ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Janamejaya Umarji Column: ಅನುಮಾನವೇಕೆ ? ಬಸವಣ್ಣನವರು ಸನಾತನ ಹಿಂದೂ...

ಕ್ರಿ.ಶ.12ನೆಯ ಶತಮಾನದಲ್ಲಿಯೂ ಆಗಿದ್ದು ಅದೇ. ಜಡ್ಡು ಗಟ್ಟಿದ ಸನಾತನ ಹಿಂದೂ ಧರ್ಮ ವನ್ನು ಪುನರುಜ್ಜೀವನಗೊಳಿಸಲು ಬಂದ ಯುಗಾವತಾರವೇ ವಿಶ್ವಗುರು ಬಸವಣ್ಣನವರು. ಉದಾತ್ತ ಲಿಂಗಾಯತವನ್ನು ಹಿಂದೂ ಧರ್ಮದಿಂದ ಬೇರ್ಪಡಿಸಲು ಕಮ್ಯುನಿಸ್ಟರು, ವಸಾಹತು ಶಾಹಿ ಬಾಲಬಡುಕರು, ಸೆಮೆಟಿಕ್ ಮತಗಳ ಗೀಳು ಹಿಡಿದವರು ಪ್ರಯತ್ನಿಸುತ್ತಿರುವುದು ಸಮಾಜಕ್ಕೆ ಗೊತ್ತೇ ಇದೆ.

ವಿಶ್ಲೇಷಣೆ

ಜನಮೇಜಯ ಉಮರ್ಜಿ

ಹಿಂದೂ ಧರ್ಮ ಎಂದರೆ ಜಾತಿವ್ಯವಸ್ಥೆ, ಇದನ್ನು ಬಸವಣ್ಣನವರು ವಿರೋಧಿಸಿ ದ್ದರು, ಆದ್ದರಿಂದ ಅವರು ಹಿಂದೂಗಳಲ್ಲ ಎಂಬುದು ಕೆಲವರ ವಾದ. ಹುಟ್ಟಿನಿಂದ ಬರುವ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ ಕಾರಣಕ್ಕಾಗಿಯೇ ಬಸವಣ್ಣನವರು ಹಿಂದೂಗಳು. ಏಕೆಂದರೆ ಭಾರತದಲ್ಲಿ ಹಿಂದಿನಿಂದ ವರ್ಣವ್ಯವಸ್ಥೆ ಇತ್ತು, ಜಾತಿ ವ್ಯವಸ್ಥೆ ಇರಲಿಲ್ಲ. ವರ್ಣಗಳು ಗುಣ-ಕರ್ಮಗಳ ಆಧಾರದಿಂದ ನಿರ್ಧಾರ ವಾಗುತ್ತಿದ್ದವು.

ಸನಾತನವೆಂದರೆ ನಿತ್ಯನೂತನ. ಅದು ಜಡ್ಡುಗಟ್ಟಿದ್ದಲ್ಲ, ಬದಲಾವಣೆಗೆ ತೆರೆದುಕೊಂಡಿರು ವಂಥದ್ದು. ಹತ್ತು ಸಾವಿರ ವರ್ಷಗಳಲ್ಲಿ ಭಾರತೀಯ ಜೀವನಕ್ರಮ ಕಾಲಕಾಲದ ಸುಧಾ ರಣೆಗೆ ತೆರೆದುಕೊಂಡು ಬಂದಿದೆ. ಹೀಗಾಗಿ ಅದು ಉಳಿದಿದೆ. ಅವಸ್ಥೆಯ ಜತೆಗಿರುವುದೇ ವ್ಯವಸ್ಥೆ. ಅವ್ಯವಸ್ಥೆ ಆದಾಗಲೆಲ್ಲ ಸುಧಾರಿಸಲು ಮಹಾಪುರುಷರ ಅವತಾರವಾಗುತ್ತದೆ.

