ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Harish Kera Column: ‘ನಾಯಿ’ ಅಂತ ಯಾರನ್ನೂ ಬಯ್ಯಬೇಡಿ!

ಇನ್ನೊಂದು ಘಟನೆ. ದಾವಣಗೆರೆಯ ತೊಟ್ಟಿಲು ಹಳ್ಳದ ಬಳಿ ಚಂದ್ರಾ ನಾಯ್ಕ್ ಎಂಬವನ ಹೆಣ ಸಿಕ್ಕಿತು. ರಿವಾಲ್ವರ್‌ನಲ್ಲಿ ಶೂಟ್ ಮಾಡಲಾಗಿತ್ತು. ಪೊಲೀಸರು ಮೊದಲು ತಂದದ್ದೇ ದಾವಣಗೆರೆ ಪೊಲೀಸ್ ಶ್ವಾನಪಡೆಯಲ್ಲಿ ಇದ್ದ ತುಂಗಾ ಎಂಬ ಡಾಬರ್‌ಮನ್ ಪಿಂಚರ್ ನಾಯಿಯನ್ನು. ಆಕೆ ಸ್ಥಳದಲ್ಲಿದ್ದ ವಾಸನೆ ಗ್ರಹಿಸಿ ತಕ್ಷಣ ಓಡಲಾರಂಭಿಸಿದಳು. ಓಡಿ ಓಡಿ, ಕಾಶಿಪುರ ತಾಂಡಾದಲ್ಲಿನ ವೈನ್‌ಶಾಪ್‌ಗೆ, ಅಲ್ಲಿಂದ ಹೋಟೆಲ್‌ಗೆ, ಅಲ್ಲಿಂದ ಹೊರಟು ಸ್ವಲ್ಪ ದೂರದಲ್ಲಿದ್ದ ಮನೆಯ ಬಳಿ ಬಂದು ನಿಂತು ಬೊಗಳಲಾರಂಭಿಸಿತು.

Harish Kera Column: ‘ನಾಯಿ’ ಅಂತ ಯಾರನ್ನೂ ಬಯ್ಯಬೇಡಿ!

-

ಹರೀಶ್‌ ಕೇರ
ಹರೀಶ್‌ ಕೇರ Jul 30, 2026 6:00 AM

ಕಾಡುದಾರಿ

ಇದು ಮೊನ್ನೆ ಮೊನ್ನೆಯ ಪ್ರಕರಣ. ಶ್ರೀರಂಗಪಟ್ಟಣ ಬಸ್ ನಿಲ್ದಾಣದ ಬಳಿ ಕೆಆರ್ ಪೇಟೆಯ ರಾಕೇಶ್ ಎಂಬ ವ್ಯಕ್ತಿ ಕೊಲೆಯಾಗಿ ಬಿದ್ದಿದ್ದ. ಮಚ್ಚಿನಲ್ಲಿ ಕೊಚ್ಚಿಹಾಕಲಾಗಿತ್ತು. ಇದೊಂದು ಮರ್ಯಾದಾ ಹತ್ಯೆ ಆಗಿರಬಹುದು ಎಂಬುದು ಪೊಲೀಸರಿಗೆ ಬಂದ ಮೊದಲ ಅನುಮಾನ. ಕಾರಣ, ಕೊಲೆ ಆಗುವುದಕ್ಕೆ ಮೊದಲು ಆತ ಒಂದು ಗಂಟೆ ಕಾಲ ತನ್ನ ಗರ್ಲ್‌ಫ್ರೆಂಡ್ ಜೊತೆ ಫೋನ್‌ನಲ್ಲಿ ಮಾತಾಡಿದ್ದ. ಆ ನಂಬರ್ ಟ್ರ್ಯಾಕ್ ಮಾಡಿದ ಪೊಲೀಸರಿಗೆ ಸಿಕ್ಕವಳು ಅವನ ಗೆಳತಿ. ಆಕೆಯ ಜಾತಿ ಬೇರೆ. ಮನೆಯಲ್ಲಿ ಅವರ ಜೋಡಿ ಯನ್ನು ವಿರೋಧಿಸಿದ್ದರು. ಆಕೆಯ ಬಂಧುಗಳ ಮೇಲೆ ಪೊಲೀಸರಿಗೆ ಅನುಮಾನ ಬರುವುದು ಸಹಜ. ಆದರೆ, ಪ್ರಕರಣದ ತನಿಖೆಗೆ ಎಂಟ್ರಿ ಕೊಟ್ಟ ಸಿಂಬಾ ಎಂಬ ಪೊಲೀಸ್ ನಾಯಿ, ತನಿಖೆಯ ಜಾಡನ್ನು ಬದಲಿಸಿತು.

