Kiran Upadhyay Column: ಪಾssssಪ... ಹಿರಣ್ಯಕಶಿಪು...!
ಹಿರಣ್ಯಕಶಿಪು, ಹಿರಣ್ಯಾಕ್ಷ, ರಾವಣ, ಕುಂಭಕರ್ಣ, ಇಂದ್ರಜಿತು, ಶುಂಭ, ನಿಶುಂಭ, ಚಂಡ, ಮುಂಡ, ಶೂರ್ಪನಖಿ, ತಾಟಕಿ, ಮಾರೀಚ, ನರಕಾಸುರ, ಪೂತನಿ, ಬಕಾಸುರ ಹೀಗೆ ಸಾವಿರಾರು ದಾನವರ ಹೆಸರುಗಳನ್ನು ನಾವು ಕೇಳಿದ್ದೇವೆ. ಇವರನ್ನು ಅಸುರರು ಎಂದೂ ಕರೆಯುವುದಿದೆ.


ವಿದೇಶವಾಸಿ
dhyapaa@gmail.com
ಈ ಭೂಮಿಯ ಮೇಲೆ ಒಂದು ಕಾಲದಲ್ಲಿ ದಾನವರು ಎಂದು ಇದ್ದರಂತೆ. ನಮ್ಮ ಪುರಾಣ, ಮಹಾ ಭಾರತ, ರಾಮಾಯಣಗಳಲ್ಲಿ ದಾನವರು ಎಂದು ಕರೆಸಿಕೊಳ್ಳುವ ಸಾಕಷ್ಟು ಪಾತ್ರಗಳು ಬಂದು ಹೋಗುತ್ತವೆ. ಅವರು ಹುಟ್ಟಿದ ಕುಲ ಯಾವುದೇ ಇರಲಿ, ವೃತ್ತಿ ಯಾವುದೇ ಇರಲಿ, ಅಷ್ಟೇ ಏಕೆ, ಅರಸರೇ ಆಗಿರಲಿ, ಅವರ ಗುಣಗಳಿಂದಾಗಿ ಅವರು ದಾನವರು ಎಂದು ಕರೆಸಿಕೊಳ್ಳುತ್ತಿದ್ದರು. ಹಿರಣ್ಯಕಶಿಪು, ಹಿರಣ್ಯಾಕ್ಷ, ರಾವಣ, ಕುಂಭಕರ್ಣ, ಇಂದ್ರಜಿತು, ಶುಂಭ, ನಿಶುಂಭ, ಚಂಡ, ಮುಂಡ, ಶೂರ್ಪನಖಿ, ತಾಟಕಿ, ಮಾರೀಚ, ನರಕಾಸುರ, ಪೂತನಿ, ಬಕಾಸುರ ಹೀಗೆ ಸಾವಿರಾರು ದಾನವರ ಹೆಸರುಗಳನ್ನು ನಾವು ಕೇಳಿದ್ದೇವೆ. ಇವರನ್ನು ಅಸುರರು ಎಂದೂ ಕರೆಯುವುದಿದೆ.
ಸುರರನ್ನು ವಿರೋಧಿಸುವವರು ಆಸುರರು. ಇದನ್ನೇ ಇನ್ನೂ ಸರಳವಾಗಿ ಹೇಳಬೇಕು ಎಂದರೆ, ಈ ಜಗತ್ತಿಗೆ ಒಂದು ನಿಯಮ ಎಂಬುದಿದೆ, ಒಂದು ಪ್ರಕೃತಿ ಎಂಬುದಿದೆ. ಆ ಪ್ರಕೃತಿಗೆ ಹೊಂದಿ ಕೊಂಡು ಹೋಗುವವರು, ಅದರ ಜತೆಗೆ ನಡೆಯುವವರು ಅಥವಾ ಪ್ರಕೃತಿಯನ್ನು ಸಂರಕ್ಷಿಸು ವವರು ಸುರರು. ಅದಕ್ಕೆ ವಿರುದ್ಧವಾಗಿ ನಡೆಯುವವರು ಅಸುರರು ಅಥವಾ ದಾನವರು.
ಇಲ್ಲಿ ಪ್ರಕೃತಿ ಅಥವಾ ಜಗತ್ತು ಎಂದರೆ ಕೇವಲ ಗಿಡ, ಮರ, ಗುಡ್ಡ, ಬೆಟ್ಟ, ನದಿ, ಸರೋವರ, ಸಮುದ್ರ, ಮಳೆ, ಗಾಳಿ ಇಷ್ಟಕ್ಕೆ ಸೀಮಿತವಾಗಿ ಹೇಳುತ್ತಿಲ್ಲ. ಜೀವಸಂಕುಲ ಹೇಗೆ ಇರಬೇಕು ಎಂಬು ದಕ್ಕೆ ಹಾಕಿಕೊಟ್ಟ ಒಂದು ಚೌಕಟ್ಟು ಪ್ರಕೃತಿ. ಅದೊಂದು ಪಾಲಿಸಬೇಕಾದ ನಿಯಮಗಳ ನಿಘಂಟು. ಹಾಗಾಗಿ ಪ್ರಕೃತಿ ಎಂದರೆ ಒಳ್ಳೆಯತನ.
