ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Srivathsa Joshi Column: ಆಪರೇಷನ್‌ ಸಿಂದೂರ್‌ ಪುಸ್ತಕ ಬರೆದ ಲೆ.ಜ| ಧಿಲ್ಲೊನ್‌ ಜೊತೆ

ನೀವು ಬಳಸುವ ಭಾಷೆ ನಿಮ್ಮ ಪಾಲನೆ-ಪೋಷಣೆ ಹೇಗೆ ನಡೆದಿದೆ, ನಿಮಗೆ ಯಾವ ಥರದ ಶಿಕ್ಷಣ ಸಿಕ್ಕಿದೆ ಎಂಬುದರ ಪ್ರತೀಕ. ಇತರರನ್ನು ಗೌರವದಿಂದ ಕಾಣಿರಿ. ಹಕ್ಕುಗಳಿಗಾಗಿ ಆಗ್ರಹಿಸುವ ಮೊದಲು ಕಾನೂನು ಪಾಲಿಸುವ ಸತ್ಪ್ರಜೆ ಆಗುವುದನ್ನು ಕಲಿಯಿರಿ. ನಿಮ್ಮ ಈಗಿನ ಮಾನಸಿಕತೆ ಯಿಂದ ಬೇಗ ಹೊರಬನ್ನಿ. ಜೈ ಹಿಂದ್!" ಎಂದು ಬರೆದವರು.

ತಿಳಿರು ತೋರಣ

ಅನಿರೀಕ್ಷಿತವಾಗಿ ಬಂದೊದಗಿದ ಅಮೂಲ್ಯ ಅವಕಾಶ. ಸ್ನೇಹಿತ ಆನಂದ ಕೂಡಗಿ ಹಿಂದಿನ ದಿನವಷ್ಟೇ ವಾಟ್ ಆಪ್‌ನಲ್ಲಿ ಒಂದು ಫ್ಲೈಯರ್ ಕಳುಹಿಸಿ, ಬಿಡುವಿದ್ದರೆ ಭಾಗವಹಿಸಿ ಎಂದು ಬರೆದಿದ್ದರು. ಇಲ್ಲಿ ನಮ್ಮನೆಗೆ ಅಷ್ಟೇನೂ ದೂರವಿಲ್ಲದ ಕಮ್ಯುನಿಟಿ ಸೆಂಟರ್‌ನಲ್ಲಿ ಮೊನ್ನೆ ಆಗಸ್ಟ್ 22ರಂದು ಏರ್ಪಾಡಾಗಿದ್ದ ಕಾರ್ಯಕ್ರಮವದು. ವಾಷಿಂಗ್ಟನ್ ಡಿಸಿಯ ಇಂಡಿಯನ್ ಅಮೆರಿಕನ್ ಡಯಾಸ್ಪೊರಾ ಅಸೋಸಿಯೇಷನ್‌ನ ಆಯೋಜನೆ. “ಕಾರ್ಯತಂತ್ರದ ಒಳನೋಟಗಳು ಹಾಗೂ ಭಾರತದ ಶೌರ್ಯ, ನಾಯಕತ್ವ ಮತ್ತು ರಾಷ್ಟ್ರಘನತೆಗೆ ಗೌರವ ನಮನಗಳನ್ನು ಸಲ್ಲಿಸುವ ಒಂದು ಅನನ್ಯ ಪ್ರೇರಣಾದಾಯಿ ಕಾರ್ಯಕ್ರಮ.

Operation Sindoor - The Untold Story of India's Deep Strikes Inside Pakistanಎಂಬ ಪುಸ್ತಕ ಬರೆದಿರುವ ನಿವೃತ್ತ ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್ ಧಿಲ್ಲೊನ್ ನಮ್ಮೊಂದಿಗಿರುತ್ತಾರೆ. ಅವರಿಂದ ಆಶಯಭಾಷಣ, ಅವರೊಡನೆ ಪ್ರಶ್ನೋತ್ತರ ಇರುತ್ತದೆ. ಸಹಿ ಹಾಕಿರುವ ಪುಸ್ತಕದ ಪ್ರತಿಗಳು ಲಭ್ಯವಿರುತ್ತವೆ. ಚಹ ಮತ್ತು ಲಘೂಪಾಹಾರ ವ್ಯವಸ್ಥೆಯಿದೆ." - ಇವಿಷ್ಟೂ ವಿವರಗಳು ಫ್ಲೈಯರ್ ನಲ್ಲಿದ್ದುವು. ಶನಿವಾರ ಹೇಗೂ ರಜಾದಿನ, ಇದರಲ್ಲಿ ಭಾಗವಹಿಸಲೇಬೇಕು, ಪುಸ್ತಕ ಕೊಂಡು ಓದಲೇಬೇಕು, ಸಾಧ್ಯವಾದರೆ ಫೋಟೊ ಕ್ಲಿಕ್ಕಿಸಬೇಕು ಎಂದು ನಿರ್ಧರಿಸಿ ಹಾಗೆಯೇ ಮಾಡಿದೆ. ಲೆಫ್ಟಿನೆಂಟ್ ಜನರಲ್ ಧಿಲ್ಲೊನ್ ಅವರನ್ನು ಪ್ರತ್ಯಕ್ಷ ನೋಡಬೇಕು, ನಮಸ್ಕರಿಸಿ ಗೌರವಿಸಬೇಕು ಎಂದು ನನಗನಿಸುವುದಕ್ಕೆ ಇನ್ನೊಂದು ಪ್ರಬಲ ಕಾರಣವೂ ಇತ್ತು.

