ಶಶಾಂಕಣ
ನಮ್ಮ ಹಳ್ಳಿಯಲ್ಲಿ ಬಳಕೆಯಲ್ಲಿದ್ದ ಹಳೆಯ ಕಾಲದ ಕೆಲವು ರುಚಿಕರ ತಿನಿಸುಗಳನ್ನು ನೆನಪಿಸಿ ಕೊಂಡು ಬರೆದಿರುವ ಈ ಅಂಕಣವನ್ನು ಆರಂಭಿಸುವ ಮೊದಲು, ಸಣ್ಣದೊಂದು ತಪ್ಪೊಪ್ಪಿಗೆ ಯನ್ನೂ ಓದುಗರು ತಮ್ಮ ಹೊಟ್ಟೆಯಲ್ಲಿ ಹಾಕಿಕೊಳ್ಳಿ! ಅದೇನೆಂದರೆ, ಇಲ್ಲಿ ಹೇಳಿರುವ ಎಲ್ಲಾ ತಿನಿಸುಗಳನ್ನು ನಾನು ಚಪ್ಪರಿಸಿ ತಿಂದಿದ್ದು ನಿಜ, ಅದರ ಅಪರೂಪದ ರುಚಿಯನ್ನು ಮತ್ತು ಆರೋಗ್ಯಕರ ಅಂಶವನ್ನು ಸವಿದದ್ದು ನಿಜ, ಆದರೆ ಕೆಲವು ತಿನಿಸುಗಳನ್ನು ಬಾಲ್ಯಕಾಲದಲ್ಲಿ ತಿಂದದ್ದು ಬಿಟ್ಟರೆ, ಈಚಿನ ದಿನಗಳಲ್ಲಿ ತಿಂದೇ ಇಲ್ಲ!
ನಗರವಾಸಿಯಾದ ನಂತರ, ಹಲವು ಹಳೆಯ ತಿನಿಸುಗಳ ಬಾಂಧವ್ಯವೇ ತಪ್ಪಿಹೋಗಿದೆ. ಅಷ್ಟೇಕೆ, ಇಲ್ಲಿ ಹೇಳಿರುವ ಒಂದೆರಡು ತಿನಿಸುಗಳನ್ನು ಬಹು ಹಿಂದೆ ಸವಿದದ್ದು ಬಿಟ್ಟರೆ, ಈಚಿನ ದಶಕಗಳಲ್ಲಿ ಕಣ್ಣಿಂದ ನೋಡಿಯೂ ಇಲ್ಲ! ಅದೇಕೆ ಹೀಗೆ ಎಂದು ಮರುಪ್ರಶ್ನಿಸಿ ನೀವು ಕಾರಣ ಕೇಳಬಹುದು. ಕಾರಣ ಸ್ಪಷ್ಟ: ನಾಗರಿಕತೆಯ ಪ್ರವಾಹದಲ್ಲಿ ಈಜುತ್ತಾ, ಪ್ರವಾಹದ ದಿಕ್ಕಿನಲ್ಲಿ ಬಹು ವೇಗವಾಗಿ ಸಾಗಿಬಂದಿರುವ ನಾನು (ಮತ್ತು ನಾವೆಲ್ಲರೂ, ನೀವೂ ಸೇರಿದಂತೆ) ಹಳೆಯ ಕಾಲದ ಹಲವು ತಿನಿಸು ಗಳನ್ನು, ವಸ್ತುಗಳನ್ನು, ಪದ್ಧತಿಗಳನ್ನು, ದಿನಚರಿಯ ಹಲವು ಭಾಗಗಳನ್ನು ಮರೆತೇ ಬಿಟ್ಟಿದ್ದೇವೆ!
ಇದು ಕಹಿಸತ್ಯ; ಹೌದೋ ಅಲ್ಲವೋ ನೀವೇ ಪರೀಕ್ಷಿಸಿಕೊಳ್ಳಿ.ಇರಲಿ, ಈಚಿನ ದಶಕಗಳಲ್ಲಿ ನಾನು ತಿನ್ನದೇ ಇರುವ, ಬಾಲ್ಯದಲ್ಲಿ ಮಾತ್ರ ಸೇವಿಸಿದ್ದ ಒಂದು ರುಚಿಕರ ತಿನಿಸು ಎಂದರೆ, ಗುಂಬಳ ಹೂವಿನ ದೋಸೆ! ಗುಂಬಳ ಹೂವಿನಿಂದಲೂ ದೋಸೆ ತಯಾರಿಸಲು ಸಾಧ್ಯವೇ ಎಂದು ನಿಮಗೆ ವಿಸ್ಮಯವಾದೀತು.
