ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr Sadhanashree Column: ಓಜಸ್ವೀ ಭವ- ಜೀವನದ ಪರಮ ಸಂಪತ್ತು

ಆಯುರ್ವೇದದ ಪ್ರಕಾರ, ನಾವು ಸೇವಿಸುವ ಆಹಾರವು ಕ್ರಮೇಣ ರಸ, ರಕ್ತ, ಮಾಂಸ, ಮೇದ, ಅಸ್ಥಿ, ಮಜ್ಜಾ ಮತ್ತು ಶುಕ್ರ ಎಂಬ ಏಳು ಧಾತುಗಳಾಗಿ ಪರಿವರ್ತನೆಗೊಳ್ಳುತ್ತದೆ. ಈ ಧಾತುಗಳ ಸಮರ್ಪಕ ಪೋಷಣೆಯ ನಂತರ ಕೊನೆಯಲ್ಲಿ ಉತ್ಪತ್ತಿಯಾಗುವ ಸೂಕ್ಷ್ಮ ಸಾರವೇ ಓಜಸ್. ಇದು ದೇಹದ ಪ್ರತಿ ಯೊಂದು ಅಂಗಕ್ಕೂ ಜೀವಶಕ್ತಿಯನ್ನು ನೀಡುತ್ತದೆ. ಹೃದಯದಲ್ಲಿ ನೆಲೆಸಿರುವ ಈ ಓಜಸ್ ದೇಹದ ಸಂಪೂರ್ಣ ಕಾರ್ಯಚಟುವಟಿಕೆಯನ್ನು ನಿಯಂತ್ರಿಸುತ್ತದೆ.

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ಒಂದು ಸಣ್ಣ ಹಳ್ಳಿಯಲ್ಲಿ ವಾಸಿಸುತ್ತಿದ್ದ ಅರ್ಜುನ್ ಎಂಬ ಬಾಲಕನ ಮನಸ್ಸು ದೊಡ್ಡ ಕನಸು ಗಳಿಂದ ತುಂಬಿತ್ತು. ಅವನು ಜೀವನದಲ್ಲಿ ಐಶ್ವರ್ಯ, ಯಶಸ್ಸು ಮತ್ತು ಖ್ಯಾತಿ ಎಲ್ಲವನ್ನೂ ಪಡೆಯ ಬೇಕೆಂದು ಬಯಸುತ್ತಿದ್ದ. ಒಂದು ದಿನ ಅವನು ಹಳ್ಳಿಯ ಜ್ಞಾನಸಂಪನ್ನ ವೃದ್ಧರನ್ನು ಭೇಟಿಯಾಗಿ, ನನ್ನ ಜೀವನದಲ್ಲಿ ಎಲ್ಲವೂ ಸಿಗುವಂತೆ ಆಶೀರ್ವಾದ ಮಾಡಿ ಎಂದು ವಿನಂತಿಸಿದ. ವೃದ್ಧರು ಮೃದು ವಾಗಿ ನಗುತ್ತ, ಅವನ ತಲೆಯ ಮೇಲೆ ಕೈ ಇಟ್ಟು ಕೇವಲ ಎರಡು ಪದಗಳನ್ನು ಉಚ್ಚರಿಸಿದರು- ‘ಓಜಸ್ವೀ ಭವ.’

ಆ ಕ್ಷಣದಲ್ಲಿ ಅರ್ಜುನ್‌ಗೆ ಸ್ವಲ್ಪ ನಿರಾಶೆ ಆಯಿತು. ಅವನು ನಿರೀಕ್ಷಿಸಿದ್ದದ್ದು ಧನ, ಯಶಸ್ಸು ಅಥವಾ ಖ್ಯಾತಿಗೆ ಸಂಬಂಧಿಸಿದ ಆಶೀರ್ವಾದ. ಆದರೆ ದಿನಗಳು ಕಳೆಯುತ್ತಿದ್ದಂತೆ, ಅವನೊಳಗೆ ಒಂದು ಸೂಕ್ಷ್ಮವಾದ ಬದಲಾವಣೆ ಪ್ರಾರಂಭವಾಯಿತು. ದೇಹದಲ್ಲಿ ಚೈತನ್ಯ ಹೆಚ್ಚಿತು, ಮನಸ್ಸಿನಲ್ಲಿ ಶಾಂತಿ ನೆಲಸಿತು, ಚಿಂತನೆಗಳಲ್ಲಿ ಸ್ಪಷ್ಟತೆ ಮೂಡಿತು. ಅವನು ತೆಗೆದುಕೊಂಡ ನಿರ್ಧಾರಗಳು ದೃಢ ವಾಗುತ್ತಿದ್ದವು, ಅವನ ಸಾನ್ನಿಧ್ಯವೇ ಇತರರಿಗೆ ಪ್ರೇರಣೆಯಾಯಿತು. ಅವನು ಏನನ್ನೇ ಕೈಗೊಂಡರೂ ಅದರಲ್ಲಿ ಸಮತೋಲನ ಮತ್ತು ಯಶಸ್ಸು ಸಹಜವಾಗಿ ಹರಿಯತೊಡಗಿತು.

