ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಎಸ್‌ಐಆರ್‌ಗೆ ಅನಗತ್ಯ ವಿರೋಧ ಬೇಡ

ರಾಜ್ಯ ಸರ್ಕಾರದ ವಾದವೇನೆಂದರೆ, ಈ ಪ್ರಕ್ರಿಯೆಯಿಂದ ಕೆಲವರ ಮತದಾನದ ಹಕ್ಕು ಕಸಿಯಲ್ಪಡ ಬಹುದು, ಹಿಂದುಳಿದ ವರ್ಗಗಳು ಮತ್ತು ಬಡವರ ಮೇಲೆ ಅನ್ಯಾಯ ವಾಗಬಹುದು ಎಂಬುದು. ಜನರ ಹಕ್ಕುಗಳ ಬಗ್ಗೆ ಸರ್ಕಾರ ಎಚ್ಚರಿಕೆ ವಹಿಸುವುದು ತಪ್ಪಲ್ಲ. ಆದರೆ, ಅದೇ ಸಂದರ್ಭದಲ್ಲಿ ಚುನಾವಣಾ ಆಯೋಗವು ಕೈಗೊಳ್ಳುತ್ತಿರುವ ಈ ಪರಿಷ್ಕರಣೆ ಪ್ರಕ್ರಿಯೆಯ ಉದ್ದೇಶ ಮತ್ತು ಸಂವಿಧಾನಾತ್ಮಕ ಮಹತ್ವವನ್ನು ಸಹ ಸಮತೋಲನದಿಂದ ನೋಡಬೇಕಾಗಿದೆ.

ಪ್ರಸ್ತುತ

ಅಮೇಯ್‌ ಚಂದ್ರಶೇಖರ್

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಎಂಬುದು ಕೇವಲ ರಾಜಕೀಯ ಸ್ಪರ್ಧೆಯಲ್ಲ; ಅದು ಜನರ ಸಾರ್ವಭೌಮಾಧಿಕಾರದ ಅಭಿವ್ಯಕ್ತಿ. ಆ ವ್ಯವಸ್ಥೆಯ ಮೂಲಾಧಾರವೇ ಶುದ್ಧ ಮತ್ತು ವಿಶ್ವಾಸಾರ್ಹ ಮತದಾರರ ಪಟ್ಟಿ. ಆದರೆ, ಈ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗ ಕೈಗೊಳ್ಳುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (Special Intensive Revision - SIR) ಪ್ರಕ್ರಿಯೆಯನ್ನು ಕರ್ನಾಟಕ ಸರ್ಕಾರ ವಿರೋಧಿಸುತ್ತಿರುವುದು ಚಿಂತಾಜನಕ ಬೆಳವಣಿಗೆಯಾಗಿದೆ.

ರಾಜ್ಯ ಸರ್ಕಾರದ ವಾದವೇನೆಂದರೆ, ಈ ಪ್ರಕ್ರಿಯೆಯಿಂದ ಕೆಲವರ ಮತದಾನದ ಹಕ್ಕು ಕಸಿಯಲ್ಪಡ ಬಹುದು, ಹಿಂದುಳಿದ ವರ್ಗಗಳು ಮತ್ತು ಬಡವರ ಮೇಲೆ ಅನ್ಯಾಯ ವಾಗಬಹುದು ಎಂಬುದು. ಜನರ ಹಕ್ಕುಗಳ ಬಗ್ಗೆ ಸರ್ಕಾರ ಎಚ್ಚರಿಕೆ ವಹಿಸುವುದು ತಪ್ಪಲ್ಲ. ಆದರೆ, ಅದೇ ಸಂದರ್ಭದಲ್ಲಿ ಚುನಾವಣಾ ಆಯೋಗವು ಕೈಗೊಳ್ಳುತ್ತಿರುವ ಈ ಪರಿಷ್ಕರಣೆ ಪ್ರಕ್ರಿಯೆಯ ಉದ್ದೇಶ ಮತ್ತು ಸಂವಿಧಾ ನಾತ್ಮಕ ಮಹತ್ವವನ್ನು ಸಹ ಸಮತೋಲನದಿಂದ ನೋಡಬೇಕಾಗಿದೆ.

