ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kiran Upadhyay Column: ಜಾಗೃತಿಗೆ ಹುಚ್ಚು; ಜೆನ್-ಝೀಗೆ ಮಾದರಿ

ಪ್ರಾಣಿಗಳು ಅಪಘಾತಕ್ಕೊಳಗಾದ ಸುದ್ದಿ ಬಂದರೆ ಸಾಕು, ಕೂಡಲೇ ಅಲ್ಲಿ ಧಾವಿಸುತ್ತಿದ್ದಳು. ಪ್ರಾಥಮಿಕ ಚಿಕಿತ್ಸೆ ನೀಡಿ, ತನ್ನ ಸ್ಕೂಟಿಯಲ್ಲಿಯೇ ಅವುಗಳನ್ನು ಕರೆತಂದು, ಅವುಗಳಿಗೆ ಶೂಶ್ರೂಷೆ ನೀಡಲು ಆರಂಭಿಸಿದಳು. ಕ್ರಮೇಣ ‘ಸ್ಟ್ರೀಟ್ ವರ್ಲ್ಡ್ ಟ್ರಸ್ಟ್’ ಹೆಸರಿನಲ್ಲಿ ಸಂಸ್ಥೆಯನ್ನು ನೋಂದಾಯಿಸಿಕೊಂಡಳು. ಇವೆಲ್ಲ ಆಗುವಾಗ ಆಕೆಗೆ ಇನ್ನೂ 19 ವರ್ಷ.

ವಿದೇಶವಾಸಿ

ಒಡೆದುಹಾಕಿದರು, ನನ್ನ ಮಕ್ಕಳ ಮನೆಯನ್ನು ಒಡೆದುಹಾಕಿದರು, ನನ್ನ ಮಕ್ಕಳ ಕನಸನ್ನು ಒಡೆದು ಹಾಕಿದರು. ಒಂದೊಂದು ಪೈಸೆ ಜೋಡಿಸಿ, ನಿಮ್ಮೆಲ್ಲರ ಸಹಕಾರದಿಂದ ಇದನ್ನು ಕಟ್ಟಲು ಹೊರಟಿದ್ದೆ. ಒಬ್ಬ ವ್ಯಕ್ತಿಯ ಅತಿಯಾದ ಆಸೆ, ಅತಿಯಾದ ಹಸಿವು ಇದನ್ನೆಲ್ಲ ಸರ್ವನಾಶ ಮಾಡಿತು. ಕೆಲವು ವರ್ಷಗಳಿಂದ ನಾನು ಕಂಡ ಕನಸು, ಅದರ ಹಿಂದೆ ನಾನು ಪಟ್ಟ ಶ್ರಮ ಎಲ್ಲವೂ ಆ ಒಬ್ಬ ವ್ಯಕ್ತಿಯಿಂದಾಗಿ ಧರಾಶಾಹಿಯಾಯಿತು. ನಾನು ಸೋತುಹೋದೆ. ಇದನ್ನು ಮತ್ತೆ ಹೊಸದಾಗಿ ಹೇಗೆ ಆರಂಭಿಸಲಿ? ಮತ್ತೊಮ್ಮೆ ನಿಮ್ಮ ಮುಂದೆ ಬಂದು ಸಹಾಯಕ್ಕಾಗಿ ಹೇಗೆ ಬೇಡಿಕೊಳ್ಳಲಿ? ಎಂದು ಆಕೆ ಹೇಳುತ್ತಿzಗ ಕರುಳು ಗಿವುಚಿದಂತಾಗುತ್ತಿತ್ತು.

ಸುಮಾರು 25 ವರ್ಷದ ಯುವತಿಯೊಬ್ಬಳು, ಜೀ ಪ್ಯಾಂಟ್, ಮೇಲೊಂದು ಟಿ-ಶರ್ಟ್ ತೊಟ್ಟು, ಕಾಲಿನಲ್ಲಿ ಸಾದಾ ಚಪ್ಪಲಿ ಧರಿಸಿ, ಕಣ್ಣು ತುಂಬಾ ನೀರು ತುಂಬಿಕೊಂಡು ಈ ಮಾತನ್ನು ಹೇಳು ತ್ತಿದ್ದಾಗ ಸಹಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಇತ್ತೀಚೆಗೆ ‘ಸ್ಟ್ರೀಟ್ ವರ್ಲ್ಡ್ ಟ್ರಸ್ಟ್’ ಹೆಸರಿನ ಸಂಸ್ಥೆಯ ಸಾಮಾಜಿಕ ಜಾಲತಾಣದಲ್ಲಿ ಈ ಒಂದು ವಿಡಿಯೋ ತುಣುಕು ಓಡುತ್ತಿದ್ದಾಗ, ದೇಶದಾದ್ಯಂತ ಬಹುತೇಕ ಎಲ್ಲರ ಮನಸ್ಸಿನಲ್ಲಿಯೂ ಹಾದುಹೋಗುತ್ತಿದ್ದ ವಿಷಯ ಒಂದೇ.

