ಕಾನೂನ್ ಸೆನ್ಸ್
ತಿಮ್ಮಣ್ಣ ಭಾಗವತ್
ಸಾಮಾಜಿಕ ಶಾಂತಿ, ಸುವ್ಯವಸ್ಥೆ, ಅಪರಾಧಗಳ ನಿಯಂತ್ರಣ, ಅಪರಾಧಿಗಳ ಪತ್ತೆ ಮತ್ತು ಶಿಕ್ಷೆ ಯನ್ನು ಗಮನದಲ್ಲಿರಿಸಿ ಆರೋಪಿಗಳು, ಶಂಕಿತ ಅಪರಾಧಿಗಳು ಮತ್ತು ಶಾಂತಿ ಸುವ್ಯವಸ್ಥೆ ಕದಡು ವವರನ್ನು ಬಂಧಿಸಲು ಮತ್ತು ಕಸ್ಟಡಿಗೆ ತೆಗೆದುಕೊಳ್ಳಲು ಪೊಲೀಸರಿಗೆ ಸಾಕಷ್ಟು ಅಧಿಕಾರಗಳಿವೆ. ಪೊಲೀಸರ ಕುರಿತಾದ ಭಯ ಮತ್ತು ಬಂಧನ- ಜೈಲು ಶಿಕ್ಷೆಗಳ ಭಯವೇ ಬಹುತೇಕ ಸಲ ಜನರು ಅಪರಾಧಗಳನ್ನು ಮಾಡದಿರಲು ಕಾರಣ. ಮತ್ತು ಆ ಕಾರಣಕ್ಕೆ ಪೊಲೀಸರು ಕಠಿಣವಾಗಿಯೇ ವರ್ತಿಸಬೇಕಾಗುತ್ತದೆ. ಆದರೆ ಕೆಲವು ಸಲ ಪೊಲೀಸರು ಅನಗತ್ಯವಾಗಿ, ರಾಜಕೀಯ ಪ್ರೇರಿತವಾಗಿ ಅಥವಾ ಕೆಲವರ ಕುಮ್ಮಕ್ಕಿನಿಂದ ಮುಗ್ಧರನ್ನು ಜೈಲಿಗಟ್ಟುವ ಮತ್ತು ಪೊಲೀಸ್ ಠಾಣೆಯಲ್ಲಿ ಕ್ರೂರವಾಗಿ ಹಿಂಸಿಸುವ ದೃಶ್ಯಗಳನ್ನು ಸಿನಿಮಾಗಳಲ್ಲಿ ನೋಡಿರುತ್ತೇವೆ.
ನಿಜ ಜೀವನದಲ್ಲೂ ಅಂಥ ಅನೇಕ ಘಟನೆಗಳು ನಡೆಯುತ್ತವೆ. ಬಂಧಿಸಿದ ಮಾತ್ರಕ್ಕೆ ಅದು ಶಿಕ್ಷೆಯಲ್ಲವೆಂಬುದು ನಿಜವಾದರೂ ಅದರಿಂದ ಬಂಧಿತ ವ್ಯಕಿಗೆ ಉಂಟಾಗುವ ಮಾನಸಿಕ ಯಾತನೆ, ಅಪಮಾನ ಮುಂತಾದ ಸಮಸ್ಯೆಗಳನ್ನು ವಿವರಿಸಲಸಾಧ್ಯ.