ಕೆಲ ದಿನಗಳ ಹಿಂದೆ ಸುದ್ದಿಯಾಗಿದ್ದ, ಕಾರ್ಗಿಲ್ ಸಮೀಪ ಭಾರತೀಯ ಸೇನೆಯ ಚೆಕ್ ಪೋಸ್ಟ್ ಬಳಿ “ವಿ ಆರ್ ಜೆನ್ ಝೀ, ವಿ ಆರ್ ನಾಟ್ ಟಾಲರೇಟ್ ದಿಸ್..." ಎಂದು ಹರಕುಮುರುಕು ಇಂಗ್ಲಿಷ್‌ನಲ್ಲಿ ಗಂಟಲು ಹರಿಯುವಂತೆ ಕಿರುಚಿ ಸೀನ್ ಕ್ರಿಯೇಟ್ ಮಾಡಿದ್ದ, ಮದೋನ್ಮತ್ತ ಮಹಿಳಾಮಣಿ ಯೊಬ್ಬಳಿಗೆ ಸೋಷಿಯಲ್ ಮೀಡಿಯಾದಲ್ಲಿ ಯೋಗ್ಯವಾದ ಬುದ್ಧಿಮಾತೊಂದನ್ನು ಗೌರವಯುತ ವಾಗಿಯೇ- “ಸೈನಿಕರೂ ತೆರಿಗೆ ಕಟ್ಟುತ್ತಾರೆ, ಅವರಿಗೆ ಸಂಬಳ ಕೈಗೆ ಸಿಗುವುದಕ್ಕೂ ಮೊದಲೇ. ನೀವುಗಳೆಲ್ಲ ಅಂಥ ಸ್ಥಳಗಳಿಗೆ ವಿಹಾರವಿನೋದದ ಪ್ರವಾಸ ಮಾಡುವುದು ಸಾಧ್ಯವಾಗಿದೆಯಾದರೆ ಅದಕ್ಕೆ ನಮ್ಮ ಸೈನಿಕರು ಜೀವದ ಹಂಗು ತೊರೆದು ಅಹರ್ನಿಶಿ ರಕ್ಷಣಾಕಾರ್ಯದಲ್ಲಿ ತೊಡಗಿರು ವುದು ಕಾರಣ.

ಇದನ್ನೂ ಓದಿ:Srivathsa Joshi Column: ಕರಿಮಣಿ ಸರದೊಳ್ ಚೆಂಬವಳಮಂ ಕೋದಂತಿರೆ...

ನೀವು ಬಳಸುವ ಭಾಷೆ ನಿಮ್ಮ ಪಾಲನೆ-ಪೋಷಣೆ ಹೇಗೆ ನಡೆದಿದೆ, ನಿಮಗೆ ಯಾವ ಥರದ ಶಿಕ್ಷಣ ಸಿಕ್ಕಿದೆ ಎಂಬುದರ ಪ್ರತೀಕ. ಇತರರನ್ನು ಗೌರವದಿಂದ ಕಾಣಿರಿ. ಹಕ್ಕುಗಳಿಗಾಗಿ ಆಗ್ರಹಿಸುವ ಮೊದಲು ಕಾನೂನು ಪಾಲಿಸುವ ಸತ್ಪ್ರಜೆ ಆಗುವುದನ್ನು ಕಲಿಯಿರಿ. ನಿಮ್ಮ ಈಗಿನ ಮಾನಸಿಕತೆ ಯಿಂದ ಬೇಗ ಹೊರಬನ್ನಿ. ಜೈ ಹಿಂದ್!" ಎಂದು ಬರೆದವರು. ಧಿಲ್ಲೊನ್ ಅವರ ಆ ಟ್ವೀಟ್‌ನ ತೆರೆಯಚ್ಚನ್ನು ನಾನು ಸಂಗ್ರಹಿಸಿಟ್ಟಿದ್ದೇನೆ, ಮತ್ತೆಮತ್ತೆ ಓದುತ್ತೇನೆ. ಇದಲ್ಲದೆಯೂ ಧಿಲ್ಲೊನ್ ಅವರ ಬಗ್ಗೆ ಒಂದಷ್ಟು ಸಾಮಾನ್ಯಜ್ಞಾನ ಮಾಹಿತಿಯನ್ನು ಅಂತರಜಾಲದಿಂದ ಕಲೆ ಹಾಕಿದ್ದೆ.

ಕನ್ವಲ್‌ಜಿತ್ ಸಿಂಗ್ ಧಿಲ್ಲೊನ್ ಎಂದು ಅವರ ಪೂರ್ಣ ಹೆಸರು. ಸೇನೆಯಲ್ಲಿ ಸೇವೆ ಸಲ್ಲಿಸಿದವರ ಕುಟುಂಬ ದಿಂದಲೇ ಬಂದವರು. ಪಂಜಾಬ್‌ನವರೆಂದರೆ ಬಹುತೇಕ ಹಾಗೆಯೇ. ಶೌರ್ಯದ ಕೌಟುಂಬಿಕ ಹಿನ್ನೆಲೆ ಎಷ್ಟೆಂದರೆ ಸ್ವತಃ ತಾಯಿಯೇ ‘ಹುಲಿಯನ್ನು ಕೊಂದ’ ಖ್ಯಾತಿಯವರು! ಅದು ಧಿಲ್ಲೊನ್ ಕೇವಲ 3 ವರ್ಷದವರಾಗಿದ್ದಾಗ ನಡೆದ ಘಟನೆ. ತಂದೆ ನೇಪಾಳದಲ್ಲಿ ಕರ್ತವ್ಯದಲ್ಲಿದ್ದರು. ಹುಲಿಯೊಂದು ಅವರ ಮೇಲೆ ಭೀಕರವಾಗಿ ದಾಳಿ ನಡೆಸಿತ್ತು. ತಾಯಿ ತನ್ನ ಪ್ರಾಣದ ಹಂಗು ತೊರೆದು ಹುಲಿಯ ಕುತ್ತಿಗೆಗೆ ಶಾಲು ಬಿಗಿದು ಉಸಿರುಗಟ್ಟಿಸಿ ಕೊಂದರು.

