ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Kiran Upadhyay Column: ಇಸ್ರೇಲ್‌ ಇಲೆಕ್ಷನ್‌ʼನ ಯೋಗಿ, ಅಮಿತ್‌ ಶಾ

ಕೆಲವು ದಶಕಗಳಿಂದಲೇ ನಡೆದುಕೊಂಡು ಬಂದಿರುವ ಈ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಈಗ ಬದಲಾದ ಪರಿಸ್ಥಿತಿಯಲ್ಲಿ ಹಮಾಸ್ ತೀವ್ರಗಾಮಿ ಗುಂಪು ಗಾಜಾದಲ್ಲಿ ತನ್ನ ನೆಲೆಯನ್ನು ಹೊಂದಿದೆ. ಹಾಗೆಯೇ ಲೆಬನಾನ್‌ನಲ್ಲಿ ಹೆಜ್ಬುಗಳು ಕೂಡ. ಇತ್ತೀಚಿನ ದಿನಗಳಲ್ಲಿ ಈ ಎರಡೂ ಗುಂಪುಗಳನ್ನು ಇಸ್ರೇಲ್ ದುರ್ಬಲಗೊಳಿಸಿದ್ದು ಹೌದಾದರೂ, ಸಂಪೂರ್ಣ ಹತೋಟಿ ಪಡೆದುಕೊಳ್ಳಲು ಸಾಧ್ಯವಾಗ ಲಿಲ್ಲ. ಇಬ್ಬರೂ ಅವರವರ ಕ್ಷೇತ್ರದಲ್ಲಿ ತಮ್ಮ ಹಿಡಿತವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

Kiran Upadhyay Column: ಇಸ್ರೇಲ್‌ ಇಲೆಕ್ಷನ್‌ʼನ ಯೋಗಿ, ಅಮಿತ್‌ ಶಾ

-

ವಿದೇಶವಾಸಿ

ನವೆಂಬರ್ 4 ಅಮೆರಿಕದಲ್ಲಿ ಮಧ್ಯಂತರ ಚುನಾವಣೆ. ಅಲ್ಲಿಯ ಪರಿಣಾಮ ಏನಾಗಬಹುದು ಎಂಬ ಕುರಿತು ಎಲ್ಲರಿಗೂ ಕುತೂಹಲವಿದೆ. ಅದೇ ರೀತಿ ನಾಳೆ ಅಕ್ಟೋಬರ್ 27ರಂದು ಇಸ್ರೇಲ್‌ನಲ್ಲಿಯೂ ಇಲೆಕ್ಷನ್. ಅದರ ಪರಿಣಾಮವೂ ನವೆಂಬರ್ 4ರಂದು ಹೊರಬರಲಿದೆ. ಈ ಬಾರಿಯ ಇಸ್ರೇಲ್ ಚುನಾವಣೆ ಬಹುಶಃ ಇಸ್ರೇಲ್ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದದ್ದು. ಏಕೆಂದರೆ 2023ರ ಅಕ್ಟೋಬರ್ 7ರಂದು ಹಮಾಸ್ ದಾಳಿಯ ನಂತರದ ಮೊದಲ ಬಾರಿಗೆ ಇಸ್ರೇಲ್ ಪ್ರಜೆಗಳು ಮತ ಚಲಾಯಿಸಲಿದ್ದಾರೆ. ಆ ಘಟನೆಯ ನಂತರದ ಸುಮಾರು ನಾಲ್ಕು ವರ್ಷವೂ ಇಸ್ರೇಲ್ ಒಂದಲ್ಲ ಒಂದು ಯುದ್ಧದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಈ ಚುನಾವಣೆಯಲ್ಲಿ, ಈ ವಿಷಯವು ಪ್ರಮುಖ ವಿಷಯಗಳಂದಾಗಿದೆ ಅಥವಾ ಈ ಚುನಾವಣೆಯಲ್ಲಿ ಇದೇ ಪ್ರಮುಖ ವಿಷಯ ಎಂದರೂ ತಪ್ಪಾಗಲಾರದು.

ಸಾಮಾನ್ಯವಾಗಿ ಒಂದು ದೇಶದ ಚುನಾವಣೆಯೆಂದರೆ, ಹಣದುಬ್ಬರ, ಆಡಳಿತ, ವ್ಯವಸ್ಥೆಗಳು, ಭ್ರಷ್ಟಾಚಾರ, ಬಡತನ, ಇತ್ಯಾದಿಗಳು ಪ್ರಮುಖ ಅಂಶವಾಗಿರುತ್ತವೆ. ಆದರೆ ಇಸ್ರೇಲ್‌ನಲ್ಲಿ ನಡೆಯಲಿರುವ ಈ ಚುನಾವಣೆಯ ಪ್ರಮುಖ ವಿಷಯ ದೇಶದ ಭದ್ರತೆ. ಇಸ್ರೇಲ್ ಮತ್ತು ಗಾಜಾ ನಡುವಿನ ಜಗಳ, ಕದನ ಇಂದು ನಿನ್ನೆಯದಲ್ಲ.

