ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಲೋಕಭವನಕ್ಕೊಂದು ಶೋಭೆ ನಮ್ಮ ವಿಜಯಶಂಕರ !

ಸಾಮಾನ್ಯವಾಗಿ ರಾಜ್ಯಪಾಲರ ರಾಜಭವನದ ಭದ್ರತಾ ಕೋಟೆಯನ್ನು ದಾಟಿ ಅವರನ್ನಷ್ಟೇ ಅಲ್ಲ, ಅವರ ಕಚೇರಿಯನ್ನು ಸಂಪರ್ಕಿಸುವುದೂ ಒಂದು ಸಾಹಸವೇ ಸರಿ. ಆದರೆ, ಅಧಿಕಾರದಲ್ಲಿದ್ದೂ ತನ್ನೂರಿನ ಮಣ್ಣಿನ ಗುಣವನ್ನು, ಹಳೆಯ ಒಡನಾಟವನ್ನು ಮತ್ತು ಅಪಾರ ಕನ್ನಡಿಗ ಪ್ರೇಮವನ್ನು ಜೀವಂತವಾಗಿರಿಸಿಕೊಂಡಿರುವ ಅಪರೂಪದ ವ್ಯಕ್ತಿತ್ವ ಮೇಘಾಲ ಯದ ಗೌರವಾನ್ವಿತ ರಾಜ್ಯಪಾಲ ರಾದ ಶ್ರೀ ಸಿ.ಎಚ್.ವಿಜಯ ಶಂಕರ ಅವರದ್ದು.

ನೂರೆಂಟು ವಿಶ್ವ

ಅಧಿಕಾರ ಮತ್ತು ಶಿಷ್ಟಾಚಾರಗಳ (ಪ್ರೋಟೊಕಾಲ್) ಬೇಲಿಗಳು ಸಾಮಾನ್ಯ ಮನುಷ್ಯ ಮತ್ತು ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರ ನಡುವೆ ಒಂದು ದೊಡ್ಡ ಕಂದಕವನ್ನೇ ಸೃಷ್ಟಿಸುವುದು ಸಹಜ. ಅದರಲ್ಲೂ ವಿಶೇಷವಾಗಿ ಒಂದು ರಾಜ್ಯದ ಪ್ರಥಮ ಪ್ರಜೆ, ‘ರಾಜ್ಯಪಾಲರು’ ಎಂದರೆ ಅಲ್ಲಿ ಉಸಿರುಗಟ್ಟಿಸುವ ಗಾಂಭೀರ್ಯ, ಬಿಗಿ ಭದ್ರತೆ, ಹೆಜ್ಜೆ ಹೆಜ್ಜೆಗೆ ಶಿಷ್ಟಾಚಾರ ಹಾಗೂ ತಲುಪಲಾಗದ ದೂರವೇ ಎದ್ದು ಕಾಣುತ್ತದೆ.

ಸಾಮಾನ್ಯವಾಗಿ ರಾಜ್ಯಪಾಲರ ರಾಜಭವನದ ಭದ್ರತಾ ಕೋಟೆಯನ್ನು ದಾಟಿ ಅವರನ್ನಷ್ಟೇ ಅಲ್ಲ, ಅವರ ಕಚೇರಿಯನ್ನು ಸಂಪರ್ಕಿಸುವುದೂ ಒಂದು ಸಾಹಸವೇ ಸರಿ. ಆದರೆ, ಅಧಿಕಾರದಲ್ಲಿದ್ದೂ ತನ್ನೂರಿನ ಮಣ್ಣಿನ ಗುಣವನ್ನು, ಹಳೆಯ ಒಡನಾಟವನ್ನು ಮತ್ತು ಅಪಾರ ಕನ್ನಡಿಗ ಪ್ರೇಮವನ್ನು ಜೀವಂತವಾಗಿರಿಸಿಕೊಂಡಿರುವ ಅಪರೂಪದ ವ್ಯಕ್ತಿತ್ವ ಮೇಘಾಲ ಯದ ಗೌರವಾನ್ವಿತ ರಾಜ್ಯಪಾಲ ರಾದ ಶ್ರೀ ಸಿ.ಎಚ್.ವಿಜಯ ಶಂಕರ ಅವರದ್ದು.

ಇತ್ತೀಚೆಗೆ ಮೇಘಾಲಯ ರಾಜಧಾನಿ ಶಿಂಗ್‌ನಲ್ಲಿರುವ ‘ಲೋಕ ಭವನ’ದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ನಮ್ಮ ‘ಲೋಕಧ್ವನಿ’ ತಂಡಕ್ಕೆ ಅವರು ನೀಡಿದ ಆತಿಥ್ಯ, ಸತ್ಕಾರ ಮತ್ತು ತೋರಿದ ಅಪರೂಪದ ವಾತ್ಸಲ್ಯ, ಪ್ರೀತಿ ಕೇವಲ ಒಂದು ಶಿಷ್ಟಾಚಾರ, ಸೌಜನ್ಯದ ಭೇಟಿಯಾಗಿ ಉಳಿಯದೇ, ಬದುಕಿನ ಅತ್ಯಂತ ಆಪ್ತ ಹಾಗೂ ಅವಿಸ್ಮರಣೀಯ ನೆನಪಾಗಿ, ಶಾಶ್ವತವಾಗಿ ಉಳಿಯು ವಂತೆ ಮಾಡಿತು.

