ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಕೊನೆಗೂ ಗಡ್ಡ ಕೆರೆದ ನಂತರವೇ ಆತ ನೇಣಿಗೆ ಕೊರಳು ಕೊಟ್ಟ !

ಅಂದು ಬೆಳಗಿನ ಉಪಾಹಾರ ಸೇವಿಸುವಾಗ, ನನ್ನ ಸ್ನೇಹಿತ ಹಿಡಿದ ಚಮಚ, ಪ್ಲೇಟಿಗೆ ತಾಕಿ ಸದ್ದು ಮಾಡುತ್ತಿತ್ತು. ನನಗೂ ಆ ಸದ್ದು ತುಸು ಕಿರಿಕಿರಿ ಅನಿಸುತ್ತಿತ್ತು. ಪೂಜಾರಿಯವರು ನನ್ನ ಸ್ನೇಹಿತ ನನ್ನುದ್ದೇಶಿಸಿ, “ನೀವು ಪತ್ರಕರ್ತರು. ಗಣ್ಯವ್ಯಕ್ತಿಗಳ ಜತೆ ಊಟ ಮಾಡುವ ಅವಕಾಶ ನಿಮಗೆ ಮೇಲಿಂದ ಮೇಲೆ ಸಿಗುತ್ತದೆ. ಹೀಗಾಗಿ ಟೇಬಲ್ ಮ್ಯಾನರ್ಸ್ ಬಹಳ ಮುಖ್ಯ. ನಾವು ಆಹಾರ ಸೇವಿಸುವಾಗ, ಬಾಯಿ ಮುಚ್ಚಿ ತಿನ್ನಬೇಕು. ಇಲ್ಲದಿದ್ದರೆ ನಾಯಿ ತಿನ್ನುವಾಗ ‘ಪಚಪಚ’ ಅಂತ ಸಪ್ಪಳವಾಗುತ್ತದಲ್ಲ, ಅಂಥ ಸಪ್ಪಳ ಬರುತ್ತದೆ.

ಕೊನೆಗೂ ಗಡ್ಡ ಕೆರೆದ ನಂತರವೇ ಆತ ನೇಣಿಗೆ ಕೊರಳು ಕೊಟ್ಟ !

ಇದೇ ಅಂತರಂಗ ಸುದ್ದಿ

vbhat@me.com

1990ರ ಜೂನ್ 16. ನಾನು ಪತ್ರಿಕೋದ್ಯಮದಲ್ಲಿ ಕಣ್ಣು ಬಿಡುತ್ತಿದ್ದ ದಿನಗಳವು. ಬಿಳಿಗಿರಿರಂಗನ ಬೆಟ್ಟದ ಸನಿಹವಿರುವ ಕೆ.ಗುಡಿ (ಕ್ಯಾತದೇವರಾಯ ಗುಡಿ) ವನ್ಯಧಾಮ ಕ್ಯಾಂಪ್‌ನಲ್ಲಿ ಉಳಿದು ಕೊಂಡಿದ್ದೆ. ನನ್ನ ಜತೆಗೆ ಮತ್ತೊಬ್ಬರು ಪತ್ರಕರ್ತರೂ ಇದ್ದರು. ನಮ್ಮ ದೇಖರೇಖ ನೋಡಿಕೊಳ್ಳಲು ಎನ್.ಗೋಪಾಲ ಪೂಜಾರಿ ಎಂಬ ಅರಣ್ಯ ಇಲಾಖೆ ಅಧಿಕಾರಿ ಇದ್ದರು.

ಪೂಜಾರಿಯವರು ಕಾರ್ಕಳ ಸನಿಹದ ನಾರಾವಿ ಗ್ರಾಮದವರು. ಬಹಳ ಕಟ್ಟುನಿಟ್ಟಿನ ಅಧಿಕಾರಿ. ತಮಗನಿಸಿದ್ದನ್ನು ನೇರಾನೇರ ಹೇಳುವ ಖಡಕ್ ಮನುಷ್ಯ (ಮೊದಲ ಭೇಟಿಯಲ್ಲಿಯೇ ನನಗೆ ಆಪ್ತರಾದ ಪೂಜಾರಿಯವರು ನನಗೆ ಬಹಳ ವರ್ಷ ತಪ್ಪದೇ ಪತ್ರ ಮುಖೇನ ಸಂಪರ್ಕದಲ್ಲಿದ್ದರು).

