ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

R T Vittalmurthy Column: ಶಾಮನೂರು ಸಾಮ್ರಾಜ್ಯಕ್ಕೆ ಓವೈಸಿ ಎಂಟ್ರಿ ?

ಕಳೆದ ವಾರ ರಾಜ್ಯದ ಕಾಂಗ್ರೆಸ್ ನಾಯಕರಿಗೆ ತಲುಪಿದ ಸುದ್ದಿ ಅಷ್ಟೇನೂ ಹಿತಕರವಾಗಿರಲಿಲ್ಲ. ಕಾರಣ? ಹೈದರಾಬಾದ್‌ನ ಕಟ್ಟರ್ ಮುಸ್ಲಿಂ ನಾಯಕ ಅಸಾದುದ್ದೀನ್ ಓವೈಸಿ ಕರ್ನಾಟಕದ ರಾಜಕಾರಣಕ್ಕೆ ಎಂಟ್ರಿ ಆಗಲಿದ್ದಾರೆ ಎಂಬ ಸುದ್ದಿ. ಅಂದ ಹಾಗೆ, ‘ಆಲ್ ಇಂಡಿಯಾ ಮಜ್ಲಿಸ್ ಎ ಇತ್ತೆಹಾದ್ ಮುಸ್ಲಿಮಿನ್’ ಪಕ್ಷದ ಸರ್ವೋಚ್ಚ ನಾಯಕರಾದ ಅಸಾದುದ್ದೀನ್ ಓವೈಸಿ ಅವರಿಗೆ ಕರ್ನಾಟಕದ ರಾಜಕಾರಣದ ಮೇಲೆ ಒಂದು ಕಣ್ಣು ಇದ್ದೇ ಇದೆ.

ಮೂರ್ತಿಪೂಜೆ

ಕಳೆದ ವಾರ ರಾಜ್ಯದ ಕಾಂಗ್ರೆಸ್ ನಾಯಕರಿಗೆ ತಲುಪಿದ ಸುದ್ದಿ ಅಷ್ಟೇನೂ ಹಿತಕರವಾಗಿರಲಿಲ್ಲ. ಕಾರಣ? ಹೈದರಾಬಾದ್‌ನ ಕಟ್ಟರ್ ಮುಸ್ಲಿಂ ನಾಯಕ ಅಸಾದುದ್ದೀನ್ ಓವೈಸಿ ಕರ್ನಾಟಕದ ರಾಜಕಾರಣಕ್ಕೆ ಎಂಟ್ರಿ ಆಗಲಿದ್ದಾರೆ ಎಂಬ ಸುದ್ದಿ. ಅಂದ ಹಾಗೆ, ‘ಆಲ್ ಇಂಡಿಯಾ ಮಜ್ಲಿಸ್ ಎ ಇತ್ತೆಹಾದ್ ಮುಸ್ಲಿಮಿನ್’ ಪಕ್ಷದ ಸರ್ವೋಚ್ಚ ನಾಯಕರಾದ ಅಸಾದುದ್ದೀನ್ ಓವೈಸಿ ಅವರಿಗೆ ಕರ್ನಾಟಕದ ರಾಜಕಾರಣದ ಮೇಲೆ ಒಂದು ಕಣ್ಣು ಇದ್ದೇ ಇದೆ.

ಹೀಗಾಗಿಯೇ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದ ಹಲವು ಕ್ಷೇತ್ರ ಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಅವರು ಯೋಚಿಸಿದ್ದರು. ಅದೇ ಸಂದರ್ಭ ದಲ್ಲಿ ರಾಜ್ಯದ ಜೆಡಿಎಸ್ ನಾಯಕರು, ತೆಲಂಗಾಣದ ಮುಖ್ಯಮಂತ್ರಿಯಾಗಿದ್ದ ಚಂದ್ರಶೇಖರರಾವ್ ಅವರ ಜತೆ ಕೈ ಜೋಡಿಸಲು ಓಡಾಡುತ್ತಿದ್ದುದರಿಂದ ಓವೈಸಿ ಅವರು ಡೆಡ್ಲಿ ಆಗುವ ಸಾಧ್ಯತೆಗಳಿ ದ್ದವು.