‘ಇಷ್ಟು ಸಣ್ಣ ವಯಸ್ಸಿನಲ್ಲಿ, ಈ ರೀತಿಯ ಮನೋಭಾವ ಇಟ್ಟುಕೊಂಡು, ಪ್ರಾಣಿ ಸಂಕುಲದ ಅದರಲ್ಲೂ ಅಪಘಾತಕ್ಕೊಳಗಾಗಿಯೋ ಇನ್ಯಾವುದೋ ಕಾರಣಕ್ಕೋ ಅಂಗಾಂಗ ಕಳೆದುಕೊಂಡ ಶ್ವಾನ, ಬೆಕ್ಕು, ಗೋವಿನಂತಹ ಪ್ರಾಣಿಗಳ ಸಂರಕ್ಷಣೆಗೆ ನಿಂತ ಬಾಲಕಿಗೆ ಈ ಪರಿಸ್ಥಿತಿ ಬರಬಾರ ದಾಗಿತ್ತು’ ಎಂಬುದು.

ಇದನ್ನೂ ಓದಿ: Kiran Upadhyay Column: ಇಸ್ರೇಲ್‌ ಇಲೆಕ್ಷನ್‌ʼನ ಯೋಗಿ, ಅಮಿತ್‌ ಶಾ

ಅಷ್ಟಕ್ಕೂ ಆಕೆ ಇದನ್ನು ತನ್ನ ಸ್ವಂತಕ್ಕಾಗಿ ಮಾಡಿಕೊಳ್ಳುತ್ತಿರಲಿಲ್ಲ. ಇದು ವೇದನೆ ಅನುಭವಿಸು ತ್ತಿರುವ ಮೂಕ ಪ್ರಾಣಿ ಗಳಿಗಾಗಿ ಆಕೆ ಶ್ರದ್ಧೆಯಿಂದ ಮಾಡುವ ನಿತ್ಯ ಕರ್ಮ ವಾಗಿತ್ತು. ಪ್ರಾಣಿಗಳ ನೋವನ್ನು ದೂರ ಮಾಡುವ ಸಲುವಾಗಿ ಆಕೆ ಮಾಡುವ ಪೂಜೆ ಇದಾಗಿತ್ತು. ಕಳೆದ ಆರೇಳು ವರ್ಷಗಳಿಂದ ಇಂತಹ ನೂರಾರು ಪ್ರಾಣಿ ಗಳನ್ನು ಒಂದು ಕಡೆ ಕಲೆ ಹಾಕಿ, ಪ್ರತಿನಿತ್ಯ ಅವುಗಳ ಆಹಾರ, ಆರೋಗ್ಯ, ಇತ್ಯಾದಿಗಳ ಉಸ್ತುವಾರಿ ವಹಿಸಿಕೊಂಡು, ಪ್ರತಿ ಘಳಿಗೆಯೂ ಅದನ್ನೊಂದು ವ್ರತದಂತೆ ಆಚರಿಸಿಕೊಂಡು ಬಂದಿದ್ದಳಾದರೂ ಜಗತ್ತಿಗೆ ಅಪರಿಚಿತಳಾಗಿಯೇ ಇದ್ದಳು.

