ಶಶಾಂಕಣ
ಪರಿಸರ ರಕ್ಷಣೆ, ಪರಿಸರ ಪ್ರೀತಿ, ಮರಗಿಡಗಳನ್ನು ಸಲಹುವುದು ಮೊದಲಾದ ಪದಗಳನ್ನು ಕೇಳಿದಾ ಕ್ಷಣ ನನಗೆ ನೆನಪಾಗುವುದು, ನಮ್ಮ ಹಳ್ಳಿಯಲ್ಲಿ ಮನೆಯ ಸುತ್ತಲೂ ಬೆಳೆದಿದ್ದ ಮರಗಿಡಗಳು. ಕೆಲವು ವರ್ಷಗಳ ಹಿಂದಿನ ಮಾತು. ಆಗೆಲ್ಲಾ, ಮನೆಯ ಸುತ್ತಮುತ್ತ ಮರಗಳಿದ್ದರೆ, ನಮ್ಮ ಹಳ್ಳಿಯ ಜನರು, ಅವುಗಳನ್ನು ಕತ್ತರಿಸಲು ಹೋಗುತ್ತಿರಲಿಲ್ಲ; ಈಗಿನ ಜನರು, ಮನೆಗೆ ಅಡ್ಡಲಾಗಿ ಮರವಿದ್ದರೆ ಅದನ್ನು ತೆರವು ಮಾಡುವುದುಂಟು. ಆದರೆ, ಆಗಿನ ದಿನಗಳಲ್ಲಿ, ಮನೆಯ ಸುತ್ತಲೂ ಮರಗಳು, ಗಿಡಗಳು, ಪೊದೆಗಳು ಬೆಳೆಯುವುದು ತೀರಾ ಸಾಮಾನ್ಯ. ಅವು ಹೂವಿನ ಗಿಡಗಳೂ ಆಗಿರಬಹುದು, ಆದರೆ, ವನ್ಯ ಜಾತಿಯ, ತಮ್ಮಷ್ಟಕ್ಕೇ ಬೆಳೆದ ಗಿಡಗಳೇ ಜಾಸ್ತಿಯಾಗಿರುತ್ತಿದ್ದವು.
ನಮ್ಮ ಹಳ್ಳಿ ಮನೆಯ ಮೇಲೆ ಚಾಚಿಕೊಂಡಿದ್ದ ಒಂದು ಹಲಸಿನ ಮರವನ್ನು ಅದೆಷ್ಟೋ ವರ್ಷ ಗಳಿಂದ ಹಾಗೆಯೇ ಇರಗೊಟ್ಟಿದ್ದಾರೆ! ಆ ಮರದಿಂದ ಉದುರುವ ಎಲೆಗಳು ಛಾವಣಿಯ ಮೇಲೆ ಬಿದ್ದು ತೊಂದರೆ ಎಂಬ ಭಾವವಿಲ್ಲ, ಆ ಮರವನ್ನು ಏರಿ ಬರುವ ಹಾವುಗಳು ಮನೆಯ ಮೇಲೇರಿ, ಒಳಗೆ ಬಂದರೂ, ಪರವಾಗಿಲ್ಲ ಎನ್ನುವ ಜನರು ನಮ್ಮ ಹಳ್ಳಿಯವರು, ಹೊರತು, ಅದೊಂದು ತೊಂದರೆ ಎಂದು ಭಾವಿಸಿ, ಮರವನ್ನು ಕತ್ತರಿಸಿದವರಲ್ಲ. ಆದರೆ, ಈಚಿನ ದಿನಗಳಲ್ಲಿ, ಜನರ ಮನೋಭಾವ ಬದಲಾಗುತ್ತಿರುವುದಂತೂ ನಿಜ.
ಹಾಗೆ ನೋಡಿದರೆ, ಮನೆಯ ಸುತ್ತಮುತ್ತಲೂ ನೈಸರ್ಗಿಕವಾಗಿ ಬೆಳೆಯುವ ಗಿಡ, ಮರಗಳು ನಿಜವಾದ ಸೌಂದರ್ಯ ದೇವತೆಗಳಿದ್ದಂತೆ. ಜತೆಗೆ ಮನೆಗೆ ಅನತಿ ದೂರದಲ್ಲಿರುವ ಪುಟ್ಟ ಮತ್ತು ದೊಡ್ಡ ಕಾಡು ಸಹ, ಅದೇ ರೀತಿಯ ಗೌರವವನ್ನು ಹುಟ್ಟಿಸುತ್ತವೆ. ನಮ್ಮ ನಾಡಿನಲ್ಲಿ ಪುರಾತನ ಕಾಲದಿಂದ ಬೆಳೆಯುತ್ತಿರುವ, ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿರುವ ಮರಗಳು, ನಮ್ಮ ದಿನಚರಿಗೆ, ಬದುಕಿಗೆ ನೀಡುತ್ತಿರುವ ಕೊಡುಗೆ ಅಪೂರ್ವ.