ಅದು ರಾಕೇಶ್ ಹೆಣದ ಬಳಿಯಿಂದ ವಾಸನೆ ಹಿಡಿದು, ಅಲ್ಲಿಂದ ತುಸು ದೂರದಲ್ಲಿದ್ದ ಆತನ ಬೈಕ್ ಕಡೆ ಹೋಗಿ ಮೂಸಿತು. ಅಲ್ಲಿಂದ ಕೊಲೆಗಾರನ ಜಾಡು ಹಿಡಿದು ಸುಮಾರು ದೂರ ಓಡಿ ಕೆಲವು ಅಂಗಡಿಗಳ ಬಳಿ ನಿಂತು ಬೊಗಳಿತು. ಆರೋಪಿ ಬೇರೆ ಯಾರೋ ಇರಬಹುದು ಎಂಬ ಸುಳಿವು ಪೊಲೀಸರಿಗೆ ಸಿಕ್ಕಿತು. ಆ ದಿಕ್ಕಿನಲ್ಲಿ ತನಿಖೆ ಮಾಡಿದಾಗ, ರಾಕೇಶ್ ಮೈಸೂರಿಗೆ ಮರದ ಕೆಲಸ ಮಾಡಲು ಹೋಗುತ್ತಿದ್ದುದು, ಅಲ್ಲಿ ಅಂಬರೀಶ್ ಎಂಬಾತ ಇವನಿಗೆ ಜೊತೆಯಾದದ್ದು ಗೊತ್ತಾ ಯಿತು. ಅಂಬರೀಶನ ಬೆನ್ನು ಹತ್ತಿದ ಪೊಲೀಸರು, ಅಕ್ಕಿಹೆಬ್ಬಾಳಿನಲ್ಲಿ ತಮಿಳುನಾಡು ಬಸ್ಸಿಗೆ ಹತ್ತಿ ಕೂತಿದ್ದ ಆತನನ್ನು ರಾಕೇಶನ ರಕ್ತದ ಕಲೆಗಳಿದ್ದ ಶರ್ಟಿನ ಸಮೇತ ಹಿಡಿದರು. ಕುಡಿದ ಮತ್ತಿನಲ್ಲಿ ಹಣ ಕೇಳಿದಾಗ ಕೊಡದಿದ್ದುದಕ್ಕೆ ಆತ ರಾಕೇಶನ ಕೊಲೆ ಮಾಡಿದ್ದನ್ನು ಒಪ್ಪಿಕೊಂಡ. ಸಿಂಬಾ ಈತನ ಜಾಡು ಹಿಡಿಯದಿದ್ದರೆ ಬಹುಶಃ ಪೊಲೀಸರು ಮರ್ಯಾದಾ ಹತ್ಯೆಯ ಥಿಯರಿ ಹಿಡಿದು ದಾರಿ ತಪ್ಪುತ್ತಿದ್ದರು.

ಇನ್ನೊಂದು ಘಟನೆ. ದಾವಣಗೆರೆಯ ತೊಟ್ಟಿಲು ಹಳ್ಳದ ಬಳಿ ಚಂದ್ರಾ ನಾಯ್ಕ್ ಎಂಬವನ ಹೆಣ ಸಿಕ್ಕಿತು. ರಿವಾಲ್ವರ್‌ನಲ್ಲಿ ಶೂಟ್ ಮಾಡಲಾಗಿತ್ತು. ಪೊಲೀಸರು ಮೊದಲು ತಂದದ್ದೇ ದಾವಣಗೆರೆ ಪೊಲೀಸ್ ಶ್ವಾನಪಡೆಯಲ್ಲಿ ಇದ್ದ ತುಂಗಾ ಎಂಬ ಡಾಬರ್‌ಮನ್ ಪಿಂಚರ್ ನಾಯಿಯನ್ನು. ಆಕೆ ಸ್ಥಳದಲ್ಲಿದ್ದ ವಾಸನೆ ಗ್ರಹಿಸಿ ತಕ್ಷಣ ಓಡಲಾರಂಭಿಸಿದಳು. ಓಡಿ ಓಡಿ, ಕಾಶಿಪುರ ತಾಂಡಾದಲ್ಲಿನ ವೈನ್‌ಶಾಪ್‌ಗೆ, ಅಲ್ಲಿಂದ ಹೋಟೆಲ್‌ಗೆ, ಅಲ್ಲಿಂದ ಹೊರಟು ಸ್ವಲ್ಪ ದೂರದಲ್ಲಿದ್ದ ಮನೆಯ ಬಳಿ ಬಂದು ನಿಂತು ಬೊಗಳಲಾರಂಭಿಸಿತು. ರಾತ್ರಿ 12.30. ಮನೆ ಬಾಗಿಲು ತೆರೆಸಿದಾಗ, ಅಲ್ಲಿಗೆ ಅಂದು ಬಂದು ಮಲಗಿದ್ದ ಚೇತನ್ ಎಂಬ ಅವರ ಸಂಬಂಧಿಕ ಸಿಕ್ಕಿಬಿದ್ದ. ವಿಚಾರಣೆಗೆ ಒಳಪಡಿಸಿದಾಗ ಕೊಲೆ ಒಪ್ಪಿಕೊಂಡ.