ಕೆಲವು ದಶಕಗಳಿಂದಲೇ ನಡೆದುಕೊಂಡು ಬಂದಿರುವ ಈ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಈಗ ಬದಲಾದ ಪರಿಸ್ಥಿತಿಯಲ್ಲಿ ಹಮಾಸ್ ತೀವ್ರಗಾಮಿ ಗುಂಪು ಗಾಜಾದಲ್ಲಿ ತನ್ನ ನೆಲೆಯನ್ನು ಹೊಂದಿದೆ. ಹಾಗೆಯೇ ಲೆಬನಾನ್‌ನಲ್ಲಿ ಹೆಜ್ಬುಗಳು ಕೂಡ. ಇತ್ತೀಚಿನ ದಿನಗಳಲ್ಲಿ ಈ ಎರಡೂ ಗುಂಪುಗಳನ್ನು ಇಸ್ರೇಲ್ ದುರ್ಬಲಗೊಳಿಸಿದ್ದು ಹೌದಾದರೂ, ಸಂಪೂರ್ಣ ಹತೋಟಿ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಇಬ್ಬರೂ ಅವರವರ ಕ್ಷೇತ್ರದಲ್ಲಿ ತಮ್ಮ ಹಿಡಿತವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

ಇದನ್ನೂ ಓದಿ: Kiran Upadhyay Column: ಹಾಗಾದರೆ ಮೂರನೇ ಮಗುವನ್ನು ಕೊಲ್ಲಬೇಕಿತ್ತು !

ಅವರ ಹಿಂದೆ ಇರಾನ್ ನಿಂತಿದೆ ಎಂದು ತಿಳಿದಿರುವ ಇಸ್ರೇಲ್, ತಮ್ಮ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಇರಾನ್ ಮೇಲೆ ವಾಯು ದಾಳಿಯನ್ನು ನಡೆಸಿ, ಈ ವರ್ಷ ಮುಕ್ತ ಯುದ್ಧಕ್ಕೂ ಮುಂದಾದದ್ದು ಎಲ್ಲರಿಗೂ ತಿಳಿದ ವಿಷಯ. ಇಷ್ಟು ದಿನ ಮುಸುಕಿನಲ್ಲಿ ನಡೆಯುತ್ತಿದ್ದ ಗುದ್ದಾಟ ಈಗ ಮುಕ್ತ ಯುದ್ಧವಾಗಿ ಬದಲಾಗಿದೆ. ಹಾಗಾಗಿ ಈ ಚುನಾವಣೆಯಲ್ಲಿ ಇಸ್ರೇಲಿಗಳಿಗೆ ಇದು ಪ್ರಮುಖ ವಿಷಯವಾಗಿದೆ. ಈ ಚುನಾವಣೆಯಲ್ಲಿ ಎರಡನೆಯ ಪ್ರಮುಖ ವಿಷಯ, ಖುದ್ದು ಬೆಂಜಮೀನ್ ನೇತನ್ಯಾಹು. ಇಸ್ರೇಲನ್ನು ಅತಿ ಹೆಚ್ಚು ವರ್ಷಗಳ ಕಾಲ ಪ್ರಧಾನಿಯಾಗಿ ಆಳಿದ ನೇತನ್ಯಾಹು, ಅಕ್ಟೋಬರ್ 7ರ ದಾಳಿಯ ಜವಾಬ್ದಾರಿಯನ್ನು ಇನ್ನೂ ತೆಗೆದುಕೊಳ್ಳಲಿಲ್ಲ ಎನ್ನುವ ಮಾತಿದೆ. ಇದೇನು, ಯಾವುದೇ ರೀತಿಯ ದುರ್ಘಟನೆ ಆದರೆ ಅಲ್ಲಿಯ ಪ್ರಧಾನಿ ಜವಾಬ್ದಾರಿ ತೆಗೆದುಕೊಳ್ಳಬೇಕೇ ಎನ್ನಬೇಡಿ. ಈ ವಿಷಯದಲ್ಲಿ, ಈ ದಾಳಿಯ ಮೊದಲು ಯುನೈಟೆಡ್ ಅರಬ್ ಎಮರೈಟ್ಸ ಮತ್ತು ಈಜಿ ದೇಶಗಳು ಅವರಿಗೆ ಈ ದಾಳಿಯ ಸುಳಿವು ನೀಡಿದ್ದವು, ಆದರೂ ನೇತನ್ಯಾಹೂಗೆ ಅದನ್ನು ತಡೆಯಲು ಸಾಧ್ಯವಾಗಲಿಲ್ಲ ಎಂಬ ಮಾತಿದೆ.