ಇದನ್ನೂ ಓದಿ: Shashidhara Halady Column: ಹಿರೆಕಲ್ಲು ಗುಡ್ಡದಲ್ಲಿ ಏಕಾಂಗಿ ಪಯಣಿಗ !
ವಿವಿಧ ಸ್ವರೂಪದ ಮರಗಿಡಗಳು ತುಂಬಿದ ಕಾಡನ್ನು, ಹಕ್ಕಲನ್ನು ನೋಡುವುದೇ ಒಂದು ಆನಂದದ ಅನುಭೂತಿ. ಅಲ್ಲಿ ಬೆಳೆವ ಬಳ್ಳಿ, ಗಿಡ, ಮರ, ಪೊದೆ, ಅಣಬೆ, ಹಾವಸೆ, ಹಾರುವ ವಿವಿಧ ಹಕ್ಕಿಗಳು, ವಾಸಿಸುವ ಚಿಕ್ಕಪುಟ್ಟ ಪ್ರಾಣಿಗಳು, ಕೀಟಗಳು ಎಲ್ಲವೂ ವೈವಿಧ್ಯತೆಯನ್ನು ಕಟ್ಟಿಕೊಡುವುದರಿಂದಲೇ, ಅಂತಹ ಕಾಡು ಪ್ರಾಕೃತಿಕ ಸಮತೋಲನಕ್ಕೂ ಕೊಡುಗೆ ನೀಡುತ್ತದೆ.
ಕೆಲವೇ ವರ್ಷಗಳ ಹಿಂದೆ, ನಮ್ಮ ಮನೆಯ ಸುತ್ತಲೂ, ಮನೆಯ ಗೋಡೆಗೆ ತಾಗಿಕೊಂಡಂತೆ ಮರಗಿಡ ಗಳಿದ್ದವು. ಮನೆಯಿಂದ ಕೆಲವು ಹೆಜ್ಜೆ ನಡೆದರೆ ಸಣ್ಣದಾದ ಕಾಡು. ಹಳ್ಳಿಯ ಅಂಚಿನ ಕಾಡೆಂದರೆ ಗೊಂಡಾರಣ್ಯವಲ್ಲ, ಬದಲಿಗೆ ಜನರ ಮಿತ ಬಳಕೆಯಿಂದ ತುಸು ಬೆಳಾರವಾಗಿರುವ ಹಕ್ಕಲಿನಂತಹ ಕಾಡು. ಆ ಕಾಡಂಚಿನಲ್ಲಿದ್ದ ನಮ್ಮ ಮನೆಯ ಬಹುಪಾಲು ಅಗತ್ಯಗಳಿಗೆ ಆ ಕಾಡೇ ಆಸರೆ!
ಸೊಪ್ಪು, ಸೌದೆ, ನಮ್ಮ ದನಕರುಗಳ ಮೇವು, ಹಲವು ರೀತಿಯ ಕಾಡು ಹಣ್ಣುಗಳು, ಎಣ್ಣೆ ಕೊಡುವ ದೂಪದ ಕಾಯಿ, ಮೋಪು ನೀಡುವ ಮರ ಎಲ್ಲದಕ್ಕೂ ಹಳ್ಳಿಯ ಜನ ಆಶ್ರಯಿಸಿದ್ದೇ ಆ ಕಾಡನ್ನು. ಇದನ್ನು ಅರಿತರೆ, ನಗರದ ಜನರಿಗೆ ಅಚ್ಚರಿ ಎನಿಸಬಹುದು, ಆದರೆ ಮನೆ ಸುತ್ತ ಬೆಳೆದುಕೊಂಡಿದ್ದ ಮರ, ಗಿಡ, ಬಳ್ಳಿಗಳು ನಮ್ಮ ದೈನಂದಿನ ದಿನಚರಿಯ ಮೇಲೂ ದಟ್ಟ ಪ್ರಭಾವ ಬೀರುತ್ತಿದ್ದವು!
