ಅಮೃತಕಾಲ
ಲೀನಾ ಜೋಶಿ
ಸೆಪ್ಟೆಂಬರ್ 11, 1948ರ ಮಧ್ಯಾಹ್ನದ ಕರಾಚಿ, ಹೊಸದಾಗಿ ಹುಟ್ಟಿದ ‘ಪಾಕಿಸ್ತಾನ’ ಎಂಬ ದೇಶದ ಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ, ಮರಣದೊಂದಿಗೆ ಹೋರಾಡುತ್ತಾ ಒಂದು ಆಂಬ್ಯುಲೆನ್ಸ್‌ನಲ್ಲಿ ಮಲಗಿದ್ದಾನೆ, ಅಸಹನೀಯ ಸೆಖೆ, ಗಾಳಿ ಇಲ್ಲ. ಮುಖದ ಮೇಲೆ ನೊಣಗಳು. ಅವುಗಳನ್ನು ಓಡಿಸುವಷ್ಟು ಶಕ್ತಿಯೂ ಕೈಗಳಲ್ಲಿ ಉಳಿದಿಲ್ಲ. ಆಂಬ್ಯುಲೆನ್ಸ್ ರಸ್ತೆಯ ಮಧ್ಯ ಕೆಟ್ಟು ನಿಂತಿದೆ, ರಸ್ತೆಯ ಅಕ್ಕಪಕ್ಕ ಭಾರತ ಬಿಟ್ಟು ಬಂದ ನಿರಾಶ್ರಿತರ ಗುಡಿಸಲುಗಳು. ರಸ್ತೆಯಲ್ಲಿ ಜನ ಓಡಾಡುತ್ತಿದ್ದಾರೆ, ಜನರಿಗೆ ಗೊತ್ತಿಲ್ಲ, ಹೊಸ ದೇಶ ಮುಸಲ್ಮಾನರಿಗಷ್ಟೇ ಸೀಮಿತವಾಗಬೇಕು ಎಂದು ಪಟ್ಟು ಹಿಡಿದು, ತನ್ನ ಆಸೆ ತೀರಿಸಿಕೊಂಡ, ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡ ಜಿನ್ನಾ ತನ್ನ ಜೀವಕ್ಕಾಗಿ ಹೋರಾಡುತ್ತಿದ್ದಾನೆ ಎಂಬುದು.
ಇದು ಯಾವುದೇ ಕಾದಂಬರಿಯ ದೃಶ್ಯವಲ್ಲ, ಫಾತಿಮಾ ಜಿನ್ನಾ ಅವರು ತಮ್ಮ ಅಣ್ಣನ ಕೊನೆಯ ದಿನಗಳ ಕುರಿತು ‘ಮೈ ಬ್ರದರ್’ ಪುಸ್ತಕದಲ್ಲಿ ದಾಖಲಿಸಿರುವ ಸತ್ಯ ಘಟನೆ. 1947ರ ಭಾರತದ ವಿಭಜನೆ ಮಾನವ ಇತಿಹಾಸದ ಅತ್ಯಂತ ದೊಡ್ಡ ವಲಸೆ ದುರಂತಗಳಲ್ಲಿ ಒಂದು. ಲಕ್ಷಾಂತರ ಹಿಂದೂ, ಮುಸ್ಲಿಂ ಮತ್ತು ಸಿಖ್ ಕುಟುಂಬಗಳು ತಮ್ಮ ಮನೆ, ಹೊಲ, ಅಂಗಡಿ, ಆಸ್ತಿ, ಊರು ಮತ್ತು ಶತಮಾನಗಳ ನೆನಪುಗಳನ್ನು ಹಿಂದೆ ಬಿಟ್ಟು ಗಡಿ ದಾಟಬೇಕಾಯಿತು.