ಇದನ್ನು ನಮ್ಮ ಹಳ್ಳಿಯಲ್ಲಿ ಕರೆಯುತ್ತಿದ್ದುದು ದೋಸೆ ಎಂದಲ್ಲ, ಬದಲಿಗೆ ಚಟ್ಟಿ ಎಂದು (ಚಟ್ನಿ ಅಲ್ಲ, ಚಟ್ಟಿ). ಹೆಸರು ಚಟ್ಟಿ ಎಂದಿದ್ದರೂ, ಅದಕ್ಕೆ ಬಹುಮಟ್ಟಿಗೆ ದೋಸೆಯ ಸ್ವರೂಪವೇ. ನಮ್ಮ ಅಮ್ಮಮ್ಮ ಆಗಾಗ “ಮಕ್ಕಳೇ ಇವತ್ತು ಗುಂಬಳ ಹೂವಿನ ಚಟ್ಟಿ (ದೋಸೆ) ಮಾಡುತ್ತೇನೆ" ಎಂದಾಗ, ನಮಗೆಲ್ಲಾ ಬಹು ಖುಷಿ. ಗುಂಬಳ ಹೂವಿನ ಚಟ್ಟಿ ಅಥವಾ ದೋಸೆ ತಯಾರಿಸಲು, ಎಲ್ಲಾ ತಳಿಯ ಗುಂಬಳ ಹೂವು ಆಗಿಬರುವುದಿಲ್ಲ.
ಇದನ್ನೂ ಓದಿ: Shashidhara Halady Column: ಕಾಡು ಕಡಿದು ಅಭಿವೃದ್ಧಿಯೆ ? ಖಂಡಿತಾ ಕೂಡದು !
ಸಿಹಿ ಗುಂಬಳದ ಹೂವುಗಳೇ ಬೇಕು, ಅದರಲ್ಲೂ, ಗಂಡು ಹೂವುಗಳು ಬೇಕು. ಉದ್ದಗೆ, ತುಸು ದಪ್ಪಗೆ ಇರುವ ಸಿಹಿಗುಂಬಳದ ಹೂವುಗಳನ್ನು ಚೆನ್ನಾಗಿ ಕತ್ತರಿಸಿಕೊಂಡು, ಅಕ್ಕಿಹಿಟ್ಟಿನೊಂದಿಗೆ ಬೆರೆಸಬೇಕು. ಅದಕ್ಕೆ ಮೆಣಸಿನ ಕಾಯಿ ಮತ್ತು ಉಪ್ಪನ್ನು ಸೇರಿಸಬೇಕು. ನಂತರ, ದೋಸೆಯ ರೀತಿ ಕಾವಲಿಯ ಮೇಲೆ ಬೇಯಿಸಿದಾಗ ಗುಂಬಳಹೂವಿನ ದೋಸೆ ಸಿದ್ಧ. ಸ್ವಲ್ಪ ಜಾಸ್ತಿಯೇ ಎಣ್ಣೆಯನ್ನು ಸವರಿ ಬೇಯಿಸಿದರೆ, ಬಲು ರುಚಿ!
ನಮ್ಮ ಮನೆಯ ಎದುರಿನ ಗದ್ದೆಯಲ್ಲಿ, ಚಳಿಗಾಲ ಕಳೆಯುವ ಸಮಯದಲ್ಲಿ ಸಿಹಿಗುಂಬಳದ ಹತ್ತಾರು ಗಿಡಗಳನ್ನು ಹಾಕುತ್ತಿದ್ದರು. ಅವು ಹೂವಾದಾಗ, ಗುಂಬಳ ಹೂವಿನ ದೋಸೆ ಆಗಾಗ ನಮ್ಮ ಅಡುಗೆ ಮನೆಯಲ್ಲಿ ‘ಚೊಂಯ್’ ಎನ್ನುತ್ತಿತ್ತು. ಅದು ರುಚಿಯಾದ ತಿನಿಸೂ ಹೌದು, ಜತೆಗೆ ಆಹಾರದ ಭಾಗವೂ ಹೌದು.
ಆದರೆ, ನಂತರದ ವರ್ಷಗಳಲ್ಲಿ ಗುಂಬಳ ಹೂವಿನ ದೋಸೆಯನ್ನು ತಯಾರಿಸುವುದನ್ನೇ ಮರೆತು ಬಿಟ್ಟಿದ್ದೇವೇನೋ ಎಂಬಂಥ ಸನ್ನಿವೇಶ. ಹೊಸ ರೀತಿಯ ತಿನಿಸುಗಳ ಪರಿಚಯವಾಗುತ್ತಾ ಹೋದಂತೆ, ಗುಂಬಳಹೂವಿನ ದೋಸೆಯಂಥ ಹಳೆಯ, ರುಚಿಕರ ಮತ್ತು ಆರೋಗ್ಯಕರ ತಿನಿಸು ಗಳನ್ನು ತಯಾರಿಸುವುದನ್ನು ನಮ್ಮ ಜನರೇ ಕಡಿಮೆ ಮಾಡಿದರು.
