ವಿದ್ಯಮಾನ
7 ದಶಕಗಳಿಗೂ ಹಿಂದೆ, ಭಾರತದ ಸಮಷ್ಟಿಯ ಭಾಷಾ ವಿಮರ್ಷೆಗಾಗಿ ಸಿ.ರಾಜಗೋಪಾಲಾಚಾರಿ ಯವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಗೆ ನಮ್ಮ ಡಿ.ವಿ.ಗುಂಡಪ್ಪನವರು ಸವಿಸ್ತಾರವಾದ ಅಭಿಪ್ರಾಯವೊಂದನ್ನು ಕಳುಹಿಸುತ್ತಾರೆ. ನಂತರ ಅದರ ಕೆಲವು ಭಾಗಗಳು (1958ರಲ್ಲಿ) ‘ಹಿಂದು’ ಪತ್ರಿಕೆಯಲ್ಲಿಯೂ ಪ್ರಕಟವಾಗುತ್ತೆ.
ಭಾಷಾ ವಿವಾದ, ಸರಿಯಾದ ಭಾಷಾ ನೀತಿಯ ಇಂದಿನ ಅಗತ್ಯ ಹಾಗೂ ಹಿಂದಿ ಹೇರಿಕೆ ಮುಂತಾದ ವಿಷಯಗಳನ್ನೊಳಗೊಂಡ ಡಿವಿಜಿಯವರ ಈ ವಿಶಿಷ್ಟ ವಿಚಾರ ಧಾರೆಯನ್ನು ಅವರ ಕೃತಿಶ್ರೇಣಿಯ 11ನೇ ಸಂಪುಟದಲ್ಲಿ ‘ಇಂಡಿಯಾದ ಭಾಷಾ ಪ್ರಶ್ನೆ’ ಎನ್ನುವ ಹೆಸರಿನಡಿಯಲ್ಲಿ ಅಳವಡಿಸಲಾಗಿದೆ.
ಪ್ರಾದೇಶಿಕ ಭಾಷೆಯ ಇತಿಮಿತಿ, ಸಂಸ್ಕೃತದ ಹೆಚ್ಚುಗಾರಿಕೆ, ದೇಶದ ಐಕಮತ್ಯದ ನೆಪದಲ್ಲಿ ಹಿಂದಿ ಭಾಷೆಯ ಅನಗತ್ಯ ಹೇರುವಿಕೆ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಇಂದಿನ ಅಗತ್ಯಗಳನ್ನು ಪೂರೈ ಸಲು ನಮಗೆ ಇರುವ ಇಂಗ್ಲೀಷಿನ ಅವಶ್ಯಕತೆಗಳ ಕುರಿತು ಅತ್ಯಂತ ಮನೋಜ್ಞವಾಗಿ ತಿಳಿಸಿದ್ದಾರೆ. ಅದರಲ್ಲಿ ಅವರು ಭಾಷಾ ದುರಭಿಮಾನವನ್ನೂ ಅತ್ಯಂತ ತರ್ಕಬದ್ಧವಾಗಿ ದೂಷಿಸುತ್ತಾರೆ.
ಇಂಗ್ಲೀಷು ಎಷ್ಟು ಬೇಕು, ನಮ್ಮ ಭಾಷೆಯ ಬೆಳವಣಿಗೆಯಲ್ಲಿ ಇಂಗ್ಲೀಷ್ ಹೇಗೆ ಸಹಾಯಕ ವಾಗಬಹುದು ಎಂದು ಡಿವಿಜಿ ಅತ್ಯಂತ ಜಾಣ್ಮೆಯಿಂದ ತೋರಿಸುತ್ತಾರೆ. ಕಳೆದ ವಾರ ತ್ರಿಭಾಷಾ ಸೂತ್ರದ ಕುರಿತು ಕುವೆಂಪು ಅವರ ‘ತ್ರಿಶೂಲ’ ಎನ್ನುವ ಅಷ್ಟೊಂದು ಸಮಂಜಸವಲ್ಲದ ಹಾಗೂ ತೀಕ್ಷ್ಣ ಟಿಪ್ಪಣಿಯ ಬಗ್ಗೆ ಬರೆದಿದ್ದೆ.
