ತುಂಟರಗಾಳಿ
ಸಿನಿಗನ್ನಡ
ಕನ್ನಡ ಪ್ರೇಕ್ಷಕರು ಸಿನಿಮಾ ನೋಡೋಕೆ ಬರ್ತಾ ಇಲ್ಲ ಅಂತ ಸಿನಿಮಾ ಮಂದಿ ಏನೆಲ್ಲ ಸರ್ಕಸ್ ಮಾಡ್ತಾ ಇದ್ದಾರೆ. ಬಾಡಿಗೆ ಪ್ರೇಕ್ಷಕರನ್ನು ಕರೆಸಿ ದುಡ್ಡು, ಬಿರಿಯಾನಿ ಕೊಟ್ಟು ಸಿನಿಮಾ ತೋರಿಸಿ ಅವರನ್ನು ದೊಡ್ಡ ವಿಮರ್ಶಕರನ್ನಾಗಿ ಮಾಡೋದು ಒಂದು ಕಡೆ ಆದ್ರೆ ತಲೆಹರಟೆಗಳನ್ನು ಕರೆಸಿ ಸಿನಿಮಾ ತೋರಿಸಿ ಅವರಿಂದ ಸಿನಿಮಾ ಥಿಯೇಟರ್ ಮುಂದೆ ಅಸಹ್ಯ ನಾಟಕಗಳನ್ನು ಮಾಡಿಸೋದು ಇನ್ನೊಂದು.
‘ಸೂರಿ ಅಣ್ಣ’ ಅನ್ನೋ ಸಿನಿಮಾ ತಂಡ ತಮ್ಮ ಚಿತ್ರದ ವಿಷಯದಲ್ಲಿ ಶೂಟಿಂಗ್ ಸಮಯದಿಂದಲೇ ಇಂಥ ಕೆಲಸಗಳನ್ನು, ಗಿಮಿಕ್‌ಗಳನ್ನು ಮಾಡ್ತಾ ಬಂದಿದೆ. ಮೊನ್ನೆ ಅಂತೂ ಅವನ್ಯಾರೊ ಅಮುಕು ಡುಮುಕು ಅಂತ ಕರೆಂಟ್ ಶಾಕ್ ಹೊಡೆವನಂತೆ ಆಡೋ ಹುಡುಗನನ್ನು ಕರ್ಕೊಂಡು ಬಂದು ಅವನಿಂದ ಪೆಟ್ರೋಲ್ ಕುಡಿಯೋ ನಾಟಕ ಆಡಿಸಿ, ಅದರಿಂದ ತಮ್ಮ ಸಿನಿಮಾನ ಜನರಿಗೆ ತೋರಿಸೋ ಕೆಲಸ ಮಾಡೋ ಪ್ರಯತ್ನ ಮಾಡಿತ್ತು ಈ ತಂಡ.
ಈ ಪ್ರಕರಣದಲ್ಲಿ ಎಲ್ಲರಿಂದ ಉಗಿಸಿಕೊಂಡ ನಂತರ ಪ್ರಕರಣ ಖಾಕಿವರೆಗೂ ಹೋಯ್ತು. ಹಾಗಾಗಿ ಅವನು ಮತ್ತೆ ಕ್ಯಾಮೆರಾ ಮುಂದೆ ಬಂದು ‘ಅಣ್ಣಾ, ನಾನ್ ಕುಡಿದಿದ್ದು ಪೆಟ್ರೋಲ್ ಅಲ್ಲ, ಬಿಂದು ಜೀರಾಗೆ ಜೇನುತುಪ್ಪ ಬೆರೆಸಿ ಕುಡಿದಿದ್ದು’ ಅಂತ ಹೇಳಿ ತಾನು ಕಲಬೆರಕೆ ಅನ್ನೋದನ್ನು ಅವನೇ ಸಾಕ್ಷಿ ಸಮೇತ ಹೇಳಿದ್ದಾನೆ.
ಆದರೆ ಇದನ್ನೆ ನೋಡಿದ ಮೇಲೆ ಕನ್ನಡ ಚಿತ್ರರಂಗದ ಮಾನ-ಮರ್ಯಾದೆಯನ್ನು ಇಂಟರ್ ನೆಟ್‌ನಲ್ಲಿ ಹರಾಜು ಹಾಕಿದ್ದನ್ನು ಮಾತ್ರ ಯಾವ ಕನ್ನಡಿಗನೂ ಕ್ಷಮಿಸಲಾರ. ಇಷ್ಟೆ ಮಾಡೋ ಸಿನಿಮಾ ಮಂದಿ, ಜನರು ಸಿನಿಮಾ ನೋಡೋಕೆ ಬರ್ತಾ ಇಲ್ಲ ಅನ್ನೋ ಸಮಸ್ಯೆ ಇರೋ ಕರ್ನಾಟಕದಲ್ಲಿ ನಮ್ಮ ಸಿನಿಮಾ ಯಶಸ್ವಿಯಾಗಿ ರಿಲೀಸ್ ಆಗ್ಲಿ ಅಂತ ನಾಳೆ ಚಿತ್ರಕಾಮೇಷ್ಠಿಯಾಗ ಮಾಡಿದರೂ ಅಚ್ಚರಿ ಇಲ್ಲ.