ನಮ್ಮ ಹಳ್ಳಿಮನೆಯ ಎದುರಿನಲ್ಲಿದ್ದ ಗಂಟಿ (ಜಾನುವಾರು) ಕಟ್ಟುವ ಹಟ್ಟಿಯ ಹಿಂಭಾಗದಲ್ಲಿ ಒಂದು ಭಾರೀ ಗಾತ್ರದ ಅಮಟೆ ಮರವಿತ್ತು. ಪ್ರತಿ ಬೇಸಗೆಯ ಕೊನೆಯಲ್ಲಿ ಆ ಮರದ ತುಂಬಾ ಜೊಂಪೆ ಜೊಂಪೆ ಅಮಟೆ ಮಿಡಿಗಳ ರಾಶಿ! ಈ ಅಮಟೆಕಾಯಿಗಳ ಹಲವು ಅವತಾರಗಳು ನಮಗೆ ಉಪಯೋಗಕ್ಕೆ ಬರುತ್ತವೆ! ಎಳೆಯ ಅಮಟೆ ಕಾಯಿಯನ್ನು ಬಳಸಿ ಚಟ್ನಿ, ಗೊಜ್ಜು ಮಾಡುತ್ತಿದ್ದರು. ಮರದ ಅಡಿ ತನ್ನಷ್ಟಕ್ಕೆ ತಾನೇ ಬಿದ್ದಿರುವ ಎಳೆಯ ಕಾಯಿಯನ್ನು ಮಕ್ಕಳು ಆರಿಸಿ, ತಿಂದು, ಬಾಯಿ ಚಪ್ಪರಿಸುವುದೂ ಉಂಟು. ಅಮಟೆ ಕಾಯಿ ತುಸು ಬಲಿತಂತೆ, ಅದರೊಳಗೆ ಗೊರಟು (ವಾಟೆ) ಬೆಳೆಯತೊಡಗುತ್ತದೆ. ಹದವಾಗಿ ಬೆಳೆದ, ಗೊರಟು ಇನ್ನೂ ಬಲಿಯದ ಅಮಟೆಕಾಯಿಯನ್ನು ಉಪ್ಪಿನಕಾಯಿ ತಯಾರಿಸಲು ಉಪಯೋಗಿಸುತ್ತಿದ್ದರು.
ಇಡೀ ಕಾಯಿಯನ್ನು ಉಪ್ಪಿನಲ್ಲಿ ನೆನೆ ಹಾಕಿ ತಯಾರಿಸುವ ಆ ಉಪ್ಪಿನ ಕಾಯಿಗೆ ವಿಶಿಷ್ಟ ರುಚಿ. ಬಲಿತ ಅಮಟೆಕಾಯಿ ಸಾಂಬಾರನ್ನೂ ಮಾಡುತ್ತಿದ್ದರು ನಮ್ಮೂರಿನವರು. ಇನ್ನೂ ಕೆಲವು ವಾರಗಳು ಕಳೆದರೆ, ಅಮಟೆಕಾಯಿಯ ಒಳಗಿನ ಓಟೆಯು ಗಟ್ಟಿಯಾಗುತ್ತದೆ. ಈ ಹದದಲ್ಲಿರುವ ಕಾಯಿಯನ್ನು ಕೊಯ್ದು, ಗೊರಟನ್ನು ಹೆಚ್ಚಿ ತೆಗೆದು, ಕಾಯಿಯ ಭಾಗದಿಂದ ಉಪ್ಪಿನ ಕಾಯಿ ತಯಾರಿಸಿದರೆ, ಅದಕ್ಕೆ ಬೇರೆಯದೇ ರುಚಿ. ಸಾಂಬಾರು ತಯಾರಿಸುವಲ್ಲಿ ಅಮಟೆಕಾಯಿಯನ್ನು ಹುಳಿಗಾಗಿ ಉಪಯೋಗವಿದೆ, ಅಂದರೆ ಹುಣಸೆಹಣ್ಣಿನ ಬದಲು ಉಪಯೋಗಿಸಬಹುದು. ಬೆಂಡೆ ಕಾಯಿ, ಸೌತೆ ಕಾಯಿ ಮೊದಲಾದ ತರಕಾರಿಗಳ ಸಾಂಬಾರಿಗೆ ಅಮಟೆಕಾಯಿಯನ್ನು ಜಜ್ಜಿ ಹಾಕಿದರೆ, ಅದರ ಹುಳಿಯಿಂದ ಆ ಪದಾರ್ಥದ ರುಚಿಯೇ ಮೇಲಿನ ಮಜಲನ್ನು ತಲುಪುತ್ತದೆ!