ಇದನ್ನೂ ಓದಿ: Harish Kera Column: ಕಾಣಿಸಿದರೆ ಭಾಗ್ಯ, ಕಾಣಿಸದಿದ್ದರೆ ಬೆರಗು!

ಆಗಿದ್ದು ಇಷ್ಟೇ- ಚೇತನ್ ಮತ್ತು ಚಂದ್ರಾನಾಯ್ಕ್ ಧಾರವಾಡದ ಮನೆಯೊಂದರಲ್ಲಿ ಚಿನ್ನಾಭರಣ, ಒಂದು ಸರ್ವಿಸ್ ರಿವಾಲ್ವರ್ ಕದ್ದಿದ್ದರು. ಚಿನ್ನಾಭರಣವನ್ನು ಎಲ್ಲರೂ ಹಂಚಿಕೊಂಡಿದ್ದರು. ಚಂದ್ರಾನಾಯ್ಕ್ ತನಗೆ ಹೆಚ್ಚಿನ ಪಾಲು ನೀಡುವಂತೆ ಒತ್ತಾಯಿಸಿ ಬೆದರಿಕೆ ಹಾಕಿದ್ದ. ಕೋಪಗೊಂಡ ಚೇತನ್, ಚಂದ್ರಾನಾಯ್ಕನನ್ನು ತೊಟ್ಟಿಲು ಹಳ್ಳದ ಬಳಿ ಕರೆಸಿಕೊಂಡು, ಕದ್ದಿದ್ದ ಸರ್ವಿಸ್ ರಿವಾಲ್ವರ್‌ನಲ್ಲಿ ಶೂಟ್ ಮಾಡಿ ಪರಾರಿಯಾಗಿದ್ದ. ಸಾಮಾನ್ಯವಾಗಿ ಶ್ವಾನಪಡೆ ನಾಯಿಗಳು ಅಪರಾಧ ನಡೆದ ಪ್ರದೇಶದಿಂದ 3ರಿಂದ 5 ಕಿ.ಮೀ ದೂರದವರೆಗೆ ಹೋಗುತ್ತವೆ. ಆದರೆ ತುಂಗಾ 2 ಗಂಟೆಗಳಲ್ಲಿ 12 ಕಿ.ಮೀ ಓಡಿ, ಕೊಲೆಗಾರನನ್ನು ಪತ್ತೆ ಮಾಡಿತ್ತು. ತುಂಗಾಳ ಟ್ರ್ಯಾಕ್ ರೆಕಾರ್ಡ್‌ನಲ್ಲಿ ಇಂಥ ಹತ್ತು ಹಲವು ಕೇಸ್‌ಗಳಿವೆ.

ಈ ತುಂಗಾಳ ನಂತರ ಬಂದ ತುಂಗಾ-2 ಎಂಬ ನಾಯಿ, ಕೊಲೆಗಾರನನ್ನು ಪತ್ತೆ ಮಾಡಿದಳಲ್ಲದೆ, ಕೊಲೆಯಾಗಲಿದ್ದ ಒಬ್ಬಳನ್ನೂ ರಕ್ಷಿಸಿತ್ತು. ಸಂತೆಬೆನ್ನೂರಿನಲ್ಲಿ ಸಂತೋಷ್ ಎಂಬಾತನ ಕೊಲೆ. ಅದರ ವಾಸನೆ ಹಿಡಿದ ತುಂಗಾ-2, ಎಂಟು ಕಿ.ಮೀ ಓಡಿ ಮನೆಯೊಂದರ ಮುಂದೆ ನಿಂತು ಗಲಾಟೆ ಎಬ್ಬಿಸಿತು. ಒಳಗಿದ್ದ ರಂಗಸ್ವಾಮಿ ಎಂಬಾತ ತನ್ನ ಪತ್ನಿ ರೂಪಾ ಎಂಬವಳನ್ನು ಸಾಯ ಬಡಿಯುತ್ತಿದ್ದ. ಸಂತೋಷ್‌ನನ್ನು ಕೊಂದು ಬಂದವನು, ರೂಪಾಳನ್ನು ಸಾಯಿಸಲು ಹೊರಟಿದ್ದ. ಕಾರಣ, ಹೆಂಡತಿಗೆ ಸಂತೋಷ್ ಜೊತೆ ಸಂಬಂಧವಿದೆ ಎಂಬ ಕ್ರೋಧ. ಸಾಯಲಿದ್ದ ಅವಳನ್ನು ತುಂಗಾ ಉಳಿಸಿತ್ತು.

