ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‌Roopa Gururaj Column: ತಾಯಂದಿರ ಆರೋಗ್ಯಕ್ಕಾಗಿ ಮಿಡಿದ ಮಾತೃ ಹೃದಯಿ ರಾಣಿ ನಿಲೂಫರ್

1949ರಲ್ಲಿ ಆಕೆಯ ಕನಸಿನ ಕೂಸಾದ ನಿಲೂಫರ್ ಹಾಸ್ಪಿಟಲ್ ಫಾರ್ ವುಮೆನ್ ಅಂಡ್ ಚಿಲ್ಡ್ರನ್ ತಲೆಯೆತ್ತಿತು. ನಿಲೂಫರ್ ಕೇವಲ ಹಣ ನೀಡಿ ಸುಮ್ಮನಾಗಲಿಲ್ಲ; ಸ್ವತಃ ತಾನೇ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಿಸುತ್ತಿದ್ದರು. ಬಡ ಹೆಣ್ಣುಮಕ್ಕಳಿಗೆ ಉಚಿತ ಚಿಕಿತ್ಸೆ, ಉನ್ನತ ಗುಣಮಟ್ಟದ ಹೆರಿಗೆ ಸೌಲಭ್ಯ ಸಿಗುವಂತೆ ನೋಡಿಕೊಂಡರು.

ಒಂದೊಳ್ಳೆ ಮಾತು

ಆಕೆಯ ಹೆಸರು ನಿಲೂಫರ್. ಒಟ್ಟೋಮನ್ ರಾಜಕುಮಾರಿ, ರಾಜಕೀಯ ಒಪ್ಪಂದದ ಭಾಗವಾಗಿ 1931ರಲ್ಲಿ ಹೈದರಾಬಾದ್‌ನ ನಿಜಾಮನ ಎರಡನೇ ಮಗನಾದ ಮುಜಾಜ್ಜಮ್ ಜಾ ಅವರನ್ನು ವಿವಾಹವಾಗಿ ಭಾರತಕ್ಕೆ ಬಂದರು. ಅರಮನೆಯ ವೈಭವ, ಪತಿಯ ಅಪಾರ ಪ್ರೀತಿ ಎಲ್ಲವೂ ಇತ್ತಾದರೂ, ಸಾಂಪ್ರದಾಯಿಕ ಸಮಾಜ ಅವರಿಂದ ಒಂದು ವಾರಸುದಾರ ನನ್ನು ಬಯಸುತ್ತಿತ್ತು. ಆದರೆ, ದುರದೃಷ್ಟವಶಾತ್ ತಾನು ಎಂದಿಗೂ ತಾಯಿಯಾಗಲಾರೆ ಎಂಬ ಕಟು ಸತ್ಯ ತಿಳಿದಾಗ ನಿಲೂಫರ್ ಅಕ್ಷರಶಃ ಮುರಿದುಬಿದ್ದರು.

ಆದರೆ, ಕಮಲದ ಹೂವು ಕೆಸರಿನಲ್ಲಿದ್ದರೂ ಮೇಲಕ್ಕೆದ್ದು ಸೌಂದರ್ಯ ಪಸರಿಸುವಂತೆ, ನಿಲೂಫರ್ ಕಣ್ಣೀರನ್ನು ಒರೆಸಿಕೊಂಡು ಸಮಾಜಮುಖಿ ಕೆಲಸಗಳ ಕಡೆಗೆ ತನ್ನ ಇಡೀ ಬದುಕನ್ನು ಮುಡುಪಾಗಿಟ್ಟರು.

ಅರಮನೆಯ ನಾಲ್ಕು ಗೋಡೆಗಳ ಮಧ್ಯೆ ಐಷಾರಾಮಿ ಜೀವನ ನಡೆಸುವ ಬದಲು ನಿಲೂಫರ್ ಹೈದರಾಬಾದ್‌ನ ಸಾಮಾನ್ಯ ಜನರ ಕಷ್ಟಗಳಿಗೆ ಸ್ಪಂದಿಸಲು ಶುರು ಮಾಡಿ ದರು. ಒಂದು ದಿನ ಆಕೆಯ ಅರಮನೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರ್ತಿ ಹೆರಿಗೆಯ ಸಮಯದಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯ ಸಿಗದೆ, ತೀವ್ರ ರಕ್ತಸ್ರಾವದಿಂದ ಮೃತಪಟ್ಟಳು. ಹುಟ್ಟಿದ ಮಗುವೂ ಬದುಕುಳಿಯಲಿಲ್ಲ.

