ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Srivathsa Joshi Column: ದಾಳಿಂಬೆ ನಿನ್ನ ರೂಪ ಗುಣ ಮಹಿಮೆಯನು ಏನೆಂಬೆ !

ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಮುದ ನೀಡುತ್ತದೆ. ಇದರಲ್ಲಿ ನನಗೆ ಸದ್ಯಕ್ಕೆ ಬೇಕಿದ್ದದ್ದು ಆರಂಭಿಕ ‘ಅನಾರ್’ ಮಾತ್ರ. ಅನಾರ್‌ಗೆ ಸಂಬಂಧಿಸಿದಂತೆ ಇಲ್ಲಿ ಒಂದೆರಡು ಸಂಗತಿಗಳನ್ನು ನೆನಪಿನ ತಿಜೋರಿ ಯಿಂದ ಎತ್ತಿಕೊಳ್ಳುವುದಿದೆ. ಮೊದಲನೆಯದು ನಮಗೆ ಆರನೆಯಲ್ಲೋ ಏಳನೆಯಲ್ಲೋ ಹಿಂದೀ ಪಠ್ಯಪುಸ್ತಕದಲ್ಲಿ ಇದ್ದ ಒಂದು ದೃಷ್ಟಾಂತ ಕಥೆ.

ತಿಳಿರುತೋರಣ

ಋಗ್ವೇದ ಮತ್ತು ಅಥರ್ವ ವೇದಗಳಲ್ಲಿ ದಾಳಿಂಬೆಯನ್ನು ಸಂಪತ್ತು, ಫಲವತ್ತತೆ ಮತ್ತು ದೈವಿಕ ಆಶೀರ್ವಾದದ ಸಂಕೇತವಾಗಿ ವರ್ಣಿಸಲಾಗಿದೆ. ಕಾವ್ಯಗಳಲ್ಲಿ ಹಲ್ಲುಗಳ ಸಾಲು ದಾಳಿಂಬೆಯ ಬಿಳಿ ಅಥವಾ ಕೆಂಪು ಮಿಶ್ರಿತ ಬೀಜಗಳಂತೆ ಜೋಡಿಸಿದ ಹಾಗಿದೆ ಎಂದು ವರ್ಣಿಸಿದರೆ ಹೆಣ್ಣಿನ ಸೌಂದರ್ಯವರ್ಣನ, ಜೊತೆಗೇ ಕಾವ್ಯದ ಸೌಂದರ್ಯವರ್ಧನ ಕೂಡ. ಕೆಲವು ತತ್ತ್ವಪದಗಳಲ್ಲಿ ಮಾನವನ ದೇಹ ಅಥವಾ ಸಂಸಾರವನ್ನು ದಾಳಿಂಬೆ ಹಣ್ಣಿಗೆ ಹೋಲಿಸಿದ್ದಿದೆ.

“ಅನಾರ್ ಕೇ ದಾನೇ ಲಾಲ್ ಲಾಲ್, ಆಮ್ ಖಾತೇ ಮಿಟ್ಠೂ ಲಾಲ್, ಇಮ್ಲೀ ಖಟ್ಟೀ ಮೀಠೇ ಬೇರ್, ಈಖ್ ಕೇ ಖೇತ್ ಸೇ ನಿಕಲಾ ಶೇರ್..." ಹಿಂದೀ ಭಾಷೆಯದೊಂದು ಜನಪ್ರಿಯ ವರ್ಣಮಾಲೆ ಗೀತೆ ಇದು. ಅನಾರ್ ಎಂದರೆ ದಾಳಿಂಬೆ. ಅದರ ಕಾಳು(ಬೀಜ)ಗಳು ಕೆಂಪುಕೆಂಪಗೆ ಇವೆ. ಆಮ್ ಎಂದರೆ ಮಾವಿನಹಣ್ಣು. ಮಿಟ್ಠೂಲಾಲ್ ಎಂಬ ಗಿಳಿಮರಿಯು ಮಾವಿನಹಣ್ಣನ್ನು ತಿನ್ನುತ್ತಿದೆ. ಇಮ್ಲೀ ಎಂದರೆ ಹುಣಿಸೆಹಣ್ಣು. ಅದರ ರುಚಿ ಹುಳಿಯೋಹುಳಿ, ಬೋರೆಹಣ್ಣುಗಳಾದರೋ ಸಿಹಿಸಿಹಿ. ಈಖ್ ಎಂದರೆ ಕಬ್ಬು.