ಇದನ್ನೂ ಓದಿ: Thimmanna Bhagwat Column: ಮಾಫಿ ಸಾಕ್ಷಿ, ಪ್ರತಿಕೂಲ ಸಾಕ್ಷಿಗಳ ನಡುವೆ ತೂಗುದೀಪ
ಒಮ್ಮೆ ಜೈಲಿಗೆ ಹಾಕಲ್ಪಟ್ಟ ವ್ಯಕ್ತಿ ಜಾಮೀನು ಪಡೆದು ಹೊರಬಂದು ಪ್ರಕರಣದಲ್ಲಿ ನಿರ್ದೋಷಿ ಎಂದು ಸಾಬೀತಾದರೂ ಆತನಿಗೆ ಜೈಲಿಗೆ ಹೋಗಿ ಬಂದವ ಎಂಬ ಕಳಂಕ ಹಾಗೇ ಇರುತ್ತದೆ. ಕ್ರಿಮಿನಲ್ ದಾಖಲೆ ಕೂಡಾ ಹಾಗೇ ಉಳಿಯುತ್ತದೆ. ಸರಕಾರೀ ನೌಕರರು 48 ಘಂಟೆಗಿಂತ ಹೆಚ್ಚಿನ ಕಾಲ ಬಂಧನದಲ್ಲಿದ್ದರೆ ಸೇವೆಯಿಂದ ಅಮಾನತು ಎಂದು ಪರಿಗಣಿಸಬೇಕೆಂಬ (Deemed Suspension ) ನಿಯಮವಿದೆ.
ಆದ್ದರಿಂದ ಬಂಧನ ಅನಿವಾರ್ಯ ಪ್ರಕರಣದಲ್ಲಿ ಮಾತ್ರ ಆಗಬೇಕು ಹೊರತು ಅದು ಪೋಲೀಸರ ಇಚ್ಛಾನುವರ್ತಿ ಅಲ್ಲ. ಈ ಕಾರಣಕ್ಕೆ ಪೊಲೀಸರಿಗೆ ಇರುವ ಬಂಧನದ ಅಧಿಕಾರಕ್ಕೆ ಕಾನೂನಿನಲ್ಲಿ ಕೆಲವು ನಿಯಂತ್ರಣದ ಕಲಮುಗಳಿವೆ.
ಬಂಧನ: ಬಂಧನ ಅಥವಾ ಆರೆಸ್ಟ್‌ನ ವ್ಯಾಖ್ಯೆಯನ್ನು ಭಾರತೀಯ ಸುರಕ್ಷಾ ನಾಗರಿಕ ಸಂಹಿತೆ 2023ರಲ್ಲಿ (ಬಿಎನ್‌ಎಸ್ ಎಸ್) ನಲ್ಲಿ ನೀಡಲಾಗಿಲ್ಲ. ಆದರೆ ಬಿಎನ್‌ಎಸ್‌ಎಸ್‌ನ 5ನೇ ಅಧ್ಯಾಯದ 35ರಿಂದ 62ನೇ ಕಲಮುಗಳು ಬಂಧನ ಅಂದರೆ Arrest and Detention ಕುರಿತು ಇವೆ. ಬಂಧನ ವೆಂದರೆ ವ್ಯಕ್ತಿಯೊಬ್ಬನನ್ನು ವಶಕ್ಕೆ ತೆಗೆದುಕೊಳ್ಳುವದು ಅಥವಾ ಬಲವಂತದಿಂದ ಆತನಿಗೆ ದೈಹಿಕ ತಡೆಯೊಡ್ಡುವದು ಅಥವಾ ಅಧಿಕಾರ ಚಲಾವಣೆಯಿಂದ ಆತನ ಸ್ವಾತಂತ್ರ್ಯವನ್ನು ಹರಣ ಮಾಡುವದು ಅಥವಾ ವಿಶೇಷವಾಗಿ ಅಪರಾಧದ ಆರೋಪದ ಮೇಲೆ ಆತನನ್ನು ಬಂಧಿಸಿ ಜೈಲಿನಲ್ಲಿ ಇಡುವದು.
