ಮೊನ್ನೆ ಬೆಳಗ್ಗೆ ವಾಕಿಂಗ್ ಹೋದಾಗ ನನ್ನ ಸ್ನೇಹಿತರ ಮಗ ಹರ್ಷ ಸಿಕ್ಕಿ, 'ಅಂಕಲ್, ನಿನ್ನೆ ನೀವು ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಭೇಟಿ ಮಾಡಿದ್ದರ ಉದ್ದೇಶವೇನು? ಅವರೊಂದಿಗೆ ಏನು ಚರ್ಚೆಯಾಯ್ತು? ನಿಮ್ಮ ಪೋಸ್ಟ್‌ನಲ್ಲಿ ಆ ಯಾವ ವಿವರಗಳೂ ಇರಲಿಲ್ಲ, ಅದಕ್ಕೆ ಕೇಳಿದೆ' ಎಂದು ಅತ್ಯಂತ ಸಹಜವಾಗಿ, ಆದರೆ ಕುತೂಹಲದಿಂದ ಕೇಳಿದಾಗ ನನಗೆ ನಿಜಕ್ಕೂ ಸಂತೋಷವಾಯಿತು. ಪಿಯುಸಿ ಓದುತ್ತಿರುವ ಆ ಯುವಕನಿಗೆ ಇರುವ ಕನಿಷ್ಠ ಸಾಮಾನ್ಯ ಜ್ಞಾನ ಮತ್ತು ಸೌಜನ್ಯ, ನಮ್ಮ ಸಾಮಾಜಿಕ ಜಾಲತಾಣಗಳಲ್ಲಿ ‘ಬುದ್ಧಿಜೀವಿ’ಗಳಂತೆ ಆಡುವ, ದಿನವಿಡೀ ಕಮೆಂಟ್ ಬಾಕ್ಸ್‌ನಲ್ಲಿ ಕಾಯ್ದು ಕುಳಿತುಕೊಳ್ಳುವ ಎಷ್ಟೋ ಜನ ಅವಿವೇಕಿಗಳಿಗೆ ಇಲ್ಲವಲ್ಲ ಅನಿಸಿತು. ಅದಕ್ಕೂ ಒಂದು ದಿನ ಮುಂಚೆ, 'ನಿನ್ನೆ ನಾನು ನೂತನ ಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ, ಅಭಿನಂದಿಸಿ, ಶುಭಕೋರಿದ ಕ್ಷಣ' ಎಂದು ಬರೆದು ಕೆಲವು ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದೆ. ಆ ಪೋಸ್ಟಿಗೆ ಅನೇಕರು ತೀರಾ ಅಸಭ್ಯವಾಗಿ, ಕೆಟ್ಟದಾಗಿ ಕಮೆಂಟ್ ಮಾಡಿದ್ದರು. ಅವನ್ನು ನೋಡಿದಾಗ, ಫೇಸ್‌ಬುಕ್ ಇಂದು ಕೆಲವರ ಪಾಲಿಗೆ ‘ಸಾರ್ವಜನಿಕ ಮೂತ್ರಿ’ಯಾಗಿದೆ ಎನ್ನುವುದು ಸ್ಪಷ್ಟ ವಾಯಿತು.
ತುರ್ತಾಗಿ ಉಚ್ಚೆ ಬಂದಾಗ ತಡೆದುಕೊಳ್ಳಲಾಗದೇ, ಎಲ್ಲೆಂದರಲ್ಲಿ ನಿಂತು ಹಗುರಾಗುವ ಆತುರ ಕೆಲವರಿಗಿರುತ್ತದೆ. ಇನ್ನು ಕೆಲವರಂತೂ ತಡೆದುಕೊಳ್ಳಲಾಗದೇ ಚಡ್ಡಿಯೊಳಗೇ ಒದ್ದೆ ಮಾಡಿ ಕೊಳ್ಳುತ್ತಾರೆ. ಇವತ್ತಿನ ಫೇಸ್‌ಬುಕ್ ಕಮೆಂಟಿಗರೂ ಹೆಚ್ಚು-ಕಡಿಮೆ ಇದೇ ಬೇನೆಯಿಂದ ಬಳಲು ತ್ತಿದ್ದಾರೆ. ಯಾರೋ ಒಬ್ಬರು ಒಂದು ಪೋಸ್ಟ್ ಹಾಕಿದರೆ ಸಾಕು, ಅದರ ಹಿನ್ನೆಲೆ ಏನು, ಉದ್ದೇಶ ವೇನು, ಸೌಜನ್ಯದ ಭೇಟಿಯೋ ಅಥವಾ ವೃತ್ತಿಪರ ಭೇಟಿಯೋ ಎನ್ನುವುದನ್ನು ಯೋಚಿಸುವ ಕನಿಷ್ಠ ತಾಳ್ಮೆಯೂ ಇವರಿಗಿರುವುದಿಲ್ಲ. ಒಳಗಿರುವ ‘ಕಮೆಂಟ್ ಬೇನೆ’ ತಡೆಯಲಾರದೇ ಧಾವಿಸಿ ಬಂದು, ತಮಗೆ ತೋಚಿದ ವಿಕೃತಿಯನ್ನು ಅಲ್ಲಿ ಕಾರಿ, ನಿರಾಳವಾಗಿ ಮುನ್ನಡೆಯುತ್ತಾರೆ. ಒಮ್ಮೆ ಆ ಬೇನೆ ತೀರಿಸಿಕೊಂಡರೆ ಅವರು ಜಗತ್ತನ್ನೇ ಗೆದ್ದಷ್ಟು ನಿರಾಳ, ವಿಕರಾಳ!