ಹೇಳುತ್ತಾರಲ್ಲ ‘ಎಲ್ಲವೂ ಆಗುವುದು ಒಳ್ಳೆಯದಕ್ಕೆ’, ‘ಎಲ್ಲದಕ್ಕೂ ಕಾಲ ಕೂಡಿ ಬರಬೇಕು’ ಎನ್ನುವ ಮಾತಿನಂತೆ, ಈ ಒಂದು ಅಹಿತಕರ ಘಟನೆಯೂ ಆಕೆಯ ಪಾಲಿಗೆ ವರವಾಗಿ ಬದಲಾಯಿತು. ಬಿಹಾರ ಮೂಲದ ಜಾಗೃತಿ ಮಿಶ್ರಾ ಸದ್ಯ ದೆಹಲಿಯ ಉತ್ತಮ ನಗರದ ನಿವಾಸಿ. ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಮನುಷ್ಯರನ್ನೇ ಕೇಳುವವರಿರಲಿಲ್ಲ. ಆ ಸಂದರ್ಭದಲ್ಲಿ ಪ್ರಾಣಿಗಳ ಪರಿಸ್ಥಿತಿ ಏನು ಎಂಬ ಕಾಳಜಿಯೊಂದಿಗೆ, ಬೀದಿ ಬದಿಯಲ್ಲಿ ನಿರ್ಗತಿಕವಾಗಿ ಬಿದ್ದಿರುವ ಹಸು, ನಾಯಿ ಇತ್ಯಾದಿ ಪ್ರಾಣಿಗಳನ್ನೆಲ್ಲ ಕಲೆ ಹಾಕಿ, ಅವುಗಳಿಗೆ ಚಿಕಿತ್ಸೆ ಕೊಡಿಸಿ, ಊಟ ಉಪಚಾರ ನೀಡಿ ಸಾಕಲು ಆರಂಭಿಸಿದಳು.

ಪ್ರಾಣಿಗಳು ಅಪಘಾತಕ್ಕೊಳಗಾದ ಸುದ್ದಿ ಬಂದರೆ ಸಾಕು, ಕೂಡಲೇ ಅಲ್ಲಿ ಧಾವಿಸುತ್ತಿದ್ದಳು. ಪ್ರಾಥಮಿಕ ಚಿಕಿತ್ಸೆ ನೀಡಿ, ತನ್ನ ಸ್ಕೂಟಿಯಲ್ಲಿಯೇ ಅವುಗಳನ್ನು ಕರೆತಂದು, ಅವುಗಳಿಗೆ ಶೂಶ್ರೂಷೆ ನೀಡಲು ಆರಂಭಿಸಿದಳು. ಕ್ರಮೇಣ ‘ಸ್ಟ್ರೀಟ್ ವರ್ಲ್ಡ್ ಟ್ರಸ್ಟ್’ ಹೆಸರಿನಲ್ಲಿ ಸಂಸ್ಥೆಯನ್ನು ನೋಂದಾ ಯಿಸಿಕೊಂಡಳು. ಇವೆಲ್ಲ ಆಗುವಾಗ ಆಕೆಗೆ ಇನ್ನೂ 19 ವರ್ಷ. ಇತ್ತೀಚಿನ ವರ್ಷಗಳಲ್ಲಿ ಕೆಲವರು ಮಾಡುವಂತೆ, ಆಕೆಯೂ ಯಾರೋ ಹಾಡಿದ ಹಾಡಿಗೆ ಹೆಜ್ಜೆ ಹಾಕಿ, ರೀಲ್ಸ್ ಮಾಡಿಕೊಂಡು, ಕಂಟೆಂಟ್ ಕ್ರಿಯೇಟರ್ ಎಂದು ತನಗೆ ತಾನೇ ಬಿರುದು ಕಟ್ಟಿಕೊಂಡು, ಓಡಾಡಿಕೊಂಡು ಇರಬಹುದಾಗಿತ್ತು. ಆದರೆ ಅದು ಅವಳಿಗೆ ಇಷ್ಟವಿರಲಿಲ್ಲ. ‌

