ಯುವಶಕ್ತಿ
ಸುರೇಂದ್ರ ಪೈ, ಭಟ್ಕಳ
ಪ್ರಶಸ್ತಿ-ಪುರಸ್ಕಾರ ಯಾವುದೇ ಇರಲಿ, ಅವು ಅರ್ಹರಿಗೆ ದೊರೆತಾಗ ಮಾತ್ರವೇ ಅವಕ್ಕೂ, ಅವನ್ನು ನೀಡಿದವರಿಗೂ ಒಂದು ತೂಕ ಸಿಗುತ್ತದೆ ಹಾಗೂ ಜನಮನ್ನಣೆ, ವಿಶ್ವಾಸವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂಬುದಕ್ಕೆ ಪದ್ಮ ಪ್ರಶಸ್ತಿಗಳ ಆಯ್ಕೆಯೇ ಒಂದು ಸಾಕ್ಷಿಯಾಗಿದೆ. ಈ ಪ್ರಶಸ್ತಿಗಳ ಆಯ್ಕೆಯ ವಿಷಯದಲ್ಲಿ ಕೇಂದ್ರ ಸರಕಾರವು ಅನುಸರಿಸು ತ್ತಿರುವ ಪಾರದರ್ಶಕ ನಡೆಯು, ಸಾಧಕರಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತಿದೆ.
ಇದು ‘ಜೆನ್-ಝಿ’, ‘ಜೆನ್-ಆಲಾ’ ಯುಗ. ತಂತ್ರಜ್ಞಾನದ ಜತೆಯಲ್ಲೇ ಬೆಳೆದ/ ಬೆಳೆಯುತ್ತಿರುವ ಮಕ್ಕಳು ಮತ್ತು ಯುವಜನರ ಯುಗ. ಇಂದು ಗಾಳಿ, ನೀರು, ಅನ್ನ, ವಸತಿಯಂತೆ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (ಎಐ) ಕೂಡ ಜೀವನದ ಅವಶ್ಯಕತೆ ಎನಿಸಿಬಿಟ್ಟಿವೆ. ಇಂಥ ಸಮಯದಲ್ಲಿ, ದೇಶದ ಅಭಿವೃದ್ಧಿಗೆ ಉಪಯೋಗವಾಗುವಂತೆ ‘ಜೆನ್-ಝಿ’ ಪೀಳಿಗೆಯನ್ನು ರೂಪಿಸಬೇಕಾದ ಜವಾಬ್ದಾರಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮೇಲಿದೆ.
‘ಜೆನ್-ಝಿ’ ಪೀಳಿಗೆಯವರ ಕೋಪಕ್ಕೆ ತುತ್ತಾಗಿ ಈಗಾಗಲೇ ಕೆಲ ದೇಶಗಳಲ್ಲಿ ಆಳುಗ ವ್ಯವಸ್ಥೆಗಳು ಅಲ್ಲಾಡಿ ಹೋಗಿರುವುದು, ಅರಾಜಕತೆ ಸೃಷ್ಟಿಯಾಗಿರುವುದು ನಮಗೆಲ್ಲಾ ಗೊತ್ತೇ ಇದೆ. ಚುನಾವಣೆ ಗಳ ವೇಳೆ ಪೊಳ್ಳು ಆಶ್ವಾಸನೆಗಳನ್ನು ನೀಡಿ ಜನರಿಂದ ಮತಗಳನ್ನು ಗಿಟ್ಟಿಸಿಕೊಂಡಂತೆ ಈ ಪೀಳಿಗೆ ಯವರನ್ನು ಯಾಮಾರಿಸಲು ಸಾಧ್ಯವಿಲ್ಲ.
