ವಿದ್ಯಮಾನ
ದೇಶದ ಎಲ್ಲ ಶಾಲೆಗಳಲ್ಲಿ ಹಿಂದಿಯನ್ನು ಕಡ್ಡಾಯ ಭಾಷೆಯಾಗಿ ಕಲಿಸಬೇಕು ಎಂದು ನಮಗೆ ಸ್ವಾತಂತ್ರ್ಯ ಸಿಗುವ ಪೂರ್ವದ ಅಂದರೆ 1938ರ ಈಸ್ಟ್ ಇಂಡಿಯಾ ಕಂಪನಿಯ ಸರಕಾರ ಆದೇಶ ಮಾಡಿತ್ತು ಮತ್ತು ದಕ್ಷಿಣ ಭಾರತೀಯರಿಂದ ಅದಕ್ಕೆ ವಿರೋಧವೂ ಅಂದಿನಿಂದಲೇ ಪ್ರಾಂಭವಾಗಿತ್ತು. ಹಾಗಾಗಿ ಹಿಂದಿಯನ್ನು ರಾಷ್ಟ್ರ ಭಾಷೆಯಾಗಿ ಗೌರವಿಸ ಬೇಕೇ ಅಥವಾ ಕೇವಲ ಒಂದು ಕಲಿಕಾ ಭಾಷೆಯಾಗಿ ಸ್ವೀಕರಿಸಬೇಕೆ ಅಥವಾ ತ್ರಿಭಾಷಾ ಸೂತ್ರದಡಿಯಲ್ಲಿ ಮೂರನೇ ಭಾಷೆಯಾಗಿ ಯಾದರೂ ಕಡ್ಡಾಯವಾಗಿ ಕಲಿಯಬೇಕೆ ಎನ್ನುವ ಗೊಂದಲ ದಕ್ಷಿಣ ಭಾರತೀಯ ರಿಗೆ ಸ್ವಾತಂತ್ರ್ಯ ಪೂರ್ವದಿಂದಲೂ ಇದೆ.
ಎಸ್‌ಎಸ್‌ಎಲ್ʼಸಿ ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡುವ ಹಿಂದಿ ಭಾಷೆಯ ಹೇರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಇನ್ಮುಂದೆ ಎಸ್.ಎಸ್.ಎಲ್.ಸಿ ಪರೀಕ್ಷೆಗಳಲ್ಲಿ ‘ತೃತೀಯ ಭಾಷೆ’ಯನ್ನು ಗ್ರೇಡಿಂಗ್ ವ್ಯವಸ್ಥೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಈವರೆಗೆ 625 ಅಂಕಗಳ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ 100 ಅಂಕಗಳನ್ನು ನಿಗದಿಪಡಿಸ ಲಾಗಿತ್ತು. ಇನ್ಮುಂದೆ ತೃತೀಯ ಭಾಷೆಯಲ್ಲಿ ಪಾಸ್ ಅಥವಾ ಫೇಲ್ ಎಂಬ ಪದ್ಧತಿ ಇರುವು ದಿಲ್ಲ. ಅಂದರೆ, ಅಂತಿಮ ಫಲಿತಾಂಶದ ಅಂಕಗಳಿಗೆ ತೃತೀಯ ಭಾಷೆಯ ಅಂಕಗಳನ್ನು ಪರಿಗಣಿಸಲಾಗುವುದಿಲ್ಲ.
ಬದಲಾಗಿ, ಗ್ರೇಡಿಂಗ್ (ಉದಾಹರಣೆಗೆ: ಎ,ಬಿ,ಸಿ,ಡಿ) ನೀಡಲಾಗುತ್ತದೆ. ಹಿಂದಿ, ಸಂಸ್ಕೃತ, ತುಳು, ಮರಾಠಿ, ಅರೇಬಿಕ್ ಸೇರಿದಂತೆ ಪಠ್ಯಕ್ರಮದಲ್ಲಿರುವ ಎಲ್ಲಾ ತೃತೀಯ ಭಾಷೆಗಳಿಗೂ ಈ ನಿಯಮ ಅನ್ವಯವಾಗಲಿದೆ. ಕನ್ನಡವನ್ನೂ ತೃತೀಯ ಭಾಷೆಯಾಗಿ ತೆಗೆದುಕೊಳ್ಳುವ ಆಯ್ಕೆ ಇರುವುದರಿಂದ ಕನ್ನಡಕ್ಕೂ ಅಷ್ಟರಮಟ್ಟಿಗೆ ಪೆಟ್ಟು ಬಿದ್ದಿದೆ ಎನ್ನುವುದು ಸತ್ಯ.