ಇದನ್ನೂ ಓದಿ: Vishweshwar Bhat Column: ಖಾದ್ರಿ ಕಪ್ರ ಎಡಿಟರ್ ಆಗಿದ್ದು ಹೇಗೆ ?
ಒಬ್ಬ ಪತ್ರಕರ್ತ ಅಥವಾ ಸಾರ್ವಜನಿಕ ವ್ಯಕ್ತಿ ಮುಖ್ಯಮಂತ್ರಿಯಂತಹ ಅತ್ಯುನ್ನತ ಸ್ಥಾನದಲ್ಲಿರು ವವರನ್ನು ಭೇಟಿಯಾದಾಗ, ಅದರ ಹಿಂದೆ ಕೇವಲ ‘ವ್ಯಕ್ತಿಗತ ಭೇಟಿ’ಯ ಆಯಾಮವಷ್ಟೇ ಇರುವುದಿಲ್ಲ. ಪ್ರಜಾಪ್ರಭುತ್ವದ ಸುದೀರ್ಘ ಪರಂಪರೆಯಲ್ಲಿ, ಹೊಸದಾಗಿ ಅಧಿಕಾರ ವಹಿಸಿಕೊಂಡ ಜನಪ್ರತಿನಿಧಿಯನ್ನು ಗೌರವಿಸುವುದು, ಅಭಿನಂದಿಸುವುದು ಮತ್ತು ಶುಭಕೋರುವುದು ಕನಿಷ್ಠ ಸಾಂಸ್ಥಿಕ ಸೌಜನ್ಯ ಹಾಗೂ ರಾಜತಾಂತ್ರಿಕ ಶಿಷ್ಟಾಚಾರದ ಭಾಗವಾಗಿರುತ್ತದೆ. ಸಮಾಜದ ನಾಡಿ ಮಿಡಿತವನ್ನು ಅರಿಯುವ, ಸುದ್ದಿಯ ಮೂಲಗಳನ್ನು ಹುಡುಕುವ ಪತ್ರಕರ್ತನಿಗೆ ಇಂತಹ ಭೇಟಿಗಳು ವೃತ್ತಿಪರ ಜವಾಬ್ದಾರಿಯಷ್ಟೇ ಸಹಜ ಪ್ರಕ್ರಿಯೆ. ಆದರೆ, ಕಮೆಂಟ್ ಬಾಕ್ಸ್‌ನಲ್ಲಿ ಕಾಯ್ದು ಕುಳಿತುಕೊಳ್ಳುವ ಅರೆಬೆಂದ ಜೀವಿಗಳಿಗೆ ಈ ಸೌಜನ್ಯವಾಗಲಿ, ಪ್ರಜಾಪ್ರಭುತ್ವದ ಆಯಾಮಗಳಾಗಲಿ ಅರ್ಥವಾಗುವುದೇ ಇಲ್ಲ. ಪ್ರತಿಯೊಂದು ಭೇಟಿಯ ಹಿಂದೆಯೂ ಯಾವುದೋ ವೈಯಕ್ತಿಕ ಲಾಭ, ಸ್ವಾರ್ಥದ ಲಾಬಿ ಅಥವಾ ನಿಗೂಢ ಒಪ್ಪಂದಗಳು ಅಡಗಿವೆ ಎಂದು ಕಲ್ಪಿಸಿಕೊಳ್ಳುವುದು ಇವರಿಗೆ ಅಂಟಿರುವ ಮಾನಸಿಕ ರೋಗ. ತಮ್ಮ ಆಲೋಚನೆಗಳೇ ಸಂಕುಚಿತವಾಗಿರುವುದರಿಂದ, ಜಗತ್ತಿನ ಎಲ್ಲ ಪ್ರಕ್ರಿಯೆಗಳನ್ನೂ ತಮ್ಮದೇ ಸಣ್ಣತನದ ತಕ್ಕಡಿಯಲ್ಲಿ ತೂಗಲು ಇವರು ಯತ್ನಿಸುತ್ತಾರೆ.ತನ್ನ ಕನ್ನಡಕಕ್ಕೆ ಯಾವ ಬಣ್ಣವಿದೆಯೋ, ಇಡೀ ಪ್ರಪಂಚ ಅದೇ ಬಣ್ಣದಲ್ಲಿದೆ ಎಂದು ಭಾವಿಸುವ ಮೂರ್ಖತನವಿದು.