ಬಿಎನ್‌ಎಸ್‌ಸ್‌ನ 170ನೇ ಕಲಮಿನ ಪ್ರಕಾರ, ವ್ಯಕ್ತಿಯೊಬ್ಬ ಅಥವಾ ಹಲವರು, ಗಂಭೀರ ( Cogni zable) ಅಪರಾಧಗಳನ್ನು ಮಾಡುವ ಸಾಧ್ಯತೆ ಇರುವದೆಂದು ಕಂಡು ಬಂದರೆ ಕೋರ್ಟಿನಿಂದ ವಾರಂಟ್ ಇಲ್ಲದೆ ಮುಂಜಾಗರೂಕತಾ ಕ್ರಮವಾಗಿ ಅವರನ್ನು ವಶಕ್ಕೆ ತೆಗೆದುಕೊಳ್ಳುವ ಅಥವಾ ಬಂಧಿಸುವ ಅಧಿಕಾರ ಪೋಲೀಸರಿಗೆ ಇರುತ್ತದೆ. ಅಂಥ ಸಂದರ್ಭಗಳಲ್ಲಿ ಬಂಧಿತ ವ್ಯಕ್ತಿಗಳು ಪೊಲೀಸ್ ಕಸ್ಟಡಿಯಲ್ಲಿ (ಜೈಲಿನಲ್ಲಿ) ಇರುತ್ತಾರೆ ಮತ್ತು ಅವರನ್ನು ಬಂಧನವಾದ 24 ಘಂಟೆಗಳ ಒಳಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು.
ವಾರಂಟ್ ಇಲ್ಲದೆ ಬಂಧನ: ಕಾಗ್ನಿಜೇಬಲ್ ಅಪರಾಧ, ಅಂದರೆ ಕೊಲೆ, ಅತ್ಯಾಚಾರ, ಅಪಹರಣ, ಕಳವು, ವರದಕ್ಷಿಣೆ ಹತ್ಯೆಯಂಥ ಗಂಭೀರ ಅಪರಾಧವನ್ನು ವ್ಯಕ್ತಿಯೊಬ್ಬ ಪೊಲೀಸ್ ಅಧಿಕಾರಿಯ ಎದುರೇ ನಡೆಸಿದರೆ ಅಥವಾ ಅಂಥ ಕೃತ್ಯ ನಡೆಸಿದ್ದಾನೆಂದು ಆತನ ವಿರುದ್ಧ ದೂರು ಬಂದರೆ ಅಥವಾ ಆತ ಅಂಥ ಕೃತ್ಯಗಳನ್ನು ಮಾಡಿದ್ದಾನೆಂದು ನಂಬಲರ್ಹ ಮಾಹಿತಿ ಸಿಕ್ಕರೆ ಅಂಥ ವ್ಯಕ್ತಿಯನ್ನು ಪೊಲೀಸ್ ಅಽಕಾರಿಗಳು ಕೋರ್ಟಿನ ವಾರಂಟ್ ಅಥವಾ ಆದೇಶವಿಲ್ಲದೆ ಬಂಧಿಸ ಬಹುದು.
ಪೋಲೀಸರಿಗೆ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಅಡ್ಡಿಪಡಿಸಿದರೆ, ಅಥವಾ ಪೊಲೀಸ್ ಕಸ್ಟಡಿ ಯಿಂದ ತಪ್ಪಿಸಿಕೊಂಡರೆ ಅಥವಾ ಜೈಲು ಶಿಕ್ಷೆಯಿಂದ ಬಿಡುಗಡೆಯಾಗಿ ಅಂಥ ಬಿಡುಗಡೆಯ ಶರತ್ತುಗಳನ್ನು ಉಲ್ಲಂಘಿಸಿದ್ದು ಕಂಡು ಬಂದರೆ ಅಂಥ ವ್ಯಕ್ತಿಗಳನ್ನು ಕೂಡಾ ವಾರಂಟ್ ಇಲ್ಲದೆ ಬಂಧಿಸಬಹುದು (35ನೇ ಕಲಮು).
ವಾರಂಟ್ ಇಲ್ಲದೆ ಬಂಧಿಸುವ ಮೊದಲು ಆ ವ್ಯಕ್ತಿಗೆ ಬಂಧನದ ಕಾರಣವನ್ನು ಸ್ಪಷ್ಟವಾಗಿ ತಿಳಿಸ ಬೇಕು ಮತ್ತು ಬಂಧನದ ಪಂಚನಾಮೆಗೆ ಆತನ ಹತ್ತಿರದ ಸಂಬಂಧಿಗಳು ಸಹಿ ಮಾಡದಿದ್ದ ಸಂದರ್ಭದಲ್ಲಿ ಆತ ಹೆಸರಿಸುವ ಹತ್ತಿರದ ಸಂಬಂಧಿಗೆ ಬಂಧನವನ್ನು ತಿಳಿಸುವ ಅವಕಾಶ ನೀಡಬೇಕು. 24 ಘಂಟೆಗಳ ಒಳಗೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು.
