ಸಂಪಾದಕರ ಸದ್ಯಶೋಧನೆ
‘ದಿ ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯನ್ನು ‘ಓಲ್ಡ್ ಲೇಡಿ ಆಫ್ ಬೋರಿಬಂದರ್’ ಎಂದು ಕರೆಯುವುದುಂಟು. ಹಾಗೆಯೇ ‘ದಿ ಹಿಂದೂ’ ಪತ್ರಿಕೆಯನ್ನು ‘ಮೌಂಟ್ ರೋಡಿನ ಮಹಾ ವಿಷ್ಣು’ ಎಂದು ಹೇಳುವುದುಂಟು. ಇದಕ್ಕೆ ಅವುಗಳ ಭೌಗೋಳಿಕ ನೆಲೆ ಮತ್ತು ಕಾರ್ಯ ವೈಖರಿ ಕಾರಣವಾಗಿರಬಹುದು.
‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯ ಪ್ರಧಾನ ಕಚೇರಿಯು ಮುಂಬೈನ ಸಿ.ಎಸ್.ಟಿ (ಛತ್ರಪತಿ ಶಿವಾಜಿ ಟರ್ಮಿನಲ್) ರೈಲು ನಿಲ್ದಾಣದ ಎದುರಿಗಿದೆ. ಈ ಪ್ರದೇಶವನ್ನು ಹಿಂದೆ ‘ಬೋರಿಬಂದರ್’ ಎಂದು ಕರೆಯಲಾಗುತ್ತಿತ್ತು. ಪತ್ರಿಕೆಯು ದಶಕಗಳಿಂದ ಇದೇ ಕಟ್ಟಡ ದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ‘ಬೋರಿಬಂದರ್’ ಎಂಬ ಹೆಸರು ಅಂಟಿ ಕೊಂಡಿತು.
ಲಂಡನ್‌ನ ಪ್ರಸಿದ್ಧ ‘ಟೈಮ್ಸ್’ ಪತ್ರಿಕೆಯನ್ನು ‘ದಿ ಓಲ್ಡ್ ಲೇಡಿ ಆಫ್ ಪ್ರಿಂಟಿಂಗ್ ಹೌಸ್ ಸ್ಕ್ವೇರ್’ ಎಂದು ಕರೆಯಲಾಗುತ್ತಿತ್ತು. ಅದೇ ಮಾದರಿಯಲ್ಲಿ, ಭಾರತದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಪತ್ರಿಕೆಯಾದ ಟೈಮ್ಸ್ ಆಫ್ ಇಂಡಿಯಾವನ್ನು ‘ಓಲ್ಡ್ ಲೇಡಿ’ ಎಂದು ಕರೆಯಲು ಆರಂಭಿಸಲಾಯಿತು.
ಇದನ್ನೂ ಓದಿ:Vishweshwar Bhat Column: ಟೆನಿಸ್ ಆಟಗಾರರು ಏಕೆ ಕೂಗುತ್ತಾರೆ ?
ಅದು ಬೋರಿಬಂದರ್ ಪ್ರದೇಶದಲ್ಲಿ ಇದ್ದುದರಿಂದ ‘ಓಲ್ಡ್ ಲೇಡಿ ಆಫ್ ಬೋರಿಬಂದರ್’ ಆಯಿತು. 1838ರಲ್ಲಿ ಆರಂಭವಾದ ಈ ಪತ್ರಿಕೆ ಅದು ಕಾಪಾಡಿಕೊಂಡು ಬಂದಿರುವ ಬ್ರಿಟಿಷ್ ಮಾದರಿಯ ಪತ್ರಿಕೋದ್ಯಮದ ಶಿಸ್ತನ್ನು ಸೂಚಿಸುತ್ತದೆ. ಒಬ್ಬ ಹಿರಿಯ ಮಹಿಳೆ ಯು ಕುಟುಂಬದಲ್ಲಿ ಹೇಗೆ ಗೌರವಾನ್ವಿತಳೋ, ಹಾಗೆಯೇ ಭಾರತೀಯ ಪತ್ರಿಕೋದ್ಯಮದಲ್ಲಿ ಈ ಪತ್ರಿಕೆ ‘ಹಿರಿಯಕ್ಕ’ನ ಸ್ಥಾನದಲ್ಲಿದೆ ಎಂಬುದು ಇದರ ಅರ್ಥ.