ನನ್ನನ್ನು ಟೀಕಿಸಲಿ, ಪರವಾಗಿಲ್ಲ. ಆದರೆ ವಿಷಯವನ್ನು ಸರಿಯಾಗಿ ತಿಳಿದುಕೊಂಡು ಟೀಕಿಸ ಬೇಡವೇ? 'ಭಟ್ರೇ, ನೀವು ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಅವರ ನಿವಾಸ ದಲ್ಲಿ ಇಂದು ಭೇಟಿ ಮಾಡಿ, ಅಭಿನಂದಿಸಿ, ಶುಭಕೋರಿದ ಕ್ಷಣ ಎಂದಷ್ಟೇ ಬರೆದಿದ್ದೀರಿ. ಅಷ್ಟಕ್ಕೂ ನೀವು ಸಿಎಂ ಭೇಟಿ ಮಾಡಿದ್ದೇಕೆ? ಅದನ್ನೂ ತಿಳಿಸಿದ್ದರೆ ಒಳ್ಳೆಯದಿತ್ತು' ಎಂದು ಕೇಳಬೇಕೆಂದು ಒಬ್ಬೇ ಒಬ್ಬ ಕಮೆಂಟಿಗನಿಗೂ ಅನಿಸಲಿಲ್ಲ. ಅಂದರೆ ಕಮೆಂಟ್ ಮಾಡುವ ಮುನ್ನ ಈ ಕನಿಷ್ಠ ಸಂಗತಿಯ ಬಗ್ಗೆ ಸಹ ಯೋಚಿಸಲಿಲ್ಲ. ಆದರೆ, ಇಲ್ಲಿ ಯಾರಿಗೂ ವಿವರಗಳು ಬೇಕಾಗಿಲ್ಲ. ವಾಸ್ತವ ಮತ್ತು ಸತ್ಯವನ್ನು ತಿಳಿಯುವ ಆಸಕ್ತಿಯೂ ಇಲ್ಲ. ಅವರಿಗೆ ಬೇಕಿರುವುದು ಕೇವಲ ತೀರ್ಪು ನೀಡು ವುದು (Judgmental attitude) ಮತ್ತು ತಮ್ಮ ಮನಸ್ಸಿನ ಕಸವನ್ನು ಬೇರೆಯವರ ಅಂಗಳದಲ್ಲಿ ಸುರಿಯುವುದು ಮಾತ್ರ. ನನ್ನ ಸ್ನೇಹಿತರ ಮಗ ಹರ್ಷನಿಗಿರುವ ಕನಿಷ್ಠ ಜ್ಞಾನ ಈ ಕಮೆಂಟಿಗರಿಗೆ ಇಲ್ಲವಲ್ಲ ಎನಿಸಿತು.
ಸಾಮಾಜಿಕ ಜಾಲತಾಣಗಳು ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿರುವುದು ನಿಜ. ಆದರೆ ಆ ಸ್ವಾತಂತ್ರ್ಯ, ಎದುರಿಗಿರುವವರ ಆತ್ಮಗೌರವಕ್ಕೆ ಧಕ್ಕೆ ತರುವ ಅಥವಾ ಯಾವುದೇ ಆಧಾರವಿಲ್ಲದೇ ಕೆಟ್ಟದಾಗಿ ಕಮೆಂಟ್ ಮಾಡುವ ಹಕ್ಕನ್ನು ನೀಡಿಲ್ಲ. ಇವತ್ತು ಫೇಸ್‌ಬುಕ್‌ನಲ್ಲಿ ಸಕ್ರಿಯರಾಗಿರುವ ಬಹುತೇಕರಿಗೆ ‘ಮಾಧ್ಯಮ ಸಾಕ್ಷರತೆ’ (Media Literacy) ಎನ್ನುವುದೇ ಇಲ್ಲ. ಒಂದು ಫೋಟೋ ನೋಡಿದ ತಕ್ಷಣ ಅದರ ಹಿಂದೆ ಇರಬಹುದಾದ ನೂರಾರು ಕಥೆಗಳನ್ನು ಕಲ್ಪಿಸಿಕೊಳ್ಳುವ ಕಲ್ಪನಾಶಕ್ತಿ ಇವರ ವಿಕೃತ ಮನಸ್ಸಿಗೆ ಇರಬಹುದು. ದುರ್ದೈವವೆಂದರೆ, ಇವರಿಗೆ ಸತ್ಯವನ್ನು ಗ್ರಹಿಸುವ ವಿವೇಚನೆ ಇರುವುದಿಲ್ಲ. ಎದುರಿಗೆ ಸಿಕ್ಕಾಗ ಹಲ್ಲು ಕಿರಿಯುತ್ತಾ, 'ಸಾರ್ ನಿಮ್ಮ ಬರಹ ಸೂಪರ್, ನಿಮ್ಮ ವ್ಯಕ್ತಿತ್ವ ಅದ್ಭುತ' ಎನ್ನುವವರೇ ಫೇಸ್‌ಬುಕ್‌ನ ಯಾವುದೋ ನಕಲಿ ಅಕೌಂಟ್‌ಗಳ ಅಥವಾ ಅನಾಮಧೇಯ ಹೆಸರಿನ ಹಿಂದೆ ಅಡಗಿ ಕುಳಿತು ಇಂಥ ಕಮೆಂಟ್‌ಗಳನ್ನು ಹಾಕುತ್ತಾರೆ. ಕಣ್ಣಿಗೆ ಕಾಣದ ಪರದೆಯ ಹಿಂದೆ ಕುಳಿತು ಯಾರಿಗೆ ಬೇಕಾದರೂ ಕಲ್ಲು ಹೊಡೆಯಬಹುದು ಎನ್ನುವ ಧೈರ್ಯ ಇವರನ್ನು ಇಷ್ಟು ಉದ್ಧಟರನ್ನಾಗಿ ಮಾಡಿರುತ್ತದೆ. ನಾನು ಹತ್ತಾರು ಸಮಾರಂಭಗಳಿಗೆ ಹೋದಾಗ, ನನ್ನೊಂದಿಗಿರುವ ನನ್ನ ಹಿತೈಷಿಗಳು ಇಂಥ ವ್ಯಕ್ತಿಗಳ ಬಗ್ಗೆ ಹತ್ತಾರು ಬಾರಿ ಎಚ್ಚರಿಸಿದ್ದಿದೆ. ಆದರೂ ನಾನು ನನ್ನ ಸಹಜ ಗುಣದೊಂದಿಗೆ ಅವರ ಜತೆ ನನ್ನ ಸಭ್ಯತೆ ಕಾಯ್ದುಕೊಂಡಿದ್ದೇನೆ, ಇರಲಿ.
