ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Sadhanashree Column: ನವರಾತ್ರಿಯ ನವೋಲ್ಲಾಸಕ್ಕೆ ನವ ನಿಯಮಗಳು

ನವರಾತ್ರಿ ದಿನಗಳಲ್ಲಿ ಹಗಲು ವಿಶ್ರಾಂತಿ, ಸಂಜೆಯ ಭಜನೆ-ಸಂಗೀತ, ಬೆಳದಿಂಗಳಲ್ಲಿ ದೇವಾಲಯದ ವಿಹಾರ- ಇವೆಲ್ಲವೂ ಆಯುರ್ವೇದದ ಶರತ್ ಋತುಚರ್ಯೆಗೆ, ನೈಸರ್ಗಿಕ ನಿಯಮಗಳಿಗೆ ಅನುಗುಣ ವಾಗಿದ್ದವು. ಹೀಗಾಗಿ ನವರಾತ್ರಿ ಹಬ್ಬವು ದೇವಿಯ ಆರಾಧನೆಯಷ್ಟೇ ಆಗದೆ, ಪ್ರಕೃತಿಯ ಬದಲಾವಣೆಗೆ ತಕ್ಕಂತೆ ಜೀವನವನ್ನು ಹೊಂದಿಸಿಕೊಳ್ಳುವ ಸಾಂಪ್ರದಾಯಿಕ ಶ್ರೇಷ್ಠ ಮಾರ್ಗ ವಾಗಿತ್ತು.

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ನವರಾತ್ರಿಯಲ್ಲಿ ಸಮತೋಲನವೇ ಸಾಧನೆ- ಶರತ್ ಋತು ನಮಗೆ ನೀಡುವ ಒಂದು ಸ್ಮರಣೆ! ಪ್ರಕೃತಿಯ ಕಾಲಚಕ್ರದಲ್ಲಿ ಬದಲಾವಣೆ ಶಾಶ್ವತ. ದೇಹದಲ್ಲಿ ಪಿತ್ತದ ಏರುಪೇರುಗಳಂತೆ ಜೀವನದಲ್ಲಿಯೂ ಸಮತೋಲನ ಕಳೆದುಹೋಗುವುದು ಸಹಜ. ಆದರೆ ಪ್ರಜ್ಞಾಪೂರ್ವಕ ವಾಗಿ ಜೀವನ ವನ್ನು ಹೊಂದಿಸಿಕೊಂಡಾಗ, ಆಹಾರ-ವಿಹಾರದಲ್ಲಿ ನಿಯಮಗಳನ್ನು ಪಾಲಿಸಿದಾಗ, ಹೊರಗಿನ ಪ್ರಕೃತಿಯ ಶಕ್ತಿಯು ಒಳಗಿನ ಆತ್ಮಶಕ್ತಿಯೊಂದಿಗೆ ಸಾಥ್ ನೀಡುತ್ತದೆ. ನವರಾತ್ರಿಯು ಕೇವಲ ದೇವಿಯ ಆರಾಧನೆಯ ಹಬ್ಬವಾಗದೆ, ಪ್ರಕೃತಿಯ ನಿಯಮಗಳಿಗೆ ತಕ್ಕಂತೆ ಬದುಕುವ ಕಲೆಯನ್ನು ನೆನಪಿಸುವ ಪಾಠವಾಗಿದೆ.

ಹಿಂದಿನ ದಿನಗಳಲ್ಲಿ ನವರಾತ್ರಿಯು ಕೇವಲ ಹಬ್ಬವಾಗಿರದೆ, ಋತುಚರ್ಯೆಯೊಂದಿಗೆ ಒಂದಾಗಿರುವ ಆಧ್ಯಾತ್ಮಿಕ ಅನುಭವವಾಗಿತ್ತು. ಮಳೆಗಾಲ ಸಂಪನ್ನಗೊಂಡು ಶರತ್ ಋತು ಪ್ರವೇಶಿಸುವ ಈ ಅವಧಿಯಲ್ಲಿ ಮನೆಗಳಲ್ಲಿ ಬೆಳಗಿನ ಸಮಯದ ಹೂವು-ಹಣ್ಣುಗಳಿಂದ ದೇವಿಯ ಆರಾಧನೆ ನಡೆಯುತ್ತಿತ್ತು.