ಅಂದು ಬೆಳಗಿನ ಉಪಾಹಾರ ಸೇವಿಸುವಾಗ, ನನ್ನ ಸ್ನೇಹಿತ ಹಿಡಿದ ಚಮಚ, ಪ್ಲೇಟಿಗೆ ತಾಕಿ ಸದ್ದು ಮಾಡುತ್ತಿತ್ತು. ನನಗೂ ಆ ಸದ್ದು ತುಸು ಕಿರಿಕಿರಿ ಅನಿಸುತ್ತಿತ್ತು. ಪೂಜಾರಿಯವರು ನನ್ನ ಸ್ನೇಹಿತ ನನ್ನುದ್ದೇಶಿಸಿ, “ನೀವು ಪತ್ರಕರ್ತರು. ಗಣ್ಯವ್ಯಕ್ತಿಗಳ ಜತೆ ಊಟ ಮಾಡುವ ಅವಕಾಶ ನಿಮಗೆ ಮೇಲಿಂದ ಮೇಲೆ ಸಿಗುತ್ತದೆ. ಹೀಗಾಗಿ ಟೇಬಲ್ ಮ್ಯಾನರ್ಸ್ ಬಹಳ ಮುಖ್ಯ. ನಾವು ಆಹಾರ ಸೇವಿಸುವಾಗ, ಬಾಯಿ ಮುಚ್ಚಿ ತಿನ್ನಬೇಕು. ಇಲ್ಲದಿದ್ದರೆ ನಾಯಿ ತಿನ್ನುವಾಗ ‘ಪಚಪಚ’ ಅಂತ ಸಪ್ಪಳವಾಗುತ್ತದಲ್ಲ, ಅಂಥ ಸಪ್ಪಳ ಬರುತ್ತದೆ.

ಹಾಗೆಯೇ ಆಹಾರ ಸೇವಿಸುವಾಗ ಚಮಚ ಪ್ಲೇಟಿಗೆ ತಾಕಿ ಸದ್ದು ಬರುವ ಹಾಗೆ ತಿನ್ನಬಾರದು. ಚಮಚವನ್ನು ಆಹಾರಕ್ಕೆ ತಾಗಿಸಬೇಕೇ ಹೊರತು ಪ್ಲೇಟಿಗಲ್ಲ" ಎಂದು ಹೇಳಿದರು. ನನ್ನ ಸ್ನೇಹಿತ ಆ ಕ್ಷಣ ಅಂಥ ಪ್ರತಿಕ್ರಿಯೆ ನಿರೀಕ್ಷಿಸಿರಲಿಲ್ಲ. ಆತ ಒಂದು ಕ್ಷಣ ಪೆಚ್ಚಾದರು.

ಇದನ್ನೂ ಓದಿ: Vishweshwar Bhat Column: ವಿಮಾನದ ಟೈರುಗಳ ಮಹತ್ವ

ಪೂಜಾರಿ ಅವರು ಹೇಳಿದ್ದು ಸರಿಯಾಗಿತ್ತು. ಆದರೆ ಹೇಳಿದ ರೀತಿ ಖಡಕ್ ಮತ್ತು ತೀರಾ ಒರಟಾಗಿತ್ತು. ನನ್ನ ಸ್ನೇಹಿತ ಮರು ಮಾತಾಡಲಿಲ್ಲ. ನಾನು ಹೇಳಬೇಕಾದ ಮಾತನ್ನು ಪೂಜಾರಿಯವರು ಹೇಳಿದರಲ್ಲ ಎಂದು ನನಗೆ ಒಳಗೊಳಗೇ ಖುಷಿಯಾಯಿತು. ನನ್ನ ಆ ಸ್ನೇಹಿತ ಆಹಾರ ಸೇವಿಸುವಾಗ ಮಾಡುತ್ತಿದ್ದ ಬಾಯಿಸದ್ದು ಮತ್ತು ಪ್ಲೇಟಿನಿಂದ ಹೊಮ್ಮುತ್ತಿದ್ದ ‘ಪಕ್ಕವಾದ್ಯ’ ಸಹಿಸಿಕೊಳ್ಳುವುದು ಕಷ್ಟವಾಗಿತ್ತು.

ನಾನು ಒಮ್ಮೆ ಈ ಬಗ್ಗೆ ಅವನಿಗೆ ಹೇಳಿದಾಗ ಅಷ್ಟಕ್ಕೇ ಆತ ವ್ಯಗ್ರನಾಗಿ ಪ್ರತಿಕ್ರಿಯಿಸಿದ್ದ. ಪೂಜಾರಿ ಅವರು ಯಾಕೆ ಹಾಗೆ ಆಹಾರ ಸೇವಿಸಬೇಕು ಎಂಬ ಬಗ್ಗೆ ಸಣ್ಣ ‘ಬೌದ್ಧಿಕ್’ ನೀಡಿದ್ದರು. ಮುಂದಿನ ಸರದಿ ನನ್ನ ಮೇಲೆ. “ಭಟ್ರೇ, ನೀವು ಪತ್ರಕರ್ತರು. ಗಣ್ಯವ್ಯಕ್ತಿಗಳನ್ನು ಭೇಟಿಯಾಗುವ ಅವಕಾಶ ನಿಮಗೂ ಮೇಲಿಂದ ಮೇಲೆ ಸಿಗುತ್ತಿರುತ್ತವೆ.

