ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vinayaka M Bhat Column: ಸಂಭಾಷಣೆಯ ಮೌಲ್ಯ ವೃದ್ಧಿಸುವ ನ್ಯಾಯದ ನುಡಿಗಟ್ಟುಗಳು

ಅಂತೂ ಕೊನೆಗೆ ಬಂದವರು ಯಾರಿಗೆ ಸಂಬಂಧಪಟ್ಟವರು ಎನ್ನವುದು ಇಬ್ಬರಿಗೂ ತಿಳಿಯದೇ, ಅವರನ್ನೇ ಕೇಳಿಯೇ ಬಿಡೋಣ ಅಂತ, ಹೊರಡಲನುವಾದ ಅತಿಥಿಯನ್ನು, ನೀವು ಯಾವಕಡೆಯ ಸಂಬಂಧ? ಅಂತ ಗಂಡ ಕೇಳಿದ. ನೋಡಿ, ನನ್ನ ಚಕ್ಕಡಿಯ ಚಕ್ರ ಬದರಿ ಮರದಿಂದ ಮಾಡಿದ್ದು, ನಿಮ್ಮ ಮನೆಯ ಮುಂದಿರುವುದು ಬದರೀ ಮರವಲ್ಲವೇ? ಹಾಗಾಗಿ ನಮ್ಮದು ಬದರಿಯ ಸಂಬಂಧವಾಯಿತಲ್ಲ! ಎಂದನಂತೆ ‘ಅಸ್ಮಾಕಂ ಬದರೀ ಚಕ್ರಂ ಯುಷ್ಮಾಕಂ ಬದರೀ ತರುಃ ಬಾದರಾಯಣ ಸಂಬಂಧಾತ್ ಯೂಯಂ ಯೂಯಂ ವಯಂ ವಯಂ’ ಎಂದನಂತೆ.

ವಿದ್ಯಮಾನ

ಒಂದಾನೊಂದು ಕಾಲದಲ್ಲಿ ಒಂದು ಹಳ್ಳಿಯಲ್ಲಿ ಹೊಸತಾಗಿ ಮದುವೆಯಾದ ಗಂಡ ಹೆಂಡತಿ ವಾಸಿಸುತ್ತಿದ್ದರು, ಏನೋ ಮನೋಕ್ಲೇಷದಿಂದ ಕೆಲದಿನಗಳಿಂದ ಅವರು ಪರಸ್ಪರ ಮಾತನಾಡಿ ಕೊಳ್ಳುತ್ತಿರಲಿಲ್ಲ, ಅದು ಸ್ವಾಭಾವಿಕವೇ ಬಿಡಿ. ಹೇಳಿಕೇಳಿ ಅದು ಗಂಡಹೆಂಡಿರ ಜಗಳ, ಉಂಡು ಮಲಗುವವರೆಗಂತೂ ಇರುತ್ತೆ ಅಂತ ಹೇಳುತ್ತಾರಲ್ಲವೇ!. ಇರಲಿ, ಇಲ್ಲಿ ಹೇಳಬೇಕಾದ ವಿಷಯ ಅವರ ಜಗಳವಲ್ಲ, ಬೇರೆಯದೇ ಇದೆ. ಒಂದು ದಿನ ನಡುಮಧ್ಯಾಹ್ನದ ಹೊತ್ತು, ಮನೆಗೆ ಒಬ್ಬ ಅತಿಥಿಯ ಆಗಮನವಾಯಿತು. ಮನೆಯ ಗೃಹಿಣಿ ಸರ್ವವಿಧದಿಂದಲೂ ಬಂದ ಅತಿಥಿಯನ್ನು ಅತ್ಯಂತ ಆದರದಿಂದ ನೋಡಿಕೊಳ್ಳುತ್ತಿದ್ದಳು, ಮನೆಯ ಗ್ರಹಸ್ಥನೂ ಹಾಗೇಯೇ, ಊಟದ ಸಮಯ ದಲ್ಲಿ ಬಹಳ ಒತ್ತಾಯ ಮಾಡಿಮಾಡಿ ಆತನ ದೇಖರೇಖ ನೋಡಿಕೊಂಡ.

ಅತಿಥಿಗೆ ಒಳ್ಳೆಯ ಪಾಂಗಿತವಾದ ಭೋಜನವಾಯಿತು, ಸ್ವಲ್ಪ ಹೊತ್ತು ವಿಶ್ರಾಂತಿ ಮಾಡಿ, ಚಹಾ ಸೇವಿಸಿ ಗಂಡಹೆಂಡಿರಿಬ್ಬರಿಗೂ ವಿದಾಯ ಹೇಳಿ ಆತ ಹೊರಡಲನುವಾದ. ಮಜವೇನೆಂದರೆ, ಗಂಡ ಹೆಂಡಿರಿಬ್ಬರಿಗೂ ಬಂದ ಅತಿಥಿ ಯಾರ ಸಂಬಂಧಿಕನಾಗಿದ್ದ ಎನ್ನುವುದು ಗೊತ್ತಾಗಲೇ ಇಲ್ಲ. ವಿಶೇಷ ಕಾಳಜಿಯಿಂದ ಹೆಂಡತಿ ಉಪಚರಿಸುವುದನ್ನು ನೋಡಿ, ಯಾರೋ ತನ್ನ ಹೆಂಡತಿಯ ಕಡೆಯವರಿರಬೇಕು ಎಂದು ಗಂಡ ಅಂದುಕೊಂಡ. ಮದುವೆಯಾಗಿ ಕೆಲವೇ ತಿಂಗಳಾಗಿರುವು ದರಿಂದ ಈತನಿಗೆ ಇನ್ನೂ ಅವಳ ಕಡೆಯವರ ಎಲ್ಲರ ಪರಿಚಯವಾಗಿರಲಿಲ್ಲ.