ಯಾಕೆಂದರೆ ಒಂದು ಕಡೆಯಿಂದ ಚಂದ್ರಶೇಖರರಾವ್ ಇಲ್ಲಿಗೆ ಎಂಟ್ರಿ ಕೊಟ್ಟು, ಮತ್ತೊಂದು ಕಡೆಯಿಂದ ಓವೈಸಿ ನುಗ್ಗಿದ್ದರೆ ಕರ್ನಾಟಕದ ಮುಸ್ಲಿಂ ಮತಗಳು ಚೆದುರುವ, ಆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಹೊಡೆತ ಬೀಳುವ ಸಾಧ್ಯತೆಗಳಿದ್ದವು. ಆದರೆ ಕೊನೇ ಗಳಿಗೆಯಲ್ಲಿ ಚಿತ್ರ ಬದಲಾಯಿತು.

ಅತ್ತ ಚಂದ್ರಶೇಖರರಾವ್ ಅವರು ಜೆಡಿಎಸ್ ಜತೆಗಿನ ಸಖ್ಯವನ್ನು ಮುಂದುವರಿಸಲಿಲ್ಲ. ಓವೈಸಿ ಕೂಡಾ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮನಸ್ಸು ಮಾಡಲಿಲ್ಲ. ಅಲ್ಲಿಗೆ ಕರ್ನಾಟಕ ಏಕಪಕ್ಷೀಯವಾಗಿ ಕಾಂಗ್ರೆಸ್ ಪಾಲಾಯಿತು.

ಮೂಲಗಳ ಪ್ರಕಾರ, ಕೊನೇ ಗಳಿಗೆಯಲ್ಲಿ ಓವೈಸಿ ಕರ್ನಾಟಕಕ್ಕೆ ದೊಡ್ಡ ಮಟ್ಟದ ಎಂಟ್ರಿ ಕೊಡದೇ ಇರಲು ಅವರಿಗಿದ್ದ ಐತಿಹಾಸಿಕ ಧಾವಂತವೂ ಕಾರಣ. ಅದೆಂದರೆ, ಕರ್ನಾಟಕದ ಹಳೆ ಮೈಸೂರು ಭಾಗದಲ್ಲಿರುವ ಬಹುತೇಕ ಮುಸ್ಲಿಮರು ಹೈದರಾಬಾದ್ ಮೂಲದ ಮುಸ್ಲಿಂ ನಾಯಕರನ್ನು ಇಷ್ಟ ಪಡುವುದಿಲ್ಲ.

ಇದಕ್ಕೆ ಕಾರಣ ಟಿಪ್ಪು ಸುಲ್ತಾನನ ಅವನತಿಗೆ ಹೈದರಾಬಾದ್‌ನ ನಿಜಾಮರು ಕೂಡಾ ಕಾರಣ ಎಂಬುದು. ಅವತ್ತು ಬ್ರಿಟಿಷರ ವಿರುದ್ಧ ಒಂದಾಗಿ ಹೋರಾಡುವಂತೆ ಟಿಪ್ಪು ಸುಲ್ತಾನ್ ಅದೆಷ್ಟು ಪರಿಪರಿಯಾಗಿ ಕೇಳಿಕೊಂಡರೂ ನಿಜಾಮರು ತೆರೆಯ ಹಿಂದೆ ಬ್ರಿಟಿಷರ ಜತೆ ಕೈ ಜೋಡಿಸಿದರು ಮತ್ತು ಟಿಪ್ಪುವಿನ ಪತನಕ್ಕೆ ಕಾರಣರಾದರು ಎಂಬುದು ಇವತ್ತಿಗೂ ಹಳೆ ಮೈಸೂರು ಭಾಗದ ಮುಸ್ಲಿಮರ ಮನಸ್ಸಿನಲ್ಲಿ ರಕ್ತಗತವಾಗಿ ಉಳಿದುಕೊಂಡಿದೆ.

ಹೀಗೆ ಹೈದರಾಬಾದ್ ನಿಜಾಮರ ಮೇಲಿನ ಸಿಟ್ಟು ಉಳಿದುಕೊಂಡಿರುವುದರಿಂದ ಅವರು ಇವತ್ತಿಗೂ ಹೈದರಾಬಾದ್ ಮೂಲದ ಮುಸ್ಲಿಂ ನಾಯಕರನ್ನು ಇಷ್ಟಪಡುವುದಿಲ್ಲ. ಇದು ಗೊತ್ತಿರುವುದರಿಂದ ಓವೈಸಿ ಕೂಡಾ ಕರ್ನಾಟಕಕ್ಕೆ ದೊಡ್ಡ ಮಟ್ಟದಲ್ಲಿ ಎಂಟ್ರಿ ಕೊಡಲು ಹಿಂಜರಿಯುತ್ತಿದ್ದರು.