ಪ್ರಶಸ್ತಿ-ಪುರಸ್ಕಾರ ಎಂದಾಕ್ಷಣ ನಮ್ಮಲ್ಲಿ ಬಹುತೇಕರಿಗೆ ತಿರಸ್ಕಾರದ ಭಾವ ಹೊಮ್ಮುತ್ತಿದ್ದ ಕಾಲ ವೊಂದಿತ್ತು. ಕಾರಣ, ಪ್ರಶಸ್ತಿಗಳು ಲಭಿಸಿರುವುದರ ಹಿಂದೆ ಆಯಾ ವ್ಯಕ್ತಿಯ ಸಾಧನೆಗಿಂತಲೂ, ಪ್ರಶಸ್ತಿ ಪಡೆಯಲು ಆತ ಬಳಸುವ ತಂತ್ರಗಾರಿಕೆ, ಲಾಬಿಯಂಥ ಚಟುವಟಿಕೆಗಳೇ ಹೆಚ್ಚಿರುತ್ತಿದ್ದವು. ಸ್ಥಳೀಯ ಸಂಘ-ಸಂಸ್ಥೆಗಳು ನೀಡುವ ಪ್ರಶಸ್ತಿಗಳಿಂದ ಮೊದಲ್ಗೊಂಡು, ಕಲೆ, ಸಾಹಿತ್ಯ, ಚಿತ್ರರಂಗ, ರಾಜ್ಯೋತ್ಸವ ಹೀಗೆ ಹಲವು ಕ್ಷೇತ್ರಗಳಲ್ಲಿ/ಸಂದರ್ಭಗಳಲ್ಲಿ ಇದು ಗ್ರಹಿಕೆಗೆ ದಕ್ಕುತ್ತಿತ್ತು. ಆದರೆ ಕಳೆದ 10 ವರ್ಷಗಳಿಂದ ಕೇಂದ್ರ ಸರಕಾರವು ‘ಪದ್ಮ ಪ್ರಶಸ್ತಿ’ಗಳಿಗಾಗಿ ಮಾಡುತ್ತಿರುವ ಆಯ್ಕೆಯ ಪರಿ ಮಾತ್ರ ‘ಜೆನ್-ಝಿ’ ಪೀಳಿಗೆಯವರನ್ನು ಇನ್ನಿಲ್ಲದಂತೆ ಪ್ರೇರೇಪಿಸುತ್ತಿರುವುದು ವಿಶೇಷ.
ಸೂಲಗಿತ್ತಿ ನರಸಮ್ಮ, ಡಾ. ವಿಜಯಲಕ್ಷ್ಮಿ ದೇಶಮಾನೆ, ಸಾಲುಮರದ ತಿಮ್ಮಕ್ಕ, ಇಬ್ರಾಹಿಂ ಸುತಾರ್, ಸುಕ್ರಿ ಬೊಮ್ಮಗೌಡ, ಹರೇಕಳ ಹಾಜಬ್ಬ ಹೀಗೆ ಥಳುಕು-ಬಳುಕಿನ ದುನಿಯಾದಿಂದ ದೂರವಿದ್ದವರು ಪದ್ಮ ಪ್ರಶಸ್ತಿಗಳ ಘೋಷಣೆಯ ಬಳಿಕ ದೇಶದೆಲ್ಲೆಡೆ ಖ್ಯಾತರಾಗುವಂತಾಯಿತು ಮತ್ತು ಆಯಾ ಪ್ರಶಸ್ತಿಗಳ ಮೌಲ್ಯವೂ ಮತ್ತಷ್ಟು ಹೆಚ್ಚಿತು ಎಂದರೆ ಅತಿಶಯೋಕ್ತಿಯಲ್ಲ.
ಇದನ್ನೂ ಓದಿ: Surendra Pai Column: 8450 ಪ್ರಶ್ನೆಕೋಶದ ಒಳಗುಟ್ಟು ಅರಿತವರಾರು ?