ಕಬ್ಬಿನ ಗದ್ದೆಯಲ್ಲಿ ಅಡಗಿ ಕುಳಿತಿದ್ದದ್ದು ಹೊರಟಿತಂತೆ ಒಂದು ಸಿಂಹ. ಅಕ್ಷರ ಕಲಿಯುವ ಪುಟ್ಟ ಮಗುವಿಗೆ ಅಕ್ಷರಕಲಿಕೆಯೊಂದಿಗೇ ದಿನಬಳಕೆಯ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿರುವ ವಸ್ತುವೈವಿಧ್ಯದ ಪರಿಚಯ. ಮನಸ್ಸಿನಲ್ಲೇ ದೃಶ್ಯಾವಳಿ ಮೂಡಲಿಕ್ಕೆ, ನಾಲಗೆಯಲ್ಲಿ ರುಚಿಯ ಅನುಭವವಾಗಲಿಕ್ಕೆ, ಕಲ್ಪನೆಗಳು ಗರಿಗೆದರಲಿಕ್ಕೆ ಅವಕಾಶ. ವರ್ಣಮಾಲೆಯ ಎಲ್ಲ ಅಕ್ಷರಗಳನ್ನೂ- ಸ್ವರಗಳಿಂದ ಹಿಡಿದು ವರ್ಗೀಯ/ಅವರ್ಗೀಯ ವ್ಯಂಜನಗಳು, ಮತ್ತು ಕ್ಷ, ತ್ರ, ಜ್ಞ ವರೆಗೂ- ಒಳಗೊಳ್ಳು ವಂತೆ ಮುಂದುವರೆಯುತ್ತದೆ ಈ ಪ್ರಾಸಬದ್ಧ ವರ್ಣಮಾಲೆ ಗೀತೆ. ಬಹಳ ಚೆನ್ನಾಗಿದೆ.

ಇದನ್ನೂ ಓದಿ; Srivathsa Joshi Column: ಇದು ಉತ್ತಮ ಪುರುಷ ಬಹುವಚನ ಅಲ್ಲದ ನಾವು

ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಮುದ ನೀಡುತ್ತದೆ. ಇದರಲ್ಲಿ ನನಗೆ ಸದ್ಯಕ್ಕೆ ಬೇಕಿದ್ದದ್ದು ಆರಂಭಿಕ ‘ಅನಾರ್’ ಮಾತ್ರ. ಅನಾರ್‌ಗೆ ಸಂಬಂಧಿಸಿದಂತೆ ಇಲ್ಲಿ ಒಂದೆರಡು ಸಂಗತಿಗಳನ್ನು ನೆನಪಿನ ತಿಜೋರಿಯಿಂದ ಎತ್ತಿಕೊಳ್ಳುವುದಿದೆ. ಮೊದಲನೆಯದು ನಮಗೆ ಆರನೆಯಲ್ಲೋ ಏಳನೆಯಲ್ಲೋ ಹಿಂದೀ ಪಠ್ಯಪುಸ್ತಕದಲ್ಲಿ ಇದ್ದ ಒಂದು ದೃಷ್ಟಾಂತ ಕಥೆ.

‘ಬುಢಿಯಾ ಕಾ ಅಧಖಾಯಾ ಅನಾರ್’ ಎಂದು ಅದರ ಶೀರ್ಷಿಕೆ. ಕಥೆ ಹೀಗೆ ಇತ್ತು: ಭಗವಾನ್ ಬುದ್ಧ ಒಮ್ಮೆ ಒಂದು ನಗರದಲ್ಲಿ ತಂಗಿದ್ದರು. ಆ ನಗರದ ರಾಜ, ಮಂತ್ರಿಗಳು ಮತ್ತು ಧನಿಕರೆಲ್ಲ ಅವರ ದರ್ಶನ ಕ್ಕಾಗಿ ಬಂದರು. ಒಂದಕ್ಕಿಂತ ಒಂದು ಅಮೂಲ್ಯವಾದ ಉಡುಗೊರೆಗಳನ್ನು, ಚಿನ್ನ-ಬೆಳ್ಳಿ ವಜ್ರ-ವೈಡೂರ್ಯ ಮುತ್ತುರತ್ನಗಳನ್ನು, ಕಾಣಿಕೆಯಾಗಿ ನೀಡಿದರು. ಬುದ್ಧ ಕುಳಿತಲ್ಲೇ ಇದ್ದು ಕೇವಲ ಒಂದು ಕೈಯನ್ನು ಎತ್ತಿ ಅವರೆಲ್ಲರ ಕಾಣಿಕೆಗಳನ್ನು ಸ್ವೀಕರಿಸಿದರು.

