ತಿಳಿರು ತೋರಣ
srivathsajoshi@yahoo.com
ಅಮೆರಿಕದಲ್ಲಿ- ನಿರ್ದಿಷ್ಟವಾಗಿ ಹೇಳುವುದಾದರೆ ನ್ಯೂಯಾರ್ಕ್, ಇಂಡಿಯಾನಾ, ನಾರ್ತ್ ಕೆರೊ ಲಿನಾ, ಟೆಕ್ಸಸ್, ವರ್ಮಾಂಟ್, ವರ್ಜೀನಿಯಾ, ಕ್ಯಾಲಿಫೋರ್ನಿಯಾ ಮತ್ತು ಫ್ಲೋರಿಡಾ ಸಂಸ್ಥಾನ ಗಳಲ್ಲಿ- uZಜಛಿ ಅಂದರೆ ಒಂದು ಹಣ್ಣು ಅಥವಾ ಒಂದು ಬಣ್ಣ ಮಾತ್ರವಲ್ಲ, ಒಂದು ಸ್ಥಳನಾಮ ಕೂಡ! ಏಕೆಂದರೆ ಈ ಎಂಟು ಸಂಸ್ಥಾನಗಳಲ್ಲೂ ತಲಾ ಒಂದೊಂದು ಕೌಂಟಿ (ಕರ್ನಾಟಕದಲ್ಲಿ ಜಿಲ್ಲೆಗಳಿದ್ದಂತೆ ಎಂದುಕೊಳ್ಳಿ) ‘ಆರೆಂಜ್’ ಎಂಬ ಹೆಸರಿನದು ಇದೆ.
ಈ ಪೈಕಿ ಮೊದಲ ಆರು, ಹಿಂದಿನ ಕಾಲದಲ್ಲಿ ಅಲ್ಲಿಗೆ ಬಂದು ನೆಲೆಸಿದ ಯುರೋಪಿಯನ್ ವಲಸೆಗಾರರಿಂದಾಗಿ, ಮೂಲತಃ ಆ ಯುರೋಪಿಯನ್ನರ ರಾಜಮನೆತನಗಳ ಉಪನಾಮಧೇಯ ಆರೆಂಜ್ ಎಂದು ಇದ್ದದ್ದರಿಂದಾಗಿ, ಕೌಂಟಿ ಹೆಸರನ್ನಾಗಿ ಪಡೆದಿವೆ ಎನ್ನುತ್ತದೆ ಇತಿಹಾಸ. ಆದರೆ ಕ್ಯಾಲಿಫೋರ್ನಿಯಾ ಮತ್ತು ಫ್ಲೋರಿಡಾದಲ್ಲಿರುವ ಆರೆಂಜ್ ಕೌಂಟಿಗಳಿಗೆ ಮಾತ್ರ ಭೌಗೋಳಿಕವಾಗಿ, ಅಂದರೆ ಅಲ್ಲಿ ಕಿತ್ತಳೆ ಹಣ್ಣು ವಿಪುಲವಾಗಿ ಬೆಳೆಯುವುದರಿಂದಲೇ, ಆರೆಂಜ್ ಎಂಬ ಹೆಸರು ಬಂದಿರುವುದು.
ಇನ್ನೂ ಒಂದು ಅತಿ ಸ್ವಾರಸ್ಯಕರ ಸಂಗತಿಯೆಂದರೆ ಮನೋರಂಜನೆ ಥೀಮ್‌ಪಾರ್ಕ್‌ಗಳ ಕಾಶಿ ಎಂದೇ ಕರೆಸಿಕೊಳ್ಳುವ ವಿಶ್ವವಿಖ್ಯಾತ ‘ಡಿಸ್ನಿ ಲ್ಯಾಂಡ್’ ಇರುವುದು ಕ್ಯಾಲಿಫೋರ್ನಿಯಾ ಸಂಸ್ಥಾನದ ಆರೆಂಜ್ ಕೌಂಟಿಯಲ್ಲಾದರೆ, ಅಮೆರಿಕದ ಎರಡನೆಯ ಡಿಸ್ನಿ ಥೀಮ್‌ಪಾರ್ಕ್ ‘ಡಿಸ್ನಿ ವರ್ಲ್ಡ್’ ಇರುವುದು ಫ್ಲೋರಿಡಾ ಸಂಸ್ಥಾನದ ಆರೆಂಜ್ ಕೌಂಟಿಯಲ್ಲಿ! ಇದು ಉದ್ದೇಶಪೂರ್ವಕ ಹೀಗಾದದ್ದೋ ಅಥವಾ ಕಾಕತಾಳೀಯವೋ ನನಗೆ ಸರಿಯಾಗಿ ಗೊತ್ತಿಲ್ಲ.
ಇದನ್ನೂ ಓದಿ: Srivathsa Joshi Column: ಬಾಗಿಲನು ತೆರೆದು ಬಹುಮಾನ ಕೊಡೊ ಹರಿಯೇ...
ಆದರೆ ಜನರಲ್ ನಾಲೆಡ್ಜ್‌ನ ಹಸಿವುಳ್ಳವರಿಗೆ ವೆರಿ ವೆರಿ ಇಂಟರೆಸ್ಟಿಂಗ್ ಕುರುಕಲು ಎನ್ನುವುದಂತೂ ಹೌದು. ಸರಿ, ಅಮೆರಿಕದಲ್ಲಿ ಆರೆಂಜ್ ಅನ್ನೋದು ಸ್ಥಳನಾಮವೂ ಆಗುತ್ತದೆಯಾದರೆ ಫ್ರಾನ್ಸ್ ದೇಶದಲ್ಲಿ ಅದೊಂದು ಟೆಲಿಕಮ್ಯುನಿಕೇಷನ್ ಕಂಪನಿಯ ಹೆಸರೂ ಆಗುತ್ತದೆ!
