ಒಂದೊಳ್ಳೆ ಮಾತು
ಕಾಡಿನಲ್ಲಿದ್ದ ಚಂಡರವ ಎಂಬ ಹೆಸರಿನ ನರಿಯೊಂದು ಆಹಾರ ಹುಡುಕುತ್ತಾ ಹಳ್ಳಿಯೊಂದಕ್ಕೆ ನುಗ್ಗಿತು. ಹಳ್ಳಿಯಲ್ಲಿದ್ದ ಬೀದಿ ನಾಯಿಗಳು ಅಪರಿಚಿತ ನರಿಯನ್ನು ಕಂಡು ಜೋರಾಗಿ ಬೊಗಳುತ್ತಾ ಅದರ ಮೇಲೆ ಎರಗಿದವು. ಜೀವಭಯದಿಂದ ದಿಕ್ಕಾಪಾಲಾಗಿ ಓಡಿದ ನರಿಯು, ತಪ್ಪಿಸಿಕೊಳ್ಳುವ ಭರದಲ್ಲಿ ಬಟ್ಟೆ ಒಗೆಯುವ ಅಗಸನ ಮನೆಯ ಹಿತ್ತಿಲಿಗೆ ನುಗ್ಗಿ, ಅಲ್ಲಿ ಬಟ್ಟೆಗಳಿಗೆ ಬಣ್ಣ ಹಾಕಲು ಇಟ್ಟಿದ್ದ ನೀಲಿ ಬಣ್ಣದ ದೊಡ್ಡ ಹಂಡೆಯೊಳಗೆ ಬಿದ್ದುಬಿಟ್ಟಿತು.
ನಾಯಿಗಳು ಮುಂದೆ ಸಾಗಿದ ನಂತರ, ನರಿಯು ಹಂಡೆಯಿಂದ ಹೊರಬಂದು ನೋಡಿ ಕೊಂಡಿತು. ಅದರ ಇಡೀ ದೇಹದ ಉಗುರಿನಿಂದ ಕೂದಲಿನವರೆಗೆ ಕಡು ನೀಲಿ ಬಣ್ಣಕ್ಕೆ ತಿರುಗಿತ್ತು. ನೀರಿನಲ್ಲಿ ಮುಖ ನೋಡಿಕೊಂಡಾಗ ತನಗೆ ತಾನೇ ಅಪರಿಚಿತನಂತೆ ಕಂಡಿತು. ಮರಳಿ ಕಾಡಿಗೆ ಬಂದ ನೀಲಿ ನರಿಯನ್ನು ಕಂಡು ಕಾಡಿನ ಪ್ರಾಣಿಗಳು ಬೆಚ್ಚಿಬಿದ್ದವು. ಸಿಂಹ, ಹುಲಿ, ಚಿರತೆ, ಆನೆಗಳಂತಹ ಬಲಿಷ್ಠ ಮೃಗಗಳೂ ಇದೇನಿದು ವಿಚಿತ್ರ ಪ್ರಾಣಿ!
ಈ ಜೀವಿ ಎಷ್ಟು ಅಪಾಯಕಾರಿಯೋ ಯಾರಿಗೆ ಗೊತ್ತು ಎಂದು ಅಂಜಿಕೆಯಿಂದ ದೂರ ಸರಿದವು. ಪ್ರಾಣಿಗಳ ಭಯವನ್ನು ಕಂಡ ಚಂಡರವನಿಗೆ ತಕ್ಷಣ ಕಪಟ ಉಪಾಯವೊಂದು ಹೊಳೆಯಿತು. ಅದು ಎದೆ ಉಬ್ಬಿಸಿ ಗಂಭೀರ ಧ್ವನಿಯಲ್ಲಿ, ‘ಕಾಡಿನ ಮುಗ್ಧ ಜೀವಿಗಳೇ, ಹೆದರಬೇಡಿ! ಬ್ರಹ್ಮದೇವನು ಈ ಕಾಡಿನಲ್ಲಿ ರಾಜನಿಲ್ಲದೆ ಅರಾಜಕತೆ ಉಂಟಾಗಿರುವುದನ್ನು ಕಂಡು, ನಿಮ್ಮೆಲ್ಲರನ್ನೂ ರಕ್ಷಿಸಿ ಆಳಲು ನನ್ನನ್ನು ವಿಶೇಷವಾಗಿ ಸೃಷ್ಟಿಸಿ ಭೂಮಿಗೆ ಕಳುಹಿಸಿದ್ದಾನೆ.