ಆಗ ಅವನಿಗೆ ಅರಿವಾಯಿತು ವೃದ್ಧರು ನೀಡಿದ ಓಜಸ್ವೀ ಭವ ಎಂಬ ಆಶೀರ್ವಾದವೇ ಅವನಿಗೆ ಬೇಕಿದ್ದ ಎಲ್ಲದರ ಮೂಲ. ಏಕೆಂದರೆ ಒಬ್ಬನು ಓಜಸ್ವಿಯಾಗಿದ್ದರೆ ದೇಹ, ಮನಸ್ಸು ಮತ್ತು ಆತ್ಮ ಸಮೃದ್ಧವಾಗುತ್ತವೆ, ಜೀವನವು ಸಹಜವಾಗಿ ಶ್ರೇಷ್ಠತೆಯತ್ತ ಸಾಗುತ್ತದೆ.

ಇದೇ ‘ಓಜಸ್’ ಎಂಬ ಆಯುರ್ವೇದದ ಮಹತ್ವಪೂರ್ಣ ತತ್ತ್ವದ ಸಾರ. ವ್ಯಕ್ತಿಯ ಸಮಗ್ರ ಆರೋಗ್ಯ, ಪ್ರತಿರೋಧಕ ಶಕ್ತಿ ಮತ್ತು ಆಂತರಿಕ ಕಾಂತಿಯ ಮೂಲವಾಗಿರುವ ಈ ಓಜಸ್ಸನ್ನು ಅರಿತು ಪೋಷಿಸುವುದೇ ನಿಜವಾದ ಸ್ವಾಸ್ಥ್ಯದ ದಾರಿಯಾಗಿದೆ. ಮುಂದಿನ ಭಾಗದಲ್ಲಿ ಈ ಓಜಸ್ಸಿನ ಸ್ವರೂಪ, ಅದರ ಪ್ರಾಮುಖ್ಯತೆ ಮತ್ತು ಅದನ್ನು ಕಾಪಾಡಿಕೊಳ್ಳುವ ವಿಧಾನಗಳನ್ನು ವಿವರವಾಗಿ ತಿಳಿಯೋಣ.

ಇದನ್ನೂ ಓದಿ: Dr Sadhanashree Column: ಅತಿಸಾರದಲ್ಲಿ ಎಚ್ಚರಿಕೆ-ತಕ್ಷಣದ ಪರಿಹಾರವೇ ಸಮಸ್ಯೆಯಾಗಬಹುದು !

‘ಓಜಸ್’ ಎಂದರೆ ಏನು?

ಆಯುರ್ವೇದದ ಪ್ರಕಾರ, ನಾವು ಸೇವಿಸುವ ಆಹಾರವು ಕ್ರಮೇಣ ರಸ, ರಕ್ತ, ಮಾಂಸ, ಮೇದ, ಅಸ್ಥಿ, ಮಜ್ಜಾ ಮತ್ತು ಶುಕ್ರ ಎಂಬ ಏಳು ಧಾತುಗಳಾಗಿ ಪರಿವರ್ತನೆಗೊಳ್ಳುತ್ತದೆ. ಈ ಧಾತುಗಳ ಸಮರ್ಪಕ ಪೋಷಣೆಯ ನಂತರ ಕೊನೆಯಲ್ಲಿ ಉತ್ಪತ್ತಿಯಾಗುವ ಸೂಕ್ಷ್ಮ ಸಾರವೇ ಓಜಸ್. ಇದು ದೇಹದ ಪ್ರತಿಯೊಂದು ಅಂಗಕ್ಕೂ ಜೀವಶಕ್ತಿಯನ್ನು ನೀಡುತ್ತದೆ. ಹೃದಯದಲ್ಲಿ ನೆಲೆಸಿರುವ ಈ ಓಜಸ್ ದೇಹದ ಸಂಪೂರ್ಣ ಕಾರ್ಯಚಟುವಟಿಕೆಯನ್ನು ನಿಯಂತ್ರಿಸುತ್ತದೆ.

ಓಜಸ್ಸಿನ ಪ್ರಾಮುಖ್ಯತೆ ಏನು?