ಇದನ್ನೂ ಓದಿ: Kiran Upadhyay Column: ಕೊನೆಗೂ ಅವರಿಗೆ ಪದ್ಮಶ್ರೀ ಬರಲಿಲ್ಲ...
ಅದನ್ನು ಪಾಲಿಸಿ, ಪೋಷಿಸಿ ನಡೆಯುವವರು ಸುರರು ಅಥವಾ ಉತ್ತಮರು. ಅದನ್ನು ವಿರೋಧಿಸಿ, ವಿಕೃತಿ ಮೆರೆಯುವವರು ಅಸುರರು, ದಾನವರು ಅಥವಾ ಅಧಮರು ಎಂದು ವರ್ಗೀಕರಿಸ ಲಾಯಿತು. ಆದರೆ ದಾನವರಲ್ಲಿಯೂ ದೈವಭಕ್ತರು ಇದ್ದರು ಎನ್ನುವುದೂ ಅದೇ ಪುರಾಣದ ಕಥೆಗಳಿಂದ ತಿಳಿದು ಬರುತ್ತದೆ.
ಇಂಥ ದಾನವರಲ್ಲಿ ಅನೇಕರು ದೇವತೆಗಳನ್ನು ಜಪಿಸಿಯೋ, ಪ್ರಾರ್ಥಿಸಿಯೋ, ಪೂಜಿಸಿಯೋ ತಮಗೆ ಬೇಕಾದ ವರವನ್ನು ಕೇಳಿಕೊಳ್ಳುತ್ತಿದ್ದರು. ಅದಕ್ಕೆ ದೇವತೆಗಳು ‘ಅಸ್ತು’ ಎಂದೂ ಹೇಳಿದ್ದನ್ನು ನಾವು ನೋಡಿದ್ದೇವೆ. ದಾನವರು ಬೇಡಿಕೊಳ್ಳುತ್ತಿದ್ದ ಬಹುತೇಕ ವರಗಳಲ್ಲಿ, ತಮಗೆ ಸಾವು ಬರದೇ ಇರಲಿ ಎನ್ನುವಂಥದ್ದೇ ಆಗಿರುತ್ತಿತ್ತು.
ದೇವತೆಗಳು ಅಂಥ ವರವನ್ನು ದಯಪಾಲಿಸುತ್ತಿದ್ದರು. ಆದರೆ ಇಂದು ಅಂಥವರ ಪಡೆದ ಒಬ್ಬನೇ ಒಬ್ಬ ದಾನವ ಬದುಕಿ ಉಳಿಯಲಿಲ್ಲ. ಅದರಲ್ಲೂ ಹಿರಣ್ಯಕಶಿಪುವಂತೂ ಎಂಥ ವರ ಬೇಡಿದ್ದ ಎಂದರೆ, ಹಗಲಗಲಿ, ರಾತ್ರಿಯಗಲಿ, ಮನುಷ್ಯನಿಂದಾಗಲಿ, ಪ್ರಾಣಿಯಿಂದಾಗಲಿ, ಮನೆಯ ಒಳಗಾಗಲಿ, ಹೊರಗಾಗಲಿ, ಲೋಹ, ಮರ ಇತ್ಯಾದಿಗಳಿಂದ ತಯಾರಿಸಿದ ಆಯುಧಗಳಿಂದಾಗಲಿ.... ತನಗೆ ಸಾವು ಬರಬಾರದೆಂದು ಕೇಳಿಕೊಂಡಿದ್ದ. ಆದರೂ ಬದುಕಿ ಉಳಿಯಲಿಲ್ಲ.

ನನಗೆ ಎಷ್ಟೋ ಬಾರಿ ದಾನವರ ಕುರಿತು ಪಾಪ... ಎಂದು ಅನ್ನಿಸಿದ್ದಿದೆ. ಏಕೆಂದರೆ ಬಹುತೇಕ ದಾನವರು ತಮಗೆ ಸಾವು ಬರದೇ ಇರಲಿ ಎಂಬ ವರ ಬೇಡಿಕೊಂಡರೇ ವಿನಾ, ತಾವು ಸದಾ ಯೌವನ ದಿಂದ ಇರುವಂತಾಗಲಿ, ಮುಪ್ಪು ಬಾರದಿರಲಿ, ನಮಗೆ ರೋಗ ಬರದೇ ಇರಲಿ, ಸೌಂದರ್ಯ ಹಾಳಾ ಗದೆ ಇರಲಿ ಎಂಬ ವರವನ್ನು ಕೇಳಿಕೊಳ್ಳಲೇ ಇಲ್ಲ. ಇವರನ್ನು ಪಾಪ ಎನ್ನಬೇಕೋ, ದಡ್ಡರು ಎನ್ನಬೇಕೋ ಗೊತ್ತಾಗುವುದಿಲ್ಲ.