ಒಂದು ಕಾಲದಲ್ಲಿ ಕರ್ನಾಟಕದ ಮುಸ್ಲಿಂ ಸಮುದಾಯದ ಜನಪ್ರಿಯ ನಾಯಕರಾಗಿದ್ದ ರೋಷನ್ ಬೇಗ್ ವಿರುದ್ಧ ಅಸಹನೆ ಹೊಂದಿದ್ದ ಓವೈಸಿ, ಶಿವಾಜಿನಗರ ವಿಧಾನಸಭಾ ಕ್ಷೇತ್ರಕ್ಕೆ ನುಗ್ಗಿ ಅಟ ಆಡಲು ಬಯಸಿದ್ದರು. ಆದರೆ ಅವತ್ತು ಮಂತ್ರಿಯಾಗಿದ್ದ ರೋಷನ್ ಬೇಗ್ ತಮ್ಮ ಪವರ್ ಬಳಸಿ ಓವೈಸಿಯವರು ಶಿವಾಜಿ ನಗರಕ್ಕೆ ನುಗ್ಗದಂತೆ ನೋಡಿಕೊಂಡಿದ್ದರು.

ಹೀಗಾಗಿ ಅಲ್ಲಿಂದ ಮುಂದೆ ಗುಲ್ಬರ್ಗ ಸೇರಿದಂತೆ ಹೈದರಾಬಾದ್-ಕರ್ನಾಟಕದ ಕೆಲ ಕ್ಷೇತ್ರಗಳಲ್ಲಿ ಓವೈಸಿ ಒಂದು ಲೆವೆಲ್ಲಿನ ಅಟ ಅಡುತ್ತಾ ಬಂದಿದ್ದಾರಾದರೂ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿಲ್ಲ. ಆದರೆ ಕರ್ನಾಟಕದ ಮುಸ್ಲಿಂ ರಾಜಕಾರಣ ದಿನದಿಂದ ದಿನಕ್ಕೆ ಅತಂತ್ರವಾಗುತ್ತಿರುವುದು, ಅಜೀಜ್ ಸೇಠ್, ಜಾಫರ್ ಷರೀಫ್ ಮತ್ತು ರೋಷನ್ ಬೇಗ್ ಅವರಂಥ ನಾಯಕರು ಕಣ್ಣಿಗೆ ಕಾಣಿಸದೇ ಇರುವುದು ಓವೈಸಿಯವರ ಕರ್ನಾಟಕ ‘ಅರಂಗೇಟ್ರಂ’ಗೆ ಅನುಕೂಲಕರವಾಗಿ ಕಾಣುತ್ತಿದೆ.‌

ಅದರಲ್ಲೂ ದಾವಣಗೆರೆಯ ಧಣಿ ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ತೆರವಾಗಿ ರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಕುಟುಂಬದವರಿಗೇ ಪಕ್ಷದ ಟಿಕೆಟ್ ಸಿಗಬೇಕು ಎಂದು ಶಾಮನೂರು ಫ್ಯಾಮಿಲಿ ಪಟ್ಟು ಹಿಡಿದಿರುವುದರಿಂದ ಕ್ಷೇತ್ರದ ‘ನಂಬರ್-1’ ಶಕ್ತಿ ಅನ್ನಿಸಿಕೊಂಡ ಮುಸ್ಲಿಮರು ಅಸಹನೆಯಿಂದ ಕುದಿಯುತ್ತಿದ್ದಾರೆ.