ಬಂಧನ ಕಡ್ಡಾಯವಲ್ಲ: ಹಾಗೆಂದ ಮಾತ್ರಕ್ಕೆ ಅಂಥ ಎಲ್ಲಾ ಸಂದರ್ಭಗಳಲ್ಲೂ ಬಂಧನ ಕಡ್ಡಾಯವಲ್ಲ. ಹಾಗೆ ದೂರು ಬಂದರೂ ಆತ ಅಂಥ ಅಪರಾಧ ಮಾಡಿದ್ದಾನೆಂದು ನಂಬಲು ಪೋಲೀಸರಿಗೆ ಸೂಕ್ತ ಕಾರಣಗಳಿರಬೇಕು. ಮತ್ತು ಆತ ಇನ್ನಷ್ಟು ಅಂಥ ಕೃತ್ಯಗಳನ್ನು ಮಾಡದಂತೆ ತಡೆಯಲು ಅಥವಾ ಈಗಾಗಲೇ ಮಾಡಿದ ಅಂಥ ಕೃತ್ಯಗಳಿಗೆ ಸಂಬಂಧಿಸಿದ ಸಾಕ್ಷ್ಯ, ಪುರಾವೆಗಳನ್ನು ನಾಶ ಪಡಿಸುವ ಅಥವಾ ಸಾಕ್ಷಿಗಳನ್ನು ಬೆದರಿಸಿ ಅಥವಾ ಪುಸಲಾಯಿಸಿ ಅವರು ಸಾಕ್ಷಿ ಹೇಳದಂತೆ/ವಿವರಗಳನ್ನು ಒದಗಿಸದಂತೆ ತಡೆಯುವ ಸಾಧ್ಯತೆ ಇದ್ದರೆ, ಅಥವಾ ಆತನನ್ನು ಬಂಧಿಸದೆ ಬಿಟ್ಟರೆ ಆತ ಪರಾರಿಯಾಗಿ ಅಗತ್ಯವಿರುವಾಗ ಪೊಲೀಸ್ ತನಿಖೆಗೆ ಸಹಕರಿಸುವದಿಲ್ಲ ಅಥವಾ ನ್ಯಾಯಾ ಲಯದ ವಿಚಾರಣೆಗೆ ಹಾಜರಾಗುವದಿಲ್ಲ ಎಂದು ಕಂಡು ಬಂದರೆ ಅಥವಾ ಪ್ರಕರಣದ ತನಿಖೆ ಮಾಡುವ ಸಲುವಾಗಿ ಆತನನ್ನು ಬಂಧಿಸುವದು ಅಗತ್ಯ ವೆಂದು ಪೊಲೀಸರಿಗೆ ಕಂಡುಬಂದರೆ ಮಾತ್ರ ಅಂಥ ವ್ಯಕ್ತಿಯನ್ನು ಬಂಧಿಸಬಹುದು.
ಬಂಧನಕ್ಕೊಳಗಾದ ವ್ಯಕ್ತಿಗೆ ಪೊಲೀಸ್ ವಿಚಾರಣೆಯ ಸಂದರ್ಭದಲ್ಲಿ ತನ್ನ ಆಯ್ಕೆಯ ವಕೀಲರನ್ನು ಭೇಟಿಯಾಗುವ ಹಕ್ಕು ಇದೆ. (38ನೇ ಕಲಮು). ಯಾವದೇ ಅಪರಾಧಕ್ಕೆ ನೀಡಬಹುದಾದ ಶಿಕ್ಷೆಯು 3 ವರ್ಷದ ಜೈಲುವಾಸಕ್ಕಿಂತ ಕಡಿಮೆ ಇದ್ದರೆ ಮತ್ತು ಅಂಥ ವ್ಯಕಿ ಅನಾರೋಗ್ಯ ಪೀಡಿತನಿದ್ದರೆ ಅಥವಾ ಅವನಿಗೆ 60 ವರ್ಷಕ್ಕಿಂತ ಜಾಸ್ತಿ ವಯಸ್ಸಾಗಿದ್ದರೆ ಅಂಥವರನ್ನು ಬಂಧಿಸಲು ಪೊಲೀಸ್ ಉಪ-ಅಧೀಕ್ಷಕ ಅಥವಾ ಅದಕ್ಕಿಂತ ಹೆಚ್ಚಿನ ಹುದ್ದೆಯ ಅಧಿಕಾರಿಯ ಅನುಮತಿ ಅಗತ್ಯ.