ತಂದೆಯೇನೋ ಬದುಕಿದರು, ಆದರೆ ತಾಯಿ ತೀವ್ರ ಗಾಯಗಳಿಂದಾಗಿ ವೀರಮರಣವನ್ನಪ್ಪಿದರು. ಇದೂ ಧಿಲ್ಲೊನ್ ಧೈರ್ಯಕ್ಕೆ ಒಂಥರದ ಸೂರ್ತಿಯೇ. ಹಾಗೆಯೇ ಅವರು ಸುಮಾರು ನಾಲ್ಕು ದಶಕಗಳ ಮಿಲಿಟರಿ ಸೇವೆಯಲ್ಲಿದ್ದಾಗಲೇ, ವಿವಿಧ ಪದಕ ಮತ್ತು ಪುರಸ್ಕಾರಗಳನ್ನು ಪಡೆಯುತ್ತಿದ್ದಾ ಗಲೇ, ಎಂ.ಎಸ್‌ಸಿ, ಎಂ.ಫಿಲ್ ಪದವಿಗಳನ್ನೂ ಕೊನೆಗೆ ಪಿಎಚ್‌ಡಿ ಪದವಿಯನ್ನೂ ಪಡೆದವರು. ಅಷ್ಟೇ ಅಲ್ಲ, 2022ರಲ್ಲಿ ಸೇನೆಯಿಂದ ನಿವೃತ್ತಿಯ ಬಳಿಕ ಹಿಮಾಚಲಪ್ರದೇಶದಲ್ಲಿ ಐಐಟಿ ಮಂಡಿ ಸಂಸ್ಥೆಯ ಬೋರ್ಡ್ ಆಫ್ ಗವರ್ನರ್ಸ್ ಆಗಿ ಒಂದು ಅವಧಿಯ ಸೇವೆ ಸಲ್ಲಿಸಿದವರು. ಲೇಖಕರಾಗಿ ಈ ಹಿಂದೆ ‘ಕಿತ್ನೇ ಘಾಜಿ ಆಯೇ ಕಿತ್ನೇ ಘಾಜಿ ಗಯೇ’ ಮತ್ತು ‘ವಫಾದಾರಿ ಇನಾಮ್ದಾರಿ ಜಿಮ್ಮೇದಾರಿ’ ಎಂಬೆರಡು ಪುಸ್ತಕಗಳನ್ನು ಬರೆದವರು. ಆಪರೇಷನ್ ಸಿಂದೂರ್ ಬಗೆಗಿನ ಪ್ರಸಕ್ತ ಪುಸ್ತಕವಾದ ಮೇಲೆ ನಾಲ್ಕನೆಯದೊಂದರ ತಯಾರಿಯಲ್ಲಿರುವವರು. ಆವತ್ತು ನಾನು ಕಾರ್ಯಕ್ರಮದ ಸ್ಥಳಕ್ಕೆ ತಲುಪಿದಾಗ ಆನಂದ ಕೂಡಗಿ ಆಗಲೇ ಬಂದಿದ್ದರು.

62_joshi

ಮುಖ್ಯ ಆಯೋಜಕರಾಗಿದ್ದ ಪ್ರಸಾದ್ ಅಡಪ, ಕೃಷ್ಣ ಗುಡಿಪಾಟಿ, ಮತ್ತೊಬ್ಬ ಕನ್ನಡಿಗ ರಾಘವೇಂದ್ರ ಮುಂತಾದವರನ್ನು ಅವರೇ ನನಗೆ ಪರಿಚಯಿಸಿದರು. ಉಳಿದಂತೆ ಅಲ್ಲಿ ಸೇರಿದ್ದವರು ಹೆಚ್ಚಾಗಿ ಉತ್ತರ ಭಾರತೀಯರೇ. ವಿಶೇಷವಾಗಿ ಪಂಜಾಬ್ ಹರ್ಯಾನಾ ದಿಲ್ಲಿ ಕಡೆಯವರು. ಭಾರತದ ಸೇನೆಯಲ್ಲಿ ಪ್ರಾದೇಶಿಕ ಅನುಪಾತವೂ ಬಹುಮಟ್ಟಿಗೆ ಹಾಗೇಯೇ ತಾನೆ. ಸ್ವಲ್ಪ ಹೊತ್ತಿನಲ್ಲೇ ಲೆ.ಜ| ಧಿಲ್ಲೊನ್ ಅವರ ಆಗಮನವಾಯ್ತು.

ನೀಳಕಾಯದ ಆಜಾನುಬಾಹು ಆಕರ್ಷಕ ವ್ಯಕ್ತಿ. ಸಿವಿಲ್ ಡ್ರೆಸ್ ಆದರೂ ಗರಿಗರಿ ಸೂಟುಬೂಟಿನಲ್ಲಿ ಎದ್ದುಕಾಣುವ ಮಿಲಿಟರಿ ಶಿಸ್ತು. ತಲೆಗೆ ಕೇಸರಿ ಬಣ್ಣದ ಪಗಡಿ. ಮುಖದಲ್ಲಿ ಗಾಂಭೀರ್ಯ ಮಂದಹಾಸಗಳ ಸಮತೋಲನ. ಅವರ ಪತ್ನಿ ನೀತಾ ಸಹ ಜೊತೆಗಿದ್ದರು. ಹಾಗೆಯೇ ಆವತ್ತಿನ ಸಭೆಯಲ್ಲಿ ಪ್ರಸಕ್ತ ಅಮೆರಿಕ ಪ್ರವಾಸದಲ್ಲಿರುವ ಬೇರೆ ಕೆಲವು ಹಾಲಿ-ಮಾಜಿ ಸೇನಾಧಿಕಾರಿಗಳೂ ಇದ್ದರು.