ಬರೀ ಫ್ರಾನ್ಸ್‌ನಲ್ಲಷ್ಟೇ ಅಲ್ಲ, ಯುರೋಪ್ ಮತ್ತು ಆಫ್ರಿಕಾ ಖಂಡಗಳಲ್ಲೂ ಆ ಕಂಪನಿಯು ಇಂಟರ್‌ನೆಟ್, ಮೊಬೈಲ್, ವೈ-ಫೈ, ಐಪಿ-ಟಿವಿ ಇತ್ಯಾದಿ ಸೇವೆಗಳನ್ನು ಒದಗಿಸುವುದರಿಂದ ಅಲ್ಲಿನ ಜನರೆಲ್ಲರ ಬಾಯಿಯಲ್ಲಿ ಆರೆಂಜ್ ಅಂದರೆ ಹಣ್ಣೇ ಆಗಬೇಕಿಲ್ಲ. ಭಾರತದಲ್ಲಿ ಬಿಎಸ್ಸೆನ್ನೆಲ್, ಏರ್‌ಟೆಲ್, ಜಿಯೊ ಮುಂತಾದವು ಇದ್ದಂತೆ, ಅಮೆರಿಕದಲ್ಲಿ ಟಿ-ಮೊಬೈಲ್, ವೆರೈಜೋನ್, ಎಟಿ ಆಂಡ್ ಟಿ ಇತ್ಯಾದಿ ಇದ್ದಂತೆ, ಸಂಪರ್ಕ ಸಂವಹನದ ಮಾತು ಬಂದಾಗೆಲ್ಲ ಕೇಳಿಬರುವ ಹೆಸರೇ ಆಗಿರುತ್ತದೆ.
ಇಂಟರೆಸ್ಟಿಂಗ್ಲಿ, ಆ ಕಂಪನಿಯ ಲೋಗೊ ಒಂದು ಆರೆಂಜ್ ಕಲರ್‌ನ ಚಚ್ಚೌಕ, ಅದರಲ್ಲಿ ಕೆಳಭಾಗ ದಲ್ಲಿ Orange ಎಂದು ಬರೆದದ್ದು. ಕಂಪನಿ ಲೋಗೊ ಎಷ್ಟು ಸಿಂಪಲ್ ಆಗಿ ಇರಬಹುದು ಎನ್ನುವು ದಕ್ಕೆ ಒಳ್ಳೆಯ ಉದಾಹರಣೆ. ಇಂಗ್ಲಿಷ್ ಭಾಷೆಯಲ್ಲಿ Orange ಪದದ್ದೊಂದು ವಿಶೇಷತೆಯೂ ಇದೆ.
ಏನೆಂದರೆ ಅದಕ್ಕೆ ಪಕ್ಕಾ ಪ್ರಾಸವಾಗಿ ಇಂಗ್ಲಿಷ್‌ನಲ್ಲಿ ಬೇರೊಂದು ಪದ ಇಲ್ಲ! ಇದು ಪೂರ್ತಿ ಸತ್ಯದ ಮಾತಲ್ಲ, ಜೀವಶಾಸ್ತ್ರದಲ್ಲಿ Sporange ಅಂತೊಂದು ಪಾರಿಭಾಷಿಕ ಪದ ಇದೆ, ಅದರ ಉಚ್ಚಾರ ಆರೆಂಜ್‌ನಂತೆಯೇ ಇದೆ ಎನ್ನುವವರೂ ಇದ್ದಾರೆ. ಆದರೂ ಜನಸಾಮಾನ್ಯರ ತಿಳಿವಳಿಕೆಯ ಮಟ್ಟಿಗೆ Orange ಪ್ರಾಸವಿಲ್ಲದ ಪದ ಎಂದು ಒಪ್ಪಿಕೊಳ್ಳೋಣ.

ಹಾಗಂತ, ಆ ವಿಶಿಷ್ಟತೆ ಅದೊಂದರದೇ ಹೆಗ್ಗಳಿಕೆಯೇನಲ್ಲ. ಇಂಗ್ಲಿಷ್‌ನಲ್ಲಿ ಬೇರೆ ಕೆಲವು ಚಿರಪರಿಚಿತ ಪದಗಳಿಗೂ- silver, purple, month, wolf, opus, marathon ಮುಂತಾದುವು ಗಳಿಗೂ- ಸರಿಯಾದ ಪ್ರಾಸ ಒದಗಿಸುವ ಪದಗಳಿಲ್ಲ. ಇಂಗ್ಲಿಷ್‌ನಲ್ಲಿ ಕವಿತೆ ಹೊಸೆಯುವ ಕವಿಗಳಿಗೆ ಇದು ಗೊತ್ತಿರುತ್ತದೆ. ಆದರೆ Orange ಮಾತ್ರ ವರ್ಲ್ಡ್ ಫೇಮಸ್ ಆದ್ದರಿಂದ Which word in English does not have a rhyme? ಎಂದು ಸಾಮಾನ್ಯಜ್ಞಾನದ ಪ್ರಶ್ನೆ ಎದುರಾದರೆ, ಥಟ್ಟಂತ ಹೇಳಬೇಕಾಗಿ ಬಂದರೆ, Orange* ಸುಲಭದ ಉತ್ತರ ಆಗಿರುತ್ತದೆ.
ಇಂತಿರುವ Orange ಪದ ಇಂಗ್ಲಿಷ್ ಭಾಷೆಗೆ ಹೇಗೆ, ಎಲ್ಲಿಂದ, ಯಾವಾಗ ಬಂತು ಎಂಬ ವಿಚಾರವೂ ಬಹಳವೇ ಕುತೂಹಲಕಾರಿಯಾಗಿ ಇದೆ. ಪಾಶ್ಚಾತ್ಯ ಜಗತ್ತಿಗೆ, ಅಥವಾ ಇಂಗ್ಲಿಷ್ ಭಾಷೆಗೆ Orange ಮೊದಲು ಒಂದು ಹಣ್ಣಾಗಿ ಪರಿಚಯವಾಯ್ತು, ಕೆಲವು ಶತಮಾನಗಳ ನಂತರವಷ್ಟೇ ಅದೊಂದು ಬಣ್ಣದ ಹೆಸರೂ ಆಯ್ತು ಎಂಬುವುದು ಮತ್ತೂ ಕುತೂಹಲಕರ ಸಂಗತಿ.