ಓಜಸ್ಸನ್ನು ಆಯುರ್ವೇದದಲ್ಲಿ ‘ಬಲ’ ಎಂದು ಕರೆಯಲಾಗಿದೆ. ಆದರೆ ಇಲ್ಲಿ ಉಲ್ಲೇಖಿಸಲ್ಪಡುವ ಬಲವು ಕೇವಲ ದೇಹಬಲವಲ್ಲ; ಇದು ಮನೋಬಲ ಮತ್ತು ಆತ್ಮಬಲವನ್ನು ಒಳಗೊಂಡ ಸಮಗ್ರ ಶಕ್ತಿಯಾಗಿದೆ. ಒಬ್ಬ ವ್ಯಕ್ತಿಯ ಆರೋಗ್ಯ, ಚೈತನ್ಯ, ಸ್ಥೈರ್ಯ ಮತ್ತು ಆಂತರಿಕ ಸಂತೃಪ್ತಿಯನ್ನು ನಿರ್ಧರಿಸುವ ಮೂಲತತ್ವವೇ ಓಜಸ್. ಓಜಸ್ ಸಮೃದ್ಧವಾಗಿದ್ದರೆ, ದೇಹದ ಪ್ರತಿಯೊಂದು ಧಾತು ವೂ ಸಮರ್ಪಕವಾಗಿ ಪೋಷಣೆಯನ್ನು ಪಡೆಯುತ್ತದೆ. ಇದರ ಪರಿಣಾಮವಾಗಿ ದೇಹವು ರೋಗ ಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಆದ್ದರಿಂದಲೇ ಓಜಸ್ಸನ್ನು ರೋಗ ನಿರೋಧಕ ಶಕ್ತಿಯ ಆಧಾರವೆಂದು ಪರಿಗಣಿಸಲಾಗುತ್ತದೆ.

ಕೇವಲ ದೇಹವಲ್ಲ, ಮನಸ್ಸಿನ ಮೇಲೂ ಇದರ ಪ್ರಭಾವ ಅತ್ಯಂತ ಮಹತ್ವದ್ದಾಗಿದೆ. ಓಜಸ್ ಸಮತೋಲನದಲ್ಲಿದ್ದರೆ ಮನಸ್ಸು ಶಾಂತವಾಗಿರುತ್ತದೆ, ಚಿಂತನೆಗಳು ಸ್ಪಷ್ಟವಾಗುತ್ತವೆ ಮತ್ತು ನಿರ್ಧಾರಗಳು ಸಮರ್ಪಕವಾಗಿ ಮೂಡುತ್ತವೆ. ಇದೇ ಕಾರಣದಿಂದ, ಓಜಸ್ ಅನ್ನು ವ್ಯಕ್ತಿತ್ವದ ಆಂತರಿಕ ಕಾಂತಿಯ ಮೂಲವೆಂದು ಹೇಳಬಹುದು. ಕೆಲವರಲ್ಲಿ ಕಾಣುವ ಸಹಜ ಆಕರ್ಷಣೆ, ಅವರ ಮಾತಿನ ಪ್ರಭಾವ, ಮತ್ತು ಸಾನ್ನಿಧ್ಯದ ಶಾಂತತೆ ಇವೆಲ್ಲವೂ ಬಲವಾದ ಓಜಸ್ಸಿನ ಪ್ರತಿಬಿಂಬ ಗಳಾಗಿವೆ. ಓಜಸ್ ಸಮೃದ್ಧವಾಗಿದ್ದಾಗ ವ್ಯಕ್ತಿ ಕೇವಲ ಆರೋಗ್ಯವಾಗಿರುವುದಲ್ಲ; ಆತನು ಸುತ್ತಮುತ್ತ ಲಿನವರಿಗೂ ಸಕಾರಾತ್ಮಕ ಶಕ್ತಿ ನೀಡುವವನಾಗುತ್ತಾನೆ.

ಇಂದಿನ ವೇಗದ ಜೀವನಶೈಲಿಯಲ್ಲಿ, ನಾವು ಈ ಮೂಲಭೂತ ತತ್ತ್ವವನ್ನು ಬಹುಮಟ್ಟಿಗೆ ನಿರ್ಲ ಕ್ಷಿಸುತ್ತಿದ್ದೇವೆ. ಅತಿಯಾದ ಕೆಲಸದ ಒತ್ತಡ, ಅಸಮರ್ಪಕ ಆಹಾರ ಪದ್ಧತಿ, ಸಂಸ್ಕರಿಸಿದ ಆಹಾರಗಳ ಬಳಕೆ, ನಿದ್ರಾಭಾವ ಮತ್ತು ನಿರಂತರ ಮಾನಸಿಕ ಚಿಂತನೆ- ಇವುಗಳೆಲ್ಲವೂ ಓಜಸ್ಸನ್ನು ನಿಧಾನವಾಗಿ ಕುಗ್ಗಿಸುತ್ತವೆ. ವಿಶೇಷವಾಗಿ, ರಾತ್ರಿ ಜಾಗರಣೆ ಮತ್ತು ಉಪಕರಣಗಳ ಅತಿಯಾದ ಬಳಕೆ ದೇಹದ ನೈಸರ್ಗಿಕ ಚಕ್ರವನ್ನು ಹಾನಿಗೊಳಿಸಿ ಓಜಸ್ ಕುಗ್ಗುವಿಕೆಗೆ ಕಾರಣವಾಗುತ್ತದೆ.