ನೇತನ್ಯಾಹು ಇದನ್ನು ನಿರಾಕರಿಸಿದ್ದಾರೆ. ಆದರೆ ಅಲ್ಲಿಯ ಮತದಾರರು ಇದನ್ನು ಎಷ್ಟರಮಟ್ಟಿಗೆ ಒಪ್ಪಿಕೊಂಡಿದ್ದಾರೆ ಎನ್ನುವುದು ಪ್ರಮುಖ ವಿಷಯವಾಗುತ್ತದೆ. ಅದರೊಂದಿಗೆ ಇತ್ತೀಚೆಗೆ ಆರಂಭವಾದ ಇರಾನ್ ಯುದ್ಧಕ್ಕೂ ನೇತನ್ಯಾಹು ಕಾರಣ, ಇರಾನ್ ವಿರುದ್ಧ ಯುದ್ಧ ಪ್ರಾರಂಭಿ ಸಲು ಅಮೆರಿಕದ ಮನವೊಲಿಸಿದ್ದೇ ನೇತನ್ಯಾಹು ಎಂಬ ಅಭಿಪ್ರಾಯ ಅಲ್ಲಿಯವರಲ್ಲಿದೆ. ಆ ಯುದ್ಧ ಆರಂಭವಾಗಿ ಇಷ್ಟು ದಿನಗಳಾದರೂ, ಇದುವರೆಗೂ ಯಾವುದೇ ಪರಿಣಾಮ ಬರಲಿಲ್ಲ, ಇರಾನ್ ರಾಜಕೀಯದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ, ಈ ಯುದ್ಧದಲ್ಲಿ ಮೊದಲ ಬಾರಿ ಇರಾನ್‌ನ ಕ್ಷಿಪಣಿಗಳು ಇಸ್ರೇಲ್‌ನ ಕಣ್ಣಗಾವಲಾಗಿದ್ದ ಐರನ್ ಡೋಮ್ ಕಣ್ಣು ತಪ್ಪಿಸಿ ದೇಶದೊಳಗೆ ನುಗ್ಗಿ ಬಂದಿವೆ, ಈ ಯುದ್ಧದಿಂದ ಇಸ್ರೇಲ್‌ಗೆ ಮೊದಲ ಬಾರಿ ಸಾಕಷ್ಟು ನಷ್ಟವಾಗಿದೆ.

KU 2610

ಇತ್ತೀಚಿಗೆ ಒಂದು ವಿಮಾನವನ್ನು ಅಪಹರಿಸಿ ರಾಜಧಾನಿಗೆ ಬಂದು ಅಪ್ಪಳಿಸುವ ಸಂಚು ನಡೆದಿದ್ದರೂ ಇಸ್ರೇಲ್ ಸರ್ಕಾರಕ್ಕೆ ತಿಳಿಯದಿದ್ದದ್ದು, ಭದ್ರತೆಯ ಲೋಪವಾಗುತ್ತಿರುವುದು, ಇವೆಲ್ಲದರ ಕುರಿತು ಜನರಲ್ಲಿ ಅಸಹನೆಯಿದೆ. ಈ ಎಲ್ಲ ಕಾರಣಗಳಿಂದ 2023 ಅಕ್ಟೋಬರ್ ಘಟನೆಯ ನಂತರ, ವಿಶ್ವದಾದ್ಯಂತ ಇಸ್ರೇಲ್‌ಗೆ ಇದ್ದ ಸಹಾನುಭೂತಿ, ರಾಜಕೀಯ ಬೆಂಬಲ ಕಡಿಮೆಯಾಗಿದೆ,

ಜಾಗತಿಕವಾಗಿ ಇಸ್ರೇಲ್ ಪ್ರತ್ಯೇಕತೆಯನ್ನು ಎದುರಿಸುತ್ತಿದೆ, ಅದಕ್ಕೆಲ್ಲ ನೇತನ್ಯಹು ಕಾರಣ, ಈಗಂತೂ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ನೇತನ್ಯಾಹು ಅವರನ್ನು ವಾರ್ ಕ್ರಿಮಿನಲ್ ಎಂದಿದ್ದು, ಬಂಧನದ ವಾರೆಂಟ್ ಇದೆ, ಯುರೋಪ್, ಯುಕೆ ಮೊದಲಾದ ಪಶ್ಚಿಮದ ದೇಶಗಳೊಂದಿಗೆ ಇಸ್ರೇಲ್ ಸಂಬಂಧ ಇತ್ತೀಚಿನ ದಿನಗಳಲ್ಲಿ ದುರ್ಬಲವಾಗುತ್ತಿದೆ, ಎನ್ನುವ ಭಿಪ್ರಾಯ ಅಲ್ಲಿಯವರಲ್ಲಿದೆ.