ಇಲ್ಲಿವೆ ಅದರ ಬಗೆಗಿನ ಕೆಲವು ವಿವರಗಳು: ಇಂದು ನಾವು ಕಿತ್ತಳೆ ಹಣ್ಣನ್ನು ನೆನಪಿಸಿಕೊಂಡರೆ ನಯವಾದ ದುಂಡಗಿನ ಆಕಾರದ, ಸಿಹಿ-ಹುಳಿ ರಸವತ್ತಾದ, ಮತ್ತು ಅದರ ಹೆಸರಿನಂತೆ ಕಿತ್ತಳೆ ಬಣ್ಣದ ಹಣ್ಣಿನ ಚಿತ್ರಣವೇ ಕಣ್ಮುಂದೆ ಬರುತ್ತದೆ. ಇದು ಜಗತ್ತಿನಾದ್ಯಂತ ಸಾಮಾನ್ಯವಾಗಿ ಎಲ್ಲರಿಗೂ ಪರಿಚಿತ ಹಣ್ಣೇ ತಾನೆ? ಅಮೆರಿಕದಲ್ಲೂ ಹಣ್ಣುಗಳ ದೈನಂದಿನ ಸರಾಸರಿ ಬಳಕೆಯಲ್ಲಿ ಬಾಳೆಹಣ್ಣು ಮತ್ತು ಸೇಬಿನ ನಂತರ ಮೂರನೆಯ ಸ್ಥಾನ ಕಿತ್ತಳೆಯದೇ.
ಕಲ್ಲಂಗಡಿಯನ್ನು ಹಿಂದಿಕ್ಕಿ ಅದು ನಾಲ್ಕನೆಯ ಸ್ಥಾನದಿಂದ ಮೂರನೆಯ ಸ್ಥಾನಕ್ಕೆ ಏರಿದ್ದು ಎಂದು ಕೂಡ ಹೇಳಲಾಗುತ್ತದೆ. ಇನ್ನು, ಹಣ್ಣಿನ ರಸ (ಜ್ಯೂಸ್) ವಿಚಾರಕ್ಕೆ ಬಂದರಂತೂ ಕಿತ್ತಳೆ ಹಣ್ಣಿನ ರಸವೇ ನಂ.1 ಸ್ಥಾನದಲ್ಲಿರುವುದು. ಕಿತ್ತಳೆಯನ್ನು ವಿಪುಲವಾಗಿ ಬೆಳೆಯುವ ಫ್ಲೋರಿಡಾ ಸಂಸ್ಥಾನದ ವಾಹನಗಳ ನಂಬರ್ ಪ್ಲೇಟ್‌ನ ಮೇಲೂ ಕಿತ್ತಳೆಯ ಚಂದದ ಚಿತ್ರ ದೂರದಿಂದಲೇ ಆಕರ್ಷಿಸುತ್ತದೆ. ನಾನು ಇಷ್ಟು ವರ್ಷಗಳ ಅಮೆರಿಕ ವಾಸದಲ್ಲಿ ಬಹುಮಟ್ಟಿಗೆ ಇಲ್ಲಿ ಸಿಗುವ ಕಿತ್ತಳೆಯ ಎಲ್ಲ ಉಪ ಜಾತಿಗಳನ್ನೂ- ಮ್ಯಾಂಡರೀನ್, ಟ್ಯಾಂಜರೀನ್, ಕ್ಲೆಮೆಂಟೈನ್, ನ್ಯಾವೆಲ್, ಕಾರಾಕಾರಾ, ವ್ಯಾಲೆನ್ಸಿ ಯಾ, ಹ್ಯಾಮ್ಲಿನ್, ಬ್ಲಡ್ ಮುಂತಾದ ಬಹುವಿಧಗಳನ್ನೂ- ಕೊಂಡು ತಂದು ಚಪ್ಪರಿಸಿ ಆನಂದಿಸಿ ದ್ದೇನೆ. ಕ್ಯಾಲಿಫೋರ್ನಿಯಾ ಅಥವಾ ಫ್ಲೋರಿಡಾದಲ್ಲಿ ಸ್ನೇಹಿತರ ಮನೆಹಿತ್ತಲಲ್ಲೇ ಬೆಳೆದ ಕಿತ್ತಳೆ ಹಣ್ಣನ್ನೂ ಸವಿದಿದ್ದೇನೆ.
ಆದರೆ ಸಾವಿರಾರು ವರ್ಷಗಳ ಹಿಂದೆ ಕಿತ್ತಳೆ ಹಣ್ಣು ಇಂದಿನಂತೆ ಜನಪ್ರಿಯವಾಗಿರಲಿಲ್ಲ. ಇಷ್ಟೊಂದು ಸಾಮಾನ್ಯವಾಗಿ ಸಿಗುವಂಥದ್ದೂ ಆಗಿರಲಿಲ್ಲ. ಅಷ್ಟೇಅಲ್ಲ, ಅದರ ರೂಪ, ಆಕಾರ, ಬಣ್ಣ, ಗಾತ್ರ ಈಗಿನಂತಿರಲಿಲ್ಲ ಎನ್ನುತ್ತಾರೆ ಸಸ್ಯವಿಜ್ಞಾನಿಗಳು. ನಾವು ಈಗ ನೋಡುತ್ತಿರುವ ಕಿತ್ತಳೆ ಹಣ್ಣುಗಳು ಸಾವಿರಾರು ವರ್ಷಗಳಲ್ಲಿ ಸುಧಾರಿತ ಕೃಷಿಕ್ರಮ ಮತ್ತು ಜತನದಿಂದಾಯ್ದ ತಳಿ ಅಭಿವೃದ್ಧಿಯ ಫಲವಾಗಿವೆ.