ಇದನ್ನೂ ಓದಿ: Vishweshwar Bhat Column: ಉತ್ತರ ಅಮೆರಿಕ ಖಂಡದ ವೈಶಿಷ್ಠ್ಯ

ಕಳೆದ ತಿಂಗಳ ಒಂದು ಹಿತಕರವಾದ ಬೆಳಗ್ಗೆ. ಮನಸ್ಸಿನಲ್ಲಿ ಒಂದು ಮಹತ್ವಾಕಾಂಕ್ಷೆಯ ಯೋಜನೆ ಯನ್ನು ಇಟ್ಟುಕೊಂಡು, ಬಹುವರ್ಷಗಳಿಂದ ಪರಿಚಿತರು, ಆಪ್ತರು ಮತ್ತು ಕನ್ನಡಿಗರೇ ಆದ ಮೇಘಾಲಯದ ರಾಜ್ಯಪಾಲ ಸಿ.ಎಚ್.ವಿಜಯಶಂಕರ ಅವರಿಗೆ ಫೋನ್ ಮಾಡಲು ನಿರ್ಧರಿಸಿದೆ. ಸಾಮಾನ್ಯವಾಗಿ ರಾಜ್ಯಪಾಲರ ಮಟ್ಟದ ವ್ಯಕ್ತಿಗಳಿಗೆ ಯಾರೂ ನೇರವಾಗಿ ಫೋನ್ ಮಾಡುವುದಿಲ್ಲ. ಅದಕ್ಕೆ ನೂರಾರು ಶಿಷ್ಟಾಚಾರದ ನಿಯಮಗಳಿರುತ್ತವೆ. ನೇರವಾಗಿ ಫೋನ್ ಮಾಡಬಾರದು ಎಂದೇನೂ ಕಾನೂನಿಲ್ಲದಿದ್ದರೂ, ಸಾಮಾನ್ಯವಾಗಿ ರಾಜ್ಯಪಾಲರಾದವರು ಖುದ್ದು ಫೋನ್ ಸ್ವೀಕರಿಸುವುದಿಲ್ಲ. ಅವರ ಆಪ್ತ ಕಾರ್ಯದರ್ಶಿ ಗಳೋ ಅಥವಾ ಎಡಿಸಿಗಳೋ, ಫೋನ್ ಕರೆಗಳನ್ನು ಸ್ವೀಕರಿಸಿ, ನಂತರ ಸಂದೇಶವನ್ನು ದಾಟಿಸುತ್ತಾರೆ. ಆದರೆ, ಅಂದು ನಾನು ಫೋನ್ ಮಾಡಿದಾಗ ಎದುರಾದದ್ದು ಒಂದು ಹಿತವಾದ ಆಶ್ಚರ್ಯ!

ಎರಡು ರಿಂಗ್ ಆಗುತ್ತಿದ್ದಂತೆ ಫೋನ್ ಸ್ವೀಕರಿಸಿದ ವಿಜಯಶಂಕರ ಅತ್ಯಂತ ಆಪ್ತ ಧ್ವನಿಯಲ್ಲಿ, ‘ಹೇಳಿ ವಿಶ್ವೇಶ್ವರ ಭಟ್ಟರೇ, ಹೇಗಿದ್ದೀರಿ? ಸೌಖ್ಯವಾ? ಏನು ಇವತ್ತು ನನ್ನನ್ನು ನೆನಪಿಸಿಕೊಂಡಿದ್ದೀರಿ? ಬಹಳ ಸಂತೋಷ’ ಎಂದಾಗ ನನಗೆ ತುಸು ಆಶ್ಚರ್ಯದ ಜತೆಗೆ ಆನಂದವಾಯಿತು. ಸಾಂವಿಧಾನಿಕ ಹುದ್ದೆಯ ದೊಡ್ಡಸ್ತಿಕೆ, ಅನಗತ್ಯ ಬಿಗುಮಾನ, ಸ್ಥಾನಮಾನ ತೋರ್ಪಡಿಕೆ ಅವರ ಧ್ವನಿಯಲ್ಲಾಗಲಿ, ಆ ಯೋಗಕ್ಷೇಮ ವಿಚಾರಣೆಯಲ್ಲಾಗಲಿ ಎಲ್ಲೂ ಇರಲಿಲ್ಲ. ನಂತರ ಮುಂದಿನ ಮೂರ್ನಾಲ್ಕು ನಿಮಿಷಗಳ ಕಾಲ ನಮ್ಮ ನಡುವೆ ಹಳೆಯ ನೆನಪುಗಳ ಉಭಯಕುಶಲೋಪರಿ!

ಅಷ್ಟರಲ್ಲಿ ನಾನು ಫೋನ್ ಮಾಡಿದ ಮುಖ್ಯ ಉದ್ದೇಶವನ್ನು ಅವರ ಮುಂದೆ ಪ್ರಸ್ತಾಪಿಸಿದೆ. ‘ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ನಲವತ್ತೂ ರು ವರ್ಷಗಳಿಂದ ‘ಲೋಕಧ್ವನಿ’ ದೈನಿಕ ನಿರಂತರವಾಗಿ ಪ್ರಕಟವಾಗುತ್ತಿದೆ. ಕಳೆದ ಐದು ವರ್ಷಗಳಿಂದ ಅದರ ಜವಾಬ್ದಾರಿಯನ್ನು ಹೊತ್ತು ನಾನು ಮುನ್ನಡೆಸುತ್ತಿದ್ದೇನೆ. ನಮ್ಮದೊಂದು ವಿಶೇಷ ಸಂಪ್ರದಾಯವಿದೆ. ನಾವು ಪ್ರತಿ ನಾಲ್ಕು ತಿಂಗಳಿಗೊಮ್ಮೆ ದೇಶದ ಬೇರೆ ಬೇರೆ ನಗರಗಳಲ್ಲಿ, ಉತ್ತರ ಕನ್ನಡ ಜಿಲ್ಲೆಯ ವಿಶೇಷ ಸಾಧಕರನ್ನು ಗುರುತಿಸಿ, ‘ನಮ್ಮ ಹೆಮ್ಮೆಯ ಸಾಧಕರು’ ಎಂಬ ಬಿರುದು ನೀಡಿ ಸನ್ಮಾನಿಸುತ್ತೇವೆ. ಈ ಬಾರಿ, ಸುಮಾರು ಇಪ್ಪತ್ತು ಸಾಧಕರು, ಅವರ ಕುಟುಂಬ ಸದಸ್ಯರು ಹಾಗೂ ನಮ್ಮ ಸಿಬ್ಬಂದಿ ಸೇರಿ ಐವತ್ತು ಮಂದಿಯನ್ನೊಳಗೊಂಡ, ಈ ವಿಶಿಷ್ಟ ಕಾರ್ಯಕ್ರಮವನ್ನು ಈಶಾನ್ಯ ಭಾರತದ ಸುಂದರ ರಾಜ್ಯ ಮೇಘಾಲಯದ ಲೋಕ ಭವನದಲ್ಲಿ (ರಾಜಭವನ) ನಡೆಸಬೇಕೆಂದು ತೀರ್ಮಾನಿಸಿದ್ದೇವೆ.