ನೌಕಾದಳದಿಂದ ಎಡ್ಮಿರಲ್ ಭರತನ್, ಕಮಾಂಡರ್ ಸೋನಿ, ವಾಯುಸೇನೆಯಿಂದ ಸ್ಕ್ವಾಡ್ರನ್ ಲೀಡರ್ ನೇಹಾ ಚೌಧರಿ ಮುಂತಾದವರು. ಮಿಲಿಟರಿ ಮಂದಿ ಇದ್ದುದರಿಂದಲೋ ಏನೋ ಆಯೋಜಕರು ಸರಿಯಾದ ಸಮಯಕ್ಕೆ ಕಾರ್ಯಕ್ರಮ ಆರಂಭಿಸುವ ಚಾಕಚಕ್ಯತೆ ತೋರಿದರು. ಇಲ್ಲಿ ಹುಟ್ಟಿ ಬೆಳೆದ ಒಂದಿಬ್ಬರು ‘ಜೆನ್ ಝೀ’ ಅನಿವಾಸಿಗಳು ವಂದೇ ಮಾತರಂನ ಪೂರ್ಣ ಆವೃತ್ತಿಯನ್ನು ರಾಗಬದ್ಧವಾಗಿ ಹಾಡಿದರು. ‘ಯೇ ಮೇರೇ ವತನ್ ಕೇ ಲೋಗೋಂ’ ಮುಂತಾದ ಎವರ್‌ಗ್ರೀನ್ ಗೀತೆಗಳ ಗಾಯನವೂ ಆಯಿತು. ನಾರ್ತ್ ಕೆರೊಲಿನಾದಿಂದ ಐದಾರು ಗಂಟೆ ಡ್ರೈವ್ ಮಾಡಿಕೊಂಡು ಆ ಕಾರ್ಯಕ್ರಮಕ್ಕೆಂದೇ ಬಂದಿದ್ದ ಪೂಜಾ ಎಂಬುವರೊಬ್ಬರು ಪಹಲ್ಗಾಮ್ ದುರ್ಘಟನೆ ಸಂಭವಿಸಿದ್ದಾಗ ಆ ದೃಶ್ಯಗಳನ್ನು ಟಿವಿಯಲ್ಲಿ ನೋಡಿ ಭಾವೋದ್ವೇಗ ತಡೆಯಲಾಗದೆ ತಾನು ಬರೆದಿದ್ದ ಹೃದಯಸ್ಪರ್ಶಿ ಕವಿತೆಯೊಂದನ್ನು ವಾಚಿಸಿದರು.

ಒಟ್ಟಿನಲ್ಲಿ ಭಾರತಮಾತೆಯ ಬಗೆಗಿನ ವಿಶೇಷ ಗೌರವಾಭಿಮಾನಗಳು ಅಲ್ಲಿನ ವಾತಾವರಣದಲ್ಲಿ ತುಂಬಿತುಳುಕುತ್ತಿದ್ದುವು. ಧಿಲ್ಲೊನ್ ಭಾಷಣ ಆರಂಭಿಸಿದರು. ರಾಷ್ಟ್ರಪ್ರೇಮ, ಸೇನೆಯ ಬಗೆಗೆ ಹೆಮ್ಮೆ, ಆಪರೇಷನ್ ಸಿಂದೂರ್ ಕಾರ್ಯಾಚರಣೆ ಬಗೆಗಂತೂ ಹೆಚ್ಚಿನ ಕೆಚ್ಚು ಅವರ ಒಂದೊಂದು ಮಾತಿನಲ್ಲೂ. “ನೀವೆಲ್ಲ ಅನಿವಾಸಿ ಭಾರತೀಯರಾಗಿಯೂ ಹೃದಯದಲ್ಲಿ ಭಾರತೀಯತೆಯನ್ನು ಹೊತ್ತಿದ್ದೀರಿ. ಭಾರತವು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಬೆಳೆಯುತ್ತಿರುವುದಕ್ಕೆ ನಿಮ್ಮ ಕೊಡುಗೆಯೂ ಅಪಾರವಾಗಿದೆ, ವಿಶೇಷವಾಗಿ ಅಮೆರಿಕದಂತಹ ಬಲಿಷ್ಠ ದೇಶದಲ್ಲಿ ನಿಮ್ಮ ಪ್ರಾತಿನಿಧ್ಯ ಮತ್ತು ಈ ಸಮಾಜಕ್ಕೆ ನೀವು ನೀಡುತ್ತಿರುವ ಕೊಡುಗೆ ಶ್ಲಾಘನೀಯ.

ಇಲ್ಲಿರುವ ನಿಮ್ಮ ಪಾಸ್‌ಪೋರ್ಟ್ ಈಗ ಬೇರೆ ಬಣ್ಣದ್ದಿರಬಹುದು; ಆದರೆ ನಿಮ್ಮ ಹೃದಯದಲ್ಲಿನ್ನೂ ತಿರಂಗ ಹಾರಾಡುತ್ತಿದೆಯೆಂದು ನಾನು ಬಲ್ಲೆ!" - ಹೃದಯ ಗೆಲ್ಲುವ ಮಾತುಗಳು ಮುದಗೊಳಿಸದೇ ಇರುತ್ತವೆಯೇ? “2016ರಲ್ಲಿ ಉರಿ ದಾಳಿ ನಡೆದಾಗ ಅದು ಕೇವಲ ಭೂಸೇನೆಯಷ್ಟೇ ಪಾಲ್ಗೊಂಡಿದ್ದ ಪ್ರತೀಕಾರವಾಗಿತ್ತು. ನಿಯಂತ್ರಣ ರೇಖೆಯಿಂದ ಕೇವಲ 5ರಿಂದ 10 ಕಿ.ಮೀ ಒಳಗಿನ ಮತ್ತು ಒಂದೇ ರಾತ್ರಿಯ ಕಾರ್ಯಾಚರಣೆ ಆಗಿತ್ತು. ಆಮೇಲೆ ಪುಲ್ವಾಮಾ ದಾಳಿ ನಡೆದಾಗ ನಾನು ಕಾಶ್ಮೀರದಲ್ಲಿ ಕೋರ್ ಕಮಾಂಡರ್ ಆಗಿದ್ದೆ.

ನಾವು ಆ ಉಗ್ರರ ಮಾಡ್ಯೂಲ್ ಅನ್ನು ಕೇವಲ 100 ಗಂಟೆಗಳ ಒಳಗೆ ಧ್ವಂಸಗೊಳಿಸಿದ್ದೆವು. ತದನಂತರ ಬಾಲಾಕೋಟ್ ವೈಮಾನಿಕ ದಾಳಿ ನಡೆದಾಗ, ಅದರಲ್ಲಿ ವಾಯುಪಡೆ ಮಾತ್ರ ಭಾಗವಹಿಸಿತ್ತು. ನಮ್ಮ ಫೈಟರ್ ಜೆಟ್‌ಗಳು ನಿಯಂತ್ರಣ ರೇಖೆಯನ್ನು ದಾಟಿ, ಪಾಕ್ ಆಕ್ರಮಿತ ಕಾಶ್ಮೀರವನ್ನು ಸಂಪೂರ್ಣವಾಗಿ ದಾಟಿ, ಅಂತಾರಾಷ್ಟ್ರೀಯ ಗಡಿಯೊಳಗೆ ನುಗ್ಗಿ ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಬಾಂಬ್ ದಾಳಿ ನಡೆಸಿ ಸುರಕ್ಷಿತವಾಗಿ ಮರಳಿದವು. ಇದು ನಮ್ಮ ಮಿಲಿಟರಿ ಶಕ್ತಿಯ ಪ್ರದರ್ಶನವಾಗಿತ್ತು. ಆದರೆ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ಕೃತ್ಯ ಅತ್ಯಂತ ಕ್ರೂರವಾಗಿತ್ತು.