ಹನ್ನೆರಡಲ್ಲ, 22 ಕಿ.ಮೀ. ದೂರದಲ್ಲಿದ್ದ ಆರೋಪಿಯನ್ನು ಹಿಡಿದ ಶ್ವಾನಗಳೂ ಉಂಟು. ಉತ್ತರ ಪ್ರದೇಶದ ಕಾಸ್‌ಗಂಜ್ ಎಂಬಲ್ಲಿ ಒಬ್ಬ ಹುಡುಗನ್ನು ಕೊಂದು, ಫಾರಂನಲ್ಲಿ ಹೂತುಹಾಕಿ, ಅಲ್ಲಿದ್ದ ಟ್ರ್ಯಾಕ್ಟರನ್ನು ಪಾತಕಿಗಳು ಕದ್ದಿದ್ದರು. ಜಾನಿ ಎಂಬ ಜರ್ಮನ್ ಶೆಫರ್ಡ್ ನಾಯಿ ಅಲ್ಲಿಂದ ಪಾತಕಿಗಳ ವಾಸನೆ ಕಂಡುಹಿಡಿದು ಒಂದೇ ಸಮನೆ 22 ಕಿ.ಮೀ ಓಡಿ, ಟ್ರ್ಯಾಕ್ಟರನ್ನೂ ಕಂಡು ಹಿಡಿದಿದ್ದಲ್ಲದೆ ಕೊಲೆಗಾರರನ್ನೂ ಹಿಡಿದುಕೊಟ್ಟಿತ್ತು. ಮುಂಬಯಿಯ ಜೆಸ್ಸೀ ಎಂಬ ಜರ್ಮನ್ ಶೆಫರ್ಡ್ ನಾಯಿಯದು ಇನ್ನೊಂದು ಕತೆ. ಅದು ಗಣೇಶ ವಿಸರ್ಜನೆಯ ಸಮಯ. ಬೀದಿ ಬೀದಿಗಳು ಜನರಿಂದ ತುಂಬಿ ತುಳುಕುತ್ತಿದ್ದವು. ಪುಟ್ಟ ಮಗುವೊಂದು ಕಿಡ್ನಾಪ್ ಆಗಿತ್ತು. ಅದರ ವಾಸನೆ ಹಿಡಿದು ನುಗ್ಗಿದ ಜೆಸ್ಸೀ, ಲಕ್ಷಾಂತರ ಜನರ ನಡುವೆ ದಾರಿ ಮಾಡಿಕೊಂಡು, ಆಗಷ್ಟೇ ಪರಾರಿಯಾಗಲು ಟ್ಯಾಕ್ಸಿ ಹಿಡಿದು ಮಗುವಿನೊಂದಿಗೆ ಕುಳಿತಿದ್ದ ಕಿಡ್ನಾಪರ್ ಬಳಿಗೆ ಪೊಲೀಸರನ್ನು ತಂದು ನಿಲ್ಲಿಸಿತ್ತು. ಇನ್ನೊಂದು ಪ್ರಕರಣದಲ್ಲಿ, ಆರೋಪಿ ಸೀರೆ ಧರಿಸಿ ವಂಚಿಸಿ ಪರಾರಿಯಾಗಲೂ ಯತ್ನಿಸಿದರೂ ಬಿಡದೆ ಅವನನ್ನು ಬೆತ್ತಲೆ ಮಾಡಿತ್ತು. ಇದೇ ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ 6 ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿ ಪರಾರಿಯಾದ ನೀಚನನ್ನು ಸಿಂಬಾ ಎಂಬ ನಾಯಿ ಅವನ ಟವೆಲ್ ವಾಸನೆ ಗ್ರಹಿಸಿ ದೂರದ ಮನೆಯಿಂದ ಅಟ್ಟಿ ಹಿಡಿದಿತ್ತು.