ಮಳೆಗಾಲದಲ್ಲಿ ನಮ್ಮ ಮನೆಗಳಲ್ಲಿ ಪ್ರತಿದಿನ ಎಂಬಂತೆ, ವಾರಗಟ್ಟಲೆ ಮಾಡುತ್ತಿದ್ದ ಹುರುಳಿ ಸಾರಿಗೆ ಅಮಟೆಕಾಯಿಯನ್ನು ಜಜ್ಜಿ ಹಾಕಿದರಂತೂ, ಅದ್ಭುತ ರುಚಿ. ಎರಡೆರಡು ದಿನ ಕುದಿಸಿಡುವ ಹುರುಳಿ ಸಾರಿನಲ್ಲಿರುವ ಅಮಟೆಕಾಯಿಯ ಗೊರಟಿನ ರುಚಿಯೇ ವಿಶಿಷ್ಟ. ಹುರುಳಿ ಸಾರಿನಲ್ಲಿ ಚೆನ್ನಾಗಿ ಕುದ್ದ ಗೊರಟನ್ನು ಜಗಿದು ಜಗಿದು ತಿನ್ನುವುದೆಂದರೆ ಮಕ್ಕಳಿಗೆ ಭಾರಿ ಖುಷಿ. ನಮ್ಮ ಮನೆ ಎದುರಿನಲ್ಲೇ ಇದ್ದ ಆ ಭಾರೀ ಅಮಟೆ ಮರದಲ್ಲಿ ಕಾಯಿಗಳಾದವೆಂದರೆ, ನಮಗೆ ಮಾತ್ರವಲ್ಲ, ಸುತ್ತಮುತ್ತಲಿನ ಎಲ್ಲರಿಗೂ ಮೂರು ತಿಂಗಳುಗಳ ಕಾಲ ಹುಣಿಸೆಹಣ್ಣನ್ನು ಖರೀದಿಸುವ ಯೋಚನೆಯೇ ಇಲ್ಲ ಎಂದೇ ಅರ್ಥ.
ನಮ್ಮ ಮನೆ ಎದುರಿನಲ್ಲಿದ್ದ, ತುಸು ದೂರದಲ್ಲಿದ್ದ ಅಮಟೆಕಾಯಿ ಮರದಲ್ಲಿ ಪ್ರತಿವರ್ಷ ಸಾವಿರಾರು ಅಮಟೆಕಾಯಿಗಳು ಆಗುತ್ತಿದ್ದವು. ಅದರ ಪಕ್ಕದಲ್ಲೇ ಇನ್ನೊಂದು ಭಾರೀ ಗಾತ್ರದ ಮರವಿತ್ತು. ಅದೇ ಬಾಗಾಳು ಮರ. ಇದನ್ನು ನಮ್ಮ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಬಕುಳ ಮರ, ರಂಜದ ಮರ ಎಂದು ಕರೆಯುವುದುಂಟು. ಸುಧಾಮೂರ್ತಿಯವರು ಬಕುಳದ ಮರವನ್ನು ತಮ್ಮ ಕಾದಂಬರಿಯೊಂದರ ಹೆಸರಿನಲ್ಲಿರಿಸಿ, ಅದಕ್ಕೆ ಗೌರವಯುತ ಸ್ಥಾನ ನೀಡಿದ್ದಾರೆ. ನಮ್ಮ ಹಳ್ಳಿ ಮನೆಯ ಎದುರಿದ್ದ ಬಾಗಾಲು ಮರದೊಂದಿಗಿನ ಬಾಂಧವ್ಯವೇ ಬೇರೆ ರೀತಿಯದು.
ಹಿಂದಿನ ತಲೆಮಾರಿನವರಿಗೆ ಆ ರೀತಿಯ ಮರಗಳೆಂದರೆ ಬಹು ಪ್ರೀತಿ; ದಟ್ಟವಾಗಿ ಹರಡಿಕೊಂಡು, ಮನೆಯ ಮೇಲೆ ತೂಗುವಂತಿದ್ದರೂ, ಅಂತಹ ಮರದ ಜತೆಯಲ್ಲೇ ತಮ್ಮ ಜೀವನವನ್ನು ಕಟ್ಟಿಕೊಳ್ಳುವ ನಮ್ಮೂರಿನವರ ಮನಸ್ಥಿತಿಯೇ ಒಂದು ವಿಸ್ಮಯ. ಹಸಿರು ಎಲೆಗಳ, ದಟ್ಟ ಪರ್ಣರಾಶಿಯ ಆ ಬಾಗಾಳು ಮರದ ವಿಶೇಷತೆ ಎಂದರೆ, ಬೇಸಗೆಯಲ್ಲಿ ಆ ಮರದಲ್ಲಿ ಅರಳುತ್ತಿದ್ದ ನಕ್ಷತ್ರಾಕಾರದ ಸುಂದರ ಬಿಳಿ ಪುಟಾಣಿ ಹೂವುಗಳು. ಎತ್ತರವಾಗಿ ಬೆಳೆದಿದ್ದ ಆ ಮರದ ಟೊಂಗೆಯಿಂದ ಕಳಚಿಕೊಂಡು, ಮಧುರವಾಗಿ ತೇಲುತ್ತಾ ಬೀಳುವ ಬಾಗಾಳು ಹೂವುಗಳೆಂದರೆ ನಮ್ಮೂರಿನವರಿಗೆ ಬಲು ಇಷ್ಟ.