ಆದ್ದರಿಂದ ಹಿಂದಿ ಹೇರಿಕೆಯನ್ನು ತಗ್ಗಿಸಲು ಹೋಗಿ, ಅನಿವಾರ್ಯವಾಗಿ ಮೂರನೇ ಭಾಷೆಯಾಗಿ ಆದರೂ ಕನ್ನಡವನ್ನು ಕಲಿಯುತ್ತಿದ್ದ ಮಕ್ಕಳಿಗೆ ಸರಕಾರವೇ ಕನ್ನಡ ಕಲಿಕೆ ಅನಿವಾರ್ಯವಲ್ಲ ಎಂದು ಹೇಳಿದ ಹಾಗಾಯ್ತು. ಪರೀಕ್ಷೆಯ ಸಮಯದಲ್ಲಿ ಈ ತೀರ್ಮಾನ ಘೋಷಿಸಿದ ರೀತಿಯ ಬಗ್ಗೆ ಸರಕಾರ ತೀವ್ರ ಟೀಕೆಯನ್ನು ಎದುರಿಸುವ ಹಾಗಾಯ್ತು. ಈ ವಿಷಯದಲ್ಲಿ ರಾಜ್ಯಪಾಲರೂ ಈಗ ಪ್ರವೇಶ ಮಾಡಿದ್ದು, ಭಾಷಾ ಸಾಮರಸ್ಯ ಹಾಗೂ ಮಕ್ಕಳ ಬೌದ್ಧಿಕ ಬೆಳವಣಿಗೆಯ ಮೇಲೆ ಸರಕಾರದ ಈ ದಿಢೀರ್ ನಿರ್ಧಾರ ಮಾರಕ ಪರಿಣಾಮ ಬೀರುವುದರಿಂದ, ನಿರ್ಧಾರವನ್ನು ಮರುಪರಿಶೀಲಿಸುವಂತೆ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸುದೀರ್ಘ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: Vinayak V Bhat Column: ಸುಸಂಸ್ಕೃತ ರಾಮಚಂದ್ರನೇ ನಿಜವಾದ ಜಂಟ್ಲ್ʼಮನ್
ಮೊನ್ನೆ ದಾವಣಗೆರೆಯಲ್ಲಿ ಚುನಾವಣಾ ಪ್ರಚಾರದಲ್ಲಿದ್ದ ಮುಖ್ಯಮಂತ್ರಿಗಳೆದುರಿನ ಕನ್ನಡವನ್ನು ಅಲಕ್ಷ್ಯ ಮಾಡಲಾಯಿತು. ಎಲ್ಲರಿಗೂ ತಿಳಿದಿರುವಂತೆ, ದಾವಣಗೆರೆ ಉಪ ಚುನಾವಣಾ ಕಣದಲ್ಲಿರುವ ಶಾಮನೂರು ಶಿವಶಂಕರಪ್ಪನವರ ಮೊಮ್ಮೊಗ ನಿರ್ಣಾಯಕ ಸಂಖ್ಯೆಯಲ್ಲಿರುವ ಮುಸ್ಲಿಂ ಮತದಾರರ ವಿರೋಧವನ್ನು ಎದುರಿಸುತ್ತಿದ್ದಾರೆ, ಮುಸ್ಲಿಂ ಸಮುದಾಯದ ಕೋಪವನ್ನು ತಣಿಸುವ ಎಲ್ಲಾ ಪ್ರಯತ್ನವನ್ನೂ ಶಾಮನೂರು ಕುಟುಂಬ ಹಾಗೂ ರಾಜ್ಯ ಕಾಂಗ್ರೆಸ್ ಮಾಡುತ್ತಿದೆ ಎನ್ನುವುದು ತಿಳಿದ ವಿಷಯವೇ ಆಗಿದೆ.
ಮೊನ್ನೆ ಮುಸ್ಲಿಂ ಸಮುದಾಯದವರನ್ನು ಉದ್ದೇಶಿಸಿ ಅಭ್ಯರ್ಥಿಯ ತಾಯಿ, ಸಂಸದರೂ ಆಗಿರುವ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ ಅವರು ಸಭೆಯೊಂದರಲ್ಲಿ ಮಾತನಾಡಲು ಬರುತ್ತಾರೆ, ವಿದ್ಯಾವಂತೆಯಾದ ಅವರು ಕನ್ನಡ ಇಂಗ್ಲಿಷ್ ಹಿಂದಿ ಭಾಷೆಗಳಲ್ಲಿ ನಿರರ್ಗಳ ವಾಗಿ ಮಾತನಾಡಬಲ್ಲವರು.