ಅಷ್ಟರಲ್ಲೇ ಅಲ್ಲಿಗೆ ಕೋಲನ್ನೂರುತ್ತ ಒಬ್ಬ ಬಡ ಮುದುಕಿ ಬಂದಳು. ಭಗವಾನ್ ಬುದ್ಧರಿಗೆ ಪ್ರಣಾಮ ಸಲ್ಲಿಸಿ ಸಂಕೋಚದಿಂದ ಹೀಗೆ ಹೇಳಿದಳು: “ಭಗವಂತನೇ! ನೀವು ಇಲ್ಲಿಗೆ ಬಂದಿರುವ ಸುದ್ದಿ ತಿಳಿದಾಗ, ನಾನು ಈ ದಾಳಿಂಬೆ ಹಣ್ಣನ್ನು ತಿನ್ನುತ್ತಿದ್ದೆ. ನಾನು ಕಡುಬಡವಿ. ನಿಮಗೆ ನೀಡಲು ನನ್ನಲ್ಲಿ ಬೇರಾವುದೇ ವಸ್ತು ಇಲ್ಲ. ಈ ಅರ್ಧ ತಿಂದ ಹಣ್ಣನ್ನೇ ನಿಮ್ಮ ಚರಣಗಳಿಗೆ ಅರ್ಪಿಸಲು ಬಂದಿದ್ದೇನೆ. ನೀವು ಈ ಕಿಂಚಿತ್ ಕಾಣಿಕೆಯನ್ನು ಸ್ವೀಕರಿಸಿದರೆ, ನಾನು ನನ್ನನ್ನು ಧನ್ಯಳೆಂದು ಭಾವಿಸುತ್ತೇನೆ."

pomogranate ok

ಇದನ್ನು ಕೇಳಿದ ಭಗವಾನ್ ಬುದ್ಧರು ತಮ್ಮ ಆಸನದಿಂದ ಎದ್ದು ನಿಂತರು. ಎರಡೂ ಕೈಗಳನ್ನು ಮುಂದೆ ಚಾಚಿ ಅತ್ಯಂತ ಗೌರವ ಮತ್ತು ಪ್ರೀತಿಯಿಂದ ಆ ವೃದ್ಧೆಯ ಅರ್ಧ ತಿಂದ ದಾಳಿಂಬೆ ಹಣ್ಣನ್ನು ಸ್ವೀಕರಿಸಿದರು. ಅಲ್ಲಿ ನೆರೆದಿದ್ದ ರಾಜ ಮತ್ತು ಇತರ ಶ್ರೀಮಂತರು ಆಶ್ಚರ್ಯಚಕಿತ ರಾದರು.