ಇದನ್ನೂ ಓದಿ: Roopa Gururaj Column: ಗಂಗಾಸ್ನಾನಂ ತುಂಗಾಪಾನಂ, ಪಾಪನಾಶಿನಿ ʼಗಂಗೆʼ

ಈ ಘಟನೆ ನಿಲೂಫರ್ ಅವರ ಹೃದಯವನ್ನು ಹಿಂಡಿಹಾಕಿತು. ತನಗೆ ಮಗುವಾಗಲಿಲ್ಲ ಎಂಬ ನೋವಿಗಿಂತ, ಬಡತನ ಮತ್ತು ಸೂಕ್ತ ಆಸ್ಪತ್ರೆಗಳಿಲ್ಲದೆ ನೂರಾರು ತಾಯಂದಿರು ಹಾಗೂ ಶಿಶುಗಳು ಮರಣ ಹೊಂದುತ್ತಿರುವುದು ಆಕೆಯನ್ನು ಹೆಚ್ಚು ಕಾಡಿತು. ಅಂದೇ ಆಕೆ ಒಂದು ಪಣ ತೊಟ್ಟರು- ಈ ಸಾಮ್ರಾಜ್ಯದಲ್ಲಿ ಯಾವೊಬ್ಬ ತಾಯಿಯೂ ಹೆರಿಗೆಯ ನೋವಿನಿಂದ ಸಾಯಬಾರದು.

ತನ್ನ ನೋವನ್ನೇ ಶಕ್ತಿಯನ್ನಾಗಿ ಮಾಡಿಕೊಂಡ ರಾಜಕುಮಾರಿ, ಹೈದರಾಬಾದ್‌ನಲ್ಲಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಪ್ರತ್ಯೇಕ ಹಾಗೂ ಅತ್ಯಾಧುನಿಕ ಆಸ್ಪತ್ರೆಯನ್ನು ನಿರ್ಮಿಸಲು ನಿರ್ಧರಿಸಿದರು. ಅದಕ್ಕಾಗಿ ತಮ್ಮ ವೈಯಕ್ತಿಕ ಒಡವೆಗಳು, ಹಣ ಮತ್ತು ರಾಯಲ್ ಪ್ರಭಾವವನ್ನು ಬಳಸಿದರು.

1949ರಲ್ಲಿ ಆಕೆಯ ಕನಸಿನ ಕೂಸಾದ ನಿಲೂಫರ್ ಹಾಸ್ಪಿಟಲ್ ಫಾರ್ ವುಮೆನ್ ಅಂಡ್ ಚಿಲ್ಡ್ರನ್ ತಲೆಯೆತ್ತಿತು. ನಿಲೂಫರ್ ಕೇವಲ ಹಣ ನೀಡಿ ಸುಮ್ಮನಾಗಲಿಲ್ಲ; ಸ್ವತಃ ತಾನೇ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಿಸುತ್ತಿದ್ದರು. ಬಡ ಹೆಣ್ಣುಮಕ್ಕಳಿಗೆ ಉಚಿತ ಚಿಕಿತ್ಸೆ, ಉನ್ನತ ಗುಣಮಟ್ಟದ ಹೆರಿಗೆ ಸೌಲಭ್ಯ ಸಿಗುವಂತೆ ನೋಡಿಕೊಂಡರು.

ನನಗೆ ಸ್ವಂತ ಮಗುವಿಲ್ಲದಿರಬಹುದು. ಆದರೆ, ನನ್ನ ಆಸ್ಪತ್ರೆಯಲ್ಲಿ ಜನ್ಮ ತಳೆಯುವ ಪ್ರತಿ ಯೊಂದು ಮಗುವೂ ನನ್ನದೇ ಎಂದು ಆಕೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ನಿಲೂಫರ್ ಕೇವಲ ವೈದ್ಯಕೀಯ ಕ್ಷೇತ್ರಕ್ಕೆ ಸೀಮಿತವಾಗಲಿಲ್ಲ. ಆಕೆ ಭಾರತದ ಸ್ವಾತಂತ್ರ್ಯದ ಕಾಲಘಟ್ಟದಲ್ಲಿ ಸಾಮಾಜಿಕ ಬದಲಾವಣೆಯ ಮುಂಚೂಣಿಯಲ್ಲಿದ್ದರು.