ಸಾತ್ವಿಕ ಅಡುಗೆಗಳು- ಅಂದರೆ, ಬೇಳೆ, ತರಕಾರಿ, ಸಿಹಿ-ಕಹಿ ರುಚಿಗಳ ಹದವಾದ ಮಿಶ್ರಣವನ್ನು ಅತಿಥಿಗಳಿಗೆ ಅರ್ಪಿಸಲಾಗುತ್ತಿತ್ತು. ಉಪವಾಸ ಮತ್ತು ನಿಯಮಿತ ಆಹಾರ ಕ್ರಮಗಳು ಪಿತ್ತ ಶಮನಕ್ಕೆ ಅನುಗುಣವಾಗಿದ್ದು, ದೇಹ-ಮನಸ್ಸನ್ನು ಶುದ್ಧಗೊಳಿಸುತ್ತಿದ್ದವು. ಸಾಂಪ್ರದಾಯಿಕವಾಗಿ ಗೃಹಿಣಿಯರು ಮತ್ತು ಮಕ್ಕಳು ಗೊಂಬೆ ಹಬ್ಬದ ಸಂತಸದಲ್ಲಿ ತಲ್ಲೀನರಾಗಿದ್ದರೆ, ಪುರುಷರು ವ್ರತ-ಪಾರಾಯಣಗಳಲ್ಲಿ ತೊಡಗುತ್ತಿದ್ದರು.

ನವರಾತ್ರಿ ದಿನಗಳಲ್ಲಿ ಹಗಲು ವಿಶ್ರಾಂತಿ, ಸಂಜೆಯ ಭಜನೆ-ಸಂಗೀತ, ಬೆಳದಿಂಗಳಲ್ಲಿ ದೇವಾಲಯದ ವಿಹಾರ- ಇವೆಲ್ಲವೂ ಆಯುರ್ವೇದದ ಶರತ್ ಋತುಚರ್ಯೆಗೆ, ನೈಸರ್ಗಿಕ ನಿಯಮಗಳಿಗೆ ಅನುಗುಣ ವಾಗಿದ್ದವು. ಹೀಗಾಗಿ ನವರಾತ್ರಿ ಹಬ್ಬವು ದೇವಿಯ ಆರಾಧನೆಯಷ್ಟೇ ಆಗದೆ, ಪ್ರಕೃತಿಯ ಬದಲಾವಣೆಗೆ ತಕ್ಕಂತೆ ಜೀವನವನ್ನು ಹೊಂದಿಸಿಕೊಳ್ಳುವ ಸಾಂಪ್ರದಾಯಿಕ ಶ್ರೇಷ್ಠ ಮಾರ್ಗ ವಾಗಿತ್ತು. ಈಗ ಅವುಗಳನ್ನು ನಮ್ಮ ಜೀವನದಲ್ಲಿ ಮತ್ತೆ ಪ್ರಾರಂಭಿಸುವ ಸಮಯ ಬಂದಿದೆ. ಬನ್ನಿ ಈ ನವರಾತ್ರಿಯ ಅರ್ಥಪೂರ್ಣ ಆಚರಣೆಯ ಬಗ್ಗೆ ಸ್ವಲ್ಪ ವಿಚಾರ ಮಾಡೋಣ.

ಇದನ್ನೂ ಓದಿ: Dr Sadhanashree Column: ಕನಸು ಕಾಣಲು ಕಾರಣ: ಆಯುರ್ವೇದದ ಕಣ್ಣುಗಳಲ್ಲಿ

೧. ಶರತ್ ಋತುವಿನ ಪರಿಚಯ- ಬಾಹ್ಯ ಬದಲಾವಣೆಗಳು ಆಂತರಿಕ ಬದಲಾವಣೆ ಯನ್ನುಂಟು ಮಾಡುತ್ತವೆ. ಗಮನಿಸಿ!: ಪ್ರಕೃತಿ ಎಂದಿಗೂ ಸ್ಥಿರವಾಗಿರುವುದಿಲ್ಲ; ಅದು ಕ್ಷಣ ಕ್ಷಣಕ್ಕೂ ಬದಲಾಗುತ್ತದೆ. ಆ ಬದಲಾವಣೆಯು ನಮ್ಮ ದೇಹ-ಮನಸ್ಸಿನ ಮೇಲೂ ಪ್ರತಿಫಲಿಸುತ್ತದೆ.