ವಾಸ್ತವವಾಗಿ, ಒಬ್ಬ ವ್ಯಕ್ತಿಯ ಫೇಸ್‌ಬುಕ್ ಪೋಸ್ಟ್ ಎನ್ನುವುದು ಆತನ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಮತ್ತು ವೈಯಕ್ತಿಕ ಡೈರಿ. ಅದರಲ್ಲಿ ಏನನ್ನು ಹಾಕಬೇಕು, ಎಷ್ಟು ವಿವರಗಳನ್ನು ನೀಡಬೇಕು ಎನ್ನುವುದು ಆ ಪೋಸ್ಟ್ ಹಾಕುವವರ ವಿವೇಚನೆಗೆ ಬಿಟ್ಟದ್ದು. ಪ್ರತಿಯೊಂದು ಭೇಟಿಯ ಸೂಕ್ಷ್ಮ ವಿವರಗಳನ್ನು, ಚರ್ಚಿಸಿದ ರಾಜಕೀಯ ಅಥವಾ ವೈಯಕ್ತಿಕ ವಿದ್ಯಮಾನಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಸಾಧ್ಯವಿರುವುದಿಲ್ಲ. ಕೆಲವು ಭೇಟಿಗಳು ಕೇವಲ ಸೌಜನ್ಯದ ಭೇಟಿಗಳಾಗಿದ್ದರೂ, ಅದರ ಹಿಂದೆ ಯಾವುದೇ ಗುಪ್ತ ಕಾರ್ಯಸೂಚಿ (Hidden Agenda) ಇರುವುದಿಲ್ಲ. ಆದರೆ, ಇವತ್ತಿನ ದಿನಗಳಲ್ಲಿ ಸೌಜನ್ಯ ಎನ್ನುವ ಪದವೇ ಮರೆತುಹೋಗಿರುವುದರಿಂದ, ಪ್ರತಿಯೊಂದರಲ್ಲೂ ಸಂಚು ಅಥವಾ ನಂಜು ಹುಡುಕುವ ಹುಚ್ಚು ಹೆಚ್ಚಾಗಿದೆ.
ಸಂಪಾದಕನಾದವನು ಮುಖ್ಯಮಂತ್ರಿ ಸೇರಿದಂತೆ, ಸಮಾಜದ ಎಲ್ಲ ವರ್ಗಗಳ ಜನರೊಂದಿಗೆ ಬೆರೆಯಬೇಕು, ಸಾಮಾನ್ಯರನ್ನೂ ಭೇಟಿಯಾಗಬೇಕು ಎಂದು ಭಾವಿಸಿದವನು ನಾನು ಮತ್ತು ಅದರಂತೆ ನಡೆಯುತ್ತಾ ಬಂದವನು. ವಾರದಲ್ಲಿ ನಾನು ಕನಿಷ್ಠ ಮೂರು ಕಾರ್ಯಕ್ರಮ ಗಳಲ್ಲಾದರೂ ಭಾಗವಹಿಸುತ್ತೇನೆ. ಸಂಪಾದಕರು ಇರಬೇಕಾದುದೇ ಹಾಗೆ. ಅದು ನನ್ನ 'ಬ್ರಾಂಡ್ ಆಫ್ ಜರ್ನಲಿಸಂ' ಕೂಡ. ಅದು ಬೇರೆಯವರಿಗೆ ತಪ್ಪಾಗಿ ಕಂಡರೆ ಅದು ಅವರ ಸಮಸ್ಯೆ. ರಾಜಕಾರಣಿಗಳ ಜತೆ ಸಂಪರ್ಕವೂ ಇರಬೇಕು, ಸಂವಾದವೂ ಇರಬೇಕು, ಪ್ರಸಂಗ ಬಂದಾಗ ಸಂಘರ್ಷಕ್ಕೂ ಸಿದ್ಧವಾಗಿರಬೇಕು. ಇವೆಲ್ಲವುಗಳ ಆಚೆ, ಎದುರಿಗೆ ಸಿಕ್ಕಾಗ ಉಭಯಕುಶಲೋಪರಿ ವಿನಿಮಯ ಮಾಡಿಕೊಳ್ಳುವ ಮಾನವೀಯ ಗುಣವಿರಬೇಕು. ಮುಖ್ಯಮಂತ್ರಿಯನ್ನು ಭೇಟಿಯಾದ ಮಾತ್ರಕ್ಕೆ ಅವರೇನು ಹೆಗಲ ಮೇಲೆ ಹೊರಿಸಿ ಕಳಿಸುವುದಿಲ್ಲ. ಇಲ್ಲಿ ತನಕ ಯಾವ ಮುಖ್ಯಮಂತ್ರಿಯೂ ಹಾಗೆ ಮಾಡಿಲ್ಲ. ಪಿಯುಸಿ ಓದುತ್ತಿರುವ ಹರ್ಷನಿಗೆ ಇದ್ದ ಆ ವಿವೇಕ, ಜ್ಞಾನ ಮತ್ತು ಪ್ರಶ್ನಿಸುವ ಸರಿಯಾದ ವಿಧಾನ ಇವತ್ತಿನ ಕಮೆಂಟಿಗರಿಗೆ ಇಲ್ಲವಲ್ಲ? ತಿಳಿಯದ ವಿಷಯವನ್ನು ಗೌರವಯುತವಾಗಿ ಕೇಳಿ ತಿಳಿದುಕೊಳ್ಳುವ ಸೌಜನ್ಯ ನಮ್ಮಲ್ಲಿ ಬೆಳೆಯದಿದ್ದರೆ, ಈ ಸಾಮಾಜಿಕ ಜಾಲತಾಣಗಳು ಕೇವಲ 'ಸಾರ್ವಜನಿಕ ಮೂತ್ರಿ'ಗಳಾಗಿಯೇ ಉಳಿಯುತ್ತವೆ ಹೊರತು ಜ್ಞಾನದ ವೇದಿಕೆಗಳಾಗಲು ಸಾಧ್ಯವಿಲ್ಲ.
