ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Naveen Sagar Column: ಎಲ್ಲ ಶಿಲ್ಪಗಳಿಗೂ ಒಂದೊಂದು ಹಿಂದಿನ ಕಥೆಯಿದೆ...

ಇಂಥ ಕಥೆಗಳ ನಡುನಡುವೆ ನನ್ನನ್ನು ಅತ್ಯಂತ ಗಮನ ಸೆಳೆದದ್ದು ಭಾರತದ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ದಿವಗಿಯ ಜೀವನ. ಅನ್‌ಸಂಗ್ ಹೀರೋ, ಎಲೆಮರೆಯ ಕಾಯಿ ಇಂಥ ಪದಗಳಿಗೆ ಹೇಳಿ‌ ಮಾಡಿಸಿದ ವ್ಯಕ್ತಿತ್ವ ಒಂದಿದ್ದರೆ, ಅದು ರಾಘವೇಂದ್ರ ದಿವಗಿ. ಸೋಷಿಯಲ್ ಮೀಡಿಯಾದಲ್ಲಿ ಈತನ ಬಗ್ಗೆ ಕೋಟಿಗಟ್ಟಲೆ ಮಂದಿ ಈಗಾಗಲೇ ಓದಿದ್ದಾರೆ. ಆದರೆ ಅಸಲಿ ಪ್ರಪಂಚದ ಓದುಗರಿಗೆ ಈತನಿನ್ನೂ ಅಜ್ಞಾತ. ಯಾರೂ ನಂಬಲಿಕ್ಕಿಲ್ಲ, ಆದರೆ ಇದು ಸತ್ಯ; ರಾಘವೇಂದ್ರ ದಿವಗಿ ಜಾಗತಿಕ ಕ್ರಿಕೆಟ್ ಲೋಕದ ದಂತಕಥೆ.

Naveen Sagar Column: ಎಲ್ಲ ಶಿಲ್ಪಗಳಿಗೂ ಒಂದೊಂದು ಹಿಂದಿನ ಕಥೆಯಿದೆ...

-

ಪದಸಾಗರ

ಭಾರತದ ಕ್ರಿಕೆಟ್‌ನ ಸುವರ್ಣಯುಗ ಇದು. ಅತ್ತ ರೋಹಿತ್ ಪಡೆ ಟಿ-ಟ್ವೆಂಟಿ ವಿಶ್ವಕಪ್ ಗೆದ್ದು ವಿಕ್ರಮ ಸಾಧಿಸಿದ ಮರುವರ್ಷವೇ ಮಹಿಳಾ ಕ್ರಿಕೆಟಿಗರು ಐಸಿಸಿ ವಿಶ್ವಕಪ್ ಗೆದ್ದು ಇತಿಹಾಸ ಬರೆದಿದ್ದಾರೆ. ಲೀಗ್ ಹಂತದಲ್ಲಿ ಕುಂಟುತ್ತಾ ಸಾಗಿ, ಹಾಗೂ ಹೀಗೂ ನಾಕೌಟ್ ಹಂತ ತಲುಪಿದ್ದ ಭಾರತದ ವನಿತೆಯರು, ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಆಡಿದ್ದು ಮಾತ್ರ ಅಚ್ಚರಿಗೊಳಿಸುವ ಆಟ.

ಸೆಮಿಫೈನಲ್‌ನಲ್ಲಿ ಬಲಾಢ್ಯ ಆಸ್ಟ್ರೇಲಿಯನ್ನರನ್ನು ಮಣಿಸಿದಾಗಲೇ ಹರ್ಮನ್ ಪ್ರೀತ್ ಕೌರ್ ಪಡೆ ಕಪ್ ಮೇಲೆ ಕೈ ಇರಿಸಿ ಆಗಿತ್ತು. ಆ ಗೆಲುವು ಕೊಟ್ಟ ಆತ್ಮವಿಶ್ವಾಸವೇ ಫೈನಲ್ ನಲ್ಲಿ ಆಫ್ರಿಕಾವನ್ನು ಸೋಲಿಸುವ ಶಕ್ತಿ ಕೊಟ್ಟಿದ್ದು. ಒಂದೊಂದು ಪಂದ್ಯದಲ್ಲಿ ಒಬ್ಬೊಬ್ಬರು ಮಿಂಚಿದರು.