ಹಿಂಸಾಚಾರದಲ್ಲಿ ಲಕ್ಷಾಂತರ ಜನರು ಕೊಲೆಯಾದರು. ಕೋಟ್ಯಂತರ ಬದುಕುಗಳು ಬೇರು ಕಳೆದು ಕೊಂಡವು. ಪಾಕಿಸ್ತಾನ ಹುಟ್ಟಿತು, ಆ ದೇಶದ ಹುಟ್ಟಿನ ಕ್ಷಣವೇ ರಕ್ತ, ಕಣ್ಣೀರು ಮತ್ತು ನಿರಾಶ್ರಿತರ ದಂಡು ಗಳಿಂದ ಆವರಿಸಲ್ಪಟ್ಟಿತ್ತು. ಈ ಹೊಸ ದೇಶದ ನಿರ್ಮಾಣಕ್ಕೆ ಪ್ರಮುಖ ರಾಜಕೀಯ ನಾಯಕತ್ವ ನೀಡಿದ್ದ ವ್ಯಕ್ತಿ ಮೊಹಮ್ಮದ್ ಅಲಿ ಜಿನ್ನಾ. ಆದರೆ ವಿಧಿಯ ವ್ಯಂಗ್ಯ- ಹೊಸ ದೇಶ ಹುಟ್ಟಿದ ಒಂದು ವರ್ಷ ದೊಳಗೆ ಅದರ ಸ್ಥಾಪಕನೇ ತೀವ್ರ ಅನಾರೋಗ್ಯದಿಂದ ಬಳಲುತ್ತಾ, ಸಮರ್ಪಕ ವೈದ್ಯಕೀಯ ನೆರವಿನ ಕೊರತೆಯ ನಡುವೆ, ರಸ್ತೆ ಮಧ್ಯದಲ್ಲಿ ತನ್ನ ಕೊನೆಯ ದಿನವನ್ನು ಎದುರಿಸಬೇಕಾಯಿತು.
ಇದನ್ನೂ ಓದಿ: Leena Joshi Column: ಭಾರತದ ಬುದ್ಧಿಜೀವಿಗಳು ದೇಶವಿರೋಧಿಗಳೇ ?
1948ರ ಸೆಪ್ಟೆಂಬರ್ 11ರಂದು ಜಿನ್ನಾರನ್ನು ಕ್ವೆಟ್ಟಾದಿಂದ ಕರಾಚಿಗೆ ವಿಮಾನದಲ್ಲಿ ಕರೆತರ ಲಾಯಿತು. ಆರೋಗ್ಯ ಅತ್ಯಂತ ದುರ್ಬಲವಾಗಿತ್ತು. ಕರಾಚಿಯ ಮೌರಿಪುರ್ ವಿಮಾನ ನಿಲ್ದಾಣ ದಲ್ಲಿ ಸ್ಟ್ರೆಚರ್‌ನಲ್ಲಿ ಇಳಿಸಲಾಯಿತು. ಸರ್ಕಾರಿ ನಿವಾಸಕ್ಕೆ ಕರೆದೊಯ್ಯಲು ಮಿಲಿಟರಿ ಆಂಬ್ಯುಲೆನ್ಸ್ ಸಿದ್ಧವಾಗಿತ್ತು.
ತಂಗಿ ಫಾತಿಮಾ ಮತ್ತು ನರ್ಸ್ ಸಿಸ್ಟರ್ ಡನ್ಹಮ್, ಜಿನ್ನಾರೊಂದಿಗೆ ಆಂಬ್ಯುಲೆನ್ಸ್‌ನಲ್ಲಿದ್ದರು. ವೈದ್ಯರು ಮತ್ತು ಅಧಿಕಾರಿಗಳು ಮತ್ತೊಂದು ಕಾರಿನಲ್ಲಿ ಹಿಂಬಾಲಿಸುತ್ತಿದ್ದರು. ಪ್ರಯಾಣ ಆರಂಭ ವಾಯಿತು, ಕೆಲವೇ ನಿಮಿಷಗಳ ನಂತರ ಆಂಬ್ಯುಲೆ ನಿಂತುಹೋಯಿತು. ಫಾತಿಮಾ ಜಿನ್ನಾ ವಿವರಿಸುತ್ತಾರೆ- ಸುಮಾರು ನಾಲ್ಕು ಮೈಲುಗಳ ನಂತರ ಆಂಬ್ಯುಲೆನ್ಸ್ ಕೆಮ್ಮಿದಂತೆ ಶಬ್ದ ಮಾಡಿ ನಿಂತಿತು, ಚಾಲಕ ಪೆಟ್ರೋಲ್ ಮುಗಿದಿದೆ ಎಂದ. ಸುಮಾರು ಇಪ್ಪತ್ತು ನಿಮಿಷಗಳ ಕಾಲ ಅದನ್ನು ಸರಿಪಡಿಸಲು ಪ್ರಯತ್ನಿಸಿದರೂ ವಾಹನ ಚಲಿಸಲಿಲ್ಲ. ಆ ದಿನ ಕರಾಚಿಯಲ್ಲಿ ಸಾಮಾನ್ಯವಾಗಿ ಬೀಸುವ ಸಮುದ್ರಗಾಳಿಯೂ ಇರಲಿಲ್ಲ ಎಂದು ಫಾತಿಮಾ ಬರೆಯುತ್ತಾರೆ.