ಇದು ನಮ್ಮ ಮನೆಯಲ್ಲಿ ಮಾತ್ರವಲ್ಲ, ನಮ್ಮ ಹಳ್ಳಿಯಲ್ಲಿ ಯಾರನ್ನೇ ಕೇಳಿದರೂ, “ಹೌದು, ನಾನು ಸಹ ಬಾಲ್ಯದಲ್ಲಿ ಗುಂಬಳ ಹೂವಿನ ದೋಸೆಯನ್ನು ತಿಂದಿದ್ದುಂಟು, ಆದರೆ ಈಗ ಯಾರೂ ಮಾಡು ವುದಿಲ್ಲ" ಎಂಬ ಉತ್ತರ ಸಿಕ್ಕೀತು. ಇನ್ನೂ ಮುಂದುವರಿದು, “ಇದೆಂಥ ಮಾರಾಯ್ರೆ ನೀವು ಈಗಿನ ಕಾಲದಲ್ಲೂ ಗುಂಬಳ ಹೂವಿನ ದೋಸೆಯನ್ನು ನೆನಪಿಸಿಕೊಳ್ಳುತ್ತಿದ್ದೀರಿ? ಈಗೇನಿದ್ದರೂ ಪರೋಟ, ಚಪಾತಿ, ಪಿಜ್ಜಾಗಳ ಕಾಲ ಅಲ್ಲವೋ? ನಿಮಗೆ ರುಚಿರುಚಿ ದೋಸೆ ತಿನ್ನಬೇಕಾದರೆ, ಹಾಲಾಡಿಯ ಬಸ್‌ಸ್ಟ್ಯಾಂಡ್ ಹತ್ತಿರದ ಹೋಟೆಲಿನಲ್ಲಿ ತುಪ್ಪದ ದೋಸೆಯನ್ನು ತಿನ್ನಿ!
ಭಾರಿ ರುಚಿ ಉಂಟು! ಕ್ಯೂನಿಂತು ತುಪ್ಪದ ದೋಸೆ ತಿನ್ನುತ್ತಾರೆ! ಗುಂಬಳ ಹೂವಿನ ದೋಸೆಯ ಕಾಲ ಮುಗಿದುಹೋಯ್ತು ಮಾರಾಯ್ರೆ!" ಎಂದು ಹೇಳುವವರೂ ಇದ್ದಾರೆ. ಇದು ನಮ್ಮೂರಿನ ಗುಂಬಳ ಹೂವಿನ ದೋಸೆಯ ಕುರಿತು ಮಾತ್ರವಲ್ಲ, ನಿಮ್ಮ ಹಳ್ಳಿಯ ಕೆಲವು ತಿನಿಸುಗಳನ್ನೇ ನೆನಪಿಸಿಕೊಳ್ಳಿ, ಹಿಂದೆ ಸರ್ವವ್ಯಾಪಿಯಾಗಿದ್ದ ಹಲವು ತಿನಿಸುಗಳು ಮತ್ತು ಆಹಾರಗಳು, ಈಚಿನ ವರ್ಷಗಳಲ್ಲಿ ನಿಧಾನವಾಗಿ ಮರೆಯಾಗುತ್ತಿರುವ ವಾಸ್ತವ ಅರಿವಾದೀತು.
ಆದರೆ, ವೈಯಕ್ತಿಕ ನೆಲೆಯಲ್ಲಿ ಪ್ರಯತ್ನಿಸಿದರೆ, ಹಳೆಯ ಕಾಲದ ತಿನಿಸುಗಳನ್ನು ನಮ್ಮ ಅಡುಗೆ ಮನೆಯಲ್ಲಿ ಮತ್ತೆ ತಯಾರಿಸಲು ಸಾಧ್ಯ. ಇದಕ್ಕೆ ಮುಖ್ಯವಾಗಿ, ಮನೆಯಲ್ಲಿ ಅಡುಗೆ ಮಾಡುವವರ ಆಸಕ್ತಿ ಸಹಕಾರ ಅಗತ್ಯ. ನಮ್ಮ ಮನೆಯಲ್ಲಿ, ಮಡದಿಯ ಸಹಕಾರದಿಂದ ಪುನಃ ಪ್ರತ್ಯಕ್ಷವಾದ ಒಂದು ಹಳೆಯ ಕಾಲದ ತಿನಿಸು, ಇಂದು ಆಗಾಗ ಮನೆಯವರೆಲ್ಲರ ನಾಲಗೆಯ ರುಚಿದಾಹವನ್ನು ತಣಿಸುತ್ತಿದೆ, ‘ಇನ್ನೊಮ್ಮೆ ಮಾಡಿ ಬಡಿಸಿ’ ಎಂದು ಹೇಳಿಸಿಕೊಳ್ಳುವಷ್ಟು ಮನಗೆದ್ದಿದೆ.