ಇದರ ಪರಿಣಾಮವಾಗಿ, ದೇಹದ ರೋಗನಿರೋಧಕ ಶಕ್ತಿ ಕುಂದುತ್ತದೆ, ಸಾಮಾನ್ಯವಾಗಿ ಕಾಣದಿದ್ದ ರೋಗಗಳು ಸಹ ಸುಲಭವಾಗಿ ಕಾಣಿಸಿಕೊಳ್ಳುತ್ತವೆ. ದೌರ್ಬಲ್ಯ, ಆಲಸ್ಯ, ಮನಸ್ಸಿನ ಅಶಾಂತಿ, ನಿರಾ ಸಕ್ತಿ - ಇವುಗಳೆಲ್ಲ ಓಜಸ್ ಕುಗ್ಗುವಿಕೆಯ ಲಕ್ಷಣಗಳಾಗಿವೆ. ಈ ಸ್ಥಿತಿ ಮುಂದುವರಿದರೆ ದೇಹದ ಧಾತು ಗಳು ದುರ್ಬಲಗೊಂಡು ಗಂಭೀರ ಕಾಯಿಲೆಗಳಿಗೆ ದಾರಿ ಮಾಡಿಕೊಡಬಹುದು.

ಓಜಸ್ಸಿನ ವಿಧಗಳು ಯಾವುವು?

ಆಯುರ್ವೇದದ ಪ್ರಕಾರ ಓಜಸ್ ಎರಡು ವಿಧಗಳಾಗಿದೆ.

೧. ಪರಾ ಓಜಸ್

ಪರಾ ಓಜಸ್ ಅತ್ಯಂತ ಮಹತ್ವಪೂರ್ಣವಾದುದು. ಇದು ಜೀವದ ಮೂಲ ಆಧಾರವಾಗಿದ್ದು, ಜೀವದ ಸ್ಥಿತಿಯೇ ಇದರ ಮೇಲೆ ಅವಲಂಬಿತವಾಗಿದೆ. ಇದರ ಪ್ರಮಾಣ ಎಂಟು ಬಿಂದುಗಳಷ್ಟು ಎಂದು ವರ್ಣಿಸಲಾಗಿದ್ದು ಇದು ಹೃದಯದಲ್ಲಿ ನೆಲೆಸಿದೆ. ಇದಕ್ಕೆ ಹಾನಿಯಾದರೆ ಜೀವಾಪಾಯ ಉಂಟಾಗಬಹುದು.

೨. ಅಪರಾ ಓಜಸ್

ಅಪರಾ ಓಜಸ್ ಆರೋಗ್ಯದ ನಿರ್ವಹಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇದು ಅರ್ಧ ಅಂಜಲಿ ಯಷ್ಟು ಪ್ರಮಾಣದಲ್ಲಿದ್ದು ದೇಹದಾದ್ಯಂತ ಸಂಚರಿಸುತ್ತದೆ. ರೋಗ ನಿರೋಧಕ ಶಕ್ತಿ ಮತ್ತು ದೇಹ ಬಲ ಇದರ ಮೇಲೆ ಅವಲಂಬಿತವಾಗಿದೆ.

ಓಜಸ್ಸಿನ ಗುಣಗಳು ಯಾವುವು?

ಓಜಸ್ಸಿಗೆ ಹತ್ತು ಪ್ರಮುಖ ಗುಣಗಳನ್ನು ವಿವರಿಸಲಾಗಿದೆ:

ಗುರು - ದೇಹಕ್ಕೆ ಸ್ಥೈರ್ಯ ನೀಡುವುದು

ಶೀತ - ತಂಪನ್ನು ಕಾಪಾಡುವುದು

ಮೃದು - ಸೌಮ್ಯತೆ ನೀಡುವುದು

ಶ್ಲಕ್ಷ್ಣ- ಸರಾಗತೆ ನೀಡುವುದು

ಬಹಳ - ದಟ್ಟತೆ ಹೆಚ್ಚಿಸುವುದು

ಮಧುರ - ಪೋಷಕ ಗುಣ

ಸ್ಥಿರ - ಸ್ಥೈರ್ಯ ಕಾಪಾಡುವುದು

ಪ್ರಸನ್ನ - ಮನಸ್ಸಿನ ಶಾಂತಿ ಮತ್ತು ನಿರ್ಮಲತೆ

ಪಿಚ್ಛಿಲ - ರಕ್ಷಣಾತ್ಮಕ ಲೇಪನ

ಸ್ನಿಗ್ಧ - ಜಿಡ್ಡಿನ ಪೋಷಣೆ

ಓಜಸ್ ಕಡಿಮೆಯಾಗುವ ಕಾರಣಗಳು ಯಾವುವು?

ಕ್ರೋಧ, ಚಿಂತನೆ, ಭಯ, ದುಃಖ ಇಂತಹ ಭಾವನೆಗಳು ಓಜಸ್ಸನ್ನು ಕ್ಷೀಣಗೊಳಿಸುತ್ತವೆ. ಅತಿಯಾದ ವ್ಯಾಯಾಮ ಮತ್ತು ಶ್ರಮವೂ ಒಂದು ಕಾರಣವಾಗುತ್ತದೆ.

