ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hosuru Rathnakar Shetty Column: ಹಸನಾಗುವುದೇ ಸಹಕಾರಿ ಸಂಸ್ಥೆಗಳ ರಹದಾರಿ ?

ಗುಜರಾತಿನ ಏಳು ಬಡ ಮಹಿಳೆಯರಿಂದ ಆರಂಭಗೊಂಡ ‘ಲಿಜ್ಜತ್ ಪಾಪಡ್’ ಇಂದು ವಾರ್ಷಿಕ 20000 ಕೋಟಿ ರುಪಾಯಿಗೂ ಮಿಗಿಲಾದ ವ್ಯವಹಾರ ಮಾಡುತ್ತಿದ್ದರೆ, ಗುಜರಾತಿನ ಮತ್ತೊಂದು ಬ್ರ್ಯಾಂಡ್ ಎನಿಸಿಕೊಂಡಿರುವ ‘ಅಮುಲ್’ ಇವತ್ತು ಹೈನು ಉತ್ಪನ್ನಗಳ ವಿಷಯದಲ್ಲಿ ಮನೆ ಮಾತಾಗಿದೆ.

ಪ್ರತಿಸ್ಪಂದನ

ಹೊಸೂರು ರತ್ನಾಕರ ಶೆಟ್ಟಿ

‘ಸಹಕಾರ’ ಅಂಕಣದಲ್ಲಿ (ನ.15) ಪ್ರಕಟವಾದ ಲಕ್ಷೀಪತಯ್ಯ ಅವರ ‘ಸಹಕಾರ ಸಪ್ತಾಹದ ಮಹತ್ವ’ ಬರಹವು ಸಕಾಲಿಕವಾಗಿ ಮೂಡಿ ಬಂದಿದೆ. ಸಹಕಾರಿ ತತ್ವದ ಪರಿಕಲ್ಪನೆ ಹಾಗೂ ಅದಕ್ಕಾಗಿ ಶ್ರಮಿಸಿದ ಅಂದಿನ ಕೃಷಿ ಮಂತ್ರಿ ಎಂ.ವಿ. ಕೃಷ್ಣಪ್ಪ ಅವರು 1952ರಲ್ಲಿ ಅಂದಿನ ಪ್ರಧಾನಿ ನೆಹರುರವರ ವಿಶ್ವಾಸ ಗಳಿಸಿ, ವಿದೇಶಗಳಿಂದ ಹೊಸ ತಳಿಗಳ ಹಸುಗಳನ್ನು ತಂದು ಭಾರತದ ರೈತರಿಗೆ ಪರಿಚಯಿಸಿ, ಸಹಕಾರಿ ತತ್ವದ ಮೂಲಕ ಕ್ಷೀರೋತ್ಪನ್ನ ಕ್ರಾಂತಿಗೆ ಮುನ್ನುಡಿ ಬರೆದಿರುವುದು ಈಗ ಇತಿಹಾಸ.

ಪ್ರಾಯಶಃ, ರೈತರ ಬಗೆಗಿನ ಎಂ.ವಿ.ಕೃಷ್ಣಪ್ಪ ಅವರ ಕಾಳಜಿ ಅಥವಾ ಉತ್ಸಾಹವು ತದನಂತ ರದ ನಮ್ಮ ಜನನಾಯಕರಲ್ಲಿ ಕಾಣೆಯಾಗಿರುವುದರ ಪರಿಣಾಮ, ಸುಮಾರು ೭ ದಶಕಗಳ ನಂತರವೂ ಸಹಕಾರ ಕ್ಷೇತ್ರವು ಉದ್ದೇಶಿತ ಗುರಿ ಸಾಧನೆಯಲ್ಲಿ ವಿಫಲವಾಗಿದೆ ಎಂದೇ ಹೇಳಬಹುದು.

ಸದಾ ಮುಂಗಾರಿನ ಜತೆ ಗುದ್ದಾಡಿಯೇ ಬದುಕಬೇಕಾದ ರೈತರ ಆರ್ಥಿಕತೆಯು ಎಂದೂ ಸ್ಥಿರವಾಗಿರದು ಎನ್ನುವ ದೂರ ದೃಷ್ಟಿಯಿಂದೇ ಇರಬೇಕು ಅಂದಿನ ನೇತಾರರು ಸಹಕಾರಿ ಪರಿಕಲ್ಪನೆಯನ್ನು ಪರಿಚಯಿಸಿದ್ದು.