‘ಮಂಗನಿಂದ ಮಾನವ’ ಎಂಬ ಡಾರ್ವಿನ್ ವಿಕಾಸವಾದ ಎಲ್ಲ ಸಸ್ಯ-ಪ್ರಾಣಿ ಪ್ರಭೇದಗಳಿಗೂ ಅನ್ವಯವಾಗುವುದು ಹೌದಾದರೂ ಕಿತ್ತಳೆ ಹಣ್ಣಿನ ವಿಚಾರದಲ್ಲಿ ಅದು ಪೂರ್ತಿ ಪ್ರಕೃತಿ ನಿಯಮ ವಷ್ಟೇ ಆಗಿರದೆ ಮನುಷ್ಯನ ಹಸ್ತಕ್ಷೇಪದ್ದೂ ಪ್ರಮುಖ ಪಾತ್ರವಿದೆ.
ಕಿತ್ತಳೆ ಹಾಗೂ ಇತರ ಎಲ್ಲ ಸಿಟ್ರಸ್ ಹಣ್ಣುಗಳ ಮೂಲವನ್ನು ಹುಡುಕಿದರೆ ನಾವು ಹಿಮಾಲಯ ಪರ್ವತಗಳ ಆಗ್ನೇಯ ಪದತಲಕ್ಕೆ ಬಂದು ನಿಲ್ಲುತ್ತೇವಂತೆ. ಡಿಎನ್‌ಎ ಸಾಕ್ಷಿಗಳ ಆಧಾರದಿಂದ ಹೇಳುವುದಾದರೆ, ಆರಂಭಿಕ ಸಿಟ್ರಸ್ ಮರಗಳು ಸುಮಾರು 80 ಲಕ್ಷ ವರ್ಷಗಳ ಹಿಂದೆ ಈ ಪ್ರದೇಶ ದಲ್ಲಿ ಬೆಳೆದವು ಎನ್ನಲಾಗುತ್ತದೆ.
ಅಲ್ಲಿಂದ ಅವು ಭಾರತೀಯ ಉಪಖಂಡ ದಾದ್ಯಂತ ಹರಡಿಕೊಂಡು ಕ್ರಮೇಣ ದಕ್ಷಿಣ-ಮಧ್ಯ ಚೀನಾದವರೆಗೆ ತಲುಪಿದವು. ಆದರೆ, ಆ ಪುರಾತನ ಸಿಟ್ರಸ್ ಹಣ್ಣುಗಳು, ನಾವು ಇಂದು ನೋಡುವ ಕಿತ್ತಳೆ ಹಣ್ಣುಗಳಂತಿರಲಿಲ್ಲ. ಗಾತ್ರದಲ್ಲಿ ಚಿಕ್ಕದಾಗಿದ್ದು, ರುಚಿಯಲ್ಲಿ ಕಹಿಯಾಗಿರುತ್ತಿದ್ದವು ಮತ್ತು ವಿಭಿನ್ನ ಆಕಾರ-ಬಣ್ಣಗಳಲ್ಲಿ ದೊರೆಯುತ್ತಿದ್ದವು. ಕೆಲವು ಇಂದಿನ ಕಿತ್ತಳೆಯಂತೆಯೂ ಇದ್ದಿರ ಬಹುದು, ಮತ್ತೆ ಕೆಲವು ಹಳದಿ ಬಣ್ಣದವು, ಕೆಲವು ಗುಂಡಗಿದ್ದರೂ ಮಾದಳ ಫಲದಂತೆ ಮೈಮೇಲೆ ಗುಳ್ಳೆಗಳಿರುವಂಥವು, ಇನ್ನು ಕೆಲವು ಚಕ್ಕೋತ ಹಣ್ಣಿನಂತೆ ದೊಡ್ಡದಾಗಿ ಹಸಿರು ಬಣ್ಣದ ನಯವಾದ ಸಿಪ್ಪೆಯುಳ್ಳ ಹಣ್ಣುಗಳೂ ಆಗಿದ್ದಿರಬಹುದು.
ಹಾಗೆ ನೋಡಿದರೆ ಇಂದು ನಮಗೆ ಪರಿಚಿತ ಕಿತ್ತಳೆ, ಮೂಸಂಬಿ, ನಿಂಬೆ, ಹೇರಳೆ, ಮಾದಳ, ದೊಡ್ಲಿ, ಚಕ್ಕೋತ... ಇವೆಲ್ಲದರ ಪೂರ್ವಜರು ಸಿಟ್ರನ್, ಪೊಮೆಲೊ, ಮತ್ತು ಮಂಡರಿನ್ ಎಂದು ಗುರುತಿಸ ಲಾದ, ಆಗ್ನೇಯ ಏಷ್ಯಾ ಮೂಲದ ಹಣ್ಣುಗಳು. ಈಗ ಕಿತ್ತಳೆಯೆಂದು ಜಗತ್ಪ್ರಸಿದ್ಧವಾಗಿರುವುದು ಪುರಾತನ ಪೊಮೆಲೊ (ಹಸಿರು ಅಥವಾ ಹಳದಿ ಬಣ್ಣದ, ದಪ್ಪ ಚರ್ಮದ ದೊಡ್ಡ ಹಣ್ಣು) ಮತ್ತು ಆ ಕಾಲದ ಮಂಡರಿನ್ (ನೆಲ್ಲಿಕಾಯಿಯಷ್ಟು ಚಿಕ್ಕದಾಗಿದ್ದ) ಹಣ್ಣುಗಳ ಸಂಕರ ಜಾತಿಯಾಗಿದೆ.