ಇದನ್ನೂ ಓದಿ: Vinayak M Bhat Column: ತ್ರಿಭಾಷಾ ಸೂತ್ರವಲ್ಲ, ಬೇಕಾದ್ದು ಬಹುಭಾಷೆಗಳಲ್ಲಿ ದ್ವಿಭಾಷೆ
ಮಾತೃ ಭಾಷೆಯ ಕಲಿಕೆಯ ಜತೆಗೆ ಇಂಗ್ಲೀಷ್ ಕಲಿಕೆಯ ಇಂದಿನ ಅಗತ್ಯ ಮತ್ತು ತೃತೀಯ ಭಾಷೆ ಯಾಗಿ ಹಿಂದಿಯನ್ನಲ್ಲ, ಸಂಸ್ಕೃತವನ್ನು ಕಲಿಸಬೇಕು ಎನ್ನುವ ಸರ್ವ ಕಾಲಕ್ಕೂ ಒಪ್ಪುವ ಒಂದು ‘ಪ್ರಾಕ್ಟಿಕಲ’ ಹಾಗೂ ಸರಳ ಸೂತ್ರವನ್ನು ಡಿವಿಜಿಯವರು ಮಂಡಿಸಿರುವುದನ್ನು ಈ ಕಾಲಘಟ್ಟದಲ್ಲಿ ನಾವು ಕನ್ನಡಿಗರು ಒಮ್ಮೆ ಅರಿಯುವುದೊಳಿತು ಎನ್ನುವ ಕಾರಣಕ್ಕೆ, ಅವರ ಲೇಖನದ ತಿರುಳನ್ನು ಅವರದೇ ಶಬ್ಧಗಳಲ್ಲಿ ಈವಾರ ನೀಡುತ್ತಿದ್ದೇನೆ.
ಓದಿದರೆ ನಿಮಗೂ ಡಿವಿಜಿಯವರ ಸಾರ್ವಕಾಲಿಕ ನಿಲುವು ಸರಿಯೆನಿಸುವುದರಲ್ಲಿ ಸಂಶಯವಿಲ್ಲ. ಮನುಷ್ಯ ಜೀವನವು ಎಲ್ಲ ಭಾಷೆಗಳಿಗಿಂತ ದೊಡ್ಡದು. ಜೀವನವನ್ನು ಆದಷ್ಟು ವಿಶಾಲವಾಗಿ, ಸಾರ್ಥಕವಾಗುವಂತೆ ನಡೆಸಬೇಕೆನ್ನುವ ಜನಕ್ಕೆ ಲೋಕದಲ್ಲಿರುವ ಯಾವ ಒಂದು ಭಾಷೆ ಸಾಕಾಗದು.
ಭಾಷಾ ವಿಷಯದಲ್ಲಿ ಸ್ವೀಯತಾಮಾತ್ರ ತೃಪ್ತಿಯ (Self-sufficiency) ನೀತಿ ಸಾಲದು. ಆ ಜನಕ್ಕೆ ಅನ್ಯಭಾಷೆಯ ಸಹಾಯವಿದ್ದ ಹೊರತು ಅವರ ಬದುಕು ತುಂಬುಬದುಕಾಗಲಾರದು. ಅನ್ಯಭಾಷೆ ಯನ್ನು ಮುಟ್ಟೆವೆಂದು ವ್ರತ ತೊಟ್ಟರೆ, ಅದರಿಂದ ಅವರ ವ್ಯಕ್ತಿತ್ವದ ಯಾವುದೋ ಒಂದು ಭಾಗಕ್ಕೆ ಕೊರತೆಯಾಗಿ ಅದು ಕುಗ್ಗುತ್ತದೆ. ಹೀಗೆ ಜೀವನ ಪರಿಪೂರ್ಣತಾ ದೃಷ್ಟಿಯಿಂದ ಅನ್ಯ ಭಾಷಾ ಸಹಾಯ ಅವಶ್ಯವಾಗುತ್ತದೆ.
ಅನ್ಯಭಾಷಾ ಸಹಾಯವನ್ನು ತೆಗೆದುಕೊಳ್ಳುವುದೆಂದರೆ ಪ್ರಪಂಚದಲ್ಲಿಯ ಎಲ್ಲ ಭಾಷೆಗಳನ್ನೂ ಕಲಿಯುವುದೆಂದು ಅರ್ಥವಲ್ಲ. ಇರುವ ಎಲ್ಲ ಭಾಷೆಗಳನ್ನೂ ಕಲಿಯುವುದು ನಮಗೆ ಸಾಧ್ಯವೂ ಅಲ್ಲ, ಅದು ಅವಶ್ಯವೂ ಅಲ್ಲ. ನಮ್ಮ ಭಾಷೆಯಿಂದ ಬೇರೆಯಾದ ಭಾಷೆ ಒಂದನ್ನೋ ಎರಡನ್ನೂ ಮಾತ್ರ ಕಲಿಯಬೇಕೆಂಬುದು ತಾತ್ಪರ್ಯ.
ನಮ್ಮ ಸ್ವಂತ ಭಾಷೆಯಲ್ಲಿ ಯಾವ ಯಾವ ಗುಣಾಂಶಗಳೂ ಶಕ್ತಿ ವಿಶೇಷಗಳೂ ತಕ್ಕಷ್ಟು ಬೆಳೆದಿಲ್ಲ ವೋ ಅಂಥಾ ಗುಣಶಕ್ತಿಗಳನ್ನು ಸಮೃದ್ಧಿಯಾಗಿ ಪಡೆದಿರುವ ಭಾಷೆಯನ್ನು ನಾವು ಆರಿಸಿಕೊಳ್ಳ ಬೇಕು. ಆರಿಸಿಕೊಂಡ ಭಾಷೆಯ ಸಂಪತ್ತಿನಿಂದ ನಮ್ಮ ಭಾಷೆಯ ಬಡತನ ತೊಲಗುವಂತಿರಬೇಕು.