ನಾನ್-ಕಾಗ್ನಿಜೇಬಲ್ ಅಂದರೆ ಗಂಭೀರವಲ್ಲದ ಅಪರಾಧ ಪ್ರಕರಣಗಳಲ್ಲಿ ಆರೋಪಿಯನ್ನು ಬಂಧಿಸಲು ಮ್ಯಾಜಿಸ್ಟ್ರೇಟರ ಆದೇಶ ಅಥವಾ ವಾರೆಂಟ್ ಅಗತ್ಯ. ಆದರೆ ಅಂಥ ವ್ಯಕ್ತಿ ಪೊಲೀಸರಿಗೆ ತನ್ನ ಹೆಸರು, ವಿಳಾಸದ ಅಗತ್ಯ ವಿವರಗಳನ್ನು ನೀಡಲು ನಿರಾಕರಿಸಿದರೆ ಅವನನ್ನು ವಾರಂಟ್ ಇಲ್ಲದೆ ಬಂಧಿಸಬಹುದು. (39ನೇ ಕಲಮು).
ಬಿಎನ್‌ಎಸ್‌ಎಸ್‌ನ 40ನೇ ಕಲಮಿನ ಪ್ರಕಾರ ಯಾವದೇ ವ್ಯಕ್ತಿಯು (ಪೊಲೀಸರಲ್ಲ) ತನ್ನೆದುರಿಗೆ ಗಂಭೀರ ಅಥವಾ ಜಾಮೀನಿಲ್ಲದ ಅಪರಾಧ ಕೃತ್ಯ ನಡೆಸಿದ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸುವ ಅಧಿಕಾರ ಹೊಂದಿರುತ್ತಾನೆ. ಹಾಗೆ ಬಂಧಿಸಿದ ಆರು ಘಂಟೆಯ ಒಳಗೆ ಬಂಧಿತ ವ್ಯಕ್ತಿಯನ್ನು ಪೋಲೀಸರ ಕಸ್ಟಡಿಗೆ ಒಪ್ಪಿಸಬೇಕು.
ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಥವಾ ಕಾರ್ಯಾಂಗ ಮ್ಯಾಜಿಸ್ಟ್ರೇಟರಿಗೆ ತನ್ನೆದುರಿಗೆ ಅಪರಾಧ ಕೃತ್ಯ ಗೈದ ವ್ಯಕ್ತಿಯನ್ನು ಬಂಧಿಸಲು ಆದೇಶಿಸುವ ಅಥವಾ ತಾವೇ ಸ್ವತಃ ಬಂಧಿಸುವ ಅಧಿಕಾರವಿರುತ್ತದೆ.
ಜಾಮೀನಿಲ್ಲದ ಪ್ರಕರಣಗಳು (ನಾನ್ ಬೇಲಬಲ್) : ಕೊಲೆ, ಅತ್ಯಾಚಾರ, ದರೋಡೆ, ಅಪಹರಣ ದಂಥ ಗಂಭೀರ ಅಪರಾಧದ ಪ್ರಕರಣಗಳು ಜಾಮೀನಿಲ್ಲದ ಅಪರಾಧಗಳಾಗಿರುತ್ತವೆ. ಅವು ಬಹುತೇಕ ಕಾಗ್ನಿಜೇಬಲ್ ಪ್ರಕರಣಗಳೂ ಆಗಿರುವದರಿಂದ ಅಂಥ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಆರೋಪಿಗಳನ್ನು ಬಂಧಿಸಲಾಗುತ್ತದೆ. ಆದರೆ ಅಂಥ ಪ್ರಕರಣಗಳಲ್ಲೂ ಬಂಧನ ಕಡ್ಡಾಯವಲ್ಲ.