ಅದೇ ರೀತಿ ಹೆಂಡತಿಯೂ, ಗಂಡನ ಕಡೆಯವರೆಲ್ಲರ ಪರಿಚಯ ಇಲ್ಲವಾದ್ದರಿಂದ, ಬಂದವರು ಗಂಡನ ಕಡೆಯವರೇ ಇರಬೇಕು, ನನ್ನಕೋಪ ಗಂಡನ ಮೇಲೇ ಹೊರತು ಅವರ ಕಡೆಯ ಅತಿಥಿಗಳ ಮೇಲಲ್ಲ ಎನ್ನುವ ಭಾವನೆಯಿಂದ ಹಾಗೂ ತನ್ನ ಕಡೆಯವರನ್ನು ಹೆಂಡತಿ ನಿರ್ಲಕ್ಷ್ಯ ಮಾಡಿದಳು ಎನ್ನುವಂತಾಗಬಾರದು ಎಂದು ಆಗಂತುಕನನ್ನು ವಿಶೇಷ ಕಾಳಜಿ ಮಾಡಿದಳು.

ಇದನ್ನೂ ಓದಿ: Vinayaka M Bhat Column: ತನುಮನಗಳಿಂದ ದೇವರನ್ನು ಸೇವಿಸಿದರೆ ಸಾಲದೇ ?

ಅಂತೂ ಕೊನೆಗೆ ಬಂದವರು ಯಾರಿಗೆ ಸಂಬಂಧಪಟ್ಟವರು ಎನ್ನವುದು ಇಬ್ಬರಿಗೂ ತಿಳಿಯದೇ, ಅವರನ್ನೇ ಕೇಳಿಯೇ ಬಿಡೋಣ ಅಂತ, ಹೊರಡಲನುವಾದ ಅತಿಥಿಯನ್ನು, ನೀವು ಯಾವಕಡೆಯ ಸಂಬಂಧ? ಅಂತ ಗಂಡ ಕೇಳಿದ. ನೋಡಿ, ನನ್ನ ಚಕ್ಕಡಿಯ ಚಕ್ರ ಬದರಿ ಮರದಿಂದ ಮಾಡಿದ್ದು, ನಿಮ್ಮ ಮನೆಯ ಮುಂದಿರುವುದು ಬದರೀ ಮರವಲ್ಲವೇ? ಹಾಗಾಗಿ ನಮ್ಮದು ಬದರಿಯ ಸಂಬಂಧ ವಾಯಿತಲ್ಲ! ಎಂದನಂತೆ ‘ಅಸ್ಮಾಕಂ ಬದರೀ ಚಕ್ರಂ ಯುಷ್ಮಾಕಂ ಬದರೀ ತರುಃ ಬಾದರಾಯಣ ಸಂಬಂಧಾತ್ ಯೂಯಂ ಯೂಯಂ ವಯಂ ವಯಂ’ ಎಂದನಂತೆ. ಮುಂದೆ, ಬಹಳ ದೂರದ ಸಂಬಂಧವನ್ನು ಹೇಳುವಾಗ ‘ಬಾದರಾಯಣ ಸಂಬಂಧ ನ್ಯಾಯ’ದಿಂದ ನಮಗೂ ನಿಮಗೂ ಸಂಬಂಧವಾಯಿತಲ್ಲ ಎನ್ನುವ ರೂಢಿಯಾಯಿತು ಅಂತ ಕಾಣುತ್ತದೆ. ಈಗ ಇನ್ನೊಂದು ಸ್ವಾರಸ್ಯ ಕರವಾದ ನ್ಯಾಯದ ಕುರಿತು ನೋಡೋಣ.