ಇದನ್ನೂ ಓದಿ: Roopa Gururaj Column: ಪಂಚತಂತ್ರ ಕಥೆಗಳು: ಕಾಗೆಗಳು ಮತ್ತು ಕ್ರೂರಿಯಾದ ಕೃಷ್ಣಸರ್ಪ
ಇಂದಿನಿಂದ ನಾನೇ ನಿಮ್ಮ ಸಾಮ್ರಾಟ’ ಎಂದು ಸಾರಿತು. ಅದರ ವಿಚಿತ್ರ ಬಣ್ಣ ಮತ್ತು ಮಾತು ಗಳನ್ನು ನಂಬಿದ ಸಿಂಹ, ಹುಲಿಗಳು ಅದಕ್ಕೆ ತಲೆಬಾಗಿ ತಮ್ಮ ಸೇವೆಯನ್ನು ಅರ್ಪಿಸಿದವು. ನೀಲಿ ನರಿ ಕಾಡಿನ ರಾಜನಾಗಿ ಮೆರೆಯತೊಡಗಿತು. ಆದರೆ, ತನ್ನ ಸ್ವಜಾತಿಯ ನರಿಗಳನ್ನು ಕಂಡರೆ ತನ್ನ ರಹಸ್ಯ ಬಯಲಾದೀತೆಂಬ ಭಯದಿಂದ, ಕಾಡಿನಲ್ಲಿದ್ದ ಎಲ್ಲ ಸಾಮಾನ್ಯ ನರಿಗಳನ್ನು ಕೀಳಾಗಿ ಕಂಡು ಕಾಡಿನಿಂದಲೇ ಹೊರಹಾಕಿತು. ಒಂದು ದಿನ ಸಂಜೆ, ಕಾಡಿನ ರಾಜನಂತೆ ಸಿಂಹಾಸನದಲ್ಲಿ ಕುಳಿತಿದ್ದ ಚಂಡರವನಿಗೆ ದೂರದ ಬೆಟ್ಟದಿಂದ ಕಾಡಿನಿಂದ ಹೊರದೂಡಲ್ಪಟ್ಟ ನರಿಗಳ ಹಿಂಡು ಒಟ್ಟಾಗಿ ಊಳಿಡುವ ದನಿ ಕೇಳಿಸಿತು.
ಜನ್ಮಜಾತ ಗುಣವಾದ ‘ಊಳಿಡುವ’ ನೈಸರ್ಗಿಕ ಹಂಬಲವನ್ನು ಚಂಡರವನಿಗೆ ತಡೆಯಲಾಗಲಿಲ್ಲ. ಸುತ್ತಲೂ ಸಿಂಹ, ಹುಲಿಗಳಿರುವುದನ್ನು ಮರೆತು, ಅಪ್ರಯತ್ನವಾಗಿ ತಲೆಯೆತ್ತಿ ಅದು ಕೂಡ ಗಂಟಲು ಹರಿದುಕೊಳ್ಳುವಂತೆ ಊ... ಊ... ಎಂದು ಕಿರುಚತೊಡಗಿತು. ತಕ್ಷಣವೇ ಪಕ್ಕದಲ್ಲಿದ್ದ ಸಿಂಹ, ಹುಲಿಗಳು ನಿಬ್ಬೆರಗಾಗಿ ನೋಡಿದವು. ‘ಅಯ್ಯೋ, ಈ ನೀಲಿ ಬಣ್ಣದ ವಿಚಿತ್ರ ಜೀವಿ ಬೇರಾರೂ ಅಲ್ಲ, ಕ್ಷುಲ್ಲಕವಾದ ನರಿ! ನಮ್ಮನ್ನು ವಂಚಿಸಿ ರಾಜನಂತೆ ಮೆರೆದಿದ್ದಾನಲ್ಲ!’ ಎಂದು ಕೆರಳಿ ಕೆಂಡವಾದವು.