ಯಾವತ್ತೂ ನಾವು ನಮ್ಮನ್ನು ಅತ್ಯಂತ ಶಿಸ್ತಿನಿಂದ, ಅಚ್ಚುಕಟ್ಟಾಗಿ ಪ್ರಸೆಂಟ್ ಮಾಡಿಕೊಳ್ಳಬೇಕು. ಯಾಕೋ ನಿಮ್ಮ ಮುಖದಲ್ಲಿರುವ ಕುರುಚಲು ಗಡ್ಡ ನನಗೆ ಸರಿ ಕಾಣುತ್ತಿಲ್ಲ. ಅದು ನಿಮ್ಮ ವೈಯಕ್ತಿಕ ವಿಷಯವೇ ಆಗಿರಬಹುದು. ಆದರೂ ಹೇಳುತ್ತೇನೆ. ನೀವು ನಿತ್ಯವೂ ಶೇವ್ ಮಾಡಬೇಕು. Shaving says a lot about a man. ಕ್ಲೀನ್ ಶೇವ್ ಮಾಡಿಕೊಳ್ಳುವುದು ಒಂದು ಅತ್ಯುತ್ತಮ ಸಂಸ್ಕಾರ. ನಿಮಗೆ ನಿಮ್ಮ ಮುಖದ ಬಗ್ಗೆಯೇ ಕಾಳಜಿ ಇಲ್ಲದಿದ್ದರೆ, ಬೇರೆ ವಿಷಯಗಳ ಬಗ್ಗೆ ಎಷ್ಟು ಕಾಳಜಿ ಹೊಂದಬಲ್ಲಿರಿ? ದಿನವೂ ಬೆಳಗ್ಗೆ ಹಲ್ಲುಜ್ಜುವಂತೆ, ಮುಖ ತೊಳೆಯುವಂತೆ, ಕ್ಲೀನಾಗಿ ಶೇವ್ ಕೂಡ ಮಾಡಿಕೊಳ್ಳಬೇಕು.

shave R

ಅದಕ್ಕೆ ಸಮಯ ಇಲ್ಲದಿದ್ದರೆ, ನಿಮ್ಮ ಟೈಮ್ ಮ್ಯಾನೇಜ್ಮೆಂಟ್ ಸರಿ ಇಲ್ಲ ಎಂದರ್ಥ. ಯಾವತ್ತೂ ಕ್ಲೀನ್ ಶೇವ್ ಮಾಡಿಕೊಂಡು ಗರಿಗರಿಯಾಗಿರಬೇಕು, ಅದು ಲಕ್ಷಣ" ಎಂದು ಪೂಜಾರಿಯವರು ನನ್ನ ಮೇಲೆ ಉಪದೇಶಗಳ ಅರ್ಚನೆಗೈದಿದ್ದರು. ನನ್ನ ತಂದೆಯವರು ಸಹ ನಿತ್ಯವೂ ಶೇವ್ ಮಾಡು ತ್ತಿದ್ದರು.

ಅವರು ನನಗೆ ಅನೇಕ ಸಲ ನಿತ್ಯ ಶೇವಿಂಗ್ ಮಹತ್ವದ ಬಗ್ಗೆ ಹೇಳಿದ್ದಿದೆ. ಆದರೂ ನಾನು ಅವರ ಮಾತನ್ನು ನೂರಕ್ಕೆ ನೂರು ಜಾರಿಗೆ ತಂದಿರಲಿಲ್ಲ. ಆದರೆ ಆ ಕ್ಷಣದಲ್ಲಿ ನನಗೆ ಏನನಿಸಿತೋ ಏನೋ, ಪೂಜಾರಿಯವರು ಹೇಳಿದ್ದು ಸರಿ ಎಂದೆನಿಸಿ ಬಿಟ್ಟಿತು. ಪೂಜಾರಿಯವರ ಮಾತಿನಲ್ಲಿ ಅದೆಂಥ ಮಾಂತ್ರಿಕ ಶಕ್ತಿಯಿತ್ತೋ, ಆದೇಶದ ಆಜ್ಞೆಯಿತ್ತೋ ಗೊತ್ತಿಲ್ಲ, ನಾನು ಅಲ್ಲಿಯೇ ನಿರ್ಧಾರ ಮಾಡಿದೆ, ಇನ್ನು ಮುಂದೆ ಪ್ರತಿದಿನ ಶೇವ್ ಮಾಡಬೇಕೆಂದು.