ಕಮೆಂಟ್ ಮಾಡುವ ಮುನ್ನ ಒಂದು ಕ್ಷಣ ಯೋಚಿಸಬೇಕು - 'ನಾನು ಬರೆಯುತ್ತಿರುವ ವಿಷಯ ಎಷ್ಟು ಸತ್ಯ? ನನ್ನ ಪ್ರಶ್ನೆಯಲ್ಲಿ ಸೌಜನ್ಯವಿದೆಯೇ? ಎದುರಿಗಿರುವ ವ್ಯಕ್ತಿಯ ಸ್ಥಾನ ಮತ್ತು ಗೌರವಕ್ಕೆ ನಾನು ಚ್ಯುತಿ ತರುತ್ತಿದ್ದೇನೆಯೇ? ನಾನು ಏನಾದರೂ ಹೊಸ ಸಂಗತಿಗಳನ್ನು ತಿಳಿಸುತ್ತಿದ್ದೇನೆಯೇ? ನನ್ನ ಕಮೆಂಟ್ ನಿಂದ ಯಾರಿಗಾದರೂ ಪ್ರಯೋಜನವಾಗುತ್ತಿದೆಯಾ? ಎಂದು.' ಈ ಕನಿಷ್ಠ ಪ್ರಜ್ಞೆಯೂ ಇಲ್ಲದೇ, ಕೇವಲ ತಮ್ಮ 'ಉಚ್ಚೆ ಬೇನೆ' ತೀರಿಸಿಕೊಳ್ಳಲು ಧಾವಿಸುವ ಅವಿವೇಕಿಗಳು, ಉಪರೇಟಿಗಳು ತಮ್ಮ ಅಸಲಿ ಬಣ್ಣವನ್ನು ಬಯಲು ಮಾಡಿಕೊಳ್ಳುತ್ತಾರೆ ಎಂಬುದೂ ಗೊತ್ತಿರುವು ದಿಲ್ಲ. ಬೇಸರದ ಅಂಶ ಅಂದ್ರೆ ಇಂಥ ಮನಸ್ಥಿತಿಯವರು ಸಾಮಾಜಿಕ ಜಾಲತಾಣವೆಂಬ ಸುಂದರ ಕೈತೋಟವನ್ನು ಗಬ್ಬೆಬ್ಬಿಸಿಬಿಟ್ಟಿದ್ದಾರೆ. ಇದು ಕೆಲವರು ಸಾಮಾಜಿಕ ಜಾಲತಾಣಗಳಿಂದ ವಿಮುಖರಾಗುವಂತೆ, ದೂರ ಸರಿಯುವಂತೆ ಮಾಡಿಬಿಟ್ಟಿದೆ. ಕೆಲವೊಮ್ಮೆ ನಾನು ನಾಳಿನ ಅಂಕಣದ ವಿಷಯವನ್ನು ಹಿಂದಿನ ರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತೇನೆ. ಆಗಲೇ ಬಿರುಗಾಳಿ ಎದ್ದುಬಿಡುತ್ತದೆ. ಕೆಲವರು ಆಗಲೇ ಚರ್ಚೆ ಆರಂಭಿಸಿಬಿಡುತ್ತಾರೆ. 'ನಾಳೆ ಬೆಳಗ್ಗೆ ಅಂಕಣ ಬರುವ ತನಕ ಕಾಯಬೇಕು, ಸಂಪೂರ್ಣ ಓದಿದ ನಂತರ ಪ್ರತಿಕ್ರಿಯಿಸಬೇಕು' ಎಂಬ ಕಾಮನ್ ಸೆನ್ಸ್ ಬೇಡವೇ? ತಕ್ಷಣ ಉಚ್ಚೆ ಹುಯ್ದು ಹಗುರಾಗಿಬಿಡಬೇಕು ಎಂಬ ಹಪಾಹಪಿ ಏಕೆ?
