ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Harish Kera Column: ಅತಿಥಿಯಲ್ಲ, ಕತ್ತರಿಸಿದರೆ ಬೆಳೆವ ರಕ್ತಬೀಜ!

1960ರ ದಶಕದಲ್ಲಿ ಜನಾಂಗೀಯ ಸಂಘರ್ಷ ತೀವ್ರವಾಗಿದ್ದ ಶ್ರೀಲಂಕಾದಿಂದ ಸಾವಿರಾರು ಲಂಕಾ ತಮಿಳರು ಜೀವ ರಕ್ಷಣೆಗಾಗಿ ಪಾಲ್ಕ ಜಲಸಂಧಿ ದಾಟಿ ತಮಿಳುನಾಡಿಗೆ ಬಂದು ಆಶ್ರಯ ಪಡೆದರು. ಆಗಿನ ಭಾರತದ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರೀ ಮತ್ತು ಶ್ರೀಲಂಕಾದ ಅಂದಿನ ಅಧ್ಯಕ್ಷೆ ಸಿರಿಮಾವೊ ಬಂಡಾರನಾಯಕೆ, ನಿರಾಶ್ರಿತರ ಪುನರ್ವಸತಿಗೆ ಸಂಬಂಧಿಸಿ ಒಪ್ಪಂದವೊಂದಕ್ಕೆ ಸಹಿ ಹಾಕಿದರು. ಶ್ರೀಲಂಕಾದಿಂದ ಬಂದವರು ಚಹಾ ಮತ್ತು ರಬ್ಬರ್ ತೋಟಗಳಲ್ಲಿ ಕೆಲಸ ಮಾಡುತ್ತಿದ್ದ ವರು

ಕಾಡುದಾರಿ

ಸುಮಾರು ನಲುವತ್ತು ವರ್ಷಗಳ ಹಿಂದೆ ದಕ್ಷಿಣ ಕನ್ನಡದ ಸುತ್ತಮುತ್ತ ರಬ್ಬರ್ ಬೆಳೆ ವ್ಯಾಪಕವಾಗಿ ಹಬ್ಬಿಕೊಂಡಿತು. ಅತ್ತ ಕೇರಳದಲ್ಲಿ ನೆಲೆಯೂರಿದ್ದ ರಬ್ಬರನ್ನು ಇಲ್ಲಿಗೂ ತಂದು ಪ್ಲಾಂಟೇಶನ್‌ ಗಳನ್ನು ಮಾಡಲು ಸರಕಾರವೇ ಮುಂದಾಯಿತು. ಜೊತೆಗೆ ಕೇರಳದ ಕೊಚ್ಚಿ ಕ್ರಿಶ್ಚಿಯನ್ನರು, ಶ್ರೀಲಂಕಾದಿಂದ ಬಂದ ತಮಿಳರು ಇಲ್ಲಿ ಬಂದು ನೆಲೆ ನಿಂತು ರಬ್ಬರ್ ಟ್ಯಾಪಿಂಗ್ ಮಾಡಲು ಶುರು ಮಾಡಿದರು. ಆದರೆ ರಬ್ಬರ್ ತೋಟ ಮಾಡುವವರಿಗೆ ತಲೆನೋವಾಗಿದ್ದು ಒಂದೇ- ಇಲ್ಲಿನ ದಟ್ಟ ಕಾಡುಗಳು. ಹಾಗೂ ಕಾಡುಗಳು ವಿರಳವಾಗಿದ್ದಲ್ಲಿ ದಟ್ಟವಾಗಿ ಬೆಳೆದುಕೊಂಡಿದ್ದ ‘ಕಮ್ಯುನಿಸ್ಟ್’ ಸಸ್ಯರಾಶಿ.

ಹೌದು, ಅಲ್ಲಿ ಎಲ್ಲರೂ ಅದನ್ನು ಕರೆಯುವುದು ಹಾಗೇ. ಯಾಕೆ ಆ ಹೆಸರು ಬಂದಿತೋ ಗೊತ್ತಿಲ್ಲ. ಕಮ್ಯುನಿಸಂ ಜನಪ್ರಿಯವಾಗಿರುವ ಕೇರಳದಲ್ಲೂ ಇದಕ್ಕೆ ‘ಕಮ್ಯುನಿಸ್ಟ್ ಪಾಚ’ ಎಂದೇ ಹೆಸರು. ಇದು ಬಹುಶಃ ಕಮ್ಯುನಿಸ್ಟರು ಇಟ್ಟದ್ದಲ್ಲ. ಕಮ್ಯುನಿಸ್ಟರು ಕಾಟ ಎಂದು ಭಾವಿಸಿದವರು ಇಟ್ಟಿದ್ದಿರಬಹುದು. ಆದರೆ ಅದೇ ಹೆಸರು ಜನಪ್ರಿಯವಾಗಿದೆ. ಅದರ ಇಂಗ್ಲಿಷ್ ಹೆಸರು ಜ್ಯಾಕ್ ಇನ್ ದಿ ಬುಶ್, ಡೆವಿಲ್ ವೀಡ್, ಸಿಯಾಮ್ ವೀಡ್.

