ಕೈಗಾರಿಕೆಗಳನ್ನು ಆಧುನಿಕ ಭಾರತದ ದೇವಾಲಯಗಳು ಎಂದು ಕರೆದರು.

ಉಕ್ಕಿನ ಕಾರ್ಖಾನೆಗಳು (ರೂರ್ಕೆಲಾ, ಭಿಲಾಯ್), ಜಲವಿದ್ಯುತ್ ಅಣೆಕಟ್ಟುಗಳು (ಭಾಕ್ರಾ ನಂಗಲ್) ಮತ್ತು ಗಣಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಯಿತು. ತಾಂತ್ರಿಕ ಮತ್ತು ವೈಜ್ಞಾನಿಕ ಬೆಳವಣಿಗೆಗೆ ಬುನಾದಿ ಹಾಕಲು ಐಐಟಿ, ಐಐಎಂ, ಏಮ್ಸ ಸೇರಿದಂತೆ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಿದರು.

ಇಂದು ಭಾರತವು ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ವೈದ್ಯಕೀಯ ವಲಯದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದರೆ, ಅದಕ್ಕೆ ನೆಹರೂ ಅವರು ಅಂದು ಬಿತ್ತಿದ ಗುಣಮಟ್ಟದ ಶಿಕ್ಷಣ ಸಂಸ್ಥೆಗಳ ಕೊಡುಗೆಯೂ ಇದೆ. ಹೀಗಿದ್ದರೂ, ಖಾಸಗಿ ಉದ್ದಿಮೆಗಳ ಬೆಳವಣಿಗೆಗೆ ನೆಹರೂ ಆದ್ಯತೆ ನೀಡಿರಲಿಲ್ಲ. ಲೈಸೆನ್ಸ್ ರಾಜ್ ಹಾವಳಿಯಿಂದಾಗಿ ಖಾಸಗಿ ಉದ್ದಿಮೆಗಳ ಪ್ರಗತಿಯಾಗಲಿಲ್ಲ. ಕಡು ಭ್ರಷ್ಟಾಚಾರ, ಕೆಂಪು ಪಟ್ಟಿ, ಉದ್ಯಮಶೀಲತೆಯ ದಮನಕ್ಕೆ ಕಾರಣವಾಯಿತು.

ಕೃಷಿ ವಲಯದ ಕಡೆಗಣನೆಯಿಂದ ಭಾರತವು ಆಹಾರದ ತೀವ್ರ ಅಭಾವ ಎದುರಿಸು ವಂತಾಯಿತು. ಹಲವು ದಶಕಗಳ ಕಾಲ ಜಿಡಿಪಿ ಬೆಳವಣಿಗೆ 3.5 ಪರ್ಸೆಂಟ್‌ಗಿಂತ ಕೆಳಗಿತ್ತು. ಆದರೆ ಆಗ ಖಾಸಗಿ ವಲಯದಲ್ಲಿ ಬಂಡವಾಳ ಇದ್ದಿರಲಿಲ್ಲ ಎಂಬ ವಾದವೂ ಇದೆ. ಆದರೆ ಕಾಲ ಬದಲಾದಂತೆ ನೀತಿಯನ್ನು ಬದಲಾಯಿಸದೆ ಹೋಗಿದ್ದುದು ಯಡವಟ್ಟಿಗೆ ಕಾರಣ‌ ವಾಯಿತು.

ನೆಹರು ಮತ್ತು ನರೇಂದ್ರ ಮೋದಿ ಅವರ ಆರ್ಥಿಕ ನೀತಿಗಳು ಭಿನ್ನ ಕಾಲಘಟ್ಟ, ಸಿದ್ಧಾಂತ ಮತ್ತು ಸವಾಲುಗಳಿಗೆ ಅನುಗುಣವಾಗಿ ರೂಪಿತವಾಗಿವೆ. ನೆಹರು ಅವರ ನೀತಿಗಳು ಭಾರತಕ್ಕೆ ಭದ್ರವಾದ ಅಡಿಪಾಯ ಹಾಕಿಕೊಟ್ಟವು. ಆದರೆ ಮೋದಿಯವರ ನೀತಿಗಳು ಆ ಅಡಿಪಾಯದ ಮೇಲೆ ಭಾರತವನ್ನು ಜಾಗತಿಕ ಆರ್ಥಿಕ ಮಹಾಶಕ್ತಿಯನ್ನಾಗಿ ಬೆಳೆಸುತ್ತಿವೆ.

ಇಂದಿನ ಆಧುನಿಕ, ಯುವ ಮತ್ತು ಮಹತ್ವಾಕಾಂಕ್ಷೆಯ ಭಾರತಕ್ಕೆ ಉದ್ಯಮಶೀಲತೆ, ತಂತ್ರಜ್ಷಾನ ಮತ್ತು ಜಾಗತಿಕ ಮುಕ್ತ ಮಾರುಕಟ್ಟೆಗೆ ಆದ್ಯತೆ ನೀಡುವ ನರೇಂದ್ರ ಮೋದಿ ಯವರ ಆರ್ಥಿಕ ನೀತಿಯೇ ಪ್ರಸ್ತುತ ಅತ್ಯುತ್ತಮ ಮತ್ತು ಯಶಸ್ವಿ ಮಾದರಿಯಾಗಿದೆ.

