ಒಂದೊಳ್ಳೆ ಮಾತು
ದಕ್ಷಿಣಾಪಥದ ದಟ್ಟ ಕಾನನದಲ್ಲಿದ್ದ ಸುಂದರ ಸರೋವರವೊಂದರ ತೀರದಲ್ಲಿ ಲಘು ಪತನಕ ಎಂಬ ಕಾಗೆ, ಹಿರಣ್ಯಕ ಎಂಬ ಇಲಿ ಮತ್ತು ಮಂಥರಕ ಎಂಬ ಆಮೆ ಪರಸ್ಪರ ಸ್ನೇಹದಿಂದ ವಾಸವಾಗಿದ್ದವು. ಪ್ರತಿದಿನ ಸಂಜೆ ಸರೋವರದ ದಡದಲ್ಲಿ ಸೇರಿ, ಸುಖ-ದುಃಖಗಳನ್ನು ಹಂಚಿ ಕೊಳ್ಳುತ್ತಾ ಈ ಮೂವರು ನಿರಾಳವಾಗಿ ಬದುಕುತ್ತಿದ್ದವು.
ಒಂದು ದಿನ ಆ ಅರಣ್ಯಕ್ಕೆ ಚಿತ್ರಾಂಗ ಎಂಬ ಸುಂದರ ಜಿಂಕೆಯೊಂದು ಬೇಡನಿಗೆ ಹೆದರಿ ಓಡುತ್ತಾ ಬಂತು. ದಣಿದು ಸುಸ್ತಾಗಿದ್ದ ಜಿಂಕೆಗೆ ಈ ಮೂವರು ಮಿತ್ರರು ಆಶ್ರಯ ನೀಡಿ, ನೀರು-ಆಹಾರ ಒದಗಿಸಿ ತಮ್ಮ ನಾಲ್ಕನೇ ಮಿತ್ರನನ್ನಾಗಿ ಬರಮಾಡಿಕೊಂಡರು. ಅಂದಿನಿಂದ ಈ ನಾಲ್ವರ ಸ್ನೇಹ ಇನ್ನಷ್ಟು ಗಟ್ಟಿಯಾಯಿತು. ಆದರೆ, ವಿಧಿಯ ಆಟ ಬೇರೆಯೇ ಇತ್ತು. ಒಂದು ದಿನ ಸಂಜೆ ಮಿತ್ರರೆಲ್ಲರೂ ಸರೋವರದ ದಡದಲ್ಲಿ ಸೇರಿದಾಗ ಜಿಂಕೆ ಮಾತ್ರ ಬರಲಿಲ್ಲ. ಆತಂಕಗೊಂಡ ಕಾಗೆ ಆಕಾಶಕ್ಕೆ ಹಾರಿ ಕಾಡಿನೆಡೆ ಹುಡುಕತೊಡಗಿತು. ದೂರದಂದು ಕಡೆ ಬೇಡನು ಹರಡಿದ್ದ ಬಲೆಯಲ್ಲಿ ಜಿಂಕೆ ಸಿಲುಕಿಕೊಂಡು ಒದ್ದಾ ಡುತ್ತಿರುವುದು ಕಾಗೆಗೆ ಕಾಣಿಸಿತು.
ತಕ್ಷಣವೇ ಕಾಗೆ ಹಿಂತಿರುಗಿ ಇಲಿ ಮತ್ತು ಆಮೆಗೆ ವಿಷಯ ಮುಟ್ಟಿಸಿತು. ಇಲಿಯ ಚೂಪಾದ ಹಲ್ಲು ಗಳಿಲ್ಲದೆ ಬಲೆ ಕಡಿಯುವುದು ಅಸಾಧ್ಯವೆಂದು ತಿಳಿದ ಕಾಗೆ, ಇಲಿಯನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ಕ್ಷಣಾರ್ಧದಲ್ಲಿ ಜಿಂಕೆಯ ಬಳಿಗೆ ಹಾರಿಬಂತು. ಹಿರಣ್ಯಕ ಇಲಿಯು ತನ್ನ ಹರಿತವಾದ ಹಲ್ಲುಗಳಿಂದ ಬೇಡನ ಬಲೆಯ ಹಗ್ಗಗಳನ್ನು ಕಡಿಯಲು ಪ್ರಾರಂಭಿಸಿತು.