ಸಿಂಹವು ಒಂದೇ ಏಟಿಗೆ ನರಿಯ ಮೇಲೆ ಎರಗಿ ಅದನ್ನು ಸೀಳಿ ಕೊಂದಿತು. ಬದುಕಿನಲ್ಲಿ ಕೇವಲ ಹೊರಗಿನ ಬಣ್ಣ, ಆಡಂಬರ, ವೇಷಭೂಷಣ ಅಥವಾ ಸುಳ್ಳು ಪ್ರಚಾರದಿಂದ ಹೆಚ್ಚು ಕಾಲ ಮೆರೆಯಲು ಸಾಧ್ಯವಿಲ್ಲ. ಹುಸಿ ಮುಖವಾಡಗಳಿಂದ ಜಗತ್ತನ್ನು ಕೆಲಕಾಲ ಯಾಮಾರಿಸಬಹುದೇ ಹೊರತು, ಅಂತರಂಗದ ಸತ್ಯ ಮತ್ತು ನಮ್ಮ ಮೂಲ ಸ್ವಭಾವವನ್ನು ಶಾಶ್ವತವಾಗಿ ಮುಚಿ ಡಲು ಸಾಧ್ಯವಿಲ್ಲ.
ಸಂಸ್ಕೃತದ ಸುಭಾಷಿತ ಒಂದಿದೆ ‘ಪ್ರಕೃತಿಯಾಂತಿ ಭೂತಾನಿ ನಿಗ್ರಹಃ ಕಿಂ ಕರಿಷ್ಯತಿ’ ಎಂದು. ಅಂದರೆ ಪ್ರತಿಯೊಂದು ಜೀವಿಯ ಮೂಲ ಪ್ರಕೃತಿ ಅಥವಾ ಗುಣವು ತಾನಾಗಿಯೇ ಪ್ರಕಟವಾಗುತ್ತದೆ, ಕೃತಕ ನಿಯಂತ್ರಣ ಅದನ್ನು ಎಷ್ಟು ದಿನ ತಾನೇ ತಡೆದೀತು? ನಮ್ಮ ಮೂಲ ಅಸ್ಮಿತೆ, ಸಂಸ್ಕೃತಿ ಮತ್ತು ಪ್ರಾಮಾಣಿಕತೆಯನ್ನು ಮರೆತು ಪರರ ಮುಂದೆ ಕಪಟ ಪ್ರತಿಷ್ಠೆ ಪ್ರದರ್ಶಿಸುವಾಗ ಮುಂಬ ರುವ ಅಪಮಾನದ ಬಗ್ಗೆ ಕೂಡ ನಮಗೆ ಅರಿವಿರಬೇಕು.
ಇಂದಿನ ಜಂಜಾಟದ ಬದುಕಿನಲ್ಲಿ ಸಾಮಾಜಿಕ ಮಾಧ್ಯಮಗಳ ಹುಸಿ ಮೆರಗು ಮತ್ತು ಡಂಭಾಚಾರಕ್ಕೆ ಮಾರುಹೋಗದೆ, ಮಕ್ಕಳಿಗೆ ಸಹಜತೆ, ಪ್ರಾಮಾಣಿಕತೆ ಮತ್ತು ಆತ್ಮವಿಶ್ವಾಸದಿಂದ ಬದುಕುವ ಮೌಲ್ಯವನ್ನು ಕಲಿಸುವುದು ಅತ್ಯಗತ್ಯ.