‘ಎಲ್ಲರಿಗಾಗಿ ನಾನು, ನನಗಾಗಿ ಎಲ್ಲರೂ’ ಎನ್ನುವ ಸಹಕಾರಿ ತತ್ವವು ಗ್ರಾಮೀಣ ಜನತೆಯ ಆರ್ಥಿಕ ಅಭಿವೃದ್ಧಿಯ ರಹದಾರಿಯಾಗಬಲ್ಲ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿದ್ದವು. ಚದುರಿ ಹೋಗಿರುವ ರೈತರು, ವಿಶೇಷವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರ ಕೃಷಿ ಚಟು ವಟಿಕೆಗಳಿಗೆ ಬೇಕಾದ ಬೀಜ, ರಸಗೊಬ್ಬರವನ್ನು ಒದಗಿಸುವಲ್ಲಿ ಸಹಕಾರ ವ್ಯವಸ್ಥೆಯು ನೆರ ವಾಗಬಲ್ಲದು.

ಇದನ್ನೂ ಓದಿ: Hosur Rathnakar Shetty Column: ಮೇಕಿಂಗ್‌ ದಿ ಸ್ವರ್ಗ ಗ್ರೇಟ್‌ ಅಗೇನ್

ಮಾತ್ರವಲ್ಲ, ಶೋಷಣೆಗೆ ಒಳಗಾಗುತ್ತಿರುವ ರೈತರಿಗೆ ನೆರವು ನೀಡಿ, ಮಧ್ಯವರ್ತಿಗಳ ಪಾಲಾಗುತ್ತಿರುವ ಅಧಿಕ ಲಾಭಾಂಶವನ್ನು ಅವರಿಗೆ ಕೊಡಿಸುವಲ್ಲಿ, ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವಲ್ಲಿ ಈ ವ್ಯವಸ್ಥೆಯ ಸಾಂಕ ಶಕ್ತಿಯು ನೆರವಾಗಬಲ್ಲದು. ಹೀಗೆ ಸಹಕಾರ ತತ್ವದ ಮೂಲಕ ಯಶಸ್ಸಿನ ಉತ್ತುಂಗಕ್ಕೆ ಏರಿದವರ ಉದಾಹರಣೆಗಳು ಸಾಕ ಷ್ಟಿವೆ.

ಗುಜರಾತಿನ ಏಳು ಬಡ ಮಹಿಳೆಯರಿಂದ ಆರಂಭಗೊಂಡ ‘ಲಿಜ್ಜತ್ ಪಾಪಡ್’ ಇಂದು ವಾರ್ಷಿಕ 20000 ಕೋಟಿ ರುಪಾಯಿಗೂ ಮಿಗಿಲಾದ ವ್ಯವಹಾರ ಮಾಡುತ್ತಿದ್ದರೆ, ಗುಜರಾತಿ ನ ಮತ್ತೊಂದು ಬ್ರ್ಯಾಂಡ್ ಎನಿಸಿಕೊಂಡಿರುವ ‘ಅಮುಲ್’ ಇವತ್ತು ಹೈನು ಉತ್ಪನ್ನಗಳ ವಿಷಯದಲ್ಲಿ ಮನೆಮಾತಾಗಿದೆ. ಹಾಗೆಯೇ ಕರ್ನಾಟಕದ ಕೆಎಂಎಫ್ ಕೂಡ ‘ನಂದಿನಿ’ ಬ್ರ್ಯಾಂಡ್‌ನ ಮೂಲಕ ಮಾರುಕಟ್ಟೆಯಲ್ಲಿ ವಿಜೃಂಭಿಸಿ, ಕರ್ನಾಟಕದ ಸುಮಾರು 25 ಲಕ್ಷ ಬಡ ರೈತ ಕುಟುಂಬಗಳ ಪಾಲಿನ ಆಶಾಕಿರಣವಾಗಿ ಹೊರಹೊಮ್ಮಿದೆ. ‌

ಹೌದು, ಈ ಎಲ್ಲಾ ಸಂಸ್ಥೆಗಳೂ ಸಹಕಾರಿ ತತ್ವದ ಅಡಿಯಲ್ಲಿ ಉದಯಿಸಿ ಬೆಳೆದು ಮಿಂಚು ತ್ತಿರುವ ಧ್ರುವತಾರೆಗಳೇ. ಏಕೆಂದರೆ, ಇವು ಅಸಾಮಾನ್ಯ ಸಾಧನೆಯನ್ನು ಮಾಡಿರುವುದಷ್ಟೇ ಅಲ್ಲ, ಆರ್ಥಿಕ ಅಭಿವೃದ್ಧಿಯ ಸಂಪೂರ್ಣ ಫಲವನ್ನು, ಅಪಾರ ಸಂಖ್ಯೆಯ ಬಡಜನರಿಗೆ ಹಂಚುವ ಮೂಲಕ ಬಹು ಅಪೇಕ್ಷಿತ ‘ಆರ್ಥಿಕ ಒಳಗೊಳ್ಳುವಿಕೆ’ ಮತ್ತು ‘ಸಂಯೋಜಿತ ಬೆಳವಣಿಗೆ’ (Economic Inclusion & Inclusive Growth) ಎಂಬ ಪರಿಕಲ್ಪನೆಗಳಿಗೆ ವಿಶೇಷ ವ್ಯಾಖ್ಯಾನವನ್ನೂ ನೀಡಿವೆ.