ಜಾಮೀನು ಇಲ್ಲದ ಪ್ರಕರಣವೆಂದರೆ ಜಾಮೀನು ಸಿಗುವದೇ ಇಲ್ಲವೆಂದಲ್ಲ. ಆದರೆ ಜಾಮೀನು ಆತನ ಹಕ್ಕು ಅಲ್ಲ. ಅದು ಕೋರ್ಟಿನ ವಿವೇಚನೆಗೆ ಸೇರಿದ್ದು. ಕೋರ್ಟಿನಿಂದ ಒಮ್ಮೆ ನಿರೀಕ್ಷಣಾ ಜಾಮೀನು ತಿರಸ್ಕೃತವಾದರೆ ಬಂಧನ ಕಡ್ಡಾಯ. ಪ್ರಕರಣ ದಾಖಲಾದ ಕೂಡಲೇ ಬಂಧನವಾಗ ಬೇಕು.
ಪ್ರಥಮ ಮಾಹಿತಿ ವರದಿ ಮತ್ತು ಬಂಧನ: ಬಂಧನದ ಬಗ್ಗೆ ಇರುವ ಮತ್ತೊಂದು ತಪ್ಪು ಕಲ್ಪನೆ ಯೆಂದರೆ ಎಫ್ಐಆರ್ ಆದರೆ ಬಂಧನ ಕಡ್ಡಾಯವೆಂಬುದು. ಎಫ್ಐಆರ್ ಎಂದರೆ ಅಪರಾಧದ ನಿರ್ಣಯವಲ್ಲ. ಚಾರ್ಜ್ ಶೀಟ್ ಸಲ್ಲಿಕೆಯಾದರೂ ಬಂಧನ ಕಡ್ಡಾಯವಲ್ಲವೆಂದು ಸುಪ್ರೀಂ ಕೋರ್ಟು ಹೇಳಿದೆ. (ಸತೀಂದ್ರ ಕುಮರ್ ಅಂತಿಲ್ ವರ್ಸಸ್ ಸಿಬಿಐ, ಸುರೇಶ್ ಚಂದ್ರ ವರ್ಸಸ್ ಉತ್ತರಪ್ರದೇಶ ಸರಕಾರ ಮುಂತಾದ ಪ್ರಕರಣಗಳು)
ಕೈಕೋಳ ತೊಡಿಸುವದು: ಬಂಧಿಸುವದು ಎಂದರೆ ಕೈಕೋಳ ತೊಡಿಸಿ ಕರೆದೊಯ್ಯುವದು ಎಂಬುದು ಸಾಮಾನ್ಯ ಕಲ್ಪನೆ. ಮೊದಲು ಸಾಮಾನ್ಯವಾಗಿದ್ದ ಈ ಪದ್ಧತಿಯನ್ನು ಸುಪ್ರೀಂ ಕೋರ್ಟಿನ ಆದೇಶಗಳ ನಂತರ ಕೇವಲ ಅನಿವಾರ್ಯ ಪ್ರಕರಣಗಳಲ್ಲಿ ಮಾತ್ರ ಪಾಲಿಸಲಾಗುತ್ತದೆ.