ದೀರ್ಘಕಾಲ ಉಪವಾಸ ಅಲ್ಪ ಪ್ರಮಾಣದ ಆಹಾರ ಅಶುದ್ಧ ಮತ್ತು ಶುದ್ಧ ಆಹಾರದ ಮಿಶ್ರ ಸೇವನೆ ಅತಿಯಾದ ಸಂಸ್ಕಾರಿತ ಮತ್ತು ಶೇಖರಿಸಿದ ಆಹಾರ

ಮದ್ಯಪಾನ

ರಾತ್ರಿ ಜಾಗರಣೆ

ಗಾಯಗಳು ಮತ್ತು ರಕ್ತಸ್ರಾವ

ದೇಹದ ಅತಿಯಾದ ಶೋಧನ

ವಿಷಪದಾರ್ಥಗಳ ಸೇವನೆ

ಸೂಕ್ಷ್ಮಜೀವಿಗಳ ಸೋಂಕು

ಓಜಸ್ಸಿನ ಕ್ಷಯದ ಲಕ್ಷಣಗಳು ಯಾವುವು?

ಆಯುರ್ವೇದದಲ್ಲಿ ಓಜಸ್ ಕುಗ್ಗುವಿಕೆ ಹಠಾತನೆ ಆಗುವುದಿಲ್ಲ; ಅದು ಹಂತ ಹಂತವಾಗಿ ಬೆಳೆಯುವ ಪ್ರಕ್ರಿಯೆಯಾಗಿದೆ. ಆಯುರ್ವೇದದಲ್ಲಿ ಓಜಸ್ ಕ್ಷಯವನ್ನು ಮೂರು ಹಂತಗಳಲ್ಲಿ ವಿವರಿಸಲಾಗಿದೆ.

೧. ಮೊದಲ ಹಂತ: ಓಜೋ ವಿಸ್ರಂಸ

ಈ ಹಂತದಲ್ಲಿ ದೇಹದಲ್ಲಿ ಸೂಕ್ಷ್ಮವಾದ ಅಸಮತೋಲನಗಳು ಕಾಣಿಸಿಕೊಳ್ಳುತ್ತವೆ. ಸಂಧಿ ವಿಷ್ಲೇಷ - ಸಂಧಿಗಳಲ್ಲಿ ನೋವು ಮತ್ತು ಬಲಹೀನತೆ

ಗಾತ್ರ ಸಾದ - ದೇಹದಲ್ಲಿ ದೌರ್ಬಲ್ಯ ಮತ್ತು ಶ್ರಮ

ದೋಷ ಚ್ಯವನ - ದೋಷಗಳ ಅಸಮತೋಲನ ಹೆಚ್ಚಾಗುವುದು

ಕ್ರಿಯಾಸನ್ನಿರೋಧ - ದೇಹದ ಸಹಜ ಕ್ರಿಯೆಗಳು ಸರಿಯಾಗಿ ನಡೆಯದಿರುವುದು

೨. ಎರಡನೇ ಹಂತ: ಓಜೋ ವ್ಯಾಪತ್

ಈ ಹಂತದಲ್ಲಿ ಲಕ್ಷಣಗಳು ಹೆಚ್ಚು ಸ್ಪಷ್ಟವಾಗುತ್ತವೆ ಮತ್ತು ದೇಹದ ಮೇಲೆ ಪರಿಣಾಮ ಹೆಚ್ಚಾಗುತ್ತದೆ.

ಸ್ಥಬ್ಧ ಗುರುಗಾತ್ರತಾ - ದೇಹದಲ್ಲಿ ಸ್ಥಬ್ಧತೆ ಮತ್ತು ಭಾರಿತನ

ವಾತ ಶೋಫ - ವಾತದ ಹೆಚ್ಚಳದಿಂದ ಉಂಟಾಗುವ ಊತ

ವರ್ಣ ಭೇದ - ಚರ್ಮದ ಬಣ್ಣದಲ್ಲಿ ಬದಲಾವಣೆ

ಗ್ಲಾನಿ - ದೌರ್ಬಲ್ಯ ಮತ್ತು ಉತ್ಸಾಹದ ಕೊರತೆ

ತಂದ್ರಾ - ಅಲಸ್ಯ ಮತ್ತು ಇಂದ್ರಿಯಗಳ ಅಸಮರ್ಪಕ ಕಾರ್ಯ

ನಿದ್ರೆ ಅಧಿಕ್ಯ - ಅತಿಯಾದ ನಿದ್ರೆ

೩. ಮೂರನೇ ಹಂತ: ಓಜೋಕ್ಷಯ

ಇದು ಅತ್ಯಂತ ಗಂಭೀರ ಹಂತವಾಗಿದ್ದು, ಜೀವಕ್ಕೆ ಅಪಾಯ ಉಂಟುಮಾಡಬಹುದು.