ಆ ದೊಡ್ಡ ಮರದಿಂದ ಬೀಳುವ ಹೂವುಗಳನ್ನು ಆರಿಸಲು ಸುತ್ತಲಿನ ನಾಲ್ಕೆಂಟು ಮನೆಗಳ ಮಕ್ಕಳು ಪ್ರತಿ ಸಂಜೆ ಬರುತ್ತಿದ್ದರು. ಮರದ ಕೆಳಗಿದ್ದ ಅಗೇಡಿಯಲ್ಲಿ ಕಾಯುತ್ತಾ ಕೂರುತ್ತಿದ್ದ ಮಕ್ಕಳಿಗೆ ಆ ಬೃಹತ್ ಮರ ನಿರಾಸೆ ಮಾಡುತ್ತಿರಲಿಲ್ಲ. ಆ ಸಮಯದಲ್ಲಿ, ಅಗೇಡಿ ಗದ್ದೆಯು ಖಾಲಿಯಾಗಿರುತ್ತಿತ್ತು, ಅಂದರೆ, ಕೊಯ್ಲು ಎಲ್ಲಾ ಮುಗಿದು, ಗಟ್ಟಿ ನೆಲವನ್ನು ಹೊಂದಿರುತ್ತಿತ್ತು. ಅದರ ಪಕ್ಕದಲ್ಲೇ ಇದ್ದ ಬಾಗಾಳು ಮರದಿಂದ, ಸಂಜೆ ಐದೂವರೆಯಿಂದ ಬೀಳಲು ಆರಂಭಿಸುವ ಹೂವುಗಳು ಏಳು ಗಂಟೆಯ ತನಕವೂ ಗದ್ದೆಗೆ ಬೀಳುತ್ತಿದ್ದವು. ಅದನ್ನು ಎಲ್ಲರೂ ಆಯುವುದು. ಎಲ್ಲರ ಬುಟ್ಟಿಯಲ್ಲೂ ಅರ್ಧ ತುಂಬುವಷ್ಟು ಬಿಳಿ ಪುಷ್ಪಗಳು!
ಆ ಹೂವುಗಳನ್ನು ಆರಿಸಿ, ತೊಳೆದು, ಬಾಳೆ ನಾರಿನಿಂದ ಪೋಣಿಸಿ, ಮಾಲೆ ಮಾಡಿ, ತಲೆಯ ತುರುಬಿಗೆ ಮುಡಿದುಕೊಳ್ಳುತ್ತಿದ್ದ ಅಂದಿನ ಮಹಿಳೆಯರ ಅಭಿರುಚಿಗೆ ಸಾಟಿಯುಂಟೇ? ತಲೆಗೆ ಮುಡಿದು, ದೇವರಿಗೆ ಅರ್ಪಿಸಿದ ನಂತರ, ಇನ್ನೂ ಉಳಿದಿರುವ ಬಾಗಾಳು ಹೂವಿನ ಮಾಲೆಯನ್ನು ಒಣಗಿಸಿಯೂ ಇಡುತ್ತಿದ್ದರು. ಒಣಗಿದರೂ ಅದರಲ್ಲಿ ಸುಗಂಧ!
ನಮ್ಮೂರಿನ ಮದುವೆಗಳಲ್ಲಿ ಮದುಮಕ್ಕಳು ಬಾಗಾಳು ಹೂವಿನ ಮಾಲೆಗಳನ್ನು ಬದಲಾಯಿಸಿ ಕೊಳ್ಳಲೇ ಬೇಕು. ಒಣಗಿದರೂ ಸುಗಂಧ ಬೀರುವ ಬಾಗಾಳು ಹೂವಿನ ರೀತಿಯೇ, ಜೀವನದಲ್ಲಿ ಕಷ್ಟಗಳು ಎದುರಾದರೂ ಆ ದಾಂಪತ್ಯ ನೆಮ್ಮದಿಯಿಂದ ಇರಲಿ ಎಂಬ ಆಶಯ. ಈ ರೀತಿ ಬಹಳ ಉಪಯೋಗಕ್ಕೆ ಬರುತ್ತಿದ್ದ ಮತ್ತು ಎಲ್ಲರ ಸ್ನೇಹಿತರಂತೆ ಬೆಳೆದು ನಿಂತಿದ್ದ ಈ ಎರಡು ಮರಗಳನ್ನು, ನಮ್ಮ ಮನೆಯವರು ಕಡಿಸುವ ದಿನ ಬಂತು; ಅದೇ ಜಾಗದಲ್ಲಿ ಜಾನುವಾರುಗಳಿಗಾಗಿ, ಹೊಸ ಕೊಟ್ಟಿಗೆಯನ್ನು ಕಟ್ಟುವ ನೆಪದಲ್ಲಿ ಆ ಭಾರೀ ಗಾತ್ರ ಅಮಟೆ ಮತ್ತು ಬಾಗಾಳು ಮರಗಳನ್ನು, ನಮ್ಮ ಅಮ್ಮಮ್ಮ ಕಡಿಸಿ ಹಾಕಿಸಿದಾಗ, ಸ್ವಲ್ಪ ಬೇಸರವಾಗಿದ್ದು ನಿಜ.