ವಿಷಯ ಮೊದಲು, ಭಾಷೆ ಆಮೇಲೆ. ವ್ಯವಹಾರಕ್ಕೆ ವಿಷಯವೇ ಇಲ್ಲದಾಗ ಕಲಿತ ಭಾಷೆ ಬರಿಯ ಹೊರೆಯಾಗುತ್ತದೆ. ಹೀಗೆ ನೋಡಿದಲ್ಲಿ ಸ್ವಪ್ರದೇಶ ಭಾಷೆ, ಇಂಗ್ಲೀಷ್ ಭಾಷೆ ಇವೆರಡೇ ಪ್ರತಿಯೊಬ್ಬ ಭಾರತೀಯನಿಗೂ ಇರಬೇಕಾದ ಕನಿಷ್ಠ ಪ್ರಮಾಣದ ಅವಶ್ಯ ಭಾಷಾಜ್ಞಾನ ಎಂದು ನಿಶ್ಚಿತ ವಾಗುತ್ತದೆ. ಆ ಎರಡು ಭಾಷೆಗಳಿಗೂ ವಿದ್ಯಾಭ್ಯಾಸಕ್ರಮದಲ್ಲಿ ಸ್ಥಳ ಮಾಡಿಕೊಟ್ಟ ಮೇಲೆ, ಮೂರನೆಯ ಸ್ಥಳ ಸಂಸ್ಕೃತಕ್ಕೆ ಯುಕ್ತವಾಗುತ್ತದೆ. ಈ ಮೂರಲ್ಲದೆ ಬೇರೆ ಯಾವ ಭಾಷೆ ಬೇಕೆಂದ ರೂ ಅದಕ್ಕೆ ತಕ್ಕದ್ದು ನಾಲ್ಕನೆಯ ಜಾಗ.
ಹಿಂದಿ ಭಾಷೆಯ ಪ್ರಸ್ತಾವ ನಮಗೆ ಇಲ್ಲಿ ಅಪ್ರಕೃತ, ಅದು ಭಾರತದಲ್ಲಿ ಬಹುಜನ ಬಳಸುವ ಬಲಿಷ್ಠ ಭಾಷೆ, ಆ ಭಾಷೆಯಲ್ಲಿ ಮಹಾಕಾವ್ಯಗಳುಂಟೆಂಬುದನ್ನು ಯಾರೂ ಅಲ್ಲಗಳೆಯಲಾರರು, ಹಿಂದಿ ಯಲ್ಲಿ ತುಲಸೀದಾಸರ ರಾಮಾಯಣ ಪ್ರಸಿದ್ಧವಾಗಿದ್ದರೆ ಕನ್ನಡದಲ್ಲಿ ತೊರವೆಯ ರಾಮಾಯಣ ವೂ, ತಮಿಳಿನಲ್ಲಿ ಕಂಬ ರಾಮಾಯಣವೂ, ತೆಲುಗಿನಲ್ಲಿ ರಂಗನಾಥ ರಾಮಾಯಣವೂ ಪ್ರಸಿದ್ಧ ವಾಗಿವೆ.
ಈಗಣ ಪ್ರಶ್ನೆ ಹಿಂದಿಯಲ್ಲಿ ಉತ್ತಮ ಗ್ರಂಥಗಳಿಲ್ಲವೆ ಎಂಬುದಲ್ಲ. ನಮಗೆ ಕನ್ನಡಿಗರಿಗೆ ಈಗ ಅವಶ್ಯ ವಾಗಿರುವ ಹೊಸ ವಿಜ್ಞಾನಾದಿ ಪ್ರಕೃತಪ್ರಯುಕ್ತ ಸಾಹಿತ್ಯ ಹಿಂದಿಯಲ್ಲುಂಟೆ ಎಂಬುದು ಪ್ರಶ್ನೆ, ಈ ಭಾಗದಲ್ಲಿ ಕನ್ನಡ ತಮಿಳು ತೆಲುಗುಗಳು ಯಾವ ಮಟ್ಟದಲ್ಲಿವೆಯೋ ಹಿಂದಿ ಅದಕ್ಕಿಂತ ಮೇಲ್ಪಟ್ಟೇ ನೂ ಇಲ್ಲವೆಂಬುದು ಖಂಡಿತ.