ತಂಡದ ಒಳಗೆ ಬರುವ ಅವಕಾಶ ಸಿಕ್ಕವರೆಲ್ಲ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ಇತರ ತಂಡಗಳಿಗೆ ಹೋಲಿಸಿದರೆ ಬೌಲಿಂಗ್ ವಿಭಾಗ ಕೊಂಚ ದುರ್ಬಲ ಎಂಬುದನ್ನು ಒಪ್ಪಲೇ ಬೇಕು. ಆದರೆ ಆ ಬೌಲಿಂಗ್ ಪಡೆಯೇ ಫೈನಲ್ ಪಂದ್ಯವನ್ನು ಗೆಲ್ಲಿಸಿ ಕೊಟ್ಟಿತು. ಹಿಡಿದ ಕೆಲವು ಕ್ಯಾಚ್ ಗಳು ಮತ್ತು ಅತ್ಯುತ್ತಮ ಗ್ರೌಂಡ್ ಫೀಲ್ಡಿಂಗ್, ವಿಜಯ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವು.

ಇದನ್ನೂ ಓದಿ: Naveen Sagar Column: ಇದು ನಾರದ ಮಾಧ್ಯಮವಲ್ಲ..ನಾರುವ ಮಾಧ್ಯಮ !

ಸ್ಮೃತಿ ಮಂಧನಾ, ನಾಯಕಿ ಹರ್ಮನ್ ಪ್ರೀತ್, ದೀಪ್ತಿ ಶರ್ಮ, ಶಫಾಲಿ ವರ್ಮ, ರಿಚಾ ಘೋಷ್, ಅಮನ್ ಜೋಷ್, ಜೆಮಿಮಾ ರೋಡ್ರಿಗಸ್, ಶ್ರೀ ಚರಣಿ, ಪ್ರತಿಯೊಬ್ಬರೂ ಒಂದಲ್ಲ ಒಂದು ಪಂದ್ಯದಲ್ಲಿ ತಮ್ಮ ಛಾಪು ಮೂಡಿಸುವ ಆಟವನ್ನಾಡಿದರು. ಹರ್ಮನ್ ಪ್ರೀತ್ ಕೌರ್ ನಾಯಕತ್ವ ಅತ್ಯುತ್ತಮ ಮಟ್ಟದಲ್ಲಿತ್ತು.

ಪುರುಷರಷ್ಟೇ ಅತ್ಯುತ್ತಮ ಗುಣಮಟ್ಟದ ಕ್ರಿಕೆಟ್ ನಾವಾಡಬಹುವೆಂದು ತೋರಿಸಿದ ವಿಶ್ವಕಪ್ ಇದು. ಕೆಲವು ಬ್ಯಾಟರ್‌ಗಳು ಹೊಡೆದ ಸಿಕ್ಸರ್‌ಗಳಲ್ಲಿ ಚೆಂಡು ತಲುಪಿದ ದೂರ ಪುರುಷರ ಶಾಟ್‌ ಗಳನ್ನ ಸರಿಗಟ್ಟುವಂತಿದ್ದವು. ಫೀಲ್ಡಿಂಗ್ ಕೂಡ ಅದ್ವಿತೀಯ ಎಂಬಂತಿತ್ತು. ಮಹಿಳೆಯರ ಕ್ರಿಕೆಟ್ ಅಂದರೆ ಉದಾಸೀನ ತೋರುತ್ತಿದ್ದ ಕ್ರಿಕೆಟ್ ವೀಕ್ಷಕರು, ಭಾರತೀಯ ಮಹಿಳೆಯರ ಆಟ ನೋಡಲು ಸ್ಟೇಡಿಯಮ್ ಹೌಸ್ ಫುಲ್ ಮಾಡಿದ್ದರು.

ಟಿವಿಗಳಲ್ಲಿ, ಓಟಿಟಿಗಳಲ್ಲಿ ವೀಕ್ಷಣೆ ಸಂಖ್ಯೆ ಕೋಟಿಗಳನ್ನು ಮೀರಿತ್ತು. ಈ ವಿಶ್ವಕಪ್ ಗೆಲುವು ಭಾರತದಲ್ಲಿ ಮಹಿಳಾ ಕ್ರಿಕೆಟ್‌ಗೆ ಬಹುದೊಡ್ಡ ತಿರುವು ಕೊಡಲಿದೆ. ಪುರುಷರ ಐಪಿಎಲ್ ನೋಡಲು ಸೀಮಿತರಾಗಿದ್ದ ಅಸಂಖ್ಯಾತ ಹೆಣ್ಣುಮಕ್ಕಳು ಕ್ರಿಕೆಟ್‌ನತ್ತ ಸೀರಿಯಸ್ಸಾಗಿ ನೋಡಲಿದ್ದಾರೆ, ಆಡುವ ಮನಸು ಮಾಡಲಿದ್ದಾರೆ.