ನಮ್ಮ ಮನೆಯ ಹತ್ತಿರದಲ್ಲೇ, ಇನ್ನೊಂದು ಭಾಗದಲ್ಲಿದ್ದ ಒಂದೆರಡು ಮಾವಿನ ಮರಗಳಂತೂ ಲ್ಲರಿಗೂ ಅಚ್ಚು ಮೆಚ್ಚು. ಆ ಮರಗಳ ಪೈಕಿ ಒಂದು ಮರವು ಕಾಟು ಮಾವಿನ ಮರ. ಎರಡು ವರ್ಷಕ್ಕೊಮ್ಮೆ ಆ ಭಾರೀ ಮರದಲ್ಲಿ ಸಾವಿರಾರು ಮಾವಿನ ಮಿಡಿಗಳು ಆಗುತ್ತಿದ್ದವು. ಆ ಹುಳಿ ಮಾವಿನ ಮಿಡಿಗಳು ಹದವಾಗಿ ಬಲಿತಾಗ, ಕೊಯ್ದು, ಚೊಕ್ಕಟಮಾಡಿ, ಅದರಿಂದ ಮಿಡಿ ಉಪ್ಪಿನ ಕಾಯಿ ತಯಾರಿಸುವ ಪರಿ ಅದೆಂತಹ ಸಂಭ್ರಮದ್ದು!
ಮಾವಿನ ಮಿಡಿ ಶ್ರಾಯ ಬಂತೆಂದರೆ, ಎಲ್ಲರ ಮನೆಯಲ್ಲೂ ಉಪ್ಪಿನಕಾಯಿ ಮಾಡುವ ತರಾತುರಿ. ನಮ್ಮ ಮನೆಯ ಎದುರಿದ್ದ ಆ ಎತ್ತರವಾದ ಕಾಟುಮಾವಿನ ಮಿಡಿಗೆ ವಿಶೇಷವಾದ ಪರಿಮಳ ಇಲ್ಲ, ಹುಳಿ ಜಾಸ್ತಿ. ಆದ್ದರಿಂದ, ಅಬ್ಲಿಕಟ್ಟೆಯಿಂದ ಒಂದಷ್ಟು ಸುವಾಸನೆ ಇರುವ ಮಿಡಿ ತಂದು ಇದಕ್ಕೆ ಬೆರೆಸುತ್ತಿದ್ದರು. ಎರಡು ವರ್ಷಗಳಾದರೂ ಕೆಡದ ಆ ರುಚಿಕರ ಮಿಡಿ ಉಪ್ಪಿನಕಾಯಿಯು, ಊಟಕ್ಕೆ ಮಾತ್ರವಲ್ಲ, ಜ್ವರ ಮೊದಲಾದ ಥಂಡಿ ಕಾಯಿಲೆಗಳನ್ನು ಓಡಿಸುವ ಔಷಧವಾಗಿಯೂ ಉಪಯೋಗ ವಾಗುತ್ತಿತ್ತು!
ದನಕರುಗಳು ಗುಡ್ಡಕ್ಕೆ ಮೇಯಲು ಹೋಗಿ, ಮಳೆಯಲ್ಲಿ ನೆನೆದು ಥಂಡಿ ಹಿಡಿದು ಕಾಯಿಲೆಬಿದ್ದಾಗ, ಅರ್ಧ ಲೋಟ ಉಪ್ಪಿನಕಾಯಿ ರಸ ಕುಡಿಸುತ್ತಿದ್ದರು. ಮಾವಿನ ಮಿಡಿ ಉಪ್ಪಿನಕಾಯಿಯಲ್ಲಿ ಔಷಧಿಯ ಅಂಶ ಇವೆ ಎಂದು ನಮ್ಮ ಹಳ್ಳಿಯವರಿಗೆ ಮೊದಲಿನಿಂದಲೂ ತಿಳಿದಿತ್ತು; ಅದು ಅನುಭವದಿಂದ. ನೆಗಡಿ ಜ್ವರ ಬಂದಾಗ, ಉಪ್ಪಿನಕಾಯಿ ರಸ ಮತ್ತು ಅನ್ನ ಅಥವಾ ಗಂಜಿ ಸೇವನೆ ತೀರಾ ಸಾಧಾರಣ. ಜಾಲಿ ಅಥವಾ ಭರಣಿಯಲ್ಲಿ ಭದ್ರವಾಗಿ ಇರಿಸಿದ, ಆರು ತಿಂಗಳಿಗೂ ಹಳೆಯ ದಾದ ಉಪ್ಪಿನಕಾಯಿಯಲ್ಲಿ ಪ್ರೊಬಯೊಟಿಕ್ ಅಂಶವಿದ್ದು, ಜೀರ್ಣಕ್ರಿಯೆ ಹೆಚ್ಚಿಸಲು ಸಹಕಾರಿ ಎಂದು ಈಚಿನ ವಿಜ್ಞಾನ ತಿಳಿಸಿದೆ; ಉಪ್ಪಿನಕಾಯಿ ಸೇವನೆಯಿಂದ ಅಂತಹದೊಂದು ಆರೋಗ್ಯಲಾಭವಿದೆಯೆಂದು ನಮ್ಮ ಹಿಂದಿನ ತಲೆಮಾರಿಗೆ ಅರಿವಿತ್ತು ಎಂಬುದು ಅಚ್ಚರಿಯ ವಿಚಾರ.