ಒಮ್ಮೆ ಒಬ್ಬ ಯಾತ್ರಿಕ ಆ ಊರಿನ ಬ್ರಾಹ್ಮಣನಲ್ಲಿ ಕೇಳುತ್ತಾನೆ, ವಿಪ್ರಾಸ್ಮಿನ್ ನಗರೇ ಮಹಾನ್ ಕಥಯ? ನಿಮ್ಮ ಊರಿನಲ್ಲಿ ಬಹಳ ಶ್ರೇಷ್ಠರು/ಎತ್ತರದವರು ಅಂದರೆ ಯಾರು? ಅದಕ್ಕೆ ಬಡ ಬ್ರಾಹ್ಮಣನ ವ್ಯಂಗ್ಯವಾದ ಉತ್ತರ, ‘ಕಃ ಸ್ಥಾಲಧ್ರುಮಾಣಂ ಗಣಃ’ ಅಂದರೆ ಅಡಿಕೆ-ತೆಂಗಿನ ಮರಗಳಂತೆ ಎತ್ತರ ಬೆಳೆಯುವ ತಾಳೆ ಮರವೇ ನಮ್ಮ ಊರಿನಲ್ಲಿ ಎತ್ತರವಾದವುಗಳು. ಹಾಗಾದರೆ ‘ಕೋ ದಾತಾ’ ನಿಮ್ಮ ಊರಿನ ದೊಡ್ಡ ದಾನಿ ಯಾರು? ಅಂತ ಕೇಳುತ್ತಾನೆ.

‘ರಜಕೋ ದದಾತಿವಸನಂ ಪ್ರಾತರ್ಗೃಹೀತ್ವಾ ನಿಶಿ’ ಬೆಳಿಗ್ಗೆ ಸ್ವೀಕಾರ ಮಾಡಿ ಪ್ರತಿದಿನ ಸಂಜೆ ಬಟ್ಟೆಯನ್ನು ಎಲ್ಲರಿಗೂ ತಿರುಗಿ ತಂದುಕೊಡುತ್ತಾನ, ಪ್ರತಿದಿನ ವಸ್ತ್ರದಾನ ಮಾಡುವ ಆ ಅಗಸನೇ ನಮ್ಮೂರಿನ ದೊಡ್ಡ ದಾನಿ ಅಂದ ಆ ಬ್ರಾಹ್ಮಣ. ಹೌದಾ? ಹಾಗಾದರೆ ನಿಮ್ಮೂರಿನಲ್ಲಿರುವವರಲ್ಲಿ ಅತ್ಯಂತ ದಕ್ಷರು ಯಾರು? ಅಂತ ಆ ಯಾತ್ರಿಕ ಕೇಳಿದ. ಅದಕ್ಕುತ್ತರವಾಗಿ, ಬೇರೆಯವರ ಹಣ ಹಾಗೂ ಪರಸ್ತ್ರೀ ಹರಣ ಮಾಡುವ ವಿಷಯದಲ್ಲಿ ಈ ಊರಿನ ಎಲ್ಲರೂ ದಕ್ಷರೇ ಆಗಿದ್ದಾರೆ, ಆ ದೃಷ್ಟಿಯಿಂದ ನಮ್ಮೂರಿನಲ್ಲಿ ದಕ್ಷ ಜನಕ್ಕೇನೂ ಕಡಿಮೆಯಿ ಎನ್ನುತ್ತಾನೆ ಆ ಬ್ರಾಹ್ಮಣ.

ಹಾಗಾದರೆ ‘ಕಸ್ಮಾಜ್ಜೀವಸಿ ಹೇ ಸಖೇ’ ಇಂಥಾ ಬರಗೆಟ್ಟ ಊರಿನಲ್ಲಿ ನೀನಾದರೂ ಹೇಗೆ ಜೀವನ ಸಾಗಿಸುತ್ತಿದ್ದೀಯೆ? ಎಂದು ಯಾತ್ರಿಕ ಕೇಳಿದ. ಅದಕ್ಕೆ ಬ್ರಾಹ್ಮಣ ಉತ್ತರ ಕೊಡುವಾಗ ಅತ್ಯಂತ ಪ್ರಸ್ತುತವಾದ ಇನ್ನೊಂದು ನ್ಯಾಯದ ಮೂಲಕ ‘ವಿಷಕ್ರಿಮಿ ನ್ಯಾಯೇನ ಜೀವಾಮ್ಯಹಮ’ ವಿಷಕ್ರಿಮಿ ನ್ಯಾಯದಿಂದ ನಾನು ಈ ಊರನಲ್ಲಿ ಇನ್ನೂ ಬದುಕುತ್ತಿದ್ದೇನೆ ಎನ್ನುತ್ತಾನೆ.

Screenshot_3 ಒಕ

ಹಾಗಾದರೆ ‘ವಿಷಕ್ರಿಮಿ ನ್ಯಾಯ’ ಅಂದರೆ ಏನು? ಎಂದು ನೋಡುವುದಾದರೆ, ಔಷಧಿಯಿಂದ ಹಿಡಿದು ಸಾರಾಯಿಯವರೆಗೆ ಎಲ್ಲದರಲ್ಲೂ ಇರುವ ಸೂಕ್ಷ್ಮಾಣು ಜೀವಿಗಳು ವಿಷವಸ್ತುಗಳಲ್ಲೂ ಇರುತ್ತವೆ, ವಿಷವಸ್ತು, ಸೇವನೆ ಮಾಡಿದ ಬೇರೆಲ್ಲ ಜೀವಿಗಳನ್ನು ಕೊಲ್ಲುತ್ತದೆಯಾದರೂ, ಅದರೊಳಗೇ ಹುಟ್ಟಿ ಬೆಳೆದಿರುವ ಸೂಕ್ಷ್ಮಾಣುಜೀವಿಗಳಿಗೆ ಏನೂ ಬಾಧಕವಾಗುವುದಿಲ್ಲ, ಪ್ರತಿರೋಧಕತನವನ್ನು ಸ್ವಾಭಾವಿಕವಾಗಿ ಬೆಳೆಸಿಕೊಂಡಿರುತ್ತವೆ ಎನ್ನುವುದು ಇದರೊಳಗಿರುವ ನ್ಯಾಯ. ಮೇಲೆ ಹೇಳಿದ ಎರಡೂ ಸಂದರ್ಭದಲ್ಲಿನ ಸಂಭಾಷಣೆ ಎಷ್ಟು ಸುರಸವಾಗಿದೆ ನೋಡಿ!