ಇತ್ತೀಚೆಗೆ ಫೇಸ್ ಬುಕ್ ನಲ್ಲಿ ಒಬ್ಬರು, ತಮ್ಮ ಎರಡನೇ ವಿವಾಹ ವಾರ್ಷಿಕೋತ್ಸವದ (ಪತ್ನಿಯೊಂದಿ ಗಿರುವ) ಫೋಟೋವನ್ನು ಹಂಚಿಕೊಂಡಿದ್ದರು. ಅನೇಕರು 'ನಿಮ್ಮ ದಾಂಪತ್ಯ ಹೀಗೆಯೇ ನೂರು ಕಾಲ ಸುಖವಾಗಿರಲಿ, ಶುಭಾಶಯಗಳು' ಎಂದು ಬರೆದಿದ್ದರು. ಪರಿಚಯ ಇಲ್ಲದಿದ್ದರೂ, ಸಂತಸದ ಕ್ಷಣಗಳಿಗೆ ಪ್ರತಿಕ್ರಿಯಿಸುವ ಸೌಜನ್ಯದ ರೀತಿ ಅದು. ಆದರೆ ಒಬ್ಬರು, 'ಫೋಟೋದಲ್ಲಿ ಮಾತ್ರ ನಗು, ಒಳಗಡೆ ಎಷ್ಟು ಜಗಳ ಆಡುತ್ತಾರೋ ಯಾರಿಗೆ ಗೊತ್ತು?' ಎಂದು ಕಾಮೆಂಟ್ ಮಾಡಿದ್ದರು. ಇನ್ನೊಬ್ಬರು, 'ಮುಂದಿನ ವರ್ಷ ಕಳೆಯುವುದರೊಳಗೆ ಡಿವೋರ್ಸ್ ಆಗದಿದ್ದರೆ ಸಾಕು' ಎಂದು ಬರೆದಿದ್ದರು. ಮತ್ತೊಬ್ಬರು, 'ಇನ್ನಾದರೂ ಹೆಂಡತಿಯನ್ನು ಸರಿಯಾಗಿ ನೋಡಿಕೋ' ಎಂದು ಪ್ರತಿಕ್ರಿಯಿಸಿದ್ದರು. ಇದೆಂಥ ವಿಕೃತ, ಹೀನ ಮನಸ್ಥಿತಿ!? ಇವರೆಲ್ಲರೂ ಮುಖವಾಡ ಧರಿಸಿದ ಫೇಕುಗಳು! ಮರೆಯಲ್ಲಿ ನಿಂತು ಕಲ್ಲು ಬಿಸಾಡುವವರು. ಬೇರೆಯವರ ಸಂತಸವನ್ನು ನೋಡಲಾಗ ದವರು.
ನಾನು ನೋಡಿದ ಇನ್ನೊಂದು ಪೋಸ್ಟ್. ಇತ್ತೀಚೆಗೆ ಒಬ್ಬರು ತಾವು ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ ಅಥವಾ ವೃತ್ತಿಪರ ಕಾರಣಗಳಿಗಾಗಿ ವಿಮಾನದ ಬ್ಯುಸಿನೆಸ್ ಕ್ಲಾಸ್ ನಲ್ಲಿ ಕುಳಿತು ಕಾಫಿ ಕುಡಿಯುತ್ತಿರುವ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ನನ್ನ ಸ್ನೇಹಿತ ಹರ್ಷನಂಥ ಮನಸ್ಥಿತಿಯವರೊಬ್ಬರು, 'ಅಂಕಲ್, ನಿಜವಾಗಿಯೂ ನಿಮ್ಮನ್ನು ನೋಡಿ ಖುಷಿಯಾಗುತ್ತಿದೆ. ನಾನೂ ನಿಮ್ಮ ಹಾಗೆ ಬ್ಯುಸಿನೆಸ್ ಕ್ಲಾಸ್ ಪ್ರಯಾಣ ಮಾಡಬೇಕು ಎನಿಸುತ್ತದೆ. ನಿಮ್ಮ ಸಾಧನೆ ಅನುಕರಣೀಯ' ಎಂದು ಬರೆದರೆ, ಮತ್ತೊಬ್ಬರು, 'ನೀವು ನನ್ನಂಥವರಿಗೆ ಪ್ರೇರಣೆಯಾಗಿದ್ದೀರಿ. ನಿಮ್ಮ ಸಾಧನೆ ನಮಗೆಲ್ಲರಿಗೂ ಸ್ಫೂರ್ತಿಯಾಗಲಿ' ಎಂದು ಬರೆದಿದ್ದರು. ಮತ್ಯಾರೋ 'ಸರ್, ಆ ವಿಮಾನದ ಇಂಜಿನಿಯರಿಂಗ್ ಹೇಗಿದೆ? ಅದರ ಲೆಗ್‌ರೂಮ್ ಕಂಫರ್ಟ್ ಹೇಗಿದೆ? ಬ್ಯುಸಿನೆಸ್ ಕ್ಲಾಸ್ ನಲ್ಲಿ ದೊರೆಯುವ ಸೌಲಭ್ಯಗಳೇನು?' ಎಂದು ಕೇಳಿದ್ದರು. ಆದರೆ 'ಉಚ್ಚೆ ಬೇನೆ' ತೀರಿಸಿಕೊಳ್ಳುವ ಮನಸ್ಥಿತಿಯವನೊಬ್ಬ, 'ಜನ ಇಲ್ಲಿ ತಿನ್ನೋಕೆ ಕೂಳಿಲ್ಲದೇ ಸಾಯು ತ್ತಿದ್ದಾರೆ, ನಿನಗೆ ಶೋಕಿ ಬೇಕಾ?' ಎಂದು ಬರೆದಿದ್ದ. ಅವನಂತೆ ಮತ್ತೊಬ್ಬ, 'ಇಷ್ಟೊಂದು ದುಡ್ಡು ಎಲ್ಲಿಂದ ಬಂತು? ಎಷ್ಟು ಜನರ ತಲೆ ಒಡೆದಿದ್ದಾನೋ? ಐಟಿ ರೈಡ್ ಆಗಬೇಕು ಇವರ ಮೇಲೆ' ಎಂದು ಕಾರಿಕೊಂಡಿದ್ದ.