Divagi

ಚಾಂಪಿಯನ್ ಪಡೆಗೆ ಅಭಿನಂದನೆಗಳು. ನಾನು ಬರೆಯಲು ಹೊರಟದ್ದು ಅಭಿನಂದನಾ ಲೇಖನ ವಲ್ಲ. ಆದರೆ ಅಭಿನಂದನೆ ಸಲ್ಲಿಸದೇ ಬರಹ ಆರಂಭಿಸಲು ಸಾಧ್ಯವಾಗಲಿಲ್ಲ. ಅಂದಹಾಗೆ, ಮೊದಲು ಹೀಗಿರಲಿಲ್ಲ. ಪ್ರತಿ ಆಟಗಾರನ ಹಿಂದಿನ ಕರುಳು ಹಿಂಡುವ ಕಥೆಗಳು ಈ ಪರಿ ಹುಟ್ಟಿ ಕೊಳ್ಳುತ್ತಿರಲಿಲ್ಲ. ಸೋಷಿಯಲ್ ಮೀಡಿಯಾ ಬಂದದ್ದೇ ಬಂದದ್ದು, ಎಲ್ಲದರ ವೈಭವೀಕರಣ ವಾಗುತ್ತಿದೆ.

ಒಬ್ಬ ಆಟಗಾರ ಆಯ್ಕೆಯಾದರೆ, ಅದ್ಭುತ ಪ್ರದರ್ಶನ ನೀಡಿದರೆ, ಏನಾದರೊಂದು ಆದರೆ, ಕೂಡಲೇ ಅವನ ಬಾಲ್ಯದ ಕರುಣಾಜನಕ ಕಥೆ ಹರಿಬಿಡಲಾಗುತ್ತದೆ. ಈಗಲೇ ಅವನ ಬಯೋಪಿಕ್ ಆಗಿ ಬಿಡುವ ರೇಂಜ್‌ಗೆ ಸೀನ್‌ಗಳನ್ನು ಬರೆಯಲಾಗುತ್ತದೆ. ಅಷ್ಟು ಅನ್ಯಾಯವಾಗಿತ್ತು, ಇಷ್ಟು ಅವಮಾನ ವಾಗಿತ್ತು, ತಿನ್ನೋಕೆ ಗತಿ ಇರ್ಲಿಲ್ಲ, ಮಲಗೋಕೆ ಮನೆ ಇರ್ಲಿಲ್ಲ ಅಂತೆಲ್ಲ ಕಣ್ಣೀರಕಥೆ ಬರೆದು, ಅವನ ಆಟಕ್ಕಿಂತ ವೈಯಕ್ತಿಕ ಬದುಕಿನ ಕಥೆ ಹೇಳಿ ಇಮೇಜ್ ಬಿಲ್ಡ್ ಮಾಡಲಾಗುತ್ತಿದೆ.

ಅರೆ, ಪ್ರತಿಯೊಬ್ಬರೂ ಸಾಧನೆ ಹಾದಿಯಲ್ಲಿ ಕಷ್ಟ ಸವೆಸಿಯೇ ಬಂದಿರುತ್ತಾರೆ. ಯಾರಿಗೂ ರೆಡ್ ಕಾರ್ಪೆಟ್ ಸ್ವಾಗತ ದಕ್ಕಿರುವುದಿಲ್ಲ. ಅವರವರ ಕಷ್ಟ ಅವರವರದ್ದು. ಎಲ್ಲ ಫೀಲ್ಡ್ ಗಳಲ್ಲೂ ಸಾಕಷ್ಟು ಹೋರಾಟ, ಒದ್ದಾಟ ಮಾಡಿಕೊಂಡೇ ಮೇಲೆ ಬರಬೇಕಾಗುತ್ತದೆ. ಅಲ್ಲಿ ಇಲ್ಲಿ ಒಂದೊಂದು ಅದೃಷ್ಟದ ಕೂಸು, ನೆಪೋಟಿಸಂ ಶಿಶುಗಳು ಸಿಕ್ಕಬಹುದು.

ಸುನಿಲ್ ಜೋಷಿ ಪ್ರತಿದಿನ ನಲವತ್ತು ನಲವತ್ತು ಕಿಲೋ ಮೀಟರ್ ‘ಅಪ್ ಆಂಡ್ ಡೌನ್’ ಮಾಡಿ, ಹುಬ್ಬಳ್ಳಿಯಲ್ಲಿ ಪ್ರಾಕ್ಟಿಸ್ ಮಾಡಿ ಹೋಗುತ್ತಿದ್ದರಂತೆ ಅಂತ ಆ ಕಾಲದಲ್ಲಿ ಕಥೆ ಕೇಳಿದಾಗ, ‘ಅಬ್ಬಾ ಎಷ್ಟು ಕಷ್ಟಪಟ್ಟಿದ್ದಾರೆ’ ಅನಿಸಿತ್ತು. ಅವರು ಕರ್ನಾಟಕ ಟೀಮಲ್ಲಿ ಅಷ್ಟೊಂದು ಅದ್ಭುತ ಆಟ ಆಡುತ್ತಿದ್ದಾಗ, ಇದರ ಪ್ರಸ್ತಾಪ ಇರಲೇ ಇಲ್ಲ. ಭಾರತ ತಂಡಕ್ಕೆ ಆಯ್ಕೆಯಾದಾಗ ಕಥೆಗೆ ಪ್ರಾಮುಖ್ಯ ಬಂದುಬಿಟ್ಟಿತು.