ವೈಜ್ಞಾನಿಕ ಹೆಸರು ಕ್ರೊಮೊಲಿನಾ ಒಡೊರಾಟಾ ( Chromolaena odorata). ಹೂವು ಬಿಟ್ಟು ಅದರಲ್ಲಿರುವ ಸೂಕ್ಷ್ಮ ಬೀಜಗಳು ಗಾಳಿಯಲ್ಲಿ ಹಾರಿ ಹೋಗಿ ಎಲ್ಲಾ ಕಡೆ ಹುಟ್ಟಿ ಕೊಳ್ಳುತ್ತದೆ. ಪಶ್ಚಿಮ ಘಟ್ಟದ ಕಾಡುಗಳೊಳಗೂ ಇವು ಸಾಕಷ್ಟು ವ್ಯಾಪಿಸಿವೆ. ಸ್ಥಳೀಯ ಮೂಲಿಕೆಗಳನ್ನು ಬುಡಮೇಲು ಮಾಡಿವೆ.

ಇದು ಈ ನೆಲದ್ದಲ್ಲ. ಮೂಲತಃ ದಕ್ಷಿಣ ಮತ್ತು ಮಧ್ಯ ಅಮೆರಿಕಕ್ಕೆ ಸೇರಿದ ಈ ಸಸ್ಯ ಭಾರತಕ್ಕೆ ಬಂದದ್ದು 19ನೇ ಶತಮಾನದ ಮೊದಲಲ್ಲಿ. ದ್ವಿತೀಯ ವಿಶ್ವಯುದ್ಧದ ಸಮಯದಲ್ಲಿ ಹೇಗೋ ಆಕಸ್ಮಿಕವಾಗಿ ಪ್ರವೇಶಿಸಿತು. ಬಹುಶಃ ಇತರ ದೇಶಗಳಿಂದ ಆಮದು ಮಾಡಿಕೊಳ್ಳಲಾದ ಬೀಜ, ಗೊಬ್ಬರ, ಆಹಾರ ದೊಂದಿಗೆ ಆಕಸ್ಮಿಕವಾಗಿ ಬೆರೆತು ವಸಾಹತುಶಾಹಿ ಕಾಲದ ಸಸ್ಯೋದ್ಯಾನಗಳಿಗೆ ತಲುಪಿತು. ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ ಸೈನಿಕರು ಮತ್ತು ಕಾರ್ಮಿಕರು ವಿವಿಧ ಪ್ರದೇಶಗಳಿಗೆ ಸಂಚರಿಸುವಾಗ ಎಲ್ಲೆಡೆ ಹೋಗಿ ವೇಗವಾಗಿ ಸಂತಾನೋತ್ಪತ್ತಿ ಮಾಡಿಕೊಂಡಿತು.

ಇದನ್ನೂ ಓದಿ: Harish Kera Column: ‘ನಾಯಿ’ ಅಂತ ಯಾರನ್ನೂ ಬಯ್ಯಬೇಡಿ!

ರಬ್ಬರ್ ಪ್ಲಾಂಟೇಶನ್‌ಗಾಗಿ ಮಾಡಿದ ಪಾತಿಗಳಲ್ಲಿ ಇವು ಬೆಳೆದುಕೊಳ್ಳುತ್ತಿದ್ದವು. ಟ್ಯಾಪಿಂಗ್ ಮಾಡಹೋಗಲು ಅಡ್ಡಿಯಾಗುತ್ತಿದ್ದವು. ಈಗ ಇವನ್ನು ತಡೆಯುವುದು ಹೇಗೆ? ಯಾರೋ ಇನ್ನೆರಡು ಬಳ್ಳಿ ಸಸ್ಯಗಳನ್ನು ಪರಿಚಯಿಸಿದರು. ಪ್ಯುರೇರಿಯಾ ಜವನಿಕಾ ( Pueraria javanica - ಸ್ಥಳೀಯ ಭಾಷೆಯಲ್ಲಿ ಜವನಿಕೆ ಬಳ್ಳಿ) ಮತ್ತು ಮ್ಯುಕುನಾ ಬ್ರಾಕ್ಟೇಟಾ ( Mucuna bracteata ). ಇವುಗಳಿಗೆ ಇನ್ನೊಂದು ಉದ್ದೇಶವೂ ಇತ್ತು.