ಮೂರ್ಛಾ - ಅಚೇತನ ಸ್ಥಿತಿ

ಮಾಂಸ ಕ್ಷಯ - ಮಾಂಸಕೋಶಗಳ ಕುಗ್ಗುವಿಕೆ

ಮೋಹ - ಗೊಂದಲ ಮತ್ತು ಅಸ್ಪಷ್ಟ ಚಿಂತನೆ

ಪ್ರಲಾಪ - ಅಸಂಬದ್ಧ ಮಾತು

ಮರಣ - ಜೀವಾಪಾಯದ ಅಂತಿಮ ಸ್ಥಿತಿ

ಈ ರೀತಿಯಾಗಿ ಓಜಸ್ ಕುಗ್ಗುವಿಕೆ ಹಂತ ಹಂತವಾಗಿ ಬೆಳೆಯುತ್ತದೆ. ಆದ್ದರಿಂದ ಪ್ರಾರಂಭಿಕ ಲಕ್ಷಣ ಗಳ ಗಮನ ನೀಡಿ, ಜೀವನಶೈಲಿ ಮತ್ತು ಆಹಾರದಲ್ಲಿ ಬದಲಾವಣೆ ಮಾಡುವುದು ಅತ್ಯಂತ ಮುಖ್ಯ. ಓಜಸ್ಸನ್ನು ಕಾಪಾಡಿಕೊಳ್ಳುವುದು ಎಂದರೆ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಆಗಿದೆ.

ಓಜಸ್ ಹೆಚ್ಚಿದಾಗ- ಓಜಸ್ ಸಮೃದ್ಧವಾಗಿದ್ದರೆ ಮನಸ್ಸಿನಲ್ಲಿ ಸಂತೋಷ ಮತ್ತು ತೃಪ್ತಿ ಉಂಟಾ ಗುತ್ತದೆ. ದೇಹವು ಪೋಷಿತವಾಗಿ ಬಲಿಷ್ಠವಾಗುತ್ತದೆ. ಉತ್ಸಾಹ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಓಜಸ್ಸನ್ನು ಹೆಚ್ಚಿಸುವ ವಿಧಾನಗಳು - ಓಜಸ್ ಅನ್ನು ಹೆಚ್ಚಿಸುವುದು ಎಂದರೆ ಕೇವಲ ಒಂದು ಔಷಧಿ ಅಥವಾ ಒಂದು ವಿಧಾನದಿಂದ ಸಾಧ್ಯವಲ್ಲ. ಅದು ಆಹಾರ, ಜೀವನಶೈಲಿ ಮತ್ತು ಮನಸ್ಸಿನ ಸ್ಥಿತಿಯ ಸಮನ್ವಯದಿಂದ ಸಾಧ್ಯವಾಗುವ ಪ್ರಕ್ರಿಯೆ. ಆಯುರ್ವೇದದಲ್ಲಿ ಇದನ್ನು ಆಹಾರ, ವಿಹಾರ ಮತ್ತು ವಿಚಾರ ಎಂಬ ಮೂರು ಮುಖ್ಯ ಅಂಶಗಳ ಮೂಲಕ ವಿವರಿಸಲಾಗಿದೆ.

ಆಹಾರ

ಸರಿಯಾದ ಆಹಾರವೇ ಓಜಸ್ ನಿರ್ಮಾಣದ ಮೂಲ. ಪೋಷಕ, ಸಾತ್ವಿಕ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು ಸೇವಿಸುವುದು ಅತ್ಯಂತ ಮುಖ್ಯ. ಹಾಲು, ತುಪ್ಪ, ಬೆಣ್ಣೆ ಇಂತಹ ಪೋಷಕ ಆಹಾರಗಳು, ಬಾದಾಮಿ, ದ್ರಾಕ್ಷಿ, ಖರ್ಜೂರ, ಅಂಜೂರ ಇಂತಹ ಶಕ್ತಿದಾಯಕ ದ್ರವ್ಯಗಳು, ತಾಜಾ ಹಣ್ಣುಗಳು, ಸಾತ್ವಿಕ, ಮತ್ತು ತಾಜಾ ಆಹಾರ, ಸಮರ್ಪಕ ಪ್ರಮಾಣದಲ್ಲಿ, ಸಮಯಕ್ಕೆ ತಕ್ಕಂತೆ ಆಹಾರ ಸೇವನೆ.

ತಪ್ಪಿಸಬೇಕಾದವು: ಅತಿಯಾಗಿ ಒಣ, ಖಾರ, ಉಷ್ಣ, ಶೀತ, ಹಾಳಾದ ಅಥವಾ ಮರುಬಿಸಿ ಮಾಡಿದ ಆಹಾರ, ಅಸಮರ್ಪಕ ಆಹಾರ ಸಂಯೋಜನೆಗಳು.