‘ದಿ ಹಿಂದೂ’ ಪತ್ರಿಕೆಗೆ ಮೌಂಟ್ ರೋಡಿನ ಮಹಾವಿಷ್ಣು (The Maha Vishnu of Mount Road) ಹೆಸರು ಅತ್ಯಂತ ವಿಶಿಷ್ಟವಾಗಿದ್ದು, ಇದರ ಹಿಂದೆ ದಕ್ಷಿಣ ಭಾರತದ ಸಾಂಸ್ಕೃತಿಕ ಪ್ರಭಾವ ಮತ್ತು ಪತ್ರಿಕೆಯ ಸಿದ್ಧಾಂತಗಳಿವೆ. ಈ ಹೆಸರನ್ನು ಮೊದಲು ಬಳಸಿದ್ದು ಪ್ರಸಿದ್ಧ ಪತ್ರಕರ್ತ ಮತ್ತು ಲೇಖಕ ಟಿ.ಜೆ.ಎಸ್. ಜಾರ್ಜ್. ಈ ‘ಮೌಂಟ್ ರೋಡ್ ಮಹಾವಿಷ್ಣು’ ಎಂಬ ಪದಪ್ರಯೋಗವನ್ನು ಮೊದಲು ಬಳಸಿದ್ದು ಖ್ಯಾತ ಪತ್ರಕರ್ತ ಪೋಥನ್ ಜೋಸೆಫ್ ಎಂದು ಕೆಲವರು ಹೇಳುತ್ತಾರೆ.
ಅವರು ತಮ್ಮ ಕಾಲದ ಅತ್ಯಂತ ಪ್ರಭಾವಿ ಪತ್ರಕರ್ತರಾಗಿದ್ದರು ಮತ್ತು ಅವರ ಹಾಸ್ಯ ಪ್ರಜ್ಞೆಗೆ ಬಹಳ ಪ್ರಸಿದ್ಧರಾಗಿದ್ದರು. ಅವರ ನಂತರ ಅಬೂ ಅಬ್ರಹಾಂ ಅವರು ಈ ಹೆಸರನ್ನು ತಮ್ಮ ವ್ಯಂಗ್ಯಚಿತ್ರಗಳಲ್ಲಿ ಮತ್ತು ಲೇಖನಗಳಲ್ಲಿ ಜನಪ್ರಿಯಗೊಳಿಸಿದರು ಎಂದೂ ಹೇಳುತ್ತಾರೆ.
‘ದಿ ಹಿಂದೂ’ ಪತ್ರಿಕೆಯ ಪ್ರಧಾನ ಕಚೇರಿಯು ಚೆನ್ನೈನ (ಮದ್ರಾಸ್) ಪ್ರಸಿದ್ಧ ಮೌಂಟ್ ರೋಡ್ (ಈಗಿನ ಅಣ್ಣಾ ಸಾಲೈ) ನಲ್ಲಿದೆ. ಹಾಗಾಗಿ ‘ಮೌಂಟ್ ರೋಡ್’ ಎಂಬುದು ಅದರ ಭೌಗೋಳಿಕ ಗುರುತು. ಹಿಂದೂ ಧರ್ಮದಲ್ಲಿ ಮಹಾವಿಷ್ಣುವು ವಿಶ್ವದ ‘ಪಾಲಕ’ ಮತ್ತು ‘ರಕ್ಷಕ’. ಅದೇ ರೀತಿ, ‘ದಿ ಹಿಂದೂ’ ಪತ್ರಿಕೆಯು ದಕ್ಷಿಣ ಭಾರತದ ಬೌದ್ಧಿಕ ಮತ್ತು ಸಾಂಸ್ಕೃ ತಿಕ ಮೌಲ್ಯಗಳ ರಕ್ಷಕನಂತೆ ಕಾರ್ಯನಿರ್ವಹಿಸುತ್ತಿದೆ ಎಂಬ ನಂಬಿಕೆಯಿದೆ.