ಅದೇ, ಹೀರೆಕಾಯಿ ದೋಸೆ. ನಮ್ಮ ಹಳ್ಳಿಯಲ್ಲಿ ಬಹು ಹಿಂದೆ ಗುಂಬಳ ಹೂವಿನ ದೋಸೆಯ ರೀತಿಯಲ್ಲೇ, ಹೀರೆಕಾಯಿ ದೋಸೆಯೂ ಜನಪ್ರಿಯವಾಗಿತ್ತು. ಕ್ರಮೇಣ, ನಮ್ಮಂಥ ಜನರು ಓದು ಬರಹ ಕಲಿತು ಪೇಟೆ-ಪಟ್ಟಣ ಸೇರಿದಂತೆ, ನಿಧಾನವಾಗಿ ಮರೆತುಹೋದ ತಿನಿಸುಗಳಲ್ಲಿ ಹೀರೆಕಾಯಿ ದೋಸೆಯೂ ಸೇರಿತ್ತು.
ಅದೊಂದು ದಿನ, “ಹೀರೆಕಾಯಿ ದೋಸೆ ಮುಂಚೆ ನಮ್ಮೂರಿನಲ್ಲಿ ಮಾಡುತ್ತಿದ್ದರು, ಈಚೆಗೆ ಕಡಿಮೆ ಯಾಗಿದೆಯಲ್ಲಾ! ಈಗಲೂ ನಮ್ಮ ಮನೆಯಲ್ಲಿ ತಯಾರಿಸೋಣ ಅಲ್ಲವೇ" ಎಂದು ಮಡದಿ ಹೇಳಿದಾಗ, ನನಗಂತೂ ಬಹುಖುಷಿ; ತಕ್ಷಣ ಒಂದಷ್ಟು ಹೀರೆಕಾಯಿ ತಂದೆವು.
ಒಣಮೆಣಸಿನ ಕಾಯಿಯೊಂದಿಗೆ ಅಕ್ಕಿಯನ್ನು ರುಬ್ಬಿ ಹಿಟ್ಟು ತಯಾರಿಸಿ, ದುಂಡಗೆ ಕತ್ತರಿಸಿದ ಹೀರೆಕಾಯಿ ಬಿಲ್ಲೆಗಳನ್ನು ಅದರಲ್ಲಿ ಅದ್ದಿ ದೋಸೆ ಕಲ್ಲಿನ ಮೇಲೆ ಒತ್ತೊತ್ತಾಗಿಟ್ಟು ದೋಸೆ ತಯಾರಿಸಲಾಯಿತು. ಇದಕ್ಕೂ ಅಷ್ಟೆ, ತುಸು ಎಣ್ಣೆಯ ಲೇಪನ ಅಧಿಕವಾಗಿಯೇ ಮಾಡಿದಾಗ, ಬಲುರುಚಿ.
ಹೀರೆಕಾಯಿ ದೋಸೆಯು ಈಗ ಎಷ್ಟು ಇಷ್ಟವಾಗಿದೆ ಎಂದರೆ, ಒಂದೆರಡು ವಾರಗಳ ಅಂತರದಲ್ಲಿ ಹೀರೆಕಾಯಿ ದೋಸೆಯು ನಮ್ಮ ಮನೆಯಲ್ಲಿ ದೋಸೆಕಲ್ಲಿನ ಮೇಲೆ ಪ್ರತ್ಯಕ್ಷವಾಗುತ್ತದೆ, ನಾಲಗೆಯ ರುಚಿದಾಹವನ್ನು ತಣಿಸುತ್ತದೆ.