71 k

ಇಂಥ ಹತ್ತು ಹಲವು ಪ್ರಕರಣಗಳನ್ನು ಉಲ್ಲೇಖಿಸಬಹುದು. ಅರ್ಥ ಇಷ್ಟೇ- ಮನುಷ್ಯನಿಗಿಲ್ಲದ ಅಪೂರ್ವ ವಾದ ಎರಡು ಶಕ್ತಿಗಳು ನಾಯಿಗಳಿಗೆ ಇವೆ. ಒಂದು, ಘ್ರಾಣಶಕ್ತಿ. ಎರಡನೆಯದು, ಶ್ರವಣಶಕ್ತಿ. ಪಾತಕಿ ಗಳನ್ನು ಹಿಡಿಯಲು ಇವು ಘ್ರಾಣಶಕ್ತಿಯ ನೆರವು ಪಡೆಯುತ್ತವೆ. ಮನುಷ್ಯ ನಾಯಿಗಳನ್ನು ಪಳಗಿಸಲು ಶುರು ಮಾಡಿದ್ದೂ ಇವೆರಡು ಕಾರಣಕ್ಕೆ. ಆತ ಬೇಟೆ ಆಡುತ್ತಿದ್ದ ಕಾಲದಿಂದ ಇವು ಅವನ ಜೊತೆಗಿವೆ. ಬಹಳ ದೂರದಲ್ಲಿ ಚಲಿಸುವ ಬೇಟೆ ಮೃಗ ಒಂದು ತರಗೆಲೆಯ ಮೇಲೆ ಕಾಲಿಟ್ಟ ಸೂಕ್ಷ್ಮ ಸದ್ದು ಅದರ ಜಾಡು ಹಿಡಿಯಲು ನಾಯಿಗೆ ಸಾಕಾಗುತ್ತದೆ.

ಏನೀ ಅಪೂರ್ವ ಶಕ್ತಿ? ನಾಯಿಗಳು ಸಹಜ ಬೇಟೆಗಾರರು. ಮನುಷ್ಯನ ಜೊತೆಗೆ ಪಳಗುವ ಮೊದಲು ಅವು ಗುಂಪಾಗಿ ಬೇಟೆಯಾಡಿ ಬದುಕಬೇಕಿತ್ತು. ವಿಕಾಸದ ಪಥದಲ್ಲಿ ಅವು ವಾಸನೆ ಹಿಡಿಯುವ ಹಾಗೂ ಸೂಕ್ಷ್ಮ ಸಪ್ಪಳ ಆಲಿಸುವ ಶಕ್ತಿಯನ್ನು ಬೆಳೆಸಿಕೊಂಡವು. ಅವುಗಳ ಮೂಗಿನಲ್ಲಿ ವಾಸನೆ ಗ್ರಹಿಸುವ 10 ಕೋಟಿಗೂ ಹೆಚ್ಚು ಕೋಶಗಳು ಇವೆ. ಮನುಷ್ಯರಲ್ಲಿ ಇರುವುದು 60 ಲಕ್ಷ ಮಾತ್ರ. ಜೊತೆಗೆ, ವಾಸನೆಯನ್ನು ವಿಶ್ಲೇಷಿಸುವ ನಾಯಿಗಳ ಮೆದುಳಿನ ಭಾಗ ಮನುಷ್ಯರಿಗಿಂತ 40 ಪಟ್ಟು ದೊಡ್ಡದು. ಹೀಗಾಗಿ ಅವು ನಮಗಿಂತ 1,000ರಿಂದ 10,000 ಪಟ್ಟು ಹೆಚ್ಚು ಸೂಕ್ಷ್ಮವಾಗಿ ವಾಸನೆ ಗುರುತಿಸಬಲ್ಲವು.

ನಾಯಿಗಳ ಮೂಗಿನಲ್ಲಿ ಜೇಕಬ್ಸನ್ ಅಂಗ (Jacobson's Organ, Vomeronasal Organ) ಎಂಬ ವಿಶೇಷ ಅಂಗವಿದೆ. ಇದು ಸಾಮಾನ್ಯ ವಾಸನೆಗಳನ್ನು ಮಾತ್ರವಲ್ಲ, ಮನುಷ್ಯರಿಗೆ ಗೊತ್ತಾಗದ ಸೂಕ್ಷ್ಮ ರಾಸಾಯನಿಕ ಸಂಕೇತಗಳನ್ನೂ ಗುರುತಿಸುತ್ತದೆ. ಈ ಅಂಗ ಬಳಸಿ ನಾಯಿಗಳು ಸಂಗಾತಿ ಯನ್ನು ಆಯ್ಕೆ ಮಾಡುತ್ತವೆ. ಮರಿಗಳು ತಮ್ಮ ತಾಯಿಯನ್ನು ಸುಲಭವಾಗಿ ಗುರುತಿಸುತ್ತವೆ. ತಾಯಿಯ ಹಾಲನ್ನು ಪತ್ತೆಹಚ್ಚುತ್ತವೆ. ತಾಯಿಯಿಂದ ದೂರವಾದರೂ ಮತ್ತೆ ಹುಡುಕಿಕೊಳ್ಳುತ್ತವೆ.