ಆದರೆ ಕರ್ನಾಟಕದಲ್ಲಿ ಸಾಮಾನ್ಯವಾಗಿ ಕನ್ನಡದ ಮಾತನಾಡುವ ಅವರು ಅನಿರೀಕ್ಷಿತ ವಾಗಿ ಹಿಂದಿಯ ಮಾತಾಡಿದರು. ವೇದಿಕೆಯ ಮೇಲಿರುವ ಎಲ್ಲ ಮುಸ್ಲಿಂ ಸಮುದಾಯದ ನಾಯಕರಿಗೂ ಖುಷಿಯೋ ಖುಷಿ! ಮೇಡಂ ಹಿಂದಿಯಲ್ಲಿ ಮಾತನಾಡಿದ್ದಾರೆ, ಅದರಲ್ಲೂ ಎಲ್ಲರಿಗೂ ನಮಸ್ಕಾರ ಎಂದು ಹೇಳುವ ಜಾಗದಲ್ಲಿ ’ಸಲಾಂ ಆಲೇಕುಂ’ ಎಂದಿದ್ದಾರೆ ಎನ್ನುವ ಕಾರಣಕ್ಕೋ ಏನೋ!
ರಾಜಕೀಯ ಏನೇ ಇರಲಿ, ಒಂದು ಕಾಲದಲ್ಲಿ ಕನ್ನಡ ಕಾವಲು ಸಮಿತಿಯ ಜವಾಬ್ದಾರಿ ಹೊತ್ತಿದ್ದ ರಾಜ್ಯದ ಮುಖ್ಯಮಂತ್ರಿಗಳ ಮುಂದೆ, ಅದರಲ್ಲೂ ಕರ್ನಾಟಕದ ನಡುಮನೆ ಯಂತಿರುವ ದಾವಣಗೆರೆಯಲ್ಲಿ ನಿಂತು ಕನ್ನಡ ಮಾತನಾಡದೇ, ತುಷ್ಟೀಕರಣಕ್ಕೆ ಹಿಂದಿ ಯನ್ನು ಮೇಡಮ್ ಭಾಷಣಕ್ಕೆ ಆಯ್ಕೆ ಮಾಡಿಕೊಂಡಿರುವುದನ್ನು ಯಾರೂ ಪ್ರಶ್ನೆ ಮಾಡುವ ಧೈರ್ಯ ತಾಕತ್ತು ತೋರಿಸದೇ, ಕೇಂದ್ರ ಸರಕಾರದಿಂದ ಹಿಂದಿ ಹೇರಿಕೆಯಾಗು ತ್ತಿದೆ, ನಾವು ಇದನ್ನು ಸಹಿಸುವುದಿಲ್ಲ ಎಂದು ಬೊಬ್ಬೆ ಹಾಕುವುದಲ್ಲಿ ಯಾವ ಪುರುಷಾರ್ಥ ವಿದೆಯೋ ಕಾಣೆ.
ಕರ್ನಾಟಕದಲ್ಲಿ ಮುಸ್ಲಿಮರಿಗೆ ಕನ್ನಡ ಬರುತ್ತೆ, ನಿಸಾರ ಅಹಮದ್ ಅಂಥಹ ಕವಿಗಳು ಆ ಸಮುದಾಯದಲ್ಲಿ ಆಗಿ ಹೋಗಿದ್ದಾರೆ, ಕನ್ನಡಕ್ಕಾಗಿ ಇಂದಿಗೂ ಆ ಸಮುದಾಯದಲ್ಲಿ ಕೆಲಸ ಮಾಡುತ್ತಿರುವವರಿದ್ದಾರೆ. ಧುರಂಧರ ಸಿನಿಮಾ ರಾಜ್ಯಾದ್ಯಂತ ಹವಾ ಎಬ್ಬಿಸುತ್ತಿದೆ, ರಾಜ್ಯದ ಅನೇಕ ಚಿತ್ರಮಂದಿರ ಗಳಲ್ಲಿ ಆ ಸಿನಿಮಾದ ಕನ್ನಡ ಅವತರಣಿಕೆಯೂ ಇದೆ, ಪ್ರಾಮಾಣಿಕವಾಗಿ ಹೇಳಿ!
ಕರ್ನಾಟಕದಲ್ಲಿ ಕನ್ನಡ ಅವತರಣಿಕೆಯನ್ನು ಹೆಚ್ಚು ಜನ ನೋಡುತ್ತಾರೋ ಅಥವಾ ಹಿಂದಿಯನ್ನೋ, ಹಿಂದಿಯನ್ನೇ ತಾನೆ? ಹಾಗಾದರೆ, ಇದು ಹೇರಿಕೆಯ ಪ್ರಶ್ನೆಯಲ್ಲವ? ಸ್ವಯಂ ಪ್ರೇರಣೆಯಿಂದ ಅಂದ ಹಾಗಾಯ್ತು, ಬೇರೆ ಬೇರೇ ಕಾರಣಕ್ಕಾಗಿ ಜನರಿಗೆ ಅದು ಇಷ್ಟವಾಗುತ್ತದೆ. ಹಾಗಾಗಿ ಅವರು ಹಿಂದಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಅಷ್ಟೆ.