ಆಯುರ್ವೇದವು ಈ ನಿಜವನ್ನು ಅರಿತು, ಸಂವತ್ಸರವನ್ನು ಆರು ಋತುಗಳಲ್ಲಿ ವಿಭಾಗಿಸಿ ಪ್ರತಿ ಯೊಂದು ಋತುವಿಗೆ ತಕ್ಕಂತೆ ಜೀವನ ಶೈಲಿಯನ್ನು ರೂಪಿಸುವಂತೆ ಸೂಚಿಸಿದೆ. ಮಳೆಗಾಲದ ನಂತರ ಬರುವ ಶರತ್ ಋತು (ಆಶ್ವೀಜ ಮತ್ತು ಕಾರ್ತಿಕ ಮಾಸಗಳನ್ನು ಒಳಗೊಂಡ ಅವಧಿ) ಸಮಶೀತೋಷ್ಣ ಕಾಲವೆಂದು ಗುರುತಿಸಲ್ಪಟ್ಟಿದೆ. ಈ ಸಮಯದಲ್ಲಿ ಆಕಾಶವು ಶುಭ್ರವಾಗಿದ್ದು, ಸೂರ್ಯನ ಕಿರಣಗಳು ತೀಕ್ಷ್ಣವಾಗುತ್ತವೆ. ಮೋಡಗಳು ತೇಲಿತೇಲಿ ದೂರ ಸರಿದಂತೆ ಕಾಣುತ್ತವೆ. ದೇಹದ ಬಲವು ಈ ಅವಧಿಯಲ್ಲಿ ಮಧ್ಯಮ ಮಟ್ಟದಲ್ಲಿರುತ್ತದೆ- ಮಳೆಗಾಲದಂತೆ ದುರ್ಬಲವಾ ಗಿಯೂ ಇಲ್ಲದೆ, ಚಳಿಗಾಲದಂತೆ ಅಧಿಕವಾಗಿಯೂ ಇರುವುದಿಲ್ಲ.

೨. ಶರತ್ ಕಾಲದ ದೇಹದ ಸ್ಥಿತಿ- ಶರತ್ ಕಾಲವು ಪಿತ್ತ ಪ್ರಕೋಪವಾದ ಕಾಲವೂ ಹೌದು!: ಪ್ರತಿ ಋತುವು ದೇಹದೊಳಗಿನ ದೋಷಗಳ ಮೇಲೆ ವಿಶೇಷ ಪ್ರಭಾವ ಬೀರುತ್ತದೆ. ಮಳೆಗಾಲದಲ್ಲಿ ತೇವ ಮತ್ತು ಆರ್ದ್ರತೆ ಹೆಚ್ಚಾಗುವುದರಿಂದ ಪಿತ್ತ ದೋಷವು ದೇಹದಲ್ಲಿ ನಿಧಾನವಾಗಿ ಶೇಖರಣೆ ಯಾಗುತ್ತದೆ. ಆದರೆ ಶರತ್ ಕಾಲದಲ್ಲಿ ಸೂರ್ಯನ ತೀಕ್ಷ್ಣ ಕಿರಣಗಳು ಪಿತ್ತವನ್ನು ಉದ್ದೀಪನ ಗೊಳಿಸುತ್ತವೆ. ಇದರಿಂದ ಪಿತ್ತ ಪ್ರಕೋಪವು ಉಂಟಾಗಿ ಅನೇಕ ತೊಂದರೆಗಳನ್ನು ತರಬಹುದು.

ಉದಾಹರಣೆಗೆ ಜ್ವರ, ಹುಳಿತೇಗು, ಕಣ್ಣು ಕೆಂಪಾಗುವುದು, ಅರ್ಧ ತಲೆನೋವು, ಚರ್ಮದ ಉರಿ, ಗಂಟುಗಳ ಊತ, ಕಿಡಿಕಿಡಿ ಸ್ವಭಾವ ಇತ್ಯಾದಿ. ಹೀಗಾಗಿ ಈ ಕಾಲದಲ್ಲಿ ದೇಹವನ್ನು ಸಮತೋಲನ ದಲ್ಲಿಡಲು ವಿಶೇಷ ಆಹಾರ-ವಿಹಾರಗಳು ಅತ್ಯವಶ್ಯಕ.

