ಸಂಪಾದಕರ ಸದ್ಯಶೋಧನೆ
ಇಂದಿನ ತಾಂತ್ರಿಕ ಯುಗದಲ್ಲಿ ಮನುಷ್ಯ ಮತ್ತು ಮೊಬೈಲ್ ಫೋನ್ ನಡುವಿನ ಸಂಬಂಧ ಎಷ್ಟು ಗಾಢವಾಗಿದೆಯೆಂದರೆ, ಫೋನ್ ಇಲ್ಲದೇ ಒಂದು ಕ್ಷಣವೂ ಇರಲು ಸಾಧ್ಯವಿಲ್ಲ ಎಂಬಂತಾಗಿದೆ. ಈ ಅತಿಯಾದ ಅವಲಂಬನೆಯು ನಮ್ಮ ಮನಸ್ಸಿನ ಮೇಲೆ ಎಂಥ ಪರಿಣಾಮ ಬೀರಿದೆ ಎಂದರೆ, ಜೇಬಿನಲ್ಲಿ ಫೋನ್ ಇಲ್ಲದಿದ್ದರೂ ಅಥವಾ ಫೋನ್ ಸೈಲೆಂಟ್ ಆಗಿದ್ದರೂ ಅದು ‘ವೈಬ್ರೇಟ್’ ಆಗುತ್ತಿರಬಹುದು ಎಂಬ ಭ್ರಮೆ ನಮಗಾಗುತ್ತದೆ.
ವೈದ್ಯಕೀಯ ಮತ್ತು ಮಾನಸಿಕ ಜಗತ್ತಿನಲ್ಲಿ ಇದನ್ನು ‘ಫ್ಯಾಂಟಮ್ ವೈಬ್ರೇಶನ್ ಸಿಂಡ್ರೋಮ್’ ಅಥವಾ ‘ರಿಂಗ್ಟೋಕ್ಸಿಯಾ’ (Ringtoxia) ಎಂದು ಕರೆಯಲಾಗುತ್ತದೆ. ಏನಿದು ಫ್ಯಾಂಟಮ್ ವೈಬ್ರೇಶನ್ ಸಿಂಡ್ರೋಮ್? ‘ಫ್ಯಾಂಟಮ್’ ಎಂದರೆ ಭ್ರಮೆ ಅಥವಾ ಇಲ್ಲದಿರು ವುದು ಎಂದರ್ಥ.
ನಮ್ಮ ಜೇಬಿನಲ್ಲಿ ಅಥವಾ ಕೈಯಲ್ಲಿರುವ ಮೊಬೈಲ್ ಫೋನ್ ಯಾವುದೇ ನೋಟಿಫಿಕೇಶನ್ ಅಥವಾ ಕರೆ ಬರದಿದ್ದರೂ ವೈಬ್ರೇಟ್ ಆದಂತೆ ಭಾಸವಾಗುವುದೇ ಈ ಸಿಂಡ್ರೋಮ್. ಸಂಶೋಧನೆಗಳ ಪ್ರಕಾರ, ಶೇ.90 ರಷ್ಟು ಮೊಬೈಲ್ ಬಳಕೆದಾರರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಈ ಅನುಭವವನ್ನು ಪಡೆದಿರುತ್ತಾರೆ. ಇದು ಕೇವಲ ದೈಹಿಕ ಸ್ಪರ್ಶಕ್ಕೆ ಸಂಬಂಧಿಸಿದ್ದಲ್ಲ, ಬದಲಾಗಿ ನಮ್ಮ ಮಿದುಳು ನೀಡುವ ಒಂದು ‘ತಪ್ಪು ಸಂದೇಶ’.
ಇದನ್ನೂ ಓದಿ: Vishweshwar Bhat Column: ಗೋರಖಪುರದ ಗೀತಾ ಪ್ರೆಸ್
ನಮ್ಮ ಚರ್ಮವು ಅತಿ ಸೂಕ್ಷ್ಮವಾದ ಸಂವೇದಕಗಳನ್ನು ಹೊಂದಿದೆ. ಮೊಬೈಲ್ ಅನ್ನು ದೀರ್ಘಕಾಲದವರೆಗೆ ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ ಅಥವಾ ಸದಾ ಕೈಯಲ್ಲಿ ಹಿಡಿಯುವುದರಿಂದ, ನಮ್ಮ ಮಿದುಳು ಆ ಭಾಗದ ಸಣ್ಣ ಚಲನೆಯನ್ನೂ ಫೋನ್‌ನ ವೈಬ್ರೇಶನ್ ಎಂದು ಅರ್ಥೈಸಿಕೊಳ್ಳಲು ಅಭ್ಯಾಸ ಮಾಡಿಕೊಂಡಿರುತ್ತದೆ.