ಪರಿಣಾಮ? ತಮಗೆ ಟಿಕೆಟ್ ಸಿಗದೆ ಹೋದರೆ ಕಾಂಗ್ರೆಸ್ ವಿರುದ್ಧವೇ ಸ್ಪರ್ಧಿಸಲು ಕಸರತ್ತು ನಡೆಸು ತ್ತಿದ್ದಾರೆ. ಇವತ್ತು ಓವೈಸಿ ಕರ್ನಾಟಕದ ಕಡೆ ಕಣ್ಣು ಹಾಕಲು ಈ ಅಂಶ ಬಹುಮುಖ್ಯ ಕಾರಣ. ಪರಿಣಾಮ? ಕೆಲ ದಿನಗಳ ಹಿಂದೆ ದಾವಣಗೆರೆಯಲ್ಲಿ ಓವೈಸಿ ಅಭಿಮಾನಿಗಳ ಪಡೆ ಒಂದು ಸಭೆ ನಡೆಸಿ ನಿರ್ಣಾಯಕ ಆಟಕ್ಕಿಳಿಯಲು ತೀರ್ಮಾನಿಸಿದೆ.

ಧಣಿಯ ಮನೆಯ ಲೆಕ್ಕಾಚಾರ

ಅಂದ ಹಾಗೆ, ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ಅವರ ಕುಟುಂಬದಲ್ಲಿ ಹಲವು ಬಗೆಯ ಲೆಕ್ಕಾಚಾರಗಳು ಅರಂಭವಾಗಿವೆ. ಅದರ ಪ್ರಕಾರ, ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದವರು ತಮ್ಮ ಕುಟುಂಬದವರಾದ್ದರಿಂದ ಈಗ ಎದುರಾಗಲಿರುವ ಉಪಚುನಾವಣೆಯಲ್ಲಿ ತಮ್ಮ ಕುಟುಂಬದವರೇ ಸ್ಪರ್ಧಿಸಬೇಕು ಎಂಬುದು ಒಟ್ಟಾರೆ ತೀರ್ಮಾನ. ಹೀಗಾಗಿ ಕಣಕ್ಕೆ ಶಾಮನೂರು ಶಿವಶಂಕರಪ್ಪನವರ ಎರಡನೇ ಪುತ್ರ ಗಣೇಶ್ ಇಳಿಯಬೇಕೋ? ಅಥವಾ ಸಚಿವ ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ಇಳಿಯಬೇಕೋ? ಎಂಬ ಚರ್ಚೆ ಶುರುವಾಗಿದೆ.

ಈ ಪೈಕಿ ಗಣೇಶ್ ಅವರು ಇದುವರೆಗೆ ರಾಜಕಾರಣದ ಪಡಸಾಲೆಯಲ್ಲಿ ಹೆಚ್ಚಾಗಿ ಕಂಡವರಲ್ಲ. ಇದೇ ರೀತಿ ಸಮರ್ಥ್ ಅವರು ವಯಸ್ಸಿನಲ್ಲಿ ಕಿರಿಯರು ಎಂಬ ಮಾತುಗಳು ಕೇಳಿ ಬರುತ್ತಿವೆಯಾದರೂ ರಾಜಕಾರಣದಲ್ಲಿ ಅಂಥ ಮಾತುಗಳಿಗೆ ಶಕ್ತಿ ಕಡಿಮೆ. ಎಲ್ಲಕ್ಕಿಂತ ಮುಖ್ಯವಾಗಿ ಶಾಮನೂರು ಸಾಮ್ರಾಜ್ಯದ ಶಕ್ತಿ ಉಳಿಯಬೇಕಿರುವುದರಿಂದ ಕುಟುಂಬದ ಈ ಇಬ್ಬರ ಪೈಕಿ ಒಬ್ಬರನ್ನು ಕಣಕ್ಕಿಳಿಸ ಬೇಕು ಅಂತ ಕುಟುಂಬ ಬಯಸಿದೆ.

ಮುಸ್ಲಿಮರ ಯೋಚನೆ ಏನು?