ಧರ್ಮದ ಆಧಾರದ ಮೇಲೆ ಪುರುಷರನ್ನು ಪ್ರತ್ಯೇಕಿಸಿ, ಅವರ ತಾಯಂದಿರು, ಹೆಂಡತಿಯರು ಮತ್ತು ಮಕ್ಕಳ ಕಣ್ಣೆದುರೇ ಸಾಲಾಗಿ ನಿಲ್ಲಿಸಿ ಅತ್ಯಂತ ಕ್ರೂರವಾಗಿ ಕೊಂದರು. ಈ ಬಾರಿ ಭಾರತದ ಪ್ರತಿಕ್ರಿಯೆ ಕೇವಲ ಒಂದು ಸೇನಾಪಡೆಗೆ ಸೀಮಿತವಾಗಿರಲಿಲ್ಲ. ದೇಶದ ರಾಜಕೀಯ ಇಚ್ಛಾಶಕ್ತಿ, ಮಿಲಿಟರಿ ಶಕ್ತಿ, ಮತ್ತು ರಾಜತಾಂತ್ರಿಕ ಪ್ರಯತ್ನಗಳು ಒಂದಾಗಿ ಪಾಕಿಸ್ತಾನದ ವಿರುದ್ಧ ಸಂಪೂರ್ಣ ರಾಷ್ಟ್ರೀಯ ಶಕ್ತಿಯನ್ನು ಪ್ರಯೋಗಿಸಲಾಯಿತು. ನಮ್ಮ ರಾಜತಾಂತ್ರಿಕರು ಎಷ್ಟು ಅತ್ಯುತ್ತಮವಾಗಿ ಕೆಲಸ ಮಾಡಿದ್ದರೆಂದರೆ, ಜಗತ್ತಿನ ಯಾವುದೇ ದೇಶವೂ ಭಾರತವನ್ನು ಆಕ್ರಮಣಕಾರಿ ದೇಶ ಎಂದು ಕರೆಯಲಿಲ್ಲ. ಒಂದುವೇಳೆ ಯುದ್ಧವು ಮುಂದುವರಿಯುತ್ತಿದ್ದರೂ ಅದನ್ನು ನಿಭಾಯಿಸಲು ನಮ್ಮ ಆರ್ಥಿಕ ಶಕ್ತಿಯೂ ಮಿಲಿಟರಿಯ ಬೆನ್ನಿಗೆ ನಿಂತಿತ್ತು.

1971ರ ಯುದ್ಧದ ನಂತರ ಮೊದಲ ಬಾರಿಗೆ ನಾವು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಒಳಗಿರುವ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿದೆವು. ಕೇವಲ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನಮ್ಮ ದಾಳಿ ಸೀಮಿತವಾಗಿರ ಲಿಲ್ಲ..." “ಈ ಯುದ್ಧದಲ್ಲಿ ಪ್ರತಿಯೊಬ್ಬ ಭಾರತೀಯನೂ ತನ್ನದೇ ಆದ ಕೊಡುಗೆ ನೀಡಿದ್ದಾನೆ. ತರಗತಿಯಲ್ಲಿ ಶಿಕ್ಷಕರು ಕೂಡ ಭಾರತ ಮಾಡುತ್ತಿರುವುದು ಧರ್ಮಯುದ್ಧ ಎಂದು ಮಕ್ಕಳಿಗೆ ತಿಳಿಸುವ ಮೂಲಕ ಕೊಡುಗೆ ನೀಡಿದ್ದಾರೆ. ಇಲ್ಲಿ ಧರ್ಮ ಎಂದರೆ ಮತಾಚರಣೆಯಲ್ಲ, ಬದಲಿಗೆ ಕರ್ತವ್ಯ. ಅಷ್ಟೊಂದು ಮಹಿಳೆಯರಿಗೆ, ತಾಯಂದಿರಿಗೆ ಮತ್ತು ಮಕ್ಕಳಿಗೆ ಅನ್ಯಾಯ ಮಾಡಿದ ಉಗ್ರರನ್ನು ಮಟ್ಟಹಾಕುವುದು ದೇಶದ ಕರ್ತವ್ಯವಾಗಿತ್ತು.

ಏಪ್ರಿಲ್ 22ರಿಂದ ಮೇ 6ರವರೆಗಿನ ಆ 15 ದಿನಗಳಲ್ಲಿ ದೇಶವೇ ಆತಂಕ ಮತ್ತು ಉತ್ಸುಕತೆಯಿಂದ ಕಾಯುತ್ತಿತ್ತು. ಆದರೆ ಮಿಲಿಟರಿ ದೃಷ್ಟಿಕೋನದಿಂದ ನೋಡುವುದಾದರೆ, ಇಂತಹ ದೊಡ್ಡ ಕಾರ್ಯಾಚರಣೆಗೆ 15 ದಿನಗಳ ಸಮಯ ಅತ್ಯಂತ ಕಡಿಮೆಯಾಗಿತ್ತು. ಪರಮಾಣು ಶಕ್ತಿ ಹೊಂದಿ ರುವ ಎರಡು ದೇಶಗಳು ಯುದ್ಧದ ಅಂಚಿಗೆ ಬಂದಿರುವುದು ವಿಶ್ವದ ಇತಿಹಾಸದಲ್ಲಿ ಇದೇ ಮೊದಲು. 15 ದಿನಗಳಲ್ಲಿ ಇಡೀ ವಿಶ್ವಕ್ಕೆ ನಮ್ಮ ನಿಲುವನ್ನು ಮನವರಿಕೆ ಮಾಡಿಕೊಡಬೇಕಾಗಿತ್ತು. ಜೊತೆಗೆ ನಮ್ಮ ಕ್ಷಿಪಣಿಗಳು, ಮದ್ದುಗುಂಡುಗಳು, ಪೆಟ್ರೋಲಿಯಂ ಮತ್ತು ವೈದ್ಯಕೀಯ ಸಂಪನ್ಮೂಲ ಗಳನ್ನು ಸಜ್ಜುಗೊಳಿಸಬೇಕಾಗಿತ್ತು.