1960ರ ದಶಕದಲ್ಲಿ ಜನಾಂಗೀಯ ಸಂಘರ್ಷ ತೀವ್ರವಾಗಿದ್ದ ಶ್ರೀಲಂಕಾದಿಂದ ಸಾವಿರಾರು ಲಂಕಾ ತಮಿಳರು ಜೀವ ರಕ್ಷಣೆಗಾಗಿ ಪಾಲ್ಕ ಜಲಸಂಧಿ ದಾಟಿ ತಮಿಳುನಾಡಿಗೆ ಬಂದು ಆಶ್ರಯ ಪಡೆದರು. ಆಗಿನ ಭಾರತದ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರೀ ಮತ್ತು ಶ್ರೀಲಂಕಾದ ಅಂದಿನ ಅಧ್ಯಕ್ಷೆ ಸಿರಿಮಾವೊ ಬಂಡಾರನಾಯಕೆ, ನಿರಾಶ್ರಿತರ ಪುನರ್ವಸತಿಗೆ ಸಂಬಂಧಿಸಿ ಒಪ್ಪಂದವೊಂದಕ್ಕೆ ಸಹಿ ಹಾಕಿದರು. ಶ್ರೀಲಂಕಾದಿಂದ ಬಂದವರು ಚಹಾ ಮತ್ತು ರಬ್ಬರ್ ತೋಟಗಳಲ್ಲಿ ಕೆಲಸ ಮಾಡುತ್ತಿದ್ದ ವರು. ಅವರಿಗೆ ಉದ್ಯೋಗ ಕಲ್ಪಿಸಿ, ಪುನರ್ವಸತಿ ಮಾಡುವ ಉದ್ದೇಶದಿಂದ ತಮಿಳುನಾಡಿನಲ್ಲಿಯೂ ಇದೇ ರೀತಿಯ ತೋಟಗಳನ್ನು ನಿರ್ಮಿಸಲಾಯಿತು. ಕನ್ಯಾಕುಮಾರಿ ಮತ್ತು ನೀಲಗಿರಿ ಜಿಲ್ಲೆಗಳಲ್ಲಿದ್ದ ಅರಣ್ಯ ಪ್ರದೇಶಗಳನ್ನು ಆಯ್ಕೆ ಮಾಡಿ, ಅವುಗಳನ್ನು ರಬ್ಬರ್ ಮತ್ತು ಚಹಾ ತೋಟಗಳಾಗಿ ಪರಿವರ್ತಿಸಲಾಯಿತು.

ಆರಂಭದಲ್ಲಿ ರಬ್ಬರ್ ಗಿಡಗಳನ್ನು ಬೆಳೆಸುವಾಗ, ಮಣ್ಣಿನ ಸವಕಳಿ ತಡೆಯಲು ಮತ್ತು ಮಣ್ಣಿನ -ಫಲವತ್ತತೆ ಹೆಚ್ಚಿಸಲು ಜವನಿಕೆ ಬಳ್ಳಿಯನ್ನು ಕವರ್ ಕ್ರಾಪ್ ಆಗಿ ಪರಿಚಯಿಸಲಾಯಿತು. ಈ ಸಸ್ಯದ ಮೂಲ ಥಾಯ್ಲೆಂಡ್, ಮಲೇಷ್ಯಾ, ಇಂಡೋನೇಷ್ಯಾ. ಕಾಫಿ, ಎಣ್ಣೆ ತಾಳೆ, ಸಿಟ್ರಸ್ ಮತ್ತು ರಬ್ಬರ್ ತೋಟಗಳಲ್ಲಿ ಇದನ್ನು ಕವರ್ ಕ್ರಾಪ್ ಆಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದರ ಜೊತೆಗೇ 1980ರ ದಶಕದಲ್ಲಿ ಮ್ಯುಕುನಾ ಬಳ್ಳಿಯೂ ಬಂತು. ಇದು ದ್ವಿದಳ ಧಾನ್ಯ ಕುಟುಂಬಕ್ಕೆ ಸೇರಿದ ನೆಲದ ಮೇಲೆ ಹರಡುವ ಬಳ್ಳಿ. ಇದೂ ದಕ್ಷಿಣ ಏಷ್ಯಾ ದೇಶಗಳದ್ದೇ.