ಹೀಗೆ ಶಾಮನೂರು ಕುಟುಂಬದ ಲೆಕ್ಕಾಚಾರ ಒಂದು ಬಗೆಯಲ್ಲಿದ್ದರೆ ಮತ್ತೊಂದು ಕಡೆ ಮುಸ್ಲಿಮ್ ಮತ ಬ್ಯಾಂಕಿನ ಲೆಕ್ಕಾಚಾರ ಬೇರೆಯೇ ಇದೆ. ಅಂದ ಹಾಗೆ, ಕ್ಷೇತ್ರದಲ್ಲಿರುವ 2.30 ಲಕ್ಷ ಮತದಾರರ ಪೈಕಿ ಎಂಬತ್ತು ಸಾವಿರದಷ್ಟು ಮುಸ್ಲಿಂ ಮತದಾರರಿದ್ದು, ಸಂಖ್ಯೆಯ ದೃಷ್ಟಿಯಿಂದ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಇಂಥ ಕಾರಣಕ್ಕಾಗಿಯೇ ಹಿಂದೆ ಸೈಯ್ಯದ್ ಸೈಪು ಅವರಿಗೆ ಪಕ್ಷದ ‘ಬಿ ಫಾರಂ’ ನೀಡಲಾಗಿತ್ತಾದರೂ ಕೊನೇ ಗಳಿಗೆಯಲ್ಲಿ ಅವರ ಬದಲಿಗೆ ಶಾಮನೂರು ಶಿವಶಂಕರಪ್ಪನವರಿಗೆ ಟಿಕೆಟ್ ನೀಡಲಾಗಿತ್ತು.

ಅದರೆ ಇದಾಗಿ ಸಾಕಷ್ಟು ಕಾಲ ಕಳೆದಿದ್ದು ಈಗ ಮುಸ್ಲಿಮರೊಬ್ಬರಿಗೆ ಟಿಕೆಟ್ ನೀಡಬೇಕು ಎಂಬುದು ಈ ಮತಬ್ಯಾಂಕಿನ ಪಟ್ಟು. ಹೀಗಾಗಿ ಖಾಲಿದ್, ಅಬ್ದುಲ್ ಜಬ್ಬಾರ್ ಮತ್ತು ಮೆಹಬೂಬ್ ಪಾಷಾ ಅವರ ಹೆಸರುಗಳು ಫ್ರಂಟ್‌ಲೈನಿಗೆ ಬಂದಿದ್ದು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಗಮನ ಸೆಳೆಯುತ್ತಿವೆ.

ಅದರೆ ಹೀಗೆ ಶಾಮನೂರು ಕುಟುಂಬದ ಲೆಕ್ಕಾಚಾರ ಮತ್ತು ಮುಸ್ಲಿಂ ಮತಬ್ಯಾಂಕಿನ ಲೆಕ್ಕಾಚಾರ ಗಳು ಪರಸ್ಪರ ಘಟ್ಟಿಸುತ್ತಿರುವುದರಿಂದ ಮುಂದೇನು? ಎಂಬ ಪ್ರಶ್ನೆ ಶುರುವಾಗಿದೆ.

ಫೀಲ್ಡಿಗಿಳಿದರು ಸುನೀಲ್, ಬೆಲ್ಲದ್

ಈ ಮಧ್ಯೆ, ರಾಜ್ಯ ಬಿಜೆಪಿಯಲ್ಲಿ ಆಟ ಬದಲಾಗಿರುವ ಲಕ್ಷಣಗಳು ಕಾಣುತ್ತಿವೆ. ಇದಕ್ಕೆ ವಿಧಾನಸಭೆ‌ ಯ ಬೆಳವಣಿಗೆಗಳೇ ಸಾಕ್ಷಿ. ಅಂದ ಹಾಗೆ, ವಿಧಾನಸಭೆ ಕಲಾಪದಲ್ಲಿ ಸರಕಾರದ ವಿರುದ್ದ ಮುಗಿ ಬೀಳುವ ಅವಕಾಶ ಸಿಕ್ಕಿದರೆ ಪ್ರತಿಪಕ್ಷ ನಾಯಕರು ಅದನ್ನು ಬಳಸಿಕೊಳ್ಳಬೇಕು. ಅದರೆ ಅವರು ಅವಕಾಶವನ್ನು ಬಳಸಿಕೊಳ್ಳುವುದಕ್ಕಿಂತ ಬೇಗ ಮಾಜಿ ಸಚಿವ ಸುನೀಲ್ ಕುಮಾರ್ ಮತ್ತು ಅರವಿಂದ್ ಬೆಲ್ಲದ್ ಬಳಸಿಕೊಳ್ಳುತ್ತಿದ್ದಾರೆ. ಅರ್ಥಾತ್, ಸರಕಾರದ ವಿರುದ್ಧ ನಾಯಕರಿಗಿಂತ ಹೆಚ್ಚಾಗಿ ಇವರೇ ಅಬ್ಬರಿಸುತ್ತಿದ್ದಾರೆ.