ಬಿಸಿ ಅಸಹನೀಯವಾಗಿತ್ತು, ಆಂಬ್ಯುಲೆನ್ಸ್ ಒಳಗೆ ಗಾಳಿ ಕಡಿಮೆ. ಜಿನ್ನಾಗೆ ಉಸಿರಾಟದ ತೊಂದರೆ, ಶ್ವಾಸಕೋಶಗಳೆರಡೂ ಸಂಪೂರ್ಣ ಕೆಟ್ಟು ಹೋಗಿದ್ದವು, ಕ್ಷಯ ರೋಗದ ಜೊತೆಗೆ ಕೊನೆಯ ಹಂತದ ಕ್ಯಾನ್ಸರ್. ಫಾತಿಮಾ ಜಿನ್ನಾ ಮತ್ತು ಸಿಸ್ಟರ್ ಡನ್ಹಮ್ ಸರದಿಯಲ್ಲಿ ಜಿನ್ನಾ ಮುಖಕ್ಕೆ ಗಾಳಿ ಬೀಸುತ್ತಿದ್ದರು. -ತಿಮಾ ಜಿನ್ನಾಳ ಬರಹದಲ್ಲಿ ಈ ದೃಶ್ಯ ಅತ್ಯಂತ ವ್ಯಂಗ್ಯಾತ್ಮಕವಾಗಿ ಮೂಡುತ್ತದೆ: ಹೊಸ ತಾಯ್ನಾಡನ್ನು ಪಡೆದ ನಿರಾಶ್ರಿತರು ತಮ್ಮ ಬದುಕಿನಲ್ಲಿ ನಿರತರಾಗಿದ್ದರು; ಅದೇ ತಾಯ್ನಾಡನ್ನು ನೀಡಿದ ನಾಯಕ ಅವರ ಪಕ್ಕದ ಅಸಹಾಯಕನಾಗಿ ಮಲಗಿದ್ದ. ಮತ್ತೊಂದು ಆಂಬ್ಯುಲೆನ್ಸ್ ಬರಲು ಒಂದು ಗಂಟೆಗೂ ಹೆಚ್ಚು ಸಮಯ ಕಾಯಬೇಕಾಯಿತು ಎಂದು ಫಾತಿಮಾ ಬರೆಯುತ್ತಾರೆ. ಅವರ ಜೀವನದಲ್ಲಿ ಆ ಒಂದು ಗಂಟೆ ಅತ್ಯಂತ ದೀರ್ಘ ಮತ್ತು ನೋವಿನ ಕ್ಷಣವಾಗಿತ್ತು ಎಂದು ಬರೆದಿದ್ದಾರೆ.
ಒಂದು ಗಂಟೆ, ಸಾಮಾನ್ಯ ಮನುಷ್ಯನಿಗೆ ಅದು ಕೇವಲ ಅರವತ್ತು ನಿಮಿಷ. ಆದರೆ ಉಸಿರಾಟಕ್ಕಾಗಿ ಹೋರಾಡುತ್ತಿದ್ದ ಮರಣಶಯ್ಯೆಯಲ್ಲಿದ್ದ ರೋಗಿಗೆ ಅದು ಎಷ್ಟು ದೀರ್ಘವಾಗಿರಬಹುದು? ಕೊನೆಗೂ ಮತ್ತೊಂದು ಆಂಬ್ಯುಲೆ ಬಂತು. ಜಿನ್ನಾರನ್ನು ಸ್ಟ್ರೆಚರ್ ಸಮೇತ ಗವರ್ನರ್ ಜನರಲ್ ನಿವಾಸಕ್ಕೆ ಕರೆದೊಯ್ಯಲಾಯಿತು. ಸುಮಾರು ಎರಡು ಗಂಟೆಗಳ ನಂತರ ಜಿನ್ನಾ ಕಣ್ಣು ತೆರೆದರು, ತಲೆ ನಿಧಾನವಾಗಿ ಬಲಕ್ಕೆ ವಾಲಿತು, ಕಣ್ಣುಗಳು ಮುಚ್ಚಿಕೊಂಡವು.