ಹೀರೆಕಾಯಿಯು ಹೆಚ್ಚು ಫೈಬರ್ ಇರುವ ತರಕಾರಿ; ಅದು ದೋಸೆಯ ರೂಪದಲ್ಲಿ ಹೊಟ್ಟೆ ಸೇರಿದರೆ, ಆರೋಗ್ಯಕ್ಕೂ ಒಳ್ಳೆಯದು. ಇದನ್ನು ಬೆಳಗಿನ ತಿಂಡಿಗಿಂತಲೂ, ಮಧ್ಯಾಹ್ನದ ಊಟ ದೊಂದಿಗೆ ಸೇವಿಸಿದರೆ, ಹೆಚ್ಚು ಉಪಯೋಗ ಎಂಬ ಅನುಭವ ನಮ್ಮದು. ಹಾಗೆ ನೋಡಿದರೆ, ಹೀರೆಕಾಯಿ ದೋಸೆಯು ನಮ್ಮ ಹಳ್ಳಿಯಲ್ಲಿ ಅಡುಗೆಮನೆಯಿಂದ ಪೂರ್ತಿ ಕಣ್ಮರೆಯಾಗಿಲ್ಲ, ಮಲೆನಾಡು ಮತ್ತು ಕರಾವಳಿಯ ಜನರು ಈಗಲೂ ಈ ರುಚಿಕರ ದೋಸೆಯನ್ನು ಆಗಾಗ ತಯಾರಿಸಿ ತಿನ್ನುತ್ತಿದ್ದಾರೆ.
ಆದರೆ, ರೆಸ್ಟೋರೆಂಟುಗಳಲ್ಲಿ ತುಸು ಅಪರೂಪ; ಬೆಂಗಳೂರಿನಲ್ಲಿ ನೂರು ರೀತಿಯ ದೋಸೆ ತಯಾರಿಸುವ ಒಂದು ರೆಸ್ಟೋರೆಂಟಿನಲ್ಲಿ ಇದನ್ನು ಕಂಡಿದ್ದೆ. ಕಂಡಾಗ ಅಚ್ಚರಿಯೂ ಆಗಿತ್ತು. ‘ಪರವಾಗಿಲ್ವೆ, ಸರಳ ತರಕಾರಿಯಾದ ಹೀರೆಕಾಯಿಯು ಬೆಂಗಳೂರಿನಂಥ ಮಹಾನಗರದಲ್ಲೂ ದೋಸೆಯ ರೂಪ ತಳೆದಿದೆಯಲ್ಲಾ, ಭಲೇ ಹೀರೆಕಾಯಿ’ ಎಂಬ ಉದ್ಗಾರ ಮೂಡಿತ್ತು.
ನಮ್ಮ ಹಳ್ಳಿಯ ಇನ್ನೊಂದು ರುಚಿಕರ ಮತ್ತು ಅಷ್ಟೇ ಆರೋಗ್ಯಪೂರ್ಣ ತಿನಿಸು ಎಂದರೆ ಕೆಸುವಿನ ಸೊಪ್ಪಿನ ದೋಸೆ ಅಥವಾ ಚಟ್ಟಿ. ಮಳೆಗಾಲದಲ್ಲಿ ಮನೆಯ ಸುತ್ತಲೂ, ದಾರಿಯ ಬದಿಯಲ್ಲಿ, ಗದ್ದೆಯ ಬದಿಯಲ್ಲಿ ಬೆಳೆಯುವ ಕೆಸುವಿನ ಸೊಪ್ಪನ್ನು ಸಣ್ಣಗೆ ಹೆಚ್ಚಿ, ಗುಂಬಳ ಹೂವಿನ ರೀತಿ ಯಲ್ಲೇ, ಅಕ್ಕಿ ಹಿಟ್ಟಿನೊಂದಿಗೆ ಬೆರೆಸಿ, ದೋಸೆ ಕಲ್ಲಿನ ಮೇಲಿಟ್ಟು ತಯಾರಿಸುವ ಈ ದೋಸೆ, ಪೌಷ್ಟಿಕಾಂಶಗಳ ಆಗರ. ಇದರಲ್ಲಿ, ಕರಿ ಕೆಸುವಿನ ಸೊಪ್ಪಾದರೆ ತುಸು ರುಚಿ; ಮರಕೆಸುವಿನ ಸೊಪ್ಪಾದರೆ ಇನ್ನೂ ರುಚಿ. ಕೆಸುವಿನ ಸೊಪ್ಪಿನ ಪತ್ರೊಡೆಗೂ ಇದಕ್ಕೂ ಬಹಳ ವ್ಯತ್ಯಾಸವಿದೆ.