ಕ್ರಿ.ಶ.12ನೆಯ ಶತಮಾನದಲ್ಲಿಯೂ ಆಗಿದ್ದು ಅದೇ. ಜಡ್ಡು ಗಟ್ಟಿದ ಸನಾತನ ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸಲು ಬಂದ ಯುಗಾವತಾರವೇ ವಿಶ್ವಗುರು ಬಸವಣ್ಣ ನವರು. ಉದಾತ್ತ ಲಿಂಗಾಯತವನ್ನು ಹಿಂದೂ ಧರ್ಮದಿಂದ ಬೇರ್ಪಡಿಸಲು ಕಮ್ಯುನಿಸ್ಟರು, ವಸಾಹತುಶಾಹಿ ಬಾಲಬಡುಕರು, ಸೆಮೆಟಿಕ್ ಮತಗಳ ಗೀಳು ಹಿಡಿದವರು ಪ್ರಯತ್ನಿಸುತ್ತಿರುವುದು ಸಮಾಜಕ್ಕೆ ಗೊತ್ತೇ ಇದೆ.

ಇವರು ಬೆರಳೆಣಿಕೆಯಷ್ಟು ಇದ್ದರೂ ಕಥನ ಕಟ್ಟುವುದರಲ್ಲಿ ನಿಸ್ಸೀಮರು. ಹಿಂದೂ ಧರ್ಮ ಎಂದರೆ ಜಾತಿವ್ಯವಸ್ಥೆ, ಇದನ್ನು ಬಸವಣ್ಣನವರು ವಿರೋಧಿಸಿದ್ದರು, ಆದ್ದರಿಂದ ಅವರು ಹಿಂದೂಗಳಲ್ಲ ಎಂಬುದು ಈ ಬೆರಳೆಣಿಕೆಯವರ ವಾದ. ಹುಟ್ಟಿನಿಂದ ಬರುವ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ ಕಾರಣಕ್ಕಾಗಿಯೇ ಬಸವಣ್ಣನವರು ಹಿಂದೂಗಳು.

ಇದನ್ನೂ ಓದಿ: Janamejaya Umarji Column: ನಿಜಮಹಾತ್ಮ ಬಾಬಾಸಾಹೇಬ: ಒಂದು ಶುರುವಾತು

ಏಕೆಂದರೆ ಭಾರತದಲ್ಲಿ ಹಿಂದಿನಿಂದ ವರ್ಣವ್ಯವಸ್ಥೆ ಇತ್ತು, ಜಾತಿವ್ಯವಸ್ಥೆ ಇರಲಿಲ್ಲ. ವರ್ಣಗಳು ಗುಣ-ಕರ್ಮಗಳ ಆಧಾರದಿಂದ ನಿರ್ಧಾರವಾಗುತ್ತಿದ್ದವು. ಅಷ್ಟೇ ಅಲ್ಲದೆ, ಒಬ್ಬ ವ್ಯಕ್ತಿಯು ತನ್ನ ಗುಣ-ಕರ್ಮಗಳ ಆಧಾರದಿಂದ ಯಾವುದೇ ವರ್ಣದಲ್ಲಿ ಗುರುತಿಸಿಕೊಳ್ಳ ಬಹುದಾಗಿತ್ತು.

8ನೇ ಶತಮಾನದಿಂದ ಈಚೆಗೆ, ಯಾವಾಗ ಮತಾಂಧ ವಿದೇಶಿಗರ ಆಕ್ರಮಣ ಶುರುವಾಯಿ ತೋ ಆಗ ಹಿಂದೂ ಸಮಾಜವು ನಿರಂತರ ಹಿಂಸೆ, ದೇವಾಲಯ ಧ್ವಂಸ, ಜಜಿಯಾ ತೆರಿಗೆ ಮತ್ತು ಬಲಾತ್ಕಾರದ ಮತಾಂತರಗಳ ಒತ್ತಡಕ್ಕೆ ಒಳಗಾಯಿತು.