ಕುತೂಹಲದ ಸಂಗತಿ ಎಂದರೆ ಸುನೀಲ್ ಕುಮಾರ್ ಮತ್ತು ಬೆಲ್ಲದ್ ಹೀಗೆ ಮಾಡುವುದಕ್ಕೂ ಕೆಲ ದಿನಗಳ ಹಿಂದೆ ಪಕ್ಷದ ಕೆಲ ಶಾಸಕರು ಹಿರಿಯ ನಾಯಕ ರಾಮ್ ಮಾಧವ್ ಅವರನ್ನು ಭೇಟಿ ಮಾಡಿ ದ್ದಾರೆ.

‘ಗ್ರೇಟರ್ ಬೆಂಗಳೂರು ಅಥಾರಿಟಿ’ (ಜಿಬಿಎ) ಚುನಾವಣೆಯ ಉಸ್ತುವಾರಿಯಾಗಿ ನೇಮಕಗೊಂಡ ರಾಮ್ ಮಾಧವ್ ಅವರು ನೇರವಾಗಿ ಸಂಘಪರಿವಾರದ ನಾಯಕ. ಇಂಥ ರಾಮ್ ಮಾಧವ್ ಅವರನ್ನು ಭೇಟಿ ಮಾಡಿದ ಈ ಶಾಸಕರು ತಮ್ಮ ಪಕ್ಷದ ನಾಯಕರ ಬಗ್ಗೆ ಕಂಪ್ಲೇಂಟು ಪಟ್ಟಿ ಸಲ್ಲಿಸಿದ್ದಾರೆ.

“ನಾವು ಸರಕಾರದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬಹುದು. ಆದರೆ ಸಿಎಂ-ಡಿಸಿಎಂ ವಿರುದ್ಧ ಮುಗಿಬೀಳಲಾಗದೆ ನಮ್ಮ ನಾಯಕರು ಅವಕಾಶ ಕೈಚೆಲ್ಲುತ್ತಿದ್ದಾರೆ" ಎಂದವರು ಹೇಳಿ ದಾಗ ರಾಮ್ ಮಾಧವ್ ಕನಲಿದರಂತೆ. ಅಷ್ಟೇ ಅಲ್ಲ, “ರೀ, ಹಾಗೇನಾದರೂ ಅಗುತ್ತಿದೆ ಎಂದರೆ ಉಳಿದವರೇಕೆ ಸುಮ್ಮನಿರುತ್ತೀರಿ? ನೀವು ಹೋರಾಟಕ್ಕಿಳಿಯಿರಿ. ಇದು ಒಬ್ಬಿಬ್ಬರಿಗಾಗಿ ಕಾಯುತ್ತಾ ಕೂರುವ ಸಮಯವಲ್ಲ. ಗೋ ಅಹೆಡ್" ಅಂತ ಗ್ರೀನ್ ಸಿಗ್ನಲ್ಲು ಕೊಟ್ಟಿದ್ದಾರೆ.

ಹೀಗೆ ರಾಮ್ ಮಾಧವ್ ಗ್ರೀನ್ ಸಿಗ್ನಲ್ಲು ಕೊಟ್ಟ ಬೆನ್ನಲ್ಲಿಯೇ ರಾಜ್ಯ ಬಿಜೆಪಿಯ ಚಹರೆ ಪಟ್ಟಿ ಬದಲಾಗಿದೆ. ಮಾಜಿ ಸಚಿವ ಸುನೀಲ್ ಕುಮಾರ್, ಅರವಿಂದ ಬೆಲ್ಲಡ್ ಅವರೆಲ್ಲ ಇದ್ದಕ್ಕಿದ್ದಂತೆ ಫೀಲ್ಡಿಗಿಳಿದಿದ್ದಾರೆ. ಈ ಮಧ್ಯೆ ಸೀನಿಯರ್ ಟೈಗರ್ ಎಸ್.ಸುರೇಶ್ ಕುಮಾರ್ ಕೂಡಾ ಅದ್ಭುತ ಲಯಕ್ಕೆ ಮರಳಿದ್ದು ಇದರ ಪರಿಣಾಮವಾಗಿ ಸದನದಲ್ಲಿ ಬಿಜೆಪಿಯ ಖದರ್ ಹೆಚ್ಚಾಗಿದೆ.