ವಿಹಾರ

ನಿತ್ಯ ಜೀವನದಲ್ಲಿ ಅನುಸರಿಸುವ ಕ್ರಮಗಳು ಓಜಸ್ ಅನ್ನು ಬಹಳ ಮಟ್ಟಿಗೆ ಪ್ರಭಾವಿಸುತ್ತವೆ. ಸಮರ್ಪಕ ಮತ್ತು ಗಾಢ ನಿದ್ರೆ, ನಿಯಮಿತ ಜೀವನಶೈಲಿ, ಮಿತವಾದ ವ್ಯಾಯಾಮ, ಯೋಗ ಮತ್ತು ಪ್ರಾಣಾಯಾಮ ಅಭ್ಯಾಸ, ಅಭ್ಯಂಗ ಸ್ನಾನ, ಪ್ರಕೃತಿಯೊಂದಿಗೆ ಸಂಪರ್ಕದಲ್ಲಿರುವುದು.

ತಪ್ಪಿಸಬೇಕಾದವು: ರಾತ್ರಿ ಜಾಗರಣೆ, ಅತಿಯಾದ ಶಾರೀರಿಕ ಶ್ರಮ, ಅತಿಯಾದ ವ್ಯಾಯಾಮ, ಅನಿಯಮಿತ ಜೀವನಶೈಲಿ.

ವಿಚಾರ

ಮನಸ್ಸಿನ ಸ್ಥಿತಿ ಓಜಸ್ಸಿನ ಮೇಲೆ ಅತ್ಯಂತ ಸೂಕ್ಷ್ಮವಾದ ಪ್ರಭಾವ ಬೀರುತ್ತದೆ.

ಸಕಾರಾತ್ಮಕ ಚಿಂತನೆ, ಶಾಂತ ಮನೋಭಾವ, ಧ್ಯಾನ ಮತ್ತು ಆತ್ಮಪರಿಶೀಲನೆ, ಕೃತಜ್ಞತೆ ಮತ್ತು ಸಂತೃಪ್ತಿ ಭಾವ, ಸತ್ಸಂಗ ಮತ್ತು ಉತ್ತಮ ಸಂಸರ್ಗ ತಪ್ಪಿಸಬೇಕಾದವು: ಕ್ರೋಧ, ಭಯ, ಚಿಂತನೆ, ಅಸೂಯೆ, ದುಃಖ ಮುಂತಾದ್ ನಕಾರಾತ್ಮಕ ಭಾವನೆಗಳು.

ಆಹಾರದಿಂದ ದೇಹ ಪೋಷಿತವಾಗುತ್ತದೆ, ವಿಹಾರದಿಂದ ದೇಹ ಸಮತೋಲನದಲ್ಲಿರುತ್ತದೆ, ಮತ್ತು ವಿಚಾರದಿಂದ ಮನಸ್ಸು ಶುದ್ಧವಾಗುತ್ತದೆ. ಈ ಮೂರೂ ಒಂದಾಗುವಾಗ ಓಜಸ್ ಸಹಜವಾಗಿ ವೃದ್ಧಿಯಾಗುತ್ತದೆ.

ಹೀಗಾಗಿ, ಓಜಸ್ ಅನ್ನು ಹೆಚ್ಚಿಸಲು ನಾವು ನಮ್ಮ ದಿನಚರಿಯಲ್ಲಿ ಸಣ್ಣ ಆದರೆ ಮಹತ್ವಪೂರ್ಣ ಬದಲಾವಣೆಗಳನ್ನು ತರಬೇಕು. ಇದೇ ಆರೋಗ್ಯಕರ, ಸಮೃದ್ಧ ಮತ್ತು ಶ್ರೇಷ್ಠ ಜೀವನದ ದಾರಿ ಯಾಗಿದೆ.

ಸ್ನೇಹಿತರೆ, ಓಜಸ್ಸೇ ಎಲ್ಲ ಜೀವಿಗಳನ್ನು ಪೋಷಿಸಿ, ಚೈತನ್ಯದಿಂದ ತುಂಬಿಸುವ ಮೂಲ ಶಕ್ತಿ. ಓಜಸ್ ಇಲ್ಲದೆ ಜೀವನವೇ ಅಸಾಧ್ಯ. ಜೀವದ ಅಸ್ತಿತ್ವ, ಸ್ಥೈರ್ಯ ಮತ್ತು ಬೆಳವಣಿಗೆಯ ಹಿಂದೆ ಇರುವ ಸೂಕ್ಷ್ಮ ತತ್ತ್ವವೇ ಓಜಸ್.