ಬಟ್ಟೆಯ ಘರ್ಷಣೆ, ಸ್ನಾಯುಗಳ ಸಣ್ಣ ಸೆಳೆತ ಅಥವಾ ಚರ್ಮದ ತುರಿಕೆಯನ್ನು ಮಿದುಳು ‘ಫೋನ್ ವೈಬ್ರೇಶನ್’ ಎಂದು ತಪ್ಪು ಗ್ರಹಿಕೆ ಮಾಡುತ್ತದೆ. ನಾವು ಯಾವಾಗಲೂ ಯಾರದೋ ಕರೆ ಅಥವಾ ಮೆಸೇಜ್ ನಿರೀಕ್ಷೆಯಲ್ಲಿದ್ದಾಗ (ಉದಾಹರಣೆಗೆ ಕೆಲಸದ ಒತ್ತಡ ಅಥವಾ ಪ್ರೇಮ ಪ್ರಕರಣಗಳಲ್ಲಿ), ಮಿದುಳು ಅತೀವ ಜಾಗರೂಕತೆಯಿಂದ ಇರುತ್ತದೆ. ಈ ಜಾಗರೂಕತೆ ಎಷ್ಟು ಹೆಚ್ಚಾಗುತ್ತದೆ ಎಂದರೆ, ಏನೂ ನಡೆಯದಿದ್ದರೂ ಏನೋ ಸಂಭವಿಸಿದೆ ಎಂಬ ಭ್ರಮೆಯನ್ನು ಸೃಷ್ಟಿಸುತ್ತದೆ.
ಈ ಸಿಂಡ್ರೋಮ್‌ಗೆ ಕಾರಣಗಳೇನು? ಮೊದಲನೆಯದು, ಅತಿಯಾದ ಫೋನ್ ಬಳಕೆ. ದಿನದ ಹೆಚ್ಚಿನ ಸಮಯವನ್ನು ಸ್ಮಾರ್ಟ್ʼಫೋನ್ ಜತೆ ಕಳೆಯುವವರಲ್ಲಿ ಇದು ಅತಿ ಹೆಚ್ಚು. ಎರಡನೆಯದು, ಮಾನಸಿಕ ಒತ್ತಡ ಮತ್ತು ಆತಂಕ. ಜೀವನದಲ್ಲಿ ತೀವ್ರ ಒತ್ತಡ ಇರುವವರು ಅಥವಾ ಭಾವನಾತ್ಮಕವಾಗಿ ಅಸ್ಥಿರವಾಗಿರುವವರು ನೋಟಿಫಿಕೇಶನ್‌ಗಳಿಗಾಗಿ ಸದಾ ಹಂಬಲಿಸುತ್ತಿರುತ್ತಾರೆ.
ಈ ‘ನೋಟಿಫಿಕೇಶನ್ ಹಸಿವು’ ಭ್ರಮೆಗೆ ದಾರಿಯಾಗುತ್ತದೆ. ಮೂರನೆಯದು, ಸೈಕಲಾಜಿಕಲ್ ಸಂಗತಿ. ಸಮಾಜದಲ್ಲಿ ನಾವು ಎಷ್ಟು ‘ಆಕ್ಟಿವ್’ ಆಗಿದ್ದೇವೆ ಎಂದು ತೋರಿಸಿಕೊಳ್ಳುವ ಹಪಾಹಪಿ ನಮ್ಮನ್ನು ಸದಾ ಫೋನ್ ಚೆಕ್ ಮಾಡುವಂತೆ ಪ್ರೇರೇಪಿಸುತ್ತದೆ. ನರಮಂಡಲದ ಹಸ್ತಕ್ಷೇಪ.
ನರಗಳ ಸಣ್ಣ ಸಂವೇದನೆಯನ್ನು, ಮಿದುಳು ಡಿಜಿಟಲ್ ಸಿಗ್ನಲ್‌ಗಳಾಗಿ ಪರಿವರ್ತಿಸಿ ಅರ್ಥೈಸಿಕೊಳ್ಳುವುದು. ಇದರ ಲಕ್ಷಣಗಳು ಹೇಗಿರುತ್ತವೆ? ಜೇಬಿನಲ್ಲಿ ಏನೋ ಚಲಿಸಿದಂತಾ ಗುವುದು ಅಥವಾ ನಡುಗಿದಂತಾಗುವುದು, ಫೋನ್ ತೆಗೆದು ನೋಡಿದಾಗ ಅಲ್ಲಿ ಯಾವುದೇ ಕರೆ ಅಥವಾ ಮೆಸೇಜ್ ಇರುವುದಿಲ್ಲ, ಫೋನ್ ಮನೆಯ ಬೇರೆ ರೂಮ್‌ನಲ್ಲಿದ್ದರೂ ಜೇಬಿ ನಲ್ಲಿ ವೈಬ್ರೇಶನ್ ಆದಂತೆ ಅನಿಸುವುದು, ಸ್ನಾಯುಗಳಲ್ಲಿ ಸೆಳೆತ ಉಂಟಾದಾಗ ಅದು ಫೋನ್‌ನಿಂದಲೇ ಬಂದದ್ದು ಎಂದು ನಂಬುವುದು.