1948ರ ಸೆಪ್ಟೆಂಬರ್ 11ರಂದು ರಾತ್ರಿ, ಲಕ್ಷಾಂತರ ಜನರನ್ನು ಪರೋಕ್ಷವಾಗಿ ಹತ್ಯೆಗೈದ ಮೊಹಮ್ಮದ್ ಅಲಿ ಜಿನ್ನಾಗೆ ಇಹ ಲೋಕದಿಂದ ಮುಕ್ತಿ ಸಿಕ್ಕಿತು. ಜಿನ್ನಾ ಆರೋಗ್ಯ ಅತ್ಯಂತ ಗಂಭೀರವಾಗಿತ್ತು, ಜೀವ ಉಳಿಯುವ ಸಾಧ್ಯತೆ ಅತಿ ಕಡಿಮೆ ಇತ್ತು. ಆದ್ದರಿಂದ ಆಂಬ್ಯುಲೆನ್ಸ್‌ನ ವಿಳಂಬವೇ ಸಾವಿಗೆ ಏಕೈಕ ಕಾರಣ ಎಂದು ನಿಶ್ಚಿತವಾಗಿ ಹೇಳುವುದು ಅತಿಶಯೋಕ್ತಿ. ಆದರೆ ಆ ದೃಶ್ಯದ ದಾರುಣತೆ ಅದರಿಂದ ಕಡಿಮೆಯಾಗುವುದಿಲ್ಲ.
ಜಿನ್ನಾನ ಕೊನೆಯ ದಿನಗಳನ್ನು ಓದುವಾಗ ನಾವು ಕೇವಲ ಒಬ್ಬ ನಾಯಕನ ಸಾವನ್ನು ನೋಡ ಬಾರದು, ಒಂದು ಹೊಸ ರಾಷ್ಟ್ರದ ಆರಂಭಿಕ ಸ್ಥಿತಿಯನ್ನೂ ನೋಡಬೇಕು. ಹೊಸದಾಗಿ ಹುಟ್ಟಿದ ರಾಷ್ಟ್ರ ತನ್ನ ಸ್ಥಾಪಕನನ್ನೇ ಕೊನೆಯ ಕ್ಷಣದಲ್ಲಿ ಎಷ್ಟು ಕಾಳಜಿಯಿಂದ ನೋಡಿ ಕೊಂಡಿತು ಎಂಬುದು ಇಲ್ಲಿರುವ ವ್ಯಂಗ್ಯ. ದಿನಕ್ಕೆ ಸುಮಾರು 50ಕ್ಕಿಂತ ಹೆಚ್ಚು ಸಿಗರೇಟುಗಳನ್ನು ಸೇದುತ್ತಿದ್ದ ಜಿನ್ನಾಗೆ ಕ್ಷಯರೋಗ 1930ರ ದಶಕದಿಂದಲೇ ಇತ್ತು. ಹಂದಿ ಮಾಂಸವನ್ನು ಒಬ್ಬರೇ ಇದ್ದಾಗ ಮಾತ್ರ ತಿನ್ನುತ್ತಿದ್ದ ವಿಚಿತ್ರ ವ್ಯಕ್ತಿ. ಸಾರ್ವಜನಿಕವಾಗಿ ತಿನ್ನಲು ಹೆದರಿಕೆ. ಅನಾರೋಗ್ಯದ ನಿಜವಾದ ತೀವ್ರತೆಯನ್ನು ಸಾರ್ವಜನಿಕರಿಂದ ದೂರವಿಡಲಾಗಿತ್ತು ಎಂಬುದು ನಂತರದ ದಾಖಲೆಗಳು ಮತ್ತು ನೆನಪುಗಳಲ್ಲಿ ಕಾಣುವ ಸಂಗತಿ. ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೆ ಪರಿಸ್ಥಿತಿಯ ಗಂಭೀರತೆ ತಿಳಿದಿತ್ತು.