ಈ ಪರಿಸ್ಥಿತಿಯಲ್ಲಿ ತನ್ನ ಧಾರ್ಮಿಕ-ಸಾಂಸ್ಕೃತಿಕ ಅಸ್ಮಿತೆಯನ್ನು ರಕ್ಷಿಸಿಕೊಳ್ಳಲು ಹಿಂದೂ ಸಮಾಜವು ಒಳಮುಖಿಯಾಯಿತು. ಅದರ ಫಲವಾಗಿ, ವೃತ್ತಿ, ಆಹಾರ ಪದ್ಧತಿ, ವಿವಾಹ ಮತ್ತು ಪೂಜಾಕ್ರಮಗಳನ್ನು ವಂಶಪಾರಂಪರ್ಯಕ್ಕೆ ಕಟ್ಟಿಹಾಕುವ ಪ್ರವೃತ್ತಿ ಬಲವಾಯಿತು.

ಮೊದಲು ಗುಣ-ಕರ್ಮ ಆಧಾರಿತವಾಗಿದ್ದ ವರ್ಣವ್ಯವಸ್ಥೆ, ಆಕ್ರಮಣ ಕಾಲಘಟ್ಟದಲ್ಲಿ ವಂಶಾವಳಿ ಮೂಲಕ ಗುರುತಿಸಿಕೊಳ್ಳುವ ಅಗತ್ಯದಿಂದ ಜನ್ಮಾಧಾರಿತ ಜಾತಿವ್ಯವಸ್ಥೆಯಾಗಿ ಗಟ್ಟಿಯಾಯಿತು. ಭಾರತೀಯರು ಆಕ್ರಮಣಗಳ ನಂತರ ಸಾಮಾಜಿಕವಾಗಿ ಮುಚ್ಚಿಕೊಂಡರು ಎಂದು 11ನೆಯ ಶತಮಾನದ ಅಲ್-ಬೀರೂನಿ ದಾಖಲಿಸಿದರೆ, ಎಡ, ಸಾಫ್ಟ್ ಎಡವಾಲುವಿಕೆಯ ಆರ್.ಎಸ್. ಶರ್ಮಾ ಮತ್ತು ಉಪಿಂದರ್ ಸಿಂಗ್ ಮುಂತಾದ ಇತಿಹಾಸಕಾರರೂ “ಜಾತಿ ಪದ್ಧತಿ ವೇದಕಾಲದಲ್ಲಿರಲಿಲ್ಲ, ಬದಲಾಗಿ ವಿದೇಶಿ ಆಕ್ರಮಣ‌ ಕಾರರ ಆಡಳಿತ ಕಾಲದಲ್ಲಿ ತೀವ್ರಗೊಂಡಿತು" ಎಂದು ಹೇಳಿದ್ದಾರೆ.

BasavannaR

ಹೀಗಾಗಿ ಜನ್ಮಾಧಾರಿತ ಜಾತಿವ್ಯವಸ್ಥೆ ಸನಾತನ ಹಿಂದೂ ಧರ್ಮದ ಮೂಲ ತತ್ತ್ವವಲ್ಲ. ಅದು ಆಕ್ರಮಣಗಳಿಂದ ಹುಟ್ಟಿದ ಸಾಮಾಜಿಕ ವಿಕೃತಿ. 12ನೆಯ ಶತಮಾನದ ಹೊತ್ತಿಗೆ ಭಾರತದ ದಕ್ಷಿಣ ಭಾಗಕ್ಕೆ ಆಕ್ರಮಣದ ಬಿಸಿ ತಟ್ಟುತ್ತಿರುವ ಹೊತ್ತಿನಲ್ಲಿ, ಹಿಂದೂ ಸಮಾಜವು ಹುಟ್ಟಿನಿಂದ ಜಾತಿ ಎಂಬ ಕಠಿಣ ನಿಯಮವನ್ನು ಹಾಕಿಕೊಂಡಿತ್ತು.