ಆದರೆ ಆ ಮೂಲ ಸಂಕರ ಜಾತಿಯ ಕಿತ್ತಳೆ ಹಣ್ಣು, ನಾವು ಇಂದು ತಿನ್ನುವ ಕಿತ್ತಳೆಗಿಂತ ತೀರಾ ಭಿನ್ನವಾಗಿತ್ತು. ಆಗಲೇ ಹೇಳಿದಂತೆ, ಇಂದಿನ ಕಿತ್ತಳೆ ಹಣ್ಣುಗಳು ಸಾವಿರಾರು ವರ್ಷಗಳ ಕೃಷಿ ಸುಧಾರಣೆ, ಸಂಕರ ಜಾತಿ ತಳಿ ಅಭಿವೃದ್ಧಿ ಪ್ರಯೋಗಗಳಿಂದ ಈ ರೂಪವನ್ನು ಪಡೆದುಕೊಂಡಿವೆ. ಪ್ರಾಚೀನ ಕಾಲದಲ್ಲಿ ಅವು ರೂಪ-ಆಕಾರ-ಗಾತ್ರ-ಬಣ್ಣ-ರುಚಿ ಯಾವುದರಲ್ಲೂ ಸಮಾನತೆ ಹೊಂದಿರಲಿಲ್ಲ.
ಗಾತ್ರದಲ್ಲಿ ಚಿಕ್ಕದಾಗಿದ್ದು, ಸಡಿಲ ಮತ್ತು ಉಬ್ಬಿದ ಸಿಪ್ಪೆಯನ್ನು ಹೊಂದಿದ್ದವು. ತಿನ್ನಲಿಕ್ಕೆ ಕೆಲವು ಕಹಿಯಾಗಿಯೂ ಕೆಲವು ಸಿಹಿಯಾಗಿಯೂ ಅಥವಾ ಸಿಹಿ-ಕಹಿ ಮಿಶ್ರವೆಂಬಂತೆಯೂ ಇದ್ದಿರ ಬಹುದು. ಇಂದಿನ ‘ಸಿಹಿ ಕಿತ್ತಳೆ’ ವೆರೈಟಿಯ ಮೊದಲ ಉಲ್ಲೇಖ ಕ್ರಿ.ಪೂ. 3ನೆಯ ಶತಮಾನದ ಚೈನಿಸ್ ಸಾಹಿತ್ಯದಲ್ಲಿ ಸಿಕ್ಕಿದೆಯಂತೆ.
ಇನ್ನೊಂದು ಮುಖ್ಯ ವಿಚಾರವೆಂದರೆ ಆರಂಭಿಕ ಕಿತ್ತಳೆ ಹಣ್ಣುಗಳು ಕಿತ್ತಳೆ ಬಣ್ಣದವಾಗಿರಲಿಲ್ಲ! ಹಳದಿ-ಹಸಿರು ನಡುವಿನ ಬಣ್ಣದವಾಗಿದ್ದವು. ಈಗಲಾದರೂ ಅಷ್ಟೇ, ಉಷ್ಣ ಪ್ರದೇಶಗಳಲ್ಲಿ ಬೆಳೆಯುವ ಕಿತ್ತಳೆ ಹಣ್ಣುಗಳು ಪಕ್ವವಾದಾಗಲೂ ಹಸಿರು ಬಣ್ಣದಲ್ಲೇ ಇರುತ್ತವೆ. ಉದಾಹರಣೆಗೆ ನಮ್ಮ ಕೊಡಗಿನ ಕಿತ್ತಳೆ.
ಇದಕ್ಕೆ ಕಾರಣ, ಕಿತ್ತಳೆ ಹಣ್ಣಿನ ಬಣ್ಣವು ತಾಪಮಾನ ಮತ್ತು ಪರಿಸರದ ಮೇಲೆ ಅವಲಂಬಿತ ವಾಗಿದ್ದು, ಪಕ್ವತೆಗೆ ಸಂಬಂಧಪಟ್ಟಿಲ್ಲ. ಕಿತ್ತಳೆ ಹಣ್ಣುಗಳು ಚಳಿಗೆ ಮೈಯೊಡ್ಡಿದಾಗ ಬಣ್ಣ ಬದಲಿಸಿ ‘ಕಿತ್ತಳೆ ಬಣ್ಣ’ದವು ಆಗುತ್ತವೆ. ಈಗ ಜನರಿಗೆ ಆ ಬಣ್ಣ ಎಷ್ಟು ಅಭ್ಯಾಸವಾಗಿ ಹೋಗಿದೆಯೆಂದರೆ, ಬಿಸಿ ಹವಾಮಾನದಲ್ಲಿ ಬೆಳೆಯುವ, ಪಕ್ವವಾದಾಗಲೂ ಹಸಿರಾಗಿಯೇ ಇರುವ ಕಿತ್ತಳೆ ಹಣ್ಣುಗಳನ್ನು ಮರದಿಂದ ಕಿತ್ತ ಮೇಲೆ ಎಥಿಲೀನ್ ಅನಿಲ ಬಳಸಿ ಹೆಚ್ಚು ಕಿತ್ತಳೆ ಬಣ್ಣದಂತೆ ಮಾಡಲಾಗುತ್ತದೆ.
ಇಂಗ್ಲಿಷ್‌ನಲ್ಲಿ ಈ ಪ್ರಕ್ರಿಯೆಗೆ Degreening ಎಂಬ ಹೆಸರಿದ್ದರೂ ಇಲ್ಲಿ ಬೇಕಂತಲೇ ‘ಕೇಸರೀಕರಣ’ ಎನ್ನೋಣವಂತೆ. ಅದಿರಲಿ, ಹಿಮಾಲಯದ ತಪ್ಪಲಿನಲ್ಲಿ ಬೆಳೆಯುತ್ತಿದ್ದ ಕಿತ್ತಳೆ ಹಣ್ಣು ವಿಶ್ವ ಪರ್ಯಟನೆ ಮಾಡಿದ್ದು ಹೇಗೆ? ಭಾರತ ಮತ್ತು ಇತರ ಏಷ್ಯನ್ ಪ್ರದೇಶಗಳಿಂದ ಎಲ್ಲ ಥರದ ಸಂಪತ್ತನ್ನು ಕೊಳ್ಳೆ ಹೊಡೆಯಲು ಯುರೋಪ್‌ನಿಂದ ಬರುತ್ತಿದ್ದರಲ್ಲ, ಅವರೇ ಕಿತ್ತಳೆಯನ್ನೂ ಕಿತ್ತುಕೊಂಡು ಹೋದರು.