ಮಹಿಳಾ ಹಕ್ಕುಗಳು ಮತ್ತು ನಾಗರಿಕ ಹಕ್ಕುಗಳ ಪರವಾಗಿ ಧ್ವನಿ ಎತ್ತಲು ಆಕೆ ಮಹಾತ್ಮಾ ಗಾಂಧೀಜಿಯವರನ್ನು ಭೇಟಿಯಾದರು. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ದೇಶದ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವ ಕುರಿತು ಕಳಕಳಿಯ ಪತ್ರಗಳನ್ನು ಬರೆದರು. ಅಂದಿನ ಕಾಲದಲ್ಲಿ ಮುಸ್ಲಿಂ ಮಹಿಳೆಯರು ಪರದೆಯ (ಬುರ್ಖಾ) ಹಿಂದೆ ಇರಬೇಕೆಂಬ ನಿಯಮವಿತ್ತು.

ಆದರೆ, ನಿಲೂಫರ್ ಅದನ್ನು ಮುರಿದು ಹೊರ ಬಂದರು. ಮುಸುಕು ಧರಿಸದೆ ಸಾರ್ವಜನಿಕ ವಾಗಿ ಓಡಾಡಿದ ಮೊದಲ ರಾಯಲ್ ಮಹಿಳೆ ಆಕೆ. ಹೆಣ್ಣುಮಕ್ಕಳಿಗೆ ಶಿಕ್ಷಣ ಸಿಗಬೇಕು, ಅವರು ಸ್ವಾವಲಂಬಿಗಳಾಗಬೇಕು ಎಂದು ಆಕೆ ನಿರಂತರವಾಗಿ ಶ್ರಮಿಸಿದರು.

ವಾರಸುದಾರನಿಲ್ಲ ಎಂಬ ಕಾರಣಕ್ಕೆ ಪತಿ 1948ರಲ್ಲಿ 2ನೇ ಮದುವೆಯಾದಾಗ, ನಿಲೂಫರ್ ತನ್ನ ಸ್ವಾಭಿಮಾನವನ್ನು ಬಿಟ್ಟುಕೊಡಲಿಲ್ಲ. ಆಕೆ ಭಾರತವನ್ನು ತೊರೆದು ಯುರೋಪ್‌ಗೆ ಮರಳಿದರೂ, ತಾವು ಹೈದರಾಬಾದ್‌ನಲ್ಲಿ ಬಿತ್ತಿದ ಸೇವೆಯ ಬೀಜವನ್ನು ಮರೆಯಲಿಲ್ಲ. ಫ್ರಾನ್ಸ್ ಮತ್ತು ಅಮೆರಿಕದಲ್ಲಿದ್ದಾಗಲೂ ಅವರು ಅಂತಾರಾಷ್ಟ್ರೀಯ ಚಾರಿಟಿ ಸಂಸ್ಥೆ ಗಳೊಂದಿಗೆ ಸೇರಿ ಹಿಂದುಳಿದ ಮಹಿಳೆಯರ ಕಲ್ಯಾಣಕ್ಕಾಗಿ ನಿಧಿ ಸಂಗ್ರಹಿಸಿದರು.

1989ರಲ್ಲಿ ನಿಲೂಫರ್ ಪ್ಯಾರಿಸ್‌ನಲ್ಲಿ ನಿಧನರಾದರು. ಕೆಲವೊಮ್ಮೆ ಸಮಾಜದಲ್ಲಿ ನಾವು ಅಂದುಕೊಂಡದ್ದನ್ನು ಮಾಡಲು ಹಣಕ್ಕಿಂತ ಇಚ್ಛಾ ಶಕ್ತಿ ಬಹಳ ಮುಖ್ಯವಾಗುತ್ತದೆ. ಮಾಡುವ ಪ್ರತಿ ಕೆಲಸಕ್ಕೂ ನೂರಾರು ಅಡಚಣೆಗಳು ಇದ್ದದ್ದೇ, ಆದರೆ ಅದರ ಆಚೆ ಗಟ್ಟಿಯಾಗಿ ಅಂದುಕೊಂಡದ್ದನ್ನ ಮಾಡುವ ಛಲ ಬೆಳೆಸಿಕೊಂಡಾಗ ಒಳಿತಿನ ದಾರಿಗಳು ಒಂದಲ್ಲ ನೂರಾಗುತ್ತವೆ.

ರೂಪಾ ಗುರುರಾಜ್

View all posts by this author