ನಮ್ಮ ಮನೆಗೆ ತಾಗಿಕೊಂಡು ಇನ್ನೊಂದು ಮಾವಿನ ಮರವಿತ್ತು. ಅದಕ್ಕೆ ‘ಗೊರಟು ಕಸೆ’ ಅಥವಾ ಭಟ್ಕಳ ಮಾವು ಎಂಬ ಹೆಸರು. ರುಚಿಕರ ಹಣ್ಣುಗಳನ್ನು ನೀಡುತ್ತಿದ್ದ ಆ ಭಟ್ಕಳ ಮಾವಿನ ಹಣ್ಣಿನ ಗೊರಟಿನ ವಿಶೇಷತೆ ಎಂದರೆ, ಮಳೆಗಾಲದಲ್ಲಿ ಅಂಗಳದ ಮೂಲೆಯಲ್ಲಿ ಅದನ್ನು ಇಟ್ಟರೆ, ಕೆಲವೇ ದಿನಗಳಲ್ಲಿ ಒಂದು ಗೊರಟಿನಿಂದ ಐದು ಮೊಳೆಗಳು ಒಡೆದು, ಹಸಿರು ಗಿಡಗಳು ಬೆಳೆಯುತ್ತಿದ್ದವು! ಕಸಿ ಮಾವಿನ ಹಣ್ಣಿನಷ್ಟೇ ಗಾತ್ರದ ಹಣ್ಣು ಬಿಡುತ್ತಿದ್ದ ಆ ಮಾವಿನ ಮರದಲ್ಲಿ, ಒಂದೊಂದು ವರ್ಷ ನೂರಾರು ಕಾಯಿಗಳ ಪರಿಶೆ! ನಾವೂ ತಿಂದು, ಆಚೀಚಿನ ಮನೆಗಳವರಿಗೆ ಕೊಟ್ಟರೂ, ಮಿಕ್ಕು ಉಳಿಯುವಷ್ಟು ಕಾಯಿ ಬಿಡುತ್ತಿತ್ತು ಆ ‘ಭಟ್ಕಳ’ ಮಾವಿನ ಮರ. ಆ ಮಾವಿನ ಕಾಯಿಯಿಂದ ಚಟ್ನಿ, ಗೊಜ್ಜು, ಕಾಯಿರಸ, ಕೆತ್ತೆ ಉಪ್ಪಿನ ಕಾಯಿ, ಹೋಳು ಉಪ್ಪಿನ ಕಾಯಿ, ಹಿಂಡಿ ಗೊಜ್ಜು, ಸಾಸಿವೆ, ರಸಾಯನ, ಪಾಯಸ ತಯಾರಿಸುತ್ತಿದ್ದರು!
ಜತೆಗೆ, ಒಂದೊಂದು ವರ್ಷ ಬೇಸಿಗೆಯಲ್ಲಿ ಹಣ್ಚೆಟ್ ಸಹ ತಯಾರಿಸಿ, ಮಳೆಗಾಲದಲ್ಲಿ ಗೊಜ್ಜು ಮಾಡುತ್ತಿದ್ದರು. ಮಾವಿನ ಹಣ್ಣಿನ ರಸವನ್ನು ಬಿಸಿಲಿನಲ್ಲಿ ಒಣಗಿಸಿ, ಹಾಳೆಯ ಸ್ವರೂಪಕ್ಕೆ ತಂದು, ದೂಪದ ಎಲೆಯಲ್ಲಿ ಮಡಚಿ, ಮಳೆಗಾಲದ ತನಕ ಕಾಪಿಡುವ ವಿಧಾನವೇ ‘ಹಣ್ ಚೆಟ್’. ಈ ಮರದ ಮಾವಿನ ಕಾಯಿಗಳನ್ನು ದೊಡ್ಡ ಭರಣಿಯಲ್ಲಿ ಉಪ್ಪುನೀರಿನಲ್ಲಿ ನೆನೆಸಿಟ್ಟು, ಮಳೆಗಾಲದಲ್ಲಿ ಚಟ್ನಿ ಮಾಡುವ ಪರಿ ಒಂದು ಸೋಜಿಗ. ಮಾವಿನ ಕಾಯಿಯನ್ನು ಹೋಳುಗಳಾಗಿ ಹೆಚ್ಚಿ, ಚೆನ್ನಾಗಿ ಒಣಗಿಸಿಟ್ಟುಕೊಂಡು, ಮಳೆಗಾಲದಲ್ಲಿ ಹುಣಿಸೆಹಣ್ಣಿನ ಬದಲಿಗೆ ಉಪಯೋಗಿಸುವ ಪರಿಯೂ ಇದೆ.