ಅಲ್ಲ, ಒಂದು ವೇಳೆ ಸಾವು ಬರದೇ ಹಣ್ಣು ಮುದುಕರಾಗಿ ಹಾಸಿಗೆ ಹಿಡಿದು, ಅಲ್ಲಿಯೇ ಮಲಗಿದ್ದು, ಅಲ್ಲ, ಬಿದ್ದುಕೊಂಡಿದ್ದು ಅಲ್ಲಿಯೇ ಮಲಮೂತ್ರ ವಿಸರ್ಜನೆಯನ್ನೂ ಮಾಡಿಕೊಳ್ಳುವಂತಾದರೆ, ‘ಸಾವು ಬಾರದಿರಲಿ’ ಎಂಬ ವರವಾದರೂ ಯಾವ ಪುರುಷಾರ್ಥಕ್ಕೆ? ತಾನು ಇರುವಷ್ಟು ದಿನ ಚೆನ್ನಾಗಿ ಬದುಕಬೇಕು ಎಂಬ ವರವನ್ನು ಯಾರೂ ಕೇಳಿಕೊಳ್ಳಲಿಲ್ಲ.
ಒಂದು ವೇಳೆ ಅಂಥವರೆಲ್ಲ ಇಂದಿಗೂ ಬದುಕಿದ್ದರೆ ಈ ಜಗತ್ತು ಹೇಗಿರುತ್ತಿತ್ತು? ಅವರನ್ನು ಬಿಡಿ, ‘ಚಿರಂಜೀವಿ’ಗಳು ಎಂದು ಕರೆಸಿಕೊಂಡ ಅಶ್ವತ್ಥಾಮ, ಹನುಮಂತ, ಬಲಿ, ವ್ಯಾಸ, ವಿಭೀಷಣ, ಪರಶುರಾಮ, ಇವರಲ್ಲಿಯೂ ಕೂಡ ಒಬ್ಬರಾದರೂ ಎಲ್ಲಿಯೂ ಕಾಣಿಸಿಕೊಂಡ ಉದಾರಣೆಗಳಿಲ್ಲ. ಅಂಥದ್ದರಲ್ಲಿ ಮನುಷ್ಯ ತಾನು ಹೆಚ್ಚು ದಿನ ಬದುಕಬೇಕು ಎಂದು ಬಯಸುತ್ತಾನೆ.
ಸರಿ, ಅದರಲ್ಲೂ ತಪ್ಪಿಲ್ಲ, ಆಯುಷ್ಯ ಇದ್ದಷ್ಟು ದಿನ ಮನುಷ್ಯ ಬದುಕಲಿ. ಆದರೆ ಬದುಕಿದಷ್ಟು ದಿನ ಹೇಗೆ ಬದುಕಬೇಕು ಎಂಬುದನ್ನೇ ಅರ್ಥಮಾಡಿಕೊಳ್ಳುವುದಿಲ್ಲ. ಎಷ್ಟೋ ಜನರಿಗೆ ತಾವು ಹೀಗೆ ಬದುಕಬೇಕಿತ್ತು ಎಂಬುದು ಅರ್ಥವಾಗುವ ಕಾಲಕ್ಕೆ ಅವರ ಮುಕ್ಕಾಲು ಆಯಸ್ಸು ಕಳೆದು ಹೋಗಿರುತ್ತದೆ. ಮನುಷ್ಯನನ್ನೇ ನೋಡಿ, ಸಣ್ಣವರಾಗಿzಗ ನಾವು ಬೇಗ ಬೆಳೆದು ದೊಡ್ಡವರಾಗಬೇಕು, ಯುವಕರಾಗಬೇಕು, ಆದಷ್ಟು ಬೇಗ ನೌಕರಿ ಸೇರಿಕೊಳ್ಳಬೇಕು, ಉದ್ಯೋಗದಿಂದಲೋ, ಉದ್ಯಮ ದಿಂದಲೋ ಹಣ ಸಂಪಾದಿಸಬೇಕು, ಒಳ್ಳೆಯ ಜೀವನ ನಡೆಸಬೇಕು ಎಂದು ಬಯಸುತ್ತೇವೆ.