ಇಟಲಿಯಲ್ಲಿ 11ನೆಯ ಶತಮಾನದಲ್ಲಿ ಪರಿಚಯವಾದ ನಂತರ, ದಕ್ಷಿಣ ಯುರೋಪಿನಲ್ಲಿ ಪರ್ಷಿಯನ್ ಕಿತ್ತಳೆ ಹಣ್ಣನ್ನು ವ್ಯಾಪಕವಾಗಿ ಬೆಳೆಸಲಾಯಿತು. ಆಗಿನ್ನೂ ಅದು ಕಹಿ ರುಚಿಯ ದಾಗಿತ್ತು. ಬಣ್ಣವೂ ಈಗಿನಂತೆ ಆಕರ್ಷಕವಾಗಿರಲಿಲ್ಲ. ಆದರೂ ಯುರೋಪಿಯನ್ ಚಿತ್ರಕಾರರು ಅದನ್ನು ತಮ್ಮ ಕಲಾಕೃತಿಗಳಲ್ಲಿ ಮೂಡಿಸುತ್ತಿದ್ದರು.
ಉದಾಹರಣೆಗೆ ಗ್ವಿಸೆಪ್ಪೆ ಆರ್ಸಿಂಬೊಲ್ಡೊ ಎಂಬಾತನ ‘ವಿಂಟರ್’, ವಿಲೆಮ್ ಕಾಲ್‌ನ ‘ವೈನ್‌ಗ್ಲಾಸ್ ಆಂಡ್ ಎ ಬೌಲ್ ಆಫ್ ಫ್ರೂಟ್’, ಲೂಯಿಸ್ ಮೆಲೆಂಡೆಜ್‌ನ ‘ಸ್ಟಿಲ್ ಲೈಫ್ ವಿತ್ ಲೆಮನ್ಸ್ ಆಂಡ್ ಆರೆಂಜಸ್’, ಮತ್ತು ವಿನ್ಸೆಂಟ್ ವ್ಯಾನ್ ಗೋಗ್ ನ ‘ಸ್ಟಿಲ್ ಲೈಫ್ ವಿತ್ ಬಾಸ್ಕೆಟ್ ಆಂಡ್ ಸಿಕ್ಸ್ ಆರೆಂಜಸ್’ ಮುಂತಾದ ಕೆಲ ಪ್ರಸಿದ್ಧ ಕಲಾಕೃತಿಗಳಲ್ಲಿ ಕಿತ್ತಳೆ ಕಂಗೊಳಿಸಿದ್ದಿದೆ.
15ನೆಯ ಶತಮಾನದಲ್ಲಿ ಪೋರ್ಚುಗೀಸ್ ವ್ಯಾಪಾರಿಗಳು ಭಾರತದಿಂದ ಯುರೋಪ್‌ಗೆ ಸಿಹಿ ಕಿತ್ತಳೆ ಹಣ್ಣುಗಳನ್ನು ಒಯ್ದರು. ಕಹಿ ಜಾತಿಯ ಕಿತ್ತಳೆಗಿಂತ ಅವು ಅಲ್ಲಿ ಪ್ರಖ್ಯಾತವಾದವು. ಪೋರ್ಚುಗೀಸ್, ಸ್ಪ್ಯಾನಿಷ್, ಅರಬ್ ಮತ್ತು ಡಚ್ ನಾವಿಕರು ತಮ್ಮ ವ್ಯಾಪಾರ ಮಾರ್ಗಗಳುದ್ದಕ್ಕೂ ಅಲ್ಲಲ್ಲಿ ಕಿತ್ತಳೆ ಮರಗಳನ್ನು ನೆಡುತ್ತಿದ್ದರು. ಉದ್ದೇಶ ಏನು ಗೊತ್ತೇ? ಆಗಿನ ಕಾಲದಲ್ಲಿ ತೀವ್ರವಾಗಿ ಬಾಧಿಸುತ್ತಿದ್ದ, ಮಾರಣಾಂತಿಕವೂ ಆಗುತ್ತಿದ್ದ ‘ಸ್ಕರ್ವಿ’ ರೋಗವನ್ನು ತಡೆಗಟ್ಟಲಿಕ್ಕೆ. ಕಿತ್ತಳೆಯಲ್ಲಿ ‘ಸಿ’ ಜೀವಸತ್ತ್ವ ವಿಪುಲವಾಗಿರುವುದು, ವಿಟಮಿನ್ ‘ಸಿ’ ಕೊರತೆಯಿಂದ ಉಂಟಾಗುವ ಸ್ಕರ್ವಿ ರೋಗ ಬಾರದಂತೆ ಕಿತ್ತಳೆ ಪ್ರಯೋಜನವಾಗುವುದು ಎಂದು ಅವರು ಅರಿತಿದ್ದರು.
ಕ್ರಿಸ್ಟೋಫರ್ ಕೊಲಂಬಸ್ 1493ರಲ್ಲಿ ತನ್ನ ಎರಡನೆಯ ಸಮುದ್ರಯಾನದಲ್ಲಿ ಕಿತ್ತಳೆ ಮತ್ತು ನಿಂಬೆ ಬೀಜಗಳನ್ನು ಹೈಟಿ ಮತ್ತು ಕೆರೀಬಿಯನ್ ಪ್ರದೇಶಗಳಿಗೆ ತಂದನು. 1513ರಲ್ಲಿ ಸ್ಪ್ಯಾನಿಷ್ ಅನ್ವೇಷಕ ಹ್ವಾನ್-ಪಾನ್ಸ್-ದೆ-ಲಿಯೋನ್ ಫ್ಲೋರಿಡಾದಲ್ಲಿ ನಿಂಬೆಯ ಜತೆಗೆ ಕಿತ್ತಳೆ ಹಣ್ಣನ್ನು ಪರಿಚಯಿಸಿ ದನು.