ಒಂದು ವೇಳೆ ಅಪರಾಧ ಎಸಗಿದ ಪಾತಕಿ ಚೆನ್ನಾಗಿ ಸೋಪ್ ಹಚ್ಚಿ ಸ್ನಾನ ಮಾಡಿಕೊಂಡು ಬಂದಿದ್ದರೂ, ಡ್ರಿಲ್‌ನಲ್ಲಿ ಆತನನ್ನು ಇತರ ಇಪ್ಪತ್ತೈದು ವ್ಯಕ್ತಿಗಳ ಜೊತೆ ನಿಲ್ಲಿಸಿದ್ದರೂ ಈ ನಾಯಿಗಳು ಪತ್ತೆ ಹಚ್ಚುತ್ತವಲ್ಲ, ಅದು ಹೇಗೆ? ಅದಕ್ಕೆ ಅವುಗಳ ಆಘ್ರಾಣಶಕ್ತಿಯ ಜೊತೆಗೆ ಮನುಷ್ಯನ ಭಯ ಪ್ರವೃತ್ತಿಯೂ ಕಾರಣ. ನಾಯಿ ಕಂಡಾಗ ಆರೋಪಿ ಆತಂಕಗೊಳ್ಳುತ್ತಾನೆ. ಅದನ್ನು ಮುಖದಲ್ಲಿ ವ್ಯಕ್ತಪಡಿಸದಷ್ಟು ಜಾಣ ಅವನಾಗಿದ್ದರೂ, ದೇಹ ಸುಳಿವನ್ನು ಬಿಟ್ಟು ಕೊಟ್ಟೇ ಬಿಡುತ್ತದೆ. ಆತಂಕಗೊಂಡಾಗ ದೇಹದಲ್ಲಿ ಅಡ್ರಿನಲಿನ್ ಹಾರ್ಮೋನ್ ಸ್ರಾವ ಹೆಚ್ಚಾಗುತ್ತದೆ. ಮನುಷ್ಯರಿಗೆ ಅದರ ವಾಸನೆ ಗೊತ್ತಾಗದಿದ್ದರೂ, ನಾಯಿಗಳು ಅದನ್ನು ಸುಲಭವಾಗಿ ಗುರುತಿಸು ತ್ತವೆ. ಆತಂಕದಲ್ಲಿದ್ದಾಗ ದೇಹದಲ್ಲಿ ರಕ್ತಸಂಚಾರವೂ ಹೆಚ್ಚಾಗುತ್ತದೆ. ಇದರಿಂದ ಕೆಲವು ರಾಸಾಯನಿಕಗಳು ಚರ್ಮದ ಮೇಲ್ಮೈಗೆ ಬರುತ್ತವೆ. ಅವನ್ನೂ ನಾಯಿಗಳು ವಾಸನೆಯ ಮೂಲಕ ತಿಳಿದುಕೊಳ್ಳುತ್ತವೆ. ಆದ್ದರಿಂದ ನಿಮ್ಮ ನಿಜವಾದ ಭಾವನೆಗಳನ್ನು ನಾಯಿಯಿಂದ ಮರೆಮಾಡು ವುದು ಕಷ್ಟ.