71 R

ಮಾತು ಬರದ ಮೂಕ ಪ್ರಾಣಿಗಳಿಗೆ ತಾನು ದನಿಯಾಗಬೇಕು, ರಸ್ತೆ ಬದಿಯಲ್ಲಿ ಬಿದ್ದ ಅನಾಥ ಪ್ರಾಣಿಗಳಿಗೆ ತಾನು ತಾಯಿಯಾಗಬೇಕು ಎಂದು ಬಯಸಿದಳು. ಆ ನಿಟ್ಟಿನಲ್ಲಿ ಕೆಲಸವನ್ನೂ ಆರಂಭಿಸಿದಳು. ಆಗ ಆಕೆಯೊಂದಿಗೆ ಯಾವುದೇ ತಂಡ ಇರಲಿಲ್ಲ, ದೊಡ್ಡ ಮೊತ್ತದ ಹಣವೂ ಇರಲಿಲ್ಲ. ಆಕೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಸಂಸ್ಥೆಗೆ ಒಂದು ರುಪಾಯಿ ಸಹಾಯ ಮಾಡುವಂತೆ ಕೇಳಿಕೊಂಡಳು. ನಿಮಗೆ ಒಂದು ರುಪಾಯಿ ದೊಡ್ಡ ಮೊತ್ತವಲ್ಲ. ಆದರೆ ನನ್ನ ಮಕ್ಕಳ (ಮೂಕ ಪ್ರಾಣಿಗಳ) ಬಾಳಿಗೆ ಅದೇ ದಾರಿದೀಪವಾಗುತ್ತದೆ. ಅವರಿಗೆ ಒಂದು ಮನೆ, ಅವರ ಚಿಕಿತ್ಸೆಗೆ ಒಂದು ಆಸ್ಪತ್ರೆ ನಿರ್ಮಿಸುವ ಕನಸು ಕಂಡಿದ್ದೇನೆ. ಅದಕ್ಕೆ ಸಹಾಯ ಮಾಡಿ. ನೀವು ಕಳಿಸುವ ಒಂದೇ ಒಂದು ರುಪಾಯಿಯಿಂದ ನಮ್ಮ ಕನಸು ಸಾಕಾರಗೊಳ್ಳುವಂತಾಗುತ್ತದೆ ಎಂದು ಬೇಡಿಕೊಂಡಳು.

ಅನೇಕರು ಅವಳ ಮಾತಿಗೆ ಸ್ಪಂದಿಸಿ ಹಣ ಕಳುಹಿಸತೊಡಗಿದರು. ಬಂದ ಹಣದಿಂದ ಆಕೆ ದೆಹಲಿ ಯ ಸಮೀಪ ಇರುವ ನಿಜಾಮಪುರ ಗ್ರಾಮದಲ್ಲಿ ಒಂದು ಜಾಗ ಖರೀದಿಸಿದಳು. ಜೂನ್ ಒಂದನೇ ತಾರೀಖಿನಂದು ಸಂಸ್ಥೆಯ ಹೆಸರಿನಲ್ಲಿದ್ದ ಆ ಜಾಗಕ್ಕೆ ತಡೆಗೋಡೆ ನಿರ್ಮಿಸುವ ಕೆಲಸ ಆರಂಭಿಸಿದಳು. ಅದನ್ನು ಸಂತೋಷದಿಂದ ತನ್ನ ಜಾಲತಾಣದಲ್ಲಿ ಹಂಚಿಕೊಂಡಳು. ಅಂದು ಆಕೆ ಕಂಡ ಕನಸಿನ ಮೊದಲಿನ ಅಧ್ಯಾಯ ನನಸಾಗಿತ್ತು. ಆದರೆ ಆ ಸಂದೇಶಕ್ಕೆ ಸಿಗಬೇಕಾದಷ್ಟು ಪ್ರಚಾರ ಸಿಕ್ಕಿರಲಿಲ್ಲ.

ಕಳೆದ ವಾರ ಅಕ್ಟೋಬರ್ 24ರಂದು ಆಕೆ ತನ್ನ ಜಾಲತಾಣದಲ್ಲಿ ಇನ್ನೊಂದು ವಿಡಿಯೋ ಹಾಕಿದಳು. ಅಂದು ಜಾಗೃತಿ ಸ್ಥಳದಲ್ಲಿ ಇರದ ಸಮಯದಲ್ಲಿ ದೆಹಲಿಯ ಮುನ್ಸಿಪಲ್ ಕಾರ್ಪೊ ರೇಷನ್‌ನ ಜ್ಯೂನಿ ಯರ್ ಎಂಜಿನಿಯರ್, ಸ್ಥಳೀಯ ರಾಜಕೀಯ ಪುಢಾರಿಯ ಮಾತು ಕೇಳಿ, ಪೊಲೀಸರೊಂದಿಗೆ ಬಂದು, ಆಕೆ ನಿರ್ಮಿಸುತ್ತಿದ್ದ ಗಡಿಗೋಡೆಯನ್ನು ಯಾವುದೇ ಪೂರ್ವ ಮಾಹಿತಿ ನೀಡದೇ ಒಡೆದು ಹಾಕಿದ್ದರು. ಈ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಜಾಗೃತಿ, ಗಾಯಗೊಂಡ ನಾಗಿಣಿಯಂತೆ ಬುಸುಗುಡುತ್ತಿದ್ದಳು.