ಸನಾತನ ಹಿಂದೂ ಅಲ್ಲದ ಈ ಪದ್ಧತಿ ಬಸವಣ್ಣನವರಿಗೆ ಸರಿ ಎನಿಸಲಿಲ್ಲ. ಹೀಗಾಗಿ ಹುಟ್ಟಿನ ಆಧಾರದಲ್ಲಿ ಏನನ್ನೂ ನಿರ್ಧರಿಸುವುದು ಸರಿಯಲ್ಲ ಎಂದು ಒತ್ತಾಯಿಸಿದರು. “ಆನು ಹಾರವನೆಂದರೆ ಕೂಡಲಸಂಗಯ್ಯ ನಗುವ" ಎಂದದ್ದೂ ಇದೇ ಆಧಾರದಲ್ಲಿ.

ರಾಜನ ಆಸ್ಥಾನದಲ್ಲಿ ಕರಣಿಕನಾಗಿ, ವಿತ್ತಮಂತ್ರಿಯಾಗಿ ಸಂಬಳಕ್ಕೆ ಕೆಲಸದಲ್ಲಿರುವ ತಮ್ಮನ್ನು ಸ್ವಾಧ್ಯಾಯ, ಪಾಠ ಪ್ರವಚನ ಮಾಡಿಕೊಂಡಿರಬೇಕಾಗಿರುವ ಹಾರವ ಎಂದರೆ ಕೂಡಲಸಂಗಮದೇವ ನಗುವ ಎಂದು ಸ್ವಯಂಪ್ರಶ್ನೆ ಹಾಕಿಕೊಂಡಿದ್ದಾರೆ.

ಶಿವಭಕ್ತನಾದವರಿಗೆ ಜಾತಿಯಿಲ್ಲ, ತಮ್ಮನ್ನು ಹಾರವ ಎಂದು ಗುರುತಿಸಬಾರದು ಎಂದಿದ್ದಾರೆ. ಇನ್ನೂ ಮುಂದುವರಿದು, ತಾವು ಸಾಧನೆಯಲ್ಲಿ ವಯಸ್ಸಿನಲ್ಲಿ ಆದ್ಯರಾದ ಚೆನ್ನಯ್ಯನವರ ಮಗ ಎಂದು ಹೇಳಿಕೊಂಡಿದ್ದಾರೆ.

“ನಿಜಭಾವ ಲಕ್ಷ್ಮಿ-ಸರಸ್ವತಿ ಒಲಿದರೆ ಕುಲವನರಸಲದೇಕೆ?" ಎಂಬ ಬಸವಣ್ಣನವರ ವಚನವು ಮಾನವನ ಮೌಲ್ಯವನ್ನು ನಿರ್ಧರಿಸುವುದು ಜನ್ಮವಲ್ಲ, ಅದರ ಆಧಾರಿತ ಜಾತಿ ಅಲ್ಲ, ಬದಲಾಗಿ ಲಿಂಗ ಮೆಚ್ಚಿದ ಅವನ ನಿಜಭಾವ. ಸಾಧನೆಯ ಮೂಲಕ ಬರುವ ಅರ್ಹತೆಯೇ ಮಾನದಂಡ ಎಂಬ ಸನಾತನ ತತ್ತ್ವವನ್ನು ಸಾರುತ್ತದೆ.