ಮತದಾರರ ಪಟ್ಟಿಯಲ್ಲಿ ಸತ್ತವರ ಹೆಸರು ಉಳಿಯುವುದು, ಒಂದೇ ವ್ಯಕ್ತಿಯ ಹೆಸರು ಎರಡು ಕಡೆ ಇರುವುದು, ಸ್ಥಳಾಂತರಗೊಂಡವರ ಹೆಸರು ಅಳಿಯದೆ ಉಳಿಯುವುದು, ಅಥವಾ ನಕಲಿ ನೋಂದಣಿಗಳು ನಡೆಯುವುದು - ಇವೆಲ್ಲವೂ ಚುನಾವಣಾ ಶುದ್ಧತೆಯನ್ನು ದುರ್ಬಲಗೊಳಿಸುವ ಸಂಗತಿಗಳು.

ಇದನ್ನೂ ಓದಿ: Nandeesh G Hoysanahalli Column: ಜಾಗತಿಕ ಅನಿಶ್ಚಿತತೆ ಎದುರು ನಾಗರಿಕರ ಜವಾಬ್ದಾರಿ

ಇವುಗಳನ್ನು ಸರಿಪಡಿಸುವುದೇ ಎಸ್‌ಐಆರ್‌ನ ಮೂಲ ಉದ್ದೇಶ. ಇದು ಏಕಾಏಕಿ ಕಂಡುಹಿಡಿದ ವಿಧಾನವಲ್ಲ; ಹಲವು ದಶಕಗಳಿಂದ ಚುನಾವಣಾ ಆಯೋಗ ಅನುಸರಿಸುತ್ತಿರುವ ಒಂದು ವೈeನಿಕ ಮತ್ತು ಆಡಳಿತಾತ್ಮಕ ಪ್ರಕ್ರಿಯೆ. ಪ್ರತಿ ಪ್ರಜಾಪ್ರಭುತ್ವ ದಲ್ಲಿಯೂ ಒಬ್ಬ ನಾಗರಿಕ - ಒಂದು ಮತ - ಒಂದು ನೋಂದಣಿ ಎಂಬ ತತ್ವ ಅತ್ಯಂತ ಪವಿತ್ರವಾದುದು. ಹೀಗಾಗಿ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಪ್ರಯತ್ನವನ್ನು ತಕ್ಷಣವೇ ಹಕ್ಕು ಕಸಿಯುವ ಕಾರ್ಯ ಎಂದು ಚಿತ್ರಿಸುವುದು ಜನರಲ್ಲಿ ಅನಗತ್ಯ ಅನುಮಾನ ಹುಟ್ಟಿಸಬಹುದು.

ಹೌದು, ಈ ಪ್ರಕ್ರಿಯೆಯಲ್ಲಿ ಕೆಲವೊಂದು ದೋಷಗಳು ಸಂಭವಿಸುವ ಸಾಧ್ಯತೆಗಳಿರಬಹುದು. ಅರ್ಹ ಮತದಾರರ ಹೆಸರು ತಪ್ಪಾಗಿ ಅಳಿಯದಂತೆ ಎಚ್ಚರಿಕೆ ಅಗತ್ಯ. ಆದರೆ ಅದಕ್ಕಾಗಿ ಸಂಪೂರ್ಣ ಪ್ರಕ್ರಿಯೆಯನ್ನೇ ತಡೆಯಲು ಮುಂದಾಗುವುದು ಸೂಕ್ತ ಪರಿಹಾರವಲ್ಲ. ಬದಲಾಗಿ, ಸರ್ಕಾರ ಮತ್ತು ಚುನಾವಣಾ ಆಯೋಗ ಪರಸ್ಪರ ಸಹಕಾರದಿಂದ ಪಾರದರ್ಶಕ ಹಾಗೂ ಜನಸ್ನೇಹಿ ವಿಧಾನಗಳನ್ನು ರೂಪಿಸಬೇಕು.