Dr Sadhanashree 2009

೩. ಋತುಚರ್ಯೆಯ ಮಹತ್ವ- ಪ್ರಕೃತಿ ಬದಲಾದಂತೆ ನಮ್ಮ ಜೀವನಶೈಲಿಯ ಬದಲಾವಣೆಯೂ ಅಗತ್ಯ!: ಆಯುರ್ವೇದವು ಪ್ರತಿಯೊಂದು ಋತುವಿನೊಂದಿಗೆ ಹೊಂದಿ ಕೊಳ್ಳುವಂಥ ಜೀವನ ವಿಧಾನವನ್ನು ರೂಪಿಸಲು ಸೂಚಿಸುತ್ತದೆ. ಪ್ರಕೃತಿ ಬದಲಾಗುವಾಗ ಜೀವನ ಶೈಲಿಯ ಬದಲಾವಣೆಯೂ ಅಗತ್ಯ. ಇಂದಿನ ಕಾಲದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದು ಬರುವ ಫಿಟ್ನೆಸ್ ಚಾಲೆಂಜ್‌ಗಳು ಅಥವಾ ಟ್ರೆಂಡ್ ಡಯಟ್‌ಗಳು ಆಕರ್ಷಕವಾಗಿ ಕಾಣಬಹುದು, ಆದರೆ ಅವು ಪ್ರತಿಯೊಬ್ಬರಿಗೂ ಸರಿಹೊಂದುವುದಿಲ್ಲ.

ಉದಾಹರಣೆಗೆ, ಮಳೆಗಾಲದಲ್ಲಿ ಜೇನುತುಪ್ಪ ಸೇವನೆ ಹಿತಕರ, ಆದರೆ ಅದೇ ಶರತ್ ಕಾಲದಲ್ಲಿ ಅದು ಪಿತ್ತ ಹೆಚ್ಚಿಸುವುದರಿಂದ ಹಾನಿಕಾರಕ. ಹಾಗೆಯೇ, ಚಳಿಗಾಲದಲ್ಲಿ ತೀವ್ರ ವ್ಯಾಯಾಮ ಒಳ್ಳೆಯ ದಾದರೆ, ಬೇಸಗೆಯಲ್ಲಿ ಅದು ಅಪಾಯಕಾರಿ. ಹೀಗಾಗಿ ಯಾವುದನ್ನು ತಿನ್ನಬೇಕು, ಯಾವುದನ್ನು ತಪ್ಪಿಸಬೇಕು, ಹೇಗೆ ನಡೆಯಬೇಕು ಎಂಬುದರಲ್ಲಿ ಆಯುರ್ವೇದದ ಋತುಚರ್ಯೆಯು ನಮ್ಮ ನಿಜವಾದ ಮಾರ್ಗಸೂಚಿ.

೪. ಶರತ್ ಋತುವಿನ ಶಮನಚರ್ಯೆ- ಅಧರಕ್ಕೆ ಕಹಿ, ಉದರಕ್ಕೆ ಸಿಹಿ!: ಶರತ್ ಕಾಲದಲ್ಲಿ ಕಹಿ, ಒಗರು ಮತ್ತು ಸಿಹಿ ರಸಗಳನ್ನು ಪ್ರಧಾನವಾಗಿ ಸೇವಿಸಬೇಕು. ಇವು ಪಿತ್ತದ ಉಗ್ರತೆಯನ್ನು ಕಡಿಮೆ ಮಾಡಿ ದೇಹಕ್ಕೆ ಶೀತಲತೆಯನ್ನು ನೀಡುತ್ತವೆ. ಸುಲಭವಾಗಿ ಜೀರ್ಣವಾಗುವ, ಹಗುರವಾದ ಆಹಾರವೇ ಶ್ರೇಷ್ಠ. ಹಿಂದಿನ ವರ್ಷದ ಧಾನ್ಯಗಳು- ಅಂದರೆ ಅಕ್ಕಿ, ಗೋಧಿ, ಜೋಳ, ರಾಗಿ ಇವು ಗಳನ್ನು ಅನ್ನ, ರವೆ, ಹಿಟ್ಟು ಮುಂತಾದ ರೂಪದಲ್ಲಿ ಬಳಸುವುದು ಒಳಿತು. ಹಾಲು ಉತ್ಪನ್ನ ಗಳು, ತುಪ್ಪ ಮತ್ತು ಬೆಣ್ಣೆ ದೇಹಕ್ಕೆ ಶಕ್ತಿ ನೀಡಿ ಜೀರ್ಣಶಕ್ತಿಯನ್ನು ಬಲಪಡಿಸುತ್ತವೆ.