ಅದೆಲ್ಲದರೊಂದಿಗೆ, ಅವರ ಮೇಲೆ ವೈಯಕ್ತಿಕವಾಗಿ ಭ್ರಷ್ಟಾಚಾರದ ಆರೋಪವೂ ಇರುವುದರಿಂದ ಇದು ಎರಡನೆಯ ಪ್ರಮುಖ ವಿಷಯವಾಗಿದೆ. ಇನ್ನೊಂದು ಪ್ರಮುಖ ವಿಷಯ ಏನು ಎಂದು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಇಸ್ರೇಲ್ ನಲ್ಲಿ ವಯಸ್ಸಿಗೆ ಬಂದ ನಂತರ ಪ್ರತಿಯೊಬ್ಬ ರಿಗೂ ಸೇನೆಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯವಾಗಿದೆ. ಆದರೆ ಅಲ್ಲಿರುವ ಅತಿ ಸಂಪ್ರದಾಯ ವಾದಿ ಯಹೂದಿಗಳ ಗುಂಪಿನ ಜನ ಇದನ್ನು ನಿರಾಕರಿಸುತ್ತಿದ್ದಾರೆ.

ಅವರ ಪ್ರಕಾರ ಧರ್ಮ ಸೈನ್ಯದಲ್ಲಿ ಸೇವೆ ಸಲ್ಲಿಸುವುದನ್ನು ತಡೆಯುತ್ತದೆ. ಆದ್ದರಿಂದ ಕಡ್ಡಾಯ ವಾಗಿರುವ ಈ ಕಾನೂನಿಗೆ ವಿನಾಯತಿ ನೀಡಬೇಕು ಎಂಬುದು ಅವರ ಕೋರಿಕೆ. ಇಷ್ಟೇ ಆದರೆ ತೊಂದರೆ ಇರಲಿಲ್ಲ. ಈ ವಾದವನ್ನು ಅಥವಾ ಈ ತಂಡವನ್ನು ಇತ್ತೀಚಿನ ದಿನಗಳಲ್ಲಿ ನೇತನ್ಯಾಹು ಬೆಂಬಲಿಸುತ್ತಿzರೆ. ಇದರಿಂದ ಉಳಿದ ಇಸ್ರೇಲಿ ಪ್ರಜೆಗಳಲ್ಲಿ ಅಸಮಾಧಾನವಿದೆ. ನಾವೆಲ್ಲರೂ ಯುದ್ಧವನ್ನು ಎದುರಿಸಲು ಹೊರಟಿರುವಾಗ, ಈ ಸಂಪ್ರದಾಯಿ ಜನರು ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದ್ದಾರೆ ಎನ್ನುವ ಅಸಮಾಧಾನ ಇದೆ.

ಅದನ್ನು ಪ್ರಧಾನಿಯಾದವರು ಬೆಂಬಲಿಸುತ್ತಿರುವುದಕ್ಕೂ ಅಸಮಾಧಾನವಿದೆ. ಈ ರೀತಿಯ ಕಾರಣವನ್ನು ನಮ್ಮ ಭಾರತದಂತಹ ದೇಶದಲ್ಲಿ ಊಹಿಸಲು ಸಾಧ್ಯವೇ? ಮೊದಲನೆಯದಾಗಿ ನಮ್ಮಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುವುದೇ ಕಡ್ಡಾಯವಲ್ಲ. ಹಾಗಿರುವಾಗ ನಮ್ಮ ದೇಶದಲ್ಲಿ ಇವೆಲ್ಲ ಚುನಾವಣೆಗೆ ವಿಷಯಗಳಾಗುವುದಿಲ್ಲ ಬಿಡಿ. ಹಾಗಾದರೆ ಇಸ್ರೇಲ್ ಜನರಿಗೆ ಬೆಲೆ ಏರಿಕೆ, ಹಣದುಬ್ಬರ ಇವೆಲ್ಲವೊಂದು ವಿಷಯವೇ ಅಲ್ಲವೇ ಅಂದರೆ, ಮೇಲಿನ ಮೂರೂ ವಿಷಯಗಳ ನಂತರ ಆ ವಿಷಯ. ಹೀಗಿರುವಾಗ, ನೇತನ್ಯಾಹು ಕಡೆಗೆ ಜನರು ಒಲವು ತೋರಿಸುತ್ತಾರೆಯೇ ಅಥವಾ ಹೊಸ ಸರ್ಕಾರ ರಚನೆಯಾಗುತ್ತದೆಯೇ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದೆ.