ಸಮಸ್ತ ಭಾರತಕ್ಕೂ ಏಕೈಕ ಭಾಷೆ ಒಂದಿರಬೇಕೆಂಬುದರ ಉದ್ದೇಶವೇನು? ಅದರಿಂದ ಜನದಲ್ಲಿ ಐಕಮತ್ಯ ಬಲವಡುತ್ತದೆ ಎಂಬುದಲ್ಲವೆ? ಕಿವಿಗೆ ಆ ವಾದ ಯುಕ್ತವೆನಿಸುತ್ತದೆ; ವಿಚಾರಕ್ಕೆ ಅದು ಅಷ್ಟು ಯುಕ್ತವೆಂದು ತೋರದು. ಭಾಷೆ ಏಕವಾದರೆ ಜನ ಏಕವಾಗುತ್ತದೆ ಎಂಬ ಖಾತ್ರಿ ಎಲ್ಲಿದೆ? ಇಂಗ್ಲೆಂಡೂ ಅಮೆರಿಕವೂ ಒಂದೇ ಭಾಷೆಯನ್ನಾಡುತ್ತವೆ. ಅವೆರಡೂ ಏಕರಾಷ್ಟ್ರವಲ್ಲ.
ಅವೆರಡಕ್ಕೂ ಎಷ್ಟೋ ವೇಳೆ ಭೇದಗಳೂ ಮನಸ್ತಾಪಗಳೂ ಆಗಿವೆ. ಇನ್ನೆಷ್ಟೋ ರಾಷ್ಟ್ರಗಳಲ್ಲಿ ಎರಡೋ ಮೂರೋ ಭಾಷೆಗಳು ನೆಲಸಿಕೊಂಡಿವೆ. ಆ ರಾಷ್ಟ್ರಗಳಲ್ಲಿ ಜನೈಕಮತ್ಯಕ್ಕೆ ಅವರ ಅನೇಕ ಭಾಷೀಯತ್ನದಿಂದ ಎಷ್ಟು ಮಾತ್ರವೂ ಕುಂದಾಗಿಲ್ಲ. ನಮ್ಮ ದೇಶದಲ್ಲಿ ಈಗ ಪ್ರಚಾರದಲ್ಲಿರುವ ಮತಗಳು ನೂರಾರು, ಜನೈಕಮತ್ಯಕ್ಕೋಸ್ಕರ ಆ ಮತಗಳನ್ನೆಲ್ಲ ರದ್ದುಪಡಿಸಿ, ಅವುಗಳ ಜಾಗದಲ್ಲಿ ಒಂದೇ ಒಂದು ಮತವನ್ನು ಸ್ಥಾಪಿಸಬೇಕೆಂದು ಯಾರಾದರೂ ಹೊರಟಿದ್ದಾರೆಯೆ? ಭಾಷೆ ಮತ ಗಳೇಕೆ, ಆಹಾರ ವಸ್ತ್ರ ವೇಷಗಳೆಲ್ಲದರಲ್ಲಿಯೂ ಐಕಮತ್ಯವನ್ನು ನಿರ್ಬಂಧದಿಂದ ತಂದರೆ ಜನದ ಹೃದಯಗಳಲ್ಲಿ ಐಕಮತ್ಯ ಉಂಟಾಗುತ್ತದೆಯೇ ಎಂದರೆ, ಇಲ್ಲವೆನ್ನುವುದೇ ಉತ್ತರವಾಗುತ್ತದೆ.
ಒಂದು ಅವಾಸ್ತವಿಕವಾದ ಧ್ಯೇಯವನ್ನು ಮನಸ್ಸಿನಲ್ಲಿ ಮಾಡಿಕೊಂಡು, ಜನದ ಮೇಲೆ ಒಂದು ಹೊಸ ಭಾಷೆಯ ಭಾರವನ್ನು ಹೇರುವುದು ಯಾರಿಗೂ ಹಿತವೆನಿಸದು.
ಹೀಗೆ ಯಾವ ದೃಷ್ಟಿಯಿಂದ ನೋಡಿದರೂ ನಮ್ಮ ದೇಶದ ಇಂದಿನ ಸ್ಥಿತಿಯಲ್ಲಿ ಇಂಗ್ಲೀಷನ್ನು ಬೇಡವೆನ್ನುವುದೂ, ಹಿಂದಿ ಭಾಷಿಗಳಲ್ಲದವರ ಮೇಲೆ ಹಿಂದಿಯನ್ನು ಹೇರ ಬೇಕೆನ್ನುವುದು ಅಸಂಗತಗಳಾದ ವಾದಗಳು. ಇಂಗ್ಲೀಷು ನಮಗೆ ಮಾಡಿರುವ ಅಪಕಾರವೇನು? ಪ್ರಪಂಚದ ಯಾವ ಭಾಷೆಯೇ ಆಗಲಿ, ಅದರಲ್ಲಿ ಗುಣವಿದ್ದರೆ ಅದು ನಮ್ಮ ಮನ್ನಣೆಯನ್ನು ಪಡೆಯಲೇಬೇಕು.