ನರೇಂದ್ರ ಹಿರ್ವಾನಿ ಎಂಬಾತ ಮೊದಲ ಪಂದ್ಯದ ಹದಿನಾರು ವಿಕೆಟ್ ಕಬಳಿಸಿದಾಗ, ಬೌಲಿಂಗ್‌ ಗಿಂತ ಜಾಸ್ತಿ ಚರ್ಚೆಯಾಗಿದ್ದು, ಮಧ್ಯಪ್ರದೇಶದಲ್ಲಿ ಇಟ್ಟಿಗೆ ಮಾಡುವವನ ಮಗ ಆಗಿ ಇಂಥ ಸಾಧನೆ ಮಾಡಿದ್ದಾನೆ ಅಂತ. ಯಶಸ್ವಿ ಜೈಸ್ವಾಲ್ ಕ್ರಿಕೆಟ್ ನಲ್ಲಿ ಹೆಸರು ಮಾಡ್ತಾ ಇದ್ದ ಹಾಗೇ, ‘ಪಾನಿಪುರಿ ಮಾಡುವ ಹುಡುಗ’ ಅಂತ ಕಥೆ ಮುನ್ನೆಲೆಗೆ ಬಂತು.

ಇತ್ತೀಚಿನ ದಿನಗಳಲ್ಲಿ, ವೈಭವೀಕರಣಕ್ಕಾಗಿ, ಕರುಣಾಜನಕ ಕಥೆಗಾಗಿ ಜಗತ್ತು ಕಾಯುತ್ತಾ ಇರುತ್ತದೇನೋ! ಅಂಥ ಕಥೆಗಳಿಗೆ ಎಂದೆಂದಿಗೂ ಮಾರ್ಕೆಟ್ ಇದೆ ಎಂಬುದನ್ನು ಬರಹಗಾರರು ಕಂಡುಕೊಂಡಿದ್ದಾರೆ, ಓದುಗರೂ ‘ಹೌದು’ ಎಂದು ಪ್ರೂವ್ ಮಾಡುತ್ತಲೇ ಇದ್ದಾರೆ.

ಇದೀಗ ಮಹಿಳಾ ವಿಶ್ವಕಪ್ ಗೆಲುವಿನ ಬೆನ್ನ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮ, ಶಫಾಲಿ ವರ್ಮ, ಸ್ಮೃತಿ ಮಂಧಾನ ಎಲ್ಲರದ್ದೂ ಅನ್‌ಟೋಲ್ಡ್ ಸ್ಟೋರಿಗಳು ಒಂದಾದ ಮೇಲೊಂದು ಬರಲಾರಂಭಿ ಸಿವೆ. ಆಟ ಹಿನ್ನೆಲೆಗೆ ಸರಿದು, ಅವರ ಬದುಕಿನ ಕಥೆಗಳು ಮಹತ್ವ ಪಡೆದುಕೊಳ್ಳುತ್ತಿವೆ. ‘ಇದು ತಪ್ಪು/ಸರಿ’ ಎಂದು ಚರ್ಚಿಸುವುದಕ್ಕಿಂತ ಟ್ರೆಂಡ್‌ಗಳನ್ನು ಅಧ್ಯಯನವೆಂಬಂತೆ ಗಮನಿಸುವುದು ಸೂಕ್ತ.

ಇಂಥ ಕಥೆಗಳ ನಡುನಡುವೆ ನನ್ನನ್ನು ಅತ್ಯಂತ ಗಮನ ಸೆಳೆದದ್ದು ಭಾರತದ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ದಿವಗಿಯ ಜೀವನ. ಅನ್‌ಸಂಗ್ ಹೀರೋ, ಎಲೆಮರೆಯ ಕಾಯಿ ಇಂಥ ಪದಗಳಿಗೆ ಹೇಳಿ‌ ಮಾಡಿಸಿದ ವ್ಯಕ್ತಿತ್ವ ಒಂದಿದ್ದರೆ, ಅದು ರಾಘವೇಂದ್ರ ದಿವಗಿ. ಸೋಷಿಯಲ್ ಮೀಡಿಯಾದಲ್ಲಿ ಈತನ ಬಗ್ಗೆ ಕೋಟಿಗಟ್ಟಲೆ ಮಂದಿ ಈಗಾಗಲೇ ಓದಿದ್ದಾರೆ. ಆದರೆ ಅಸಲಿ ಪ್ರಪಂಚದ ಓದುಗರಿಗೆ ಈತನಿನ್ನೂ ಅಜ್ಞಾತ. ಯಾರೂ ನಂಬಲಿಕ್ಕಿಲ್ಲ, ಆದರೆ ಇದು ಸತ್ಯ; ರಾಘವೇಂದ್ರ ದಿವಗಿ ಜಾಗತಿಕ ಕ್ರಿಕೆಟ್ ಲೋಕದ ದಂತಕಥೆ.