ರಾಜನು ಕುತೂಹಲದಿಂದ, “ಸ್ವಾಮೀ, ನಾವೆಲ್ಲರೂ ನಿಮಗೆ ಇಷ್ಟೊಂದು ಬಹುಮೂಲ್ಯ ಉಡುಗೊರೆಗಳನ್ನು ನೀಡಿದೆವು. ಅವುಗಳನ್ನು ನೀವು ಒಂದು ಕೈಯನ್ನೆತ್ತಿ ಸ್ವೀಕರಿಸಿ ಪಕ್ಕದಲ್ಲಿಟ್ಟಿರಿ. ಆದರೆ ಈ ಮುದುಕಿಯ ಕ್ಷುಲ್ಲಕ ಮತ್ತು ಅರ್ಧ ತಿಂದ ಹಣ್ಣನ್ನು ಅತ್ಯಂತ ಪ್ರೀತಿಗೌರವದಿಂದ ಸ್ವೀಕರಿಸಿದಿರಿ. ಹೀಗೇಕೆ?" ಎಂದು ಕೇಳಿದನು. ಭಗವಾನ್ ಬುದ್ಧರು ಮುಗುಳ್ನಗುತ್ತಾ ಉತ್ತರಿಸಿದರು: “ನೀವೆಲ್ಲರೂ ನನಗೆ ನೀಡಿದ್ದೆಲ್ಲವೂ ನಿಮ್ಮ ಸಂಪತ್ತಿನ ಒಂದು ಸಣ್ಣ ಭಾಗವಾಗಿತ್ತು ಮತ್ತು ಅದನ್ನು ನೀಡುವಲ್ಲಿ ಒಂದಿನಿತಾದರೂ ಅಹಂಕಾರದ ಭಾವನೆಯೂ ಅಡಗಿತ್ತು. ಆದರೆ ಈ ವೃದ್ಧೆಯ ಬಳಿ ಏನಿತ್ತೋ, ಅದನ್ನೆಲ್ಲವನ್ನೂ (ತನ್ನ ಆಹಾರವನ್ನು) ನನಗೆ ಒಪ್ಪಿಸಿದ್ದಾಳೆ.

ಈ ದಾಳಿಂಬೆ ಹಣ್ಣು ಅರ್ಧ ತಿಂದದ್ದಾಗಿದ್ದರೂ, ಅವಳು ತನ್ನ ಹಸಿವಿನ ಬಗ್ಗೆ ಯೋಚಿಸದೆ, ಶುದ್ಧ ಮನಸ್ಸಿನಿಂದ ಮತ್ತು ಪೂರ್ಣ ಸಮರ್ಪಣಾ ಭಾವದಿಂದ ಇದನ್ನು ನನಗೆ ನೀಡಿದ್ದಾಳೆ. ಇದೇ ಕಾರಣಕ್ಕಾಗಿ, ಅವಳ ಈ ಸಣ್ಣ ದಾನವು ನಿಮ್ಮೆಲ್ಲರ ಬಹುಮೂಲ್ಯ ಉಡುಗೊರೆಗಳಿಗಿಂತ ಎಷ್ಟೋ ಪಟ್ಟು ದೊಡ್ಡದಾಗಿದೆ ಮತ್ತು ಅಮೂಲ್ಯವಾಗಿದೆ."

ಎರಡನೆಯ ಸಂಗತಿ, ಕಳೆದ ವರ್ಷ ಬೆಂಗಳೂರಿನಲ್ಲಿ ಹಣ್ಣು ಮಾರಾಟದ ಮಳಿಗೆಯೊಂದು ಗ್ರಾಹಕ ರಿಗೆ ನೀಡಿದ ರಸೀದಿಯಲ್ಲಿ ಅನಾರ್ ಎಂಬ ಹಿಂದೀ ಪದ ಬಳಸಿದ್ದಕ್ಕೆ ಆ ಗ್ರಾಹಕರು ಸೋಷಿಯಲ್ ಮೀಡಿಯಾದಲ್ಲಿ ಎಬ್ಬಿಸಿದ ರಾದ್ಧಾಂತ. ಅವರೊಬ್ಬ ತಥಾಕಥಿತ ಕನ್ನಡ ಹೋ(ಓ)ರಾಟಗಾರರು. ಹಿಂದೀ ಎಂದೊಡನೆ ಹಿಂದುಮುಂದೆಲ್ಲ ಧಗಧಗ ಉರಿದುಕೊಳ್ಳುವವರು. ಹಣ್ಣು ಮಾರಾಟ ಮಳಿಗೆಯ ರಸೀದಿ ಪೂರ್ಣವಾಗಿ ಇಂಗ್ಲಿಷಲ್ಲೇ ಇರುವುದು ಅವರಿಗೇನೂ ತೊಂದರೆಯಿಲ್ಲ; ಅವರು ಕೊಂಡಿದ್ದ ಇನ್ನೊಂದು ಹಣ್ಣಿಗೆ ರಸೀದಿಯಲ್ಲಿ ‘W Apple" ಎಂದು ಇಂಗ್ಲಿಷಲ್ಲೇ ಇರುವುದೂ ಅಭ್ಯಂತರವೇನಿಲ್ಲ. ಆದರೆ ದಾಳಿಂಬೆಗೆ ‘Anaar" ಎಂದು ಬರೆದಿದ್ದು ಮಾತ್ರ ಅವರನ್ನು ನಖಶಿಖಾಂತ ಉರಿಸಿದೆ.