ಇಸ್ರೇಲ್ ಚುನಾವಣೆ ಭಾರತದ ಅಥವಾ ಅಮೆರಿಕದ ಚುನಾವಣೆಯಂತೆ ಅಲ್ಲ. ಅಲ್ಲಿಯ ಚುನಾವಣೆ ಸ್ವಲ್ಪ ಭಿನ್ನವಾಗಿದೆ. ಅಲ್ಲಿಯೂ ಸಂಸದೀಯ ಪ್ರಜಾಪ್ರಭುತ್ವವೇ. ಅವರ ಸಂಸತ್ತನ್ನು ‘ನೆಸೆಟ್’ ಎಂದು ಕರೆಯುತ್ತಾರೆ. ಅಲ್ಲಿ ಒಟ್ಟು 120 ಸ್ಥಾನಗಳು. ಆದರೆ ಭಾರತ, ಅಮೆರಿಕ ಅಥವಾ ಯುಕೆಯಂತೆ ಇಸ್ರೇಲ್ ಜನ ಅಭ್ಯರ್ಥಿಗಳಿಗೆ ಮತ ಚಲಾಯಿಸುವುದಿಲ್ಲ, ಬದಲಾಗಿ ಒಂದು ಪಕ್ಷಕ್ಕೆ ಮತ ಚಲಾಯಿಸುತ್ತಾರೆ. ‌

ಪ್ರತಿ ಪಕ್ಷಕ್ಕೂ ಮತ ಹಂಚಿಕೆಯ ಆಧಾರದ ಮೇಲೆ ಸ್ಥಾನಗಳನ್ನು ನೀಡಲಾಗುತ್ತದೆ. ಹಾಗೆ ಚುನಾವಣೆಯಲ್ಲಿ ಒಂದು ಪಕ್ಷಕ್ಕೆ ಸಿಗಬೇಕಾದ ಕನಿಷ್ಠ ಮತಗಳು 3.25%. ಅಷ್ಟು ಮತಗಳನ್ನು ಪಡೆದರೆ ಆ ಪಕ್ಷಕ್ಕೆ ನಾಲ್ಕು ಸ್ಥಾನ. ಒಟ್ಟೂ 120 ಸ್ಥಾನಗಳು. ಒಂದು ಪಕ್ಷ 60ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದರೆ ಆ ಪಕ್ಷ ಸರಳ ಬಹುಮತದೊಂದಿಗೆ ಸರ್ಕಾರವನ್ನು ರಚಿಸಬಹುದು. ಆದರೆ ಏನು ಗೊತ್ತೇ? ಇಸ್ರೇಲ್‌ನ ಇದುವರೆಗಿನ ಇತಿಹಾಸದಲ್ಲಿಯೇ ಯಾವುದೇ ಒಂದು ಪಕ್ಷ ಸ್ವಂತ ಬಲದಿಂದ ಅಧಿಕಾರದ ಗದ್ದುಗೆ ಏರಲು ಸಾಧ್ಯವಾಗಲಿಲ್ಲ.

ದೇಶ ರಚನೆಯಾದ ಸುಮಾರು ಎಂಟು ದಶಕದ ಇತಿಹಾಸದಲ್ಲಿ, ಇಸ್ರೇಲ್‌ನಲ್ಲಿ ಇದ್ದದ್ದು ಸಮ್ಮಿಶ್ರ ಸರ್ಕಾರವೇ. ಕೆಲವೊಮ್ಮೆ 60ಕ್ಕೂ ಹೆಚ್ಚು ಸ್ಥಾನ ಪಡೆಯಲು ಕೆಲವು ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದಿದೆ. ಎಷ್ಟೋ ಬಾರಿ ಅದು ಯಶಸ್ವಿಯಾಗದೆ ಮರು ಚುನಾವಣೆ ನಡೆದ ದಾಖ ಲೆಯೂ ಇದೆ. ಕಳೆದ ಜುಲೈನಲ್ಲಿ ಅಲ್ಲಿಯ ನೆಸೆಟ್ ವಿಸರ್ಜನೆಯಾಗಿತ್ತು. ಆಗಲೂ ನೆತನ್ಯಾಹು ಪಕ್ಷ ಸಂಪೂರ್ಣ ಬಹುಮತ ಪಡೆದಿರಲಿಲ್ಲ. ಅದೂ ಕೂಡ ಸಮ್ಮಿಶ್ರ ಸರ್ಕಾರವೇ ಆಗಿತ್ತು.

ಚುನಾವಣೆ ಪೂರ್ವ ಸಮೀಕ್ಷೆಯಲ್ಲಿ ಈ ಬಾರಿ ಕೂಡ ನೇತನ್ಯಾಹು ಅವರ ಲಿಕುಡ್ ಪಕ್ಷ 45 ರಿಂದ 50 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ಆದಾಗ್ಯು ಜಗತ್ತು ನೇತನ್ಯಾಹು ಅವರನ್ನು ಇಸ್ರೇಲ್‌ನ ಅತ್ಯಂತ ಕಠಿಣ ನಾಯಕ ಎಂದು ಪರಿಗಣಿಸುತ್ತದೆ. ಈಗ ವಿಶ್ವದ ಮುಂದಾಗಲಿ, ಅಥವಾ ಇಸ್ರೇಲ್ ಜನರ ಮುಂದಾಗಲಿ ಇರುವ ಪ್ರಶ್ನೆ ಅದಲ್ಲ. ನೇತನ್ಯಾಹು ಇಲ್ಲದಿದ್ದರೆ ಅವರ ಜಾಗದಲ್ಲಿ ಬರುವವರು ಯಾರು? ಅವರು ನೇತನ್ಯಾಹುಗಿಂತ ಹೇಗೆ ಭಿನ್ನ ಎನ್ನುವುದು ಪ್ರಮುಖವಾಗುತ್ತದೆ. ಸದ್ಯಕ್ಕೆ ನೇತನ್ಯಾಹು ಅವರಿಗೆ ಪ್ರಬಲ ಪೈಪೋಟಿ ನೀಡುತ್ತಿರುವವರು ಗಾದಿ ಐಸನ್ಕೋಟ.

66 ವರ್ಷದ ಐಸನ್ಕೋಟ್ ಪಾಲಕರು ಮೊರಕ್ಕೋದಿಂದ ಯಹೂದಿ ವಲಸಿಗರಾಗಿ ಬಂದವರು. ಐಸನ್ಕೋಟ್ ತಮ್ಮ ವೃತ್ತಿ ಜೀವನವನ್ನು ಸೈನ್ಯದಲ್ಲಿ ಕಳೆದವರು. ಅವರು ಗೋಲಾನಿ ಬ್ರಿಗೇಡ್‌ಗೆ ಕಮಾಂಡರ್ ಕೂಡ ಆಗಿದ್ದರು. 2015 ರಿಂದ 2019ರವರೆಗೆ ಅವರು ಇಸ್ರೇಲ್‌ನ ಮಿಲಿಟರಿಯಲ್ಲಿ ಅತ್ಯುನ್ನತ ಶ್ರೇಣಿಯ ಅಧಿಕಾರಿಯಾಗಿ, ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದವರು. 2006ರ ಯುದ್ಧದ ಸಂದರ್ಭದಲ್ಲಿ ಅವರು ನೀಡಿದ ಹೇಳಿಕೆ ಬಹಳಷ್ಟು ಸುದ್ದಿ ಮಾಡಿತ್ತು. ‘ಇಸ್ರೇಲ್ ಇನ್ನು ಮುಂದೆ ದಾಳಿಗಳಿಗೆ ಸಮಾನ ಬಲದಿಂದ ಪ್ರತಿಕ್ರಿಯಿಸುವುದಿಲ್ಲ, ಯಾರಾದರೂ ಗುಂಡು ಹಾರಿಸಿದರೆ ಪ್ರತಿಯಾಗಿ ಗುಂಡು ಹಾರಿಸುವುದಿಲ್ಲ, ಬದಲಾಗಿ ದಾಳಿಕೋರರು ಮತ್ತು ಅವರಿಗೆ ಆಶ್ರಯ ನೀಡುವವರು ಮತ್ತೆ ಇಸ್ರೇಲ್ ಮೇಲೆ ದಾಳಿ ಮಾಡುವ ಮೊದಲು ಎರಡು ಬಾರಿ ಯೋಚಿಸುವಷ್ಟು ಅಗಾಧ ಬಲದಿಂದ ಪ್ರತಿಕ್ರಿಸುತ್ತದೆ’ ಎಂದಿದ್ದರು ಐಸಕ್ಕೋಟ. ಇದನ್ನು ದಹಿಯಾ ಸಿದ್ಧಾಂತ ಎಂದೇ ಕರೆಯಲಾಯಿತು.

2009ರಲ್ಲಿ ಯುನೈಟೆಡ್ ನೇಶ ಇದನ್ನು ಟೀಕಿಸಿತ್ತಾದರೂ, ಈ ವಿಧಾನ ಇಸ್ರೇಲ್‌ನಲ್ಲಿ ಮಿಲಿಟರಿಯ ಸಿದ್ಧಾಂತದ ಮೂಲಾಧಾರವಾಯಿತು. ಈಗ ವಿರೋಧ ಪಕ್ಷದಲ್ಲಿದ್ದರೂ ಐಸನ್ಕೋಟ್ ಈ ಸಿದ್ಧಾಂತ ವನ್ನು ಕೈಬಿಡಲಿಲ್ಲ. ಮೊನ್ನೆಯಷ್ಟೇ ಹೆಜ್ಬು ಇರಾನ್ ಜೊತೆ ಯುದ್ಧಕ್ಕೆ ಪ್ರವೇಶಿಸಿದಾಗ ಐಸನ್ಕೋಟ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಇದನ್ನು ಪುನಃ ಪ್ರತಿಪಾದಿಸಿದರು. 2023ರಲ್ಲಿ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಅವರ 25 ವರ್ಷದ ಮಗ ಗಾಜಾದ ಯುದ್ಧದಲ್ಲಿ ಹೋರಾಡುವಾಗ ಕೊಲ್ಲಲ್ಪಟ್ಟಿದ್ದು ಕೂಡ ಅವರ ದೃಢ ನಿಲುವಿಗೆ ಕಾರಣವಾಗಿರಬಹುದು.