ಕೊಹ್ಲಿ-ಸಚಿನ್‌ರಂತೆ ಬ್ಯಾಟ್ ಹಿಡಿದು ದಾಖಲೆ ಬರೆದಿಲ್ಲ. ಕಪಿಲ್-ಕುಂಬ್ಳೆಯಂತೆ ಹೆಚ್ಚು ವಿಕೆಟ್ ತೆಗೆದವರ ಪಟ್ಟಿಯಲ್ಲಿಲ್ಲ. ಫೀಲ್ಡಿಂಗ್, ಕೀಪಿಂಗ್ ಇದ್ಯಾವುದರಲ್ಲೂ ಈತನ ಹೆಸರು ಕೇಳಿಲ್ಲ. ಕಡೇಪಕ್ಷ ಬೌಲಿಂಗ್ ಕೋಚ್, ಬ್ಯಾಟಿಂಗ್ ಕೋಚ್ ಥರದ ಪಾತ್ರವೂ ಇವನದಲ್ಲ. ಹಾಗಾದರೆ ಯಾರಿವನು? ಕ್ರಿಕೆಟ್ ಜಗತ್ತು ಯಾಕೆ ಈತನನ್ನು ಈ ಪರಿ ಗೌರವಿಸುತ್ತಿದೆ? ಭಾರತ ತಂಡದ ದಿಗ್ಗಜರು ಯಾಕೆ ರಾಘವೇಂದ್ರ ದಿವಗಿಯನ್ನು ಅಷ್ಟೊಂದು ಎತ್ತರದಲ್ಲಿಟ್ಟು ನೋಡುತ್ತಿದ್ದಾರೆ? ಏನಿವನ ಕಥೆ? ಥ್ರೋಡೌನ್ ಸ್ಪೆಷಲಿಸ್ಟ್ ಅಂದ್ರೆ ಏನು ಗೊತ್ತಾ? ಕ್ರಿಕೆಟ್ ನಲ್ಲಿ ಬ್ಯಾಟರ್‌ಗಳು ಅಭ್ಯಾಸ ನಡೆಸುವಾಗ ಅವರಿಗೆ ಬೌಲಿಂಗ್ ಮಾಡುವುದು. ಒಂದು ಕಾಲದಲ್ಲಿ ನೆಟ್ ಬೌಲರ್ಸ್ ಅಂತ ಇರುತ್ತಿದ್ದರು.

ಸಿನಿಮಾ ಗಾಯನದಲ್ಲಿ ಟ್ರ್ಯಾಕ್ ಸಿಂಗರ್ ಇರುವ ಹಾಗೆ, ಕ್ರಿಕೆಟ್‌ನಲ್ಲಿ ನೆಟ್ ಬೌಲರ್ಸ್. ಅವರಿಗೆಂದೂ ಪಂದ್ಯ ಆಡುವ ಅವಕಾಶ ಸಿಗುವುದಿಲ್ಲ. ನೆಟ್ ಬೌಲಿಂಗ್‌ನಲ್ಲಿ ಒಂದು ವೇಳೆ ಗಮನ ಸೆಳೆದರೆ ಅದೃಷ್ಟವೂ ಸೇರಿಕೊಂಡರೆ, ಅವರು ಭಾರತ ತಂಡಕ್ಕೋ, ರಾಜ್ಯ ತಂಡಕ್ಕೋ ಸೇರ್ಪಡೆ ಯಾಗುತ್ತಿದ್ದರು. ಅಂಥ ಕೆಲವು ಉದಾಹರಣೆಗಳು ಇವೆ.

ಆ ನಂತರ, ನೆಟ್ ಬೌಲರ್‌ಗಳ ಬೌಲಿಂಗ್‌ನಲ್ಲಿ ಗುಣಮಟ್ಟ ಇರುವುದಿಲ್ಲ, ಸ್ಪೀಡ್ ಇರೋದಿಲ್ಲ, ಅಂತಾರಾಷ್ಟ್ರೀಯ ವೇಗಿಗಳ ಚೆಂಡು ಎದುರಿಸೋದು ಅಭ್ಯಾಸ ಆಗಬೇಕು ಅಂದ್ರೆ, ಅದೇ ವೇಗದ ಚೆಂಡುಗಳು ಬೇಕು ಅಂತಾಯ್ತು. ಹೀಗಾಗಿ ಬೌಲಿಂಗ್ ಮಷಿನ್‌ಗಳು ಬಂದವು. ಆದರೆ ಬೌಲಿಂಗ್ ಮಷಿನ್ ಅನ್ನೂ ಮೀರಿಸುವ ಒಬ್ಬ ವೇಗಿಯನ್ನು ಭಗವಂತ ಸೃಷ್ಟಿಸಿ ಕಳಿಸಿದ್ದ. ಅವನೇ ರಾಘವೇಂದ್ರ ದಿವಗಿ, ಕಳೆದ 12 ವರ್ಷಗಳಿಂದ ಈತ ನೆಟ್‌ನಲ್ಲಿ ಪ್ರಖ್ಯಾತ ಬ್ಯಾಟರ್‌ಗಳತ್ತ ಲಕ್ಷಲಕ್ಷ ಬಾರಿ ಚೆಂಡೆಸೆದಿದ್ದಾನೆ.