1947ರ ಮುಂಬೈ ವೈದ್ಯಕೀಯ ವಲಯದ ಕೆಲವು ದಾಖಲೆಗಳು ಮತ್ತು ವರದಿಗಳ ಪ್ರಕಾರ, ಅವರು ಇನ್ನೂ ಎರಡು ಅಥವಾ ಮೂರು ವರ್ಷ ಬದುಕಬಹುದು ಎಂದು ವೈದ್ಯರು ಹೇಳಿದ್ದರೆಂದು ಉಲ್ಲೇಖಿಸುತ್ತವೆ, ವಿಧಿಯಾಟ ನೋಡಿ, ಅಷ್ಟು ಕಾಲವೂ ಬದುಕಲಿಲ್ಲ. ಅವರ ಏಕೈಕ ಮಗಳು ದಿನಾ ವಾಡಿಯಾಗೂ ತಂದೆಯ ಅನಾರೋಗ್ಯದ ಗಂಭೀರತೆ ಸಂಪೂರ್ಣವಾಗಿ ತಿಳಿದಿರಲಿಲ್ಲ; ತಂದೆಯ ಮರಣದ ನಂತರವೇ ಅವರಿಗೆ ಸುದ್ದಿ ತಲುಪಿತ್ತು. ಗಾಂಧೀಜಿಗೆ ಜಿನ್ನಾ ಆರೋಗ್ಯದ ನಿಜವಾದ ಸ್ಥಿತಿ ತಿಳಿದಿತ್ತೇ? ಈ ಪ್ರಶ್ನೆಗೆ ಇಂದಿಗೂ ಸಂಪೂರ್ಣ ಒಮ್ಮತದ ಉತ್ತರ ಇಲ್ಲ. ಕೆಲವು ಲೇಖಕರು ಮತ್ತು ನಂತರದ ವ್ಯಾಖ್ಯಾನಗಳು ಗಾಂಽಜಿಗೆ ಜಿನ್ನಾನ ಆರೋಗ್ಯದ ಬಗ್ಗೆ ಮಾಹಿತಿ ಇದ್ದಿರಬಹುದು ಎಂದು ಸೂಚಿಸುತ್ತವೆ.
ಮತ್ತೊಂದು ವಾದವೆಂದರೆ, ಜಿನ್ನಾನ ಕಾಯಿಲೆಯ ನಿಜವಾದ ಸ್ವರೂಪ ಅತ್ಯಂತ ರಹಸ್ಯವಾಗಿತ್ತು ಮತ್ತು ಅದನ್ನು ಬಹುಪಾಲು ನಾಯಕರು ತಿಳಿದಿರಲಿಲ್ಲ. ಯಾವುದು ಸತ್ಯ? ಖಚಿತವಾಗಿ ಹೇಳಲು ಕಷ್ಟ. ಜಿನ್ನಾನ ಆರೋಗ್ಯದ ನಿಜವಾದ ಸ್ಥಿತಿ 1946-47ರ ಎಲ್ಲರಿಗೂ ತಿಳಿದಿದ್ದರೆ ಏನಾಗುತ್ತಿತ್ತು? ಇತಿಹಾಸ ಬದಲಾಗುತ್ತಿತ್ತೇ? ಜಿನ್ನಾಗೆ ಇನ್ನೂ ಕೆಲವೇ ವರ್ಷಗಳ ಆಯುಷ್ಯವಿದೆ ಎಂಬುದು ಬ್ರಿಟಿಷ್ ಸರ್ಕಾರಕ್ಕೆ, ಕಾಂಗ್ರೆಸ್ ನಾಯಕರಿಗೆ ಮತ್ತು ಇತರ ರಾಜಕೀಯ ನಾಯಕರಿಗೆ ಖಚಿತವಾಗಿ ತಿಳಿದಿದ್ದರೆ ವಿಭಜನೆಯ ನಿರ್ಧಾರ ಬೇರೆ ರೀತಿಯಲ್ಲಿ ನಡೆದಿರುತ್ತಿತ್ತೆ? ಪಾಕಿಸ್ತಾನದ ಬೇಡಿಕೆಯನ್ನು ಮುಂದೂಡಬಹುದಿತ್ತೇ? ಬೇರೆ ರೀತಿಯ ಸಂವಿಧಾನಾತ್ಮಕ ಒಪ್ಪಂದ ಸಾಧ್ಯವಾಗಿತ್ತೇ? ವಿಭಜನೆ ತಡವಾಗುತ್ತಿತ್ತೇ? ಅಥವಾ ಭಾರತ ಒಗ್ಗಟ್ಟಾಗಿಯೇ ಉಳಿಯುವ ಸಾಧ್ಯತೆ ಇತ್ತೇ? ಇವೆಲ್ಲವೂ ಊಹೆಗಳು.