ಇದರ ಬೆಳೆಯುವ ವೇಗ ಗೊತ್ತೆ? ಈ ಬಳ್ಳಿ ರಾಕ್ಷಸನಂತೆ ದಿನಕ್ಕೆ ಸುಮಾರು 10 ರಿಂದ 15 ಸೆಂಟಿ ಮೀಟರ್‌ನಷ್ಟು ವೇಗವಾಗಿ ಬೆಳೆಯುತ್ತದೆ. ಮಣ್ಣನ್ನು ರಕ್ಷಿಸುತ್ತದೆ, ಮಣ್ಣಿನ ಸವಕಳಿ ತಡೆಯುತ್ತದೆ, ಸಾವಯವ- ಸಾರಜನಕ ಅಂಶ ಹೆಚ್ಚಿಸುತ್ತದೆ, ಮಣ್ಣಿನಲ್ಲಿನ ತೇವಾಂಶ ಕಾಪಾಡುತ್ತದೆ, ಮಳೆನೀರಿ ನೊಂದಿಗೆ ಮಣ್ಣಿನ ಪೋಷಕಾಂಶಗಳು ಕೊಚ್ಚಿಹೋಗುವುದನ್ನು ಕಡಿಮೆ ಮಾಡುತ್ತದೆ ಮಾಡುತ್ತದೆ ಎಂಬುದೆಲ್ಲ ನಿಜ. ಕಡುಬೇಸಿಗೆಯಲ್ಲೂ ಒಣಗುವುದಿಲ್ಲ. ನೆರಳಿನಲ್ಲಿಯೂ ಬೆಳೆಯುತ್ತದೆ. ಇದರಲ್ಲಿ ಫಿನಾಲಿಕ್ ಸಂಯುಕ್ತಗಳು ಹೆಚ್ಚಿರುವುದರಿಂದ ಜಾನುವಾರುಗಳು ಸಾಮಾನ್ಯವಾಗಿ ತಿನ್ನುವುದಿಲ್ಲ.

bird ok

ಆದರೆ ಇಂದು ಇದರ ಆಕ್ರಮಣಕೋರತನವೇ ಅನಾಹುತಕಾರಿಯಾಗಿದೆ. ಇದರ ಬೇರು ಆಳ ಹೋಗುತ್ತದೆ. ಬೆಳೆಯುವ ವೇಗ ಸಿಕ್ಕಾಪಟ್ಟೆ. ಕಾಲಕ್ರಮೇಣ ಇದು ಯಾವ ಪರಿ ಬೆಳೆದಿದೆ ಎಂದರೆ, ಭಸ್ಮಾಸುರನಾಗಿದೆ. ರಬ್ಬರ್ ತೋಟಗಳನ್ನು ದಾಟಿ ಸುತ್ತಮುತ್ತಲಿನ ನೈಸರ್ಗಿಕ ಅರಣ್ಯಗಳಿಗೆ ಹಬ್ಬಿದೆ. ಇದು ಮೊದಲು ಸಣ್ಣಪುಟ್ಟ ಗಿಡಗಳನ್ನು ಹತ್ತಿ, ಹಬ್ಬಿಕೊಂಡು, ಅವುಗಳಿಗೆ ಗಾಳಿಬೆಳಕು ಸಿಗದಂತೆ ಮಾಡಿ ಉಸಿರುಗಟ್ಟಿಸಿ ಸಾಯಿಸುತ್ತದೆ. ನಂತರ ದೊಡ್ಡ ಮರಗಳ ಸರದಿ. ಜೆಸಿಬಿ ಯಂತ್ರ ಗಳ ಸಹಾಯದಿಂದಲೂ ಇವುಗಳ ಬೇರುಸಮೇತ ಕಿತ್ತು ಹಾಕಲು ಸಾಧ್ಯವಾಗಿಲ್ಲ.

ಮಣ್ಣಿನಲ್ಲಿ ಇದರ ಬೇರಿನ ಒಂದು ಸಣ್ಣ ತುಂಡು ಉಳಿದರೂ ಸಾಕು, ಮತ್ತೆ ವೇಗವಾಗಿ ಬೆಳೆಯು ತ್ತದೆ. ಇದರ ರಕ್ತಬೀಜ ಸ್ವರೂಪದಿಂದ ದಿಗಿಲಾದ ಕೇರಳ ಹಾಗೂ ತಮಿಳುನಾಡು ಸರಕಾರಗಳು ಈಗ ಈ ಎರಡು ಬಳ್ಳಿಗಳ ನಾಶಕ್ಕೆ ಕರೆ ಕೊಟ್ಟಿವೆ. ರಕ್ಷಿತಾರಣ್ಯಗಳಿಗೆ ಇವು ಹಬ್ಬದಂತೆ ನೋಡಿಕೊಳ್ಳಿ ಎಂದಿವೆ.