ಕೈ ಸೋಲುವ ತನಕ, ಕೈ ಸೋತರೂ ನಿಲ್ಲಿಸದೇ ಥ್ರೋ ಮಾಡಿದ್ದಾನೆ. ನೂರೈವತ್ತು ಕಿಲೋಮೀಟರ್ ವೇಗದಲ್ಲಿ ಸ್ವಿಂಗ್, ಪೇಸ್, ಬೌನ್ಸ್ ಹೀಗೆ ವಿಧವಿಧವಾಗಿ ಎಸೆದು ಬ್ಯಾಟರ್‌ಗಳನ್ನು ಕಕ್ಕಾಬಿಕ್ಕಿ ಯಾಗಿಸಿದ್ದಾನೆ. ಆದರೆ ಅವನ ಉದ್ದೇಶ ಬ್ಯಾಟರ್ ಗಳನ್ನು ಕಂಗೆಡಿಸುವುದಲ್ಲ, ಆ ವೇಗಕ್ಕೆ, ಆ ವೆರೈಟಿಗೆ ಅವರನ್ನು ರೆಡಿ ಮಾಡುವುದು ಅವನ ಗುರಿ. ಕೊಹ್ಲಿ, ರೋಹಿತ್, ತಿಲಕ್ ವರ್ಮ, ಸೂರ್ಯ ಕುಮಾರ್, ಗಿಲ್ ಹೀಗೆ ಭಾರತದ ಬ್ಯಾಟರ್‌ಗಳೆಲ್ಲ, ಇಂದು ವಿಶ್ವಮಟ್ಟದ ವೇಗಿಗಳನ್ನು ಲೀಲಾಜಾಲ ವಾಗಿ ಎದುರಿಸಿ ಆಡ್ತಾ ಇದ್ದಾರೆ, ಪರದೇಶದ ವೇಗದ ಪಿಚ್‌ಗಳಲ್ಲೂ ಯಶಸ್ಸು ಕಾಣ್ತಾ ಇದ್ದಾರೆ ಅಂದ್ರೆ, ರಾಘವೇಂದ್ರ ದಿವಗಿಯ ಥ್ರೋಡೌನ್ ಕಾರಣ.

ಲಸಿತ್ ಮಲಿಂಗನ ಥರ ಅಡ್ಡಗೈ ಮಾಡಿ ಈತ ಎಸೆಯುವ ಎಸೆತಗಳು ಬ್ರೆಟ್ ಲೀ, ಶೋಯಬ್ ಅಖ್ತರ್ ಎಸೆತಗಳನ್ನು ಮೀರಿಸುತ್ತವೆ. ಇಷ್ಟಕ್ಕೂ ಈತ ಚೆಂಡು ಎಸೆಯುವುದು ಬರಿಗೈಯ್ಯಲ್ಲಲ್ಲ, ಅದಕ್ಕೆಂದೇ ಒಂದು ಸಾಧನವಿದೆ. ಅದರಲ್ಲಿ ಚೆಂಡಿಟ್ಟು ವೇಗವಾಗಿ ಒಗೆಯುವುದಷ್ಟೇ ರಾಘು ಕೆಲಸ. ವರ್ಲ್ಡ್ ಕ್ರಿಕೆಟ್‌ನಲ್ಲಿ ರಘು ರಘು ಅಂತ ಕರೆಸಿಕೊಳ್ಳುವ ರಾಘವೇಂದ್ರ ದಿವಗಿ, ನಮ್ಮ ಕರ್ನಾಟಕದ ಕುಮಟಾ ಹುಡುಗ. ‌