೫. ತಪ್ಪಿಸಬೇಕಾದ ಪದಾರ್ಥಗಳು- ಇವುಗಳು ಮಾನಸಿಕ ನೆಮ್ಮದಿಯನ್ನೂ ಹಾಳು ಮಾಡುತ್ತವೆ!: ಪಿತ್ತವನ್ನು ಕೆರಳಿಸುವ ಕೆಲವು ಪದಾರ್ಥಗಳನ್ನು ಈ ಕಾಲದಲ್ಲಿ ದೂರವಿರಿಸುವುದು ಮುಖ್ಯ. ಅವಲಕ್ಕಿ ಪದಾರ್ಥಗಳು: ಹುಳಿ ಅವಲಕ್ಕಿ, ಗೊಜ್ಜು ಅವಲಕ್ಕಿ, ಮೊಸರು-ಅವಲಕ್ಕಿ ಮುಂತಾದವು.

ಹಾಲಿನ ಉತ್ಪನ್ನಗಳು: ಹುಳಿ ಮಜ್ಜಿಗೆ, ಮೊಸರು ಮತ್ತು ಚೀಸ್ ಇವುಗಳು ದೇಹದಲ್ಲಿ ಉಷ್ಣತೆ ಹೆಚ್ಚಿಸಿ ರಕ್ತವನ್ನು ಹಾಳುಮಾಡುತ್ತದೆ.

ಮೊಳಕೆ ಕಾಳುಗಳು ಮತ್ತು ಕೆಲ ದ್ವಿದಳ ಧಾನ್ಯಗಳು: ಅವರೆ, ಉದ್ದು, ಬಟಾಣಿ, ರಾಜ್‌ಮಾ,

ಸೋಯಾಬೀನ್.

ಹಳೆಯದಾದ ದೋಸೆ/ಇಡ್ಲಿ ಹಿಟ್ಟು: ಫ್ರಿಜ್‌ನಲ್ಲಿ ದಿನಗಳ ಕಾಲ ಇಡುವ ಹಿಟ್ಟುಗಳು ಪಿತ್ತಕಾರಕ.

ಹೆಚ್ಚಿನ ಮಸಾಲೆಗಳು: ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಮೆಣಸು, ಚಕ್ಕೆ.

ಹುಳಿ ಮತ್ತು ಉಪ್ಪಿನ ಅಧಿಕ ಬಳಕೆ: ಟೊಮೇಟೊ, ಹೊಸ ಹುಣಸೆ, ಅತಿಯಾದ ಉಪ್ಪು ಪಿತ್ತವನ್ನು ಕೆರಳಿಸುತ್ತವೆ. ಉಪ್ಪಿನಕಾಯಿ, ಬಾಳಕ, ಹುಳಿಗೊಜ್ಜುಗಳು ವರ್ಜ್ಯ.

ಮಾಂಸಾಹಾರ: ಮೀನು ಮತ್ತು ಕೋಳಿ ಮಾಂಸವು ರಕ್ತ ಪಿತ್ತ ದೂಷಕ.

ಇವು ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸಿ, ಪಿತ್ತದ ಅಸಮತೋಲನವನ್ನು ಉಂಟುಮಾಡಿ, ಮಾನಸಿಕ ನೆಮ್ಮದಿಗೂ ಧಕ್ಕೆ ತರಬಲ್ಲವು.