ಇದನ್ನೂ ಓದಿ: Hari Paraak Column: ಐ ಸ್ಟ್ಯಾಂಡ್ ವಿತ್ ಅನ್ನೋದು ಚಟ ಆದ್ರೆ: ʼಸ್ಟ್ಯಾಂಡ್ʼ ಅಪ್ ಕಾಮೆಡಿ
ಲೂಸ್ ಟಾಕ್: ರಶ್ಮಿಕಾ ಮಂದಣ್ಣ
ಏನ್ರೀ, ನಿಮ್ ಮದುವೆ ಭಾರಿ ಸುದ್ದಿ ಮಾಡ್ತಾ ಇದೆಯಲ್ಲ?
- ನನ್ನ ಮದುವೆಗಿಂತ ರಶ್ಮಿಕ ರಕ್ಷಿತ್‌ನ ಮಿಕ ಮಾಡಿದಳು ಅನ್ನೋದೇ ಜಾಸ್ತಿ ಸುದ್ದಿ ಮಾಡ್ತಾ ಇದೆ.
ಇರ್ಲಿ ಬಿಡಿ, ಅದೆ ಇದ್ದಿದ್ದೇ, ನೀವು ತುಂಬಾ ತಿಳ‘ಕೊಂಡ’ವರು ಅಂತ ಜನ ಹಂಗೆ ಮಾತಾಡ್ತಾ ಇದ್ದಾರೆ ಅಷ್ಟೇ..
- ಅಂದ್ರೆ ಅದು ನಿಜ ಅಂತ ಹೇಳ್ತಾ ಇದ್ದೀರಾ? ಮದುವೆ ಅಂದ್ರೆ ಹೊಂಡಕ್ಕೆ ಬಿದ್ದಿದ್ದು ಅಂತಾರೆ, ನಾನು ‘ಕೊಂಡ’ಕ್ಕೆ ‘ಬಿದ್ದೆ’ ಅಷ್ಟೇ.
ಇಲ್ಲರೀ, ಸರಿ, ಆದ್ರೂ ಪ್ರೇಮೋ ರಕ್ಷಿತ ರಕ್ಷಿತಃ ಅಂತ ನಿಮಗೆ ಯಾಕೆ ಅರ್ಥ ಆಗ್ಲಿಲ್ಲ?
- ಈ ಟೈಮಲ್ಲಿ ಪ್ರೇಮ್ ರಕ್ಷಿತಾ ಬಗ್ಗೆ ಯಾಕ್ರೀ ಮಾತಾಡ್ತಾ ಇದ್ದೀರಾ?
ರೀ, ಅದು ನಿಮ್ಮ ಮತ್ತು ರಕ್ಷಿತಾ ಬಗ್ಗೆ ಹೇಳಿದ್ದು ಕಣ್ರೀ, ಸಂಸೃತದಲ್ಲಿ
- ಅಯ್ಯೋ, ನಾನೇ ಒಂದು ಸಂದರ್ಶನದಲ್ಲಿ ಹೇಳಿದ್ದೆ, ನಂಗೆ ಕನ್ನಡ, ಹಿಂದಿ, ತಮಿಳು, ತೆಲುಗು ಯಾವ ಭಾಷೆನೂ ಸರಿಯಾಗಿ ಬರಲ್ಲ ಅಂತ. ಇನ್ನು ನೀವು ಸಂಸ್ಕೃತದಲ್ಲಿ ಹೇಳಿದ್ರೆ ಅರ್ಥ ಆಗುತ್ತಾ?
ಅದೂ ನಿಜಾನೇ, ಆದ್ರೂ ಈಗ್ಲಾದ್ರೂ ಹೇಳಿ, ನೀವು ರಕ್ಷಿತ್‌ಗೆ ಕೈ ಕೊಟ್ಟಿದ್ದು ಯಾಕೆ? - ನೀವೂ ಹಿಂಗೇ ಅಂತ ಗೊತ್ತಿತ್ತು ನಂಗೆ. ಅದಕ್ಕೆ ನನ್ನ ಮದುವೆಗೆ ನಿಮ್ಮನ್ನ ಕರೀಲಿಲ್ಲ. ಮುಂದಿನ ಮದುವೆಗೂ ಕರೆಯೊಲ್ಲ..