ನಾಯಿಗಳ ಮೂಗೇ ಒಂದು ಶಾರ್ಪ್ ರೇಡಾರ್. ಒಂದು ಬಾರಿ ವಾಸನೆ ಹಿಡಿದರೆ ಸಾಕು, ಇಲ್ಲಿ ಮೂತ್ರಿಸಿ ಹೋದ ನಾಯಿ ಗಂಡೋ ಹೆಣ್ಣೋ, ಆರೋಗ್ಯವಾಗಿದೆಯಾ ಇಲ್ವಾ, ಕೋಪದಲ್ಲಿದೆಯಾ ಸಂತೋಷ ದಲ್ಲಿದೆಯಾ ಎಂಬುದೆಲ್ಲ ಗೊತ್ತಾಗುತ್ತದೆ. ಇದಕ್ಕಾಗಿಯೇ ನಾಯಿಗಳು ಪರಸ್ಪರ ದೇಹಗಳನ್ನು, ವಿಶೇಷವಾಗಿ ಹಿಂಭಾಗದ ವಾಸನೆ ನೋಡುತ್ತವೆ. ಅದು ಅವುಗಳ ಪರಿಚಯ ವಿಧಾನ. ನಾಯಿಗಳ ವಾಸನೆಯ ನೆನಪಿನ ಶಕ್ತಿಯೂ ಅದ್ಭುತ. ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಆದ ವಿಶಿಷ್ಟ ದೇಹದ ವಾಸನೆ ಇರುತ್ತದೆ. ಆದ್ದರಿಂದ ನಾಯಿಗಳು ನೋಡದೆ ಕೂಡ, ದೂರದಲ್ಲಿ ಬರುವ ವ್ಯಕ್ತಿಯನ್ನು ಗುರುತಿಸಬಲ್ಲವು. ನೀವು ಮನೆಗೆ ಅಷ್ಟು ದೂರದಲ್ಲಿರುವಾಗಲೇ ನಿಮ್ಮ ನಾಯಿ ಚೈನ್ ಜಗ್ಗುತ್ತ ಹಾರಿ ಹಾರಿ ಕುಂಯಿಗುಟ್ಟಲು ಇದೇ ಕಾರಣ. ಮನೆಯಿಂದ ದೂರ ಹೋದರೂ ನಾಯಿಗಳು ಹಿಂದಿರುಗುತ್ತವೆ ಅಂತೀವಲ್ಲ? ಅದಕ್ಕೂ ಮೂಗೇ ಕಾರಣ. ಅವುಗಳ ಮೂಗಿನ ಎರಡು ರಂಧ್ರಗಳು ಸ್ವತಂತ್ರ. ವಾಸನೆ ಯಾವ ದಿಕ್ಕಿನಿಂದ ಬರುತ್ತಿದೆ, ಎಡದಿಂದಲೋ ಬಲದಿಂದಲೋ ಎಂಬುದನ್ನು ಗ್ರಹಿಸುತ್ತವೆ.

ಈಗ ಅಟ್ಲಾಸ್ ಎಂಬ ನಾಯಿಯ ಕತೆ ಕೇಳಿ. ನ್ಯೂಯಾರ್ಕ್ ಪೊಲೀಸ್ ಇಲಾಖೆಯ ಅತ್ಯಂತ ಪ್ರಸಿದ್ಧ ಜರ್ಮನ್ ಶೆಫರ್ಡ್ ಶ್ವಾನಗಳಲ್ಲಿ ಇದು ಒಂದು. ಅವಳಿ ಟವರ್‌ಗಳ ಮೇಲೆ 2001ರ 9/11ರಂದು ಭಯೋತ್ಪಾದಕ ವಿಮಾನ ದಾಳಿ ಆದ ನಂತರ, ಕಟ್ಟಡ ಕಸದ ಭೀಕರ ರಾಶಿಯ ನಡುವೆ ಅಳಿದುಳಿದವರ ಶೋಧಕ್ಕೆ ನಿಯುಕ್ತಿಯಾಗಿದ್ದ ಶ್ವಾನಗಳಲ್ಲಿ ಇದೂ ಒಂದು. ಅಲ್ಲೆಲ್ಲೋ ಸಂದಿನಲ್ಲಿ ನುಸಿದು ಬರುವ ಒಂದು ಸೂಕ್ಷ್ಮ ಮಾನವ ಪರಿಮಳ, ಇನ್ನೆಲ್ಲಿಂದಲೋ ಮೆಲ್ಲನೆ ಕೇಳಿ ಬರುವ ಆರ್ತನಾದದ ಕ್ಷೀಣ ಸದ್ದು- ಅವರನ್ನು ಪತ್ತೆ ಹಚ್ಚಲು ಇವಳಿಗೆ ಸಾಕಾಗುತ್ತಿತ್ತು.

ಹೀಗೆ ರಕ್ಷಿಸುತ್ತ, ಒಂದು ಹಂತದಲ್ಲಿ ಅಟ್ಲಾಸ್ ತನ್ನ ಹ್ಯಾಂಡ್ಲರ್ ಬಾಬ್ ಶ್ನೆಲ್ಲೆಯೊಂದಿಗೆ ಕುಸಿದ ಕಟ್ಟಡದ ಕೆಳಗೆ ಹೋಗುತ್ತದೆ. ಇಲ್ಲೇನೋ ಸರಿಯಿಲ್ಲ ಎಂದು ಅದಕ್ಕೆ ಅನಿಸಿದ ತಕ್ಷಣ ಜೋರಾಗಿ ಬೊಗಳುತ್ತ ಶ್ನೆಲ್ಲೆಯ ಪ್ಯಾಂಟ್ ಹಿಡಿದು ಜಗ್ಗುತ್ತದೆ. ಕೂಡಲೇ ಶ್ನೆಲ್ಲೆ ನಾಯಿ ಜತೆ ಹೊರಗೆ ಬರುತ್ತಾನೆ. ಅವರು ಹೊರಗೆ ಬಂದ ಕೂಡಲೆ ಆ ಅವಶೇಷ ಧರಾಶಾಯಿಯಾಗುತ್ತದೆ. ಹೀಗೆ ತನ್ನ ಮಾಲಿಕನ ಜೀವವನ್ನೂ ಅದು ಉಳಿಸುತ್ತದೆ. ಬಹುಶಃ ಅವಶೇಷಗಳು ಕುಸಿಯಲು ಆರಂಭಿಸುವ ಮೊದಲಿನ ಅತಿ ಕ್ಷೀಣ ಸದ್ದನ್ನು ಅದು ಕೇಳಿಸಿಕೊಂಡಿರಬಹುದು. ತಿಂಗಳುಗಳ ಕಾಲ ಅಲ್ಲಿನ ಧೂಳು, ಹೊಗೆ, ಅವಶೇಷಗಳು, ಅಪಾಯಕಾರಿ ಪರಿಸರದಲ್ಲಿ ಕೆಲಸ ಮಾಡಿದ ಅಟ್ಲಾಸ್ ಮುಂದೆ ಕ್ಯಾನ್ಸರ್‌ನಿಂದ ಸತ್ತುಹೋಯಿತು.