೬. ಹಿತಕರ ಆಹಾರ- ಆಹಾರವೇ ಔಷಧವಾದರೆ!: ಶರತ್ ಕಾಲದಲ್ಲಿ ಹಿತಕರವಾದ ಆಹಾರ ಗಳನ್ನು ಅಳವಡಿಸಿಕೊಂಡರೆ ದೇಹ-ಮನಸ್ಸು ಸಮತೋಲನದಲ್ಲಿರುತ್ತವೆ.

ಧಾನ್ಯಗಳು: ಅಕ್ಕಿ ಅಥವಾ ರಾಗಿ ಹಾಲ್‌ಬಾಯಿ, ಹಲ್ವಾ, ಹೆಸರುಬೇಳೆ ಪೊಂಗಲ್, ಸಜ್ಜಿಗೆ.

ದ್ವಿದಳ ಧಾನ್ಯಗಳು: ಹೆಸರುಬೇಳೆ, ತೊಗರಿಬೇಳೆ, ಚೆನ್ನಂಗಿಬೇಳೆ, ಮೆಂತ್ಯೆ.

ತರಕಾರಿಗಳು: ಹೀರೆಕಾಯಿ, ಪಡವಲಕಾಯಿ, ಹಾಗಲಕಾಯಿ, ಬೂದುಗುಂಬಳ, ಬಾಳೆಕಾಯಿ,

ಹರಿವೆ, ಪಾಲಕ್, ಮೆಂತ್ಯೆ, ಕೊತ್ತಂಬರಿ, ಬಸಳೆ.

ಹಣ್ಣುಗಳು: ದಾಳಿಂಬೆ, ಸಪೋಟ, ಸೀತಾಫಲ, ಅಂಜೂರ, ಖರ್ಜೂರ.

ಹಾಲಿನ ಉತ್ಪನ್ನಗಳು: ಹಾಲು, ಬೆಣ್ಣೆ, ತುಪ್ಪ.

ತಂಬುಳಿ ಮತ್ತು ಸಾರುಗಳು: ಮೆಂತ್ಯ ತಂಬುಳಿ, ಹೀರೆಕಾಯಿ ತಂಬುಳಿ, ನೆಲ್ಲಿಕಾಯಿ ಸಾರು, ದಾಳಿಂಬೆ ಸಾರು.

ಇವು ದೇಹವನ್ನು ತಂಪಾಗಿರಿಸಿ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತವೆ.

೭. ಅಡುಗೆಯ ನಿಯಮಗಳು- ಸ್ವಾದ ಮತ್ತು ಸ್ವಾಸ್ಥ್ಯದ ಸಾಧನೆಗೆ!: ಹಬ್ಬದ ಸಮಯದಲ್ಲಿ ಈ ಪಾಲನೆ ಅಗತ್ಯ! ತುಪ್ಪ-ಬೆಣ್ಣೆಯಿಂದ ಮಾಡಿದ ಕರಿದ ತಿಂಡಿಗಳು ಪಿತ್ತವನ್ನು ಕೆರಳಿಸುವುದಿಲ್ಲ. ಜತೆಗೆ ಫಿಲ್ಟರ್ ಎಣ್ಣೆ ಸೇರಿಸಿಯೂ ಮಾಡಬಹುದು. ಆದರೆ ಕರಿದ ತಿಂಡಿಗಳನ್ನು ಹಲವು ದಿನಗಳ ಕಾಲ ಸಂಗ್ರಹಿಸಿ ತಿನ್ನುವುದು ರಕ್ತವನ್ನು ಹಾಳುಮಾಡುತ್ತದೆ. ‘ತಾಜಾ ಅಡುಗೆ, ತಾಜಾ ಸೇವನೆ’ ಎಂಬುದು ಈ ಕಾಲದ ಪ್ರಮುಖ ಸೂತ್ರ. ಅಡುಗೆ ವೇಳೆ ಹೆಚ್ಚು ಎಣ್ಣೆ, ಹೆಚ್ಚು ಹುಳಿ, ಹೆಚ್ಚು ಖಾರದ ಬಳಕೆಯನ್ನು ನಿವಾರಿಸಬೇಕು.