ಇನ್ನು, ಕರ್ನಾಟಕದ ಮದರಸಾಗಳಲ್ಲಿ ಕನ್ನಡವನ್ನು ಕಲಿಸುವುದಿಲ್ಲ ಎನ್ನುವ ದೂರು ಇದೆ, ಕರ್ನಾಟಕ ಸರಕಾರ ರಾಜ್ಯದ ಮದರಸಾಗಳ ಶಿಕ್ಷಕರಿಗೆ ಕನ್ನಡ ಭಾಷೆಯನ್ನು ಕಲಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಇತ್ತೀಚೆಗೆ ಆರಂಭಿಸಿದೆ. ಇವೆಲ್ಲವನ್ನೂ ನೋಡುವಾಗ, ಭಾಷಾ ನೀತಿಯ ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ದ್ವಂದ್ವಗಳು ಎದ್ದು ಕಾಣುತ್ತವೆ.
ಇರಲಿ, ಇವಕ್ಕೆಲ್ಲ ಉತ್ತರ, ಸಮಜಾಯಿಶಿ ಕೊಡಲು, ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲು ಸರಕಾರ ಮತ್ತು ಅದರ ಮಂತ್ರಿಗಳಿದ್ದಾರೆ. ನಾವು ಮೂಲಭೂತವಾಗಿ ಈ ತ್ರಿಭಾಷಾ ಸೂತ್ರದ ಹಿನ್ನೆಲೆಯನ್ನು ಸ್ವಲ್ಪ ನೋಡೋಣ. ದೇಶದ ಎಲ್ಲ ಶಾಲೆಗಳಲ್ಲಿ ಹಿಂದಿಯನ್ನು ಕಡ್ಡಾಯ ಭಾಷೆಯಾಗಿ ಕಲಿಸಬೇಕು ಎಂದು ನಮಗೆ ಸ್ವಾತಂತ್ರ್ಯ ಸಿಗುವ ಪೂರ್ವದ ಅಂದರೆ 1938ರ ಈಸ್ಟ್ ಇಂಡಿಯಾ ಕಂಪನಿಯ ಸರಕಾರ ಆದೇಶ ಮಾಡಿತ್ತು ಮತ್ತು ದಕ್ಷಿಣ ಭಾರತೀ ಯರಿಂದ ಅದಕ್ಕೆ ವಿರೋಧವೂ ಅಂದಿನಿಂದಲೇ ಪ್ರಾರಂಭವಾಗಿತ್ತು.
ಹಾಗಾಗಿ ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಗೌರವಿಸಬೇಕೇ ಅಥವಾ ಕೇವಲ ಒಂದು ಕಲಿಕಾ ಭಾಷೆಯಾಗಿ ಸ್ವೀಕರಿಸಬೇಕೆ ಅಥವಾ ತ್ರಿಭಾಷಾ ಸೂತ್ರದಡಿಯಲ್ಲಿ ಮೂರನೇ ಭಾಷೆ ಯಾಗಿಯಾದರೂ ಕಡ್ಡಾಯವಾಗಿ ಕಲಿಯಬೇಕೆ ಎನ್ನುವ ಗೊಂದಲ ದಕ್ಷಿಣ ಭಾರತೀಯ ರಿಗೆ ಸ್ವಾತಂತ್ರ್ಯ ಪೂರ್ವದಿಂದಲೂ ಇದೆ.
ತಮಿಳುನಾಡಿನಿಂದ ಪ್ರಾರಂಭವಾದ ಈ ಹಿಂದಿ ವಿರೋಧಿ ಹೋರಾಟ ಪೆರಿಯಾರ್, ಅಣ್ಣಾ ದೊರೈರ ಕಾಲದಿಂದಲೂ ಇದೆ. ಇವತ್ತಿಗೂ ತ್ರಿಭಾಷಾ ಸೂತ್ರವನ್ನು ಒಪ್ಪದ ಏಕೈಕ ರಾಜ್ಯ ವಾಗಿ ತಮಿಳುನಾಡು ಪ್ರತ್ಯೇಕವಾಗಿ ನಿಂತಿದೆ. ತ್ರಿಭಾಷಾ ಸೂತ್ರವು ಭಾರತದಲ್ಲಿ ಶಾಲಾ ಶಿಕ್ಷಣದ ಅವಧಿಯಲ್ಲಿ ವಿದ್ಯಾರ್ಥಿಗಳು ಮೂರು ಭಾಷೆಗಳನ್ನು ಕಲಿಯಬೇಕು ಎಂಬ ಶಿಕ್ಷಣ ನೀತಿಯಾಗಿದೆ.