ಏಕಾಂಗಿಯಾಗಿ ಗೋಡೆ ಕೆಡವಿದವರ ವಿರುದ್ಧ ಕಿರುಚಿದಳು. ಈ ಮೊದಲು ಅವರು ಲಂಚ ಕೇಳಿದ್ದರು, ತಾನು ಕೊಡಲಿಲ್ಲ ಎಂಬ ಕಾರಣಕ್ಕೆ ಇದು ನಡೆಯಿತು ಎಂದು ಗೋಗರೆದಳು. ಸುಮಾರು 70 ಲಕ್ಷ ರುಪಾಯಿಯ ನಷ್ಟ 70 ನಿಮಿಷದ ಒಳಗೆ ಆಗಿ ಹೋಗಿತ್ತು. ಅದೂ ಜನರಿಂದ ಸಂಗ್ರಹಿಸಿದ ಹಣವಾಗಿತ್ತು. ಜಾಗೃತಿಗೆ ದುಃಖ, ಆಕ್ರೋಶ ಎಲ್ಲವೂ ಒಟ್ಟಿಗೇ ಕಟ್ಟೆಯೊಡೆದಿತ್ತು.

ಸೊಣಕಲು ದೇಹದವಳ ರೌದ್ರಾವತಾರ ಕಂಡ ಅಧಿಕಾರಿಗಳು ಅಲ್ಲಿಂದ ಕಾಲುಕಿತ್ತರೂ ಪ್ರಯೋಜನ ವಾಗಲಿಲ್ಲ. ಆಗಲೇ ಇದೆಲ್ಲವೂ ಆಕೆಯ ಮೊಬೈಲ್ ಫೋನಿನಲ್ಲಿ ರೆಕಾರ್ಡ್ ಆಗಿತ್ತು. ಆಕೆಯ ಬಳಿ ಇರುವ ‘ಸೋಷಿಯಲ್ ಮೀಡಿಯಾ ಅಸ್ತ್ರ’ ಬಳಸಿ, ತಾನು ಮಾಡಿಕೊಂಡಿದ್ದ ವಿಡಿಯೋ ಹರಿಬಿಟ್ಟಳು. ಜತೆಗೆ ತನ್ನ ದುಃಖವನ್ನೂ ತೋಡಿಕೊಂಡಳು. ಆ ಒಂದು ವಿಡಿಯೋ ತುಣುಕು, ದೇಶದಾದ್ಯಂತ ಸಂಚಲನ ಮೂಡಿಸಿತು. ಒಂದೂವರೆ ನಿಮಿಷದ ಆ ತುಣುಕನ್ನು ಸುಮಾರು ಐದು ಕೋಟಿ ಜನ ವೀಕ್ಷಿಸಿದರು.

ನೋಡುನೋಡುತ್ತಿದ್ದಂತೆ ಜಾಗೃತಿಯ ಜಾಲತಾಣಕ್ಕೆ 50 ಲಕ್ಷ ಜನ ಹಿಂಬಾಲಕರಾದರು. ದೆಹಲಿಯ ಮುಖ್ಯಮಂತ್ರಿ ಸ್ಥಳಕ್ಕೆ ಭೇಟಿ ನೀಡಿದರು. ಆಕೆಯನ್ನು ಸಂತೈಸಿ, ಮುಖ್ಯಮಂತ್ರಿಗಳ ವಿಶೇಷ ನಿಧಿಯಿಂದ ಧನಸಹಾಯ ಮಾಡುವುದಾಗಿ ಹೇಳಿದರು. ಜ್ಯೂನಿಯರ್ ಎಂಜಿನಿಯರ್ ಅಮಾನತ್ತಾ ದರು. ಸ್ಥಳೀಯ ಸಂಸದರು ತಮ್ಮ ಕೋಶದಿಂದ ಧನಸಹಾಯ ಮಾಡುವುದಾಗಿ ಭರವಸೆ ನೀಡಿದರು, ಸಾಕಷ್ಟು ಉದ್ಯಮಿಗಳು, ಸಮಾಜ ಸೇವಕರು ಸ್ಥಳಕ್ಕೆ ಭೇಟಿ ಕೊಟ್ಟು ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ಸಾಕಷ್ಟು ಯೂ-ಟ್ಯೂಬರ್‌ಗಳು ಈ ವಿಷಯದ ಕುರಿತು ವಿಡಿಯೋ ಮಾಡಿ ತಮ್ಮ ಅನಿಸಿಕೆ ಹಂಚಿಕೊಂಡರು. ಇವೆಲ್ಲ ನಂತರದ ರಾಜಕೀಯ, ಕಾನೂನಾತ್ಮಕ, ಸಾಮಾಜಿಕ ಬೆಳವಣಿಗೆಗಳು. ಅದರ ಕುರಿತಾಗಿ ಹೆಚ್ಚಿನ ವಿವರಣೆ, ಚರ್ಚೆ ಬೇಡ. ಈ ನಡುವೆ ನಿರ್ಮಾಣದ ಕಾರ್ಯವನ್ನು ಜಾಗೃತಿ ಪುನಃ ಆರಂಭಿಸಿದ್ದಾಳೆ. ಮೊದಲಿಗಿಂತ ಗಟ್ಟಿಯಾಗಿ ನಿಂತಿದ್ದಾಳೆ.

