ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ಪಂಚತಂತ್ರ ಕಥೆಗಳು: ಜಾಣ ಮೊಲದಿಂದ ಕ್ರೂರ ಸಿಂಹಕ್ಕೆ ಶಾಸ್ತಿ

ಸಂಸ್ಕೃತದ ಸುಭಾಷಿತ ಹೇಳುವಂತೆ- ‘ಬುದ್ಧಿರ್ಯಸ್ಯ ಬಲಂ ತಸ್ಯ ನಿರ್ಬುದ್ಧೇಸ್ತು ಕುತೋ ಬಲಮ್?’ (ಯಾರಲ್ಲಿ ಬುದ್ಧಿ ಯಿದೆಯೋ ಅವರ ನಿಜವಾದ ಬಲವಿದೆ, ಬುದ್ಧಿಯಿಲ್ಲದವನಿಗೆ ಬಲವೆಲ್ಲಿಂದ ಬರಬೇಕು?) ಅಂತೆಯೇ ಅದೇನೆ ಕಷ್ಟ ಬಂದರೂ ಸಮಾಧಾನ ದಿಂದ, ಕೆಲವೊಮ್ಮೆ ಯುಕ್ತಿಯಿಂದ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಶಕ್ತಿಯಿಂದ ಗೆಲ್ಲಲಾರದನ್ನು ಯುಕ್ತಿಯಿಂದ ಗೆಲ್ಲಬಹುದು ಎಂದು ಅದಕ್ಕೆ ಹಿರಿಯರು ಹೇಳುವುದು.

ಒಂದೊಳ್ಳೆ ಮಾತು

ಸೋಮದೇವನ ‘ಕಥಾಸರಿತ್ಸಾ ಗರ’ದ 10ನೇ ಲಂಬಕವಾದ ‘ವಿಷಮಶೀಲ ಲಂಬಕ’ದಲ್ಲಿ ಪಂಚತಂತ್ರದ ನೀತಿ ಕಥೆಗಳು ಪ್ರಮುಖ ಉಪಕಥೆಗಳಾಗಿ ವಿವರವಾಗಿ ಬರುತ್ತವೆ. ಪಂಚತಂತ್ರದ ಮೂಲ ಐದು ತಂತ್ರ ಗಳ (ಮಿತ್ರಭೇದ, ಮಿತ್ರಸಂಪ್ರಾಪ್ತಿ, ಕಾಕೋ ಲೂಕೀಯ, ಲಬ್ಧಪ್ರಣಾಶ, ಅಪರೀಕ್ಷಿತಕಾರಕ) ಬಹುತೇಕ ಕಥೆಗಳು ಇದರಲ್ಲಿ ಸೇರಿವೆ. ಈ ಕಥೆಗಳ ಸಾಲು ಇಂದಿನಿಂದ ನಿಮಗಾಗಿ. ದಂಡಕಾರಣ್ಯದಲ್ಲಿ ಭಾಶುರಕ ಎಂಬ ಬಲಿಷ್ಠ ಸಿಂಹವೊಂದು ದಿನವೂ ಮೃಗಗಳನ್ನು ಮನ ಬಂದಂತೆ ಕೊಲ್ಲುತ್ತಿತ್ತು.

ಕಾಡಿನ ಜೀವಿಗಳು ಭಯ ಭೀತರಾಗಿ ಸಿಂಹದ ಬಳಿ ಬಂದು, ಮೃಗರಾಜ, ನೀನು ಬೇಟೆಯಾಡುವುದು ಬೇಡ; ನಿತ್ಯವೂ ನಾವೇ ಸರದಿಯಂತೆ ಒಬ್ಬೊಬ್ಬರಾಗಿ ನಿನ್ನ ಆಹಾರಕ್ಕೆ ಬರುತ್ತೇವೆ ಎಂದು ಒಪ್ಪಂದ ಮಾಡಿ ಕೊಂಡವು. ಸಿಂಹವೂ ಇದಕ್ಕೆ ಸಮ್ಮತಿಸಿತು. ದಿನಗಳು ಉರುಳಿದಂತೆ ಒಂದು ಪುಟ್ಟ ಮೊಲದ ಸರದಿ ಬಂದಿತು. ಸಾವಿನ ದವಡೆಗೆ ಹೋಗುತ್ತಿದ್ದರೂ ಆ ಮೊಲ ಧೃತಿಗೆಡದೆ, ಶರೀರ ಸಣ್ಣದಾದರೂ ಬಲವನ್ನು ಯುಕ್ತಿಯಿಂದಲೇ ಮಣಿಸಬೇಕು ಎಂದು ತೀರ್ಮಾನಿಸಿತು. ಅದು ಉದ್ದೇಶಪೂರ್ವಕವಾಗಿ ತಡವಾಗಿ ಸಿಂಹದ ಗುಹೆಯತ್ತ ಹೆಜ್ಜೆಯಿಟ್ಟಿತು.