ಅಲ್ಲಿಯವರೆಗೆ ತೊಂದರೆ ಇಲ್ಲ. ಆದರೆ ದೇಹಕ್ಕೆ ಸಂಬಂಧಿಸಿದಂತೆ, ಕೂದಲು ಉದುರಬಾರದು, ಗಡ್ಡ ಹಣ್ಣಾಗಬಾರದು, ಮುಖದಲ್ಲಿ ನೆರಿಗೆ ಕಾಣಬಾರದು, ಚರ್ಮ ಸುಕ್ಕುಗಟ್ಟಬಾರದು, ಹೊಟ್ಟೆ ಬರಬಾರದು, ರೋಗ ಹತ್ತಿರ ಸುಳಿಯಬಾರದು ಅಥವಾ ಇನ್ಯಾವುದೋ ತೊಂದರೆ ಬರಬಾರದು ಎಂದೆಲ್ಲ ಬಯಸುತ್ತೇವೆ. ತೊಂದರೆ ಹೆಚ್ಚಾಯಿತು ಅಂದುಕೊಳ್ಳಿ, ‘ಬಾಲ್ಯವೇ ಒಳ್ಳೆಯದಾಗಿತ್ತು’, ‘ಬಾಲ್ಯದ ದಿನಗಳೇ ಅತ್ಯುತ್ತಮ ದಿನಗಳು’ ಎಂದು ಅಲವತ್ತುಕೊಳ್ಳುತ್ತೇವೆ. ಕೆಲವರು ಇನ್ನೂ ಮುಂದಕ್ಕೆ ಹೋಗಿ ವಯಸ್ಸನ್ನು ತಡೆಗಟ್ಟುವ, ಚರ್ಮದಲ್ಲಿ ನೆರಿಗೆ ಕಾಣದಿರುವ, ಸ್ಥೂಲಕಾಯ ಬರದಿರುವ ಮಾತ್ರೆಗಳನ್ನೂ, ಔಷಧಿಗಳನ್ನೂ ತೆಗೆದುಕೊಳ್ಳುತ್ತಾರೆ.
ಈ ಪ್ರವೃತ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ವಯಸ್ಸಾಗುವುದು ಒಂದು ನೈಸರ್ಗಿಕ ಪ್ರಕ್ರಿಯೆ. ನಾವು ಸಮಯದ ವಿರುದ್ಧ ಸೆಣಸಲು ಸಾಧ್ಯವೇ ಇಲ್ಲ. ಬದುಕಿದ 70-80 ವರ್ಷದಲ್ಲಿ 60 ವರ್ಷ ಯುವಕರಾಗಿರಲು ಅಥವಾ 40 ವರ್ಷ ಮಕ್ಕಳಾಗಿರಲು ಸಾಧ್ಯವೇ ಇಲ್ಲ. ನಮ್ಮ ದೇಹದ ರಚನೆಯೇ ಹಾಗಿದೆ. ಮನುಷ್ಯ ಸಾಯದೆ ಇರುವಂಥ ಒಂದು ಔಷಧಿಯನ್ನು ತಯಾರಿಸಲಾಗುತ್ತಿದೆ ಎಂಬು ದನ್ನು ಸುಮಾರು 45 ವರ್ಷಗಳ ಹಿಂದೆ, ನಾನು ಬಾಲ್ಯದಲ್ಲಿ ಇರುವಾಗಲೇ ಕೇಳಿದ್ದೇನೆ.
ಆದರೆ ಆ ಮಾತ್ರೆಯಾಗಲಿ, ಔಷಧಿಯಾಗಲಿ, ಇದುವರೆಗೆ ಮಾರುಕಟ್ಟೆಗೆ ಬರಲಿಲ್ಲ. ಒಂದು ವಿಷಯ ಮನುಷ್ಯನಾದವನಿಗೆ ಸ್ಪಷ್ಟವಾಗಿ ತಿಳಿದಿರಬೇಕು. ಜನನ ಆಕಸ್ಮಿಕವಾದರೂ ಸಾವು ಮಾತ್ರ ಪೂರ್ವ ನಿರ್ಧರಿತ. ಒಬ್ಬ ಮನುಷ್ಯ ಹುಟ್ಟಿದ ಎಂದರೆ ಅದರೊಟ್ಟಿಗೆ ಅವನ ಸಾವೂ ಹುಟ್ಟಿದೆ ಎಂದೇ ಅರ್ಥ. ಅದರ ಸಮಯ ಮಾತ್ರ ನಮಗೆ ತಿಳಿದಿರುವುದಿಲ್ಲ ಅಷ್ಟೇ.