ತತ್ತ್ವದಲ್ಲಿ ಎಲ್ಲ ಭಾಷೆಗಳೂ ಭಗವದ್ ವಾಣಿ ಎಂಬುದೇ ನಮ್ಮ ಪೂರ್ವಿಕರ ಮತ. ಇಂಗ್ಲೀಷು ಕೂಡ ಭಗವದ್ವಾಣಿಯ ಒಂದು ರೂಪ ‘ದೇವೀಂ ವಾಚಮಜನಯಂತ ದೇವಾಃ ವಿಶ್ವರೂಪಾಸ್ತಾಂ ಪಶವೋ ವದಂತಿ’ ದೇವತೆಗಳು ವಾಕ್ಯನ್ನು ಸೃಷ್ಟಿಮಾಡಿದರು. ಆ ಒಂದೇ ದೇವತಾವಾಕ್ಕು ಜಗತ್ತಿನ ಪಶು ಪಕ್ಷಿ ಮನುಷ್ಯಾದಿಗಳಲ್ಲಿ ನಾನಾ ರೂಪಗಳನ್ನು ತಾಳಿ ಪ್ರಯೋಗದಲ್ಲಿದೆ.
“ಸಂಸ್ಕೃತ, ಇಂಗ್ಲೀಷ್, ಕನ್ನಡ, ತೆಲುಗು, ತಮಿಳು-ಇವೆಲ್ಲವೂ ಸಮಾನವಾಗಿ ಭಗವದ್ವಾಣಿಯೇ ಹೊರತು ಬೇರೆ ಅಲ್ಲ. ಆದದ್ದರಿಂದ ಅವೆಲ್ಲವೂ ಭಗವತ್ಪಸಾದವನ್ನು ರೂಪಗೊಳಿಸಿದವೇ ಸರಿ. ಹೀಗೆಂದ ಮೇಲೆ ಇಂಗ್ಲೀಷಿನಲ್ಲಿರುವ ದೋಷವೇನು? ನಮ್ಮ ದೇಶಭಾಷೆಗಳಲ್ಲಿ ಈಗ ಇರುವ ದಾರಿದ್ರ್ಯವನ್ನು ಪರಿಹಾರ ಮಾಡಬಲ್ಲ ಶಕ್ತಿಯೂ, ಸಂಸ್ಕೃತ ಸಾಹಿತ್ಯದಲ್ಲಿ ಅಡಗಿರುವ ದಿವ್ಯರತ್ನ ಗಳನ್ನು ಪ್ರಪಂಚಕ್ಕೆ ಎತ್ತಿ ತೋರಿಸುವ ಶಕ್ತಿಯೂ, ಇಂಡಿಯ ದೇಶವನ್ನೆಲ್ಲ ಒಟ್ಟುಗೂಡಿಸಿ ಅದಕ್ಕೆ ರಾಜಕೀಯ ಸಮುನ್ನತಿಯನ್ನು ತಂದುಕೊಡುವ ಶಕ್ತಿಯೂ ಯಾವ ಭಾಷೆಗೆ ಉಂಟು ಎಂಬುದು ನಮಗೆ ಅನುಭವಸಿದ್ಧವಾಗಿದೆಯೋ ಅಂಥ ಇಂಗ್ಲೀಷನ್ನು ನಾವು ವರ್ಜಿಸಬೇಕೆಂಬುದರಲ್ಲಿ ನ್ಯಾಯ ವೇನಿದೆ? ನಮ್ಮ ಮುಂದಿರುವ ಪ್ರಶ್ನೆ ಭಾರತೀಯತೆಯ ಪ್ರಶ್ನೆ. ಭಾರತೀಯತೆಯ ಪ್ರಶ್ನೆ ಎಂದರೆ ಭರತಖಂಡದ ಜನತೆಯ ಜೀವನವನ್ನು ಸದ್ಯಃ ಪ್ರಪಂಚಕ್ಕೆ ಸಮನ್ವಯಗೊಳಿಸುವುದು ಎಂದು ತಾತ್ಪರ್ಯ.
ಇಂದಿನ ಪ್ರಪಂಚದಲ್ಲಿ ಕಾಣ ಬರುವ ಅಂಶಗಳನ್ನು ವಿಚಾರ ಮಾಡಿ, ಅದರಲ್ಲಿ ಒಳ್ಳೆಯವಾದು ವನ್ನು ಇಂಡಿಯ ಅಂಗೀಕರಿಸಿಕೊಳ್ಳಬೇಕು; ಮತ್ತು ಪ್ರಪಂಚಕ್ಕೆ ಉಪಕಾರಕವಾಗಿ ತನ್ನಲ್ಲಿರುವ ಅಂಶಗಳನ್ನು ಇತರ ಜನತೆಗಳಿಗೆ ಕೊಡಲು ಸಮರ್ಥವಾಗಬೇಕು. ಈ ಇಂಡಿಯ ಪ್ರಪಂಚಗಳ ಸಮರಸ ಸವ್ಯವಹಾರವೇ ಇಂದು ಆಗಬೇಕಾದ ಜಗತ್ಕಲ್ಯಾಣ. ಇದಕ್ಕೆ ತಕ್ಕ ಸಿದ್ಧತೆಯೇ ಭಾರತ ಜೀವನದ ಅಭಿನವೀಕರಣ.