ಹಾಗಾದರೆ ಇದು ಅಪಾಯಕಾರಿಯೇ? ಸಾಮಾನ್ಯವಾಗಿ ಇದು ದೊಡ್ಡ ದೈಹಿಕ ಕಾಯಿಲೆ ಯಲ್ಲ. ಆದರೆ, ಇದು ನಮ್ಮ ಮಾನಸಿಕ ಆರೋಗ್ಯ ಹದಗೆಡುತ್ತಿರುವುದರ ಸಂಕೇತ. ಸದಾ ಫೋನ್ ಬಗ್ಗೆ ಯೋಚಿಸುವುದರಿಂದ ಮಾಡುವ ಕೆಲಸದ ಮೇಲೆ ಗಮನ ಇರುವುದಿಲ್ಲ.
ರಾತ್ರಿಯಿಡೀ ಫೋನ್ ವೈಬ್ರೇಟ್ ಆಗುತ್ತಿದೆಯೇ ಎಂದು ಚೆಕ್ ಮಾಡುವುದರಿಂದ ನಿದ್ರೆಯ ಗುಣಮಟ್ಟ ಕಡಿಮೆಯಾಗುತ್ತದೆ. ಒಂದು ವೇಳೆ ಫೋನ್ ವೈಬ್ರೇಟ್ ಆಗದಿದ್ದರೆ ‘ನನಗೆ ಯಾರೂ ಮೆಸೇಜ್ ಮಾಡುತ್ತಿಲ್ಲವಲ್ಲ?’ ಎಂಬ ಕೀಳರಿಮೆ ಕಾಡಬಹುದು. ಈ ಸಿಂಡ್ರೋಮ್ ಅನ್ನು ತಡೆಗಟ್ಟಲು ನಾವೇ ಕೆಲವು ನಿಯಮಗಳನ್ನು ರೂಪಿಸಿಕೊಳ್ಳಬೇಕು.
ಫೋನ್ ಬಳಸುವ ಜಾಗ ಬದಲಿಸಬೇಕು. ನೀವು ಯಾವಾಗಲೂ ಬಲ ಜೇಬಿನಲ್ಲಿ ಫೋನ್ ಇಡುತ್ತಿದ್ದರೆ, ಕೆಲವು ದಿನಗಳ ಕಾಲ ಎಡ ಜೇಬಿನಲ್ಲಿ ಇಡಿ ಅಥವಾ ಬ್ಯಾಗ್‌ನಲ್ಲಿ ಇಡಿ. ಇದು ಮಿದುಳಿನ ಹಳೆಯ ಅಭ್ಯಾಸವನ್ನು ಮುರಿಯುತ್ತದೆ. ಇನ್ನೊಂದು ಅಂಶ ಅಂದ್ರೆ ವೈಬ್ರೇಶನ್ ಮೋಡ್ ಆಫ್ ಮಾಡಿ.
ಫೋನ್ ಅನ್ನು ರಿಂಗಿಂಗ್ ಮೋಡ್ ಅಥವಾ ಸಂಪೂರ್ಣ ಸೈಲೆಂಟ್ ಮೋಡ್‌ನಲ್ಲಿ ಇಡಿ. ವೈಬ್ರೇಶನ್ ಮೋಡ್‌ನಿಂದಲೇ ಈ ಸಮಸ್ಯೆ ಹುಟ್ಟಿಕೊಳ್ಳುವುದು. ವಾರದಲ್ಲಿ ಒಂದು ದಿನ ಅಥವಾ ದಿನದಲ್ಲಿ ಕೆಲವು ಗಂಟೆಗಳ ಕಾಲ ಫೊನ್ ಅನ್ನು ಸಂಪೂರ್ಣವಾಗಿ ಸ್ವಿಚ್ ಆಫ್ ಮಾಡಿ ದೂರವಿಡುವುದು ವಾಸಿ.