ಸುಮಾರು 700ರಿಂದ 1000 ಉಗ್ರಗಾಮಿ ನೆಲೆಗಳ ಪಟ್ಟಿ ನಮ್ಮಲ್ಲಿತ್ತು. ಅದನ್ನು ಕರಾರುವಾಕ್ಕಾಗಿ 9 ಪ್ರಮುಖ ನೆಲೆಗಳಿಗೆ ಸೀಮಿತಗೊಳಿಸಿ, ಅವುಗಳ ಬಗ್ಗೆ ಅತ್ಯಂತ ನಿಖರವಾದ ಮಾಹಿತಿ ಪಡೆಯ ಬೇಕಾಗಿತ್ತು. ಉಗ್ರರ ಕಟ್ಟಡಗಳ ನಕ್ಷೆ ಮತ್ತು ಮುನ್ಸಿಪಾಲಿಟಿ ಬ್ಲೂಪ್ರಿಂಟ್‌ಗಳನ್ನು ಪಡೆದು, ನಮ್ಮ ಕ್ಷಿಪಣಿಯು ಕಟ್ಟಡದ ಮೇಲ್ಛಾವಣಿಗೆ ತಗುಲಿದಾಗ ಸ್ಫೋಟಗೊಳ್ಳದೆ, ನೇರವಾಗಿ ಬೇಸ್‌ಮೆಂಟ್ ಒಳಗೆ ನುಗ್ಗಿ ಸೋಟಗೊಳ್ಳುವಂತೆ ಅತ್ಯಂತ ನಿಖರ ಯೋಜನೆ ರೂಪಿಸಲಾಯಿತು.

300 ಕಿ.ಮೀ ದೂರದಿಂದ ಉಡಾಯಿಸಿದರೂ ಯಾವುದೇ ಕ್ಷಿಪಣಿಯನ್ನು ತಡೆಯಲು ಶತ್ರು ದೇಶಕ್ಕೆ ಸಾಧ್ಯವಾಗಲಿಲ್ಲ..." “ಯುದ್ಧವನ್ನು ಹೇಗೆ ಪ್ರಾರಂಭಿಸಬೇಕು ಮತ್ತು ಅದನ್ನು ಹೇಗೆ ಮುಗಿಸಬೇಕು ಎಂಬುದಕ್ಕೆ ಒಂದು ಸ್ಪಷ್ಟವಾದ ಕಾರ್ಯತಂತ್ರ ಇರಬೇಕು. ನಮ್ಮಲ್ಲಿ ಅದು ನಿಚ್ಚಳವಾಗಿತ್ತು. ನಾವು ದಾಳಿ ಮಾಡಿದಾಗ ನಮ್ಮ ಸೇನಾ ಪ್ರಧಾನ ಕಚೇರಿಯ ಟ್ವಿಟರ್ ಖಾತೆಯು ‘ಆಪರೇಷನ್ ಸಿಂದೂರ್: ನ್ಯಾಯ ಒದಗಿಸಲಾಗಿದೆ’ ಎಂದು ಸ್ಪಷ್ಟಪಡಿಸಿತು. ನಾವು ಕೇವಲ ಉಗ್ರರ ನೆಲೆಗಳನ್ನು ಧ್ವಂಸ ಗೊಳಿಸಿದ್ದೇವೆ, ಯಾವುದೇ ಮಿಲಿಟರಿ ಅಥವಾ ನಾಗರಿಕ ಪ್ರದೇಶಗಳ ಮೇಲೆ ದಾಳಿ ಮಾಡಿಲ್ಲ ಮತ್ತು ನಾವು ಯುದ್ಧವನ್ನು ಹಿಗ್ಗಿಸಲು ಬಯಸುವುದಿಲ್ಲ ಎಂದು ಜಗತ್ತಿಗೆ ಸಾರಿದೆವು. ಆದರೆ ಪಾಕಿಸ್ತಾನವು ತಿರುಗಿ ಬಿದ್ದು ನಮ್ಮ ನಿರಪರಾಧಿ ನಾಗರಿಕರನ್ನು ಕೊಂದಾಗ ಮತ್ತು ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಲು ಯತ್ನಿಸಿದಾಗ ಅದು ಯುದ್ಧದ ಸ್ವರೂಪ ಪಡೆಯಿತು.

ಮೇ 9 ಮತ್ತು 10ರಂದು ನಾವು ತಿರುಗೇಟು ನೀಡಿ ಅವರ ಏರ್‌ಬೇಸ್‌ಗಳ ಮೇಲೆ ದಾಳಿ ನಡೆಸಿದೆವು. ಅಲ್ಲೂ ನಮ್ಮ ಒಂದೇಒಂದು ಕ್ಷಿಪಣಿಯನ್ನು ತಡೆಯಲು ಅವರಿಗೆ ಸಾಧ್ಯವಾಗಲಿಲ್ಲ. ಕೊನೆಗೆ ಮೇ 10ರಂದು ಪಾಕಿಸ್ತಾನದ ಮಿಲಿಟರಿ ಆಪರೇಷನ್ಸ್ ಮಹಾನಿರ್ದೇಶಕರು ಭಾರತದ ಮಿಲಿಟರಿ ಆಪರೇಷನ್ಸ್ ಮಹಾನಿರ್ದೇಶಕರಿಗೆ ಕರೆ ಮಾಡಿ ಯುದ್ಧವಿರಾಮಕ್ಕಾಗಿ ಬೇಡಿಕೊಂಡರು. ನಾವು ಅವರ ಇನ್ನೂ ಹೆಚ್ಚಿನ ಮಿಲಿಟರಿ ಮತ್ತು ಆರ್ಥಿಕ ಆಸ್ತಿಗಳನ್ನು ಧ್ವಂಸಗೊಳಿಸಬಹುದಾದ ಸ್ಥಿತಿಯಲ್ಲಿದ್ದೆವು.