6 ಋ

ನಿಮ್ಮ ಸಹಕಾರ ಬೇಕು’ ಎಂದು ಮುನ್ನುಡಿ ಹಾಕಿದೆ. ನನ್ನ ಮಾತು ಇನ್ನೂ ಮುಗಿದಿರಲಿಲ್ಲ. ವಿಜಯಶಂಕರ ಅವರು ಕ್ಷಣವೂ ಯೋಚಿಸದೇ, ‘ವಿಶ್ವೇಶ್ವರ ಭಟ್ಟರೇ, ನಿಮಗೆ ಮೇಘಾಲಯ ಲೋಕಭವನದ ಬಾಗಿಲುಗಳು ಸದಾ ತೆರೆದಿವೆ. ಖಂಡಿತವಾಗಿಯೂ ಬನ್ನಿ, ನಿಮಗೆ ಬೇಕಾದ ಎಲ್ಲ ಏರ್ಪಾಡುಗಳನ್ನು ಮಾಡಿಕೊಡುತ್ತೇವೆ. ನೀವು ಇಷ್ಟು ದೊಡ್ಡ ತಂಡದೊಂದಿಗೆ ಇಲ್ಲಿಗೆ ಆಗಮಿಸು ತ್ತಿರುವುದು ನನಗೆ ಅತೀವ ಸಂತಸವನ್ನುಂಟು ಮಾಡಿದೆ.

ನಮ್ಮ ಅಧಿಕಾರಿಗಳಿಗೆ ತಕ್ಷಣವೇ ನಿಮ್ಮ ಜತೆ ಮಾತಾಡುವಂತೆ ಸೂಚಿಸುತ್ತೇನೆ. ನಿಮಗೆ ಏನು ವ್ಯವಸ್ಥೆಯಾಗಬೇಕು ಎಂಬುದನ್ನು ಅವರಿಗೆ ತಿಳಿಸಿ. ಅವರು ನಿಮ್ಮ ಜತೆ ನಿರಂತರ ಸಂಪರ್ಕ ದಲ್ಲಿರುತ್ತಾರೆ’ ಎಂದು ಭರವಸೆ ನೀಡಿದರು. ಒಬ್ಬ ರಾಜ್ಯಪಾಲರಿಂದ ಇಷ್ಟು ತಕ್ಷಣದ, ಕಳಕಳಿಯ, ಆಪ್ತ ಮತ್ತು ಉದಾರ ಸ್ಪಂದನೆಯನ್ನು ನಾನು ಖಂಡಿತವಾಗಿಯೂ ನಿರೀಕ್ಷಿಸಿರಲಿಲ್ಲ. ‘ಯಾವುದಕ್ಕೂ ಒಂದು ಲೆಟರ್ ಕೊಡಿ, ಪರಿಶೀಲಿಸುತ್ತೇವೆ, ನೋಡುತ್ತೇವೆ’ ಎಂಬ ಸರಕಾರಿ ಉತ್ತರ ನಿರೀಕ್ಷಿಸಿದ್ದ ನನಗೆ, ವಿಜಯಶಂಕರ ಅವರು ತೋರಿದ ಪ್ರೀತಿ, ಅಭಿಮಾನ ಹಿತವಾಗಿ ನಾಟಿತು.

ಅದಾದ ಬಳಿಕ ನಾನು ಅವರ ಜತೆ ಫೋನಿನಲ್ಲಿ ಮಾತನಾಡಿದ್ದು ಕೇವಲ ಒಂದೇ ಒಂದು ಸಲ ಮಾತ್ರ. ಅದು ನಾವು ಮೇಘಾಲಯಕ್ಕೆ ಹೊರಡುವ ದಿನ. ‘ಸಾರ್, ನಾವು ಮೇಘಾಲಯಕ್ಕೆ ಹೊರಡುತ್ತಿದ್ದೇವೆ’ ಎಂದಷ್ಟೇ ಹೇಳಿದೆ. ಅದಕ್ಕೂ ಅವರು ಅಷ್ಟೇ ಪ್ರೀತಿಯಿಂದ, ‘ಬನ್ನಿ ಬನ್ನಿ, ಇಲ್ಲಿ ಎಲ್ಲವೂ ಸಿದ್ಧವಾಗಿದೆ. ನಿಮ್ಮ ಬರುವಿಕೆಯನ್ನು ನಾನು ಎದುರು ನೋಡುತ್ತಿದ್ದೇನೆ’ ಎಂದು ಅಷ್ಟೇ ಆಪ್ತವಾಗಿ ಪ್ರತಿಕ್ರಿಯಿಸಿದರು. ನಾವು ಮೇಘಾಲಯ ತಲುಪಿದ ದಿನವೇ ಅಲ್ಲಿನ ಲೋಕ ಭವನದ ಅಧಿಕಾರಿಗಳ ದಕ್ಷತೆ ನಮಗೆ ಮನವರಿಕೆಯಾಯಿತು.