hands R

ಇಂಥ ಯಶೋಗಾಥೆಗಳು ನಿರಂತರವಾಗಿ ಹರಿದು ಬರುತ್ತಿದ್ದರೆ, ಸಮಾಜದ ಹಾಗೂ ಗ್ರಾಮೀಣ ಆರ್ಥಿಕತೆಯ ಅಭಿವೃದ್ಧಿಗೆ ಟೊಂಕಕಟ್ಟಿ ಹೆಣಗಾಡುತ್ತಿರುವ ಪರಿಣತರೂ ನೆಮ್ಮದಿಯ ನಿಟ್ಟುಸಿರನ್ನು ಬಿಡುವಂತಾಗುತ್ತದೆ. ಆದರೆ ವಾಸ್ತವದಲ್ಲಿ ಬಹುತೇಕ ಸಹಕಾರಿ ಸಂಸ್ಥೆಗಳು ಸದಾ ಸಮಸ್ಯೆಯ ಸುಳಿಯಲ್ಲೇ ಒದ್ದಾಡುವುದು ನೇತಾರರ, ಆರ್ಥಿಕ ಪರಿಣತರ ನಿದ್ರೆಗೆಡಿಸುವಂತಾಗಿದೆ. ಹೀಗಾಗಿ, ಸಹಕಾರಿ ಸಂಸ್ಥೆಗಳ ಮೂಲಭೂತ ಸಮಸ್ಯೆಗಳತ್ತ ಒಂದಿಷ್ಟು ಗಮನಹರಿಸೋಣ:

ಬಂಡವಾಳದ ಕೊರತೆ: ಸಹಕಾರಿ ಸಂಸ್ಥೆಗಳು, ವಿಶೇಷವಾಗಿ ಹಣಕಾಸು ನಿರ್ವಹಣೆ ಮಾಡುವ ಸಂಘಗಳು ಬಂಡವಾಳದ ಕೊರತೆಯಿಂದ ಬಳಲುತ್ತಿವೆ. ‘ಚಿಕ್ಕದೇ ಚೊಕ್ಕದು’ ( small is beautiful) ಎನ್ನುವ ಕಾಲ ಬದಿಗೆ ಸರಿದಿದೆ. ಈಗ ಏನಿದ್ದರೂ ಬಲಾಢ್ಯ ಸಂಸ್ಥೆ ಗಳದ್ದೇ ಕಾರುಬಾರು. ಅಪಾರ ಪ್ರಮಾಣದ ಬಂಡವಾಳವನ್ನು ಸುರಿದು, ಇಂದಿನ ಲಾಭ- ನಷ್ಟಗಳ ಬಗ್ಗೆ ಚಿಂತಿಸದೆ, ಮಾರುಕಟ್ಟೆಯಲ್ಲಿ ಸ್ಥಿರವಾಗಿ ನೆಲೆಸಿ, ಮುಂಬರುವ ದಿನಗಳಲ್ಲಿ ಎಲ್ಲವನ್ನೂ ಬಾಚಿಕೊಳ್ಳುವ ಹಪಾಹಪಿಯು ಇಂದಿನ ಮಾರುಕಟ್ಟೆಯ ಟ್ರೆಂಡ್ ಎಂದೇ ಹೇಳಬಹುದು. ಆದರೆ, ಸಹಕಾರಿ ಸಂಸ್ಥೆಗಳ ಷೇರುದಾರರು ಸಾಮಾನ್ಯರಾಗಿರುವುದರಿಂದ, ಆ ಮಟ್ಟದ ಬಂಡವಾಳದ ಹರಿವು ಅಸಾಧ್ಯವೆಂದೇ ಹೇಳಬೇಕು.