‘ಸುನಿಲ್ ಭಾತ್ರಾ’ ‘ಸಿಟಿಝನ್ಸ್ ಆಫ್ ಡೆಮಾಕ್ರೆಸಿ ವರ್ಸಸ್ ಅಸ್ಸಾಂ ಸರಕಾರ’ ಮುಂತಾದ ಪ್ರಕರಣ ಗಳಲ್ಲಿ ಕೈದಿಗಳಿಗೆ ಕೈಕೋಳ ತೊಡಿಸಿ ಕೊಂಡೊಯ್ಯುವದು ಹಾಗೂ ಜೈಲಿನಲ್ಲಿ ಕೋಳ, ಸರಪಳಿ ಮುಂತಾದವುಗಳನ್ನು ತೊಡಿಸಿ ಇಡುವ ಕ್ರಮವನ್ನು ಅಮಾನುಷವೆಂದು ಬಣ್ಣಿಸಿ ಅಂಥ ಪದ್ಧತಿಯನ್ನು ತಕ್ಷಣ ನಿಲ್ಲಿಸಬೇಕೆಂದು ಆದೇಶಿಸಿತು. ಅದನ್ನು ಮಾಡದೆ ಕೈದಿ ಪರಾರಿಯಾಗುವ ದನ್ನು ತಪ್ಪಿಸಲು ಬೇರೆ ಮಾರ್ಗವಿಲ್ಲದಾಗ ಮಾತ್ರ ಮ್ಯಾಜಿಸ್ಟ್ರೇಟರ ಅನುಮತಿ ಪಡೆದು ಅಂಥ ಕ್ರಮಕೈಗೊಳ್ಳಬಹುದು ಎಂದು ಆದೇಶವಿತ್ತಿದೆ. ಆದರೆ ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಕಾಯಿದೆ ಮತ್ತು ಕಾರಾಗೃಹ ಮ್ಯಾನ್ಯುಅಲ್‌ಗಳ ಅಡಿಯಲ್ಲಿ ವಿಚಾರಣಾಧೀನ ಅಥವಾ ಶಿಕ್ಷೆಗೊಳಗಾದ ಕೈದಿಗಳಿಗೆ ಕೈಕೋಳ ಅಥವಾ ಸಂಕೋಲೆ ತೊಡಿಸಲು ಜೈಲು ಸುಪರಿಂಟೆಂಡೆಂಟ್ ರು ಸೂಕ್ತ ನಿರ್ಣಯ ಕೈಗೊಳ್ಳಬಹುದೆಂದಿದೆ.
ಜೈಲು ಶಿಕ್ಷೆಯ ಕಾರಣಕ್ಕೆ ಬಂಧನ ಮತ್ತು ಕಾರಾಗೃಹವಾಸ: ಜೀವಾವಧಿ ಅಥವಾ ನಿಗದಿತ ಅವಧಿ ಯ ಸೆರವಾಸದ ಶಿಕ್ಷೆ ವಿಧಿಸಲ್ಪಟ್ಟಾಗ ಅದು ಜೈಲು ಶಿಕ್ಷೆಯೆಂದೆನಿಸಲ್ಪಡುತ್ತದೆ. ಅಂಥ ಜೈಲು ಶಿಕ್ಷೆ ಸಾದಾ ಜೈಲು ಶಿಕ್ಷೆಯಾಗಿರಬಹುದು ಅಥವಾ ಕಠಿಣ ಸೆರೆವಾಸ (rigorous imprisonment ) ಆಗಿರಬಹುದು. ಕಠಿಣ ಸೆರೆವಾಸದಲ್ಲಿ ಕೈದಿಗಳು ಕಠಿಣವಾದ ಕೂಲಿ ಕೆಲಸ ಹಾಗೂ ಇತರ ಶ್ರಮದ ಕೆಲಸಗಳನ್ನು ಮಾಡಬೇಕಾಗುತ್ತದೆ. ಜೈಲುಶಿಕ್ಷೆ ಅಪರಾಧಿಗಳ ಮನಃಪರಿವರ್ತನೆಗೂ ಕಾರಣವಾಗ ಬೇಕು ಎಂಬ ಸಿದ್ಧಾಂತವಿದೆ. ಆದರೆ ಅಂಥ ಶಿಕ್ಷೆ ಕಠಿಣವಾಗಿರಬೇಕು.
ಯಾಕೆಂದರೆ ಅದು ಇತರರು ಅಂಥ ಅಪರಾಧ ಮಾಡದಂತೆ ಎಚ್ಚರಿಕೆಯಾಗಬೇಕು ಎಂಬ ಸಿದ್ಧಾಂತ ವನ್ನು Deterrent Punishment ಎನ್ನಲಾಗುತ್ತದೆ. ಅಪರಾಧಿಗಳನ್ನು ಸಭ್ಯ ಸಮಾಜದಿಂದ ದೂರ ವಿಡುವದು ಸಮಾಜದ ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದು ಎಂಬ ಕಾರಣಕ್ಕೆ ಕೂಡಾ ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ.