ಆದರೆ ಒಂದು ಜವಾಬ್ದಾರಿಯುತ ರಾಷ್ಟ್ರವಾಗಿ ಮತ್ತು ಪರಮಾಣು ಶಕ್ತಿಯಾಗಿ, ನಮ್ಮ ಗುರಿ ಸಾಧನೆ ಅದಾಗಲೇ ಆಗಿದ್ದರಿಂದ ತತ್‌ಕ್ಷಣ ನಾವು ಆ ಯುದ್ಧವಿರಾಮವನ್ನು ಒಪ್ಪಿಕೊಂಡೆವು. ಕೇವಲ ನಾಲ್ಕು ದಿನಗಳಲ್ಲಿ ಅಂದರೆ 88 ಗಂಟೆಗಳಲ್ಲಿ ಒಂದು ಪರಮಾಣು ರಾಷ್ಟ್ರವನ್ನು ಯುದ್ಧ ವಿರಾಮ ಕ್ಕಾಗಿ ಬೇಡುವಂತೆ ಮಾಡಿದ ಈ ಕಾರ್ಯಾಚರಣೆಯನ್ನು ಇಂದು ವಿಶ್ವದ ಪ್ರಮುಖ ಮಿಲಿಟರಿ ಅಕಾಡೆಮಿಗಳೆಲ್ಲ ಅಧ್ಯಯನ ಮಾಡುತ್ತಿವೆ!

ಈಗ ಭಾರತವು ಒಂದು ಸ್ಪಷ್ಟವಾದ ಭಯೋತ್ಪಾದನಾ ವಿರೋಧಿ ನೀತಿಯನ್ನು ಅಳವಡಿಸಿ ಕೊಂಡಿದೆ. ಅದೇನೆಂದರೆ, ಭಯೋತ್ಪಾದಕ ಕೃತ್ಯ ಎಸಗುವ ಉಗ್ರ, ಅದಕ್ಕೆ ಬೆಂಬಲ ನೀಡುವ ಉಗ್ರಗಾಮಿ ಸಂಘಟನೆ, ಮತ್ತು ಆಶ್ರಯ ನೀಡುವ ದೇಶ- ಈ ಮೂವರ ನಡುವೆ ಭಾರತ ಯಾವುದೇ ವ್ಯತ್ಯಾಸ ನೋಡುವುದಿಲ್ಲ. ನಮ್ಮ ಪಾಲಿಗೆ ಮೂವರೂ ಭಯೋತ್ಪಾದಕರೇ ಮತ್ತು ಅವರಿಗೆ ನಾವು ಸೂಕ್ತ ರೀತಿಯಲ್ಲಿ ಬುದ್ಧಿ ಕಲಿಸುವವರೇ. ಈ ಹಿಂದಿನ ಯುದ್ಧಗಳಲ್ಲಿ ಜಗತ್ತು ನಮ್ಮನ್ನು ತಪ್ಪಾಗಿ ಬಿಂಬಿಸುತ್ತಿತ್ತು, ಆದರೆ ‘ಆಪರೇಷನ್ ಸಿಂದೂರ್’ ಅನ್ನು ಇಡೀ ವಿಶ್ವವೇ ಶ್ಲಾಘಿಸಿದೆ ಮತ್ತು ನಮ್ಮ ಆತ್ಮರಕ್ಷಣೆಯ ಹಕ್ಕನ್ನು ಒಪ್ಪಿಕೊಂಡಿದೆ.

ಮಿಲಿಟರಿ, ಆರ್ಥಿಕ ಮತ್ತು ರಾಜಕೀಯವಾಗಿ ಬಲಿಷ್ಠರಾಗಿದ್ದಾಗ ಮಾತ್ರ ಇಡೀ ಜಗತ್ತು ನಿಮ್ಮನ್ನು ಗೌರವಿಸುತ್ತದೆ." ಧಿಲ್ಲೊನ್ ಅವರ ಭಾಷಣವನ್ನು ಮೈಯೆಲ್ಲ ಕಿವಿಯಾಗಿ ಕೇಳಿದೆವು, ಚಪ್ಪಾಳೆ ತಟ್ಟಿದೆವು, ಜೈಕಾರ ಹಾಕಿದೆವು, ನಮಗರಿವಿಲ್ಲದಂತೆಯೇ ಭಾವುಕರಾದೆವು. ಪ್ರತೀಕಾರದ ಕಥೆಯ ವಾಕ್ಯವಾಕ್ಯಕ್ಕೂ ಆನಂದಬಾಷ್ಪ ಸುರಿಸಿದೆವು. ಇಂತಹ ಪರಾಕ್ರಮಿ ಸೇನೆಯನ್ನು ತುಚ್ಛೀಕರಿಸುವ ನೀಚರೂ, ಸಾಕ್ಷಿ ಕೇಳುವ ಸ್ವಾರ್ಥಿಗಳೂ ಇದ್ದಾರಲ್ಲ ಎಂದು ವ್ಯಗ್ರರಾದೆವು.

