ವಿಶ್ವ ವ್ಯಾಪಾರ
ಪಿಯೂಷ್ ಗೋಯಲ್
ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕುವ ಮೋದಿ ಸರಕಾರದ ಉಪಕ್ರಮಗಳು ಪ್ರತಿಯೊಬ್ಬ ಭಾರತೀಯನ ಜೀವನವನ್ನು ಸುಧಾರಿಸುವ ಪ್ರಧಾನಿಯವರ ಘನ ಉದ್ದೇಶದ ಭಾಗವಾಗಿದೆ. 7 ಲಕ್ಷ ಭಾರತೀಯ ರಿಗೆ ನೆಲೆಯಾಗಿರುವ ಒಮಾನ್ ಜೊತೆಗೆ ಭಾರತವು ಆಳವಾದ ಆರ್ಥಿಕ ಹಾಗೂ ಜನತಾ ಸಂಪರ್ಕವನ್ನು ಹೊಂದಿದೆ.
ಜೂನ್ 1ರಿಂದ ಜಾರಿಗೆ ಬರುವ ಭಾರತ-ಒಮಾನ್ ಮುಕ್ತ ವ್ಯಾಪಾರ ಒಪ್ಪಂದವು ಭಾರತದ ವಿದ್ಯಾರ್ಥಿಗಳು, ಕುಶಲಕರ್ಮಿಗಳು, ಮಹಿಳೆಯರು, ರೈತರು, ಮೀನುಗಾರರು ಮತ್ತು ಎಂಎಸ್‌ಎಂಇಗಳಿಗೆ (ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು) ಜಾಗತಿಕ ಸಮೃದ್ಧಿಯ ಹಾದಿಗಳನ್ನು ಸೃಷ್ಟಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯ ದಲ್ಲಿ ಒಂದು ಪ್ರಮುಖ ಮೈಲುಗಲ್ಲಾಗಿದೆ. ಇದು ಹೊಸ ಮಾರುಕಟ್ಟೆಗಳನ್ನು ತೆರೆಯುವ ಮೂಲಕ ಮತ್ತು ಉದ್ಯೋಗ ಸೃಷ್ಟಿಯನ್ನು ವೇಗಗೊಳಿಸುವ ಮೂಲಕ ನೆರವಾಗಲಿದೆ.
200-300 ವರ್ಷಗಳಷ್ಟು ಹಳೆಯದಾದ ವ್ಯಾಪಾರಿ ಕುಟುಂಬಗಳು ಸೇರಿದಂತೆ ಸುಮಾರು 7 ಲಕ್ಷ ಭಾರತೀಯರಿಗೆ ನೆಲೆಯಾಗಿರುವ ಒಮಾನ್ ಜೊತೆಗೆ ಭಾರತವು ಆಳವಾದ ಆರ್ಥಿಕ ಹಾಗೂ ಜನತಾ ಸಂಪರ್ಕವನ್ನು ಹೊಂದಿದೆ. ಒಮಾನ್‌ನಿಂದ ಭಾರತೀಯರು ವಾರ್ಷಿಕ ವಾಗಿ ಸುಮಾರು 2 ಶತಕೋಟಿ ಡಾಲರ್ ಹಣವನ್ನು ಭಾರತಕ್ಕೆ ರವಾನಿಸಿಸುತ್ತಾರೆ.
ಇದೇ ವೇಳೆ, 6000ಕ್ಕೂ ಹೆಚ್ಚು ಭಾರತೀಯ ಉದ್ಯಮಗಳು ಅಲ್ಲಿ ಕಾರ್ಯನಿರ್ವಹಿಸುತ್ತಿವೆ. ಉಭಯ ದೇಶಗಳ ನಡುವಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವು (ಸಿಇಪಿಎ) ಆರ್ಥಿಕ ಮತ್ತು ಕಾರ್ಯತಂತ್ರದ ಬಾಂಧವ್ಯವನ್ನು ಗಣನೀಯವಾಗಿ ಬಲಪಡಿಸುತ್ತದೆ. ಇದು ಒಮಾನ್‌ನಲ್ಲಿ ಶೇಕಡಾ 98ರಷ್ಟು ಆಮದು ಸುಂಕದ ವರ್ಗಗಳಿಗೆ (ಟ್ಯಾರಿಫ್ ಲೈನ್) ತಕ್ಷಣದಿಂದಲೇ 100 ಪ್ರತಿಶತ ಸುಂಕ ರಹಿತ ಮಾರುಕಟ್ಟೆ ಪ್ರವೇಶವನ್ನು ನೀಡುತ್ತದೆ, ಇದು ಒಮಾನ್‌ಗೆ ಭಾರತದ ಒಟ್ಟು ರಫ್ತಿನಲ್ಲಿ ಶೇಕಡಾ 99.38ರಷ್ಟನ್ನು ಒಳಗೊಂಡಿದೆ.