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮು ಒಂದಿನ ಮಧ್ಯಾಹ್ನವೇ ಬಾರಲ್ಲಿ ಕೂತು ಸರಿಯಾಗಿ ಪೆಗ್ ಏರಿಸುತ್ತಿದ್ದ. ಮುಖ, ಕೈ ಕಾಲು, ಮೈಯೆ ಗಾಯಗಳಾಗಿದ್ದವು. ಗೆಳೆಯ ಸೋಮು ಬಂದು, “ಏನಾಯ್ತೋ, ಇಷ್ಟೊತ್ತಲ್ಲಿ ಕುಡಿತಾ ಇದೀಯಾ, ಇದೇನು ಮೈ ತುಂಬಾ ಗಾಯಗಳು?" ಅಂತ ಕೇಳಿದ. ಅದಕ್ಕೆ ಖೇಮು, “ಇಲ್ಲೇ ಮಗಾ, ಕೆಲವು ವಿಷಯಗಳನ್ನು ಎಕ್ಸ್‌ಪ್ಲೇನ್ ಮಾಡೋಕಾಗಲ್ಲ’ ಅಂದ. “ಅಂಥದೇ ನಾಯ್ತು?" ಅಂತ ಸೋಮು ಪ್ರಶ್ನೆ. ಖೇಮು ಶುರುಮಾಡಿದ “ಇವತ್ತು ಬೆಳಗ್ಗೆ ಕೊಟ್ಟಿಗೆಯಲ್ಲಿ ಹಾಲು ಕರೀತಾ ಇದ್ನಾ? ಹಸು ತನ್ನ ಎಡಗಾಲಿನಿಂದ ನನ್ನ ಜಾಡಿಸಿ ಒದ್ದುಬಿಡ್ತು". ಅದಕ್ಕೆ ಸೋಮು “ಇದು ಸಣ್ಣ ವಿಷಯ. ಅದಕ್ಕೆ ಇಷ್ಟೆಲ್ಲ ಬೇಜಾರ್ ಯಾಕೆ?" ಅಂದ. ಖೇಮು ಹೇಳಿದ “ಇ ಮಗಾ ಕೆಲವು ವಿಷಯಗಳನ್ನು ಎಕ್ʼಪ್ಲೇನ್ ಮಾಡೋಕಾಗಲ್ಲ". “ಮತ್ತಿನ್ನೇ ನಾಯ್ತು?" ಸೋಮು ಪ್ರಶ್ನೆ.
“ನಾನು ಅದರ ಎಡಗಾಲನ್ನು ಒಂದು ಹಗ್ಗದಿಂದ ಪಕ್ಕದ ಇದ್ದ ಕಂಬಕ್ಕೆ ಕಟ್ಟಿ ಹಾಲು ಕರೆಯೋಕೆ ಶುರುಮಾಡಿದೆ. ಅದು ಈ ಬಾರಿ ತನ್ನ ಬಲಗಾಲಿನಿಂದ ನನಗೆ ಹೊಡೀತು" ಅಂದ ಖೇಮು. “ಸರಿ ಇದೂ ಸಣ್ಣ ವಿಷಯಾನೇ" ಅಂದ ಸೋಮು. ಖೇಮು ಮತ್ತೆ ಹೇಳಿದ “ಇಲ್ಲಾ ಮಗಾ ಕೆಲವು ವಿಷಯಗಳನ್ನು ಎಕ್ಸ್‌ಪ್ಲೇನ್ ಮಾಡೋಕಾಗಲ್ಲ". “ಮತ್ತಿನ್ನೇ ನಾಯ್ತು?" ಸೋಮು ಪ್ರಶ್ನೆ, ಖೇಮು ಮತ್ತೆ ಕಂಟಿನ್ಯೂ ಮಾಡಿದ “ಈ ಬಾರಿ ಹಾಲೇನೋ ಕರೆದೆ, ಆದ್ರೆ ಕೊನೆಗೆ ಅದು ತನ್ನ ಬಾಲದಿಂದ ಬಕೆಟ್‌ಲ್ಲಿದ್ದ ಹಾಲನ್ನೆ ಚೆಲ್ಲಿಬಿಡ್ತು". “ಒಂದ್ ಬಕೆಟ್ ಹಾಲು ಹೋಯ್ತು ಅಷ್ಟೇ ತಾನೆ?" ಅಂದ ಸೋಮು. ಅದಕ್ಕೆ ಖೇಮು ಹೇಳಿದ “ಆಮೇಲೆ ಅದರ ಬಾಲವನ್ನು ಹಿಡಿದು, ಪಕ್ಕದಲ್ಲೂ ಹಗ್ಗಸಿಗದ ಕಾರಣ ನನ್ನ ಪ್ಯಾಂಟ್‌ಗೆ ಹಾಕಿದ್ದ ಬೆಲ್ಟ ಬಿಚ್ಚಿ ಅದನ್ನು ಕೊಟ್ಟಿಗೆಯ ಚಾವಣಿಗೆ ಕಟ್ಟಿದೆ. ಇನ್ನೇನು ಹಾಲು ಕರೆಯೋಣ ಎಂದುಕೊಳ್ಳುವಷ್ಟರಲ್ಲಿ ನನ್ನ ಪ್ಯಾಂಟ್ ಸೊಂಟದಿಂದ ಜಾರಿಬಿಡ್ತು.