ಲಕ್ಷ್ಮಿ-ಸರಸ್ವತಿಯರ ಅಸ್ತಿತ್ವವನ್ನು ಮತ್ತು ಭಕ್ತರ ಮೇಲೆ ಅವರ ಒಲವನ್ನು ನಿರಾಕರಿಸಿಲ್ಲ. ಇಲ್ಲಿ ಲಕ್ಷ್ಮಿ ಎಂದರೆ ಕೇವಲ ಧನಸಂಪತ್ತು ಅಲ್ಲ, ಧರ್ಮಸಹಿತ ಐಶ್ವರ್ಯ; ಸರಸ್ವತಿ ಎಂದರೆ ಕೇವಲ ವಿದ್ಯೆಯಲ್ಲ, ವಿವೇಕeನ. ಇವೆರಡೂ ನಿಜಭಾವದಿಂದ ಒಲಿದಾಗ, ವ್ಯಕ್ತಿ ಆತ್ಮೋನ್ನತಿಯ ಶಿಖರಕ್ಕೆ ಏರುತ್ತಾನೆ. ಆಗ ‘ಕುಲ’ ಎನ್ನುವುದು ಅವನ ಸಾಧನೆಗೆ ಅಡ್ಡಿ ಯಾಗುವುದಿಲ್ಲ, ಸನಾತನದಲ್ಲಿ ಜಾತಿ ವ್ಯವಸ್ಥೆ ಇರಲಿಲ್ಲ ಎಂಬುದನ್ನು ಹೇಳಲು ಬಸವಣ್ಣ ನವರು ಹಲವು ಋಷಿಮುನಿಗಳನ್ನು ಪಟ್ಟಿ ಮಾಡುತ್ತಾರೆ.

ವ್ಯಾಸ ಬೋಯಿತಿಯ ಮಗ, ಮಾರ್ಕಂಡೇಯ ಮಾತಂಗಿಯ ಮಗ, ಮಂಡೋದರಿ ಕಪ್ಪೆಯ ಮಗಳು, ಅಗಸ್ತ್ಯ ಕಬ್ಬಿಲು, ದುರ್ವಾಸ ಮುಚ್ಚಿಗ, ಕಶ್ಯಪ ಕಮ್ಮಾರ, ಕೌಂಡಿನ್ಯನೆಂಬ ಋಷಿ ನಾವಿದ. ಹೀಗಾಗಿ “ಶಿವಭಕ್ತರಲಿ ಕುಲವನರಸದಿ ಭೋ" ಎಂದು ಉದ್ಗರಿಸುತ್ತಾರೆ.

ಹಿಂದೂಗಳಲ್ಲಿ ಮೂವತ್ಮೂರು ಕೋಟಿ ದೇವರಿದ್ದಾರೆ. ಅದು ಬಹುದೇವೋಪಾಸನೆಯ ಸಂಸ್ಕೃತಿ, ಬಸವಣ್ಣನವರು ಹೇಳಿದ್ದು ‘ಏಕದೇವೋಪಾಸನೆ’ ಆದ್ದರಿಂದ ಅವರು ಹಿಂದೂ ಗಳಲ್ಲ- ಇದು ಎರಡನೆಯ ವಾದ. ಸನಾತನ ಹಿಂದೂ ಧರ್ಮದಲ್ಲಿ ‘ಏಕದೇವೋಪಾಸನೆ’ ಎಂದರೆ ಒಂದೇ ರೂಪದ ದೇವರ ಆರಾಧನೆಯಲ್ಲ.

ಅದು ಎಲ್ಲ ದೈವಿಕ ಶಕ್ತಿಗಳ ಹಿಂದೆ ಇರುವ ಒಂದೇ ಪರಮತತ್ತ್ವದ ಅಂಗೀಕಾರ. ಋಗ್ವೇದದ ಪ್ರಸಿದ್ಧ ವಾಕ್ಯ “ಏಕಂ ಸತ್ ವಿಪ್ರಾ ಬಹುಧಾ ವದಂತಿ" ಎಂಬುದು ಇದನ್ನು ಸ್ಪಷ್ಟಪಡಿಸುತ್ತದೆ. ಸತ್ಯ ಒಂದೇ, ತಿಳಿದವರು ಅದನ್ನು ಹಲವು ರೂಪ, ನಾಮಗಳಿಂದ ಉಪಾಸಿಸುತ್ತಾರೆ.