ಇದನ್ನೂ ಓದಿ: Piyush Goyal Column: ಸೋಮನಾಥದಿಂದ ಸಿಂದೂರದವರೆಗೆ ಭಾರತ ಪುನರುತ್ಥಾನ
‘ಸಿಇಪಿಎ’ ಪೂರ್ವ ವ್ಯವಸ್ಥೆಯಲ್ಲಿ ಭಾರತದ ರಫ್ತಿನ ಕೇವಲ ಶೇ. 15.3ರಷ್ಟನ್ನು ಮಾತ್ರ ಶೂನ್ಯ ಸುಂಕದಲ್ಲಿ ಮಾರುಕಟ್ಟೆ ಪ್ರವೇಶಿಸಲು ಒಮಾನ್ ಅನುಮತಿಸುತ್ತಿತ್ತು. ಅದಕ್ಕೆ ಹೋಲಿಸಿದರೆ ‘ಸಿಇಪಿಎ’ ಗಮನಾರ್ಹ ಸುಧಾರಣೆಯನ್ನು ಸೂಚಿಸುತ್ತದೆ. ಪ್ರಸ್ತುತ ಒಮಾನ್ ನಲ್ಲಿ ಶೇಕಡಾ 5ರಷ್ಟು ಆಮದು ಸುಂಕವನ್ನು ಎದುರಿಸುತ್ತಿರುವ ಭಾರತದ ಸರಕುಗಳು, ಸುಮಾರು 3.64 ಶತಕೋಟಿ ಡಾಲರ್ ಮೌಲ್ಯದ ರಫ್ತುಗಳು ಹೆಚ್ಚು ಸ್ಪರ್ಧಾತ್ಮಕ ವಾಗಲಿವೆ.
ಭಾರತದ ಎಂಎಸ್‌ಎಂಇಗೆ ಈ ಒಪ್ಪಂದವು ಪರಿವರ್ತನಾತ್ಮಕವಾಗಬಹುದು. ಏಕೆಂದರೆ ಸಿಇಪಿಎಯಿಂದ ಲಾಭ ಪಡೆಯುವ ಅನೇಕ ವಲಯಗಳಲ್ಲಿ ಸಣ್ಣ ಉದ್ಯಮಗಳ ಪ್ರಾಬಲ್ಯ ಹೆಚ್ಚಾಗಿದೆ. ಎಂಎಸ್‌ಎಂಇಗಳು ದೊಡ್ಡ ಅಂತರರಾಷ್ಟ್ರೀಯ ಕಾರ್ಯಾದೇಶಗಳನ್ನು ಪಡೆಯುವ ನಿರೀಕ್ಷೆಯಿರುವ ಕೆಲವು ಪ್ರಮುಖ ವಲಯಗಳಲ್ಲಿ ಕಬ್ಬಿಣ ಮತ್ತು ಉಕ್ಕು, ಜವಳಿ, ಚರ್ಮ, ವಾಹನ ಬಿಡಿಭಾಗಗಳು ಮತ್ತು ಕೈಗಾರಿಕಾ ಉಪಕರಣಗಳ ವಲಯಗಳು ಸೇರಿವೆ.
ಇದು ಉತ್ಪಾದನೆ, ಹೂಡಿಕೆ ಮತ್ತು ಉದ್ಯೋಗ ನೇಮಕಾತಿಯನ್ನು ಉತ್ತೇಜಿಸುತ್ತದೆ. ಬೆಳೆಯುತ್ತಿರುವ ಜಾಗತಿಕ ಅಸ್ಥಿರತೆಯ ಯುಗದಲ್ಲಿ, ಸಿಇಪಿಎ ಭಾರತೀಯ ರಫ್ತುದಾರರಿಗೆ ಮಾರುಕಟ್ಟೆಗಳನ್ನು ವೈವಿಧ್ಯಗೊಳಿಸಲು ಮತ್ತು ಆರ್ಥಿಕ ಮಂದಗತಿ ಹಾಗೂ ಹೆಚ್ಚುತ್ತಿರುವ ವ್ಯಾಪಾರ ಅಡೆತಡೆಗಳನ್ನು ಎದುರಿಸುತ್ತಿರುವ ಸಾಂಪ್ರದಾಯಿಕ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಒಂದು ಮಹತ್ತರ ಅವಕಾಶವನ್ನು ನೀಡುತ್ತದೆ.