1968ರಲ್ಲಿ ಜಾರಿಗೆ ಬಂದ ಈ ಸೂತ್ರದಡಿ, ಪ್ರಾದೇಶಿಕ ಭಾಷೆ /ಮಾತೃಭಾಷೆ, ಇಂಗ್ಲಿಷ್ ಮತ್ತು ಹಿಂದಿ (ಹಿಂದಿಯೇತರ ರಾಜ್ಯಗಳಲ್ಲಿ) ಅಥವಾ ಹಿಂದಿ ಹಾಗೂ ಇಂಗ್ಲಿಷ್ ಜತೆಗೆ ಮತ್ತೊಂದು ಭಾರತೀಯ ಭಾಷೆ (ಹಿಂದಿ ಮಾತನಾಡುವ ರಾಜ್ಯಗಳಲ್ಲಿ) ಕಲಿಯುವುದು ಕಡ್ಡಾಯವಾಗಿದೆ.
ರಾಷ್ಟ್ರೀಯ ಏಕತೆ, ಬಹುಭಾಷಾ ಪ್ರಾವೀಣ್ಯತೆ ಮತ್ತು ರಾಜ್ಯಗಳ ನಡುವಿನ ಸಂವಹನ ವನ್ನು ಸುಧಾರಿಸುವುದು ಈ ತ್ರಿಭಾಷಾ ಸೂತ್ರದ ಮೂಲ ಉದ್ದೇಶವಾಗಿದೆ. 2020 ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿಯೂ ತ್ರಿಭಾಷಾ ಸೂತ್ರವನ್ನೇ ಪುನರುಚ್ಚರಿಸಲಾಗಿದೆ. ಕರ್ನಾಟಕದಲ್ಲಿ ತ್ರಿಭಾಷಾಸೂತ್ರವನ್ನು 1968ರ ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ಅಳವಡಿಸಿಕೊಳ್ಳಲಾಯಿತು.
ಅಂದಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಅವಧಿಯಲ್ಲಿ ಈ ಸೂತ್ರಕ್ಕೆ ಸಹಿಹಾಕ ಲಾಗಿತ್ತು. ಅಂದಿನಿಂದ ಇಲ್ಲಿಯವರೆಗೆ ಕರ್ನಾಟಕವು ತ್ರಿಭಾಷಾ ಸೂತ್ರವನ್ನೇ ಅನುಸರಿಸಿ ಕೊಂಡು ಬಂದಿದೆ. ತಮಿಳುನಾಡಿನಂತೆ ಕರ್ನಾಟಕದಲ್ಲೂ ಅನೇಕ ಚಿಂತಕರು ಈ ಸೂತ್ರ ವನ್ನು ಮೊದಲಿನಿಂದಲೇ ವಿರೋಧಿಸುತ್ತಲೇ ಬಂದಿದ್ದಾರೆ.
1968ರ ರಾಷ್ಟ್ರಕವಿ ಕುವೆಂಪುರವರು ಕೂಡಾ ಸರಕಾರದ ತ್ರಿಭಾಷಾ ಶಿಕ್ಷಣ ಪದ್ದತಿಯನ್ನು ವಿರೋಧಿಸಿದ್ದರು ಎಂದು ಸರಕಾರ ಹೇಳುವ ಮೂಲಕ ಕುವೆಂಪು ಅವರನ್ನು ಈ ವಿವಾದ ದಲ್ಲಿ ಎಳೆದು ತರುವ ಪ್ರಯತ್ನ ಮಾಡುತ್ತಿದ್ದಂತೆ ಕಾಣುತ್ತಿದೆ. ತ್ರಿಭಾಷಾ ಸೂತ್ರದ ವಿರುದ್ಧ ವಾಗಿದ್ದ ಅವರ ಮನೋಧೋರಣೆಯ, ಕನ್ನಡ ವಿಶ್ವವಿದ್ಯಾನಿಲಯದಿಂದ ಪ್ರಕಟವಾದ ಅವರ ಲೇಖನವೂ ಈಗ ಮುನ್ನೆಲೆಗೆ ಬಂದಿದೆ.