ಬಿಜೆಪಿ ಮೂಲಗಳ ಪ್ರಕಾರ, ಪಕ್ಷದಲ್ಲಿ ಇತ್ತೀಚೆಗೆ ಪದೇ ಪದೆ ಕಾಣುತ್ತಿದ್ದ ಶಾಸಕರ ಅಸಮಾಧಾನ ಗಳಿಗೆ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಸರಿಯಾಗಿ ಮದ್ದು ಅರೆಯುತ್ತಿಲ್ಲ. ಆದ್ದರಿಂದ ಹಲವರು ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಈ ಬಗ್ಗೆ ದೂರು ಸಲ್ಲಿಸಿದ್ದರು.

ಹೀಗಾಗಿ ಇಂಥ ಕಂಪ್ಲೇಂಟುಗಳನ್ನು ಕೇಳಿ ಕೇಳಿ ಸುಸ್ತಾದ ಅಮಿತ್ ಶಾ ಅವರು ಗ್ರೇಟರ್ ಬೆಂಗಳೂರು ಅಥಾರಿಟಿ ಚುನಾವಣೆಯ ಹೆಸರಿನಲ್ಲಿ ರಾಮ್ ಮಾಧವ್ ಅವರನ್ನು ಕರ್ನಾಟಕಕ್ಕೆ ಕಳಿಸಲು ವ್ಯವಸ್ಥೆ ಮಾಡಿದ್ದಾರೆ. ಪರಿಣಾಮ? ರಾಜ್ಯ ಬಿಜೆಪಿಯಲ್ಲಿ ಸಾಮೂಹಿಕ ನಾಯಕತ್ವದ ಆಟ ಶುರುವಾಗಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಎಫೆಕ್ಟಿವ್ ಆಗಲಿದೆ.

ಲಾಸ್ಟ್ ಸಿಪ್

ಇನ್ನು ಕರ್ನಾಟಕದ ವಿಷಯದಲ್ಲಿ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ತುಂಬ ಆಕ್ಟಿವ್ ಅಗಿzರೆ. ಹೀಗೆ ಅವರು ಆಕ್ಟಿವ್ ಅಗಲು ಸಂಘ ಪರಿವಾರದ ಸಿಗ್ನಲ್ಲು ಕಾರಣವಾದರೂ, ಕರ್ನಾಟಕದ ವಿಷಯದಲ್ಲಿ ಸಂತೋಷ್ ಅವರನ್ನು ಹೆಚ್ಚು ಹೆಚ್ಚಾಗಿ ಬಳಸಿಕೊಳ್ಳಲು ಸಂಘ ಪರಿವಾರ ಉತ್ಸುಕವಾಗಿದೆ ಎಂಬುದೂ ಅಷ್ಟೇ ನಿಜ.‌

ಹೀಗಾಗಿ ಪರಿವಾರದ ಸಿಗ್ನಲ್ಲಿನ ಮೇಲೆ ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕಾಗಿ ಮಂಡ್ಯ, ತುಮಕೂರು, ದಾವಣಗೆರೆ ಸೇರಿದಂತೆ ಒಂದೇ ವಾರದಲ್ಲಿ ಹಲವು ಜಿಲ್ಲೆಗಳಿಗೆ ಭೇಟಿ ನೀಡಿರುವ ಸಂತೋಷ್ ಮುಂದಿನ ದಿನಗಳಲ್ಲಿ ಮತ್ತಷ್ಟು ಆಕ್ಟಿವ್ ಆಗುವುದು ಗ್ಯಾರಂಟಿ. ಹೀಗೆ ಸಂತೋಷ್ ಅವರನ್ನು ಹೆಚ್ಚೆಚ್ಚಾಗಿ ಕರ್ನಾಟಕದಲ್ಲಿ ಆಕ್ಟಿವ್ ಮಾಡುವ ಮೂಲಕ ರಾಜ್ಯದ ಮೂಲೆ ಮೂಲೆಯಲ್ಲಿರುವ ಪರಿವಾರದ ಕಾರ್ಯಕರ್ತರಿಗೆ ಬಲ ತುಂಬುವುದು ಸಂಘದ ನಾಯಕರ ಲೆಕ್ಕಾಚಾರ.

ಆರ್‌.ಟಿ. ವಿಠ್ಠಲಮೂರ್ತಿ‌

View all posts by this author