ಉದ್ಯೋಗ ಸೃಷ್ಟಿ - ವ್ಯಾಪಾರ ಒಪ್ಪಂದವು ಜವಳಿ ಮತ್ತು ಉಡುಪುಗಳು, ಚರ್ಮ ಮತ್ತು ಪಾದರಕ್ಷೆಗಳು, ಆಹಾರ ಸಂಸ್ಕರಣೆ, ಸಾಗರ ಉತ್ಪನ್ನಗಳು, ರತ್ನ ಮತ್ತು ಆಭರಣಗಳು ಹಾಗೂ ಆಯ್ದ ಎಂಜಿನಿಯರಿಂಗ್ ವಿಭಾಗಗಳಂತಹ ಅಧಿಕ ಕಾರ್ಮಿಕಶಕ್ತಿ ಬಳಕೆಯ ವಲಯಗಳಿಗೆ ಪ್ರಯೋಜನವನ್ನು ನೀಡುತ್ತದೆ.
ಒಮಾನ್‌ಗೆ ಜವಳಿ ರಫ್ತು ಹೆಚ್ಚಳವು, ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ತಿರುಪುರ, ಸೂರತ್, ಲೂಧಿಯಾನ, ಪಾಣಿಪತ್, ಕೊಯಮತ್ತೂರು, ಕರೂರ್, ಭದೋಹಿ, ಮೊರಾದಾ ಬಾದ್, ಜೈಪುರ ಮತ್ತು ಅಹಮದಾಬಾದ್‌ನಂತಹ ಪ್ರಮುಖ ಜವಳಿ ಕ್ಲಸ್ಟರ್'ಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸುತ್ತದೆ.
ಭಾರತದಾದ್ಯಂತದ ಕುಶಲಕರ್ಮಿಗಳು ಮತ್ತು ನೇಕಾರರು ತಮ್ಮ ಉತ್ಪನ್ನಗಳಿಗೆ ಹೆಚ್ಚಿದ ಅಂತರರಾಷ್ಟ್ರೀಯ ಬೇಡಿಕೆಯಿಂದ ಲಾಭ ಪಡೆಯುತ್ತಾರೆ.
ಭಾರತದಾದ್ಯಂತದ ಪ್ರಮುಖ ಚರ್ಮ ಮತ್ತು ಪಾದರಕ್ಷೆಗಳ ಕೇಂದ್ರಗಳಲ್ಲಿ, ವಿಶೇಷವಾಗಿ ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಹಾಗೂ ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ ಮತ್ತು ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಹಲವಾರು ಉದ್ಯೋಗ ಗಳು ಸೃಷ್ಟಿಯಾಗಲಿವೆ.
ಉದ್ಯೋಗ ಬೆಳವಣಿಗೆಯನ್ನು ಸಿಇಪಿಎ ಹೇಗೆ ವೇಗಗೊಳಿಸುತ್ತದೆ ಎಂಬುದಕ್ಕೆ ರತ್ನ ಮತ್ತು ಆಭರಣ ವಲಯವು ಮತ್ತೊಂದು ಉದಾಹರಣೆಯಾಗಿದೆ. ಕತ್ತರಿಸಿದ ಮತ್ತು ಹೊಳಪು ನೀಡಿದ ವಜ್ರಗಳು, ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ಕೈಯಿಂದ ತಯಾರಿಸಿದ ಆಭರಣಗಳ ಉತ್ಪಾದನೆಯಲ್ಲಿ ಭಾರತವು ಈಗಾಗಲೇ ಬಲವಾದ ಸಾಮರ್ಥ್ಯವನ್ನು ಹೊಂದಿದೆ.