ಈ ತ್ರಿಭಾಷಾ ಸೂತ್ರ ರಾಜಕೀಯ ದುರಭಿಸಂಧಿಯಿಂದ ಪ್ರೇರಿತವಾದುದು ಎಂದು ಸಾರುವ ಆ ಲೇಖನದ ಸಾರಾಂಶ ಈ ರೀತಿಯಿದೆ. ಭಾರತದಲ್ಲಿ ಭಾಷಾಭಿಮಾನದ ಅತೀರೇಕದಿಂದ ಉಂಟಾಗಬಹುದಾದ ಗೊಂದಲವನ್ನು ಪರಿಹರಿಸಲು ಹಾಗೂ ಇಂಗ್ಲಿಷನ್ನು ಅಂತಾ ರಾಷ್ಟ್ರೀಯ ಮಾಧ್ಯಮಕ್ಕಾಗಿಯೂ, ಹಿಂದಿಯನ್ನು ಭಾರತದ ರಾಷ್ಟ್ರೀಯ ಮಾಧ್ಯಮ ಕ್ಕಾಗಿಯೂ, ಕನ್ನಡವನ್ನು ಕರ್ನಾಟಕ ರಾಜ್ಯದ ಮಾಧ್ಯಮಕ್ಕಾಗಿಯೂ ಎಂಬರ್ಥದಲ್ಲಿ ಜನರು ಮೂರು ಭಾಷೆಗಳನ್ನು ಕಲಿಯಬೇಕು ಎಂದು ‘ತ್ರಿಭಾಷಾ ಸೂತ್ರ’ ವನ್ನು ಘೋಷಿಸ ಲಾಗಿದೆ, ಮೇಲು ನೋಟಕ್ಕೆ ಇದು ಸಾಧುವಾಗಿ ತೋರುತ್ತಿದೆಯಾದರೂ, ಸೂಕ್ಷ್ಮವಾಗಿ ಗಮನಿಸಿದರೆ ಇದು ಅಪಾಯಕಾರಿ ಎಂದು ಗೊತ್ತಾಗುತ್ತದೆ.
ಅದರ ಪ್ರಕಾರ, ಹಿಂದಿ ಇಂಗ್ಲಿಷ್‌ಗಳು ಬಲಾತ್ಕಾರ ಭಾಷೆಗಳಾಗುತ್ತವೆ. ಕನ್ನಡಕ್ಕೆ ಪೆಟ್ಟು ಬೀಳುತ್ತದೆ. ಇದು ಆ ಸೂತ್ರದಲ್ಲಿ ಕಾದಿರುವ ತೀವ್ರವಾದ ಅಪಾಯ. ಎಲ್ಲರೂ ಇಂಗ್ಲಿಷ್ ಮತ್ತು ಹಿಂದಿ ಕಲಿಯಬೇಕೆನ್ನುವುದೂ ದಬ್ಬಾಳಿಕೆಯ ಸೂಚಕವಲ್ಲದೆ ಮತ್ತೇನು? ಪ್ರಜಾ ಪ್ರಭುತ್ವದಲ್ಲಿ ಬಲಾತ್ಕಾರಕ್ಕೆ ಸ್ಥಾನವಿರಕೂಡದು.
ಎಲ್ಲರಿಗೂ ಎಲ್ಲ ಭಾಷೆಯೂ ಏತಕ್ಕೆ ಬೇಕು? ಪ್ರತಿಯೊಬ್ಬರೂ ತಮಗೆ ಅಗತ್ಯವಿರುವ ಭಾಷೆಯನ್ನು ಕಲಿಯಬಹುದು. ಅಲ್ಲದೆ ತ್ರಿಭಾಷಾ ಸೂತ್ರವೇ ಏಕೆ? ಭರತ ಖಂಡಕ್ಕೀಗ ಬೇಕಾಗಿರುವುದು ಬಹುಭಾಷಾ ಸೂತ್ರ. ನಮ್ಮ ಜನ ಕಲಿಯಬೇಕಾಗಿರುವುದು ಇಂಗ್ಲಿಷನ್ನು ಮಾತ್ರವಲ್ಲ, ವೈಜ್ಞಾನಿಕ ಅವಶ್ಯಕತೆಗಳಿಗಾಗಿ ರಷ್ಯನ್, ಜರ್ಮನ್ ಮುಂತಾದ ವಿದೇಶೀ ಭಾಷೆಗಳನ್ನು ಕೂಡ ಕಲಿಯಬೇಕು.
ಆದ್ದರಿಂದ, ನಮಗೆ ಬೇಕಾದುದು ತ್ರಿಭಾಷಾ ಸೂತ್ರವಲ್ಲ ದ್ವಿಭಾಷಾ ಸೂತ್ರ, ಅಂದರೆ ಬಹು ಭಾಷೆಗಳಲ್ಲಿ ‘ದ್ವಿಭಾಷೆ’ ಎಂಬುದೇ ನಮಗಿಂದು ಅತ್ಯಂತ ಕ್ಷೇಮಕರವೂ ಲಾಭ ದಾಯಕವೂ ಆದ ಸೂತ್ರ. ನಮ್ಮ ವಿದ್ಯಾರ್ಥಿಗಳ ಮುಂದೆ ಅನೇಕ ಭಾಷೆಗಳನ್ನಿರಿಸಿ, ಯಾವುದಾದರೂ ಎರಡು ಭಾಷೆಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೇ ಕೊಡಬೇಕು.