ಶಿಕ್ಷಕರಾಗಿದ್ದ ಅಪ್ಪನ ಆಸೆಗೆ ವಿರುದ್ಧವಾಗಿ ಕ್ರಿಕೆಟಿಗನಾಗಲು ಮನೆ ಬಿಟ್ಟು ಬಂದವ. ಕೈಲಿ ಇಪ್ಪತ್ತು ರುಪಾಯಿ ಇಟ್ಟುಕೊಂಡು ಹುಬ್ಬಳ್ಳಿಗೆ ಹೋದವನಿಗೆ ನಿಜವಾದ ಸವಾಲು ಎದುರಾಗುತ್ತದೆ. ಇರಲು ಮನೆಯಿಲ್ಲದೆ, ದೇವಸ್ಥಾನಗಳ ಕಟ್ಟೆ, ಆಸ್ಪತ್ರೆ ಮೆಟ್ಟಿಲು, ಬಸ್ ಸ್ಟ್ಯಾಂಡು ಹೀಗೆ ಎಲ್ಲೋ ಮಲಗು‌ ತ್ತಾನೆ. ಕೊನೆಗೆ ಸ್ಮಶಾನವೊಂದರಲ್ಲಿ ಕಾಯಂ ನಿವಾಸಿಯಾಗುತ್ತಾನೆ.

ಕ್ರಿಕೆಟ್ ಕೈ ಹಿಡೀತು ಅನ್ನೋ ಹೊತ್ತಿಗೆ ಕೈಮುರಿದುಕೊಳ್ಳುತ್ತಾನೆ. ಇನ್ನು ಆಡಲಾರೆ ಆದರೆ ಕ್ರಿಕೆಟ್ ಬಿಟ್ಟಿರಲಾರೆ ಎಂಬ ಸ್ಥಿತಿ. ಹೀಗಿರುವಾಗ, ಥ್ರೋಡೌನ್ ಕಲೆ ಕೈಹಿಡಿಯುತ್ತದೆ. ರಾಜ್ಯ ತಂಡಕ್ಕೆ ಥ್ರೋಡೌನ್ ಬೌಲರ್ ಆಗುವ ಅವಕಾಶ ಸಿಗುತ್ತದೆ. ತಿಲಕ್ ನಾಯ್ಡು, ಜಾವಗಲ್ ಶ್ರೀನಾಥ್ ಮೂಲಕ ಆಶಾಭಾವ ಮೂಡುತ್ತದೆ.

ಹಣವಿಲ್ಲದೆಯೂ, ಊಟ ತಿಂಡಿಯಿಲ್ಲದೆಯೂ ನಗುನಗುತ್ತಾ ಆಟದ ಸುಖ ಕಾಣತೊಡಗುವ ಈತನ ಬದುಕಿಗೆ ಸಚಿನ್ ತೆಂಡೂಲ್ಕರ್ ತಿರುವು ಕೊಡುತ್ತಾರೆ. ಭಾರತ ತಂಡಕ್ಕೆ ಇಂಥ ಥ್ರೋಡೌನ್ ಸ್ಪೆಷಲಿಸ್ಟ್ ಅಗತ್ಯವಿದೆ ಎಂದು ತಂಡಕ್ಕೆ ಸೇರಿಸುತ್ತಾರೆ.

ತೀರಾ ಸೀದಾ‌ ಸಾದಾ ಹೇರ್ ಸ್ಟೈಲ್, ಹಣೆಯಂದು ಕುಂಕುಮ, ಪೌರೋಹಿತ್ಯಕ್ಕೆ ಹೊರಟವನಂತೆ ಕಾಣುವ ರಾಘು, ಭಾರತದ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗ, ಬೆನ್ನೆಲುಬು ಅಂದ್ರೆ ಯಾರೂ ನಂಬುವುದಿಲ್ಲ. ಅದೊಮ್ಮೆ ಕ್ರಿಕೆಟ್ ತಂಡದ ಬಸ್ ಏರಲು ಹೊರಟಿದ್ದ ಇವನನ್ನು ಸೆಕ್ಯುರಿಟಿ ಸಿಬ್ಬಂದಿ ತಡೆದು ನಿಲ್ಲಿಸಿದ್ದರು. ಅದನ್ನೂ ನಗುನಗುತ್ತಲೇ‌ ಸ್ವೀಕರಿಸಿದ್ದ ರಾಘು, ತನ್ನ ವಿನಯ ವಿಧೇಯತೆಯಿಂದ, ಶಿಸ್ತು ಪಾಲನೆಯಿಂದ, ಅದಮ್ಯ ಆಸಕ್ತಿಯಿಂದ ತಂಡದ ಮನ ಗೆದ್ದವನು.