ಇದನ್ನೂ ಓದಿ: Roopa Gururaj Column: ಪಂಚತಂತ್ರ ಕಥೆಗಳು: ನೀಲಿ ನರಿ ಚಂಡರವನ ಕಥೆ
ಅಷ್ಟರಲ್ಲಿ, ತನ್ನ ಗೆಳೆಯನ ಮೇಲಿನ ಅತಿಯಾದ ಮಮತೆಯಿಂದ ನಿಧಾನವಾಗಿ ಹೆಜ್ಜೆ ಹಾಕುತ್ತಾ ಆಮೆಯೂ ಅಲ್ಲಿಗೆ ಬಂದುಬಿಟ್ಟಿತು. ಅದೇ ಸಮಯಕ್ಕೆ ಬೇಡನು ಬಿಲ್ಲು- ಬಾಣಗಳನ್ನು ಹಿಡಿದು ಅತ್ತ ಬರುವುದು ಕಾಣಿಸಿತು. ಇಲಿಯು ಕೊನೆಯ ಹಗ್ಗವನ್ನು ಕಡಿದ ತಕ್ಷಣ ಜಿಂಕೆ ಬಲೆಯಿಂದ ಬಿಡಿಸಿಕೊಂಡು ಕಾಡಿನೊಳಗೆ ಓಡಿತು, ಕಾಗೆ ಮರದ ಮೇಲೆ ಹಾರಿತು, ಇಲಿ ಬಿಲದೊಳಗೆ ಸೇರಿ ಕೊಂಡಿತು. ಆದರೆ ನಿಧಾನಗತಿಯ ಆಮೆ ಮಾತ್ರ ಬೇಡನ ಕೈಗೆ ಸಿಕ್ಕಿಬಿದ್ದಿತು. ಬೇಡನು ಜಿಂಕೆ ತಪ್ಪಿಸಿಕೊಂಡ ನಿರಾಶೆಯಲ್ಲಿ, ಸಿಕ್ಕಿದ ಆಮೆಯನ್ನೇ ಬಲೆಯಲ್ಲಿ ಕಟ್ಟಿ ಹೆಗಲ ಮೇಲಿಟ್ಟುಕೊಂಡು ನಡೆಯತೊಡಗಿದನು.
ತಮ್ಮನ್ನು ರಕ್ಷಿಸಲು ಬಂದು ತಾನೇ ಸಂಕಷ್ಟಕ್ಕೆ ಸಿಲುಕಿದ ಆಮೆಯನ್ನು ಕಂಡು ಉಳಿದ ಮೂವರು ಮಿತ್ರರು ಕಂಗೆಟ್ಟರು. ತಕ್ಷಣವೇ ಒಂದು ಉಪಾಯ ಹೂಡಿದರು. ಯೋಜನೆಯಂತೆ, ಜಿಂಕೆಯು ಬೇಡನ ದಾರಿಯ ಮುಂದೆ ಸತ್ತು ಬಿದ್ದಿರುವಂತೆ ನಟಿಸುತ್ತಾ ಮಲಗಿತು, ಕಾಗೆಯು ಜಿಂಕೆಯ ತಲೆಯ ಮೇಲೆ ಕುಳಿತು ಕಣ್ಣು ಕು ಕ್ಕುವಂತೆ ನಟಿಸತೊಡಗಿತು. ಇದನ್ನು ಕಂಡ ಬೇಡನು ಆಹಾ! ಇಂದು ನನ್ನ ಅದೃಷ್ಟವೇ ಖುಲಾಯಿಸಿದೆ, ಸತ್ತ ಜಿಂಕೆ ಸಿಕ್ಕಿತು ಎಂದು ಸಂತಸಪಟ್ಟು, ಆಮೆಯನ್ನು ಕಟ್ಟಿದ್ದ ಬಲೆಯನ್ನು ಕೆಳಗಿಟ್ಟು ಜಿಂಕೆಯ ಕಡೆಗೆ ಓಡಿದನು.