ವಿಷ್ಣುವು ಹೇಗೆ ಶಾಂತ ಮತ್ತು ಗಂಭೀರನೋ, ಹಾಗೆಯೇ ಈ ಪತ್ರಿಕೆಯ ಭಾಷೆ, ವಿನ್ಯಾಸ ಮತ್ತು ಸುದ್ದಿಗಾರಿಕೆ ಅತ್ಯಂತ ಸೌಮ್ಯ ಹಾಗೂ ಗಂಭೀರ. ಇದು ಸದಾ ಸಂಪ್ರದಾಯಬದ್ಧ ಮತ್ತು ಬದಲಾವಣೆಗಳಿಗೆ ತಕ್ಷಣ ಮಣಿಯದ ‘ಸ್ಥಿತಪ್ರಜ್ಞ’ ಗುಣವನ್ನು ಹೊಂದಿರುವುದರಿಂದ ಇದಕ್ಕೆ ಈ ದೈವಿಕ ಹೋಲಿಕೆ ನೀಡಲಾಯಿತು.
ದಕ್ಷಿಣ ಭಾರತದ ಮನೆಗಳಲ್ಲಿ, ವಿಶೇಷವಾಗಿ ಬ್ರಾಹ್ಮಣ ಕುಟುಂಬಗಳಲ್ಲಿ ಬೆಳಗ್ಗೆ ಎದ್ದ ಕೂಡಲೇ ‘ದಿ ಹಿಂದೂ’ ಓದುವುದು ಒಂದು ಧಾರ್ಮಿಕ ವಿಧಿಯಷ್ಟೇ ಪವಿತ್ರವಾಗಿತ್ತು. ಪತ್ರಿಕೆಯ ಮಾಲೀಕರಾದ ಕಸ್ತೂರಿ ಕುಟುಂಬದ ಪ್ರಭಾವ ಮತ್ತು ಪತ್ರಿಕೆಯ ಘನತೆಯು ಅದಕ್ಕೆ ಈ ಅನ್ವರ್ಥ ನಾಮವನ್ನು ತಂದುಕೊಟ್ಟಿತು.
ಕಾಲ ಬದಲಾದಂತೆ ಪತ್ರಿಕೆಗಳ ವಿನ್ಯಾಸ ಮತ್ತು ಧೋರಣೆಗಳು ಬದಲಾಗಿವೆ. ‘ಟೈಮ್ಸ್ ಆಫ್ ಇಂಡಿಯಾ’ ಈಗ ಹೆಚ್ಚು ವರ್ಣರಂಜಿತ ಮತ್ತು ವಾಣಿಜ್ಯೀಕರಣಗೊಂಡಿದೆ, ಆದರೆ ‘ದಿ ಹಿಂದೂ’ ಇಂದಿಗೂ ತನ್ನ ಹಳೆಯ ಗಂಭೀರತೆಯನ್ನು ಉಳಿಸಿಕೊಂಡು ಬಂದಿದೆ. ಈ ಹೆಸರುಗಳು ಕೇವಲ ತಮಾಷೆಗಾಗಿ ಇಟ್ಟದ್ದಲ್ಲ; ಇವು ಭಾರತೀಯ ಪತ್ರಿಕೋದ್ಯಮದ ಎರಡು ಬಲಿಷ್ಠ ಸ್ತಂಭಗಳ ವ್ಯಕ್ತಿತ್ವವನ್ನು ಸಾರುವ ಬಿರುದುಗಳಾಗಿವೆ.
ಇಂದಿಗೂ ಹಳೆಯ ತಲೆಮಾರಿನ ಪತ್ರಕರ್ತರು ಈ ಪತ್ರಿಕೆಗಳನ್ನು ಉಲ್ಲೇಖಿಸುವಾಗ ಇದೇ ಹೆಸರನ್ನು ಬಳಸುತ್ತಾರೆ. ಇದೇ ರೀತಿ ಕೋಲ್ಕೊತಾದಿಂದ ಪ್ರಕಟವಾಗುವ, ಭಾರತದ ಅತ್ಯಂತ ಹಳೆಯ ಇಂಗ್ಲಿಷ್ ದೈನಿಕಗಳಲ್ಲಿ ಒಂದಾದ ‘ದಿ ಸ್ಟೇಟ್ಸ್‌ಮನ್’ ಪತ್ರಿಕೆಯನ್ನು ‘ದಿ ಓಲ್ಡ್ ಲೇಡಿ ಆಫ್ ಚೌರಿಂ’ ಇಂದು ಕರೆಯುವುದುಂಟು. ಕೋಲ್ಕತ್ತಾದ ಚೌರಿಂ ರಸ್ತೆಯಲ್ಲಿ ಈ ಪತ್ರಿಕೆಯ ಪ್ರಧಾನ ಕಚೇರಿ ಇರುವುದರಿಂದ ಈ ಹೆಸರು ಬಂದಿದೆ.