ಕೇಂದ್ರ ಸರಕಾರದ ಇಂಥ ಪ್ರೇರಣಾದಾಯಕ ನಡೆಯಿಂದಾಗಿ ‘ಜೆನ್-ಝಿ’ ಪೀಳಿಗೆಯವರಲ್ಲಿ ನವ ಚೈತನ್ಯ ಹುಟ್ಟಿಕೊಂಡಿತು. ‘ಇವರಂತೆ ನಾವೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜಕ್ಕಾಗಿ ಮತ್ತು ದೇಶಕ್ಕಾಗಿ ದುಡಿಯಬೇಕು’ ಎಂಬ ಮನೋಭಾವನೆ ಅವರಲ್ಲಿ ಮೂಡಿತು.
ನೋಡನೋಡುತ್ತಿದ್ದಂತೆಯೇ ‘ಜೆನ್-ಝಿ’ ಯುವಜನರು ಕೇಂದ್ರ ಸರಕಾರದ ಪ್ರೋತ್ಸಾಹದೊಂದಿಗೆ ತಂತಮ್ಮ ಕ್ಷೇತ್ರಗಳಲ್ಲಿ ‘ಸ್ಟಾರ್ಟ್-ಅಪ್’ಗಳನ್ನು ಆರಂಭಿಸಿ, ಔದ್ಯೋಗಿಕ ಕ್ರಾಂತಿಗೆ ಮತ್ತಷ್ಟು ಇಂಬು ನೀಡಿದರು.
2026ರ ಪದ್ಮ ಪ್ರಶಸ್ತಿಗಳು ಪ್ರಕಟಗೊಂಡ ನಂತರವಂತೂ ‘ಜೆನ್-ಝಿ’ ಪೀಳಿಗೆಯವರು ನಮ್ಮ ರಾಜ್ಯದ ಮತ್ತು ದೇಶದ ‘ಅನ್‌ಸಂಗ್ ಹೀರೋ’ಗಳ ಸಾಧನೆಯಿಂದ ಪ್ರೇರಿತರಾಗಿ, ಇನ್ʼಸ್ಟಾಗ್ರಾಂ, ಫೇಸ್‌ಬುಕ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಸಾಧನೆಯ ಕುರಿತಾದ ಚಿತ್ರ-ಬರಹ ಅಥವಾ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಶುಭಾಶಯಗಳನ್ನು ಹೇಳಿದರು, ಕೇಂದ್ರ ಸರಕಾರದ ಆಯ್ಕೆಯ ಪರಿಯನ್ನು ಒಕ್ಕೊರಲಿನಿಂದ ಶ್ಲಾಘಿಸಿದರು.
ನಮ್ಮಲ್ಲಿ ಸಾಮಾನ್ಯವಾಗಿ ಪ್ರಶಸ್ತಿಗಳ ಪಟ್ಟಿ ಘೋಷಣೆಯಾಗುವುದಕ್ಕೆ ಮುನ್ನವೇ ಸಾಕಷ್ಟು ಊಹಾ ಪೋಹಗಳು, ಮಾಧ್ಯಮ ಚರ್ಚೆಗಳು ಹುಟ್ಟಿಕೊಳ್ಳುತ್ತವೆ. ಆದರೆ ಪದ್ಮ ಪ್ರಶಸ್ತಿಗಳ ವಿಚಾರದಲ್ಲಿ ಮಾತ್ರ ಕಳೆದ ಹತ್ತು ವರ್ಷಗಳಲ್ಲಿ ಕಾಣಬಂದಿರುವ ಪಾರದರ್ಶಕತೆಯಿಂದಾಗಿ ಪ್ರಜೆಗಳಲ್ಲಿ ನಂಬಿಕೆಯೊಂದು ಜೀವಂತವಾಗಿದೆ.
ಅರ್ಹ ಸಾಧಕರಿಗೆ ಪದ್ಮ ಪ್ರಶಸ್ತಿ ಲಭಿಸಿದಾಗ, ಅದು ತಮಗೇ ಲಭಿಸಿದಂತೆ ಅಥವಾ ಪುರಸ್ಕೃತರು ತಮ್ಮವರೇ ಎಂಬಂತೆ ‘ಜೆನ್-ಝಿ’ ಪೀಳಿಗೆಯವರು ಸಂತಸವನ್ನು ವ್ಯಕ್ತಪಡಿಸುತ್ತಿರುವುದನ್ನು ಗಮನಿಸಬಹುದು. ಈ ಬೆಳವಣಿಗೆಯು ಪ್ರಶಸ್ತಿಯ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿತು.