ಮನೆ ಸುತ್ತಲೂ ಹರಡಿದ್ದ ಮರಗಳಲ್ಲಿ ಹಲಸಿನ ಮರವೊಂದರ ವಿಶೇಷತೆಯನ್ನು ಹೇಳಲೇಬೇಕು. ಆ ಮರದ ಬುಡವು ಪಕ್ಕದವರ ಜಾಗದಲ್ಲಿ, ಆದರೆ ಅದರ ಹತ್ತಾರು ರೆಂಬೆಕೊಂಬೆಗಳು ವಿಶಾಲವಾಗಿ ಹರಡಿಕೊಂಡು, ನಮ್ಮ ಮನೆಯ ಮಾಡನ್ನು ಕವಚಿತ್ತು. ಆ ರೆಂಬೆಕೊಂಬೆಗಳನ್ನು ಏರಿ ಬರುವ ನಾಗರ ಹಾವುಗಳು ನಮ್ಮ ಮನೆಯ ಮಾಡಿಗೂ ಭೇಟಿ ನೀಡುತ್ತಿದ್ದವು. ನಮ್ಮ ಮನೆಯ ಮಾಡಿನಲ್ಲಿ ಸದಾಕಾಲ ಬಿಡಾರ ಹೂಡಿದ್ದ ಇಲಿಗಳನ್ನು ಹಿಡಿಯುವುದೆಂದರೆ ಆ ಹಾವುಗಳಿಗೆ ಇಷ್ಟ. ಆದರೂ ಆ ಭಾರೀ ಹಲಸಿನ ಮರದಿಂದಾಗಿ ನಮಗೆ ತೊಂದರೆ ಎಂದು ನಮ್ಮ ಹಿರಿಯರು ಎಂದೂ ದೂರು ನೀಡಿದವರೇ ಅಲ್ಲ. ಆ ಮರದಲ್ಲಿ ಜಾಸ್ತಿ ಕಾಯಿಗಳಾದಾಗ, ನಮಗೂ ನಾಲ್ಕಾರು ಕಾಯಿಗಳು ಸಿಗುತ್ತಿದ್ದವು. ಅದರಿಂದ ಹಲಸಿನ ಹಪ್ಪಳವನ್ನು ಮಾಡುತ್ತಿದ್ದರು. ಹಲಸಿನ ಮರವು ಕಲ್ಪವೃಕ್ಷ ಸ್ವರೂಪಿ. ಹಲಸಿನ ಕಾಯಿಯ ಪಲ್ಯ, ಸಾಂಬಾರು, ದೋಸೆ, ಹಪ್ಪಳ, ಕಡುಬು, ಹಣ್ಣಿನ ಪಾಯಸ, ಕಡುಬು, ಮುಳುಕ, ಚಿಪ್ಸ್, ಹಲಸಿನ ಮಗಡದ ಪಲ್ಯ, ಹಲಸಿನ ಬೀಜದ ರೊಟ್ಟಿ, ಸಿಹಿ ಎಲ್ಲವನ್ನೂ ತಯಾರಿಸುವ ಪದ್ಧತಿ ಇದೆ.
ನಮ್ಮ ಮನೆಯ ಸುತ್ತಲೂ ಇದ್ದ ಇತರ ಮರಗಳೆಂದರೆ, ಹುಳಿ ಕಾಯಿ ಬಿಡುವ ಬಿಂಬಲ, ಕರಿಬೇವು, ಪೇರಳೆ, ಹೆಬ್ಬಲಸು ಇನ್ನೂ ಅದೆಷ್ಟೋ. ಆದರೆ, ಈಚಿನ ವರ್ಷಗಳಲ್ಲಿ, ನಮ್ಮ ಹಳ್ಳಿಯ ಜನರು, ಮನೆಯ ಹತ್ತಿರ ಬೆಳೆದಿರುವ, ಅದರಲ್ಲೂ ಮುಖ್ಯವಾಗಿ, ಮನೆಗೆ ತಾಗಿಕೊಂಡಿರುವ ಮರಗಳನ್ನು ಬೇಗನೆ ತೆರವು ಮಾಡುತ್ತಾರೆ. ಇದು ನಮ್ಮೂರಿನ ವಿದ್ಯಮಾನ. ನಿಮ್ಮೂರಿನಲ್ಲೂ ಹೀಗೆಯೇ?