ಕೋವಿಡ್ ಕಾಲದಲ್ಲಿ ಒಂದು ವಾರ ತಮಾಷೆಗೆಂದು ಗಡ್ಡ ಬಿಟ್ಟಿದ್ದನ್ನು ಹೊರತುಪಡಿಸಿದರೆ, 1990ರ ಜೂನ್ 16ರಿಂದ ಇಂದಿನ ತನಕ ಪ್ರತಿದಿನ ಶೇವ್ ಮಾಡುತ್ತಾ ಬಂದಿದ್ದೇನೆ. ಮಳೆಯಿರಲಿ, ಚಳಿಯಿರಲಿ, ರಜಾ ಇರಲಿ, ಇಲ್ಲದಿರಲಿ, ಜ್ವರ ಬರಲಿ, ಕಾಯಿಲೆ ಬಿದ್ದಿರಲಿ, ಆಸ್ಪತ್ರೆ ಸೇರಿರಲಿ, ಆದರೆ ಶೇವ್ ಮಾಡದ ದಿನ ಇಲ್ಲವೇ ಇಲ್ಲ. ಉಪವಾಸ ಇರಬ, ಆದರೆ ಶೇವ್ ಮಾಡದೇ ಇರಲಾರೆ. ಲಘು ಹೃದಯಾಘಾತವಾಗಿ ಒಂದು ವಾರ ಆಸ್ಪತ್ರೆಯಲ್ಲಿದ್ದಾಗಲೂ ಶೇವ್ ಮಾಡುವುದನ್ನು ತಪ್ಪಿಸಿದವ ನಲ್ಲ.

ಪ್ರವಾಸ ಹೋಗುವಾಗ ಪರ್ಸ್ ಬಿಟ್ಟು ಹೋದೇನು, ಆದರೆ ಶೇವಿಂಗ್ ಕಿಟ್ ಬಿಟ್ಟು ಹೋಗಲಾರೆ. ಬೆಳಗ್ಗೆ ಹಲ್ಲುಜ್ಜಿದ ನಂತರ ಶೇವ್ ಮಾಡಲೇಬೇಕು. ಅದಾದ ಬಳಿಕವೇ ಉಳಿದ ಕೆಲಸ. ಒಂದು ದಿನ ಶೇವ್ ಮಾಡದಿದ್ದರೆ ಏನಾಗುತ್ತದೆ ಎಂದು ಯಾರಾದರೂ ಕೇಳಿದರೆ ನನ್ನ ಬಳಿ ಉತ್ತರವಿಲ್ಲ. ಕಾರಣ ಆ ದಿನ ಹೇಗಿರುತ್ತದೆ ಮತ್ತು ಏನಾಗುತ್ತದೆ ಎಂಬುದು ನನಗೆ ಗೊತ್ತೇ ಇಲ್ಲ.

ಪಾಕಿಸ್ತಾನದ ದಿವಂಗತ ಪ್ರಧಾನಿ ಜುಲಿಕರ್ ಅಲಿ ಭುಟ್ಟೋ ಸಹ ನಿತ್ಯವೂ ಶೇವ್ ಮಾಡುತ್ತಿದ್ದರು. ಅವರು ಒಂದು ಸಲ ಅಲ್ಲ, ದಿನಕ್ಕೆ ಎರಡು ಸಲ ಶೇವ್ ಮಾಡುತ್ತಿದ್ದರು. ನಂತರ ಅದು ಮೂರು ಹಾಗೂ ನಾಲ್ಕು ಬಾರಿಗೆ ಹೋಯಿತು. ಶೇವ್ ಮಾಡಲು ಅವರಿಗೆ ಬಂಗಾರದ ರೇಜರ್ ಸೆಟ್ ಬೇಕಿತ್ತು. ಅವರನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೆ ಬಂದ ಜನರಲ್ ಜನರಲ್ ಜಿಯಾ-ಉಲ್-ಹಕ್, ಭುಟ್ಟೋನನ್ನು ಜೈಲಿಗೆ ಹಾಕಿದ.

ಭುಟ್ಟೋ ಶೇವಿಂಗ್ ಖಯಾಲಿ ಗೊತ್ತಿದ್ದ ಜಿಯಾ, “ಯಾವ ಕಾರಣಕ್ಕೂ ಭುಟ್ಟೋಗೆ ರೇಜರ್ ಕೊಡಬಾರದು" ಎಂದು ಆದೇಶಿಸಿದ್ದ. ಭುಟ್ಟೋಗೆ ಜೈಲು ಶಿಕ್ಷೆಗಿಂತ ಶೇವಿಂಗ್ ಮಾಡಿಕೊಳ್ಳದೇ ಇರುವುದು ಘನಘೋರ ಶಿಕ್ಷೆಯಾಯಿತು. ದಿನಕ್ಕೆ ನಾಲ್ಕು ಸಲ ಶೇವ್ ಮಾಡಿಕೊಳ್ಳುತ್ತಿದ್ದವನ ಮುಖದ ಮೇಲೆ ಪೊದೆ ಗಾತ್ರದ ಗಡ್ಡ ಬೆಳೆದಿತ್ತು. ಜಿಯಾ ಆದೇಶದ ಮೇರೆಗೆ, ಭುಟ್ಟೋ ಮುಖಕ್ಕೆ ಕನ್ನಡಿ ಹಿಡಿಯುವಂತೆ ಜೈಲರ್‌ಗೆ (ಜಿಯಾ) ಆದೇಶಿಸಿದ್ದ.

ಭುಟ್ಟೋ ಇರುವ ಕಾರಾಗೃಹದ ಕೋಣೆಗೆ ಹೋಗಿ ಜೈಲರ್ ಕನ್ನಡಿ ಹಿಡಿದರೆ, ತನ್ನ ಮುಖ ನೋಡಿ ಭುಟ್ಟೋ ಕಿಟಾರನೆ ಕಿರುಚುತ್ತಿದ್ದ. ಭುಟ್ಟೋ ತನ್ನ ಜೀವನದ ಒಂದು ದಿನದ ಗಡ್ಡವಿರುವ ತನ್ನ ಮುಖವನ್ನು ನೋಡಿಕೊಂಡವನಲ್ಲ. ತನ್ನ ಸುರದ್ರೂಪ ಕ್ಲೀನ್ ಶೇವಿಂಗ್‌ನಲ್ಲಿದೆ ಎಂದು ಆತ ಬಲವಾಗಿ ನಂಬಿದವ. ಪ್ರತಿದಿನ ಭುಟ್ಟೋಗೆ ಊಟ ನೀಡುವಾಗ ಜೈಲರ್ ಕನ್ನಡಿ ಜತೆಗೆ ಹೋಗು ತ್ತಿದ್ದ.

ನನ್ನ ಮುಖಕ್ಕೆ ಕನ್ನಡಿ ಹಿಡಿದರೆ, ಊಟ ಮಾಡುವುದಿಲ್ಲ ಎಂದು ಭುಟ್ಟೋ ರಗಳೆ ತೆಗೆಯುತ್ತಿದ್ದ. ಕನ್ನಡಿಯಲ್ಲಿ ಮುಖ ನೋಡಿಕೊಂಡರೆ ಚಿಕ್ಕ ಮಗುವಿನಂತೆ ಅಳುತ್ತಿದ್ದ ಭುಟ್ಟೋ, ಊಟ ಮಾಡುತ್ತಿರಲಿಲ್ಲ. ತನ್ನ ಗಡ್ಡವನ್ನು ನೇವರಿಸುತ್ತಾ ತನ್ನಷ್ಟಕ್ಕೆ ಬಿಕ್ಕಳಿಸುತ್ತಿದ್ದ.

ಭುಟ್ಟೋಗೆ ಶೇವಿಂಗ್ ಎನ್ನುವುದು ಊಟ-ತಿಂಡಿಗಿಂತ ಮಿಗಿಲಾದ ಕ್ರಿಯೆಯಾಗಿತ್ತು. ಊಟವಾದರೂ ಬಿಟ್ಟಾನು, ಆದರೆ ಶೇವಿಂಗ್ ಬಿಡುತ್ತಿರಲಿಲ್ಲ. ಶೇವಿಂಗ್ ಮಾಡದ ತನ್ನ ಸ್ಥಿತಿಯಿಂದ ಭುಟ್ಟೋ ಮಾನಸಿಕವಾಗಿ ತನ್ನಷ್ಟಕ್ಕೆ ಕುಸಿದು ಹೋಗಿದ್ದ! ಭುಟ್ಟೋನನ್ನು ಗಲ್ಲಿಗೇರಿಸುವ ದಿನ ಬಂತು. ಜೈಲರ್ ಬಂದು, “ನಿಮ್ಮ ಕೊನೆಯ ಆಸೆ ಏನು?" ಎಂದು ಕೇಳಿದ. ಅದಕ್ಕೆ ಭುಟ್ಟೋ, “ನನಗೆ ನನ್ನ ಬಂಗಾರದ ರೇಜರ್ ಬೇಕು. ನಾನು ಕೊನೆ ಬಾರಿಗೆ ಶೇವ್ ಮಾಡಿಕೊಳ್ಳಬೇಕು. ನಂತರ ನನ್ನ ಮುಖ ವನ್ನೊಮ್ಮೆ ನೋಡಿಕೊಳ್ಳಬೇಕು. ನಂತರ ಗಲ್ಲಿಗೇರಿಸಿ" ಎಂದು ಬೇಡಿಕೊಂಡ.

ಗಲ್ಲು ಶಿಕ್ಷೆ ಶಿಷ್ಟಾಚಾರದಂತೆ, ಕೊನೆಯ ಆಸೆ ಈಡೇರಿಸಲು ಭುಟ್ಟೋ ಬಳಸುತ್ತಿದ್ದ ಬಂಗಾರದ ರೇಜರ್ ಅನ್ನು ಜೈಲರ್ ತರಿಸಿಕೊಟ್ಟ. ಭುಟ್ಟೋ ಸುಮಾರು ಒಂದು ಗಂಟೆ ಕಾಲ ಗಡ್ಡ ಕೆರೆದು ಕೊಂಡ. ಸಮಾಧಾನವಾಗಲಿಲ್ಲ. ಮತ್ತೊಮ್ಮೆ ಶೇವ್ ಮಾಡಿಕೊಂಡ. ಮೂರ್ನಾಲ್ಕು ಬಾರಿ ಶೇವ್ ಮಾಡಿಕೊಂಡ. ನಂತರ ಕನ್ನಡಿಯಲ್ಲಿ ಮುಖ ನೋಡಿಕೊಂಡ. ಆಗಲೇ ಬಡಜೀವ ಸಂತೃಪ್ತ ವಾಯಿತು. ನಂತರ ಆತ ನೇಣುಗಂಬದತ್ತ ಹೆಜ್ಜೆ ಹಾಕಿದ್ದು!

ಶೇವಿಂಗ್ ವಿಚಾರದಲ್ಲಿ ನಾನು ಭುಟ್ಟೋನಷ್ಟು ಅಲ್ಲದಿದ್ದರೂ, ಅವನ ಗಾಳಿ ಸೋಂಕಿದವನ ಹಾಗೆ ವರ್ತಿಸುವುದುಂಟು. ದಿವಂಗತ ಸಂಪಾದಕ ವೈಯೆನ್ಕೆ, ನನಗೆ ಆಪ್ತರಾಗಿದ್ದ ದಿವಂಗತ ಅಣು ವಿಜ್ಞಾನಿ ಡಾ.ರಾಜಾರಾಮಣ್ಣ ಕೂಡ ಶೇವಿಂಗ್ ವಿಚಾರದಲ್ಲಿ ಭುಟ್ಟೋ ಥರ ವರ್ತಿಸುತ್ತಿದ್ದುದನ್ನು ನಾನು ಕಣ್ಣಾರೆ ನೋಡಿದ್ದೇನೆ. ಒಮ್ಮೆ ನಾನು ಡಾ.ರಾಜಾರಾಮಣ್ಣ ಅವರ ಜತೆಗೆ ಲೇಹ್‌ಗೆ ಹೋಗಿದ್ದೆ. ಆಗ ಅವರು ನರಸಿಂಹರಾಯರ ಸರಕಾರದಲ್ಲಿ ರಕ್ಷಣಾ ಖಾತೆಯ ರಾಜ್ಯ ಸಚಿವ ರಾಗಿದ್ದರು.

ಅಂದು ಬೆಳಗ್ಗೆ ಹತ್ತು ಗಂಟೆಗೆ ಅವರು ರಕ್ಷಣಾ ಅಧಿಕಾರಿಗಳ ಜತೆ ಮಾತುಕತೆ ಇಟ್ಟುಕೊಂಡಿದ್ದರು. ಆದರೆ ದಿಲ್ಲಿಯಿಂದ ಬರುವಾಗ ಅವರು ತಮ್ಮ ಶೇವಿಂಗ್ ಕಿಟ್ ಮರೆತು ಬಂದಿದ್ದರು. ನನ್ನ ರೂಮು ಡಾ.ರಾಜಾರಾಮಣ್ಣ ಅವರ ರೂಮಿನಿಂದ ಮೂರನೆಯದು. ನಾನು ಅವರ ಉಗ್ರಕೋಪವನ್ನು ನೋಡಿದ್ದು ಅದೇ ಮೊದಲು ಹಾಗೂ ಕೊನೆ. ತಮ್ಮ ಪಿಎಯನ್ನು ಕರೆದು ಹಿಗ್ಗಾಮುಗ್ಗಾ ಬೈದರು. ಯುದ್ಧಭೂಮಿಗೆ ಶಸ್ತ್ರಾಸ್ತ್ರ ಮರೆತು ಹೋದರೂ ಅವರು ಏನೂ ಅನ್ನುತ್ತಿರಲಿಲ್ಲವೇನೋ? ಆದರೆ ತಮ್ಮ ಶೇವಿಂಗ್ ಕಿಟ್ ಪ್ಯಾಕ್ ಮಾಡದ ಪಿಎ ಮೇಲೆ ಅವರ ಕೋಪ ಅರ್ಧ ಗಂಟೆಯಾದರೂ ತಣಿದಿರಲಿಲ್ಲ.

ಈ ಮಧ್ಯೆ ಅಧಿಕಾರಿಗಳು ಓಡಿ ಹೋಗಿ, ಎಲ್ಲಿಂದಲೋ ಒಳ್ಳೆಯ ಶೇವಿಂಗ್ ಕಿಟ್ ತಂದರು. ಆದರೂ ಅವರಿಗೆ ಸಮಾಧಾನ ಆಗಿರಲಿಲ್ಲ. “ಭಟ್ರೇ, If Rilke cut himself shaving, he would bleed poetry ಎಂಬ ಮಾತಿದೆ. ನಾನು ಶೇವ್ ಮಾಡದಿದ್ದರೂ ನನ್ನನ್ನು ಕತ್ತರಿಸಿಕೊಂಡಂತೆ, ಗೊತ್ತಾ?" ಎಂದು ಅಣುವಿಜ್ಞಾನಿ ಉದ್ಗರಿಸಿದ್ದರು.

ನಾನು ನುಣುಪಾದ ಅವರ ಗಡ್ಡವನ್ನು ದಿಟ್ಟಿಸುತ್ತಾ ಸುಮ್ಮನೆ ನಿಂತಿದ್ದೆ. ಈ ವಿಷಯದಲ್ಲಿ ವೈಯೆನ್ಕೆ ಕೂಡ ಹಾಗೇ. ಅವರ ಬಳಿ ಫಿಲಿಪ್ಸ್ ಕಂಪನಿಯ ಇಲೆಕ್ಟ್ರಿಕ್ ಶೇವರ್ ಇತ್ತು. ಬೆಳಗ್ಗೆ ಪತ್ರಿಕೆಯನ್ನು ಓದುತ್ತಾ ಅವರು ಶೇವರ್ ಮೂಲಕ ಗಡ್ಡವನ್ನು ಉಜ್ಜಿಕೊಳ್ಳುತ್ತಿದ್ದರು. ಮಾಲ್, ವಿಮಾನ ನಿಲ್ದಾಣದಲ್ಲಿ ನೆಲ ಒರೆಸುವ ಯಂತ್ರದಂತೆ ಅವರು ಉಜ್ಜಿದ ಕಡೆಯೇ ಹತ್ತಾರು ಸಲ ಶೇವರ್ ಅನ್ನು ಆಡಿಸುತ್ತಿದ್ದರು. ಮೈಕೆಲ್ ಏಂಜೆಲೋ ಕೆತ್ತಿದ ಶಿಲ್ಪಕಲಾಕೃತಿಯಷ್ಟೇ ನುಣುಪಾಗುವ ತನಕ ಬಿಡುತ್ತಿರಲಿಲ್ಲ. ಅವರು ಶೇವ್ ಮಾಡದ ದಿನವೇ ಇರಲಿಲ್ಲ. ಅವರ ನುಣುಪು ಕೆನ್ನೆ ನೋಡಿ, “ಸರ್, ನೀವು ನಾಳೆಗೂ ಶೇವ್ ಮಾಡಿದಂತಿದೆ" ಎಂದು ತಮಾಷೆ ಮಾಡುತ್ತಿದ್ದೆ.

“ನನಗೆ ಇಷ್ಟ ಅಂತ ಎಲ್ಲರೂ ಗುಂಡು ಬಾಟಲಿಯನ್ನು ಪ್ರಸೆಂಟ್ ಮಾಡ್ತಾರೆ. ನನಗೆ ಅದಕ್ಕಿಂತ ಇಷ್ಟ ಇಲೆಕ್ಟ್ರಿಕ್ ಶೇವರ್" ಎಂದು ಅವರು ತಮ್ಮ ‘ wonder -ಕಣ್ಣು’ ಅಂಕಣದಲ್ಲಿ ಬರೆದು ಕೊಂಡಿದ್ದಾರೆ.

‘ಪಂಡಿತ ಭೀಮಸೇನ ಜೋಶಿ ಎಂಬ ತಬಲಾವಾದಕ’ ಎಂದು ಯಾರಾದರೂ ಹೇಳಿದರೆನ್ನಿ, ಹಾಗೆ ಹೇಳಿದವರ ಕೆನ್ನೆಗೆ ಹೊಡೆಯಬೇಕು ಎಂದು ಅನಿಸುವುದೋ, ಹಾಗೇ ‘ವೈಯೆನ್ಕೆ ಎಂಬ ಗಡ್ಡಧಾರಿ’ ಎಂದು ಯಾರಾದರೂ ಹೇಳಿದರೆ ಬಲವಾಗಿ ‘ಕೆನ್ನೆ’ ಸವರಬೇಕು ಎಂದು ಅನಿಸದಿರದು. ಶೇವಿಂಗ್ ವಿಷಯದಲ್ಲಿ ಅವರು ಅಷ್ಟು ರೇಜರ್ ಶಾರ್ಪ್!

ವೈಯೆನ್ಕೆ ಅವರ ತೀಕ್ಷ್ಣಮತಿತ್ವ ಗೊತ್ತಿರುವವರು, “ಅವರದು‌ ರೇಜರ್ ಶಾರ್ಪ್ ಮೆಮರಿ" ಎಂದು ಬಣ್ಣಿಸುತ್ತಿದ್ದುದು ಕಾಕತಾಳೀಯವಷ್ಟೇ. ಗೋಪಾಲ ಪೂಜಾರಿ ಅವರು ಮೂವತ್ತೈದು ವರ್ಷಗಳ ಹಿಂದೆ ಹೇಳಿದ ಆ ಮಾತು ನನ್ನ ಮನಸ್ಸಿನಲ್ಲಿ ಈಗಲೂ ಗಡ್ಡ ಕಟ್ಟಿಬಿಟ್ಟಿದೆ!

ತಲೆಗೂದಲು ಮತ್ತು ಗಡ್ಡದ ಕುರಿತು

ಇದು ವೈಯೆನ್ಕೆ ಹೇಳುತ್ತಿದ್ದ ಜೋಕ್. ಕೋಲ್ಯ ಆಫೀಸಿಗೆ ಆಗಾಗ ತಡವಾಗಿ ಬರುತ್ತಿದ್ದ. ಪ್ರತಿ ಸಲ ತಡವಾಗಿ ಬಂದಾಗಲೂ ಒಂದೊಂದು ಕಾರಣ ಕೊಡುತ್ತಿದ್ದ. ಒಂದು ದಿನ ಬಾಸ್ ಕೋಲ್ಯನನ್ನು ಕರೆದು “ಇಂದೇಕೆ ತಡ?" ಎಂದು ಕೇಳಿದ.

“ಸರ್, ಇಂದು ತಲೆಗೂದಲು ಕಟ್ ಮಾಡಿಸಿಕೊಳ್ಳಲು ಹೋಗಿದ್ದೆ. ಸೆಲೂನ್‌ನಲ್ಲಿ ಬಹಳ ಜನ ಇದ್ದರು. ಹೀಗಾಗಿ ಲೇಟಾಯ್ತು" ಎಂದ. ಹೋಗಲಿ ಎಂದು ಬಾಸ್ ಸುಮ್ಮನಾದ. ಅದಾಗಿ ಎರಡು ದಿನಗಳ ನಂತರ ಕೋಲ್ಯ ಮತ್ತೆ ಆಫೀಸಿಗೆ ತಡವಾಗಿ ಹೋದ. ಬಾಗಿಲಲ್ಲಿಯೇ ನಿಂತಿದ್ದ ಬಾಸ್, “ಇಂದೇಕೆ ತಡ?" ಎಂದು ಕೇಳಿದ.

ಅದಕ್ಕೆ ಕೋಲ್ಯ, “ಇಂದು ಶೇವ್ ಮಾಡಿಸಿಕೊಳ್ಳಲು ಹೋಗಿದ್ದೆ" ಎಂದ. ಆಗ ಬಾಸ್, “ಆಫೀಸ್ ಟೈಮಲ್ಲಿ ತಲೆಗೂದಲು ಕತ್ತರಿಸಿಕೊಳ್ಳಲು ಹೋಗಬಾರದು ಮತ್ತು ಶೇವ್ ಮಾಡಿಸಿಕೊಳ್ಳಲು ಹೋಗಬಾರದು ಎಂಬ ಜ್ಞಾನ ಇಲ್ಲವಾ?" ಎಂದು ಗದರಿದ. ಅದಕ್ಕೆ ಕೋಲ್ಯ, “ಸರ್, ಆಫೀಸ್ ಟೈಮಲ್ಲೂ ತಲೆಗೂದಲು ಮತ್ತು ಗಡ್ಡ ಬೆಳೆಯುತ್ತದಲ್ಲ?" ಎಂದ. ಬಾಸ್ ಮರುಮಾತಾಡಲಿಲ್ಲ