ದಕ್ಷಿಣ ಕನ್ನಡದ ಸುಳ್ಯ, ಪುತ್ತೂರು, ಬೆಳ್ತಂಗಡಿ, ಸಂಪಾಜೆ ಇತ್ಯಾದಿ ನಿತ್ಯಹರಿದ್ವರ್ಣ ಕಾಡುಗಳಲ್ಲೂ ಇದೇ ಸ್ಥಿತಿ ಇದೆ. ಒಂದು ಕಾಲದಲ್ಲಿ ಕಮ್ಯುನಿಸ್ಟ್ ಕಳೆಯಿಂದ ಅಡಕೆ ತೋಟಗಳಿಗೆ ಕಾಲಿಡಲು ಅಸಾಧ್ಯ ಪರಿಸ್ಥಿತಿ ಇತ್ತು. ಈಗ ಮ್ಯುಕುನಾ ಹಾಗೂ ಜವನಿಕೆಯಿಂದ ರಬ್ಬರ್ ತೋಟಗಳಿಗೂ ಕಾಡಿಗೂ ಕಾಲಿಡಲಾಗದಂತೆ ಆಗಿದೆ.

ಮೇಲಿನೆರಡನ್ನು ಉದಾಹರಣೆಗಳಾಗಿ ಕೊಟ್ಟಿದ್ದೇನೆ. ಹೀಗೆ ಭಾರತಕ್ಕೆ, ಕರ್ನಾಟಕಕ್ಕೆ ಬಂದ ಹಲವಾರು ಆಕ್ರಮಣಕಾರಿ ಆಮದಿತ ಕಳೆಗಳಿವೆ. ನೀವು ಸುಲಭವಾಗಿ ಗಮನಿಸಬಹುದಾದ ಎರಡು ಎಂದರೆ ಪಾರ್ಥೇನಿಯಂ ಮತ್ತು ಲಂಟಾನ.

ಲಂಟಾನಾ ಕ್ಯಾಮರಾ (Lantana camara) ಮೂಲತಃ ಮಧ್ಯ ಮತ್ತು ದಕ್ಷಿಣ ಅಮೆರಿಕಕ್ಕೆ ಸೇರಿದ ಸಸ್ಯ. ಇದನ್ನು ಭಾರತಕ್ಕೆ ಅಲಂಕಾರಿಕ ಸಸ್ಯವಾಗಿ ಪರಿಚಯಿಸಲಾಯಿತು. ನಂತರ ಇದು ಅರಣ್ಯ, ಹುಲ್ಲುಗಾವಲು ಮತ್ತು ಸಂರಕ್ಷಿತ ಪ್ರದೇಶಗಳಲ್ಲೆಲ್ಲ ವ್ಯಾಪಕವಾಗಿ ಹರಡಿಕೊಂಡಿತು. ದಟ್ಟ ಪೊದೆ ಗಳಂತೆ ಬೆಳೆದು, ಸ್ಥಳೀಯ ಸಸ್ಯಗಳು ಬೆಳೆಯಲು ಅಗತ್ಯವಾದ ಜಾಗ, ಬೆಳಕು ಮತ್ತು ಪೋಷಕಾಂಶ ಗಳನ್ನು ಕಸಿದುಕೊಳ್ಳುತ್ತದೆ. ಲಂಟಾನಾ ವ್ಯಾಪಕವಾಗಿ ಹರಡಿದ ಪ್ರದೇಶಗಳಲ್ಲಿ ಜಾನುವಾರುಗಳು ಮತ್ತು ಕಾಡುಪ್ರಾಣಿಗಳಿಗೆ ಮೇವೂ ಸಿಗುವುದಿಲ್ಲ. ಇದರ ಮತ್ತೊಂದು ಅಪಾಯ ಕಾಡ್ಗಿಚ್ಚು. ಸುಲಭ ವಾಗಿ ಹೊತ್ತಿಕೊಳ್ಳುವ ಗುಣ ಹೊಂದಿದೆ.