ಗರ್ಭದ ನಿರ್ಮಾಣದ ಪ್ರಾರಂಭದ ಓಜಸ್ ತನ್ನ ಪಾತ್ರವನ್ನು ಆರಂಭಿಸುತ್ತದೆ. ಗರ್ಭರೂಪದ ಪ್ರಾರಂಭಿಕ ಹಂತದ ಇದು ಉಂಟಾಗಿ, ಗರ್ಭವನ್ನು ಪೋಷಿಸುವ ದ್ರವವಾಗಿ ಕಾರ್ಯ ನಿರ್ವಹಿಸು ತ್ತದೆ. ಇದೇ ಓಜಸ್ ಹೃದಯದಲ್ಲಿ ಪ್ರವೇಶಿಸಿ, ಜೀವಚಟುವಟಿಕೆಗಳ ಆಧಾರವಾಗುತ್ತದೆ. ಹೀಗಾಗಿ, ಜೀವದ ಆರಂಭದಿಂದಲೇ ಓಜಸ್ ಅತಿ ಮುಖ್ಯ ಸ್ಥಾನವನ್ನು ಹೊಂದಿದೆ. ಓಜಸ್ ನಷ್ಟವಾಗುವುದು ಎಂದರೆ ಜೀವಶಕ್ತಿಯ ನಷ್ಟವಾಗುವುದೇ ಆಗಿದೆ. ಆದ್ದರಿಂದಲೇ ಆಯುರ್ವೇದ ದಲ್ಲಿ ಓಜಸ್ ಅನ್ನು ಜೀವದ ಆಧಾರವೆಂದು ಪರಿಗಣಿಸಲಾಗಿದೆ. ಇದು ಹೃದಯದಲ್ಲಿ ನೆಲೆಸಿದ್ದು, ದೇಹದ ಎಲ್ಲ ಕಾರ್ಯ ಗಳನ್ನು ನಿರಂತರವಾಗಿ ಪೋಷಿಸಿ, ಜೀವವನ್ನು ಧಾರಣೆ ಮಾಡುತ್ತದೆ.

ಓಜಸ್ ದೇಹದ ಎಲ್ಲ ಧಾತುಗಳ ಸಾರವಾಗಿದೆ. ರಸದಿಂದ ಶುಕ್ರದವರೆಗೆ ಎಲ್ಲ ಧಾತುಗಳು ಸಮರ್ಪಕವಾಗಿ ಪೋಷಿತವಾದಾಗ, ಅವುಗಳ ಅಂತಿಮ ಮತ್ತು ಸೂಕ್ಷ್ಮ ರೂಪವಾಗಿ ಓಜಸ್ ಉಂಟಾಗುತ್ತದೆ. ಹೀಗಾಗಿ, ಓಜಸ್ಸು ದೇಹದ ಸಮಗ್ರ ಪೋಷಣೆಯ ಪ್ರತೀಕವಾಗಿದೆ. ಈ ಜೀವ ಚೈತನ್ಯವು ಓಜಸ್ ನಿಂದಲೇ ವ್ಯಕ್ತವಾಗುತ್ತದೆ.

ದೇಹದಲ್ಲಿ ಕಾಣುವ ಉತ್ಸಾಹ, ಕಾಂತಿ, ಚೈತನ್ಯ ಮತ್ತು ಪ್ರೇರಣೆ ಇವೆಲ್ಲವೂ ಓಜಸ್ಸಿನ ಪ್ರಭಾವದ ಫಲಗಳು. ಓಜಸ್ ತನ್ನ ಕಾರ್ಯವನ್ನು ದೇಹದ ವಿವಿಧ ಭಾಗಗಳಿಗೆ ತಲುಪಿಸಲು ಹೃದಯಕ್ಕೆ ಸಂಬಂಧಿಸಿದ ದಶ ಧಮನಿಗಳ ಮೂಲಕ ಸಂಚರಿಸುತ್ತದೆ. ಈ ಧಮನಿಗಳು ಓಜಸ್‌ನ ಹರಿವಿಗೆ ಮಾರ್ಗಗಳಾಗಿ ಕೆಲಸ ಮಾಡುತ್ತವೆ. ಆದ್ದರಿಂದ, ಹೃದಯ ಮತ್ತು ಈ ಧಮನಿಗಳ ಸಮರ್ಪಕ ಕಾರ್ಯಚಟುವಟಿಕೆಗಳು ಜೀವದ ನಿರ್ವಹಣೆಯಲ್ಲಿ ಅತ್ಯಂತ ಮುಖ್ಯವಾಗಿವೆ.

ಒಟ್ಟಿನಲ್ಲಿ, ಓಜಸ್ ಜೀವದ ಸಾರ, ಪೋಷಣೆಯ ಮೂಲ ಮತ್ತು ಜೀವಚೈತನ್ಯದ ಆಧಾರವಾಗಿದೆ. ಇದನ್ನು ಕಾಪಾಡಿಕೊಳ್ಳುವುದೇ ಆರೋಗ್ಯಕರ ಮತ್ತು ಸಮತೋಲನಯುತ ಜೀವನದ ಕೀಲಿಕೈ.

ಓಜಸ್ವೀ ಭವ ಎಂಬ ಆಶೀರ್ವಾದವು ಕೇವಲ ಮಾತಲ್ಲ, ಅದು ಸಮಗ್ರ ಜೀವನದ ಪರಿಪೂರ್ಣತೆಗೆ ದಾರಿ ತೋರಿಸುವ ತತ್ತ್ವವಾಗಿದೆ.

ಡಾ. ಸಾಧನಾಶ್ರೀ ಪಿ,

View all posts by this author