ಸುಂಕದ ಅಡೆತಡೆಗಳನ್ನು ತೆಗೆದು ಹಾಕುವುದರೊಂದಿಗೆ, ಭಾರತೀಯ ರಫ್ತುದಾರರು ಯುರೋಪಿಯನ್ ಮತ್ತು ಏಷ್ಯಾದ ಪ್ರತಿಸ್ಪರ್ಧಿಗಳ ಮೇಲೆ ನಿರ್ಣಾಯಕ ಸ್ಪರ್ಧಾತ್ಮಕ ಲಾಭವನ್ನು ಪಡೆಯುತ್ತಾರೆ. ಮುಂದಿನ ಮೂರು ವರ್ಷಗಳಲ್ಲಿ ಒಮಾನ್‌ಗೆ 150 ದಶಲಕ್ಷ ಡಾಲರ್‌ನಷ್ಟು ರಫ್ತು ಬೆಳೆಯಬಹುದು ಎಂದು ಉದ್ಯಮವು ಅಂದಾಜಿಸಿದೆ. ಇದು ಪಶ್ಚಿಮ ಬಂಗಾಳ, ತಮಿಳುನಾಡು, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಗುಜರಾತ್‌ನಾದ್ಯಂತ ಆಭರಣ ತಯಾರಿಕೆ ಕ್ಲಸ್ಟರ್‌ಗಳಲ್ಲಿ ಗಣನೀಯ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.
ರೈತರು ಮತ್ತು ಮೀನುಗಾರರು - ದೇಶೀಯ ರೈತರು ಮತ್ತು ಸೂಕ್ಷ್ಮ ಕೃಷಿ ಹಿತಾಸಕ್ತಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಭಾರತವು ಗೋಧಿ, ಅಕ್ಕಿ, ಮೆಕ್ಕೆಜೋಳ, ಸಿರಿಧಾನ್ಯಗಳು, ಹೈನು ಉತ್ಪನ್ನ, ಹಣ್ಣುಗಳು, ತರಕಾರಿಗಳು, ಖಾದ್ಯ ತೈಲಗಳು, ಎಣ್ಣೆಕಾಳುಗಳು, ಚಹಾ, ಕಾಫಿ ಮತ್ತು ಜೇನುತುಪ್ಪದಂತಹ ಪ್ರಮುಖ ಉತ್ಪನ್ನಗಳಿಗೆ ಯಾವುದೇ ಸುಂಕ ರಿಯಾಯಿತಿ ನೀಡಿಲ್ಲ.
ಭಾರತವು ಬೆಣ್ಣೆ, ಜೇನುತುಪ್ಪ, ಸಿಹಿ ಬಿಸ್ಕತ್ತುಗಳು, ಮೊಟ್ಟೆಗಳು ಮತ್ತು ಕೆಲವು ಮಿಠಾಯಿ ಉತ್ಪನ್ನಗಳಲ್ಲಿ ಪ್ರತಿಸ್ಪರ್ಧಿಗಳ ವಿರುದ್ಧ ಸ್ಪರ್ಧಾತ್ಮಕ ಪ್ರಯೋಜನವನ್ನು ಪಡೆಯುತ್ತದೆ. ಇದು ದೇಶದ ಕೃಷಿ ಉತ್ಪನ್ನಗಳಿಗೆ ಬೇಡಿಕೆಯನ್ನು ಹೆಚ್ಚಿಸುತ್ತದೆ ಮತ್ತು ಗ್ರಾಮೀಣ ಆದಾಯವನ್ನು ಹೆಚ್ಚಿಸುತ್ತದೆ. ಈ ಒಪ್ಪಂದವು ಭಾರತದ ‘ರಾಷ್ಟ್ರೀಯ ಸಾವಯವ ಉತ್ಪಾದನೆ ಕಾರ್ಯಕ್ರಮ’(ಎನ್‌ಪಿಒಪಿ) ಪ್ರಮಾಣೀಕರಣವನ್ನು ಅಂಗೀಕರಿಸಲು ಅವಕಾಶ ನೀಡುತ್ತದೆ, ಇದು ಪ್ರಮುಖ ಆಹಾರ ಆಮದುದಾರ ಒಮಾನ್‌ಗೆ ಸಾವಯವ ಉತ್ಪಾದನೆ ಯನ್ನು ಮಾರಾಟ ಮಾಡಲು ಭಾರತೀಯ ರೈತರಿಗೆ ಅಗಾಧ ಅವಕಾಶಗಳನ್ನು ತೆರೆಯು ತ್ತದೆ.