Ifs and buts ಅಷ್ಟೇ! ಜಿನ್ನಾನ ಕೊನೆಯ ದಿನಗಳ ದೈಹಿಕ ಸ್ಥಿತಿಯನ್ನು ಊಹಿಸುವುದೇ ಕಷ್ಟ. ದಾಖಲೆಗಳು ಮತ್ತು ಉಲ್ಲೇಖಗಳಲ್ಲಿ ಮರಣ ಹೊಂದಿದ ದಿನ, ತೂಕ ಸುಮಾರು 31 ಕಿಲೋಗ್ರಾಂ ಆಗಿತ್ತು ಎಂದು ಹೇಳಲಾಗಿದೆ. ಆರು ಅಡಿ ಎತ್ತರದ ವ್ಯಕ್ತಿ, ಕೇವಲ ಸುಮಾರು 31 ಕಿಲೋಗ್ರಾಂ ತೂಕ. ಆ ದೇಹ ಹೇಗಿರಬಹುದು? ಒಂದು ಕಾಲದಲ್ಲಿ ನ್ಯಾಯಾಲಯದಲ್ಲಿ ಗಂಟೆಗಟ್ಟಲೆ ನಿಂತು ವಾದಿಸಿದ ವಕೀಲ, ಮೋತಿಲಾಲ್ ನೆಹರುಗಿಂತಲೂ ಆಗರ್ಭ ಶ್ರೀಮಂತ, ಬ್ರಿಟನ್‌ನಲ್ಲಿ ಬ್ಯಾರಿಸ್ಟರ್ ಪರೀಕ್ಷೆ ಓದಿದ ಬುದ್ಧಿವಂತ, ಬ್ರಿಟಿಷ್ ಸಾಮ್ರಾಜ್ಯದೊಂದಿಗೆ ರಾಜಕೀಯವಾಗಿ ಪೈಪೋಟಿ ನಡೆಸಿದ ನಾಯಕ, ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದ ವ್ಯಕ್ತಿ, ಪಾಕಿಸ್ತಾನ ಎಂಬ ಹೊಸ ರಾಷ್ಟ್ರವನ್ನು ನಿರ್ಮಿಸಿದ ರಾಜಕಾರಣಿಯ ಕೊನೆಗಾಲ ಇತಿಹಾಸದ ಕ್ರೂರ ವ್ಯಂಗ್ಯ.
1948ರ ಜೂನ್‌ನಲ್ಲಿ ಕರಾಚಿಯ ಉರಿಯುವ ಬೇಸಿಗೆಯಿಂದ ದೂರ ಹೋಗಿ ವಿಶ್ರಾಂತಿ ಪಡೆಯು ವಂತೆ ವೈದ್ಯರು ಸಲಹೆ ನೀಡಿದರು. ಅಣ್ಣಾ ತಂಗಿ ಇಬ್ಬರೂ ಕ್ವೆಟ್ಟಾಕ್ಕೆ ಹೋದರು. ಕ್ವೆಟ್ಟಾ, ಬಲೂಚಿಸ್ತಾನದ ಬೆಟ್ಟ ಪ್ರದೇಶ. ನಂತರ ಇನ್ನೂ ಎತ್ತರದ ಪ್ರದೇಶವಾದ ಜಿಯಾರತ್‌ಗೆ ಕರೆದೊಯ್ಯ ಲಾಯಿತು. ಜುಲೈ ವೇಳೆಗೆ ಆರೋಗ್ಯ ವೇಗವಾಗಿ ಕುಸಿಯತೊಡಗಿತು.