ಭರತ ಖಂಡದ ಯಾವ ವಿದ್ಯಾರ್ಥಿಯ ಮೇಲೂ ಯಾವ ಭಾಷೆಯನ್ನೂ ಬಲಾತ್ಕಾರವಾಗಿ ಹೇರಬಾರದು. ಭಾರತೀಯರೆಲ್ಲರೂ ಹಿಂದಿಯನ್ನು ಕಲಿಯಬೇಕೆನ್ನುವ ವಾದದಲ್ಲಿ ಸಾಮ್ರಾಜ್ಯಶಾಹಿಯ ಮನೋಧರ್ಮದ ವಿನಾ ಇನ್ನಾವ ಅರ್ಥವೂ ಇಲ್ಲ. ಶೇಕಡ ಒಂದರಷ್ಟು ಜನಕ್ಕೆ ಅರ್ಧಮರ್ಧ ಇಂಗ್ಲಿಷ್ ಕಲಿಸಿ ಬ್ರಿಟೀಷರು ಇನ್ನೂರು ವರ್ಷಕ್ಕೂ ಮೇಲೆ ಸಮರ್ಥವಾಗಿ ರಾಜ್ಯಭಾರ ನಡೆಸಲಿಲ್ಲವೆ? ಇದೂ ಹಾಗೆಯೇ ಆಗುತ್ತದೆ ಎನ್ನುತ್ತಾರೆ ಕುವೆಂಪು.
ತ್ರಿಭಾಷಾ ಸೂತ್ರ ಎಂಬುದು, ಭಾರತೀಯರಿಗೆ ತ್ರಿಶೂಲಪ್ರಾಯವಾಗುತ್ತದೆ. ಆದ್ದರಿಂದ ಬಹುಭಾಷೆಗಳಲ್ಲಿ ‘ದ್ವಿಭಾಷೆ’ ಎಂಬುದೇ ನಮಗಿಂದು ಕ್ಷೇಮಕರ ಸೂತ್ರವಾಗಿದೆ. ಒಂದು ವೇಳೆ ಮೂರೂ ಭಾಷೆಗಳನ್ನು ಕಲಿಯಬೇಕು ಎಂದು ಹಠ ಹಿಡಿದರೂ ಬಹುಭಾಷೆಗಳಲ್ಲಿ ಮೂರುಭಾಷೆಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ವಿದ್ಯಾರ್ಥಿಗಿರಬೇಕು.
ಬರಿಯ ‘ತ್ರಿಭಾಷೆ’ಯಾದರೆ ಇಂಗ್ಲಿಷ್ ಮತ್ತು ಹಿಂದಿ ಬಲಾತ್ಕಾರದ ಭಾಷೆಗಳಾಗುತ್ತವೆ. ಕನ್ನಡ ತೆಲುಗು ಮಲಯಾಳಂ ಭಾಷೆಗಳು ತೃತೀಯ ಸ್ಥಾನಕ್ಕಿಳಿದು ಹಿಂದಿಯನ್ನು ಒಲೈಸುವ ಅಡಿಯಾಳುಗಳಂತಾಗಿ ತೊತ್ತುಗಳಾಗುತ್ತವೆ. ಮಾತೃಭಾಷೆ ಹಾಗೂ ಇಂಗ್ಲಿಷ್ ಎರಡನ್ನು ಕಲಿತರೆ ಸಾಕು, ಕನ್ನಡದ ಮಕ್ಕಳ ಜ್ಞಾನಾರ್ಜನೆಗೆ ಬೇಕಾದಷ್ಟಾಯಿತು, ಹಿಂದಿಯನ್ನೂ ಕಲಿಯಿರಿ ಎಂದು ವರಾತ ಮಾಡುವುದರಿಂದ ಕನ್ನಡದ ಉಳಿವು ಹಾಗೂ ಬೆಳವಣಿಗೆಗೆ ಮಾರಕವಾಗುತ್ತದೆ ಎನ್ನುವುದು ಕುವೆಂಪು ಅವರ ವಾದವಾಗಿತ್ತು.
ಇಂಗ್ಲಿಷ್, ರಷ್ಯನ್ ಹಾಗೂ ಜರ್ಮನ್ ಭಾಷೆಗಳಾದರೂ ಓಕೆ, ಆದರೆ ದೇಶೀಯ ಹಿಂದಿ ಭಾಷೆ ಮಾತ್ರ ಬೇಡ ಎನ್ನುವ ಅವರ ಧೋರಣೆಯೂ ಸೇರಿ, ಕುವೆಂಪು ವಿಚಾರ ಧಾರೆಯಲ್ಲಿ ಅಸಹಿಷ್ಣುತೆ ಹಾಗೂ ನಕಾರಾತ್ಮಕತೆ ಅಲ್ಲಲ್ಲಿ ಸ್ವಲ್ಪ ಕಂಡರೂ, ಅವರ ಕನ್ನಡ ಪರ ಅಥವಾ ಹಿಂದಿ ವಿರೋಧಿ ಧೋರಣೆಯನ್ನು ಪೂರ್ತಿ ತಳ್ಳಿಹಾಕುವಂತಿಲ್ಲ.