ಅದೇ ಸಮಯಕ್ಕೆ ಸರಿಯಾಗಿ ನನ್ನ ಹೆಂಡತಿ ಕೊಟ್ಟಿಗೆಗೆ ಬಂದು ನನ್ನನ್ನು ನೋಡಿದಳು. ನಾನ್ ಆವಾಗ್ಲೆ ಹೇಳ್ದೇ ಅಲ್ವಾ... ಕೆಲವು ವಿಷಯಗಳನ್ನು ಎಕ್ಸ್‌ಪ್ಲೇನ್ ಮಾಡೋಕಾಗಲ್ಲ".
ಲೈನ್ ಮ್ಯಾನ್
ಕಂಪ್ಯೂಟರ್ ಉಪಯೋಗ ಮಾಡುವಾಗಿನ ವೈರುಧ್ಯ
- ನ್ಯೂ ಫೋಲ್ಡರ್ ಕ್ರಿಯೇಟ್ ಮಾಡಿ ಅದನ್ನ ಓಲ್ಡ್ ಅಂತ ರೀನೇಮ್ ಮಾಡೋದು
ಸಿನಿಮಾದ ಮೊದಲ ಶೋನಲ್ಲಿ ಪತ್ರಕರ್ತರನ್ನು ಬಿಟ್ಟು ಬೇರೆ ಜನರೇ ಇಲ್ಲದಿದ್ದರೆ ಅದು
- ಜರ್ನಲಿಸ್ಟ್-ಭರಿತ ಪ್ರದರ್ಶನ
ವಾಕಿಂಗ್ ಮಾಡಿ ಮಾಡಿ ಬೋರಾದ ಅನುಭವ
- ವಾಕರಿಕೆ
ಪರ್ಯಾಯ ಸತ್ಯ
- ಜೇಬಿನಲ್ಲಿ ಬೆಂಕಿಪೊಟ್ಟಣವೂ ಇದ್ದಾಗ ಲೈಟರ್ ಸರಿಯಾಗಿಯೇ ಕೆಲಸ ಮಾಡುತ್ತದೆ.
ದುಬಾರಿ ಕಾರುಗಳನ್ನು ಇನ್‌ಸ್ಟಾಲ್ಮೆಂಟ್‌ನ ತಗೋಬೇಕು
- ಮೊದಲು, ಟೈರು, ಆಮೇಲೆ ಸೀಟು, ನಂತರ ಸ್ಪಿಯರಿಂಗ್, ಬಾಡಿ, ಎಂಜಿನ್ ಇತ್ಯಾದಿ.
ತುಂಬಾ ಜನಪ್ರಿಯವಾದ ಬ್ಲಾಗ್ ಅನ್ನು ಏನಂತಾರೆ?
- ಬ್ಲಾಗ್ ಬಸ್ಟರ್
ಸಿನಿಮಾದಲ್ಲಿ ದುಃಖದ ಸನ್ನಿವೇಶದಲ್ಲಿ ದೇವರ ಹಾಡು ಹಾಡಿದರೆ ಅದು
- ಶ್ಲೋಕ ಗೀತೆ
ವಿವಾದಿತ ಪುಸ್ತಕ ಬರೆದು ಜೈಲು ಸೇರಿದವನು
- ‘ಬುಕ್ಡ್
ನಿಮ್ಮ ಮೇಲೆ ಯುದ್ಧ ಮಾಡ್ತೀವಿ ಅಂತ ಮೊದಲೇ ಕೊಡುವ ಎಚ್ಚರಿಕೆ
- ‘ವಾರ್’ ನಿಂಗ್