1792ರಲ್ಲಿ ಅದು ಹವಾಯಿ ದ್ವೀಪಗಳನ್ನೂ ಪ್ರವೇಶಿಸಿತು. ಕ್ರಮೇಣ ಅಮೆರಿಕನ್ನರ ಅಚ್ಚುಮೆಚ್ಚಿನ ಹಣ್ಣುಗಳ ಸಾಲಿಗೆ ಸೇರಿಕೊಂಡಿತು. ಇಂಗ್ಲಿಷ್‌ನಲ್ಲಿ ಮೊದಲಿಗೆ ಕಿತ್ತಳೆ ಹಣ್ಣಿಗಷ್ಟೇ Orange ಎಂಬ ಪದವನ್ನು ಬಳಸಲಾಯಿತು, ಬಣ್ಣಕ್ಕಲ್ಲ. ಆ ಬಣ್ಣವನ್ನು ಆಗಿನ ಕಾಲದಲ್ಲಿ ಬಹುಶಃ citrine ಅಥವಾ saffron ಎನ್ನುತ್ತಿದ್ದರೇನೋ. ಕ್ರಿ.ಶ 1500ರ ಸುಮಾರಿಗೆ, ಅಂದರೆ ಮನುಷ್ಯರು ಕಿತ್ತಳೆ ಹಣ್ಣು ತಿನ್ನಲು ಪ್ರಾರಂಭಿಸಿದ ಹಲವು ಶತಮಾನಗಳೇ ಕಳೆದ ನಂತರ- ಹಣ್ಣಿನ ಹೆಸರೇ ಬಣ್ಣಕ್ಕೂ ಬಂತು.
Orange ಒಂದು ಬಣ್ಣವಾಯಿತು. ಕಾಮನಬಿಲ್ಲಿನ ಏಳು ಬಣ್ಣಗಳ VIBGYOR ನೆನೆಗುಬ್ಬಿಯಲ್ಲೂ Orange ರಾರಾಜಿಸಿತು. ಅಂದಹಾಗೆ ಇಂಗ್ಲಿಷ್‌ಗೆ ಈ ಪದ ಬಂದದ್ದು ಹಳೆಯ ಫ್ರೆಂಚ್ ಭಾಷೆಯ pomme d’orenge ಎಂಬ, ಸಿಟ್ರಸ್ ಹಣ್ಣಿಗೆ ಬಳಕೆಯಾಗುತ್ತಿದ್ದ ಪದದಿಂದ.
ಫ್ರೆಂಚರಿಗೆ ಅದು ಸಿಕ್ಕಿದ್ದು ಪರ್ಷಿಯನ್ ಮತ್ತು ಅರೇಬಿಕ್ ಭಾಷೆಗಳ ಮೂಲಕ. ಅವರಾದರೂ ಅದನ್ನು ಎತ್ತಿಕೊಂಡಿದ್ದು ನಮ್ಮದೇ ಸಂಸ್ಕೃತ ಭಾಷೆಯ ‘ನಾರಂಗ’ದಿಂದ! ಇದೇನೂ ನನ್ನ ಸಂಶೋಧನೆಯಲ್ಲ, ಭಾಷಾತಜ್ಞರು ಒಪ್ಪಿರುವ ವಿಚಾರವೇ. ಸ್ಪ್ಯಾನಿಷ್ ಭಾಷೆಯಲ್ಲೂ ಕಿತ್ತಳೆಗೆ naranja ಎನ್ನುತ್ತಾರೆ. ನಮ್ಮ ಚಿತ್ಪಾವನಿ ಮರಾಠಿಯಲ್ಲೂ ‘ನಾರಿಂಗ’ ಎನ್ನುತ್ತೇವೆ!
ಭಾಷೆಗಳ ವಿಚಾರ ಬಂದಾಗ, ನಿಜವಾಗಿಯಾದರೆ ಕನ್ನಡದ ಕಿತ್ತಳೆಯದೂ ಶುದ್ಧ ರೂಪ ‘ಕಿತ್ತೀಳೆ’ ಎಂದು ಇರುವುದು. ಬೇಕಿದ್ದರೆ ಎರಡನೆಯ ತರಗತಿಯ ಕನ್ನಡಭಾರತಿ ಪುಸ್ತಕದಲ್ಲಿದ್ದ, ಕಾವ್ಯಾ ನಂದ ವಿರಚಿತ ‘ಹಣ್ಣು ಮಾರುವವನ ಹಾಡು’ ಗಮನಿಸಿ. ‘ನಂಜನಗೂಡಿನ ರಸಬಾಳೆ, ತಂದಿಹೆ ಕೊಡಗಿನ ಕಿತ್ತೀಳೆ!’ ಈ ಪದದ ವ್ಯುತ್ಪತ್ತಿ ಹೇಗೆ? ‘ಈಳೆ’ ಎಂಬುದು ಕನ್ನಡದಲ್ಲಿ ಸಾಮಾನ್ಯವಾಗಿ ಎಲ್ಲ ಸಿಟ್ರಸ್ ಹಣ್ಣುಗಳಿಗೆ ಅನ್ವಯವಾಗುವ ಪದ. ‘ಕಿರಿದು ಈಳೆ ಕಿತ್ತೀಳೆ’- ಕರ್ಮಧಾರಯ ಸಮಾಸಪದ. ಕ್ರಮೇಣ ಅದು ದೀರ್ಘ ಕಳೆದುಕೊಂಡು ಕಿತ್ತಿಳೆ ಆಯ್ತು. ಆಮೇಲೆ ಕಿತ್ತಳೆ ಆಯ್ತು. ಳಕಾರ ಕಷ್ಟವಾಗುವವರಿಗೆ ಕಿತ್ತಲೆ ಆಯ್ತು. ಮಾತನಾಡುವಾಗ ಅವಸರವುಳ್ಳವರಿಗೆ ಕಿತ್ಲೆ ಆಯು ಇಷ್ಟೆಲ್ಲ ಕಿತ್ತಳೆ ಪುರಾಣವನ್ನು ಕೇಳಿದ ಮೇಲೆ ಕೊನೆಯಲ್ಲೊಂದು ಕಿತ್ತಳೆ ಲೆಕ್ಕವನ್ನೂ ಸೇರಿಸಿ ಬಿಡೋಣವೇ? ಸೇಬು ಮತ್ತು ಕಿತ್ತಳೆಗಳನ್ನು ಹೋಲಿಸಬಾರದು ಎನ್ನುತ್ತದೆ ಇಂಗ್ಲಿಷ್‌ನ ನುಡಿಗಟ್ಟು. ಆದರೆ ಈ ಲೆಕ್ಕದಲ್ಲಿ ಸೇಬು ಮತ್ತು ಕಿತ್ತಳೆ ಜತೆಜತೆಯಲ್ಲಿ ಎಂಬಂತೆ ಇವೆ.