ಇಲ್ಲಿ ಬಹಳ ಪ್ರಮುಖವಾದ ಕೆಲವು ವಿಷಯಗಳಿವೆ. ಇಂದು ಪ್ರತಿಯೊಬ್ಬರೂ ಅದರ ಕುರಿತು ಯೋಚಿಸಬೇಕು. ಭಾರತದಲ್ಲಿ ಜಾಗೃತಿ ಮಿಶ್ರಾ ಒಬ್ಬಳೇ ಪ್ರಾಣಿಗಳ ಒಳಿತಿಗಾಗಿ ಯೋಚಿಸಿದವಳೇ ಎಂದರೆ, ಖಂಡಿತ ಅಲ್ಲ. ಅವಳಿಗಿಂತ ಮುಂಚೆಯೂ ಸಾಕಷ್ಟು ಜನ ಈ ಕುರಿತು ಯೋಚಿಸಿದ್ದಾರೆ, ಈ ನಿಟ್ಟಿನಲ್ಲಿ ಕೆಲಸವನ್ನೂ ಮಾಡುತ್ತಿದ್ದಾರೆ. ಅದರಲ್ಲಿ ಸಾಕಷ್ಟು ಮಹಿಳೆಯರೂ ಇದ್ದಾರೆ. ಮನೆಯ ಮಕ್ಕಳಿಗಿಂತ ಹೆಚ್ಚಾಗಿ ಪ್ರಾಣಿಗಳನ್ನು ಪ್ರೀತಿಸಿ, ಅವುಗಳನ್ನು ಸಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಕೆಲವರಂತೂ ದಶಕಗಳಿಂದ ಈ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. ರಿಲಾಯನ್ಸ್‌ನ ಮುಖೇಶ್ ಅಂಬಾನಿಯವರ ಮಗ ಅನಂತ ಅಂಬಾನಿ ಕೂಡ ಇಂತಹ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿ ದ್ದಾರೆ. ಇತ್ತೀಚಿನ ಒಂದು ಸಂದರ್ಶನದಲ್ಲಿ ಅವರು 9 ಲಕ್ಷ ಹಸುಗಳಿಗೆ ಬದುಕು ನೀಡಿ ಸಾಕುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ಇಲ್ಲಿ ಜಾಗೃತಿ ಮಿಶ್ರಾ ಅಥವಾ ಅವಳ ಸಂಸ್ಥೆ ಹೆಸರು ಮಾಡಲು, ಅವರ ಬಗ್ಗೆ ಕನಿಕರ, ಪ್ರೀತಿ ಹುಟ್ಟಲು ಕಾರಣವೇನು ಎಂದು ಹುಡುಕಿದರೆ, ಮೊದಲನೆಯದಾಗಿ ಆಕೆ ಒಬ್ಬ ಮಹಿಳೆ. ಓದು ಮುಗಿಸಿ ಯಾವುದೋ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡು, ವಾರಾಂತ್ಯದಲ್ಲಿ ಊರು ಸುತ್ತಿ, ಸಿನಿಮಾ ನೋಡಿ, ಊಟ ಮಾಡಿ, ಮನೆಗೆ ಬಂದು ಬೆಚ್ಚಗೆ ಹೊದ್ದು, ಜಪ್ಪನೆ ಮಲಗಬಹುದಾಗಿತ್ತು.