ಸಾಮಾಜಿಕ ಜಾಲತಾಣದ ಕಮೆಂಟ್ ಬಾಕ್ಸ್‌ಗಳೆಂದರೆ ಇವತ್ತು ಗಿಜಿಗುಡುವ ಬಸ್ ನಿಲ್ದಾಣದ ಗೋಡೆಗಳಂತಾಗಿವೆ. ಅಲ್ಲಿ ಯಾರಿಗೂ ಪ್ರೀತಿಯಿಂದ ನೆಟ್ಟ ಹೂದಾನಿಯನ್ನು ನೋಡಿ ಮುಗುಳ್ನ ಗುವ ವ್ಯವಧಾನ ಯಾರಿಗೂ ಇರುವುದಿಲ್ಲ. ಎಲ್ಲರೂ ಎಲೆ ಅಡಕೆ ಹಾಕಿ ಪಿಚಕಾರಿ ಉಗುಳುವವರೇ. ಪ್ರತಿಯೊಬ್ಬನೂ ತನ್ನ ಹೆಗಲ ಮೇಲಿರುವ ಹತಾಶೆಯ ಮೂಟೆಯನ್ನು ಎಲ್ಲಿ ಇಳಿಸಬೇಕೆಂದು ಹುಡುಕುತ್ತಾ ಧಾವಿಸಿ ಬರುತ್ತಾನೆ. ಆತುರವಾಗಿ ಬಂದು ಕಮೆಂಟ್ ಬಾಕ್ಸ್‌ನೊಳಗೆ ನಾಲ್ಕು ಸಾಲುಗಳ ವಿಕೃತಿಯನ್ನು ಗೀಚಿ, ಕೈ ತೊಳೆದುಕೊಂಡು ಹೊರಟರೆ ಏನೋ ಸಮಾಧಾನ. ಒಳಗೆ ಮಡುಗಟ್ಟಿರುವ ಕೀಳರಿಮೆಯ ಮಳೆಯನ್ನು ಸುರಿಸಲು ಸಿಕ್ಕ ಬೇಕಾಬಿಟ್ಟಿ ಅವಕಾಶದಂತೆ ಇವತ್ತಿನ ವರ್ಚುವಲ್ ಜಗತ್ತು ಬದಲಾಗಿಹೋಗಿದೆ. Sad.
ಬದುಕಿನಲ್ಲಿ ಎಲ್ಲೋ ಸೋತವರು, ತಮಗೇ ಸಿಗಬೇಕಾಗಿದ್ದ ಬೆಳಕು ಬೇರೆಯವರ ಮೇಲೆ ಬಿದ್ದಾಗ ಸಹಿಸಲಾಗದವರು ಈ ಕಮೆಂಟ್ ಬಾಕ್ಸ್‌ನ ಕತ್ತಲೆಯಲ್ಲಿ ಮುಖ ಮುಚ್ಚಿಕೊಂಡು ಕುಳಿತಿರುತ್ತಾರೆ. ಯಾರೋ ಒಬ್ಬರು ತಮ್ಮ ಸಾಧನೆಯ ಫೋಟೋ ಹಾಕಿದರೆ, ಇವರಿಗೆ ಆ ಕ್ಷಣದ ಸೌಂದರ್ಯ ವಾಗಲಿ, ಅದರ ಹಿಂದಿನ ಕೃತಜ್ಞತೆಯಾಗಲಿ, ಪರಿಶ್ರಮವಾಗಲಿ ಕಾಣಿಸುವುದೇ ಇಲ್ಲ. ಬದಲಿಗೆ, ತಮ್ಮೊಳಗಿನ ಕೊಳಕನ್ನೆಲ್ಲ ಆ ಫೋಟೋದ ಅಡಿಯಲ್ಲಿ ಸುರಿದುಬಿಡುತ್ತಾರೆ. ಸತ್ಯ ಏನೆಂದು ತಿಳಿಯುವ ಹಂಬಲವಾಗಲಿ, ಹರ್ಷನಂಥ ಮುಗ್ಧ ಯುವಕನಿಗೆ ಇರುವ ಕನಿಷ್ಠ ಪ್ರಶ್ನಿಸುವ ಸೌಜನ್ಯವಾಗಲಿ ಇವರಿಗಿರುವುದಿಲ್ಲ. ಏಕೆಂದರೆ, ಇವರ ಕಣ್ಣುಗಳಿಗೆ ಪ್ರೀತಿಯ ಕನ್ನಡಕವಿಲ್ಲ, ಮೈಯೆಲ್ಲ ವಿಷ! ನಾವೆಲ್ಲೋ ಒಂಟಿಯಾಗುತ್ತಿದ್ದೇವೆ ಎನ್ನುವ ಭಯವೇ ಇವರನ್ನು ಇಷ್ಟೊಂದು ಕ್ರೂರಿಗಳನ್ನಾಗಿ ಮಾಡುತ್ತಿದೆಯಾ, ಗೊತ್ತಿಲ್ಲ... ಎದುರಿಗೆ ಸಿಕ್ಕಾಗ ತಲೆ ತಗ್ಗಿಸಿ ನಡೆಯುವ ಮನುಷ್ಯನೇ, ಮೊಬೈಲ್ ಪರದೆಯ ಹಿಂದೆ ಕುಳಿತಾಗ ಭಾರಿ ಕ್ರಾಂತಿಕಾರಿಯಂತೆ ಕಲ್ಲು ಹೊಡೆಯಲು ಶುರು ಮಾಡುತ್ತಾನೆ. ಈ ‘ಉಪರೇಟಿ’ಗಳಿಗೆ ಬೇರೆಯವರ ಖಾಸಗಿತನ, ಅವರ ಶ್ರಮ, ಅವರ ಸಾಧನೆ ಯಾವುದರ ಮೇಲೂ ಗೌರವವಿಲ್ಲ. ಇದು ತಂತ್ರಜ್ಞಾನದ ವೈಫಲ್ಯವಲ್ಲ, ನಮ್ಮೊಳಗಿನ ಕರುಣೆ ಮತ್ತು ಸಂಸ್ಕೃತಿ ದಿನದಿನಕ್ಕೂ ಬತ್ತಿ ಹೋಗುತ್ತಿರುವ ಸಂಕೇತ. ಕಮೆಂಟ್ ಬಾಕ್ಸ್ ಎಂಬುದು ಕನ್ನಡಿಯಿದ್ದಂತೆ. ಅದರಲ್ಲಿ ನಮಗೆ ಕಾಣುವುದು ಎದುರಿಗಿರುವವರ ಮುಖವಲ್ಲ, ಬದಲಿಗೆ ನಮ್ಮದೇ ಒಳಗಣ್ಣಿನ ಸೌಂದರ್ಯ ಅಥವಾ ವಿಕೃತಿ.
ಇಷ್ಟಾದರೂ ಬದುಕಿನ ಮೇಲಿನ ಭರವಸೆ ಕಳೆದುಕೊಳ್ಳಬೇಕಿಲ್ಲ. ಇಂಥ ವಿಕೃತ ಕಮೆಂಟ್‌ಗಳ ನಡುವೆಯೂ ಎಲ್ಲೋ ಒಂದು ಕಡೆ ಮಳೆಯ ಮೊದಲ ಹನಿಯಂತೆ ವಿವೇಕದ ಮಾತುಗಳು ಕೇಳಿಸುತ್ತಿರುತ್ತವೆ. ನಾವೆಲ್ಲರೂ ನಮ್ಮ ಬೆರಳ ತುದಿಯಲ್ಲಿ ಇಡೀ ಜಗತ್ತನ್ನು ಹಿಡಿದುಕೊಂಡಿದ್ದೇವೆ ನಿಜ, ಆದರೆ ನಮ್ಮ ಹೃದಯದಲ್ಲಿ ಕನಿಷ್ಠ ಸೌಜನ್ಯವನ್ನು ಇಟ್ಟುಕೊಳ್ಳಲು ಮರೆಯುತ್ತಿದ್ದೇವೆ. ಒಂದು ಒಳ್ಳೆಯ ಪೋಸ್ಟ್‌ನ ಕೆಳಗೆ ಕೆಟ್ಟದಾಗಿ ಕಮೆಂಟ್ ಮಾಡುವುದರಿಂದ ಎದುರಿಗಿರುವ ವ್ಯಕ್ತಿಯ ತೂಕವೇನೂ ಕಡಿಮೆಯಾಗುವುದಿಲ್ಲ, ಬದಲಿಗೆ ಹಾಗೆ ಬರೆದವರ ಮನೆಯ ಸಂಸ್ಕಾರ ಮತ್ತು ಅವರ ಒಳಗಿನ ಹತಾಶೆ ಜಗತ್ತಿನ ಮುಂದೆ ಬೆತ್ತಲಾಗುತ್ತದೆ. ಯಾರೋ ಕಷ್ಟಪಟ್ಟು ಕಟ್ಟಿದ ಗೋಡೆಯ ಮೇಲೆ ಕಸ ಚೆಲ್ಲಿ ಹೋಗುವ ಮನಸ್ಥಿತಿಯನ್ನು ಬಿಟ್ಟು, ಆ ಗೋಡೆಯ ಆಚೆಗಿನ ಸತ್ಯವನ್ನು ತಿಳಿಯುವ ಹಂಬಲ ನಮ್ಮದಾಗಬೇಕು. ಬದುಕು ತುಂಬಾ ದೊಡ್ಡದಿದೆ, ಅದನ್ನು ಕೇವಲ ಕಮೆಂಟ್ ಬಾಕ್ಸ್‌ನ ನಾಲ್ಕು ಗೋಡೆಗಳ ಮಧ್ಯೆ ಕುಳಿತು ದ್ವೇಷದ ಕಣ್ಣುಗಳಿಂದ ನೋಡುವುದಲ್ಲ ಎಂಬು ದನ್ನು ಈಗಾದರೂ ಅರಿಯಬೇಕಿದೆ. ಎದುರಿಗಿರುವ ವ್ಯಕ್ತಿಯನ್ನು ಗೌರವಿಸುವುದರಲ್ಲೇ ನಮ್ಮ ಆತ್ಮಗೌರವವೂ ಅಡಗಿದೆ ಎನ್ನುವುದನ್ನು ಮರೆಯದಿರೋಣ.