ವಿಶೇಷವೆಂದರೆ, ಕೆಸುವಿನ ಸೊಪ್ಪಿನ ದೋಸೆಯು ನಿಧಾನವಾಗಿ ಮರೆಯಾಗುತ್ತಿದೆ, ಆದರೆ ಕೆಸುವಿನ ಸೊಪ್ಪಿನ ಪತ್ರೊಡೆಯು ಪೇಟೆಗಳಲ್ಲಿ, ನಗರಗಳಲ್ಲಿ ಈಗ ಜನಪ್ರಿಯ ಖಾದ್ಯವಾಗಿ ಪ್ರವರ್ಧಮಾನಕ್ಕೆ ಬಂದಿದೆ. ಹಳೆಯ ಕಾಲದ ಕೆಲವು ಖಾದ್ಯಗಳು ಈಚಿನ ವರ್ಷಗಳಲ್ಲಿ, ಫ್ಯಾಷನ್‌ಗಾಗಿಯೋ, ಫ್ಯಾಷನ್ʼನಿಂದಲೋ ಪೇಟೆಯಲ್ಲೂ ಪರಿಚಯಗೊಳ್ಳುತ್ತಿರುವುದು, ಈ ಶತಮಾನದ ವಿಶೇಷ ಎಂದೇ ಹೇಳಬಹುದು.
ಅಂಥವುಗಳಲ್ಲೊಂದು ತಂಬುಳಿ! ಹಿಂದೆ ಮಲೆನಾಡು ಮತ್ತು ಕರಾವಳಿಯಲ್ಲಿ ಮಾತ್ರ ಬಳಕೆ ಯಲ್ಲಿದ್ದ ತಂಬುಳಿಯು ಇಂದು ಬೆಂಗಳೂರಿನ ವಿಶೇಷದ ಅಡುಗೆಗಳಲ್ಲೂ ಸ್ಥಾನ ಪಡೆದಿರುವುದು ವಿಸ್ಮಯವೇ ಸರಿ. ಇದಕ್ಕೆ ಅಡುಗೆ ಭಟ್ಟರೆ ಕೊಡುಗೆಯೂ ಇರಬಹುದಾದರೂ, ಅದರ ರುಚಿಗೆ ಮನಸೋತ ನಗರ ಗ್ರಾಹಕರು ಅದನ್ನು ತಮ್ಮ ರೆಸಿಪಿಯಲ್ಲಿ ಸೇರಿಸಿಕೊಳ್ಳಲು ಇಷ್ಟಪಟ್ಟಿದ್ದಂತೂ ಹೌದು.
ತಂಬುಳಿಗಳ ಕುರಿತು ಹೇಳುತ್ತಾ ಹೋದರೆ, ಸಾಕಷ್ಟು ವಿಚಾರಗಳಿವೆ. ಆರೋಗ್ಯದ ದೃಷ್ಟಿಯಲ್ಲಿ, ಔಷಧಿಯ ಅಂಶಗಳನ್ನು ನಮಗೆ ನೀಡುವ ನಿಟ್ಟಿನಲ್ಲಿ ತಂಬುಳಿಗಳ ಪಾತ್ರ ಬಲು ಹಿರಿದು. ಉದಾ ಹರಣೆಗೆ ಮೆಂತೆ ಕಾಳಿನ ತಂಬುಳಿ ರುಚಿಕರ ಮತ್ತು ಅದನ್ನು ಸೇವಿಸಿದರೆ ಅಸಿಡಿಸಿಯನ್ನು ನಿಯಂತ್ರಿಸಬಹುದು.
ಒಂದೆಲಗ ಸೊಪ್ಪಿನ ತಂಬುಳಿಯನ್ನು ಸೇವಿಸಿದರೆ, ಸ್ಮರಣ ಶಕ್ತಿ ಅಧಿಕವಾಗುತ್ತದೆಂಬ ನಂಬಿಕೆ ಇದೆ. ವಿವಿಧ ಸೊಪ್ಪುಗಳ ತಂಬುಳಿ ತಯಾರಿಸಬಹುದು. ನೇರಳೆ ಎಲೆ, ಚಗಟೆ ಸೊಪ್ಪು ಮೊದಲಾದ ತೀರಾ ಸಾಮಾನ್ಯ ಎನಿಸುವ ಎಲೆಗಳಿಂದಲೂ ತಂಬುಳಿ ತಯಾರಿಸುವ ಪದ್ಧತಿ ಕರಾವಳಿಯಲ್ಲಿದೆ.
ತಂಬುಳಿ ತಯಾರಿಸುವುದು ಬಲು ಸುಲಭ. ಬಯಲು ಸೀಮೆಯವರು ಸಹ ಇಂದು ಸುಲಭವಾಗಿ ತಂಬುಳಿ ತಯಾರಿಸುತ್ತಿದ್ದಾರೆ. ಏಕೆಂದರೆ, ಅದರ ರೆಸಿಪಿಯು ಸುಲಭವಾಗಿ ಆನ್‌ಲೈನ್‌ನಲ್ಲಿ ದೊರಕು ತ್ತಿದೆ. ತಂಬುಳಿಯ ಇನ್ನೊಂದು ಲಾಭವೆಂದರೆ, ಹೆಚ್ಚಿನ ಕೆಲಸವಿಲ್ಲದೆ, ಊಟಕ್ಕೆ ಸೂಕ್ತ ವ್ಯಂಜನ ವಾಗಿ ಇದನ್ನು ಬಳಸಬಹುದು!