ಅದೊಂದು ಪದವನ್ನಷ್ಟೇ ಕೆಂಪು ಬಣ್ಣದಲ್ಲಿ ಸುತ್ತುವರಿದು ಸೋಷಿಯಲ್ ಮೀಡಿಯಾದಲ್ಲಿ ಅವರು ಹಾಕಿದ್ದ ಪೋಸ್ಟ್‌ನ ಒಕ್ಕಣೆ ಹೀಗಿತ್ತು: “ದಿನಕೊಂದು ಪದ ಅಂತ ನಾವ್ ಅವರಿಗೆ ಕಲಿಸಬೇಕಿತ್ತು. ಆದರೇ ಇಲ್ಲಿ ಅವರು ನಮಗೆ ದಿನಕೊಂದು ತುರುಕ್ತಾ ಇದ್ದಾರೆ..." ಆಮೇಲೆ ಆ ಗಲಾಟೆಯನ್ನು ದ ಹಿಂದುಸ್ಥಾನ್ ಟೈಮ್ಸ್, ದ ಡೈಲಿ ಜಾಗರಣ್ ಮುಂತಾದ ರಾಷ್ಟ್ರೀಯ ಪತ್ರಿಕೆಗಳೂ, ಇಂಡಿಯಾ ಟಿವಿ ಮುಂತಾದ ಸುದ್ದಿವಾಹಿನಿಗಳೂ ಸುದ್ದಿಯಾಗಿಸಿದ್ದವು.

ಓರಾಟಗಾರರ ಮೈಮನದಲ್ಲಿ ಕನ್ನಡದ ಬಗೆಗಿನ ಅಭಿಮಾನಕ್ಕಿಂತ ಹಿಂದೀದ್ವೇಷವೇ ತುಂಬಿ ತುಳುಕುತ್ತಿರುತ್ತದೆ ಎಂಬ ಕಠೋರ ವಾಸ್ತವವು ಜಗಜ್ಜಾಹಿರಾಗಿತ್ತು. ಇರಲಿ, ಅನಾರ್ ‌ಅನ್ನು ಅದರ ಪಾಡಿಗೇ ಬಿಟ್ಟು ಈಗ ನಾವು ದಾಳಿಂಬೆಯನ್ನು ಕೈಗೆತ್ತಿಕೊಳ್ಳೋಣ. ‘ಕಾವ್ಯಾನಂದ’ ಸಿದ್ದಯ್ಯ ಪುರಾಣಿಕರು ಬರೆದ ‘ಹಣ್ಣು ಮಾರುವವನ ಹಾಡು’ ನಮಗಿದ್ದದ್ದು ಎರಡನೆಯ ತರಗತಿಯ ಕನ್ನಡಭಾರತಿ ಪಠ್ಯಪುಸ್ತಕದಲ್ಲಿ. ಅದರಲ್ಲಿ “ಕೊಳ್ಳಿರಿ ಮಧುಗಿರಿ ದಾಳಿಂಬೆ ಬೆಳವಲ ಬಯಲಿನ ಸಿಹಿಲಿಂಬೆ..." ಎಂಬ ಸಾಲುಗಳು.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಪ್ರದೇಶವು ಒಂದು ಕಾಲದಲ್ಲಿ ದಾಳಿಂಬೆ ಬೆಳೆಗೆ ಪ್ರಸಿದ್ಧ ವಾಗಿತ್ತಂತೆ. ಬಿಳಿ, ಕೆಂಪು ಮತ್ತು ಹಳದಿ ಬಣ್ಣದ ಬೀಜಗಳುಳ್ಳ ದಾಳಿಂಬೆ ತಳಿಗಳು ಸಿಹಿ, ಹುಳಿ ಹಾಗೂ ತುಸು ಒಗರುಮಿಶ್ರಿತ ವಿಶಿಷ್ಟ ರುಚಿಗೆ ಹೆಸರಾಗಿದ್ದವಂತೆ. ಮಧುಗಿರಿಯ ಹದವಾದ ಶುಷ್ಕ ಹವಾಮಾನವು ದಾಳಿಂಬೆ ಬೆಳೆಯಲು ಅತ್ಯಂತ ಸೂಕ್ತವಾಗಿದ್ದಿರಬಹುದು. ಈಗ ಬಹುಶಃ ಮಧುಗಿರಿಗೇ ಬೆಂಗಳೂರಿನಿಂದ “ತನ್ನಿರಿ ತರಹೇವಾರಿ ದಾಳಿಂಬೆ" ಎನ್ನಬೇಕೇನೋ.