ಅದರೊಂದಿಗೆ ಇನ್ನೂ ಒಂದು ವಿಷಯವನ್ನು ನೆನಪಿಡಬೇಕಾಗುತ್ತದೆ. ಅದೇನೆಂದರೆ, ನಮ್ಮ ದೇಹವನ್ನು ಸೃಷ್ಟಿಸಿದವನು ಒಬ್ಬ ಮಹಾನ್ ಕಲಾವಿದ. ಅವನು ಮನುಷ್ಯನಿಗಿಂತ ಹೆಚ್ಚು ತಿಳಿದ ವಿeನಿಯೂ ಹೌದು, ಕಲಾಕಾರನೂ ಹೌದು. ಆ ಕಲಾಕಾರ ಮನುಷ್ಯನನ್ನಷ್ಟೇ ಅಲ್ಲ, ಗಿಡಮರ ಗಳನ್ನೂ, ಪ್ರಾಣಿ ಪಕ್ಷಿಗಳನ್ನೂ ಅಷ್ಟೇ ಸುಂದರವಾಗಿ ತಯಾರಿಸಿದ್ದಾನೆ.
ಅವನು ಇಲಿಗೆ 60 ವರ್ಷ ಆಯಸ್ಸು ಕೊಡಲಿಲ್ಲ. ನಾಯಿಗೆ 100 ವರ್ಷ ಕೊಡಲಿಲ್ಲ. ಬಲಶಾಲಿ ಎಂಬ ಕಾರಣಕ್ಕೆ ಹುಲಿಗೆ 200 ವರ್ಷ ಎಂದು ಬರೆಯಲಿಲ್ಲ. ಆದರೆ, ಮಾತೇ ಬಾರದ ಅಂಥ ಪ್ರಾಣಿ ಗಳಿಗೂ ತಮಗೆ ಅನಾರೋಗ್ಯವಾದಾಗ ಏನು ಮಾಡಬೇಕು ಎಂಬ ಬುದ್ಧಿಯನ್ನು ಕೊಟ್ಟಿ ದ್ದಾನೆ.
ನಾಯಿ ಎಂದೂ ಹುಲ್ಲು ತಿನ್ನುವುದಿಲ್ಲ. ಆದರೆ ಅದೇ ನಾಯಿ, ಹೊಟ್ಟೆ ಕೆಟ್ಟಾಗ ಮಜ್ಜಿಗೆ ಹುಲ್ಲನ್ನು ಹುಡುಕಿಕೊಂಡು ಹೋಗಿ, ಅದನ್ನು ತಿಂದು ವಾಂತಿ ಮಾಡಿ ತನ್ನ ರೋಗಕ್ಕೆ ಉಪಶಮನ ಕಂಡು ಕೊಳ್ಳುವುದನ್ನು ನಾವು ನೋಡುತ್ತೇವೆ. ಬೆಕ್ಕು ಮಾಂಸಾಹಾರಿ. ಆದರೆ ಆರೋಗ್ಯ ಕೆಟ್ಟಾಗ ಕಪ್ಪು ಮೇನಿಯಾ ಎಂಬ ಗಿಡದ ಎಲೆಯನ್ನು ಹುಡುಕಿಕೊಂಡು ಹೋಗುತ್ತದೆ. ಆ ಎಲೆಯ ಪರಿಮಳವನ್ನು ಅದು ಐವತ್ತು ಅಡಿ ದೂರದಿಂದ ಆಘ್ರಾಣಿಸುವ ಶಕ್ತಿಯನ್ನು ನಿರ್ಮಾತೃ ಕರುಣಿಸಿದ್ದಾನೆ.
ಹೀಗೆ ಪ್ರಾಣಿ-ಪಕ್ಷಿಗಳು ತಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ನೂರಾರು ಔಷಧಿಗಳನ್ನು ತಾವೇ ಮಾಡಿಕೊಳ್ಳುತ್ತವೆ. ಅವೆಲ್ಲ ಪ್ರಕೃತಿದತ್ತವಾದ ಔಷಧಿಗಳೇ ವಿನಾ ಕೃತಕವಾದುದಲ್ಲ. ಆದ್ದರಿಂದಲೇ ಬಹುಶಃ ಪ್ರಾಣಿ-ಪಕ್ಷಿಗಳಿಗೆ ಮನುಷ್ಯನಿಗೆ ಬರುವಂಥ ಮಾರಕ ರೋಗಗಳು ಬಂದ ಉದಾಹರಣೆ ಕಡಿಮೆ. ಕೋವಿಡ್ ಮಹಾಮಾರಿ ಮನುಷ್ಯನನ್ನು ಹೆಚ್ಚು ಬಲಿ ತೆಗೆದುಕೊಂಡಿತೇ ವಿನಾ ಪ್ರಾಣಿ-ಪಕ್ಷಿಗಳನ್ನು ಬಲಿ ತೆಗೆದುಕೊಳ್ಳಲು ಅದಕ್ಕೆ ಸಾಧ್ಯವಾಗಲಿಲ್ಲ.