ಆದರೆ ಆಕೆ ಆಯ್ದುಕೊಂಡದ್ದು, ಮಾತು ಬಾರದ ಮೂಕ ಪ್ರಾಣಿಗಳನ್ನು. ಮೂಳೆ ಮುರಿದು ನೋವು ಅನುಭವಿಸುತ್ತಿರುವ ಸಂದರ್ಭದಲ್ಲಿ ತಾನು ಅವುಗಳಿಗೆ ಆಸರೆಯಾಗಬೇಕು, ಅಲ್ಲ, ತಾಯಿಯಾಗ ಬೇಕು ಎಂಬ ಹುಚ್ಚು ಜಾಗೃತಿಯಲ್ಲಿತ್ತು. ಆದುದರಿಂದ ಹಣಬಲ, ಜನಬಲ ಇಲ್ಲದಿದ್ದರೂ ಅಥವಾ ಇದ್ದ ಸ್ವಲ್ಪ ಹಣದಲ್ಲಿಯೇ ಸುಮಾರು ಐದು ನೂರಕ್ಕೂ ಹೆಚ್ಚು ಪ್ರಾಣಿಗಳಿಗೆ ಬದುಕು ನೀಡಿ ಜಾಗೃತಿ ಮಾದರಿಯಾದರು.

ಎರಡನೆಯದಾಗಿ, ಯಾವುದೇ ಮುನ್ಸೂಚನೆ ನೀಡದೆ, ತನ್ನ ಸ್ಥಳಕ್ಕೆ ಬಂದು, ನಿರ್ಮಾಣ ಹಂತ ದಲ್ಲಿದ್ದ ಕಟ್ಟಡವನ್ನು ಕೆಡಗಿದವರ ವಿರುದ್ಧ ಏಕಾಂಗಿಯಾಗಿ ಸೆಟೆದು ನಿಂತದ್ದು. ಸರಕಾರಿ ಅಧಿಕಾರಿಗಳು ಮತ್ತು ಸಮವಸದವರ ಮೇಲೆ ಕೈ ಮಾಡದೆ, ಕೆಟ್ಟ ಭಾಷೆ ಬಳಸದೆ, ತರ್ಕ ಬದ್ಧವಾಗಿ ಅವರನ್ನು ಎದುರಿಸಿದ್ದು. ಮೂರನೆಯದು ಮತ್ತು ಪ್ರಮುಖವಾದದ್ದು, ಸಾಮಾಜಿಕ ಜಾಲತಾಣವನ್ನು ಕುಶಾಗ್ರಮತಿಯಿಂದ, ಅಚ್ಚುಕಟ್ಟಾಗಿ ಬಳಸಿಕೊಂಡದ್ದು ಮತ್ತು ಸಾಮಾಜಿಕ ಜಾಲತಾಣದ ನಿಜವಾದ ಸತ್ವವನ್ನು ಜಗತ್ತಿಗೂ, ಇಂದಿನ ಜೆನ್-ಝೀಗಳಿಗೂ ತೋರಿಸಿಕೊಟ್ಟಿದ್ದು.

ಜೆನ್-ಝೀ ಎಂದು ಕರೆಸಿಕೊಳ್ಳುವವರು ಯಾವುದೇ ರಾಜಕೀಯ ಪಕ್ಷದ ಜತೆಗೆ ಗುರುತಿಸಿಕೊಳ್ಳ ದೆಯೇ ಅಥವಾ ಯಾವುದೋ ಒಂದು ಪಕ್ಷದ, ವ್ಯಕ್ತಿಯ ವಿರುದ್ಧ ಹೋರಾಡುವುದಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳದೇ ಏಕಾಂಗಿಯಾದರೂ, ವಸ್ತುನಿಷ್ಠವಾಗಿ, ವಿಷಯ ನಿಷ್ಠವಾಗಿ ಹೋರಾಟ ಮಾಡಬಹುದು, ತಾವು ಎಣಿಸಿ ದ್ದನ್ನು ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟದ್ದು.

ಜೆನ್-ಝೀಗಳಿಗೆ ದೊಡ್ಡ ಪಾಠ ಕಲಿಸಿದ ಜಾಗೃತಿ, ಫೋನ್ ಇರುವುದು ಕೇವಲ ರೀಲ್ಸ್‌ಗಳಿಗಾಗಿ ಅಲ್ಲ, ಪ್ರಾಮಾಣಿಕವಾಗಿ ಬಳಸಿದರೆ ಅದು ನ್ಯಾಯಕ್ಕಾಗಿ ಹೋರಾಡುವ ಆಯುಧವೂ ಆಗಬಹುದು ಎಂದು ತೋರಿಸಿಕೊಟ್ಟಿದ್ದಾಳೆ. ಪರಿಸರರದ ಪರವಾಗಿ, ಪ್ರಾಣಿ ಹಿಂಸೆಯ ವಿರುದ್ಧವಾಗಿ ಬರಹ ಬರೆಯುವವರನ್ನು, ಭಾಷಣ ಮಾಡುವವರನ್ನು ನಾವು ನೋಡಿದ್ದೇವೆ.