ರಾಜಭವನದ ಅಧಿಕಾರಿಗಳು ನಮ್ಮ ಸಿಬ್ಬಂದಿಗೆ ಮೂರ್ನಾಲ್ಕು ಬಾರಿ ಫೋನ್ ಮಾಡಿ ನಮ್ಮ ಪ್ರಯಾಣದ ವಿವರ, ಆಗಮನದ ಸಮಯ ಮತ್ತು ಯೋಗಕ್ಷೇಮವನ್ನು ವಿಚಾರಿಸಿಕೊಂಡರು. ಅಷ್ಟರೊಳಗೆ ಕಾರ್ಯಕ್ರಮದ ಸಂಪೂರ್ಣ ರೂಪುರೇಷೆ, ಸಿದ್ಧತೆ ಹಾಗೂ ಶಿಷ್ಟಾಚಾರಗಳ (ಪ್ರೋಟೋಕಾಲ್) ಬಗ್ಗೆ ಅಧಿಕಾರಿಗಳು ವಿವರಿಸಿದ್ದರು. ರಾಜ್ಯಪಾಲರ ಎಡಿಸಿ ನಮ್ಮ ತಂಡಕ್ಕೆ ಕಾರ್ಯಕ್ರಮದ ಸಮಯದ ಚೌಕಟ್ಟನ್ನು ನಿಖರವಾಗಿ ವಿವರಿಸುತ್ತಾ- ಮುಕ್ಕಾಲು ಗಂಟೆಗಳ ಕಾಲ ಅಧಿಕೃತ ವೇದಿಕೆ ಕಾರ್ಯಕ್ರಮ, ನಂತರ ಮುಕ್ಕಾಲು ಗಂಟೆ ಸಾಂಸ್ಕೃತಿಕ ಕಾರ್ಯಕ್ರಮ, ತದನಂತರ ಔತಣಕೂಟ ಸೇರಿದಂತೆ ಒಟ್ಟು ಎರಡೂಕಾಲು ಗಂಟೆಗಳಲ್ಲಿ ಇಡೀ ಕಾರ್ಯಕ್ರಮ ಮುಕ್ತಾಯ ಗೊಳ್ಳಲಿದೆ ಎಂದು ತಿಳಿಸಿದರು.

ಎಲ್ಲವೂ ಪ್ರೋಟೋಕಾಲ್‌ನಂತೆ ಕಟ್ಟುನಿಟ್ಟಾಗಿ, ಸಮಯಕ್ಕೆ ಸರಿಯಾಗಿ ನಡೆಯಲಿದೆ ಎಂಬ ಸ್ಪಷ್ಟ ಸಂದೇಶ ಅದಾಗಿತ್ತು. ನಾವು ಮೇಘಾಲಯ ತಲುಪಿದ ಮರುದಿನ ಸಾಯಂಕಾಲ ಐದು ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತು. ನಾವು ಯಾವ ವಿಳಂಬವಿಲ್ಲದೇ, ಸರಿಯಾಗಿ ನಾಲ್ಕೂವರೆ ಗಂಟೆಗೆಲ್ಲ ‘ಲೋಕ ಭವನ’ದ ಮೊಗಸಾಲೆಯಲ್ಲಿದ್ದೆವು. ಶಿಂಗ್‌ನ ಆ ತಂಪಾದ ವಾತಾವರಣದಲ್ಲಿ ಕಂಗೊಳಿಸುತ್ತಿದ್ದ ಮೇಘಾಲಯದ ರಾಜಭವನ, ಜೀವಂತ ಇತಿಹಾಸದ ದಸ್ತಾವೇಜಾಗಿತ್ತು.

ಸುಮಾರು ನೂರೈವತ್ತು ವರ್ಷಗಳಷ್ಟು ಹಳೆಯದಾದ ಆ ಹೆರಿಟೇಜ್ ಬಿಲ್ಡಿಂಗ್ (ಪಾರಂಪರಿಕ ಕಟ್ಟಡ) ತನ್ನದೇ ಆದ ಭವ್ಯ ಇತಿಹಾಸವನ್ನು ಒಡಲಲ್ಲಿ ಇಟ್ಟುಕೊಂಡಿದೆ. ಬ್ರಿಟಿಷರ ಕಾಲದ ವಾಸ್ತುಶಿಲ್ಪ, ವಿಶಾಲವಾದ ಕಾರಿಡಾರ್‌ಗಳು, ಐತಿಹಾಸಿಕ ಪೀಠೋಪಕರಣಗಳು ಅಲ್ಲಿನ ಗಾಂಭೀರ್ಯವನ್ನು ಹೆಚ್ಚಿಸಿದ್ದವು. ಬ್ರಿಟಿಷ್ ಆಡಳಿತ ಅವಧಿಯಲ್ಲಿ ಈಗಿನ ಲೋಕಭವನ ಕಟ್ಟಡ, ಪೂರ್ವಾಂಚಲ ಭಾರತದ ಏಳು ರಾಜ್ಯಗಳ ಆಡಳಿತ ಕೇಂದ್ರವಾಗಿತ್ತು. ಅಂದರೆ ಬ್ರಿಟಿಷರು ಈ ಕಟ್ಟಡದಲ್ಲಿ ಕುಳಿತು ಈಶಾನ್ಯ ರಾಜ್ಯಗಳ ಆಡಳಿತವನ್ನು ನಿಭಾಯಿಸುತ್ತಿದ್ದರು.

ಭಾರತದ ಇತಿಹಾಸವನ್ನು ರೂಪಿಸಿದ ಮಹಾನ್ ನಾಯಕರಾದ ನೇತಾಜಿ ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯ್ ಪಟೇಲ್ ಸೇರಿದಂತೆ ಅನೇಕ ಗಣ್ಯರು ಅಲ್ಲಿಗೆ ಆಗಮಿಸಿ, ವಾಸ್ತವ್ಯ ಹೂಡಿದ್ದರು. ಸ್ವತಂತ್ರ ಭಾರತದ ಪ್ರಧಾನ ಮಂತ್ರಿಗಳು ಮತ್ತು ರಾಷ್ಟ್ರಪತಿಗಳು ಶಿಂಗ್‌ಗೆ ಬಂದಾಗ ತಂಗುವ ಅಧಿಕೃತ ಐತಿಹಾಸಿಕ ತಾಣವದು. ರಾಜಕೀಯ ಮತ್ತು ಆಡಳಿತಾತ್ಮಕವಾಗಿ ಮಾತ್ರವಲ್ಲದೇ, ಸಾಂಸ್ಕೃತಿಕವಾಗಿಯೂ ಈ ಭವನಕ್ಕೆ ಅಪಾರ ಮಹತ್ವವಿದೆ.