ಹಳೆಯ ಕಾಲದ ತಿನಿಸುಗಳ ಕುರಿತು ಯೋಚಿಸುತ್ತಾ ಹೋದರೆ, ಸಣ್ಣದಾಗಿ ವಿಸ್ಮಯ ಎನಿಸುವ ವಿಚಾರಗಳೂ ಎದುರಾಗುತ್ತಿವೆ. ವಿಜ್ಞಾನ ಬೆಳೆದಂತೆಲ್ಲಾ, ಹೊಸ ಹೊಸ ವಿಷಯಗಳು ಬೆಳಕಿಗೆ ಬರುತ್ತಿವೆ. ಅವುಗಳಲ್ಲಿ ಒಂದು ಎಂದರೆ, ಹಲಸಿನ ಎಲೆಯಲ್ಲಿರುವ ಔಷಧಿಯ ಗುಣ. ಹಲಸಿನ ಎಲೆಯಲ್ಲಿ ಬಹು ಅಪರೂಪದ ರೋಗಗಳನ್ನು, ದೇಹದ ಸಮಸ್ಯೆಗಳನ್ನು ವಾಸಿಮಾಡುವ ಅಂಶ ಗಳಿವೆಯಂತೆ. ಆದರೆ, ಅದನ್ನು ಅಡುಗೆಯಲ್ಲಿ ಬಳಸುವುದು ಹೇಗೆ? ಅದಕ್ಕೆ ಸರಳ ಪರಿಹಾರ ವೆಂದರೆ, ಹಲಸಿನ ಎಲೆಯ ಕೊಟ್ಟೆ (ಮೂಡೆ) ಕಡುಬು.
ಇದೊಂದು ಬಹು ಸುಲಭವಾಗಿ ತಯಾರಿಸಬಹುದಾದ ತಿನಿಸು. ನಮ್ಮ ರಾಜ್ಯದ ಹಲವರಿಗೆ ಹಲಸಿನ ಎಲೆಯನ್ನು ಈ ರೀತಿ ಬಳಸಬಹುದು ಎಂದೇ ಗೊತ್ತಿಲ್ಲ. ಇಡ್ಲಿ ತಯಾರಿಸುವ ಹಿಟ್ಟನ್ನು ಹಲಸಿನ ಎಲೆಯಲ್ಲಿಟ್ಟು ಬೇಯಿಸಿದರೆ ಕೊಟ್ಟೆ ಕಡುಬು ಸಿದ್ಧ. ನಾಲ್ಕು ಹಲಸಿನ ಎಲೆಗಳನ್ನು ಕಡ್ಡಿ ಸಹಾಯ ದಿಂದ ಬಂಧಿಸಿ, ಪುಟ್ಟ ಲೋಟದ ಆಕೃತಿಯನ್ನಾಗಿಸಿ, ಅದರಲ್ಲಿ ಇಡ್ಲಿ ಹಿಟ್ಟನ್ನು ಸುರಿದು, ಹಬೆಯಲ್ಲಿ ಬೇಯಿಸಿದರಾಯಿತು.
ಎಲೆಯೊಳಗೆ ಹಿಟ್ಟು ಬೇಯುವುದರಿಂದಾಗಿ, ತಯಾರಾಗುವ ಕಡುಬು ಅಥವಾ ಇಡ್ಲಿಗೆ ವಿಶೇಷ ಮೃದುತ್ವ ಬರುತ್ತದೆ, ರುಚಿಯೂ ಬರುತ್ತದೆ. ಹಲಸಿನ ಎಲೆಯಲ್ಲಿರಬಹುದಾದ ಔಷಧಿಯ ಅಂಶ ಗಳು ಸಹ, ಹಬೆಯಲ್ಲಿ ಬೇಯುವಾಗ, ಕಡುಬಿನಲ್ಲಿ ಸೇರಿಕೊಳ್ಳುತ್ತವೆ. ಇಂದು ಪಟ್ಟಣ ಮತ್ತು ನಗರ ದಲ್ಲಿರುವವರಿಗೆ ಹಲಸಿನ ಎಲೆಯ ಕೊಟ್ಟೆಯನ್ನು ತಯಾರಿಸಲು ತಿಳಿದಿಲ್ಲ ಎಂದಿಟ್ಟು ಕೊಳ್ಳೋಣ; ಅದಕ್ಕೆ ಒಂದು ಪರಿಹಾರವಿದೆ!