ಕ್ಯಾನ್ಸರ್ ಬಂದು ಕಾಗೆಯಾಗಲಿ, ಸಕ್ಕರೆ ಕಾಯಿಲೆಯಿಂದ ಸಿಂಹವಾಗಲಿ, ಕೊಬ್ಬು ಹೆಚ್ಚಾಗಿ ಕಾಡು ಎಮ್ಮೆಯಾಗಲಿ ಸತ್ತ ಉದಾಹರಣೆ ಕಾಣುವುದಿಲ್ಲ. ಬಿಡಿ, ಒಂದು ಬೀಜ ಬಿತ್ತಿದರೆ, ರಾತ್ರೋರಾತ್ರಿ ಅದು ಮೊಳಕೆಯೊಡೆದು, ಸಸಿಯಾಗಿ ಬೆಳೆದು, ಮರವಾಗಿ ಮಾರನೆಯ ದಿನವೇ ಹಣ್ಣು ನೀಡಿದ ಉದಾಹರಣೆಯಿಲ್ಲ. ಗಿಡಗಳಿಗೆ ಕೊಡಬಹುದಾದ ಇಂಥ ಒಂದು ಔಷಧವೋ, ಗೊಬ್ಬರವೋ ಇದುವರೆಗೆ ತಯಾರಾಗಲಿಲ್ಲ.
ಗಿಡ-ಮರಗಳು, ಪ್ರಾಣಿ-ಪಕ್ಷಿಗಳು ತಾವಾಗಿಯೇ ಎಂದೂ ಪ್ರಕೃತಿಯ ವಿರುದ್ಧವಾಗಿ ಹೋಗುವುದಿಲ್ಲ. ಇನ್ನು ಬಾಹ್ಯ ಶಕ್ತಿಗಳಿಂದ ತಾತ್ಕಾಲಿಕವಾಗಿ ಏನನ್ನಾದರೂ ಸಾಧಿಸಿದರೆ ಅದು ಶಾಶ್ವತವಾಗುವು ದಿಲ್ಲ. ಔಷಧಿಗಳು ಯಾವತ್ತೂ ತಾತ್ಕಾಲಿಕವೇ ಶಿವಾಯ್ ಶಾಶ್ವತ ಪರಿಹಾರ ಅಲ್ಲ. ಅದರಲ್ಲೂ ಸಾವು ಬರದಂತೆ ತಡೆಯುವುದು ತಾತ್ಕಾಲಿಕವಷ್ಟೇ ಅಲ್ಲ ಅಸ್ವಾಭಾವಿಕವೂ ಹೌದು.
ಮನುಷ್ಯ ಮಾತ್ರ ಏನೇನೋ ಕನಸು ಕಾಣುತ್ತಾನೆ, ಏನನ್ನೋ ಬಯಸುತ್ತಾನೆ. ತಾನು ಹೆಚ್ಚು ಕಾಲ ಬದುಕಬೇಕು, ಸುಂದರವಾಗಿ ಕಾಣಬೇಕು ಎಂದು ಬಯಸುವವ ಅದಕ್ಕೆ ಬೇಕಾದ ವ್ಯಾಯಾಮ ವನ್ನಾಗಲಿ, ಆಹಾರ ಪದ್ಧತಿಯನ್ನಾಗಲಿ ಪಾಲಿಸುವುದಿಲ್ಲ. ಬದಲಾಗಿ, ಮಾತ್ರೆಗಳ, ಔಷಧಿಗಳ ಮೊರೆ ಹೋಗುತ್ತಿzನೆ. ಪರಿಣಾಮವಾಗಿ, ಅಕಾಲದಲ್ಲಿ ಮೃತ್ಯುವನ್ನು ಕಂಡುಕೊಳ್ಳುತ್ತಿದ್ದಾನೆ.
ಇತ್ತೀಚೆಗೆ ತೀರಿಹೋದ ಒಬ್ಬ ಹಿಂದಿ ನಟಿಯ ಉದಾಹರಣೆಯನ್ನು ತೆಗೆದುಕೊಳ್ಳಿ. ಸುಮಾರು ಎರಡು ದಶಕದ ಹಿಂದೆ ಅವಳ ಒಂದು ಹಾಡು ಜನಪ್ರಿಯವಾಗಿತ್ತು. ಅದರ ನಂತರ ಅವಳಿಗೆ ಆ ರೀತಿಯ ಜನಪ್ರಿಯತೆ ಎಂದೂ ಸಿಗಲಿಲ್ಲ. ಆದರೆ ಆ ಜನಪ್ರಿಯತೆ ಅವಳನ್ನು ಯಾವ ಪ್ರಮಾಣದಲ್ಲಿ ತಟ್ಟಿತ್ತು ಎಂದರೆ, ಚಿರಯೌವನದಿಂದ ಇರಬೇಕು ಅಥವಾ ಹಾಗೆ ಕಾಣಿಸಬೇಕು ಎಂಬುದು ಅವಳ ತಲೆಯಲ್ಲಿ ಕುಳಿತಂತಿತ್ತು. ಅದಕ್ಕಾಗಿ ಕಳೆದ ಆರು-ಏಳು ವರ್ಷದಿಂದ ವಿಟಮಿನ್-ಸಿ ಮಾತ್ರೆಗಳನ್ನು ಮತ್ತು ಗ್ಲುಟಾಥಿಯೋನ್‌ನಂಥ ಚಿಕಿತ್ಸೆಯನ್ನೂ ತೆಗೆದುಕೊಳ್ಳುತ್ತಿದ್ದರಂತೆ.