ಇನ್ನೊಂದು ಪಾರ್ಥೀನಿಯಂ ಹಿಸ್ಟೆರೋಫೋರಸ್ (Parthenium hysterophorus). ಇದನ್ನು ಕಾಂಗ್ರೆಸ್ ಕಳೆ ಎಂದು ಕರೆಯುವುದು ವಾಡಿಕೆ. ಬಹುಶಃ ಕಾಂಗ್ರೆಸನ್ನು ಕಂಡರಾಗದ ಯಾರೋ ಇದನ್ನಿಟ್ಟಿರಬೇಕು. ಇದರ ಮೂಲವೂ ದಕ್ಷಿಣ- ಮಧ್ಯ ಅಮೆರಿಕ. ಬಹುಶಃ ಆಮದು ಆಹಾರ ಧಾನ್ಯಗಳ ಮೂಲಕ ಆಕಸ್ಮಿಕವಾಗಿ ಭಾರತ ಪ್ರವೇಶಿಸಿತು. ಬಹಳ ವೇಗವಾಗಿ ಹರಡಿತು. ಇಂದು ಕೃಷಿ ಜಮೀನು, ರಸ್ತೆ ಬದಿ, ಖಾಲಿ ಜಾಗಗಳಲ್ಲೆಲ್ಲ ಇದು ವ್ಯಾಪಕ. ಮನುಷ್ಯರ ಆರೋಗ್ಯಕ್ಕೂ ಸಮಸ್ಯೆ ಉಂಟುಮಾಡಬಹುದು. ತೀವ್ರ ಅಲರ್ಜಿ, ಚರ್ಮದ ಕಿರಿಕಿರಿ ಮತ್ತು ಉಸಿರಾಟದ ತೊಂದರೆಗಳಿಗೆ ಕಾರಣವಾಗಬಹುದು. ಕೃಷಿ ಜಮೀನುಗಳಲ್ಲಿಯೂ ದೊಡ್ಡ ಸಮಸ್ಯೆ. ಬೆಳೆಯ ನೀರು, ಪೋಷಕಾಂಶ ಗಳು, ಸೂರ್ಯನ ಬೆಳಕು ಮತ್ತು ಜಾಗಕ್ಕಾಗಿ ಸ್ಪರ್ಧಿಸುತ್ತದೆ. ಜಾನುವಾರುಗಳಿಗೆ ವಿಷಕಾರಿಯಾಗ ಬಹುದು. ಇದನ್ನೂ ನಿರ್ಮೂಲನೆ ಮಾಡುವುದು ಸುಲಭವಲ್ಲ. ಏಕೆಂದರೆ ಲಕ್ಷಗಟ್ಟಲೆ ಬೀಜಗಳನ್ನು ಉತ್ಪಾದಿಸುವ ದುಷ್ಟ.

ಭಾರತಕ್ಕೆ ಮಾತ್ರ ಇಂಥ ಆಕ್ರಮಣಕಾರಿ ಸಸ್ಯಗಳ ಕಾಟವಲ್ಲ. ಎಲ್ಲ ದೇಶಗಳೂ ಇದನ್ನು ಅನುಭವಿಸುತ್ತಿವೆ. ಹಾಗೇ ಪ್ರಾಣಿ ಪಕ್ಷಿಗಳು ಕೂಡ ಅನಪೇಕ್ಷಿತ ಅತಿಥಿಗಳಾಗಿಬಿಡುತ್ತವೆ. ನಮ್ಮಲ್ಲಿ ಸ್ಥಳೀಯವಾಗಿದ್ದುದು. ಅನ್ಯ ದೇಶಕ್ಕೆ ಹೋದಾಗ ಆಕ್ರಮಣಕಾರಿ ವಿದೇಶಿ ತಳಿ ಅನ್ನಿಸಿಕೊಳ್ಳ ಬಹುದು. ಅದಕ್ಕೊಂದು ಉದಾಹರಣೆ- ಮೈನಾ. ಇಂಡಿಯನ್ ಮೈನಾ ಅಥವಾ ಕಾಮನ್ ಮೈನಾ. ನಮ್ಮ ಸುತ್ತಮುತ್ತ ನಾವು ಸಾಮಾನ್ಯವಾಗಿ ನೋಡುವ ಹಕ್ಕಿ. ಹುಲ್ಲುಗಾವಲಲ್ಲಿ, ನಗರಗಳಲ್ಲಿ, ವಸತಿ ಪ್ರದೇಶಗಳಲ್ಲಿ, ಪಾರ್ಕ್‌ಗಳಲ್ಲಿ ಗಂಭೀರವಾಗಿ ಹೆಜ್ಜೆ ಹಾಕುತ್ತಾ ಸಾಗುವ ಈ ಕಂದು ಬಣ್ಣದ ಹಕ್ಕಿಯನ್ನು ಗಮನಿಸದಿರಲಿ ಸಾಧ್ಯವೇ ಇಲ್ಲ. ಹಳದಿ ಕಣ್ಣಿನ ಸುತ್ತಲಿನ ಪಟ್ಟೆ, ಬಣ್ಣಬಣ್ಣದ ಕೊಕ್ಕು ಮತ್ತು ಕಂದು ದೇಹ.