ತ್ರಿಭಾಷಾ ಶಿಕ್ಷಣ ಪದ್ದತಿಯನ್ನು ವಿರೋಧಿಸಿ ಅವರು ಒಂದು ಕವನವನ್ನೂ ಬರೆದಿದ್ದರಂತೆ, ಸಾಮಾಜಿಕ ಜಾಲತಾಣಗಳಲ್ಲಿ ಈಗ ಈ ಕವನ ಬಹಳ ಓಡಾಡುತ್ತಿದೆ. ಅದು ಹೀಗಿದೆ
‘ಭಾಷಾ ತ್ರಿಶೂಲವೀ ತ್ರಿಭಾಷಾ ಸೂತ್ರ
ಬಾಲಕರ ರಕ್ಷಿಸೈ ಹೇ ತ್ರಿನೇತ್ರ
ಚೂರು ತಿಂಡಿಗೆ ಸಿಕ್ಕಿಸಿಹರೋ ಈ ಮೂರು ಗಾಳ
ನುಂಗದಿದ್ದರೆ ಹಸಿವೆ ನುಂಗಿದರೆ ಪ್ರಾಣ ಶೂಲ’
ಮೊದಲನೆಯದಾಗಿ, ಕವನದಲ್ಲಿನ ಭಾಷಾ ಸೌಂದರ್ಯ ಹಾಗೂ ಧ್ಯೇಯ-ಧೋರಣೆಯನ್ನು ಗಮನಿಸಿದರೆ, ಈ ಕವನ ರಾಷ್ಟ್ರ ಕವಿ ಕುವೆಂಪು ಅವರದ್ದು ಎಂದು ನನಗಂತೂ ನಂಬಲಾಗುತ್ತಿಲ್ಲ.
ಕಾರಣ ಅದರಲ್ಲಿ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಈ ಮೂರೂ ಭಾಷೆಗಳನ್ನು ಶೂಲಕ್ಕೆ ಹೋಲಿಸಲಾಗಿದೆ. ‘ಭಾಷಾ ತ್ರಿಶೂಲವೀ ತ್ರಿಭಾಷಾ ಸೂತ್ರ’ ಹಿಂದಿ ಇಂಗ್ಲಿಷಿನ ಜೊತೆಗೆ, ಕನ್ನಡವನ್ನೂ ತ್ರಿಶೂಲವೆನ್ನುವ ಆಯುಧಕ್ಕೆ ಹೋಲಿಸಿದಂತಾಯಿತು. ಮುಂದುವರಿದು, ಚೂರು ತಿಂಡಿಗೆ ಸಿಕ್ಕಿಸಿರೋ ಈ ಮೂರು ಗಾಳ ಎಂದು ಮೂರೂ ಭಾಷೆಯನ್ನು ಕರೆಯ ಲಾಗಿದೆ,
ಗಾಳಕ್ಕೆ ತಿಂಡಿ ಸಿಕ್ಕಿಸುವುದನ್ನು ನಾವು ಕೇಳಿದ್ದೇವೆ, ತಿಂಡಿಗೇ ಗಾಳ ಸಿಕ್ಕಿಸುವದನ್ನು ಇಲ್ಲಿಯ ವರೆಗೆ ನಾವು ಕೇಳಿದ್ದಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೋಡುವುದಾದರೆ, ವಿದ್ಯಾರ್ಥಿಗಳ ಅಥವಾ ಕನ್ನಡದ ಮಕ್ಕಳ ಎಂದು ಬರೆಯಬಹುದಾದ ಜಾಗದಲ್ಲಿ, ‘ಬಾಲಕರ ರಕ್ಷಿಸೈ’ ಎಂದು ಬರೆಯಲಾಗಿದೆ, ಹಾಗಾದರೆ ಬಾಲಕಿಯರನ್ನು ಯಾರು ರಕ್ಷಿಸಬೇಕು ಎನ್ನುವ ಪ್ರಶ್ನೆ ಬರುತ್ತದೆಯಲ್ಲವೆ? ಹಾಗಾಗಿ, ಈ ಕವನ, ‘ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ಯಂಥಾ ಹಾಡಿನ ಮೂಲಕ, ವಿಶ್ವ ಮಾನವ ಪ್ರಜ್ಞೆಯ ಮೂಲಕ ಸಾಮರಸ್ಯವನ್ನು ಬೋಽಸಿದ ಹಾಗೂ ಮಹಾಕಾವ್ಯವನ್ನು ರಚಿಸಿದ ಕವಿ ಶ್ರೇಷ್ಠ ಕುವೆಂಪು ಅವರದ್ದು ಎನ್ನುವುದು ಯಾಕೋ ಸರಿಹೊಂದುತ್ತಿಲ್ಲ.