ಈಶಾನ್ಯ ಭಾರತದ ಐಕ್ಯತೆ ಹಾಗೂ ಭಾರತದ ಭವ್ಯ ಐತಿಹಾಸಿಕ ಪುಸ್ತಕದ ಮುಖಪುಟದಂತಿರುವ ಮೇಘಾಲಯದ ಈ ಲೋಕ ಭವನವು, ತನ್ನ ಕಟ್ಟುನಿಟ್ಟಿನ ರಾಜತಾಂತ್ರಿಕ ಶಿಷ್ಟಾಚಾರಗಳು ಮತ್ತು ಭವ್ಯ ಪರಂಪರೆಯ ಮೂಲಕ ಇಂದಿಗೂ ದೇಶದ ಅತ್ಯಂತ ಗೌರವಾನ್ವಿತ ಸಾಂವಿಧಾನಿಕ ಕೇಂದ್ರ ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ, ಈಶಾನ್ಯ ರಾಜ್ಯಗಳ ಗಡಿ ನಿರ್ಣಯ ಹಾಗೂ ಪ್ರಾದೇಶಿಕ ಶಾಂತಿ ಒಪ್ಪಂದಗಳ ಕುರಿತಾದ ಹಲವು ಉನ್ನತ ಮಟ್ಟದ ರಾಜತಾಂತ್ರಿಕ ಸಭೆಗಳು ಇಲ್ಲಿ ನಡೆದಿವೆ. ಅಂಥ ಒಂದು ಪವಿತ್ರ ಮತ್ತು ಐತಿಹಾಸಿಕ ಸ್ಥಳದಲ್ಲಿ ಉತ್ತರ ಕನ್ನಡದ ಸಾಧಕರಿಗೆ ಸನ್ಮಾನ ಮಾಡುವ ಅವಕಾಶ ಸಿಕ್ಕಿದ್ದು ನಮ್ಮ ‘ಲೋಕಧ್ವನಿ’ ತಂಡದ ಸೌಭಾಗ್ಯವೇ ಸರಿ.

ಲೋಕ ಭವನಕ್ಕೆ ಹೋಗುತ್ತಿದ್ದಂತೆ, ಅಲ್ಲಿನ ಅಧಿಕಾರಿಗಳು ಮತ್ತೊಮ್ಮೆ ಬಹುಮಾನ ಪುರಸ್ಕೃತರಿಗೆ, ರಾಜ್ಯಪಾಲರಿಂದ ಯಾವ ರೀತಿ ಸನ್ಮಾನ ಸ್ವೀಕರಿಸಬೇಕು ಎಂಬ ಕುರಿತು ರಿಹರ್ಸಲ್ ಮಾಡಿಸಿದರು. ಯಾರು ಯಾವ ಆಸನದಲ್ಲಿ ಕುಳಿತುಕೊಳ್ಳ ಬೇಕೆಂದು ನಿಗದಿಪಡಿಸಿದರು. ರಾಜ್ಯಪಾಲರು ಬರುತ್ತಿರು ವಂತೆ ಯಾವ ರೀತಿ ನಡೆದುಕೊಳ್ಳಬೇಕೆಂದು ತಿಳಿಸಿಕೊಟ್ಟರು.

ಕಾರ್ಯಕ್ರಮ ನಿಗದಿತ ಸಮಯಕ್ಕೆ ಸರಿಯಾಗಿ ಆರಂಭವಾಯಿತು. ವಿಜಯಶಂಕರ ಅವರು ನಮ್ಮನ್ನು ನೋಡುತ್ತಿದ್ದಂತೆ, ಶಿಷ್ಟಾಚಾರವನ್ನು ಪಕ್ಕಕ್ಕಿಟ್ಟು, ಲೋಕಾಭಿರಾಮವಾಗಿ ಮಾತುಕತೆ, ಹಾವಭಾವದಲ್ಲಿ ತೊಡಗಿ, ಇಡೀ ವಾತಾವರಣದಲ್ಲಿದ್ದ ಬಿಗುಮಾನ ವನ್ನು ಸರಿಸಿ, ಅತ್ಯಂತ ಆಪ್ತಗೊಳಿಸಿಬಿಟ್ಟರು. ಅಧಿಕಾರಿಗಳು ಪರಸ್ಪರ ಮುಖಮುಖ ನೋಡಿಕೊಂಡರು. ನಮಗೆ ಮೊದಲೇ ತಿಳಿಸಿದ್ದ ಎರಡೂಕಾಲು ಗಂಟೆಯ ಕಾಲ ನಿರ್ಧಾರ ಮತ್ತು ಸಮಯ ಪಾಲನೆ ಎಲ್ಲಾ ಕರಗಿ ಹೋಗಿತ್ತು!

ವಿಜಯಶಂಕರ ಅವರು ನಮ್ಮ ಮೇಲೆ ತೋರಿಸಿದ ಪ್ರೀತಿ, ಆದರ ಮತ್ತು ಆತ್ಮೀಯತೆ ಮುಂದೆ ಲೋಕ ಭವನದ ಶಿಷ್ಟಾಚಾರ ಮುಂದೆ ಬರಲೇ ಇಲ್ಲ. ಸಾಂಪ್ರದಾಯಿಕ ಆಚರಣೆಯನ್ನು ಬದಿಗಿಟ್ಟು, ಅವರು ನಮ್ಮೊಂದಿಗೆ ಬರೋಬ್ಬರಿ ಎರಡೂವರೆ ತಾಸುಗಳ ಕಾಲ ಯಾವ ಬಿಗುಮಾನವಿಲ್ಲದೇ ಅತ್ಯಂತ ಲವಲವಿಕೆ, ಉತ್ಸಾಹ, ಖುಷಿಖುಷಿಯಿಂದ ಕಳೆದರು.