1862ರಲ್ಲಿ, ಆಸ್ಟ್ರೇಲಿಯಾದ ಮೆಲ್ಬೋರ್ನ್ ಸುತ್ತಮುತ್ತಲಿನ ತರಕಾರಿ ತೋಟಗಳಿಗೆ ಹಾನಿ ಮಾಡುತ್ತಿದ್ದ ಕೀಟಗಳನ್ನು ನೈಸರ್ಗಿಕವಾಗಿ ನಿಯಂತ್ರಿಸಲು ವಿಕ್ಟೋರಿಯನ್ ಕಾಲದ ಕೃಷಿ ಅಧಿಕಾರಿಗಳು ಒಂದು ಮಾರ್ಗ ಹುಡುಕುತ್ತಿದ್ದರು. ಬೆಳೆಗಳನ್ನು ಕೀಟಗಳಿಂದ ರಕ್ಷಿಸುವ ಉದ್ದೇಶ ದಿಂದ, ಇಲ್ಲಿಂದ ಕಾಮನ್ ಮೈನಾ ಹಕ್ಕಿಗಳನ್ನು ಅಲ್ಲಿಗೆ ಒಯ್ಯಲಾಯಿತು. ಅವು ಕೀಟಗಳನ್ನು ತಿಂದು ಬೆಳೆಗಳನ್ನು ರಕ್ಷಿಸುತ್ತದೆ ಎಂಬ ನಿರೀಕ್ಷೆ ಅವರzಗಿತ್ತು. ಅದನ್ನೇನೋ ಅವು ಮಾಡಿದವು. ಆದರೆ ಪರಿಸ್ಥಿತಿಗೆ ಹೊಂದಿಕೊಳ್ಳುವುದರಲ್ಲಿ ಅವು ತೋರಿದ ಚಾಣಾಕ್ಷತನ ಮುಂದೆ ಸಮಸ್ಯೆ ಯಾಯಿತು.

ಈ ಹಕ್ಕಿ ನಗರ ಪರಿಸರಕ್ಕೂ ಬಹಳ ಸುಲಭವಾಗಿ ಹೊಂದಿಕೊಂಡಿತು. ಸಿಗುವ ಯಾವುದೇ ರೀತಿಯ ಆಹಾರವನ್ನು ಬಳಸಿಕೊಳ್ಳುವ ಸಾಮರ್ಥ್ಯ ಇದಕ್ಕಿತ್ತು. ಹೀಗಾಗಿ, ಹೊಲದ ಪರಿಸರದಿಂದ ಇತರೆಲ್ಲ ಕಡೆಗೂ ಅದು ವ್ಯಾಪಕವಾಗಿ ಹರಡಿತು. ತಜ್ಞರ ಪ್ರಕಾರ ಇದು ಅತ್ಯಂತ ಅವಕಾಶವಾದಿ ಆಹಾರ ಪದ್ಧತಿ ಹೊಂದಿರುವ ಹಕ್ಕಿ. ಅಂದರೆ ಸಿಕ್ಕಿದ್ದನ್ನು ತಿನ್ನುವ ಗುಣ. ಸಾಮಾನ್ಯವಾಗಿ ದೀರ್ಘಕಾಲ ಒಂದೇ ಸಂಗಾತಿಯೊಂದಿಗೆ ಇದ್ದು, ಸಂತಾನೋತ್ಪತ್ತಿ ಮಾಡುತ್ತವೆ. ಗೂಡು ಕಟ್ಟುವ ಪ್ರದೇಶವನ್ನೂ ತಮ್ಮದೇ ಎಂದು ರಕ್ಷಿಸಿಕೊಳ್ಳುತ್ತವೆ. ಮರಗಳ ಪೊಟರೆಗಳು, ಮನೆಗಳ ಮೇಲ್ಛಾವಣಿ, ಗೋಡೆ ಸಂದುಗಳಲ್ಲಿ ಎಲೆ ಕಡ್ಡಿ ಕೆಲವೊಮ್ಮೆ ವಯರ್ ಕೂಡ ಬಳಸಿ ಗೂಡು ಕಟ್ಟುತ್ತವೆ. ಹತ್ತಿರ ಬಂದ ಇತರ ಹಕ್ಕಿಗಳನ್ನು ಬೆದರಿಸಿ ಓಡಿಸುತ್ತವೆ.