ಕೃಷಿಗೆ ಇಂದ್ರನನ್ನು, ವಿದ್ಯೆಗೆ ಸರಸ್ವತಿಯನ್ನು, ಐಶ್ವರ್ಯಕ್ಕೆ ಲಕ್ಷ್ಮಿಯನ್ನು, ಸ್ಥಿತಿಗೆ ವಿಷ್ಣು ವನ್ನು, ಸೃಷ್ಟಿಗೆ ಬ್ರಹ್ಮನನ್ನು, ಸಂಹಾರಕ್ಕೆ ಶಿವನನ್ನು ಆರಾಧಿಸುವ ಪದ್ಧತಿ ಕಾರ್ಯ ವಿಭಾಗದ ದೈವಿಕ ಅಭಿವ್ಯಕ್ತಿ ಮಾತ್ರ; ಈ ಎಲ್ಲ ಕಾರ್ಯಗಳ ಹಿಂದೆ ಕಾರ್ಯನಿರ್ವಹಿಸುವ ಪರಮಶಕ್ತಿ ಒಂದೇ.

ಆದ್ದರಿಂದ ಸನಾತನ ಹಿಂದೂ ಧರ್ಮವು ಬಹುದೇವಾರಾಧನೆ ಅಲ್ಲ, ಅದು ಏಕತತ್ತ್ವಾ ಧಾರಿತ ಬಹುರೂಪೋಪಾಸನೆ. ಕಾರ್ಯಾನುಸಾರ ರೂಪ ವಿಭಿನ್ನವಾದರೂ, ಕಾರ್ಯಸಿದ್ಧಿ ಯನ್ನು ನೀಡುವ ಪರಮಾತ್ಮ ಒಂದೇ ಎಂಬ ಅರಿವೇ ವೇದಕಾಲದಿಂದ ಮುಂದುವರಿದ ಸನಾತನ ದರ್ಶನದ ಸಾರವಾಗಿದೆ.

ಇದನ್ನು ಬಸವಣ್ಣನವರು “ಇಬ್ಬರು ಮೂವರು ದೇವರೆಂದು ಉಬ್ಬಿ ಮಾತನಾಡಬೇಡ: ಒಬ್ಬನೇ ಕಾಣಿರೋ, ಇಬ್ಬರೆಂಬುದು ಹುಸಿ ನೋಡಾ! ಕೂಡಲಸಂಗಮದೇವನಲ್ಲದೆ ಇಲ್ಲವೆಂದಿತ್ತು ವೇದ" ಎಂದು ಪ್ರಮಾಣೀಕರಿಸಿzರೆ. ಇನ್ನೊಂದು “ನಿಮ್ಮ ವೇದಶಾಸ್ತ್ರಂಗಳು ಆರ ಹೊಗಳುತ್ತಿದ್ದಾವು? ‘ಓಂ ದ್ಯಾವಾ ಭೂಮೀ ಜನಯಂ ದೇವ ಏಕೋ ದೇವ’ ಎಂದು ಶ್ರುತಿ ಸ್ಮೃತಿಗಳು ಸಾರುತ್ತಲಿದ್ದೆವು" ಎಂದು ಒಬ್ಬ ಕೂಡಲಸಂಗಮನನ್ನೇ ಶೃತಿ-ಸ್ಮೃತಿಗಳು ಹೇಳುತ್ತವೆ ಎಂದು ಸನಾತನ ಹಿಂದುತ್ವವನ್ನು ಪುಷ್ಟೀಕರಿಸುತ್ತಾರೆ.

“ಉಮಾಧಿನಾಥರು ಕೋಟಿ, ಪಂಚವಕರು ಕೋಟಿ, ನಂದಿವಾಹನರೊಂದು ಕೋಟಿ, ನೋಡಯ್ಯಾ; ಸದಾಶಿವರೊಂದು ಕೋಟಿ, ಗಂಗೆವಾಳುಕ ಸಮರುದ್ರರು ಇವರೆಲ್ಲರೂ ಕೂಡಲಸಂಗನ ಸಾನ್ನಿಧ್ಯರಲ್ಲದೆ, ಸಮರಸವೇದ್ಯರೊಬ್ಬರೂ ಇ!". ಬಸವಣ್ಣನವರಿಗೆ ಕೂಡಲಸಂಗಮನು ಒಂದೇ ಪರಮತತ್ತ್ವ.