ನೇರವಾಗಿ ನಮ್ಮ ಊರು ಕೆಟ್ಟು ಕೆರಹಿಡಿದಿದೆ ಅಂತ ಆ ಬ್ರಾಹ್ಮಣ ಹೇಳಬಹುದಾಗಿತ್ತು, ಆದರೆ ಆತ ಉತ್ತರಿಸಿದ ರೀತಿ ತುಂಬಾ ಸ್ವಾರಸ್ಯಪೂರ್ಣವಾಗಿತ್ತಲ್ಲವೇ? ದೈನಂದಿನ ಮಾತು ಮತ್ತು ಬರವಣಿಗೆ ಯಲ್ಲಿ ಬಳಸುವ ಅರ್ಥಗರ್ಭಿತ ಸಣ್ಣಸಣ್ಣ ಸೂತ್ರಗಳು, ನುಡಿಗಟ್ಟುಗಳು ಜೀವನಕ್ಕೆ ಪ್ರಾಯೋಗಿಕ ಹಾಗೂ ಶಾಶ್ವತ ಮಾರ್ಗದರ್ಶನವನ್ನು ನೀಡುತ್ತವೆ ಮತ್ತು ಸಂಭಾಷಣೆಯ ಸೌಂದರ್ಯವನ್ನೂ ಹೆಚ್ಚಿಸುತ್ತದೆ. ಒಂದುಕಾಲದಲ್ಲಿ, ದೀರ್ಘ ವಿವರಣೆಯ ಅಗತ್ಯವಿಲ್ಲದೆ ಮನವೊಲಿಸಲು, ಸಾಂತ್ವನ ಗೊಳಿಸಲು ಅಥವಾ ತ್ವರಿತ ನೈತಿಕ ಪಾಠವನ್ನು ನೀಡಲು ಇಂಥಾ ಸೂತ್ರಗಳನ್ನು ಮಾತುಕಥೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತಿತ್ತು.

ಸಂಸ್ಕೃತ ಭಾಷೆಯಲ್ಲಿ ನ್ಯಾಯವೆಂದರೆ ಸೂತ್ರಗಳ ಹಾಗೂ ನುಡಿಗಟ್ಟಿನ ಸ್ವರೂಪದ ಸಂಕ್ಷಿಪ್ತ ಅಭಿವ್ಯಕ್ತಿ ಗಳಾಗಿವೆ. ಇಂಗ್ಲೀಷಿನಲ್ಲಿ ಅವನ್ನು ‘ಮ್ಯಾಕ್ಸಿಮ್’ ಎನ್ನುತ್ತಾರೆ. ಸಂಕೀರ್ಣ ತಾತ್ವಿಕ ಪರಿಕಲ್ಪನೆಗಳು, ಮಾನವ ನಡವಳಿಕೆಗಳು ಅಥವಾ ಸಾಮಾಜಿಕ ವಾಸ್ತವಗಳನ್ನು ಸರಳ, ಸಾಪೇಕ್ಷ ಸಾದೃಶ್ಯಗಳ ಮೂಲಕ ಅಥವಾ ತರ್ಕಗಳ ಮೂಲಕ ವಿವರಿಸಲು ಇವುಗಳನ್ನು ಬಳಸಲಾಗುತ್ತಿತ್ತು.

ಉದಾಹರಣೆಗೆ ಹೇಳುವುದಾದರೆ, ‘ಪೀನದತ್ತ ಎನ್ನುವ ದಷ್ಟಪುಷ್ಟವಾಗಿರುವ ಒಬ್ಬ ವ್ಯಕ್ತಿ ಆಹಾರ ಸೇವಿಸುವುದಿಲ್ಲ’ ಎನ್ನುವುದು ವಾಕ್ಯ. ಅದು ಹೇಗೆ ಸಾಧ್ಯ? ಒಂದು ಕಡೆ ದಷ್ಟಪುಷ್ಠವಾಗಿದ್ದಾನೆ ಎನ್ನುತ್ತೀರಿ ಆದರೆ ಆಹಾರ ಸೇವಿಸುವುದಿ ಎನ್ನುತ್ತೀರಿ, ಇವೆರಡೂ ಪರಸ್ಪರ ವಿರೋಧವಾಗುತ್ತದೆಯ ಅಂದರೆ, ಆ ವಾಕ್ಯಕ್ಕೆ ‘ದಿವಾ ನಭುಂಕ್ತೆ’ ಎನ್ನುವ ತರ್ಕಯುಕ್ತ ಉತ್ತರವಿರುತ್ತದೆ.