ಕರ್ನಾಟಕದ ಅಂಕೆಗೌಡರು (ಸಮಾಜಸೇವೆ), ಶಶಿಶೇಖರ ವೆಂಪತಿ (ಶಿಕ್ಷಣ), ಶುಭಾ ವೆಂಕಟೇಶ ಅಯ್ಯಂಗಾರ್ (ವಿಜ್ಞಾನ), ಟಿ.ಟಿ.ಜಗನ್ನಾಥನ್ (ಉದ್ಯಮ) ಸೇರಿದಂತೆ, ಈ ಬಾರಿಯ 131 ಪದ್ಮ ಪ್ರಶಸ್ತಿ ಪುರಸ್ಕೃತರಲ್ಲಿ 54 ಸಾಧಕರು ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಯ ಕಾಯಿಯಂತೆ ಇದ್ದವರು. ಇವರೆಲ್ಲರೂ ‘ಜೆನ್-ಝಿ’ ಪೀಳಿಗೆಯವರ ಗಮನವನ್ನು ಸೆಳೆದಿದ್ದಾರೆ.
ಈ ಪ್ರಶಸ್ತಿ ಘೋಷಣೆಗೂ ಮುಂಚೆ ಇವರಾರು ಎಂಬುದೇ ಹೆಚ್ಚಿನ ದೇಶವಾಸಿಗಳಿಗೆ ಗೊತ್ತಿರಲಿಲ್ಲ. ಇಂಥ ಒಬ್ಬೊಬ್ಬ ಸಾಧಕರ ನೇಪಥ್ಯದಲ್ಲಿ ಅದೆಷ್ಟೋ ಪ್ರೇರಣಾದಾಯಕ ಕಥೆಗಳಿವೆ, ಅವೆಲ್ಲವೂ ಯುವಪೀಳಿಗೆಯಲ್ಲಿ ಸ್ಪೂರ್ತಿಯನ್ನು ತುಂಬುತ್ತಿವೆ ಎಂಬುದು ಗಮನಾರ್ಹ.
ಈ 54 ಮಂದಿ ಸಾಧಕರ ವಿಶೇಷತೆ ಏನೆಂದರೆ, ‘ಈ ಪ್ರಶಸ್ತಿಯು ನಮ್ಮ ಕೆಲಸಕ್ಕೆ ದೊರೆತ ಮನ್ನಣೆ’ ಎಂಬ ಮಾತು ಅವರಿಂದ ಹೊಮ್ಮಿರುವುದು. ಪ್ರಶಸ್ತಿ ಬರುವ ಮೊದಲು ಅವರ ಕೆಲಸ ಹೇಗೆ ನಡೆಯುತ್ತಿತ್ತೋ, ಬಂದ ನಂತರವೂ ಹಾಗೆಯೇ ನಡೆಯಲಿದೆ; ಇವರೆಲ್ಲರೂ ‘ಪ್ರಶಸ್ತಿ ಬಂತು’ ಎಂದು ಊರು ತುಂಬೆಲ್ಲಾ ಹೇಳಿಕೊಂಡು ತಿರುಗಾಡಿಲ್ಲ, ಊರಿನ ಬೀದಿಬೀದಿಗಳಲ್ಲಿ ದೊಡ್ಡ ಫ್ಲೆಕ್ಸ್ ಹಾಕಿ ಮೆರೆಯಲಿಲ್ಲ. ಬದಲಿಗೆ ತಮ್ಮ ಸಾಧನೆಯಿಂದ ‘ಜೆನ್-ಝಿ’ ಪೀಳಿಗೆಯವರಿಗೆ ಪ್ರೇರಣೆಯಾದರು.