ಅಷ್ಟರಲ್ಲಿ ಅವಿತುಕೊಂಡಿದ್ದ ಇಲಿಯು ಓಡಿಬಂದು ಆಮೆಯನ್ನು ಕಟ್ಟಿದ್ದ ಬಲೆಯ ಹಗ್ಗವನ್ನು ಕಡಿದು ಹಾಕಿತು. ಆಮೆಯು ಸರಸರನೆ ಸರೋವರದ ನೀರಿನೊಳಗೆ ಜಾರಿಕೊಂಡಿತು. ಬೇಡನು ಜಿಂಕೆಯ ಹತ್ತಿರ ಬರುತ್ತಿದ್ದಂತೆ ಕಾಗೆ ಹಾರಿಹೋಯಿತು, ಜಿಂಕೆಯು ಜಿಗಿದು ಕಾಡಿನೊಳಗೆ ಮರೆಯಾಯಿತು. ಹಿಂತಿರುಗಿ ನೋಡಿದರೆ ಆಮೆಯೂ ಕಾಣೆಯಾಗಿತ್ತು!
ಬರಿಗೈಯಲ್ಲಿ ನಿಂತ ಬೇಡನು ಮಂಕಾಗಿ ಮನೆಗೆ ಮರಳಿದನು. ನಾಲ್ವರು ಮಿತ್ರರು ಮತ್ತೆ ಒಂದಾಗಿ ಸಂಭ್ರಮಿಸಿದರು. ನಾವು ಎಷ್ಟೇ ಬಲಿಷ್ಠರಾಗಿದ್ದರೂ ಅಥವಾ ಬುದ್ಧಿವಂತರಾಗಿದ್ದರೂ ಬದುಕಿನ ಎಲ್ಲ ಸಂಕಷ್ಟಗಳನ್ನು ಏಕಾಂಗಿಯಾಗಿ ಎದುರಿಸಲು ಸಾಧ್ಯವಿಲ್ಲ. ಒಬ್ಬೊಬ್ಬರಲ್ಲಿ ಒಂದೊಂದು ವಿಶೇಷ ಸಾಮರ್ಥ್ಯವಿರುತ್ತದೆ.
ಸಂಸ್ಕೃತದ ಸುಭಾಷಿತ ಹೇಳುವಂತೆ ‘ಸಂಘೇ ಶಕ್ತಿಃ ಕಲೌ ಯುಗೇ’ (ಈ ಯುಗದಲ್ಲಿ ಒಗ್ಗಟ್ಟಿನ ನಿಜವಾದ ಶಕ್ತಿಯಿದೆ) ಹಾಗೂ ‘ಆಪತ್ಕಾಲೇ ತು ಸಂಪ್ರಾಪ್ತೇ ಯನ್ಮಿತ್ರಂ ಮಿತ್ರಮೇವ ತತ್’ (ಕಷ್ಟ ಕಾಲ ಬಂದಾಗ ಯಾರು ಜೊತೆಗೆ ನಿಲ್ಲುತ್ತಾರೋ ಅವರೇ ನಿಜವಾದ ಮಿತ್ರರು). ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ವಾರ್ಥ ಮತ್ತು ಏಕಾಂಗಿತನ ಹೆಚ್ಚಾಗುತ್ತಿರುವಾಗ, ಮಕ್ಕಳಿಗೆ ಪರಸ್ಪರ ಸಹಕಾರ, ನಿಸ್ವಾರ್ಥ ಸ್ನೇಹ ಮತ್ತು ತಂಡವಾಗಿ ಕೆಲಸ ಮಾಡುವ ಮಹತ್ವವನ್ನು ತಿಳಿಸಿಕೊಟ್ಟರೆ ಅವರ ಜೀವನ ಸರಾಗವಾಗುತ್ತದೆ