ಆತ ಊಟವನ್ನೇ ಮಾಡುವುದಿ ಅಂತ ಅಲ್ಲ, ‘ಹಗಲಿನಲ್ಲಿ ಊಟ ಮಾಡುವುದಿಲ್ಲ’ ಅಂತ ಅರ್ಥೈಸ ಲಾಗುತ್ತದೆ. ಹೀಗೆ ಪ್ರತಿ ಒಗಟಿನ ಮಾತಿಗೂ ನ್ಯಾಯದ, ತರ್ಕದ ಉತ್ತರವಿರುತ್ತೆ. ಇವು ಒಂದು ಸಂಕ್ಷಿಪ್ತ, ಸ್ಮರಣೀಯ ಹೇಳಿಕೆಯಾಗಿದ್ದು, ಅದು ಸಾಮಾನ್ಯ ಸತ್ಯ, ಮೂಲಭೂತ ತತ್ವ ಅಥವಾ ನಡತೆಯ ನಿಯಮವನ್ನು ವ್ಯಕ್ತಪಡಿಸುತ್ತದೆ. ನಮ್ಮಲ್ಲಿ ಉಪನಿಷತ್ತುಗಳು, ಭಗವದ್ಗೀತೆಯ ಸಾಲಿ ನಲ್ಲಿ ನಿಲ್ಲುವ ವೇದವ್ಯಾಸಕೃತ ಬ್ರಹ್ಮಸೂತ್ರ ಎನ್ನುವ ಗ್ರಂಥವಿದೆ (ಇವು ಮೂರನ್ನೂ ಸೇರಿ ಪ್ರಸ್ಥಾನತ್ರಯ ಅಂತ ಕರೆಯುತ್ತಾರೆ).

‘ಅಥಾತೋ ಬ್ರಹ್ಮ ಜಿಜ್ಞಾಸಾ ಅಥವಾ ಜನ್ಮಾದ್ಯಸ್ಯ ಯತಃ’ ಹೀಗೆ ಒಂದೋ ಎರಡೋ ಸಾಲಿನ ವಾಕ್ಯಗಳವು. ಅದು ಎಷ್ಟು ಅರ್ಥವನ್ನು ತನ್ನ ಗರ್ಭದೊಳಗೆ ಹುದುಗಿಸಿಟ್ಟುಕೊಳ್ಳುತ್ತಿತ್ತೆಂದರೆ, ಆಚಾರ್ಯತ್ರಯರು ಆ ಒಂದೊಂದು ವಾಕ್ಯಕ್ಕೆ ಹತ್ತಾರು ಪುಟಗಳ ಭಾಷ್ಯ ಅಥವಾ ವ್ಯಾಖ್ಯಾನ ಬರೆದು ಅದರ ಅರ್ಥವಿಸ್ತಾರವನ್ನು ಜನರಿಗೆ ತಿಳಿಸಬೇಕಾಯಿತು. ಇರಲಿ, ನಮ್ಮಲ್ಲಿ ಅಷ್ಟು ಪ್ರಚಲಿತ‌ ವಾಗಿಲ್ಲದ ನಾಲ್ಕಾರು ಆಸಕ್ತಿದಾಯಕ ನ್ಯಾಯಸೂತ್ರಗಳನ್ನು ನೋಡೋಣ.