ಈ ನವೀಕರಣಕ್ಕೆ ಅವಶ್ಯವಾದ ಉಪಕರಣ ಇಂಗ್ಲೀಷು, ಅದು ಇಂಡಿಯದ ಆರ್ಷೇಯ ಸಂಸ್ಕೃತಿ ಯೊಡನೆ ಸಹಕರಿಸಲು ಸಿದ್ಧವಾಗಿದೆ. ಅದನ್ನು ಬೇಡವೆನ್ನುವವರು ಈ ಸಂಸ್ಕೃತ ಗಾದೆಯನ್ನು ನೆನಪಿಗೆ ತಂದುಕೊಳ್ಳಲಿ ‘ಸಿದ್ಧಮನ್ನಂ ಪರಿತ್ಯಜ್ಯ ಭಿಕ್ಷಾಮಟತಿ ದುರ್ಮತಿಃ’ ಭೋಜನಕ್ಕಾಗಿ ಎಲೆ ಯಲ್ಲಿ ಬಡಿಸಿರುವ ಮೃಷ್ಟಾನ್ನವನ್ನು ಬಿಟ್ಟು, ಬೀದಿಯಲ್ಲಿ ತಿರುಪೆಗೆ ಹೊರಡುವವನನ್ನು ಏನನ್ನ ಬೇಕು? ಪ್ರಪಂಚದ ಯಾವ ಭಾಷೆಯೇ ಆಗಲಿ, ಅದರಲ್ಲಿ ಗುಣವಿದ್ದರೆ ಅದು ನಮ್ಮ ಮನ್ನಣೆಯನ್ನು ಪಡೆಯಲೇಬೇಕು.
ಹಿಂದಿ ಭಾಷೆಯನ್ನು ಸಕಲ ವ್ಯವಹಾರಾರ್ಹವನ್ನಾಗಿ ಮಾಡಲಾದೀತೆಂಬುದು ಅಭಿಮಾನದ ಮಾತೇ ಹೊರತು ಅನುಭವ ಸಿದ್ಧವಾದ ಮಾತಲ್ಲ. ಹುಟ್ಟಿನಿಂದ ಹಿಂದಿಗಳಲ್ಲದವರು ಹಿಂದಿಯನ್ನು ಕಲಿತುಕೊಳ್ಳುವ ಕಷ್ಟವನ್ನು ಸಹಿಸಬೇಕೆನ್ನಲು, ಆ ಕಷ್ಟಕ್ಕೆ ತಕ್ಕಂಥ ಭವಿಷ್ಯತ್ ಪ್ರತಿಫಲದ ಸೂಚನೆ ಯಾವುದೂ ಈಗ ಇಲ್ಲ.
ಆ ವಾದದಲ್ಲಿ ಹಟ ತೋರುತ್ತಿದೆಯೇ ಹೊರತು ಕಾರಣಾಧಾರಗಳು ತೋರುತ್ತಿಲ್ಲ. ಒಂದು ಸಮಸ್ತ ಭಾರತ ಭಾಷೆ ಪೂರ್ವದಿಂದ ಸ್ವಾಭಾವಿಕವಾಗಿ ಬಂದ್ದಿದ್ದರೆ ಅದನ್ನು ತೊಡೆದು ಹಾಕಬೇಕೆಂದು ಯಾರೂ ವಾದಿಸುತ್ತಿರಲಿಲ್ಲ. ಸಂಸ್ಕೃತ ಅಂಥ ಭಾಷೆ. ಅದಕ್ಕೆ ಯಾರೂ ವಿರೋಧಿಗಳಲ್ಲ, ಸಂಸ್ಕೃತ ಭಾಷೆಯ ವಾಕ್ಯಗಳು ಸಾಮಾನ್ಯಜನದ ಮಾತುಕಥೆಯಲ್ಲಿ ಇಲ್ಲದಿದ್ದರೂ ಸಂಸ್ಕೃತದ ಮಾತುಗಳು ಅವರಲ್ಲಿ ಎಲ್ಲಿಯೂ ಬಳಕೆಯಲ್ಲಿವೆ.