ನಮ್ಮ ತಂಡದಲ್ಲಿದ್ದ ಉತ್ತರ ಕನ್ನಡ ಜಿಯ ಸಾಧಕರನ್ನು ಅತ್ಯಂತ ಗೌರವದಿಂದ ಸನ್ಮಾನಿಸಿದ ಅವರು, ಪ್ರತಿಯೊಬ್ಬರ ಹೆಸರು-ಸಾಧನೆಯನ್ನು ಕೇಳಿ ತಿಳಿದು ಕೊಂಡರು. ಅವರನ್ನು ಮುಕ್ತಕಂಠ ದಿಂದ ಶ್ಲಾಘಿಸಿದರು. ಉತ್ತರ ಕನ್ನಡ ಜಿಯ ನಾಯಕರೊಂದಿಗಿನ ತಮ್ಮ ಒಡನಾಟವನ್ನು ನೆನಪು ಮಾಡಿಕೊಂಡರು. ಸಾಧಕರೊಂದೇ ಅಲ್ಲ, ಅವರ ಕುಟುಂಬ ಸದಸ್ಯರನ್ನು ಪಕ್ಕಕ್ಕೆ ನಿಲ್ಲಿಸಿಕೊಂಡು ಫೋಟೋಕ್ಕೆ ಅವಕಾಶ ಮಾಡಿಕೊಟ್ಟರು.

ಅಧಿಕಾರಿಗಳು ವಿವರಿಸಿದ ಶಿಷ್ಟಾಚಾರದಲ್ಲಿ ಇವಕ್ಕೆಲ್ಲ ಅವಕಾಶವಿರಲಿಲ್ಲ. ಅವರು ಸ್ಪಂದಿಸಿದ ರೀತಿ ಇಡೀ ಕಾರ್ಯಕ್ರಮದಲ್ಲಿ ಒಂದು ಹಿತಕರವಾದ ಕೌಟುಂಬಿಕ ವಾತಾವರಣವನ್ನು ನಿರ್ಮಿಸಿತ್ತು. ವೇದಿಕೆಯ ಮೇಲಿನ ಔಪಚಾರಿಕ ಭಾಷಣಗಳ ನಂತರ, ಅವರು ನಮ್ಮ ಇಡೀ ತಂಡದೊಂದಿಗೆ ಅತ್ಯಂತ ಸರಳವಾಗಿ ಬೆರೆತು, ಸನ್ಮಾನ ಕಾರ್ಯಕ್ರಮ ನೆರವೇರಿಸಿಕೊಟ್ಟರು.

ನಂತರ ನಮಗಾಗಿಯೇ ಲೋಕ ಭವನದ ದರ್ಬಾರ್ ಹಾಲ್‌ನಲ್ಲಿ ಮೇಘಾಲಯದ ನೃತ್ಯ, ಹಾಡು, ಸಮೂಹ ಗಾನವನ್ನೊಳಗೊಂಡ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಸುಮಾರು ಒಂದು ಗಂಟೆ ಕಾಲ ಕಳೆದಿದ್ದೇ ಗೊತ್ತಾಗಲಿಲ್ಲ. ಅಧಿಕಾರ ಮತ್ತು ವೈಭವಗಳ ತಾಣವಾದ ಲೋಕ ಭವನದಲ್ಲಿ ಸಾಮಾನ್ಯ ವಾಗಿ ಪಾಶ್ಚಿಮಾತ್ಯ ಸಂಸ್ಕೃತಿಯ ಅಥವಾ ಅತ್ಯಂತ ಔಪಚಾರಿಕ ವಾತಾವರಣವನ್ನು ನಿರೀಕ್ಷಿಸುತ್ತೇವೆ. ಆದರೆ, ಆ ಭವ್ಯ ಗೋಡೆಗಳ ಮಧ್ಯೆಯೂ ನಮ್ಮ ಮಣ್ಣಿನ ಸಂಸ್ಕಾರ, ಸಂಸ್ಕೃತಿ ಮತ್ತು ವೈಚಾರಿಕ ಸರಳತೆ ಹೇಗೆ ಎದ್ದು ಕಾಣಬಹುದು ಎಂಬುದಕ್ಕೆ ವಿಜಯ ಶಂಕರ ಅವರು ಹಮ್ಮಿಕೊಂಡಿದ್ದ ಆ ರಾತ್ರಿಯ ಔತಣಕೂಟವೇ ಒಂದು ಜ್ವಲಂತ ಸಾಕ್ಷಿ.

ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು ಸೇರಿದಂತೆ ದೇಶದ ಗಣ್ಯಾತಿಗಣ್ಯರಿಗೆ ಮೀಸಲಾಗಿರುವ ಆ ಭವ್ಯ ಹಾಲಿನಲ್ಲಿ, ನಲವತ್ತೈದು ಜನರ ನಮ್ಮ ತಂಡಕ್ಕೆ ಗೌರವಾರ್ಥವಾಗಿ ಏರ್ಪಡಿಸಿದ್ದ ಆ ಔತಣ ಕೂಟ ಕೇವಲ ಹೊಟ್ಟೆ ತುಂಬಿಸುವ ಭೋಜನವಾಗಿರಲಿಲ್ಲ. ಅದೊಂದು ಸಾಂಸ್ಕೃತಿಕ ಅನುಭೂತಿ ಯಾಗಿತ್ತು. ವಿಜಯಶಂಕರ ಅವರು ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ನಂತರ ರಾಜಭವನದ ಇತಿಹಾಸದ ಒಂದು ಪರಿವರ್ತನೆಯನ್ನು ತಂದಿzರೆ. ಸಾಮಾನ್ಯವಾಗಿ ಇಂಥ ಉನ್ನತ ಮಟ್ಟದ ರಾಜತಾಂತ್ರಿಕ ಅಥವಾ ಸರಕಾರಿ ಔತಣಕೂಟಗಳಲ್ಲಿ ಮದ್ಯ ಮತ್ತು ಮಾಂಸಾಹಾರ ಇರುವುದು ಸಹಜ.