  1. ಮಂಡೂಕ ಪ್ಲವನ ನ್ಯಾಯ: ಕಪ್ಪೆ ಸಾಮಾನ್ಯವಾಗಿ ತೆವಳುವುದಿಲ್ಲ; ಅದು ಒಂದು ಬಿಂದು ವಿನಿಂದ ಮತ್ತೊಂದು ಬಿಂದುವಿಗೆ ಜಿಗಿಯುತ್ತದೆ. ದೂರದ ಆದರೆ ಸಂಬಂಧಿತ ಬಿಂದುವಿ ನೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ನಿಯಮ ಅಥವಾ ಚರ್ಚೆಯು ಹಲವಾರು ಮಧ್ಯಂತರ ಹಂತಗಳು ಅಥವಾ ಅಧ್ಯಾಯಗಳನ್ನು ಬಿಟ್ಟುಬಿಟ್ಟಾಗ ನಿನ್ನದು ಮಂಡೂಕ ಪ್ಲವನ ನ್ಯಾಯವಾಯಿತು ಎಂದು ಈ ನ್ಯಾಯವನ್ನು ಹೇಳಲಾಗುತ್ತದೆ.
  2. ಕಾಕತಾಲೀಯ ನ್ಯಾಯ: ಒಂದು ಕಾಗೆ ಬಂದು ತಾಳೆ ಮರದ ಕೊಂಬೆಯ ಮೇಲೆ ಕುಳಿತು ಕೊಳ್ಳುತ್ತದೆ ಮತ್ತು ಅದೇ ಸಮಯದಲ್ಲಿ ಮಾಗಿದ ತಾಳೆ ಹಣ್ಣು ನೆಲಕ್ಕೆ ಬೀಳುತ್ತದೆ. ಕಾಗೆಯ ತೂಕದಿಂದ ಕೊಂಬೆ ಮುರಿದು ಹಣ್ಣುಬಿದ್ದಂತೆ ತೋರುತ್ತದೆಯಾದರೂ, ಹಣ್ಣು ಆಗಲೇ ಬೀಳಲು ನಿಶ್ಚಿತವಾಗಿತ್ತು, ಅದೇ ಸಮಯಕ್ಕೆ ಕಾಗೆಯೂ ಬಂದು ಕೂತಿತು. ವಾಸ್ತವವಾಗಿ ಹಣ್ಣು ಕೆಳಗೆ ಬೀಳಲು ಕಾಗೆ ಕಾರಣವಲ್ಲ.
  3. ಸ್ಥಾಲೀಪುಲಾಕ ನ್ಯಾಯ: ದೊಡ್ಡ ಮಡಕೆಯಲ್ಲಿ ಬೇಯುತ್ತಿದ್ದ ಅಕ್ಕಿ ಸರಿಯಾಗಿ ಬೆಂದಿದೆಯೋ ಎಂದು ಪರಿಶೀಲಿಸಲು, ಬಾಣಸಿಗನು ಪ್ರತಿ ಧಾನ್ಯವನ್ನು ಹಿಚುಕುವ ಅಗತ್ಯವಿಲ್ಲ. ಮೇಲ್ಭಾಗ ದಲ್ಲಿನ ಕೇವಲ ಒಂದು ಅಥವಾ ಎರಡು ಧಾನ್ಯಗಳನ್ನು ಪರೀಕ್ಷಿಸಿದರೆ ಸಾಕು.

ಒಂದು ಸಣ್ಣ ಉದಾಹರಣೆಯನ್ನು ಗಮನಿಸಿ ಇಡೀ ಗುಂಪಿನ ಸ್ವಭಾವವನ್ನು ಅಥವಾ ಗುಣವನ್ನು ಗ್ರಹಿಸುವ ಕ್ರಮವೇ ಸ್ಥಾಲೀಪುಲಾಕ ನ್ಯಾಯ. ಇದು ಸಂಖ್ಯಾಶಾಸ್ತ್ರೀಯ ಮಾದರಿಯನ್ನು ಪ್ರತಿನಿಧಿ ಸುತ್ತದೆ. ಇದರರ್ಥ ಸಣ್ಣ, ಪ್ರಾತಿನಿಧಿಕ ಮಾದರಿಯನ್ನು ಪರೀಕ್ಷಿಸುವ ಮೂಲಕ ನೀವು ಇಡೀ ಜನಸಂಖ್ಯೆ, ಪುಸ್ತಕ ಅಥವಾ ಪಾತ್ರದ ಸ್ವರೂಪವನ್ನು ಅರ್ಥಮಾಡಿಕೊಳ್ಳಬಹುದು.

  1. ಅರುಂಧತಿ ದರ್ಶನ ನ್ಯಾಯ: ಅರುಂಧತಿ ಹಾಗೂ ವಸಿಷ್ಠ ಮಹರ್ಷಿಗಳ ಆದರ್ಶ ದಾಂಪತ್ಯ ನಿಮ್ಮದೂ ಆಗಲಿ ಎನ್ನುವ ಆಶಯದಿಂದ ನೂತನ ವದೂವರರಿಗೆ ಅರುಂಧತಿ ನಕ್ಷತ್ರವನ್ನು ತೋರಿಸುವ ಪರಿಪಾಠ ನಮ್ಮ ವಿವಾಹ ಪದ್ಧತಿಯಲ್ಲಿದೆ. ಈಗೆಲ್ಲ ಸುಮ್ಮನೇ ಆಕಾಶದ ಕಡೆಗೆ ಬೆರಳು ತೋರಿಸಿ ಫೋಟೋ ತೆಗೆಸಿಕೊಳ್ಳುತ್ತಾರೆ ಅಷ್ಟೇ, ನಡುಮಧ್ಯಾಹ್ನದಲ್ಲಿ ನಕ್ಷತ್ರ ಎಲ್ಲಿಂದ ಗೋಚರಿಸಬೇಕಲ್ಲವೇ? ಆದರೆ ಹಿಂದೆಲ್ಲ ರಾತ್ರಿಕಾಲದ ಮದುವೆ ಹೆಚ್ಚಾಗಿತ್ತು. ಆಗ ಯಥಾರ್ಥ ದಲ್ಲಿ ನಕ್ಷತ್ರವನ್ನು ತೋರಿಸಲಾಗುತ್ತಿತ್ತು.