ಸುಪ್ರೀಂ ಕೋರ್ಟ್‌ಗೆ ಹೋಗುವುದು ಸರ್ಕಾರದ ಹಕ್ಕು. ಆದರೆ, ಅದೇ ಸಮಯದಲ್ಲಿ ಚುನಾವಣಾ ಆಯೋಗದಂತಹ ಸ್ವತಂತ್ರ ಸಂವಿಧಾನಾತ್ಮಕ ಸಂಸ್ಥೆಗಳ ಕಾರ್ಯಚಟುವಟಿಕೆಗಳ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡುವಂತಾಗಬಾರದು. ಪ್ರಜಾಪ್ರಭುತ್ವದ ಬಲವು ಕೇವಲ ಮತದಾನದ ಹಕ್ಕಿನಲ್ಲಿ ಮಾತ್ರವಲ್ಲ; ಶುದ್ಧ ಮತದಾರರ ಪಟ್ಟಿಯಲ್ಲಿಯೂ ಅಡಗಿದೆ ಎಂಬುದನ್ನು ಮರೆಯಬಾರದು.

ಎಸ್‌ಐಆರ್ ನಡೆಸಿದ ರಾಜ್ಯಗಳಲ್ಲಿ ಬಿಜೆಪಿಯನ್ನು ವಿರೋಧಿಸುವ ಅಲ್ಪಸಂಖ್ಯಾತರ ಮತದಾರರ ಹೆಸರನ್ನು ರದ್ದುಪಡಿಸಲಾಗಿದೆ, ಆ ಮೂಲಕ ಮತದಾರರ ಪಟ್ಟಿಯನ್ನು ತನಗೆ ಅನುಕೂಲವಾಗು ವಂತೆ ಬಿಜೆಪಿ ತಿದ್ದಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಆದರೆ ವಿಪಕ್ಷಗಳು ಆರೋಪಿಸಿದಂತೆಯೇ ಆಗಿದ್ದರೆ, ತಮಿಳುನಾಡು ಹಾಗೂ ಕೇರಳಗಳಲ್ಲೂ ಬಿಜೆಪಿ ಪರವಾದ ಫಲಿತಾಂಶವೇ ಬರಬೇಕಿತ್ತು. ಹಾಗಾಗಿಲ್ಲ. ಈ ಎರಡೂ ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ನಡೆದಿದೆ. ಆದರೆ ಮೊನ್ನೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ತಮಿಳು ನಾಡು ಹಾಗೂ ಕೇರಳಗಳಲ್ಲಿ ಕ್ರಮವಾಗಿ ಟಿವಿಕೆ ಹಾಗೂ ಯುಡಿಎಫ್ ಪಕ್ಷಗಳು ಅಧಿಕಾರ ಹಿಡಿದಿವೆ. ಈ ಪಕ್ಷಗಳು ಬಿಜೆಪಿಯ ಮಿತ್ರಪಕ್ಷಗಳಲ್ಲ ಎಂಬುದನ್ನು ಗಮನಿಸಬೇಕು. ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರ ಹಿಡಿದಿದೆ ಎಂದ ಮಾತ್ರಕ್ಕೆ ಎಲ್ಲ ಕಡೆಯೂ ಹಾಗಾಗುತ್ತದೆ ಅನ್ನುವಂತಿಲ್ಲ.

ಮತದಾರರ ಪಟ್ಟಿ ಪರಿಷ್ಕರಣೆಯಾಗಿ ದಶಕವೇ ಉರುಳಿದೆ. ಜವಾಬ್ದಾರಿಯುತ ಡೆಮಾಕ್ರಸಿಗಳು ಈ ಪಟ್ಟಿಯನ್ನು ಐದು ವರ್ಷಕ್ಕೊಮ್ಮೆಯಾದರೂ ಪರಿಷ್ಕರಿಸುತ್ತವೆ. ನಮ್ಮ ದೇಶವೂ ಹೊಣೆಯರಿತ ಪ್ರಜಾಪ್ರಭುತ್ವ ದೇಶ ಎನಿಸಬೇಕಾದರೆ ಚುನಾವಣೆ ಪ್ರಕ್ರಿಯೆ ಪಾರದರ್ಶಕ ಆಗಿರಬೇಕು. ಇಲ್ಲವಾದರೆ ಸತ್ತವರು ಬಂದು ಮತ ಚಲಾಯಿಸುವ ವ್ಯವಸ್ಥೆ ಉಳಿದುಕೊಳ್ಳುತ್ತದೆ. ನಮ್ಮ ನ್ಯಾಯಾಂಗದಂತೆ ಚುನಾವಣಾ ಆಯೋಗವನ್ನೂ ಮುಕ್ತವಾಗಿ ಕೆಲಸ ಮಾಡಲು ಬಿಡಬೇಕು.