ಆದರೆ, ಅವರು ಬಂದ ದಿನದಿಂದ ಲೋಕ ಭವನದಲ್ಲಿ ಮಾಂಸ ಭಕ್ಷಣೆ ಮತ್ತು ಮದ್ಯ ಸೇವನೆ ಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದ್ದಾರೆ. ಜಾಗತಿಕ ಗಣ್ಯರು ಯಾರೇ ಬರಲಿ, ಅಲ್ಲಿ ಕೇವಲ ಸಾತ್ತಿ ಕ ಸಸ್ಯಾಹಾರ ಮಾತ್ರ ವಿತರಣೆ ಎನ್ನುವ ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತಂದಿzರೆ. ಇದು ಕೇವಲ ಆಹಾರದ ಆಯ್ಕೆಯಲ್ಲ, ಬದಲಿಗೆ ಭಾರತೀಯ ಪರಂಪರೆಯ ಅಹಿಂಸೆ ಮತ್ತು ಸಾತ್ತಿ ಕ ಜೀವನಶೈಲಿಗೆ ಅವರು ನೀಡಿದ ಪರಮೋಚ್ಚ ಗೌರವ. ಆ ರಾತ್ರಿಯ ಅತ್ಯಂತ ಸುಂದರ ಮತ್ತು ಹೃದಯಸ್ಪರ್ಶಿ ಕ್ಷಣ ಬಂದಿದ್ದೇ ಊಟದ ತಟ್ಟೆಯ ಮುಂದೆ ಕುಳಿತಾಗ. ಎಲ್ಲರೂ ತುತ್ತು ಸೇವಿಸಲು ಸಿದ್ಧರಾಗುತ್ತಿದ್ದಂತೆ, ಸ್ವತಃ ರಾಜ್ಯಪಾಲರೇ ಮುಗುಳ್ನಗುತ್ತಾ, ‘ಎಲ್ಲರೂ ಸೇರಿ ಉಪನಿಷತ್ತಿನ ಶಾಂತಿ ಮಂತ್ರ ಪಠಿಸೋಣವಾ?’ ಎಂದು ಕೇಳಿದರು.

ಅಲ್ಲಿ ನೆರೆದಿದ್ದ ಎಲ್ಲರೂ ಒಪ್ಪಿಗೆ ಸೂಚಿಸುತ್ತಿದ್ದಂತೆ, ಅವರೇ ಗಂಭೀರ ದನಿಯಲ್ಲಿ, ‘ಓಂ ಸಹ ನಾಭವತು ಸಹ ನೌ ಭುನಕ್ತು’ ಎಂದು ಮಂತ್ರವನ್ನು ಆರಂಭಿಸಿದರು. ಇಡೀ ಸಭಾಂಗಣದಲ್ಲಿದ್ದ ಎಲ್ಲ ದನಿಗಳು ಅದಕ್ಕೆ ಶ್ರದ್ಧೆಯಿಂದ ದನಿಗೂಡಿಸಿದಾಗ ಸೃಷ್ಟಿಯಾದ ಆ ಸಕಾರಾತ್ಮಕ ಕಂಪನ ವರ್ಣನಾತೀತ. ‘ನಾವೆಲ್ಲರೂ ಒಟ್ಟಿಗೆ ಉಣ್ಣೋಣ, ಈ ಅನ್ನದ ಆನಂದವನ್ನು ಜತೆಯಾಗಿ ಸವಿಯೋಣ, ನಮ್ಮ ನಡುವೆ ಎಂದಿಗೂ ದ್ವೇಷ ಬಾರದಿರಲಿ’ ಎಂಬ ಅರ್ಥವಿರುವ ಈ ಮಂತ್ರ ಪಠಣ, ಆ ಔತಣಕೂಟದ ಘನತೆಯನ್ನು ಸಾಧಾರಣ ಮಟ್ಟದಿಂದ ಆಧ್ಯಾತ್ಮಿಕ ಮಟ್ಟಕ್ಕೆ ಕೊಂಡೊಯ್ಯಿತು.

ಅಧಿಕಾರದ ಉತ್ತುಂಗದಲ್ಲಿದ್ದರೂ ಮಾನ್ಯ ರಾಜ್ಯಪಾಲರು ತಮ್ಮ ಮಣ್ಣಿನ ಜಗತಿಯನ್ನು ಮರೆತಿರ ಲಿಲ್ಲ. ಮೆನುವಿನಲ್ಲಿ ಅಪ್ಪಟ ಕರ್ನಾಟಕ ಶೈಲಿಯ ಊಟವನ್ನು ಸಿದ್ಧಪಡಿಸುವಂತೆ ಅವರು ಬಾಣಸಿಗರಿಗೆ ವಿಶೇಷ ಸೂಚನೆ ನೀಡಿದ್ದರು. ಎಷ್ಟೇ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳಿ ದ್ದರೂ, ನಮ್ಮ ನೆಲದ ರುಚಿಗೆ ಸಾಟಿಯಿಲ್ಲ ಎಂಬುದನ್ನು ಸಾಬೀತುಪಡಿಸುವಂತೆ ಒಂದೆರಡು ‘ಲೋಕಲ್ ಐಟಂ’ಗಳನ್ನು ಮಾಡಿಸಲು ಅವರು ಮರೆತಿರಲಿಲ್ಲ.

ಬಿಸಿಬಿಸಿ ಚಪಾತಿ, ಪಲ್ಯ, ಅನ್ನ, ಸಾರು, ಸಾಂಬಾರು, ನಮ್ಮ ಮಣ್ಣಿನ ವಿಶಿಷ್ಟ ಖಾದ್ಯಗಳ ಪರಿಮಳ ಆ ಭವ್ಯ ಹಾಲಿನಲ್ಲಿ ಪಸರಿಸಿತ್ತು. ಊಟದ ನಡುವೆ ಯಾವುದೇ ಔಪಚಾರಿಕತೆಯ ಮುಖವಾಡ ವಿಲ್ಲದ ಲೋಕಾಭಿರಾಮ ಹರಟೆ, ಮನಬಿಚ್ಚಿ ಆಡಿದ ಮಾತುಗಳು, ಹಳೆಯ ಕತೆಗಳ ನೆನಪು ಮತ್ತು ತಡೆಯಿಲ್ಲದ ನಗುವಿನ ಅಲೆಗಳು ಆ ರಾತ್ರಿಯನ್ನು ಮತ್ತಷ್ಟು ಆಪ್ತವಾಗಿಸಿದವು.