ಲೆಕ್ಕ ಹೀಗಿದೆ: ರಂಗಣ್ಣ ಒಂದಿಷ್ಟು ಕಿತ್ತಳೆ ಮತ್ತು ಸೇಬುಹಣ್ಣು ಖರೀದಿಸಿ ಮೂರು ಪೆಟ್ಟಿಗೆಗಳಲ್ಲಿ ಅಚ್ಚುಕಟ್ಟಾಗಿ ಪ್ಯಾಕ್ ಮಾಡಿ ತನ್ನ ಮಗನ ಹಾಸ್ಟೆಲ್‌ಗೆ ಕಳುಹಿಸಿದ್ದಾನೆ. ಒಂದು ಪೆಟ್ಟಿಗೆಯಲ್ಲಿ ಕಿತ್ತಳೆ ಹಣ್ಣು ಮಾತ್ರ, ಇನ್ನೊಂದು ಪೆಟ್ಟಿಗೆಯಲ್ಲಿ ಸೇಬು ಮಾತ್ರ, ಮತ್ತು ಮೂರನೆಯ ಪೆಟ್ಟಿಗೆಯಲ್ಲಿ ಕಿತ್ತಳೆ ಮತ್ತು ಸೇಬು- ಹೀಗೆ ತುಂಬಿಸಿಟ್ಟಿದ್ದಾನೆ.
ರಂಗಣ್ಣ ಮೂರು ಪೆಟ್ಟಿಗೆಗಳಿಗೂ ಒಳಗೇನಿದೆ ಎಂದು ಲೇಬಲ್ ಕೂಡ ಹಚ್ಚಿದ್ದಾನೆ; ಅದರೆ ಕಣ್ತಪ್ಪಿ ನಿಂದಾಗಿ ಈ ಮೂರೂ ಪೆಟ್ಟಿಗೆಗಳ ಲೇಬಲ್‌ಗಳೂ ತಪ್ಪುತಪ್ಪಾಗಿವೆ. ಆದರೇನಂತೆ! ಈ ತಪ್ಪನ್ನೇ ಮಗನ ಜಾಣ್ಮೆಯನ್ನು ಪರೀಕ್ಷಿಸಲು ಉಪಯೋಗಿಸಬಹುದೆಂದು ಎಣಿಸಿ ರಂಗಣ್ಣ ಒಂದು ಚೀಟಿಯನ್ನೂ ಪೆಟ್ಟಿಗೆಗಳ ಜತೆ ಕಳುಹಿಸಿದ್ದಾನೆ. ಚೀಟಿಯಲ್ಲಿ ಹೀಗೆ ಬರೆದಿರುತ್ತದೆ: “ಮೂರರ ಪೈಕಿ ಯಾವುದಾದರೂ ಒಂದು ಪೆಟ್ಟಿಗೆಯಿಂದ ಒಂದೇಒಂದು ಹಣ್ಣನ್ನು ಮಾತ್ರ ಹೊರತೆಗೆದು ನೋಡಿ ಮೂರೂ ಪೆಟ್ಟಿಗೆಗಳ ಲೇಬಲ್‌ಗಳನ್ನು ಸರಿಪಡಿಸಿಕೋ. ಆಮೇಲೆ ಮೂರೂ ಪೆಟ್ಟಿಗೆಗಳಲ್ಲಿರುವ ಹಣ್ಣುಗಳನ್ನು ನೀನೂ, ನಿನ್ನ ಸ್ನೇಹಿತರೂ ಸವಿಯುವಿರಂತೆ".
ಸ್ವಲ್ಪ ತಲೆಯೋಡಿಸಿದರೆ, ಧೀಮಾಕ್ ಬಳಸಿದರೆ, ರಂಗಣ್ಣನ ಮಗನಿಗೆ ಇದೇನೂ ಕಷ್ಟದ ವಿಷಯ ವಲ್ಲ. ಆದರೂ ಆತ ನೆರವು ಕೇಳಿದರೆ, ನಿಮಗೂ ಒಂದೆರಡು ಹಣ್ಣುಗಳನ್ನು ಕೊಡುತ್ತೇನೆಂದು ಪ್ರಲೋಭನೆ ಒಡ್ಡಿದರೆ, ನಿಮ್ಮ ಉತ್ತರ? ನೆನಪಿಡಿ: ಯಾವುದಾದರೂ ಒಂದು ಪೆಟ್ಟಿಗೆಯಿಂದ ಒಂದೇಒಂದು ಹಣ್ಣನ್ನು ತೆಗೆದು ನೋಡಿ, ಮೂರೂ ಪೆಟ್ಟಿಗೆಗಳ ಲೇಬಲ್ ಸರಿಪಡಿಸಬೇಕಿದೆ. ರೆಡಿ? ವನ್-ಟೂ-ತ್ರೀ!