ದಾರಿಯಲ್ಲಿ ಅದಕ್ಕೆ ಕಲ್ಲಿನಿಂದ ಕಟ್ಟಿದ ಒಂದು ಆಳವಾದ, ಪಾಳುಬಿದ್ದ ಬಾವಿ ಕಣ್ಣಿಗೆ ಬಿದ್ದಿತು. ಅಲ್ಲಿಯೇ ಅದಕ್ಕೊಂದು ಅದ್ಭುತ ಉಪಾಯ ಹೊಳೆಯಿತು. ಸಂಜೆ ಹೊತ್ತಿಗೆ ಮೊಲ ಗುಹೆಯನ್ನು ತಲುಪಿದಾಗ, ಹಸಿವಿನಿಂದ ಕಂಗೆಟ್ಟಿದ್ದ ಸಿಂಹ ಕೋಪದಿಂದ ಕಿಡಿಕಾರಿತು: ನನಗೊಂದು ಪುಟ್ಟ ಮೊಲವನ್ನು ಕಳುಹಿಸಿದ್ದಲ್ಲದೆ ಇಷ್ಟು ತಡವಾಗಿ ಬಂದೆಯಾ? ಇಡೀ ಕಾಡನ್ನೇ ಮುಗಿಸಿಬಿಡುತ್ತೇನೆ! ಎಂದು ಗರ್ಜಿಸಿತು.

ಇದನ್ನೂ ಓದಿ: Roopa Gururaj Column: ಕಥಾಸರಿತ್ಸಾಗರ: ಶ್ರೀಮಂತರನ್ನು ದೋಚುವ ವಿದಗ್ಧ ಚೋರನ ಕಥೆ

ಆಗ ಮೊಲ ನಡುಗುವಂತೆ ನಟಿಸಿ, ಸ್ವಾಮಿ, ನನ್ನ ತಪ್ಪಿಲ್ಲ. ನನ್ನೊಂದಿಗೆ ಇನ್ನೂ ನಾಲ್ಕು ಮೊಲಗಳು ಹೊರಟಿದ್ದವು. ಆದರೆ ದಾರಿಯಲ್ಲಿ ಮತ್ತೊಬ್ಬ ಮಹಾಬಲಿಷ್ಠ ಸಿಂಹ ಎದುರಾಗಿ ಅವುಗಳನ್ನು ಕಬಳಿಸಿದ. ಅವನು ತನ್ನನ್ನು ಈ ಕಾಡಿನ ಏಕೈಕ ದೊರೆ ಎಂದು ಕರೆದುಕೊಂಡು ನಿಮ್ಮನ್ನು ಹಳಿದ. ನಾನು ಹೇಗೋ ತಪ್ಪಿಸಿಕೊಂಡು ನಿಮಗೆ ಸುದ್ದಿ ಮುಟ್ಟಿಸಲು ಬಂದೆ ಎಂದಿತು. ತನ್ನ ಸಾರ್ವಭೌಮತ್ವಕ್ಕೆ ಸವಾಲೆಸೆದ ಆ ಎದುರಾಳಿಯನ್ನು ಕೊಲ್ಲಲು ಸಿಂಹ ಕೆರಳಿ ನಿಂತಿತು.

ಮೊಲ ಅದನ್ನು ನೇರವಾಗಿ ಆ ಪಾಳುಬಿದ್ದ ಬಾವಿಯ ಬಳಿಗೆ ಕರೆದೊಯ್ದು, ಆ ಶತ್ರು ಈ ಕೋಟೆಯೊಳಗೆ ಅಡಗಿದ್ದಾನೆ ಎಂದು ತೋರಿಸಿತು. ಅಹಂಕಾರ ಮತ್ತು ಆಕ್ರೋಶದಿಂದ ಕುರುಡಾ ಗಿದ್ದ ಸಿಂಹ ಬಾವಿಯೊಳಗೆ ಇಣುಕಿದಾಗ, ನೀರಿ ನಲ್ಲಿ ಅದರದ್ದೇ ಪ್ರತಿಬಿಂಬ ಕಾಣಿಸಿತು. ಸಿಂಹ ಗರ್ಜಿಸಿದಾಗ ಬಾವಿಯಿಂದ ಪ್ರತಿಧ್ವನಿ ಮೊಳಗಿತು.