ಜಿನ್ನಾ ಆರೋಗ್ಯ ಇಷ್ಟು ಗಂಭೀರವಾಗಿದ್ದಾಗ ಅವರನ್ನು ಕ್ವೆಟ್ಟಾ, ನಂತರ ಜಿಯಾರತ್‌ನಂತಹ ಎತ್ತರದ ಪ್ರದೇಶಗಳಿಗೆ ಕಳುಹಿಸುವ ನಿರ್ಧಾರ ಎಷ್ಟು ಸೂಕ್ತವಾಗಿತ್ತು? ಅವರನ್ನು ಕರಾಚಿಯ ಇಟ್ಟು ಉತ್ತಮ ವೈದ್ಯಕೀಯ ಸೌಲಭ್ಯ ನೀಡಬಹುದಿತ್ತೇ? ಅವರನ್ನು ಎತ್ತರದ ಪ್ರದೇಶಕ್ಕೆ ಕಳುಹಿಸಿದ ನಿರ್ಧಾರದಿಂದ ಅವರ ದೇಹದ ಮೇಲೆ ಹೆಚ್ಚುವರಿ ಒತ್ತಡ ಬಿದ್ದಿತೇ? ಇವುಗಳಿಗೆ ಖಚಿತ ಉತ್ತರ ಗಳಿಲ್ಲ. ಆದರೆ ಅನುಮಾನ ಗಳಿಗೆ ಕಾರಣವಾಗುವ ಕೆಲವು ಸಂಗತಿಗಳು ಖಂಡಿತವಾಗಿಯೂ ಇವೆ.
ಸೆಪ್ಟೆಂಬರ್ ಆರಂಭದಲ್ಲಿ ಸ್ಥಿತಿ ತೀವ್ರವಾಗಿ ಹದಗೆಟ್ಟಿತ್ತು, ಉಸಿರಾಟದ ತೊಂದರೆ ಹೆಚ್ಚಾಗಿತ್ತು, ನ್ಯುಮೋನಿಯಾದ ಲಕ್ಷಣಗಳು ಕಾಣಿಸಿಕೊಂಡವು. ಕೊನೆಗೆ ವೈದ್ಯರು ಕರಾಚಿಗೆ ತಕ್ಷಣ ಕರೆದೊಯ್ಯು ವಂತೆ ಒತ್ತಾಯಿಸಿದರು. ಫಾತಿ, ನನಗೆ ಇನ್ನು ಬದುಕುವುದರಲ್ಲಿ ಆಸಕ್ತಿ ಇಲ್ಲ ಎಂದಾಗ ನಾನು ಬೆಚ್ಚಿಬಿದ್ದೆ ಎಂದು ಫಾತಿಮಾ ಪುಸ್ತಕದಲ್ಲಿ ಹೇಳುತ್ತಾರೆ.
ಒಂದು ವರ್ಷದ ಹಿಂದೆ ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರದ ಭವಿಷ್ಯದ ಬಗ್ಗೆ ಮಾತನಾಡುತ್ತಿದ್ದ ವ್ಯಕ್ತಿ ಈಗ ತನ್ನದೇ ಬದುಕಿನ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದ. ಕೆಲ ಪ್ರಶ್ನೆಗಳಿಗೆ ಇತಿಹಾಸದ ಬಳಿ ಉತ್ತರ ವಿಲ್ಲ. ಯಾರಾದರೂ ಅವರ ಮರಣವನ್ನು ಬಯಸಿದ್ದರೇ ಅಥವಾ ಇದು ಕೇವಲ ರೋಗ, ವೈದ್ಯಕೀಯ ಮಿತಿಗಳು, ಆಡಳಿತಾತ್ಮಕ ನಿರ್ಲಕ್ಷ್ಯ ಮತ್ತು ವಿಧಿಯ ಕ್ರೂರ ಸಂಯೋಗವೇ? ಖಚಿತ ಉತ್ತರ ಯಾರ ಬಳಿಯೂ ಇಲ್ಲ. ಕರಾಚಿಯ ಆ ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಆಂಬ್ಯುಲೆನ್ಸ್ ಇಂದಿಗೂ ಒಂದು ಪ್ರಶ್ನೆಯಂತೆ ಕಾಣುತ್ತದೆ. ಇತಿಹಾಸ ಬೇರೆ ರೀತಿಯಲ್ಲಿ ಬರೆಯಲ್ಪಡಬಹುದಿತ್ತೇ? ಪುಸ್ತಕ ಓದಿ ಮುಗಿಸಿದಾಗಿನಿಂದ ಕಾಡುತ್ತಿರುವ ಪ್ರಶ್ನೆ...