ಅವರ ಸಾವಿಗೆ ಇದೇ ಕಾರಣ ಎಂದು ಇನ್ನೂ ದೃಢಪಟ್ಟಿಲ್ಲವಾದರೂ ನನ್ನ ಪ್ರಶ್ನೆ ಇರುವುದು ಒಂದೇ. ಆ ಕಲಾವಿದೆಯ ಹಾಡು ಜನಪ್ರಿಯವಾದದ್ದಕ್ಕೆ ಕಾರಣ ಅವಳು ಸುಂದರವಾಗಿ ಕಾಣು ತ್ತಿದ್ದದ್ದೇ ಅಥವಾ ಆಕೆ ಮಾಡಿದ ನೃತ್ಯವೇ ಅಥವಾ ಆ ಹಾಡಿನ ರಾಗ ಸಂಯೋಜನೆಯೇ ಅಥವಾ ಅದರ ಚಿತ್ರೀಕರಣವೇ? ಸೌಂದರ್ಯವೇ ಪ್ರಧಾನವಾಗಿದ್ದರೆ, ನಂತರದ ದಿನಗಳಲ್ಲಿ ಅವಳು ಕಾಣಿಸಿ ಕೊಂಡ ನೃತ್ಯ, ಪಾತ್ರ ಎಲ್ಲವೂ ಜನಪ್ರಿಯವಾಗಬೇಕಿತ್ತು. ಹಾಗೆ ಆಗಲಿಲ್ಲ. ಸುಮ್ಮನೆ ಉದಾಹರಣೆ ಗಾಗಿ ಅವಳನ್ನು ಪ್ರಸ್ತಾಪಿಸಿದ್ದೇ ವಿನಾ ಇನ್ನೇನೂ ಇಲ್ಲ.
ಅಷ್ಟೇ ಅಲ್ಲ, ಎಷ್ಟೋ ಜನ ಲೋಕಾರೂಢಿಯಂತೆ ಸುರದ್ರೂಪಿ ಅಲ್ಲದಿದ್ದರೂ, ತಮ್ಮ ಪ್ರತಿಭೆ ಯಿಂದ, ಕಲೆಯಿಂದ, ಅಭಿನಯದಿಂದ ಜನಪ್ರಿಯರಾದವರು ಸಾಕಷ್ಟು ಜನರಿದ್ದಾರೆ. ಅವರ ಹೆಸರು ಶಾಶ್ವತವಾಗಿಯೂ ಇರುತ್ತದೆ. ಫುಟ್ಬಾಲ್ ಆಟಗಾರ ಪೀಲೆಯಾಗಲಿ, ಸಾಡಿಯೋ ಮಾನೆ ಆಗಲಿ, ಸ್ಪುರದ್ರೂಪಿಗಳಲ್ಲ. ಅವರ ಕೀರ್ತಿ ಅವರ ರೂಪದಿಂದಲ್ಲ.
ಗುಕೇಶ್ ಚೆಸ್ ಚಾಂಪಿಯನ್ ಆದದ್ದು ಅವನ ರೂಪದಿಂದಲ್ಲ, ಬುದ್ಧಿಯಿಂದ. ಸಚಿನ್ ತೆಂಡೂ ಲ್ಕರ್ ಶತಕಗಳ ಮೇಲೆ ಶತಕ ಬಾರಿಸಿದ್ದು ಆತ ನೋಡಲು ಚೆಂದ ಇದ್ದಾನೆ ಎಂದಲ್ಲ, ಆತನಲ್ಲಿದ್ದ ಪ್ರತಿಭೆಯಿಂದ, ಆತ ಪಟ್ಟ ಶ್ರಮದಿಂದ. ಅಂದಾಗ, ಸೌಂದರ್ಯ ಎನ್ನುವುದು ಬಾಹ್ಯಕ್ಕಿಂತ ಆಂತರ್ಯದ ಹೆಚ್ಚು ಇರುವಂಥದ್ದು. ಅದಕ್ಕೆ ಸಾಣೆ ಹಿಡಿದು ಆ ಸೌಂದರ್ಯ ಅಥವಾ ಪ್ರತಿಭೆ ಹೊರಬಂದಾಗ ಹೊರಗಿನ ಸೌಂದರ್ಯ ನಗಣ್ಯ.