ಸಮುದ್ರ ಉತ್ಪನ್ನಗಳ ವಿಚಾರದಲ್ಲೂ ಭಾರತದ ಅಗಾಧವಾದ ಸಾಮರ್ಥ್ಯವು ಬಳಕೆ ಯಾಗದೆ ಉಳಿದಿದೆ. 2022 ಮತ್ತು 2024ರ ನಡುವೆ ಒಮಾನ್‌ನ ಸಮುದ್ರ ಉತ್ಪನ್ನಗಳ ಆಮದು ಸುಮಾರು 119 ದಶಲಕ್ಷ ಡಾಲರ್ ಆಗಿತ್ತು. ಭಾರತದಿಂದ ಆಮದು ಕೇವಲ 7.75 ದಶಲಕ್ಷ ಡಾಲರ್‌ನಷ್ಟಿತ್ತು.
ಇದು ಸೀಗಡಿ ಮತ್ತು ಘನೀಕರಿಸಿದ ಕಟಲ್ ಫಿಶ್‌ನಂತಹ ಭಾರತೀಯ ಸಮುದ್ರಾಹಾರ ರಫ್ತಿಗೆ ಅಗಾಧ ಅವಕಾಶಗಳನ್ನು ನೀಡುತ್ತದೆ. ಅಧಿಕ ಕಾರ್ಮಿಕರ ಶಕ್ತಿ ಬಳಕೆಯ ಸಮುದ್ರ ಉತ್ಪನ್ನಗಳ ಉದ್ಯಮವು ಮೀನುಗಾರಿಕೆ, ಸಂಸ್ಕರಣೆ, ಪ್ಯಾಕೇಜಿಂಗ್, ಕೋಲ್ಡ್-ಚೈನ್ ಸರಕು ಸಾಗಣೆ ಮತ್ತು ರಫ್ತು ಕಾರ್ಯಾಚರಣೆಗಳಲ್ಲಿ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ.
ಔಷಧ ಮತ್ತು ಸಾಂಪ್ರದಾಯಿಕ ಔಷಧ - ಯುಎಸ್‌ಎಫ್ʼಡಿಎ, ಇಎಂಎ, ಯುಕೆ ಎಂಎಚ್ ಆರ್‌ಎ ಮತ್ತು ಟಿಜಿಎದಂತಹ ನಿಯಂತ್ರಕ ಪ್ರಾಧಿಕಾರಗಳು ಅನುಮೋದಿಸಿರುವ ಭಾರತೀಯ ಔಷಧಗಳು 90 ದಿನಗಳಲ್ಲಿ ಒಮಾನ್‌ನಲ್ಲಿ ಸ್ವಯಂಚಾಲಿತ ಮಾರ್ಕೆಟಿಂಗ್ ಅಧಿಕಾರವನ್ನು ಪಡೆಯುತ್ತವೆ - ಇದು ಭಾರತೀಯ ಔಷಧ ರಫ್ತುದಾರರಿಗೆ ದೊಡ್ಡ ಗೆಲವು. ಗಮನಾರ್ಹ ವಿಷಯವೆಂದರೆ, ಸಿಇಪಿಎ ಭಾರತದ ಸಾಂಪ್ರದಾಯಿಕ ವೈದ್ಯಕೀಯಸೇವೆಗಳಿಗೆ ಅವಕಾಶಗಳನ್ನು ಸೃಷ್ಟಿಸುತ್ತದೆ. ಇದು ಸಾಂಪ್ರದಾಯಿಕ ಔಷಧದಲ್ಲಿ ಜಂಟಿ ಸಂಶೋಧನೆಗೆ ಅನುವು ಮಾಡಿದೆ.
ಸೇವೆಗಳು ಮತ್ತು ಪ್ರಯಾಣ
ಒಪ್ಪಂದದ ಮತ್ತೊಂದು ಪ್ರಮುಖ ಆಯಾಮವೆಂದರೆ ಸೇವೆಗಳು ಮತ್ತು ಸಾರಿಗೆ. ವೃತ್ತಿಪರ ಸೇವೆಗಳು, ಕಂಪ್ಯೂಟರ್ ಮತ್ತು ಐಟಿ ಸೇವೆಗಳು, ಶಿಕ್ಷಣ, ಆರೋಗ್ಯ ರಕ್ಷಣೆ, ಪ್ರವಾಸೋ ದ್ಯಮ, ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಪರಿಸರ ಸೇವೆಗಳು ಸೇರಿದಂತೆ ಭಾರತಕ್ಕೆ ಪ್ರಮುಖ ರಫ್ತು ಆಸಕ್ತಿಯ ಕ್ಷೇತ್ರಗಳಲ್ಲಿ ಒಮಾನ್ ವಾಣಿಜ್ಯಿಕವಾಗಿ ಅರ್ಥಪೂರ್ಣ ಬದ್ಧತೆ ಗಳನ್ನು ಕೈಗೊಂಡಿದೆ. ಅಕೌಂಟಿಂಗ್, ಎಂಜಿನಿಯರಿಂಗ್, ವೈದ್ಯಕೀಯ, ನಿರ್ಮಾಣ, ಶಿಕ್ಷಣ ಮತ್ತು ಸಲಹಾ ಕ್ಷೇತ್ರಗಳಲ್ಲಿನ ಭಾರತೀಯ ವೃತ್ತಿಪರರು ಸುಧಾರಿತ ಮಾರುಕಟ್ಟೆ ಪ್ರವೇಶ ದಿಂದ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ.