ದೇಶ ಸ್ವತಂತ್ರವಾದ ಸಂದರ್ಭ ಖಾಸಗಿ ವಲಯದವರಲ್ಲಿ ಹೂಡಿಕೆಯ ಶಕ್ತಿ ಇದ್ದಿರಲಿಲ್ಲ. ನೆಹರು ಕಾಲದಲ್ಲಿ ದೇಶದ ಜನಸಂಖ್ಯೆ ಕೇವಲ 36 ಕೋಟಿ ಇದ್ದಿದ್ದರೆ, ಈಗ 147 ಕೋಟಿಗೆ ಏರಿಕೆಯಾಗಿದೆ. ಉದ್ಯೋಗ ಸೃಷ್ಟಿಗೆ ಭಾರಿ ಬಂಡವಾಳ ಅಗತ್ಯ. ಅದು ಸರಕಾರ ಒಂದ ರಿಂದಲೇ ಅಸಾಧ್ಯ. ಖಾಸಗಿ ಮತ್ತು ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಮೋದಿ ನೀತಿ ಅನಿವಾರ್ಯ.

ಭಾರತವು ಸೇವಾ ಕ್ಷೇತ್ರದಲ್ಲಿ ಗಣನೀಯ ಸಾಧಿಸಿದೆ. ಆದರೆ ಉತ್ಪಾದನಾ ಕ್ಷೇತ್ರದಲ್ಲೂ ಚೀನಾದಂತೆ ಮುಂಚೂಣಿಗೆ ಬರುವುದು ಅನಿವಾರ್ಯ. ಅದಕ್ಕೆ ‘ಮೇಕ್ ಇನ್ ಇಂಡಿಯಾ’ ಮತ್ತು ಪಿಎಲ್ಐ ಮಾದರಿಯ ಯೋಜನೆಗಳು ಅಗತ್ಯ. ಇಂದಿನ ಪರಿಸ್ಥಿತಿಗೆ ಕೇವಲ ನೆಹರು ಅವರ 1950ರ ದಶಕದ ಲೈಸೆನ್ಸ್ ರಾಜ (ಸರಕಾರಿ ನಿಯಂತ್ರಣ) ನೀತಿಯೂ ಸೂಕ್ತವಲ್ಲ.

ಹಾಗೆಯೇ ಸಂಪೂರ್ಣ ಬಂಡವಾಳಶಾಹಿ ನೀತಿಯೂ ಭಾರತದಂತಹ ವೈವಿಧ್ಯಮಯ ದೇಶಕ್ಕೆ ಒಪ್ಪುವುದಿಲ್ಲ. ಸಮತೋಲಿತ ಅಥವಾ ಹೈಬ್ರಿಡ್ ಆರ್ಥಿಕ ನೀತಿಯ ಅಗತ್ಯವಿದೆ. ಈಗಿನ ಭಾರತಕ್ಕೆ ಸಾಮಾಜಿಕ ಕಲ್ಯಾಣವೂ ಬೇಕು, ಆರ್ಥಿಕ ದಕ್ಷತೆ ಮತ್ತು ವೇಗವೂ ಬೇಕು. ಮೋದಿಯವರ ನೀತಿಗಳಲ್ಲಿ ಇವೆರೆಡರ ಸಮ್ಮಿಳನವನ್ನೂ ಕಾಣಬಹುದು.

ಸಂಪತ್ತನ್ನು ಸೃಷ್ಟಿಸಲು ಮೋದಿಯವರ ಮುಕ್ತ ಮಾರುಕಟ್ಟೆ ನೀತಿ ಬೇಕು. ಉತ್ಪಾದನೆ ತನ್ನ ವೇಗವನ್ನು ಹೆಚ್ಚಿಸಿಕೊಳ್ಳಬೇಕು. ಅಂಡಮಾನ್ ನಿಕೋಬಾರ್ ಕೂಡ ಅತ್ಯಾಧುನಿಕ ವಾಗಿ ಬೆಳೆಯಬೇಕು. ಆದರೆ ಜನ ಸಾಮಾನ್ಯರನ್ನು ರಕ್ಷಿಸುವ ಬ್ರೇಕ್ ಮತ್ತು ಸ್ಟೀರಿಂಗ್ ಆಗಿ ಸರಕಾರ ಕೆಲಸ ಮಾಡಬೇಕು. ಈ ಸಮತೋಲನವೇ ಭಾರತವನ್ನು ಭವಿಷ್ಯದಲ್ಲಿ ಸೂಪರ್ ಪವರ್ ಮಾಡಬಲ್ಲದು.

ಕೇಶವ ಪ್ರಸಾದ್​ ಬಿ

View all posts by this author