ಅರುಂಧತಿ ನಕ್ಷತ್ರವು ಚಿಕ್ಕದಾಗಿರುವುದರಿಂದ ರಾತ್ರಿಯ ಆಕಾಶದಲ್ಲಿ ನೋಡುವುದು ತುಂಬಾ ಕಷ್ಟ. ಅದನ್ನು ಯಾರಿಗಾದರೂ ತೋರಿಸಲು, ಮಾರ್ಗದರ್ಶಿಯಾಗಿ ಮೊದಲು ಹತ್ತಿರದ ದೊಡ್ಡ, ಪ್ರಕಾಶ ಮಾನವಾದ, ಸುಲಭವಾಗಿ ಗೋಚರಿಸುವ ನಕ್ಷತ್ರವನ್ನು ತೋರಿಸುತ್ತಾ, ಕ್ರಮೇಣ ವೀಕ್ಷಕನ ದೃಷ್ಟಿ ಯನ್ನು ಆ ಸಣ್ಣ ಅರುಂಧತಿ ನಕ್ಷತ್ರದ ಕಡೆಗೆ ಕೊಂಡೊಯ್ಯಲಾಗುತ್ತಿತ್ತು. ಹೆಚ್ಚು ಅಮೂರ್ತ ಅಥವಾ ಕಷ್ಟಕರವಾದ ಪರಿಕಲ್ಪನೆಯನ್ನು ಕಲಿಸುವಾಗ, ವಿದ್ಯಾರ್ಥಿಯನ್ನು ಸೂಕ್ಷ್ಮಸತ್ಯಕ್ಕೆ ಮಾರ್ಗದರ್ಶನ ನೀಡುವ ಮೊದಲು ನೀವು ದೊಡ್ಡ, ಪರಿಚಿತ ಮತ್ತು ದೃಢವಾದ ಉದಾಹರಣೆ ಗಳೊಂದಿಗೆ ಪ್ರಾರಂಭಿಸ ಬೇಕು ಎನ್ನುವುದಕ್ಕೆ ಈ ನ್ಯಾಯವನ್ನು ಬಳಸುತ್ತಾರೆ.

  1. ಅಂಧ-ಗಜ ನ್ಯಾಯ: ಕುರುಡರ ಗುಂಪು ಆನೆಯ ವಿವಿಧ ಭಾಗಗಳನ್ನು ಸ್ಪರ್ಶಿಸುತ್ತದೆ. ಕಾಲನ್ನು ಮುಟ್ಟುವವನು ಅದು ಸ್ತಂಭ ಎಂದು ಹೇಳುತ್ತಾನೆ; ಬಾಲವನ್ನು ಮುಟ್ಟುವವನು ಅದು ಹಗ್ಗ ಎಂದು ಹೇಳುತ್ತಾನೆ; ಇದು ವ್ಯಕ್ತಿನಿಷ್ಠ ಪಕ್ಷಪಾತ ಮತ್ತು ಸಂಪೂರ್ಣ ಸತ್ಯಕ್ಕಾಗಿ ಭಾಗಶಃ ಸತ್ಯವನ್ನು ತಪ್ಪಾಗಿ ಗ್ರಹಿಸುವ ಅಪಾಯವನ್ನು ವಿವರಿಸುತ್ತದೆ. ವೈಯಕ್ತಿಕ ಮಾನವ ಗ್ರಹಿಕೆಯು ಸೀಮಿತವಾಗಿದೆ ಮತ್ತು ರಚನಾತ್ಮಕ ವಾಸ್ತವತೆಯು ಇಡೀ ಚಿತ್ರವನ್ನು ನೋಡುವ ಅಗತ್ಯವಿದೆ ಎಂದು ವಿದ್ವಾಂಸರಿಗೆ ನೆನಪಿಸಲು ಭಾರತೀಯ ತತ್ತ್ವಶಾಸ್ತ್ರದಲ್ಲಿ ಇದನ್ನು ಹೆಚ್ಚು ಬಳಸಲಾಗಿದೆ.

೬. ದೇಹಲಿ-ದೀಪಕ ನ್ಯಾಯ: ಹೊಸ್ತಿಲಿನ ಮೇಲೆ ಇಟ್ಟ ದೀಪವು ಹೇಗೆ ಒಳಭಾಗಕ್ಕೂ ಮತ್ತು ಹೊರಭಾಗಕ್ಕೂ ಏಕಕಾಲದಲ್ಲಿ ಬೆಳಕನ್ನು ಚೆಲ್ಲುತ್ತದೆಯೋ, ಹಾಗೆಯೇ ಎರಡು ವಿಭಿನ್ನ ವಿಚಾರ ಗಳು ಅಥವಾ ಗುಂಪುಗಳಿಗೆ ಏಕಕಾಲದಲ್ಲಿ ಅನ್ವಯವಾಗುವ ತತ್ವ ಅಥವಾ ವಾದವನ್ನು ಈ ನ್ಯಾಯದಿಂದ ಉದಾಹರಿಸಲಾಗುತ್ತದೆ. ಕೋಣೆಯೊಳಗೆ ಎಣ್ಣೆಯ ದೀಪವನ್ನು ಇರಿಸಿದರೆ, ಅದು ಕೋಣೆಯನ್ನು ಮಾತ್ರ ಬೆಳಗಿಸುತ್ತದೆ. ನೀವು ಅದನ್ನು ಹೊರಗೆ ಇಟ್ಟರೆ, ಅದು ಹೊರಭಾಗವನ್ನು ಮಾತ್ರ ಬೆಳಗಿಸುತ್ತದೆ.