೮. ಪಾನೀಯಕ್ಕೊಂದು ಸಂಸ್ಕಾರ- ಮನಸ್ಸಿಗಷ್ಟೇ ಅಲ್ಲದೆ ಕುಡಿಯುವ ನೀರಿಗೂ ವಿಶೇಷ ಸಂಸ್ಕಾರ: ಶರತ್ ಕಾಲದಲ್ಲಿ ಕುಡಿಯುವ ನೀರಿಗೂ ವಿಶೇಷ ಸಂಸ್ಕಾರ ಅಗತ್ಯ. ಕೊತ್ತಂಬರಿ ಬೀಜದ ಪುಡಿ ಅಥವಾ ಒಣಶುಂಠಿ ಹಾಕಿ ನೀರನ್ನು ಕುದಿಸಿ ದಿನಪೂರ್ತಿ ಕುಡಿಯುವುದು ಉತ್ತಮ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಿ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಜತೆಗೆ ಒಣದ್ರಾಕ್ಷಿ ನೀರು, ಲಾವಂಚ ನೀರು, ಭದ್ರಮುಷ್ಟಿಯ ನೀರು, ಎಳನೀರು ಇವುಗಳೂ ಶ್ರೇಷ್ಠ ಪಾನೀಯಗಳು. ಆದರೆ ನೀರನ್ನು ಬಾಯಾರಿಕೆಯಾದಾಗ ಮಾತ್ರ ಕುಡಿಯಬೇಕು ಮತ್ತು ಊಟದ ಜತೆಗೆ ಚಿಕ್ಕ ಗುಟುಕುಗಳಲ್ಲಿ ಮಾತ್ರ ಸೇವಿಸಬೇಕು.

೯. ನಿದ್ರೆ ಮತ್ತು ವಿಹಾರ- ಕಾಲಕ್ಕೆ ತಕ್ಕಂತೆ ನಡೆಯುವ ಪರಿ!: ಶರತ್ ಕಾಲದಲ್ಲಿ ಹಗಲು ನಿದ್ದೆ, ರಾತ್ರಿ ಜಾಗರಣೆ, ಅತಿವ್ಯಾಯಾಮ, ಅತಿ ಮೈಥುನ, ಸಿಟ್ಟು-ಕೋಪ-ದ್ವೇಷ-ಹೊಟ್ಟೆಕಿಚ್ಚು ಇವುಗಳನ್ನು ತ್ಯಜಿಸಬೇಕು. ಪ್ರತಿದಿನ ಕೊಬ್ಬರಿಎಣ್ಣೆಯಿಂದ ಅಭ್ಯಂಗಸ್ನಾನ ಮಾಡುವುದು ಒಳಿತು. ಜತೆಗೆ ಬೆಳದಿಂಗಳ ಬೆಳಕಿನಲ್ಲಿ ರಾತ್ರಿ ವಿಹಾರ ಸಹ ಶ್ರೇಷ್ಠ. ಇದು ದೇಹ-ಮನಸ್ಸಿಗೆ ವಿಶ್ರಾಂತಿ ನೀಡಿ ಪಿತ್ತವನ್ನು ಶಮನಗೊಳಿಸುತ್ತದೆ. ಮಳೆಗಾಲದ ಮೋಡಗಳು ವಿಲೀನವಾದ ಬಳಿಕ ಶರತ್ ಋತುವಿನಲ್ಲಿ ಆಕಾಶವು ಸ್ವಚ್ಛವಾಗಿ ಕಂಗೊಳಿಸುತ್ತದೆ. ಈ ಸಮಯದಲ್ಲಿ ಚಂದ್ರನ ತಂಪಾದ ಕಿರಣಗಳು ವಿಶಿಷ್ಟ ಮಹತ್ವ ಹೊಂದಿವೆ.