ಭಾಷಣವೇ ಇಷ್ಟು ಭಾವೋದ್ವೇಗ ನೀಡಿದರೆ ಇನ್ನು ಪುಸ್ತಕದ ಓದು ಹೇಗಿದ್ದೀತು ಎಂದು ಅಲ್ಲಿಯೇ ಊಹಿಸಿದ್ದೆ. ಕಾರ್ಯಕ್ರಮ ಮುಗಿಸಿ ಮನೆಗೆ ಹಿಂದಿರುಗಿದವನೇ ಕೈಗೆತ್ತಿಕೊಂಡೆ. ಪುಸ್ತಕ ಓದಿನ ಮಟ್ಟಿಗೆ ತುಸು ಆಲಸಿ ಎಂದೇ ಹೇಳಬಹುದಾದ, ಓದಿದರೂ ಬಸವನಹುಳುವಿನ ವೇಗ ಎಂದೇ ಹೇಳಿಕೊಳ್ಳುವ ನಾನೇ ‘ಒಂದೇ ಗುಕ್ಕಿನಲ್ಲಿ’ ಓದಿ ಮುಗಿಸಿದೆನೆಂದರೆ ಅದೆಷ್ಟು ಚುಂಬಕ ಶಕ್ತಿಯ ನಿರೂಪಣೆ ಇರಬಹುದೆಂದು ಊಹಿಸಿ!

ಆಪರೇಷನ್ ಸಿಂದೂರ್‌ನ ಸಚಿತ್ರ ವಿವರಗಳಂತೂ ಹೌದೇಹೌದು, ಅದಕ್ಕೆ ಪೀಠಿಕೆಯಾಗಿ 1947ರಲ್ಲಿ ವಿಭಜನೆಯ ಲಾಗಾಯ್ತಿಂದ ಪಾಕಿಸ್ತಾನ ತೋರಿರುವ ಕುತ್ಸಿತಬುದ್ಧಿ ಕ್ರೌರ್ಯಗಳ ಕ್ರೊನಾಲಜಿ ಯನ್ನೂ ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ. “ಮಿಲಿಟರಿಯಲ್ಲಿ ನಾವು ರಾಜಕೀಯ ಮತ್ತು ಮತ ಧರ್ಮಗಳ ವಿಚಾರ ಎತ್ತುವುದಿಲ್ಲ. ನಮ್ಮದೇನಿದ್ದರೂ ರಾಷ್ಟ್ರಪ್ರೇಮವೊಂದೇ" ಎಂದು ಧಿಲ್ಲೊನ್ ಆವತ್ತು ಭಾಷಣದಲ್ಲೂ ಹೇಳಿದ್ದರು, “ನಿಮ್ಮ ಪ್ರಶ್ನೆಗಳೂ ಅವೆರಡು ವಿಷಯಗಳ ಹೊರತಾಗಿ ಇರಲಿ" ಎಂದಿದ್ದರು. ಪುಸ್ತಕದಲ್ಲೂ ಅಷ್ಟೇ. ಅವರೇನೂ ಮೋದಿಯವರ ಮುಖಸ್ತುತಿ ಮಾಡಿಲ್ಲ. ಆದರೆ ಮುತ್ಸದ್ದಿತನ ಮುಂದಾಳುತ್ವವನ್ನು ಮೆಚ್ಚಲಿಕ್ಕೆ ಕಂಜೂಸಿತನ ತೋರಿಲ್ಲ. ಕಾರ್ಯಾಚರಣೆಗೆ ‘ಸಿಂದೂರ್’ ಹೆಸರನ್ನು ಪ್ರಧಾನಿಯವರೇ ಸೂಚಿಸಿದ್ದೆಂದು ಹೇಳುತ್ತ ಅದೆಷ್ಟು ಗಾಢವಾಗಿ ಪರಿಣಮಿಸಿತೆಂದು ವಿವರಿಸಿದ್ದಾರೆ.

ಅಂಥದೊಂದು ನಾಯಕತ್ವವಿದ್ದುದರಿಂದಲೇ ಗುರಿಯಲ್ಲಿ ಸ್ಪಷ್ಟತೆ ಇತ್ತು, ಕಾರ್ಯಾಚರಣೆ ಮುಗಿದ ಮೇಲೆ ಸುದ್ದಿಗೋಷ್ಠಿಯಲ್ಲಿ “ಎಷ್ಟು ಮಂದಿ ಪಾಕಿಸ್ತಾನೀಯರು ಸತ್ತರು?" ಎಂಬ ಅತಿಬಾಲಿಶ ಪ್ರಶ್ನೆಗೆ ‘Our job is to hit the target, not to count the body bags" ಎಂದು ಕಡ್ಡಿಮುರಿದಂತೆ ಉತ್ತರ ಕೊಡುವುದು ಸಾಧ್ಯವಾಯ್ತು ಎಂದು ಉಪಸಂಹಾರದಲ್ಲಿ ಬರೆದಿದ್ದಾರೆ. ಓದಿ ಮುಗಿಸಿದಾಗ ನನಗನಿಸಿದ್ದಿಷ್ಟೇ: ಈ ಪುಸ್ತಕ ಪ್ರಾದೇಶಿಕ ಭಾಷೆಗಳಿಗೆ ಅನುವಾದ ಆಗಬೇಕು.

ಪ್ರತಿಯೊಬ್ಬ ಭಾರತೀಯನೂ- ದಿಮಾಗಿ ನಕ್ಸಲರೂ ಸೇರಿದಂತೆ- ಇದನ್ನು ಓದಬೇಕು. ಪ್ರಾಥಮಿಕ ಶಾಲೆಯಲ್ಲಿ ಕಲಿತಿದ್ದ, ಮಾಖನಲಾಲ್ ಚತುರ್ವೇದಿಯವರ ಹಿಂದೀ ಕವಿತೆ ‘ಪುಷ್ಪ ಕೀ ಅಭಿಲಾಷಾ’ ದಲ್ಲಿ ಬರುವ “ಮುಝೇ ತೋಡ್ ಲೇನಾ ಬನಮಾಲೀ ಉಸ್ ಪಥ್ ಪರ್ ದೇನಾ ತುಮ್ ಫೇಂಕ್| ಮಾತೃಭೂಮಿ ಪರ್ ಶೀಶ್ ಚಢಾನೇ ಜಿಸ್ ಪಥ್ ಜಾವೇಂ ವೀರ ಅನೇಕ್" ಸಾಲುಗಳ ನಿಜಾರ್ಥ ವನ್ನು ಮತ್ತೊಮ್ಮೆ ಮನನ ಮಾಡಿಕೊಳ್ಳಬೇಕು.

ಶ್ರೀವತ್ಸ ಜೋಶಿ

View all posts by this author