2023 ಘಟನೆಯ ನಂತರವಂತೂ ಅವರು ‘ಇನ್ನು ಮುಂದೆ ಪ್ಯಾಲಿಸ್ತೇನ್‌ಗೆ ಪ್ರತ್ಯೇಕ ರಾಜ್ಯದ ಮಾನ್ಯತೆಯನ್ನು ನೀಡಲಾಗುವುದಿಲ್ಲ, ಪ್ಯಾಲಿಸ್ತೇನಿಯರು ಭವಿಷ್ಯದಲ್ಲಿ ಸ್ವಂತ ಸೈನ್ಯ ಹೊಂದಲು ಅಥವಾ ಸ್ವತಂತ್ರ ರಾಜ್ಯವಾಗಲು ಬಿಡುವುದಿಲ್ಲ’ ಎಂದರು. ಅಮೆರಿಕದ ಒತ್ತಡಕ್ಕೆ ಮಣಿದು ನೇತನ್ಯಾಹು ಇರಾನ್ ಒಪ್ಪಂದದ ಸಮಯದಲ್ಲಿ ಲೆಬೆನಾನ್ ಕದನ ವಿರಾಮಕ್ಕೆ ಒಪ್ಪಿಕೊಂಡರು ಎಂದು ಆರೋಪಿಸಿದರು. ಹಾಗೆಯೇ, ಇದೇ ಜುಲೈನಲ್ಲಿ ನ್ಯೂಯಾರ್ಕ್ ಮೇಯರ್ ಮಮದಾನಿ, ನೇತನ್ಯಾಹು ಅವರನ್ನು ಯುದ್ಧ ಅಪರಾಧಿ ಎಂದಾಗ ಮಮದಾನಿಯ ಹೇಳಿಕೆಗಳನ್ನು ತಿರಸ್ಕರಿಸಿ, ಮಮದಾನಿ ಯಹೂದಿ ವಿರೋಧಿ ಎಂದು ಹೇಳಿದ್ದು ಕೂಡ ಇದೆ ಐಸನ್ಕೋಟ್. ನೇತನ್ಯಾಹೂಗೆ ಈ ಚುನಾವಣೆಯಲ್ಲಿ ಇನ್ನೊಬ್ಬ ಪ್ರತಿಸ್ಪರ್ಧಿ ನಫಾಲಿ ಬೆನೆಟ್. ‌

2021ರಿಂದ 22ರವರೆಗೆ ಇಸ್ರೇಲ್ ಪ್ರಧಾನಿಯೂ ಆಗಿದ್ದ ಬೆನೆಟ್, ಇಸ್ರೇಲ್ ಕಮಾಂಡೋ ಘಟಕದಲ್ಲಿ ಸೇವೆ ಸಲ್ಲಿಸಿದವರು. ಅವರು ತಂತ್ರಜ್ಞಾನದ ಉದ್ಯಮಿಯೂ ಹೌದು. ನೇತನ್ಯಾಹು ಅವರ 12 ವರ್ಷಗಳ ಅಧಿಕಾರವನ್ನು ಮುಟಕುಗೊಳಿಸಿ, ಪ್ರಧಾನಿಯಾದವರು ಬೆನೆಟ್. ಈ ವರ್ಷ ಇಸ್ರೇಲ್‌ನ ವಿರೋಧಿ ಪಕ್ಷದ ನಾಯಕರಾದ ಯೆರ್ ಲಾಪಿಡ್ ಅವರೊಂದಿಗೆ ಸೇರಿ, ನೇತನ್ಯಾಹು ವಿರುದ್ಧ ‘ಟುಗೆದರ್’ ಎಂಬ ಹೊಸ ಚಳುವಳಿಯನ್ನು ಪ್ರಾರಂಭಿಸಿದರು. ಆದರೆ ಬೆನ್ನಿಟ್ ಯಾರು ಎಂದು ಅರಿತುಕೊಳ್ಳಬೇಕಾದರೆ ಅವರ ಅಕ್ಟೋಪಸ್ ಸಿದ್ಧಾಂತವನ್ನು ಅರಿತುಕೊಳ್ಳಬೇಕು. ಅವರ ಪ್ರಕಾರ ಇರಾನ್ ಅಕ್ಟೋಪಸ್ ಇದ್ದಂತೆ. ‘ಹಮಾಸ್, ಹಿಜ್ಬು, ಹೌತಿ, ಇತ್ಯಾದಿ ಉಗ್ರಗಾಮಿ ಗುಂಪುಗಳ ಹಿಂದೆ ಇರಾನ್ ಕೈವಾಡವಿದೆ. ಇವರೆಲ್ಲರಿಗೂ ಇರಾನ್ ಶಾಸ್ತ್ರಗಳನ್ನು ತಲುಪಿಸುತ್ತದೆ.