ಇಂಥ ಎಷ್ಟೋ ಉದಾಹರಣೆಗಳಿದ್ದರೂ ಮನುಷ್ಯನಿಗೆ ಹೊರಗಿನ ಸೌಂದರ್ಯದ ಬಗ್ಗೆಯೇ ಹೆಚ್ಚು ಕಾಳಜಿ. ಮನುಷ್ಯ ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಬಾರದು ಎಂದು ನಾನು ಖಂಡಿತ ಹೇಳುತ್ತಿಲ್ಲ. ತಾನು ಆರೋಗ್ಯವಾಗಿರಲು ಅಥವಾ ತಾನು ಇದ್ದುದ್ದಕ್ಕಿಂತ ಕುರೂಪಿಯಾಗಿ ಕಾಣದಿರಲು ಎಷ್ಟು ಬೇಕೋ ಅಷ್ಟನ್ನು ಮಾಡಿಕೊಳ್ಳುವುದರಲ್ಲಿ ಯಾವ ಅಪರಾಧವೂ ಇಲ್ಲ, ಮಾಡಬೇಕಾದದ್ದೇ.
ಆದರೆ ಅದಕ್ಕೂ ಮೀರಿ ಹೋದಾಗ ಮಾತ್ರ ಸೌಂದರ್ಯವರ್ಧಕದಂಥ ಉದ್ಯಮಗಳು ಜಾಗತಿಕವಾಗಿ 400 ಬಿಲಿಯನ್ ಡಾಲರ್ ಮೌಲ್ಯವನ್ನು ಮೀರುತ್ತವೆ. ಅಷ್ಟೇ ಅಲ್ಲ, ಈ ಉದ್ಯಮ ಪ್ರತಿ ವರ್ಷ ಹತ್ತರಿಂದ ಹದಿನೈದು ಪ್ರತಿಶತ ವೃದ್ಧಿಯೂ ಆಗುತ್ತಿದೆ. ಅಲ್ಲ, ಮುಲಾಮನ್ನು ಮುಖಕ್ಕೋ ಮೈಗೋ ಮೆತ್ತಿಕೊಂಡ ಮಾತ್ರಕ್ಕೆ ಬೆಳ್ಳಗಾಗುವುದಿದ್ದರೆ ಇಂದು ಜಗತ್ತಿನಲ್ಲಿ ಕಪ್ಪು ಬಣ್ಣದ ಒಬ್ಬ ವ್ಯಕ್ತಿಯೂ ಕಾಣುತ್ತಿರಲಿಲ್ಲ.
ಹೋಗಲಿ, ನಮ್ಮ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ ಎಮ್ಮೆಯೂ ಕಪ್ಪಾಗಿಯೇ ಇರುತ್ತಿರಲಿಲ್ಲ. ಅಷ್ಟಾಗಿಯೂ ಮನುಷ್ಯ ಮಾತ್ರ ತಾನು ಬೆಳ್ಳಗಾಗಬೇಕು, ವಯಸ್ಸಾದಂತೆ ಕಾಣಬಾರದು, ತಲೆ ಕೂದಲು ಉದುರಬಾರದು, ಹಲ್ಲು ಬೀಳಬಾರದು ಎಂದು ಔಷದಿಗಳ, ಮಾತ್ರೆಗಳ, ಚಿಕಿತ್ಸೆಯ ಮೊರೆಹೋದಾಗ, ದಾನವರು ವರ ಬೇಡಿದಂತೆಯೇ ಅನಿಸುತ್ತದೆ.
ಈ ಕಾಲದಲ್ಲಿ ವೈದ್ಯನೆಂಬ ಹರಿ ಅದನ್ನು ಪೂರೈಸುತ್ತಾನೆ ಕೂಡ. ಆದರೆ ಮನುಷ್ಯ ಬೇಡಿಕೊಂಡ ತಾತ್ಕಾಲಿಕ ವರದ ಸಂಹಾರಕ್ಕೆ ರೋಗ ಎಂಬ ಉಪಶಮನ ಇನ್ನೊಂದು ದಾರಿಯಲ್ಲಿ ಬಂದು ವಕ್ಕರಿಸುತ್ತದೆ ಎನ್ನುವುದು ಪರಮಸತ್ಯ. ಮನುಷ್ಯ ಸುರನಾಗಲು ಸಾಧ್ಯವಿಲ್ಲ. ಕನಿಷ್ಠಪಕ್ಷ, ಬೇಡದ ವರ ಕೇಳುವ ಅಸುರನಾಗದೇ ನರನಾಗಿಯೇ ಉಳಿದರೂ ಸಾಕು.