ಅವನು ಹೊರಗಿರುವ ಪ್ರತಿಮೆ ಮಾತ್ರವಲ್ಲ; ಆತನು ಅಂತರಂಗದಲ್ಲಿಯೇ ನೆಲೆಸಿರುವ ಚೇತನಶಕ್ತಿ ಕೂಡಾ. ಹೀಗಾಗಿ ಅಂತರಂಗ-ಬಹಿರಂಗ ಶುದ್ಧಿ ಎರಡನ್ನೂ ಹೇಳಿದ್ದಾರೆ. ಇಷ್ಟಲಿಂಗ ಉಪಾಸನೆ ಎಂಬುದು ಬಹುದೇವಾರಾಧನೆಯ ನಿರಾಕರಣೆ ಅಲ್ಲ, ಎಲ್ಲರಲ್ಲಿ ಇರುವ ದೇವರು ಒಬ್ಬನೇ ಎಂಬ ಅರಿವಿನ ಕುರುಹು.

ಉದಾತ್ತ ಲಿಂಗಾಯತವನ್ನು ಮರಳುಗಾಡಿನ ಮತಗಳಂತೆ ವಿನ್ಯಾಸಗೊಳಿಸಲು ಬಸವಣ್ಣ ನವರು ಪ್ರವಾದಿ, ಅವರು ಸ್ಥಾಪಿಸಿದ್ದು ಪ್ರತ್ಯೇಕ ಧರ್ಮ, ವಚನಗಳು ಮಾತ್ರವೇ ಅಂತಿಮ ಗ್ರಂಥ ಎಂಬಂತೆ ಕಮ್ಯುನಿಸ್ಟರು, ವಸಾಹತುಶಾಹಿ ಬಾಲಬಡುಕರು, ಸೆಮೆಟಿಕ್ ಮತಗಳ ಗೀಳು ಹಿಡಿದವರು, ರಾಜಕೀಯವಾಗಿ ಲಾಭಗಳಿಸಬೇಕೆನ್ನುವವರು ಶತ ಪ್ರಯತ್ನಿಸು ತ್ತಿದ್ದಾರೆ.

ಅದರ ಭಾಗವಾಗಿ ಪೌರಾಣಿಕ ಶಿವ ಮತ್ತು ಶರಣರ ಶಿವ, ಸ್ಥಾವರ ಲಿಂಗ, ಇಷ್ಟಲಿಂಗ ಬೇರೆ ಬೇರೆ ಎಂದು ಗೊಂದಲ ಎಬ್ಬಿಸಲು ಹೆಣಗುತ್ತಿದ್ದಾರೆ. ಬಸವಣ್ಣನವರಿಗೆ ಮೊದಲಿನಿಂದ ಕೊನೆಯವರೆಗೂ ಕೂಡಲಸಂಗಮನೇ ದೇವರು, ಅವರ ನಿಷ್ಠೆ ಎಂದಿಗೂ ಬದಲಾಗಿಯೇ ಇಲ್ಲ.

ಪೌರಾಣಿಕ ಶಿವನ ಕುರಿತು ಅವರ ವಚನ ಇಂತಿದೆ: “ಕಾಳಿಯ ಕಣ್ ಕಾಣದಿಂದ ಮುನ್ನ, ತ್ರಿಪುರಸಂಹಾರದಿಂದ ಮುನ್ನ, ಹರಿವಿರಂಚಿಗಳಿಂದ ಮುನ್ನ, ಉಮೆಯ ಕಲ್ಯಾಣದಿಂದ ಮುನ್ನ, ಮುನ್ನ, ಮುನ್ನ ಮುನ್ನ-ಅಂದಿಂಗೆಳೆಯ ನೀನು, ಹಳೆಯ ನಾನು, ಮಹಾದಾನಿ ಕೂಡಲಸಂಗಮದೇವಾ".