ನಿರ್ಣಾಯಕವಾಗಿ, ಭಾರತೀಯ ವೃತ್ತಿಪರರು ಮತ್ತು ಕಾರ್ಮಿಕರಿಗೆ ಹೆಚ್ಚಿನ ಪ್ರಯಾಣ ಷರತ್ತುಗಳಿಗೆ ಒಮಾನ್ ಸಮ್ಮತಿಸಿದೆ. ಅಂತರ-ಕಾರ್ಪೊರೇಟ್ ವರ್ಗಾವಣೆಗೆ ಒಳಗಾದ ನೌಕರರು ಮತ್ತು ಗುತ್ತಿಗೆ ಸೇವಾ ಪೂರೈಕೆದಾರರಿಗೆ ನಾಲ್ಕು ವರ್ಷಗಳವರೆಗೆ ವಾಸ್ತವ್ಯವನ್ನು ಅನುಮತಿಸಲಾಗುವುದು. ಇದೇ ವೇಳೆ, ವ್ಯಾಪಾರ ಸಂದರ್ಶಕರು ಮತ್ತು ಸ್ವತಂತ್ರ ವೃತ್ತಿ ಪರರು ಸುಲಭವಾದ ತಾತ್ಕಾಲಿಕ ಪ್ರವೇಶ ಅನುಮತಿಗಳನ್ನು ಪಡೆಯಲಿದ್ದಾರೆ.
ಇದು ಅಂತರ-ಕಾರ್ಪೊರೇಟ್ ವರ್ಗಾವಣೆದಾರರ ಮಿತಿಯನ್ನು ಶೇಕಡಾ 20ರಿಂದ 50ಕ್ಕೆ ಹೆಚ್ಚಿಸಿದೆ.ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕುವ ಮೋದಿ ಸರಕಾರದ ಉಪಕ್ರಮಗಳು ಪ್ರತಿಯೊಬ್ಬ ಭಾರತೀಯನ ಜೀವನವನ್ನು ಸುಧಾರಿ ಸುವ ಪ್ರಧಾನಿಯವರ ಘನ ಉದ್ದೇಶದ ಭಾಗವಾಗಿದೆ.
ವ್ಯಾಪಾರವು ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಹಂಚಿಕೆಯ ಸಮೃದ್ಧಿಯ ಪ್ರಬಲ ಸಾಧನವಾಗಿದೆ ಎಂಬುದನ್ನು ಒಮಾನ್ ಜೊತೆಗಿನ ಒಪ್ಪಂದವು ನೆನಪಿಸುತ್ತದೆ. ಛಿದ್ರಗೊಂಡ ಮತ್ತು ರಕ್ಷಣಾತ್ಮಕ ಜಗತ್ತಿನಲ್ಲಿ ಹೊಸ, ಆತ್ಮವಿಶ್ವಾಸದ ಭಾರತವು ಗೋಡೆಗಳ ಹಿಂದೆ ಅಡಗಿಕೊಳ್ಳುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಪ್ರಧಾನಿ ಮೋದಿ ರವಾನಿಸು ತ್ತಿದ್ದಾರೆ. ಇದು ಪಾಲುದಾರಿಕೆ, ಸ್ಪರ್ಧಾತ್ಮಕತೆ ಮತ್ತು ಜಾಗತಿಕ ತೊಡಗಿಸಿಕೊಳ್ಳುವಿಕೆಯ ಮೂಲಕ ಭಾರತ ಮತ್ತಷ್ಟು ಮೇಲೇರುತ್ತಿದೆ.
(ಲೇಖಕರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು)