ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sandeep Sharma Mooteri Column: ಪಂಚಾತ್ಮಕ ದೈವಿಕ ಸಂಯೋಗದ ರಸಸಿದ್ಧಿ

ಇಲ್ಲಿ ದೇವತೆಯು ಕೇವಲ ಮೂರ್ತಿಯಲ್ಲಿಯೋ, ಭಾವದಲ್ಲಿಯೋ ನೆಲೆಗೊಳ್ಳದೆ, ಸಮಗ್ರ ಆವರಣದಲ್ಲಿ, ದಟ್ಟ ಕಾನನದಲ್ಲಿ, ಕಾಂತಾರದ ಕವಚದಲ್ಲಿ, ಮತ್ತು ಉಚ್ಛ್ವಾಸ-ನಿಶ್ವಾಸದಲಯದಲ್ಲಿ ವ್ಯಾಪಿಸಿದೆ. ರಿಷಬ್ ಶೆಟ್ಟಿಯವರು ಈ ದೇವತಾರಾ ಧಕ ಸಮಾಜವನ್ನು ಪ್ರತಿನಿಧಿಸಲು ಹೋದಾಗ, ಅವರು ಕೇವಲ ನಿರ್ದೇಶಕನೆಂಬ ಅರಿವನ್ನು ತ್ಯಜಿಸಿ, ತಾವೇ ಆರಾಧಕನಾಗಿ ಮಾರ್ಪಟ್ಟಿದ್ದಾರೆ ಎಂಬುದನ್ನು ನಾವು ಗಮನಿಸಬೇಕು.

ಪಂಚಾತ್ಮಕ ದೈವಿಕ ಸಂಯೋಗದ ರಸಸಿದ್ಧಿ

-

Ashok Nayak Ashok Nayak Oct 18, 2025 10:41 AM

ಸಮರ್ಥನೆ

ಸಂದೀಪ್‌ ಶರ್ಮಾ ಮೂಟೇರಿ

ಯತ್ರ ಭಾವಃ, ತತ್ರ ರಸಃ’- ಎಂಬುದು ಕಾವ್ಯಮೀಮಾಂಸೆಯ ಮೂಲಸಿದ್ಧಾಂತ. ಭಾವವಿಹೀ ನವಾದ ಕಲೆಯಾಗಲೀ, ಕಲಾತ್ಮಕ ಅಭಿವ್ಯಕ್ತಿರಹಿತವಾದ ಕೇವಲ ಭಾವಪ್ರಕಾಶವಾಗಲೀ ನಿರರ್ಥಕ. ಈ ಜಿಜ್ಞಾಸೆಗೆ ಸಮಕಾಲೀನ ಚಲನಚಿತ್ರ ಜಗತ್ತಿನಲ್ಲಿ ಪ್ರತ್ಯುತ್ತರವನ್ನು ನೀಡಿದ ರಿಷಬ್ ಶೆಟ್ಟಿಯವರ ‘ಕಾಂತಾರ’ ಚಿತ್ರವು ಕೇವಲ ಒಂದು ದೃಶ್ಯಕಾವ್ಯವಲ್ಲ; ಅದು ಧ್ವನಿ, ಶರೀರ, ನುಡಿ, ನೆಲ, ದೈವ- ಈ ಪಂಚಾತ್ಮಕಗಳ ಸಮುಚಿತ ಸಂಯೋಗದಿಂದ ಮೂಡಿಬಂದ ಸಮರ್ಪಿತ ತಪೋನುಸಂಧಾನ.

ಭೂತಾರಾಧನೆಯು ದಕ್ಷಿಣಕನ್ನಡ ನಾಡಿನ ನಾಡಿಮಿಡಿತದಲ್ಲಿರುವ ದೈವಕಲಾ ವಿಭಾಗವಾದರೆ, ‘ಕಾಂತಾರ’ವು ಅದನ್ನು ಚಿತ್ರಪಟದ ಮೇಲ್ಮೈಗೆ ಎತ್ತಿಹಿಡಿದು ಪಾರಮಾರ್ಥಿಕ ವೇದಿಕೆಯ ಮೇಲೆ ಪ್ರತಿಷ್ಠಾಪಿಸಿದ ಒಂದು ಗಂಭೀರ ಶಿಲ್ಪ. ಇಲ್ಲಿ ದೇವತೆಯು ಕೇವಲ ಮೂರ್ತಿಯಲ್ಲಿಯೋ, ಭಾವದಲ್ಲಿಯೋ ನೆಲೆಗೊಳ್ಳದೆ, ಸಮಗ್ರ ಆವರಣದಲ್ಲಿ, ದಟ್ಟ ಕಾನನದಲ್ಲಿ, ಕಾಂತಾರದ ಕವಚ ದಲ್ಲಿ, ಮತ್ತು ಉಚ್ಛ್ವಾಸ-ನಿಶ್ವಾಸದ ಲಯದಲ್ಲಿ ವ್ಯಾಪಿಸಿದೆ. ರಿಷಬ್ ಶೆಟ್ಟಿಯವರು ಈ ದೇವತಾರಾ ಧಕ ಸಮಾಜವನ್ನು ಪ್ರತಿನಿಧಿಸಲು ಹೋದಾಗ, ಅವರು ಕೇವಲ ನಿರ್ದೇಶಕನೆಂಬ ಅರಿವನ್ನು ತ್ಯಜಿಸಿ, ತಾವೇ ಆರಾಧಕನಾಗಿ ಮಾರ್ಪಟ್ಟಿದ್ದಾರೆ ಎಂಬುದನ್ನು ನಾವು ಗಮನಿಸಬೇಕು.

ಚಿತ್ರದ ಮಧುರಪೂರ್ಣವಾದ ಅವತರಣಿಕೆಯಲ್ಲಿ ಗೋಚರವಾಗುವ ಬೆರ್ಮೆ ಪಾತ್ರವು ಕೇವಲ ನಾಟಕೀಯ ಪಾತ್ರದ ನಿರ್ಮಿತಿಯಲ್ಲ; ಅವನು ನಾಡಿನ ಅಂತಃಕರಣದಲ್ಲಿಯೇ ಸುಪ್ತವಾಗಿದ್ದ ದೈವಭಾವನೆಯ ಪ್ರತಿನಿಧಿ. ಪುರಾಣಗಳಲ್ಲಿ ವರಾಹಾವತಾರವು ಭೂಮಿಯ ಸಮಗ್ರ ಉದ್ಧಾರ ಕ್ಕಾಗಿದ್ದರೆ, ಇಲ್ಲಿ ಪಂಜುರ್ಲಿಯು ಕೇವಲ ಒಂದು ನೆಲವನ್ನು ಸಂರಕ್ಷಿಸುವ ಧರ್ಮಭಾರವನ್ನು ಹೊತ್ತ ಪ್ರತಿನಿಧಿಯ ರೂಪಕ. ಈ ನಾಡಿನಲ್ಲಿ ಧರ್ಮವೆಂಬುದು ಕೇವಲ ಶಾಸಪಠಿತವಲ್ಲ; ಅದು ನೆಲದ ಮೂಲಭೂತ ನಂಬಿಕೆಯಲ್ಲಿ ಬೆಳೆದು ಬಂದ ಸಾರಸತ್ವ.

ಇದನ್ನೂ ಓದಿ: Sandeep Sharma Column: ಯುವ ಮನಸ್ಸಿನ ನೈತಿಕ ಬತ್ತಳಿಕೆ ಖಾಲಿ

ಪಾಶ್ಚಾತ್ಯ ದೃಶ್ಯಕಲಾ ವೈಭವದ ಮೇರುಶಿಲ್ಪಿ ರಿಡ್ಲಿ ಸ್ಕಾಟ್ ರ ‘ಎಕ್ಸೋಡಸ್’ ಮಹಾಚಿತ್ರದ ಮೋಸೆಸ್‌ನ ವಿಮೋಚನಾ ಪರ್ವಕ್ಕೂ, ಬೆರ್ಮೆ ಪಾತ್ರದ ಕಥಾನಿರೂಪಣಾ ಕ್ರಮಕ್ಕೂ, ಮೊಸರಲ್ಲಿ ಕಲ್ಲುಹುಡುಕುವಂತೆ, ಅನವಶ್ಯಕವಾದ ಕೆಸರೆರಚಾಟದಲ್ಲಿ ಕೆಲವರು ತಾಳೆ ಮಾಡುತ್ತಿದ್ದಾರೆ, ಮೇಲ್ಮೈಯಲ್ಲಿ ಸಾದೃಶ್ಯಗಳು ಅನಿವಾರ್ಯವಾಗಿ ಗೋಚರವಾದರೂ, ಅವು ಕಾಲದೇಶದ ವೈವಿಧ್ಯ ಹಾಗೂ ತಾತ್ವಿಕ ಆಳದ ಸಾರಭೂತ ಅಂಶಗಳಲ್ಲಿ ಸ್ಥಿರವಾಗಿ ನಿಲ್ಲುವುದಿಲ್ಲ.

ಹೀಗಿರುವಾಗ, ಈ ಚಿತ್ರಕ್ಕೂ ಆ ಚಿತ್ರಕ್ಕೂ ಹೋಲಿಕೆ ಎಲ್ಲಿಯದು? ಏಕೆಂದರೆ, ಮೋಸೆಸ್‌ನ ಆಖ್ಯಾನವು ಪೌರಾಣಿಕ ಚೌಕಟ್ಟಿನಲ್ಲಿ, ಅಂದರೆ ದಿವ್ಯಾನುಸಂಧಾನದ ಹಿನ್ನೆಲೆಯಲ್ಲಿ ನಿರೂಪಿತ ವಾಗಿದ್ದರೆ, ಬೆರ್ಮೆ ತನ್ನ ಜೀವನಯಾತ್ರೆಯಲ್ಲಿ ಸ್ಥಳೀಯ ಭೂತಾರಾಧನೆಯ ಅವಿಭಾಜ್ಯ ಅಂಗ ವಾದ ವರಾಹ ಸ್ವರೂಪದ ಪಂಜುರ್ಲಿಯ ಪ್ರತೀಕವಾಗಿ ಗೋಚರಿಸುತ್ತಾನೆ.

ಆತನು ದೌರ್ಜನ್ಯಕ್ಕೊಳಗಾದ ತನ್ನ ಜನಸಮೂಹವನ್ನು ಉದ್ಧಾರ ಮಾಡುವ ಮೂಲಕ, ಸನಾತನ ಭಾರತೀಯ ಕಲ್ಪನೆಯಾದ ವೈದಿಕ ವರಾಹಮೂರ್ತಿಯು ಭೂಮಿಯನ್ನು ಉದ್ಧರಿಸಲು ಕೈಗೊಂಡ ದಿವ್ಯಲೀಲೆಯನ್ನು ತನ್ನ ಕರ್ಮದ ಮೂಲಕ ಪರೋಕ್ಷವಾಗಿ ಅನುರಣನಗೊಳಿಸುತ್ತಾನೆ.

ಇಲ್ಲಿ ನೆಲವನ್ನು ಉಳಿಸುವುದೇ ಪ್ರಮುಖ ಧರ್ಮವಾಗಿ ಜೀವನದ ಪರಮ ಸಿದ್ಧಾಂತವಾಗಿ ಮೂಡಿ ಬರುತ್ತದೆ. ‘ಎಕ್ಸೋಡಸ್’ನಲ್ಲಿ -ರೋಹನ ಮಗನ ದುರಂತವು ಒಂದು ಮಹಾತಿರುವಿಗೆ ನಾಂದಿ ಯಾದಂತೆ, ಬೆರ್ಮೆಯ ಕಥಾನಕದಲ್ಲಿ ಅಮಾಯಕ ಜನಾಂಗದ ಮಕ್ಕಳ ದುರಂತವು ಅವನ ಪರಿವರ್ತನಾ ಪರ್ವಕ್ಕೆ ಮತ್ತು ಧರ್ಮ ಸಂಸ್ಥಾಪನೆಗೆ ದೈವೀಪ್ರೇರಣೆಯಾಗುತ್ತದೆ. ಈ ಮೂಲಕ, ಕಾಲಘಟ್ಟಗಳು ಭಿನ್ನವಾದರೂ, ದುಷ್ಟ ಶಕ್ತಿಗಳ ವಿನಾಶ ಮತ್ತು ಧಾರ್ಮಿಕ ನೆಲೆಯ ಪುನರು ತ್ಥಾನದ ಆಶಯವು ಎರಡೂ ಕಥಾನಕಗಳಲ್ಲಿ ಸಾರ್ವಕಾಲಿಕ ಮೌಲ್ಯವಾಗಿ ನಿಶ್ಚಿತಗೊಳ್ಳುತ್ತದೆ.

‘ಬ್ರಹ್ಮಕಲಶ’ ಗೀತೆಯಲ್ಲಿ ಚಿತ್ರಿತವಾದ ಧಾರ್ಮಿಕ ಚೌಕಟ್ಟು, ಬಾಹ್ಯ ಆಚರಣೆಗಳಿಗಿಂತ ಅಂತರಂಗದ ಶುದ್ಧತೆಯೇ ಮಿಗಿಲು ಎಂಬ ಶಾಶ್ವತ ಸಂದೇಶವನ್ನು ಸಾರುತ್ತದೆ. ಒಂದೆಡೆ, ರಾಜವಂಶದ ಕುಲೀನರು ಮತ್ತು ಪುರೋಹಿತ ವರ್ಗವು ಶಿಷ್ಟ ಸಂಪ್ರದಾಯಗಳಿಗೆ ಅನುಗುಣವಾಗಿ, ಸೂಕ್ಷ್ಮ ಕೆತ್ತನೆಯ ಶಿವಲಿಂಗವನ್ನು ಭಕ್ತಿ ವಿಜೃಂಭಣೆಯ ಪ್ರತೀಕವಾಗಿ ಆರಾಧಿಸುವುದನ್ನು ಕಾಣುತ್ತೇವೆ.

ಮತ್ತೊಂದೆಡೆ, ಬೆರ್ಮೆಯು ಯಾವ ಬಾಹ್ಯ ಆಕಾರದ ವೈಭವವನ್ನೂ ನಿರೀಕ್ಷಿಸದೆ, ಕೇವಲ ಕಲ್ಲಿನ ರೂಪದ ಅಮೂರ್ತ ಶಿಲೆಯ ಮುಂದೆ ತನ್ಮಯತೆಯಿಂದ, ಸಹಜ ಶ್ರದ್ಧೆಯಿಂದ ಪ್ರಾರ್ಥಿಸುತ್ತಾನೆ. ಇಲ್ಲಿ ಗೋಚರಿಸುವ ತಾತ್ವಿಕ ಮೌಲ್ಯದ ಸ್ಪಷ್ಟತೆ ಕದಂಬರ ಕಾಲದಿಂದಲೂ ಭಾರತೀಯ ಚಿಂತನೆ ಯಲ್ಲಿ ಪ್ರಬಲವಾಗಿರುವ ಸಿದ್ಧಾಂತಕ್ಕೆ ಪುಷ್ಟಿ ನೀಡುತ್ತದೆ- ಭಕ್ತಿಯ ಶುದ್ಧತೆಯು ಕೇವಲ ಬಾಹ್ಯ ಆಕಾರಗಳಲ್ಲಿ, ವಿಗ್ರಹದ ನಿಖರ ರೂಪದಲ್ಲಿ ಅಡಗಿಲ್ಲ; ಅದು ಅಂತರಂಗದ ಶ್ರದ್ಧೆಯ ಆಳದಲ್ಲಿ ಮತ್ತು ಹೃದಯದ ಪ್ರಾಮಾಣಿಕ ನೆಲೆಯಲ್ಲಿ ನೆಲೆಸಿದೆ. ಈ ನಿರೂಪಣೆಯು ಆಂತರಿಕ ಅನುಸಂಧಾನ ದ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತದೆ.

ಇದೇ ಸಂದರ್ಭದಲ್ಲಿ, ದೇವಾಲಯದ ಔತಣಕೂಟದ ದೃಶ್ಯವು ಸಾಮಾಜಿಕ ಶ್ರೇಣೀಕರಣದ ಕಠೋರ ವಾಸ್ತವವನ್ನು ನಿಚ್ಚಳವಾಗಿ ಮಂಡಿಸುತ್ತದೆ. ದೇವರ ಸನ್ನಿಧಿಗೆ ಅತ್ಯಂತ ಸಮೀಪದಲ್ಲಿ ಆಸೀನರಾಗಿ ಭೋಜನ ಸ್ವೀಕರಿಸುವ ಪುರೋಹಿತ ವರ್ಗ, ತದನಂತರ ಇತರ ಮೇಲ್ವರ್ಗಗಳು, ಮತ್ತು ಅಂತಿಮ ವಾಗಿ ಆಲಯದಿಂದ ದೂರದಲ್ಲಿ ನಿಂತು ಪ್ರಸಾದ ಸ್ವೀಕರಿಸುವ ಬೆರ್ಮೆ ಮತ್ತು ಆತನ ಸಮುದಾಯ- ಈ ವಿನ್ಯಾಸವು, ಆ ಕಾಲಘಟ್ಟದ ಸ್ಪೃಶ್ಯ-ಅಸ್ಪೃಶ್ಯತೆಯ ಕಠಿಣ ವಿಭಜನೆಯನ್ನೂ, ಹಾಗೂ ಧಾರ್ಮಿಕ ಪಾವಿತ್ರ್ಯದ ನೆಪದಲ್ಲಿ ಸಮಾಜದಲ್ಲಿ ಸೃಷ್ಟಿಯಾಗಿದ್ದ ಅಸಮಾನತೆಯ ಕಂದಕವನ್ನೂ ದೃಶ್ಯದ ಮೂಲಕವೇ ಸಮರ್ಥವಾಗಿ ಬಿಚ್ಚಿಡುತ್ತದೆ.

ಹೀಗೆ, ಧರ್ಮದ ಆಂತರಿಕ ಮೌಲ್ಯ ಮತ್ತು ಸಾಮಾಜಿಕ ಆಚರಣೆಗಳ ನಡುವಿನ ವಿರೋಧಾಭಾಸ ವನ್ನು ಈ ಗೀತೆ ಪ್ರಖರವಾಗಿ ಅನಾವರಣಗೊಳಿಸುತ್ತದೆ. ಬೆರ್ಮೆ ಪಾತ್ರವು ಗುಳಿಗನಾಗಿ ಪರಿವರ್ತಿತ ಗೊಳ್ಳುವ ಕ್ಷಣವು ಕೇವಲ ದೃಶ್ಯ ವೈಭವಕ್ಕಾಗಲೀ ಅಥವಾ ಅಲಂಕಾರಿಕ ಪ್ರದರ್ಶನಕ್ಕಾಗಲೀ ಮೀಸಲಾದುದಲ್ಲ; ಅದು ಪ್ರೇಕ್ಷಕ ಸಮುದಾಯದ ಅಂತಃಸ್ಸತ್ವವನ್ನು (Inner self) ಕಲಕುವ ಒಂದು ಭಾವಪೂರ್ಣ ದೈವೀ ಆವೇಶವಾಗಿದೆ.

ಈ ದೃಶ್ಯವು ಭೂತಾರಾಧನೆಯ ಪಾರಂಪರಿಕ ಆಚರಣೆಗಳನ್ನು ಸೂಕ್ಷ್ಮವಾಗಿ ಅಳವಡಿಸಿಕೊಂಡು, ಒಂದು ಶಾಸ್ತ್ರೋಕ್ತ ನಿಷ್ಠುರತೆಯನ್ನು ರಿಷಬ್ ಅತ್ಯಂತ ಸೂಕ್ಷ್ಮವಾಗಿ ಹಾಗೂ ಎಲ್ಲರೂ ಮೆಚ್ಚುವಂತೆ ತೆರೆಗೆ ತಂದಿದ್ದಾರೆ. ಇಲ್ಲಿ, ರಾಜಸತ್ತೆಯ ದರ್ಪ ಮತ್ತು ಅನ್ಯಾಯದ ಅಹಂಕಾರದ ಎದುರು ನಿಲ್ಲುವ ಜನಪದ ನಂಬಿಕೆಗಳ ಪರಮ ಶಕ್ತಿಯ ದಿವ್ಯ ಪ್ರಕಟಣೆಯನ್ನು ಕಾಣುತ್ತೇವೆ.

ಗುಳಿಗನ ದಿವ್ಯರೂಪ ಮತ್ತು ಅದರ ವಿಕ್ರಮವು ಕೇವಲ ಪೌರಾಣಿಕ ಘಟನೆಯಾಗಿ ಉಳಿಯದೆ, ದಮನಿತಗೊಂಡ ಸಮುದಾಯದ ಸಂಚಿತ ಆಕ್ರೋಶ ಮತ್ತು ನ್ಯಾಯಕ್ಕಾಗಿರುವ ಹೋರಾಟದ ಆಶಯದ ದೈವೀಕೃತ ರೂಪವಾಗಿ ಗೋಚರವಾಗುತ್ತದೆ. ರಿಷಬ್‌ರವರ ಅಭಿನಯದಲ್ಲಿನ ತೀವ್ರತೆ, ಅವರಲ್ಲಿ ಮೈದಳೆದ ದೈವಿಕ ಕ್ರೋಧ ಹಾಗೂ ನ್ಯಾಯದ ಪ್ರತಿಷ್ಠಾಪನೆಗಾಗಿರುವ ಅವರ ತವಕ ಮತ್ತು ಹಂಬಲವು, ಪ್ರೇಕ್ಷಕರನ್ನು ಪಾತ್ರದೊಂದಿಗೆ ಭಾವನಾತ್ಮಕವಾಗಿ ಅಂತಃಸಂಪರ್ಕಿಸುವಲ್ಲಿ ಯಶಸ್ವಿಯಾಗಿದೆ.

ಇದು ನಟನೆಯನ್ನು ಮೀರಿದ ಆಧ್ಯಾತ್ಮಿಕ ಅನುಸಂಧಾನದ ಮಟ್ಟವನ್ನು ತಲುಪಿದ ಒಂದು ಶ್ರೇಷ್ಠ ಕಲಾಪ್ರಯೋಗ ಎಂದರೆ ಅದು ಅತಿಶಯೋಕ್ತಿಯಲ್ಲ. ಈ ದೃಶ್ಯವು ಕಲೆಯ ಮೂಲಕ ಧಾರ್ಮಿಕ ಶ್ರದ್ಧೆಯ ಮತ್ತು ಸಾಮಾಜಿಕ ನ್ಯಾಯದ ತಾತ್ವಿಕ ಆಯಾಮಗಳನ್ನು ಸಮರ್ಥವಾಗಿ ಬೆಸೆಯುತ್ತದೆ. ಬೆರ್ಮೆ-ಗುಳಿಗ ಪರಿವರ್ತನೆಯು ಕೇವಲ ಕಥಾ ನಿರೂಪಣೆಯ ಒಂದು ಅವಿಚ್ಛಿನ್ನ ಘಟಕವಾಗಿ ನಿಲ್ಲದೆ, ಧರ್ಮದ ಸಂರಕ್ಷಣೆ ಮತ್ತು ಸನಾತನ ಕರ್ಮ ಸಿದ್ಧಾಂತದ ಪರಮ ತತ್ವಕ್ಕೆ ದೃಶ್ಯೋಪಾಧಿ ಯಾದ ರೂಪಕವನ್ನು ಒದಗಿಸುತ್ತದೆ.

ಗುಳಿಗನ ಅವತಾರವು ಉಗ್ರಮೂರ್ತಿ ದೈವತಗಳಲ್ಲಿ ಅತ್ಯಂತ ಪ್ರಬಲವಾದುದು. ಈ ದಿವ್ಯಶಕ್ತಿಯ ಪ್ರಕಟೀಕರಣವು ದುಷ್ಟಶಕ್ತಿಗಳ ನಿರ್ಮೂಲನಕ್ಕಾಗಿ ಕಟಿಬದ್ಧವಾಗಿರುವ ಅಖಂಡ ಪ್ರಕೃತಿಯ ಧಾರ್ಮಿಕ ಶಕ್ತಿಯ ಅಳಿಸಲಾಗದ ಪರಮಾಧಿಕಾರದ ಸಾಕ್ಷಾತ್ಕಾರವಾಗಿದೆ.

ಈ ದೃಶ್ಯಾನುಭವವು ಕೇವಲ ಸಾಮಾನ್ಯ ಸಿನಿಮೀಯ ರಂಜನಾವಳಿಯ ಎಲ್ಲೆಯನ್ನು ದಾಟಿ, ಪ್ರೇಕ್ಷಕರಿಗೆ ಸಾಂಸ್ಕೃತಿಕ ನಿಷ್ಠೆ ಮತ್ತು ಧಾರ್ಮಿಕ ಪಾವಿತ್ರ್ಯದ ಗಹನ ಅನುಭೂತಿಯನ್ನು ಕಲ್ಪಿಸು ತ್ತದೆ. ಕಥಾನಕದ ನಿರ್ಣಾಯಕ ಹಂತದಲ್ಲಿ ಬೆರ್ಮೆ ಚಾವುಂಡಿ ದೈವೀ ಸ್ವರೂಪದಲ್ಲಿ ನೀಡುವ ಅಂತಿಮ ನ್ಯಾಯತೀರ್ಮಾನವು, ನೋಡುಗರಲ್ಲಿ ಒಂದು ರೀತಿಯ ರೋಮಾಂಚನ ವನ್ನೂ, ತಾತ್ವಿಕ ಸಮಾಧಾನವನ್ನೂ ಮತ್ತು ಉದಾತ್ತ ಮುಕ್ತಿಯ ಭಾವಪ್ರಕಾಶವನ್ನೂ ಉಂಟು ಮಾಡುತ್ತದೆ.

ಕೊನೆಯದಾಗಿ, ಚಲನಚಿತ್ರವು ತಾನು ಉದ್ದೇಶಿಸಿದ ಗಹನವಾದ ತಾತ್ತ್ವಿಕದ ಮಟ್ಟವನ್ನು ಸಿದ್ಧಿಸಿ, ಉತ್ಕೃಷ್ಟ ಕಲಾಕೃತಿಯಾಗಿ ಪರಿಗಣಿತವಾಗಲು ಈ ದೃಶ್ಯವೇ ಮೂಲಕಾರಣವಾಗುತ್ತದೆ. ಈ ದೃಶ್ಯ ಕಾವ್ಯವು ತನ್ನ ಅಪೂರ್ವ ಆಧ್ಯಾತ್ಮಿಕ ತೀವ್ರತೆಯ ಕಾರಣದಿಂದ ಪ್ರೇಕ್ಷಕ ಸಮುದಾಯದ ಚಿತ್ತದಲ್ಲಿ ಶಾಶ್ವತವಾಗಿ ಪ್ರತಿಷ್ಠಾಪಿತಗೊಳ್ಳುತ್ತದೆ.

‘ಕಾಂತಾರ’ದಂಥ ಸನಾತನ ದೈವಾನುಸಂಧಾನದ ಕಲಾ ಕೃತಿಯನ್ನು, ಕೇವಲ ಸೀಮಿತ ‘ಎಡಪಂಥೀ ಯ ಸಿದ್ಧಾಂತ’ದ ಸಂಕುಚಿತ ದೃಷ್ಟಿಕೋನದಿಂದ ಅಳೆಯುವುದು, ಪರಮ ಸತ್ಯವನ್ನು ನಿರಾಕರಿಸಿ ದಂತೆ. ಇದನ್ನು ಕೇವಲ ಸಾಮಾಜಿಕ-ರಾಜಕೀಯ ದೃಷ್ಟಿಕೋನದಿಂದ ನೋಡಿ, ಭೂತಾರಾಧನೆಯ ಗಹನ ತಾತ್ವಿಕತೆಯನ್ನು ‘ಮೂಢನಂಬಿಕೆ’ಯೆಂದು ಅಣಕಿಸುವ ತರ್ಕಬುದ್ಧಿ, ನೆಲದ ಮೂಲಸಾರ ವನ್ನು ಗ್ರಹಿಸಲಾಗದ ನಿರ್ಜೀವ ಪ್ರಜ್ಞೆಯಷ್ಟೇ.

ಕಲೆಯ ಭಾವ ಹೃದಯ ಮತ್ತು ಆಚರಣೆಯ ಧಾರ್ಮಿಕ ಶರೀರವನ್ನು ಛೇದಿಸಿ, ಕೇವಲ ರಕ್ತಹೀನ ಶಬ್ದಾರ್ಥಗಳನ್ನು ಹುಡುಕುವ ವಿಮರ್ಶೆಯು ಎಂದಿಗೂ ದೃಶ್ಯ ಹಾಗೂ ಕಾವ್ಯಮೀಮಾಂಸೆ ಆಗದು. ‘ಕಾಂತಾರ’ ಕೇವಲ ಸಿನಿಮಾ ಅಲ್ಲ; ಅದು ಸನಾತನ ಧರ್ಮಶ್ರದ್ಧೆಯ ಅಖಂಡ ಮತ್ತು ಅವಿಚ್ಛಿನ್ನ ಸಾಕ್ಷಾತ್ಕಾರ! ಈ ಚಿತ್ರವು ಜೀವನ್ಮುಕ್ತಿಯನ್ನು ಅರಿಯಲು, ಕೇವಲ ‘ಕ್ರಾಂತಿ’ಯೆಂಬ ಬಾಹ್ಯ ಪ್ರಚೋದನೆಯನ್ನು ಹುಡುಕುವ ಮನಸ್ಸು ಸಾಲದು; ಭೂಮಿಯ ಆಳದಲ್ಲಿ ಬೇರೂರಿದ ಧರ್ಮ ಸತ್ಯದ ಅಂತರಂಗದ ಅರಿವು ಅಪೇಕ್ಷಿತ ಎಂದೂ ಸೂಚಿಸುತ್ತದೆ...

(ಲೇಖಕರು ಸಿವಿಲ್ ಎಂಜಿನಿಯರ್)