ಇನ್ನೂ ಒಂದು ಅಪರೂಪದ ವಚನವಿದೆ. “ಭವಬಂಧನ-ದುರಿತಂಗಳ ಗೆಲುವೊಡೆ ‘ಓಂ ನಮಃ ಶಿವಾಯ’-ಶರಣೆಂದಡೆ ಸಾಲದೆ? ‘ಹರ ಹರ ಶಂಕರ, ಶಿವ ಶಿವ ಶಂಕರ, ಜಯ ಜಯ ಶಂಕರ ಶರಣೆ’ನ್ನುತ್ತಿರ್ದೇನೆ; ಎನ್ನ ಪಾತಕ ಪರಿಹಾರ! ಕೂಡಲಸಂಗಮದೇವಾ ಶರಣೆ’ನ್ನುತ್ತಿರ್ದೇನೆ".

ಇಲ್ಲಿ ‘ಓಂ ನಮಃ ಶಿವಾಯ’ ಎಂಬ ವೇದವಾಕ್ಯವಿದೆ. ಇಲ್ಲಿ ಪರಮಾತ್ಮನನ್ನು ಶಿವ, ಶಂಕರ ಎಂಬ ಪುರಾಣದ ಹೆಸರುಗಳಿಂದ ಶರಣೆಂದಿzರೆ. ಕರ್ಮ ಸಿದ್ಧಾಂತದಲ್ಲಿ ಹೇಳಲಾಗುವ ಭವಬಂಧನ, ದುರಿತ, ಪುಣ್ಯ, ಪಾತಕ ಎಲ್ಲವೂ ಇವೆ.

ಸಪ್ತ ಶೈವದಲ್ಲಿಯ ಹೊಟ್ಟ ತೂರಿ ಗಟ್ಟಿ ಕಾಳುಗಳನೆಲ್ಲ ಸಂಗ್ರಹಿಸಿ. ಅನಾದಿ ಲಿಂಗಾಯತ ವನ್ನು ಗಟ್ಟಿಗೊಳಿಸಿದ್ದಾರೆ ಬಸವಣ್ಣನವರು. ಭಕ್ತಿ ಸಂಕ್ರಮಣದ ಮೂಲಕ ಮನೆ-ಮನ ತಲುಪಿ ಸಮಾಜವನ್ನು ಶಿವಭಕ್ತಿಯಿಂದ ಒಂದುಗೂಡಿಸಿzರೆ ಬಸವಣ್ಣನವರು.

ಹಿಂದೂ ಧರ್ಮದ ಉಳಿವಿಗೆ ಕಟಿಬದ್ಧರಾಗಿ ಬಸವಣ್ಣನವರು ನಿಂತಿದ್ದರಿಂದಲೇ ಇಂದು ಭಾರತದ ದಕ್ಷಿಣಭಾಗದಲ್ಲಿ ಹಿಂದೂಧರ್ಮ ಉಳಿದಿದೆ. ಈ ಲೇಖನದಲ್ಲಿ ನಾನು ಬರೆದದ್ದು ತುಂಬಾ ಕಡಿಮೆಯೇ. ಅಬ್ಬಿಗೇರಿಯ ಕಲಾತಪಸ್ವಿ ಡಿ.ಎನ್. ಉಪಾಧ್ಯ ಅವರು ಬರೆದ ‘ಬಸವ ಶೈವದಲ್ಲಿ ಹಿಂದುತ್ವ’ ಪುಸ್ತಕದಲ್ಲಿ ಇನ್ನೂ ಬಹಳ ನೋಡಬಹುದು.

(ಲೇಖಕರು, ಸಂಸ್ಕೃತಿ ಚಿಂತಕರು)