ಪರಿಣತರ ಕೊರತೆ: ಈಗ ಎಲ್ಲಾ ವಸ್ತುಗಳು, ಸೇವೆಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧೆಗೆ ಇಳಿಯಬೇಕಾದ ಅನಿವಾರ್ಯತೆಯ ಹಂತಕ್ಕೆ ಬಂದು ಮುಟ್ಟಿದ್ದೇವೆ. ಹಾಗಾಗಿ, ನಾವು ಉತ್ಕೃಷ್ಟ ಗುಣಮಟ್ಟದ ವಸ್ತು/ಸೇವೆಗಳನ್ನು ಸೃಷ್ಟಿಸಬೇಕು. ಇದಕ್ಕಾಗಿ ವಿಶೇಷ ಪರಿಣತರ ದಂಡನ್ನು, ಅವರು ಕೇಳಿದಷ್ಟು ವೇತನ ನೀಡಿ, ಮಾರುಕಟ್ಟೆಯ ಸ್ಪರ್ಧಾ ಅಖಾಡಕ್ಕೆ ಇಳಿಯಬೇಕಾಗುತ್ತದೆ. ಆದರೆ ಇದು ನಮ್ಮ ಸಹಕಾರ ಸಂಘಗಳ ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯವೇ.

ಛಲವಿಲ್ಲದ ಕೈಂಕರ್ಯ: ನಮ್ಮಲ್ಲನೇಕರು ಸಹಕಾರಿ ತತ್ವದ ಮೂಲಮಂತ್ರವನ್ನೇ ಮರೆತಿರುತ್ತಾರೆ. ಹೀಗಾಗಿ, ‘ಎಲ್ಲರಿಗಾಗಿ ನಾನು’ ಎನ್ನುವುದು ತೆರೆಯ ಮರೆಗೆ ಸರಿದು, ‘ನನಗಾಗಿ ಎಲ್ಲರೂ’ ಏನಾದರೂ ಮಾಡಲು ಎನ್ನುವ ಸ್ವಾರ್ಥತೆ ನುಸುಳುತ್ತದೆ. ಆಗ ಸಾಂಕ ಸಾಧನೆಗೆ ಅಡ್ಡಿಯಾಗುವುದು ಸಹಜ. ಸಂಘ-ಸಂಸ್ಥೆಯ ಎಲ್ಲಾ ಪಾಲುದಾರರು ಉದ್ದೇಶಿತ ಗುರಿ ಸಾಧನೆಯತ್ತ ಸಾಗುವುದು ತುಸು ಕಷ್ಟವೇ ಸರಿ.

ಈಗಿನ ಉದ್ದಿಮೆ/ವ್ಯವಹಾರವೆಂದರೆ ಬರೀ ಹೂಡಿಕೆ ಒಂದೇ ಅಲ್ಲ, ಅದೊಂದು ತಪಸ್ಸು. ಅದಕ್ಕಾಗಿ ಹೂಡಿಕೆದಾರರ ಅವಿರತ ಶ್ರಮ, ತ್ಯಾಗ, ಅಪಮಾನ, ಸೋಲು, ಹತಾಶೆ ಎಲ್ಲ ವನ್ನೂ ಮೀರಿ ಬೆಳೆಯುವ ದೃಢಸಂಕಲ್ಪವಿರಬೇಕು. ಈ ಎಲ್ಲ ಗುಣಗಳನ್ನು ಸಮೂಹದ ಪಾಲುದಾರರಲ್ಲಿ ಕಾಣುವುದು ತುಸು ಕಷ್ಟವೇ ಸರಿ. ಇದು ಸಹಕಾರಿ ಸಂಸ್ಥೆಗಳ ಬೆಳವಣಿಗೆಗೆ ಮಾರಕವಾಗಬಹುದು.

ಅತಿಯಾದ ರಾಜಕೀಯ ಹಸ್ತಕ್ಷೇಪ: ಪ್ರಾಯಶಃ ಇದು ಸಹಕಾರಿ ಸಂಸ್ಥೆಗಳಿಗೆ ಅಂಟಿದ ಒಂದು ಘೋರಶಾಪವೆಂದೇ ಹೇಳಬಹುದು. ಯಾವುದೇ ಸಂಸ್ಥೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಪೂರ್ವನಿರ್ಧಾರಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಆಂತರಿಕ ಆಗುಹೋಗುಗಳ ಬಗ್ಗೆ ರಾಜಕಾರಣಿಗಳ ಅನವಶ್ಯಕ ಮೂಗುತೂರಿಕೆಯಿಂದ ಕ್ರಿಯಾಶೀಲತೆ ಮತ್ತು ವೃತ್ತಿಪರತೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ. ಸಂಘ-ಸಂಸ್ಥೆಗಳ ಮೇಲಿನ ತಮ್ಮ ಹಿಡಿತವನ್ನು ಮತ್ತಷ್ಟು ಗಟ್ಟಿಗೊಳಿಸಲು ರಾಜಕಾರಣಿಗಳು ಸದಾ ಇನ್ನಿಲ್ಲದ ಕಸರತ್ತನ್ನು ಮಾಡುತ್ತಲೇ ಇರುತ್ತಾರೆ.