ಬುಮ್ರಾನಂಥ ಬೌಲರ್ ತಲೆ ಬಾಗಿ ನಮಿಸುತ್ತಾನೆ, ತಿಲಕ್ ವರ್ಮ ಕಾಲು ಮುಟ್ಟಿ ನಮಸ್ಕರಿಸುತ್ತಾನೆ, ಕೊಹ್ಲಿ ತನ್ನ ಯಶಸ್ಸಿನ ಕ್ರೆಡಿಟ್‌ನಲ್ಲಿ ರಾಘುವಿಗೆ ಸಿಂಹಪಾಲು ನೀಡುತ್ತಾನೆ. ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ರವಿಶಾಸ್ತ್ರಿ, ಗಾವಸ್ಕರ್ ಇವರೆಲ್ಲ ರಾಘು ಬಗ್ಗೆ ಸಂದರ್ಭ ಬಂದಾಗಲೆಲ್ಲ ಮಾತಾಡಿ ಹೊಗಳುತ್ತಾರೆ. ವಿದೇಶಿ ತಂಡಗಳು, ಕೋಟ್ಯಂತರ ರುಪಾಯಿಯ ಆಫರ್ ಎದುರಿಟ್ಟು ‘ನಮ್ಮ ಟೀಮ್‌ಗೆ ಬನ್ನಿ’ ಎನ್ನುತ್ತವೆ.

ಕೆ.ಎಲ್.ರಾಹುಲ್ ತಾನು ಹಾಕಿದ್ದ ಚಾಂಪಿಯನ್ ಬ್ಲೇಜರನ್ನು ರಾಘುವಿಗೆ ಕೊಟ್ಟು ಗೌರವಿಸುತ್ತಾನೆ. ಇಂದಿಗೆ ರಾಘವೇಂದ್ರ ದಿವಗಿ, ಭಾರತದ ಕೋಚ್‌ಗೆ ಸರಿಸಮ. ಆದರೆ ಇರುವುದು ಮಾತ್ರ ಅಂದಿನಿಂದ ಇಂದಿನ ತನಕ ಅದೇ ರೀತಿ. ಕುಂಕುಮ ಹಚ್ಚಿದ ಸಪಾಟು ತಲೆಯ ಮುಗ್ಧಮುಖದ ರಾಘುವೇ! ಹದಿಮೂರು ವರ್ಷದಿಂದ ಅದೆಷ್ಟು ಚೆಂಡೆಸೆದಿದೆಯೋ ಆ ಕೈ. ಸ್ಪರ್ಧಾತ್ಮಕ ಪಂದ್ಯದಲ್ಲಿ ಅಷ್ಟು ಎಸೆತ ಎಸೆದಿದ್ದರೆ ಎಷ್ಟು ವಿಕೆಟ್ ಉರುಳಿರುತ್ತಿತ್ತೋ!

ಯಾವ ಫಲಾಪೇಕ್ಷೆ ಇಲ್ಲದೆ ರಾಘವೇಂದ್ರ ಚೆಂಡೆಸೆಯುತ್ತಲೇ ಇದ್ದಾನೆ. ಆ ತೋಳುಗಳಲ್ಲಿ, ಮುಂಗೈ ಯಲ್ಲಿ ದೇವರು ಅದ್ಯಾವ ಶಕ್ತಿ ತುಂಬುತ್ತಿದ್ದಾನೋ, ಎಂಥೆಂಥ ಬೌಲರ್‌ಗಳು ಇಂಜುರಿಯಾಗುತ್ತಾರೆ, ರೆಸ್ಟ್ ಕೇಳುತ್ತಾರೆ. ಆದರೆ ರಾಘು ಮಾತ್ರ ನೆಟ್‌ನಲ್ಲಿ ದಣಿವೆಂಬ ಮಾತೇ ಇಲ್ಲದೆ ಚೆಂಡೆಸೆಯುತ್ತಲೇ ಇದ್ದಾನೆ. ‌

ಈತನಿಗೆ ಮ್ಯಾನ್ ಆಫ್ ದ ಮ್ಯಾಚ್, ಸೀರೀಸ್, ಬೆ ಬೌಲರ್ ಇದ್ಯಾವ ಅವಾರ್ಡೂ ಬರುವುದಿಲ್ಲ. ಸರಕಾರವೂ ದ್ರೋಣಾಚಾರ್ಯ, ಅರ್ಜುನ ಇನ್ನಿತರ ಅವಾರ್ಡ್ ಕೊಡುವುದಿಲ್ಲ. ಆದರೆ ಆಟಗಾರರು ತಾವು ಗೆದ್ದ ಪ್ರಶಸ್ತಿಯನ್ನು ರಾಘು ಕೈಗಿತ್ತು ಸಂಭ್ರಮಿಸುತ್ತಾರೆ. ‘ಇದು ಸಾಧ್ಯವಾಗಿದ್ದು ನಿನ್ನಿಂದಲೇ’ ಎನ್ನುತ್ತಾರೆ. ರಾಘು ಧನ್ಯನಾಗುತ್ತಾನೆ. ಈತನ ಬದುಕು ನಿಜಕ್ಕೂ ಒಂದು ಎಮೋಷನಲ್ ಸಿನಿಮಾದ ಸರಕು ಅಲ್ಲವೇ?