ಹಲವು ಆನ್‌ಲೈನ್ ವ್ಯಾಪಾರ ಸಂಸ್ಥೆಗಳು ಹಲಸಿನ ಎಲೆಯ ಕೊಟ್ಟೆಯನ್ನು ಮಾರಾಟ ಮಾಡು ತ್ತವೆ! (ಜ್ಯಾಕ್ ಫ್ರುಟ್ ಲೀಫ್- ಇಡ್ಲಿ ಮೌಲ್ಡ್ ಅಥವಾ ಕೊಟ್ಟೆ ಎಂದು ಸರ್ಚ್ ಮಾಡಿ ನೋಡಿ!) ಅದನ್ನು ತರಿಸಿ, ಇಡ್ಲಿ ಹಿಟ್ಟನ್ನು ಹಾಕಿ ಬೇಯಿಸಿ ನೋಡಿ, ಬಲು ರುಚಿಯ ಹಲಸಿನ ಎಲೆಯ ಕೊಟ್ಟೆ ಕಡುಬು ಸಿದ್ಧವಾಗುತ್ತದೆ. ಬೆಂದ ನಂತರ, ಎಲೆಯನ್ನು ತೆಗೆದಿಟ್ಟು, ಕಡುಬನ್ನು ಚಟ್ನಿ ಅಥವಾ ಸಾಂಬಾರಿನ ಜತೆ ಸೇವಿಸಬಹುದು!
ನಮ್ಮ ರಾಜ್ಯದ ಇತರ ಭಾಗಗಳಲ್ಲೂ ಹಲವು ಹಳೆಯ ತಿನಿಸುಗಳು ನಿಧಾನವಾಗಿ ಕಣ್ಮರೆ ಯಾಗುತ್ತಿವೆ. ಅದರಲ್ಲೂ ಮುಖ್ಯವಾಗಿ, ನಗರಗಳತ್ತ ವಿವಿಧ ಕಾರಣಗಳಿಂದ ವಲಸೆ ಬಂದವರು, ಹಳೆಯ ರೆಸಿಪಿಗಳನ್ನು ಮರೆಯುವುದು ಜಾಸ್ತಿ (ಒಮ್ಮೊಮ್ಮೆ ಅದು ಅನಿವಾರ್ಯವೂ ಹೌದು ಎಂಬ ವಾದವಿದೆ). ಆದರೆ, ಈಚಿನ ವರ್ಷಗಳಲ್ಲಿ ಮಹಾನಗರಗಳಲ್ಲಿ, ಹಳ್ಳಿಯ ತಿನಿಸುಗಳನ್ನು ನೆನಪಿಸುವ ರೆಸ್ಟೋರೆಂಟುಗಳು ಅಲ್ಲಲ್ಲಿ ತಲೆ ಎತ್ತುತ್ತಿರುವುದು ಮತ್ತೊಂದು ಆಧುನಿಕ ವಿದ್ಯಮಾನ!
ಅಲ್ಲಿನ ಮೆನುವಿನಲ್ಲಿ, ಹೊಸ ತಿನಿಸುಗಳೇ ಜಾಸ್ತಿ ಕಾಣಿಸಿದರೂ, ರೆಸ್ಟೋರೆಂಟಿನ ಹೆಸರು ಹಳೆಯ ಕಾಲವನ್ನು ನೆನಪಿಸುವುದರಿಂದಾಗಿ, ಜನರು ಅವುಗಳತ್ತ ಆಕರ್ಷಿತರಾಗುತ್ತಿದ್ದಾರೆ! ಬೆಂಗಳೂರಿನಂಥ ಮಹಾನಗರದ ರೆಸ್ಟೋರೆಂಟುಗಳಲ್ಲಿ ಹಳೆಯ ಕಾಲದ ತಿನಿಸುಗಳು ದೊರೆಯುತ್ತಿರುವುದು ವಿಶೇಷ. ಕೆಲವು ರೆಸ್ಟೋರೆಂಟುಗಳ ಹೆಸರು ಸಹ ಹಳ್ಳಿಯ ಹೆಸರನ್ನು, ಕೈಯಿಂದ ತಯಾರಿಸುವ ರುಚಿಯನ್ನು ನೆನಪಿಸುತ್ತವೆ! ಏನಿದ್ದರೂ, ಹೊಸ ತಿನಿಸುಗಳನ್ನು ತಿಂದು ಅರಗಿಸಿಕೊಳ್ಳೋಣ, ಜತೆಯಲ್ಲೇ ಹಳೆಯ ತಿನಿಸುಗಳನ್ನು ಸಹ ಸೇವಿಸೋಣ!