ಜಗತ್ತಿನಾದ್ಯಂತ ಇಂಥ ಆಕ್ರಮಣಕಾರಿ ತಳಿಗಳನ್ನು ಗುರುತಿಸುವ ಒಂದು ವ್ಯವಸ್ಥೆ ಇದೆ- ‘ಗ್ಲೋಬಲ್ ಇನ್ವೇಸಿವ್ ಸ್ಪೀಷೀಸ್ ಡೇಟಾಬೇಸ್’ ಎಂದದರ ಹೆಸರು. ಅದು ಗುರುತಿಸಿರುವ ವಿಶ್ವದ ೧೦೦ ಅತ್ಯಂತ ಅಪಾಯಕಾರಿ ಆಕ್ರಮಣಕಾರಿ ಅನ್ಯಜಾತಿ ಪ್ರಭೇದಗಳಲ್ಲಿ ನಮ್ಮ ಕಾಮನ್ ಮೈನಾ ಕೂಡ ಸೇರಿದೆ. ಈ ಪಟ್ಟಿಯಲ್ಲಿರುವ ಮೂರು ಪಕ್ಷಿ ಪ್ರಭೇದಗಳಲ್ಲಿ ಇದೂ ಒಂದು.

ಇತ್ತೀಚೆಗೆ ನಮ್ಮ ರಾಜ್ಯದಲ್ಲಿ ಸರಕಾರ, ಸಾರ್ವಜನಿಕ ಪ್ರದೇಶದಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ ಎಂದು ಆದೇಶ ಮಾಡಿದೆ. ಅದನ್ನು ಗಮನಿಸುತ್ತಿದ್ದಾಗ ಮೇಲಿನದೆಲ್ಲ ನೆನಪಾದವು. ಪಾರಿವಾಳಗಳ ಸಂಖ್ಯೆ ಹೆಚ್ಚಿ, ಅವುಗಳಿಂದ ಕಾಯಿಲೆಗಳು ಹರಡುತ್ತಿವೆ ಎಂಬ ಆತಂಕ ಆ ಆದೇಶಕ್ಕೆ ಕಾರಣ. ಅವುಗಳ ಮಲ-ಮೂತ್ರದಿಂದ ಸೋಂಕು ಹರಡುವುದು, ಉಸಿರಾಟ ತೊಂದರೆ ಸೇರಿದಂತೆ ಶ್ವಾಸಕೋಶ ಸಂಬಂಽತ ಗಂಭೀರ ಆರೋಗ್ಯ ಸಮಸ್ಯೆಗಳಾಗುತ್ತಿವೆಯಂತೆ. ಈ ಹಿನ್ನೆಲೆಯಲ್ಲಿ ಹೊಸ ನಿಯಂತ್ರಣ ಮಾರ್ಗಸೂಚಿ. ಉಲ್ಲಂಸಿದವರಿಗೆ ದಂಡ, ಜೈಲು ಶಿಕ್ಷೆ ಇದೆ.

ವಿಶೇಷ ಅಂದರೆ ಈ ಪಾರಿವಾಳಗಳು ಮೂಲತಃ ಭಾರತದವಲ್ಲ. ಈಜಿಪ್ಟ್, ಯುರೋಪ್, ಏಷ್ಯಾದ ಬೇರೆಗಳಿಂದ ಬಂದವು. ಮೊಘಲರು ಇವನ್ನು ಹೆಚ್ಚಾಗಿ ಇಲ್ಲಿಗೆ ತಂದು ಸಾಕುವ ರೀತಿಯನ್ನು ಪರಿಚಯಿಸಿದರು. ಅವರ ಉದ್ಯಾನಗಳಲ್ಲಿ ಸ್ವೇಚ್ಛೆಯಾಗಿ ವಿಹರಿಸಲು ಬಿಟ್ಟರು. ಇಂದು ಅವು ಹಾಕುವ ಹಿಕ್ಕೆ, ತಾಜ್‌ಮಹಲ್ ಸೇರಿದಂತೆ ಎಲ್ಲ ಸ್ಮಾರಕಗಳಿಗೆ ತಲೆನೋವು ತಂದಿದೆ. ಆಕ್ರಮಣಕಾರಿ ತಳಿಯ ಸಸ್ಯಗಳು, ಪ್ರಾಣಿಗಳು, ಅಕ್ರಮ ವಲಸಿಗರಿದ್ದ ಹಾಗೆ. ಅಪಾಯ ಗೊತ್ತಾಗುವುದು ಬಹಳ ಸಮಯದ ಬಳಿಕ.

ಹರೀಶ್‌ ಕೇರ

View all posts by this author