ರಾಜ್ಯಪಾಲರ ಔತಣಕೂಟ ಎಂದರೆ ಕೇವಲ ತಟ್ಟೆಯಲ್ಲಿದ್ದ ರಾಜಾತಿಥ್ಯ ಮಾತ್ರವಲ್ಲ, ಅಲ್ಲಿ ಹರಿದಾಡಿದ ಸಾತ್ತಿ ಕ ಚಿಂತನೆ ಮತ್ತು ಆತ್ಮೀಯತೆಯ ಸವಿಯೂ ಮೆರಗು ನೀಡಿತ್ತು. ಭವ್ಯತೆಯ ನಡುವೆಯೂ ನಮ್ಮ ಸಂಸ್ಕೃತಿಯ ಬೇರುಗಳನ್ನು ಹೇಗೆ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಬಹುದು ಎಂಬುದಕ್ಕೆ ಈ ಅಪರೂಪದ ಸಂಜೆ ಸದಾ ನೆನಪಿನಲ್ಲಿ ಉಳಿಯುವ ಒಂದು ಸುಂದರ ಅಧ್ಯಾಯ.

ನಮ್ಮ ತಂಡದಲ್ಲಿದ್ದ ನಲವತ್ತೈದು ಮಂದಿ ಪೈಕಿ ಬಹುತೇಕರು ತಮ್ಮ ಜೀವಮಾನದಲ್ಲಿ ಬೆಂಗಳೂರಿನಲ್ಲಿರುವ ನಮ್ಮ ಲೋಕ ಭವನವನ್ನೇ ಹತ್ತಿರದಿಂದ ನೋಡಿದವರಲ್ಲ. ಇನ್ನು ರಾಜ್ಯಪಾಲರನ್ನು ಭೇಟಿ ಮಾಡುವುದು, ಅವರ ಕೈಯಿಂದ ಸನ್ಮಾನ ಸ್ವೀಕರಿಸುವುದು, ಅವರ ಜತೆ ಕುಳಿತು ಊಟ ಮಾಡುವುದು ದೂರದ ಮಾತು. ನಮ್ಮ ಸಾಧಕರು ಮತ್ತು ಸಿಬ್ಬಂದಿಯೊಂದಿಗೆ ವಿಜಯಶಂಕರ ಅವರು ನಡೆದುಕೊಂಡ ರೀತಿ, ತೋರಿದ ವಾತ್ಸಲ್ಯ ಮತ್ತು ಮೈಸೂರಿಗನ ಅಪ್ಪಟ ಆತ್ಮೀಯತೆ ನಿಜಕ್ಕೂ ಅಪರೂಪದಲ್ಲಿ ಅಪರೂಪದ್ದು.

ರಾಜಭವನದ ಬಿಗಿ ಭದ್ರತೆ, ಗಂಭೀರ ವಾತಾವರಣ ಎಲ್ಲವೂ ಆ ಮೂರೂವರೆ ಗಂಟೆಗಳ ಕಾಲ ಒಂದು ಕನ್ನಡಿಗರ ಸ್ನೇಹಕೂಟದಂತೆ ಬದಲಾಗಿತ್ತು. ಗಡಿಗಳನ್ನು ದಾಟಿ ಬಂದ ನಮಗೆ, ತಾಯ್ನಾಡಿನ ಇರುವ ಹಿತವಾದ ಅನುಭವವನ್ನು ಅವರು ನೀಡಿದರು. ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ ಆ ಅಧಿಕಾರದ ಕುರ್ಚಿಯಲ್ಲಿ ಕುಳಿತಾಗಲೂ ಸರಳತೆ, ತನ್ನ ತಾಯ್ನಾಡಿನ ಜನರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದಕ್ಕೆ ವಿಜಯಶಂಕರ ಒಂದು ಅತ್ಯುತ್ತಮ ಉದಾಹರಣೆ ಯಾಗಿ ನಿಲ್ಲುತ್ತಾರೆ.

ಶಿಂಗ್‌ನ ತಂಪಾದ ಗಾಳಿ, ನೂರೈವತ್ತು ವರ್ಷಗಳ ಹಳೆಯ ಹೆರಿಟೇಜ್ ಕಟ್ಟಡದ ಭವ್ಯತೆ, ಉತ್ತರ ಕನ್ನಡದ ಸಾಧಕರ ಕಣ್ಣಿನಲ್ಲಿದ್ದ ಸಾರ್ಥಕತೆಯ ಭಾವ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ರಾಜ್ಯಪಾಲ ರು ತೋರಿದ ಆ ನಿಷ್ಕಲ್ಮಷ ಪ್ರೀತಿಯ ಆತಿಥ್ಯ- ಇವೆಲ್ಲವೂ ಸದಾ ಕಾಲ ಹಸಿರಾಗಿ ಉಳಿಯುವ ಅಪೂರ್ವ ನೆನಪುಗಳು.

ಲೋಕ ಭವನದ ಬಾಗಿಲುಗಳನ್ನು ನಮಗಾಗಿ ಮುಕ್ತವಾಗಿ ತೆರೆದು, ಕನ್ನಡಿಗರ ಹೆಮ್ಮೆಯನ್ನು ಹೆಚ್ಚಿಸಿದ ಗೌರವಾನ್ವಿತ ರಾಜ್ಯಪಾಲರಿಗೆ ನಮ್ಮ ಇಡೀ ತಂಡದ ಪರವಾಗಿ ಹೃತ್ಪೂರ್ವಕ ಕೃತಜ್ಞತೆ ಗಳು. ಕೆಲವರು ಉನ್ನತ ಹುzಗೆ ಏರುವ ಯೋಗ್ಯತೆ ಹೊಂದಿರುತ್ತಾರೆ. ಇನ್ನು ಕೆಲವರು ಆ ಹುದ್ದೆಗೆ ಏರಿದ ನಂತರ ಅದಕ್ಕೆ ತಕ್ಕ ಯೋಗ್ಯತೆ ಬೆಳೆಸಿಕೊಳ್ಳುತ್ತಾರೆ. ನಿಸ್ಸಂದೇಹವಾಗಿ, ವಿಜಯಶಂಕರ ಅವರು ಈ ಎರಡನ್ನೂ ಹೊಂದಿದವರು, ಬೆಳೆಸಿಕೊಂಡವರು.

ವಿಶ್ವೇಶ್ವರ ಭಟ್‌

View all posts by this author