ವಿಚಾರಣಾಧೀನ ಬಂಧನ ಮತ್ತು ಜೈಲುವಾಸ: ಜಾಮೀನು ಎಂಬುದು ಮೂಲಭೂತ ಹಕ್ಕು ಮತ್ತು ಜೈಲು ಅಪವಾದ (Bail is the rule and jail is exception – State of Rajastan vs. Balachand ) ಎಂಬುದು ಕಾನೂನಿನ ಆಶಯ. ಸಂವಿಧಾನದ 21 ಮತ್ತು 22ನೇ ವಿಧಿಗಳ ಆಶಯ ಕೂಡಾ ಇದೇ ಆಗಿದೆ. ಈ ಕಾರಣಗಳಿಗಾಗಿ ತನಿಖೆ ಮತ್ತು ವಿಚಾರಣೆಗಾಗಿ ಕೂಡಾ ಅನಿವಾರ್ಯ ಸಂದರ್ಭಗಳಲ್ಲಿ ಮತ್ತು ಸೀಮಿತ ಅವಧಿಗೆ ಮಾತ್ರ ಮಾತ್ರ ಬಂಧನ ಮಾಡಬೇಕು ಎಂದು ಅನೇಕ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟು ಹೇಳಿದೆ. ಕೈದಿಯೊಬ್ಬ ಜಾಮೀನಿನ ಮೇಲೆ ಹೊರಗಡೆ ಇರುವಾಗ ಜಾಮೀನಿನ ಶರತ್ತುಗಳನ್ನು ಉಲ್ಲಂಘಿಸಿದರೆ ಆತನ ಜಾಮೀನು ರದ್ದು ಮಾಡಿ ಪುನಃ ಜೈಲಿಗೆ ಕಳಿಸುವದು ಕೂಡಾ ಅನಿವಾರ್ಯ.
‘ಅಪರಾಧ ನಿರ್ಣಯವಾಗುವವರೆಗೂ ಆರೋಪಿ ದೋಷಿಯಲ್ಲ’ ಎಂಬುದು ಕ್ರಿಮಿನಲ್ ಕಾನೂನಿನ ಮೂಲ ತತ್ವ. ಆರೋಪಿಯನ್ನು ಜೈಲಿಗೆ ಹಾಕಿ ಅನೇಕ ವರ್ಷಗಳ ಕಾಲ ವಿಚಾರಣೆ ನಡೆದು ಕೊನೆಗೆ ಆತ ನಿರ್ದೋಷಿಯೆಂದು ತೀರ್ಮಾನವಾದರೆ ಆತ ತಾನು ಮಾಡದ ಅಪರಾಧಕ್ಕೆ ಜೈಲು ಶಿಕ್ಷೆಯನ್ನು ಅನುಭವಿಸಿದ ಹಾಗೇ ಆಗುತ್ತದೆ. ಹೀಗಾಗಿ ಎಲ್ಲಿ ಜಾಮೀನು ತಿರಸ್ಕೃತವಾಗಿದೆಯೋ ಅಂಥ ಪ್ರಕರಣ ಗಳು ಕಾಲಮಿತಿಯ ಆಧಾರದಲ್ಲಿ ತೀರ್ಮಾನವಾಗಬೇಕು ಎಂಬುದು ನಿಯಮ. ಆದರೂ ದೇಶದ ಅನೇಕ ಕೋರ್ಟುಗಳಲ್ಲಿ ಅಸಂಖ್ಯ ಪ್ರಕರಣಗಳು ತೀರ್ಮಾನಕ್ಕೆ ಬಾಕಿಯಿವೆ. ನ್ಯಾಯ ಪ್ರಕ್ರಿಯೆ ಯಲ್ಲಿನ ವಿಳಂಬ ನಿಜಕ್ಕೂ ನ್ಯಾಯದ ನಿರಾಕರಣೆಯಾಗುತ್ತದೆ.