ಜೀವನ ಧರ್ಮಕ್ಕೆ ಮುಖ್ಯವಾದ ಸಂಸ್ಕೃತ ಪದಗಳು ‘ಸ್ವಾಮಿ, ಭಗವಂತ, ಪ್ರಪಂಚ, ಈಶ್ವರ, ಕರ್ಮ, ಪುಣ್ಯ, ಪಾಪ, ಧರ್ಮ, ಋಣ, ಜನ್ಮಾಂತರ, ಆತ್ಮ, ಜೀವ, ಸ್ವರ್ಗ, ಮೋಕ್ಷ ಇಂಥವು ನೂರಾರು ಮಾತುಗಳು ಎಲ್ಲರ ಪ್ರತಿದಿವಸದ ಉಪಯೋಗದಲ್ಲಿಯೂ ಇವೆ ಮತ್ತು ನಮ್ಮ ನಾನಾ ಪ್ರಾದೇಶಿಕ ಭಾಷೆಗಳ ಕನ್ನಡ, ತೆಲುಗು, ತಮಿಳು ಇತ್ಯಾದಿಗಳ ಕಾವ್ಯ ಸಾಹಿತ್ಯದಲ್ಲಿ ಸಂಸ್ಕೃತ ಪದಪ್ರಯೋಗ ಗಳು ಹೇರಳವಾಗಿವೆ.
ಹೀಗೆ ಜನಜೀವನ, ಕಾವ್ಯಸಾಹಿತ್ಯ ಈ ಎರಡು ದೃಷ್ಟಿಗಳಿಂದಲೂ ಸಂಸ್ಕೃತವು ಸಾವಿರಾರು ವರ್ಷ ಗಳಿಂದ ಸಕಲ ಭಾರತದ ಭಾಷೆಯಾಗಿಯೇ ಇದೆ. ಅದು ಹಾಗೆಯೇ ಇರಬೇಕು ಕೂಡ. ಆದರೆ, ಅದು ಅಂತರಂಗ ಸಂಸ್ಕೃತಿಯ ಭಾಷೆ; ಬಹಿರಂಗ ವ್ಯಾಪಾರಕ್ಕೆ ಅಷ್ಟಾಗಿ ಅನ್ವಯಿಸುವುದಿಲ್ಲ.
ಇನ್ನು ನಮಗೆ ಉಳಿದಿರುವ ಭಾಷಾಕರ್ತವ್ಯ ಸಮಸ್ತ ಭಾರತದ ಲೌಕಿಕ ವ್ಯವಹಾರದ್ದು. ಇದರ ಅವಸರಗಳಿಗೆ ಇಂಗ್ಲೀಷ್ ಒದಗಿಬರುವಂತೆ ಯಾವ ಪ್ರಾದೇಶಿಕ ಭಾಷೆಯೂ ಸದ್ಯಕ್ಕೆ ಒದಗಲಾರ ದೆಂಬುದನ್ನು ಎಲ್ಲರೂ ಒಪ್ಪ ಲೇಬೇಕಾಗುತ್ತದೆ.
ಇಂಗ್ಲೀಷು ಪರಭಾಷೆಯಾದ ಕಾರಣದಿಂದ ಅದನ್ನು ನಾವು ತೊರೆಯತಕ್ಕzಂಬುದು ಕೆಲವರ ವಾದ. ಅದನ್ನು ನಾವು ಒಪ್ಪುವುದಾದರೆ ಈಗ ನಮ್ಮ ಜೀವನಕ್ಷೇತ್ರದೊಳಕ್ಕೆ ಬಂದಿರುವ ಇತರ ಪರದೇಶೀಯ ವಸ್ತುಗಳನ್ನೂ ವಿದ್ಯೆಗಳನ್ನೂ ತ್ಯಜಿಸುವುದಕ್ಕೆ ನಾವು ಸಿದ್ಧರಾಗಿರಬೇಕಲ್ಲವೆ? ಅದಕ್ಕೆ ಮನಸ್ಸು ಮಾಡಿದ್ದೇವೆಯೆ? ಭಾಷೆಯನ್ನು ಮಾತ್ರ ಪರಕೀಯವೆಂದು ಹಳಿದು ವರ್ಜಿಸೋಣ ವೆನ್ನುವುದು ಯುಕ್ತವಾದೀತೆ? ಯಾವ ದೃಷ್ಟಿಯಿಂದ ನೋಡಿದರೂ ಇಂಗ್ಲೀಷ್ ಅನ್ನು ಪರಕೀಯ ವೆನ್ನುವುದು ನ್ಯಾಯವೆನಿಸದು.
ಒಂದು ದೊಡ್ಡ ಚರಿತ್ರಾಂಶವನ್ನು ಯಾರೂ ಸುಳ್ಳೆನ್ನುವಂತಿಲ್ಲ. ಭರತಖಂಡದಲ್ಲಿ ಭಾರತೀಯತೆ ಎಂಬ ಏಕಜನತಾ ಭಾವ ಉತ್ಪನ್ನವಾದದ್ದೇ ಇಂಗ್ಲೀಷಿನ ಮೂಲಕ. ರಾಜಾ ರಾಮಮೋಹನ ರಾಯರೂ ಸ್ವಾಮಿ ವಿವೇಕಾನಂದರೂ ಬಾಲಗಂಗಾಧರ ತಿಲಕರೂ ಮಹಾತ್ಮಗಾಂಧಿಯವರೂ ದೇಶವನ್ನು ಉದ್ದುದ್ಧ ಮಾಡಿದ್ದು ಇಂಗ್ಲೀಷಿನ ಮೂಲಕ. ಅವರು ಅವರವರ ಪ್ರಾದೇಶಿಕ ಭಾಷೆ ಗಳಲ್ಲಿ ಮಾತ್ರ ಬರೆದು ಮಾತನಾಡಿದ್ದಿದ್ದರೆ ಏನಾಗುತ್ತಿತ್ತು? ಊಹಿಸುವುದೂ ಕಷ್ಠ.