ಮತ್ತೊಂದು ವಿಶೇಷವೆಂದರೆ, ಸದರಿ ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಂದ ಸ್ವೀಕರಿಸುವ ಸಮಯದಲ್ಲಿ ಈ ಸಾಧಕರು ತೋರಿದ ವಿನಯ, ಮುಗ್ಧತೆ, ನಡೆದುಕೊಂಡ ರೀತಿಯು ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿದೆ. ಸಾಲುಮರದ ತಿಮ್ಮಕ್ಕ ಅವರು ಪ್ರಶಸ್ತಿ ಸ್ವೀಕಾರದ ನಂತರ ತಮ್ಮ ಸಹಜ ಮುಗ್ಧತೆಯೊಂದಿಗೆ ರಾಷ್ಟ್ರಪತಿಗಳಿಗೆ ಆಶೀರ್ವಾದ ಮಾಡಿದ್ದೇ ಇದಕ್ಕೆ ಸಾಕ್ಷಿ!
ಪ್ರಶಸ್ತಿ-ಪುರಸ್ಕಾರ ಯಾವುದೇ ಇರಲಿ, ಅವು ಅರ್ಹರಿಗೆ ದೊರೆತಾಗ ಮಾತ್ರವೇ ಅವಕ್ಕೂ, ಅವನ್ನು ನೀಡಿದವರಿಗೂ ಒಂದು ತೂಕ ಸಿಗುತ್ತದೆ ಹಾಗೂ ಜನಮನ್ನಣೆ, ವಿಶ್ವಾಸವನ್ನು ಅವು ಪಡೆದು ಕೊಳ್ಳಲು ಸಾಧ್ಯವಾಗುತ್ತದೆ ಎಂಬುದಕ್ಕೆ ಪದ್ಮ ಪ್ರಶಸ್ತಿಗಳ ಆಯ್ಕೆಯೇ ಒಂದು ಸಾಕ್ಷಿಯಾಗಿದೆ. ಸಮಾಜದ ಕೆಲವೊಂದು ವಲಯಗಳಿಂದ ಕೆಲವಷ್ಟು ಪ್ರಭಾವಿಗಳು ಪ್ರಶಸ್ತಿಗಳನ್ನು ಸ್ವೀಕರಿಸಿದಾಗ, ‘ಇದರ ಹಿಂದೆ ಏನೋ ಲಾಬಿ ಕೆಲಸ ಮಾಡಿದೆ’ ಎಂಬ ಅನುಮಾನದ ಕಂಗಳಿಂದಲೇ ಜನರು ನೋಡುವಂತಾಗಿರುವ ಇಂದಿನ ಸಂದರ್ಭದಲ್ಲಿ, ಪದ್ಮ ಪ್ರಶಸ್ತಿಗಳ ಆಯ್ಕೆಯ ವಿಷಯದಲ್ಲಿ ಕೇಂದ್ರ ಸರಕಾರವು ಅನುಸರಿಸುತ್ತಿರುವ ಪಾರದರ್ಶಕ ನಡೆಯು, ಸಾಧಕರಲ್ಲಿ ಆತ್ಮವಿಶ್ವಾಸವನ್ನು ತುಂಬು ತ್ತಿದೆ ಹಾಗೂ ‘ಸಮಾಜಕ್ಕಾಗಿ ನಿಸ್ವಾರ್ಥತೆಯಿಂದ ದುಡಿಯಬೇಕು’ ಎಂಬ ತುಡಿತವನ್ನು ಯುವ ಪೀಳಿಗೆಯಲ್ಲಿ ಬಿತ್ತುತ್ತಿದೆ. ಇದು ನಿಜಕ್ಕೂ ನೆಮ್ಮದಿಯ ಮತ್ತು ಸಂತಸದ ಸಂಗತಿ, ಆಹ್ಲಾದಕರ ಬೆಳವಣಿಗೆ...
(ಲೇಖಕರು ಶಿಕ್ಷಕರು)