ಎದುರಾಳಿಯೇ ತನ್ನನ್ನು ನೋಡಿ ಘರ್ಜಿಸುತ್ತಿದ್ದಾನೆಂದು ಭ್ರಮಿಸಿದ ಮೂರ್ಖ ಸಿಂಹ, ಆವೇಶದಿಂದ ಬಾವಿಯ ಆಳಕ್ಕೆ ಜಿಗಿದು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿತು. ತನ್ನ ಚತುರತೆಯಿಂದ ಇಡೀ ಕಾಡನ್ನೇ ರಕ್ಷಿಸಿದ ಮೊಲ ಹಿಂತಿರುಗಿ ಪ್ರಾಣಿಗಳಿಗೆ ವಿಷಯ ಮುಟ್ಟಿಸಿತು. ತೋಳ್ಬಲಕ್ಕಿಂತ ಸಮಯ ಪ್ರe ಮತ್ತು ಬುದ್ಧಿಬಲವೇ ಶ್ರೇಷ್ಠವೆಂಬುದು ಮತ್ತೊಮ್ಮೆ ಸಾಬೀತಾ ಯಿತು.

ಜಗತ್ತಿನಲ್ಲಿ ಎದುರಾಗುವ ಎಲ್ಲ ಬಿಕ್ಕಟ್ಟುಗಳನ್ನೂ ಕೇವಲ ದೈಹಿಕ ಬಲದಿಂದ, ಆರ್ಥಿಕ ಶಕ್ತಿಯಿಂದ ಅಥವಾ ಅಧಿಕಾರದಿಂದ ಗೆಲ್ಲಲು ಸಾಧ್ಯವಿಲ್ಲ. ಸಮಸ್ಯೆ ನಮ್ಮ ಶಕ್ತಿಗಿಂತ ಸಾವಿರ ಪಟ್ಟು ದೊಡ್ಡದಾಗಿದ್ದಾಗ, ನಮಗೆ ಬೇಕಾಗಿರುವುದು ತಾಳ್ಮೆ ಮತ್ತು ವಿವೇಕ.

ಸಂಸ್ಕೃತದ ಸುಭಾಷಿತ ಹೇಳುವಂತೆ- ‘ಬುದ್ಧಿರ್ಯಸ್ಯ ಬಲಂ ತಸ್ಯ ನಿರ್ಬುದ್ಧೇಸ್ತು ಕುತೋ ಬಲಮ್?’ (ಯಾರಲ್ಲಿ ಬುದ್ಧಿ ಯಿದೆಯೋ ಅವರ ನಿಜವಾದ ಬಲವಿದೆ, ಬುದ್ಧಿಯಿಲ್ಲದವನಿಗೆ ಬಲವೆಲ್ಲಿಂದ ಬರಬೇಕು?) ಅಂತೆಯೇ ಅದೇನೆ ಕಷ್ಟ ಬಂದರೂ ಸಮಾಧಾನ ದಿಂದ, ಕೆಲವೊಮ್ಮೆ ಯುಕ್ತಿಯಿಂದ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಶಕ್ತಿಯಿಂದ ಗೆಲ್ಲಲಾರದನ್ನು ಯುಕ್ತಿಯಿಂದ ಗೆಲ್ಲಬಹುದು ಎಂದು ಅದಕ್ಕೆ ಹಿರಿಯರು ಹೇಳುವುದು. ಇಂತಹ ಕಥೆಗಳ ಮೂಲಕ ನಮ್ಮ ಮಕ್ಕಳಿಗೆ ಜೀವನದ ಈ ಪಾಠಗಳನ್ನು ತಿಳಿಸಿದಾಗ ಅವರು ತಮಗೆ ಎದುರಾಗುವ ಚಿಕ್ಕ ಪುಟ್ಟ ಸಮಸ್ಯೆಗಳಿಗೆ ಧೃತಿಗೆಡದೆ ಸಂಯಮದಿಂದ ಅದಕ್ಕೆ ಪರಿಹಾರ ಕಂಡುಕೊಳ್ಳುವ ಚಿಂತನೆ ನಡೆಸುತ್ತಾರೆ. ‌

ಇಂದಿನ ದಿನಗಳಲ್ಲಿ ಚಿಕ್ಕಚಿಕ್ಕದ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳುವ, ಆತ್ಮಹತ್ಯೆಗೆ ಶರಣಾಗುವ ಮನಸ್ಸುಗಳ ನಡುವೆ ಮಕ್ಕಳನ್ನು ಬಾಲ್ಯದಿಂದಲೇ ಗಟ್ಟಿಯಾಗಿ ಸಲು ಇಂತಹ ಕಥೆಗಳನ್ನು ಹೇಳುತ್ತಾ ಅವರ ವ್ಯಕ್ತಿತ್ವವನ್ನು ರೂಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

ರೂಪಾ ಗುರುರಾಜ್

View all posts by this author