ನಾವು ಸಾಮಾನ್ಯವಾಗಿ 20 ಹರ್ಟ್ಸ್ʼನಿಂದ 20,000 ಹರ್ಟ್ಸ್ʼವರೆಗಿನ ಶಬ್ದಗಳನ್ನು ಕೇಳಬಲ್ಲೆವು. ನಾಯಿಗಳು 40 ಹರ್ಟ್‌ಸ್‌ನಿಂದ 65,000 ಹರ್ಟ್‌ಸ್‌ವರೆಗಿನ ಹೆಚ್ಚಿನ ಫ್ರೀಕ್ವೆನ್ಸಿಯ ಶಬ್ದಗಳನ್ನು ಆಲಿಸಬಲ್ಲವು. ಅಂದರೆ ಮನುಷ್ಯರಿಗೆ ಕೇಳಿಸದ ಅತಿ ಸೂಕ್ಷ್ಮ ಧ್ವನಿಗಳನ್ನೂ ನಾಯಿಗಳು ಸುಲಭ ವಾಗಿ ಗುರುತಿಸುತ್ತವೆ. ನಮ್ಮ ಸಾಮರ್ಥ್ಯದ 4 ಪಟ್ಟು ದೂರದಲ್ಲಿರುವ ಶಬ್ದವನ್ನೂ ಗುರುತಿಸ ಬಲ್ಲವು. ಅದಕ್ಕಾಗಿಯೇ ಮನೆ ಬಳಿ ಯಾರಾದರೂ ಬಂದರೆ ನಮಗೆ ತಿಳಿಯುವ ಮೊದಲೇ ನಾಯಿ ಎಚ್ಚರವಾಗಿ ಬೊಗಳುತ್ತದೆ. ನಾಯಿಗಳ ಕಿವಿಯಲ್ಲಿ 18ಕ್ಕೂ ಹೆಚ್ಚು ಸ್ನಾಯುಗಳಿವೆ. ಇವುಗಳ ಸಹಾಯದಿಂದ ಕಿವಿಯನ್ನು 180 ಡಿಗ್ರಿವರೆಗೆ ತಿರುಗಿಸ ಬಲ್ಲವು. ಶಬ್ದ ಯಾವ ದಿಕ್ಕಿನಿಂದ ಬರುತ್ತಿದೆ, ಮೂಲವೇನು ಎಂದೆಲ್ಲ ನಿಖರವಾಗಿ ಗುರುತಿಸುತ್ತವೆ. ಗಾಢ ನಿದ್ರೆಯಲ್ಲಿದ್ದರೂ ಅಪರಿಚಿತ ಶಬ್ದ, ವಾಹನದ ಅಥವಾ ಮನೆಯವರ ಹೆಜ್ಜೆಯ ಸದ್ದನ್ನು ಕೂಡಲೇ ಗುರುತಿಸುತ್ತವೆ. ಅದಕ್ಕೇ ‘ನಾಯಿ ನಿದ್ರೆ’ ಎಂಬ ನಾಣ್ಣುಡಿಯ ರೂಢಿ.

ನಾಯಿಯ ಯೋಗ್ಯತೆ ಗೊತ್ತಾಯಿತಲ್ಲ. ಇನ್ನು ಯಾರನ್ನೂ ‘ನಾಯಿ’ ಎಂದು ಬಯ್ಯಲು ಹೋಗಬೇಡಿ. ಅದು ತೆಗಳಿಕೆಯೇ ಅಲ್ಲ.