ಸರಕಾರಿ ಸ್ವಾಮ್ಯದ ಸಹಕಾರಿ ಸಂಸ್ಥೆಗಳಲ್ಲಿ ಈ ರೀತಿಯ ಅತಿರೇಕಗಳಿಗೆ ಎಲ್ಲೆಯೇ ಇರುವುದಿಲ್ಲ. ಈ ಪಿಡುಗುಗಳನ್ನು ಮೀರಿ ಬೆಳೆಯುವ ಸಾಹಸ ತುಸು ಕಷ್ಟದ್ದೇ ಸರಿ.

ಆಂತರಿಕ ಲೆಕ್ಕಪರಿಶೋಧನೆಯ ಅಸಮರ್ಪಕತೆ: ಯಾವುದೇ ಸಂಸ್ಥೆಯಲ್ಲಿ ನಡೆಯ ಬಹುದಾದ ಆಂತರಿಕ ಕ್ರಿಯಾಲೋಪ ಗಳನ್ನು ಸಕಾಲಕ್ಕೆ ಪತ್ತೆಹಚ್ಚುವ ವ್ಯವಸ್ಥೆ ಇಲ್ಲ ದಿದ್ದಲ್ಲಿ, ಅಂಥ ಸಂಸ್ಥೆಯು ಬಹಳಷ್ಟು ಹಾನಿಯನ್ನು ಅನುಭವಿಸಬೇಕಾಗುತ್ತದೆ. ಇಲ್ಲಿ ಹಾನಿಯಾದ ಮೇಲೆ ಕಾರ್ಯಪ್ರವೃತ್ತರಾಗುವುದಕ್ಕಿಂತ, ಹಾನಿಯಾಗದಂತೆ ತಡೆಯಬಲ್ಲ ಸಮರ್ಥ, ಸಂವೇದನಾಶೀಲ ತಜ್ಞರ ತಂಡ ಕಾವಲಾಗಿರಬೇಕು. ಇದಕ್ಕಾಗಿ ಸಂಸ್ಥೆಯು ಅಧಿಕ ವೆಚ್ಚವನ್ನು ಭರಿಸಲು ಶಕ್ತವಾಗಿರಬೇಕು. ಆದರೆ ನಮ್ಮ ಸಹಕಾರಿ ಸಂಸ್ಥೆಗಳು ಆ ಪರಿಯ ಆರ್ಥಿಕ ಸದೃಢತೆಯನ್ನು ಹೊಂದಿರುವುದಿಲ್ಲ.

ಬಹಳಷ್ಟು ಸಂದರ್ಭಗಳಲ್ಲಿ ‘ಊರು ಕೊಳ್ಳೆ ಹೊಡೆದ ನಂತರ ದಿಡ್ಡಿಬಾಗಿಲು ಹಾಕಿದಂತೆ’ ಬಹಳಷ್ಟು ಹಾನಿಯ ನಂತರ ಸಂಸ್ಥೆಗಳು ಕ್ರಮಕ್ಕೆ ಮುಂದಾಗುತ್ತವೆ. ಹೀಗೆ ಸಾಲು ಸಾಲು ಸಮಸ್ಯೆಗಳ ನಡುವೆ ಅಲ್ಲಲ್ಲಿ ಆಶಾ ಕಿರಣಗಳು ಗೋಚರಿಸುವ ಬಗೆಗಿನ ಪ್ರಬಲ ನಂಬಿಕೆ ಯೊಂದಿಗೆ ಮುನ್ನುಗ್ಗಿ, ‘ಅಮುಲ್’, ‘ಕೆಎಂಎಫ್’ಗಳಂಥ ಬಲಾಢ್ಯ ಸಹಕಾರಿ ಸಂಸ್ಥೆಗಳನ್ನು ಕಟ್ಟಲು ಸರಕಾರಿ ವ್ಯವಸ್ಥೆಯು ಉತ್ಸಾಹಿ ಉದ್ದಿಮೆದಾರರ ಜತೆ ಸಮರ್ಪಕ ಭಾವದೊಂದಿಗೆ ಕೈಜೋಡಿ ಸಲು ಇದು ಸಕಾಲ.‌

(ಲೇಖಕರು ಹವ್ಯಾಸಿ ಬರಹಗಾರರು)