ಆದರೆ ದೀಪವನ್ನು ಹೊಸ್ತಿಲಲ್ಲಿ (ದೇಹಲಿ) ಇರಿಸಿದರೆ, ಅದರ ಬೆಳಕು ಏಕಕಾಲದಲ್ಲಿ ಒಳಗೆ ಮತ್ತು ಹೊರಗಡೆ ಬೀಳುತ್ತದೆಯಲ್ಲವೇ?. ಹೀಗೆ ಸಂಸ್ಕೃತದಲ್ಲಿ ‘ನ್ಯಾಯಾವಲಿ’ ಮುಂತಾದ ಗ್ರಂಥಗಳಲ್ಲಿ ಈ ರೀತಿಯ ನ್ಯಾಯಸೂತ್ರಗಳ ದೊಡ್ಡ ಸಂಗ್ರಹವೇ ಇದೆ. ಅವುಗಳನ್ನು ಸೂಕ್ತವಾಗಿ ಬಳಸಿದರೆ, ಸಂಭಾಷಣೆ ಅತ್ಯಂತ ಸ್ವಾರಸ್ಯಪೂರ್ಣವಾಗಿರುತ್ತದೆ, ನೂರು ಮಾತು ಆಡುವ ಬದಲಿಗೆ ಒಂದು ಮಾತು ಆಡಿದರೆ ಸಾಕಾಗುತ್ತದೆ. ನಾವೂ ಸಾಮಾನ್ಯವಾಗಿ ಹಂಸಕ್ಷೀರ ನ್ಯಾಯ, ಕಾಕತಾಳೀಯ ನ್ಯಾಯ ಇತ್ಯಾದಿ ಕೆಲವು ಪ್ರಸಿದ್ಧ ಸಂಸ್ಕೃತದ ನ್ಯಾಯಗಳನ್ನು ನಮ್ಮ ಮಾತುಕಥೆಗಳಲ್ಲಿ ಬಹಳ ಬಳಸುತ್ತೇವೆ, ಅದರ ಹಿನ್ನೆಲೆ, ಉದ್ದೇಶಗಳನ್ನು ಹುಡುಕುವ ಕೆಲಸಕ್ಕೆ ಹೋಗಲಿಲ್ಲ ಅಷ್ಟೇ.

ಕನ್ನಡದಲ್ಲಿ ಮಾತನಾಡುವ ಅನೇಕ ಹಿರಿಯರು, ಮಾತುಮಾತಿಗೂ ಗಾದೆಗಳನ್ನು, ನಾಣ್ಣುಡಿ ಗಳನ್ನು ಬಳಸುತ್ತಿದ್ದ ಕಾಲವಿತ್ತು, ಹಾಗೆಯೇ, ದೇಶದಲ್ಲಿ ಸಂಸ್ಕೃತ ಆಡುಭಾಷೆಯಾಗಿದ್ದಾಗ, ಜನ ( Maxim) ನ್ಯಾಯವನ್ನು ಉಲ್ಲೇಖಿಸಿ ಅತ್ಯಂತ ಸ್ವಾರಸ್ಯಕರವಾಗಿ ಮಾತನಾಡುವ ರೂಢಿ ಇತ್ತು ಅಂತ ಕಾಣುತ್ತೆ. ಬರೇ ಶಬ್ದ ಜೋಡಣೆ ಮಾಡಿ ಆಡುವ ಮಾತು ಅತ್ಯಂತ ಶುಷ್ಕವೆನಿಸಿ ನೀರಸವಾದರೆ, ಒಗಟು, ಗಾದೆ ನ್ಯಾಯ ಅಥವಾ ಸೂತ್ರಗಳಿಂದ ಶೃಂಗರಿಸಿ ಆಡುವ ಮಾತು, ಮೌಲ್ಯಯುತವೂ ಸರಸವೂ ಆಗಿ, ಕೇಳುಗರಿಗೆ ಮನೋಹ್ಲಾದವಾಗುತ್ತದೆ. ಶುದ್ಧವಾಗಿ ನಮ್ಮ ಮಾತೃಭಾಷೆಯನ್ನೇ ಆಡಲು ಕಷ್ಟಪಡುವ ಈ ಕಾಲದಲ್ಲಿ, ಭಾಷಾ ಸೌಂದರ್ಯವನ್ನು ಹೆಚ್ಚಿಸುವ ಇಂಥಾ ನುಡಿಗಟ್ಟು ಗಳು, ಗಾದೆಗಳು ಹಾಗೂ ನ್ಯಾಯಸೂತ್ರಗಳನ್ನು ಬಳಸುವುದನ್ನು ಊಹಿಸಲೂ ಸಾಧ್ಯವಿಲ್ಲವೇನೋ! ಅಭ್ಯಾಸ ಮಾಡಿದರೆ ಅಸಾಧ್ಯವೇನೂ ಅಲ್ಲ ಬಿಡಿ.

ವಿನಾಯಕ ವೆಂ ಭಟ್ಟ

View all posts by this author