ಆಯುರ್ವೇದದ ಪ್ರಕಾರ ಶರತ್ ಕಾಲವು ಪಿತ್ತ ಪ್ರಕೋಪಕ, ಆದ್ದರಿಂದ ಬೆಳದಿಂಗಳ ತಂಪುಬೆಳಕು ದೇಹದ ಉಷ್ಣತೆಯನ್ನು ಕಡಿಮೆಮಾಡಿ, ಮನಸ್ಸಿಗೆ ಶಾಂತಿ ನೀಡುತ್ತದೆ. ಹಿಂದಿನ ಕಾಲದಲ್ಲಿ ಜನರು ಚಂದ್ರದರ್ಶನ ಮಾಡಿ, ಬೆಳದಿಂಗಳಲ್ಲಿ ವಿಹರಿಸುವುದು, ಭೋಜನ ಸವಿಯುವುದು, ಭಜನೆ-ಸಂಗೀತಗಳಲ್ಲಿ ತೊಡಗುವುದು ಮಾಡುತ್ತಿದ್ದರು.

ಇವೆಲ್ಲವೂ ಶರತ್ ಋತುಚರ್ಯದ ಭಾಗವಾಗಿತ್ತು. ಚಂದ್ರಪ್ರಕಾಶವು ಶುದ್ಧತೆ, ನೆಮ್ಮದಿ, ಸಮತೋ ಲನದ ಸಂಕೇತವಾಗಿದ್ದು, ನವರಾತ್ರಿ ಮತ್ತು ಶರತ್ ಪೌರ್ಣಿಮೆಯ ಉತ್ಸವಗಳು ಈ ಚಂದ್ರಶೋಭೆ ಯೊಂದಿಗೆ ಆಳವಾದ ಸಂಬಂಧ ಹೊಂದಿದ್ದವು. ಹೀಗಾಗಿ ಬೆಳದಿಂಗಳು ದೇಹ-ಮನಸ್ಸಿಗೆ ಅಮೃತ ಸಮಾನ !

ನವರಾತ್ರಿಯಲ್ಲಿ ಸಮತೋಲನವೇ ಸಾಧನೆ- ಶರತ್ ಋತು ನಮಗೆ ನೀಡುವ ಒಂದು ಸ್ಮರಣೆ!

ಪ್ರಕೃತಿಯ ಕಾಲಚಕ್ರದಲ್ಲಿ ಬದಲಾವಣೆ ಶಾಶ್ವತ. ದೇಹದಲ್ಲಿ ಪಿತ್ತದ ಏರುಪೇರುಗಳಂತೆ ಜೀವನದ ಲ್ಲಿಯೂ ಸಮತೋಲನ ಕಳೆದುಹೋಗುವುದು ಸಹಜ. ಆದರೆ ಪ್ರಜ್ಞಾಪೂರ್ವಕವಾಗಿ ಜೀವನವನ್ನು ಹೊಂದಿಸಿಕೊಂಡಾಗ, ಆಹಾರ-ವಿಹಾರದಲ್ಲಿ ನಿಯಮಗಳನ್ನು ಪಾಲಿಸಿದಾಗ, ಹೊರಗಿನ ಪ್ರಕೃತಿಯ ಶಕ್ತಿಯು ಒಳಗಿನ ಆತ್ಮಶಕ್ತಿಯೊಂದಿಗೆ ಸಾಥ್ ನೀಡುತ್ತದೆ.

ನವರಾತ್ರಿಯು ಕೇವಲ ದೇವಿಯ ಆರಾಧನೆಯ ಹಬ್ಬವಾಗದೆ, ಪ್ರಕೃತಿಯ ನಿಯಮಗಳಿಗೆ ತಕ್ಕಂತೆ ಬದುಕುವ ಕಲೆಯನ್ನು ನೆನಪಿಸುವ ಪಾಠವಾಗಿದೆ. ನವ ನಿಯಮಗಳನ್ನು ಪಾಲಿಸುವುದೇ ನಿಜವಾದ ನವೋಸ, ಏಕೆಂದರೆ ಆರೋಗ್ಯವೇ ಭಕ್ತಿಯ ಮೊದಲ ಹಂತ ಮತ್ತು ಸಮತೋಲನವೇ ನಿಜವಾದ ಆಧ್ಯಾತ್ಮಿಕ ಸಾಧನೆ. ಈ ಎರಡರ ನವಿರಾದ ಮಿಳಿತವಾಗಲಿ ಈ ನವರಾತ್ರಿ!

ಡಾ. ಸಾಧನಾಶ್ರೀ ಪಿ,

View all posts by this author