ಯಾವ ಭಾಷೆಯ ಉಪಯೋಗ ಅವರಿಗೆ ಪರಕೀಯವಾಗಲಿಲ್ಲವೋ, ಅದು ನಮಗೆ ಪರಕೀಯ ವಾಗಬೇಕೆ?ಆತ್ಮವಿದ್ಯೋಪದೇಶ ಕಾಲದಲ್ಲಿ ಯಾವ ದೇವತೆ ಸಂಸ್ಕೃತದ ಉಡುಪನ್ನುಟ್ಟು ಬರುತ್ತಾ ಳೆಯೋ, ನಮ್ಮ ದಿನಗಟ್ಟಲೆಯ ಬದುಕು ಬಾಳಿನಲ್ಲಿ ಯಾವ ತಾಯಿ ಕನ್ನಡಿತಿಯಾಗಿ ಬರುತ್ತಾಳೆ ಯೋ ಆ ಸರಸ್ವತಿಯೇ ವಿಜ್ಞಾನಾದಿ ವಿಶ್ವ ವ್ಯಾಪಾರ ಕಾಲದಲ್ಲಿ ಇಂಗ್ಲೀಷಿನ ಉಡುಪನ್ನುಟ್ಟು ಬಂದೇನೆಂದರೆ ಆಕೆಗೆ ಬಹಿಷ್ಕಾರವೆ? ಹಾಗಂತ ಕನ್ನಡ, ಸಂಸ್ಕೃತವನ್ನು ಬಿಟ್ಟು ಇಂಗ್ಲೀಷು ಅಂತ ಅಲ್ಲ, ಅವುಗಳ ಊಳಿಗಕ್ಕಾಗಿಯೇ ಇಂಗ್ಲೀಷು ಬಳಕೆಯಾಗಬೇಕು, ಕನ್ನಡ ಸಾಹಿತ್ಯದ ಪುಷ್ಟಿಗಾಗಿ, ಸಂಸ್ಕತದ ಪ್ರಯೋಜನಗಳು ಜಗತ್ತಿಗೆ ದೊರಕುವಂತೆ ಮಾಡವುದಕ್ಕಾಗಿ ಯಾದರೂ ನಮ್ಮಲ್ಲಿ ಇಂಗ್ಲೀಷ್ ಕಲಿಕೆಯಾಗಬೇಕು, ಸಮಸ್ತ ಮಾನವ ಪ್ರಪಂಚದ ಬುದ್ಧಿಕಾರ್ಯಗಳು ನಮ್ಮ ಕೈವಶ ವಾಗಬೇಕಾದರೆ ಅದಕ್ಕೆ ಇಂದು ನಮಗೆ ಇಂಗ್ಲೀಷೇ ಆಯುಧವಾಗಬೇಕು ಹಿಂದಿ ಯಲ್ಲ, ಅದನ್ನು ನಮ್ಮ ಕನ್ನಡ, ಸಂಸ್ಕತಕ್ಕೆ ಸಹಾಯಕವಾಗುವ ಸ್ಥಾನದಲ್ಲಿರಿಸಿ ಬಳಸಿಕೊಳ್ಳ ಬೇಕಾದ್ದು ನಮ್ಮ ನೀತಿಯಾಗಬೇಕು ಎನ್ನುತ್ತಾರೆ ಗುಂಡಪ್ಪನವರು.
ಮೋಕ್ಷಮಾರ್ಗವನ್ನು ಬೋಧಿಸುವ ಭಗವದ್ಗೀತೆಯನ್ನು ಜೀವನಧರ್ಮವಾಗಿಸಿದ ಡಿವಿಜಿಯವರ ಜೀವನ ಪ್ರೀತಿಯ ಧೋರಣೆಯೇ ಹಾಗೆ, ಎಲ್ಲವೂ ನಿತ್ಯಜೀವನಾನ್ವಯಕ್ಕೆ, ಮನುಷ್ಯ ಜೀವನದ ಏಳ್ಗೆಗೆ ಅನುಕೂಲವಾಗಿರಬೇಕು, ಬರಡು ತತ್ವಗಳಿಂದ, ಅಪ್ಪನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಳ್ಳುವುದರಿಂದ ಏನೂ ಪ್ರಯೋಜನವಾಗದು ಎನ್ನುವವರು ಅವರು.