ಇತ್ತೀಚಿನ ದಿನಗಳಲ್ಲಿ ಅದರ ಕುರಿತು ಮಾಡುವುದು, ಆ ವಿಷಯದ ರೀಲ್ ಬಂದರೆ ಅದನ್ನು ಶೇರ್ ಮಾಡುವುದು, ಲೈಕ್ ಮಾಡುವುದು, ಇತ್ಯಾದಿಗಳನ್ನೂ ಮಾಡುತ್ತೇವೆ. ಆದರೆ ಜಾಗೃತಿ ಅದನ್ನೆಲ್ಲ ನೈಜ ಕೆಲಸವಾಗಿ ಪರಿವರ್ತಿಸುವುದು ಹೇಗೆ ಎಂದು ತೋರಿಸಿಕೊಟ್ಟಿದ್ದಾರೆ.

‘ಒಬ್ಬ ವ್ಯಕ್ತಿಯಿಂದ ಏನು ಮಾಡಲು ಸಾಧ್ಯ?’ ಎಂದು ಕೇಳುವವರಿಗೆ ಉತ್ತರವಾಗಿದ್ದಾರೆ. ಯಾವುದೇ ಒಳ್ಳೆಯ ಕೆಲಸ ಆರಂಭಿಸಲು ಕಾಯಬೇಡಿ, ಈಗಿರುವ ಸಮಯವೇ ಯೋಗ್ಯ ಸಮಯ, ತತ್‌ಕ್ಷಣವೇ ಕಾರ್ಯ ಆರಂಭಿಸಿ ಎಂದು ಉದಾಹರಣೆಯಾಗಿದ್ದಾರೆ. ನಮ್ಮ ಉದ್ದೇಶ ಒಳ್ಳೆಯದಾಗಿದ್ದು, ಸ್ಪಷ್ಟವಾಗಿದ್ದರೆ ಯಾವುದೇ ಅಡೆತಡೆಗೆ ಹೆದರದೆ ಮುಂದುವರಿಯಬಹುದು ಎಂದು ಮುನ್ನಡೆದಿ ದ್ದಾರೆ.

ಒಂದೂಮ್ಮೆ ನಾವು ಬಿದ್ದರೂ ಮತ್ತೊಮ್ಮೆ ಎದ್ದು ನಿಲ್ಲಬಹುದು ಎನ್ನುವುದನ್ನು ತೋರಿಸಿಕೊಟ್ಟಿ ದ್ದಾರೆ. ಈ ಗುಣವೇ ಜಾಗೃತಿಯನ್ನು ಭಾರತದಲ್ಲಿ ಮನೆಮಾತಾಗಿಸಿದೆ. ಯುವಕರಿಗೆ ಸ್ಪೂರ್ತಿಯಾದ ಜಾಗೃತಿಗೆ ಒಳ್ಳೆಯದಾಗಲಿ. ಅಂಥವರ ಸಂತತಿ ಬೆಳೆಯಲಿ. ಜಾಗೃತಿಗೋ ಅಥವಾ ಅಂಥವರಿಗೆ ಉಪಕಾರ, ಸಹಾಯ ಮಾಡಿದರೆ ಅದು ಒಬ್ಬ ವ್ಯಕ್ತಿಗಾಗಲಿ, ಒಂದು ಸಂಸ್ಥೆಗಾಗಲಿ ಮಾಡುವ ಸಹಾಯವಲ್ಲ. ಅದು ಮಾತು ಬಾರದ ಮೂಕ ಪ್ರಾಣಿಗಳಿಗೆ ಮಾಡುವ ಸಹಾಯ. ತಮ್ಮ ಮೌನದಿಂದಲೇ ಹರಸುವ ಪ್ರಾಣಿಗಳ ಹಾರೈಕೆ ಹುಸಿಯಾಗುವುದಿಲ್ಲ. ದೂರುವ ಉದ್ಯೋಗಕ್ಕಿಂತ ದಯೆ ಉದ್ಯೋಗ ಒಳ್ಳೆಯದು ಅಲ್ಲವೇ?

ಕಿರಣ್‌ ಉಪಾಧ್ಯಾಯ, ಬ‌ಹ್ರೈನ್

View all posts by this author