ಇಸ್ರೇಲ್ ತನ್ನ ಸೈನಿಕರ ಜೀವ ಪಣವಿಟ್ಟು ಈ ಗುಂಪುಗಳ ವಿರುದ್ಧ ಹೋರಾಡುತ್ತದೆ. ಆದರೆ ಇವರೆಲ್ಲರ ಮುಖ್ಯಸ್ಥ ಇರಾನ್ ಆರಾಮವಾಗಿ ಕುಳಿತಿದೆ. ಆದ್ದರಿಂದ ಅಕ್ಟೋಪಸ್‌ನ ತೋಳುಗಳನ್ನು ಕತ್ತರಿಸಿದರೆ ಸಾಕಾಗುವುದಿಲ್ಲ, ತಲೆಯ ಮೇಲೆ ಹೊಡೆಯಬೇಕು.’ ಇದನ್ನು ಬೆನೆಟ್ ಪ್ರಧಾನಿ ಯಾಗಿದ್ದಾಗಲೇ ಹೇಳಿದ್ದರು. ಅವರು ಪ್ರಧಾನಿಯಾಗಿದ್ದಾಗ ಇರಾನ್ ಒಳಗೆ ಎರಡು ದಾಳಿಗೆ ಆದೇಶಿಸಿದ್ದರು.

ಅದರಲ್ಲಿ 2022ರಲ್ಲಿ ಕೆರ್ಮನ್ ಶಾದಲ್ಲಿರುವ ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ಗಳಿಗೆ ಸೇರಿದ ಡ್ರೋನ್ ಕಾರ್ಖಾನೆಯ ಮೇಲೆ ದಾಳಿ ನಡೆಸಿ ನೂರಾರು ಡ್ರೋನ್ ನಾಶಪಡಿಸಿದ್ದರು. ಅವರೂ ಈ ಚುನಾವಣೆಯಲ್ಲಿ ಪ್ರಮುಖ ವ್ಯಕ್ತಿ. ಇವರಿಬ್ಬರ ಹೊರತಾಗಿ ನೇತನ್ಯಾಹುಗೆ ಪೈಪೋಟಿ ಒಡ್ಡುವ ಬೇರೆ ನಾಯಕರು ಇಸ್ರೇಲ್‌ನಲ್ಲಿ ಕಾಣುತ್ತಿಲ್ಲ. ಆದರೆ ಇದು ಹೇಗಾಗಿದೆ ಎಂದರೆ, ಭಾರತದಲ್ಲಿ ‘ಮೋದಿಯವರನ್ನು ಬದಲಾಯಿಸಿ’, ‘ಮೋದಿಯನ್ನು ಕೆಳಗೆ ಇಳಿಸಿ’ ಎಂಬ ವಿರೋಧ ಪಕ್ಷದ ಮಾತುಗಳು ಬಂದಾಗಲೆಲ್ಲ, ಅವರ ಸ್ಥಾನದಲ್ಲಿ ಅಮಿತ್ ಶಾ ಅಥವಾ ಯೋಗಿ ಆದಿತ್ಯನಾಥ್ ಬರುತ್ತಾರೆ ಎಂದು ತಮಾಷೆಗಾಗಿಯೂ, ನಿಜವಾಗಿಯೂ, ಹೇಳುವ ಮಾತಿದೆ.

ಇಸ್ರೇಲ್‌ನಲ್ಲಿಯೂ ಸದ್ಯ ಅದೇ ಪರಿಸ್ಥಿತಿ ಇದೆ. ಒಂದೇ ಒಂದು ವ್ಯತ್ಯಾಸವೆಂದರೆ, ಅಲ್ಲಿ ಅಽಕಾರ ಹಿಡಿಯುವವರ ಸಿದ್ಧಾಂತ ಹೆಚ್ಚು ಕಮ್ಮಿ ಒಂದೇ, ಆದರೆ ಪಕ್ಷ ಮಾತ್ರ ಬೇರೆ. ಈ ಚುನಾವಣೆಯಲ್ಲಿ ಐಸನ್ಕೋಟ್ ಮತ್ತು ಬೆನೆಟ್ ಇಸ್ರೇಲಿನ ಅಮಿತ್ ಶಾ ಮತ್ತು ಯೋಗಿ ಆದಿತ್ಯನಾಥ್ ಎಂದರೆ ತಪ್ಪಾಗುತ್ತದೆಯೇ? ಯಾವುದಕ್ಕೂ ನವೆಂಬರ್ ನಾಲ್ಕನೇ ತಾರೀಖಿನವರೆಗೂ ಕಾದು ನೋಡಬೇಕು.