ಏಕೆಂದರೆ ಇತ್ತೀಚಿನ ದಶಕಗಳಲ್ಲಿ ತೀವ್ರ ನೀರಿನ ಅಭಾವ, ಸತತ ಬರಗಾಲ ಮತ್ತು ರೋಗಬಾಧೆ ಗಳಿಂದಾಗಿ ಅಲ್ಲಿನ ಸಾಂಪ್ರದಾಯಿಕ ದಾಳಿಂಬೆ ತೋಟಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಯಾಗಿದೆಯಂತೆ. ಆದರೂ, ಮಧುಗಿರಿ ಎಂದೊಡನೆ ಅಥವಾ ದಾಳಿಂಬೆ ಎಂದೊಡನೆ ಇಂದಿಗೂ “ಕೊಳ್ಳಿರಿ ಮಧುಗಿರಿ ದಾಳಿಂಬೆ..." ಸಾಲು ಕನ್ನಡಿಗರನೇಕರಿಗೆ ನೆನಪಾಗುವುದಂತೂ ಹೌದು.

ಕನ್ನಡಿಗರಿಗಷ್ಟೇ ಅಲ್ಲ ಭಾರತೀಯರೆಲ್ಲರಿಗೂ ದಾಳಿಂಬೆ ಅನಾದಿ ಕಾಲದಿಂದಲೂ ಪರಿಚಿತವೇ. ಅದೇನೂ ಪಪ್ಪಾಯಿ ಅನನಾಸು ಟೊಮೆಟೊಗಳಂತೆ ಒಂದೆರಡು ಶತಮಾನಗಳಿಂದೀಚೆಯಷ್ಟೇ ಭಾರತಕ್ಕೆ ಪ್ರವೇಶಿಸಿದ ಹಣ್ಣಲ್ಲ. ಸಾವಿರಾರು ವರ್ಷಗಳಿಂದಲೂ ಭರತಭೂಮಿಯಲ್ಲಿ ಬೆಳೆಯು ತ್ತಿದೆ. ತನ್ನ ರೂಪ ಶ್ರೀಮಂತಿಕೆಯಿಂದ, ಮುಖ್ಯವಾಗಿ ಔಷಧಿಯ ಗುಣದಿಂದಲೂ ಪ್ರಸಿದ್ಧವಾಗಿದೆ, ಎಲ್ಲರ ನೆಚ್ಚಿನದಾಗಿದೆ. ಭಾರತೀಯ ಸಾಹಿತ್ಯದಲ್ಲಿ ದಾಳಿಂಬೆಯನ್ನು ಪ್ರಾಚೀನ ಕಾಲದಿಂದಲೂ ಸಮೃದ್ಧಿ, ಸೌಂದರ್ಯ, ಮತ್ತು ಆರೋಗ್ಯದ ಸಂಕೇತವಾಗಿ ಉಲ್ಲೇಖಿಸಲಾಗಿದೆ. ಧಾರ್ಮಿಕ ಗ್ರಂಥಗಳಿಂದ ಹಿಡಿದು ಶ್ರೇಷ್ಠ ಕಾವ್ಯಗಳವರೆಗೆ ದಾಳಿಂಬೆಯ ಉಲ್ಲೇಖಗಳು ಕಂಡುಬರುತ್ತವೆ.

ಋಗ್ವೇದ ಮತ್ತು ಅಥರ್ವ ವೇದಗಳಲ್ಲಿ ದಾಳಿಂಬೆಯನ್ನು ಸಂಪತ್ತು, ಫಲವತ್ತತೆ ಮತ್ತು ದೈವಿಕ ಆಶೀರ್ವಾದದ ಸಂಕೇತವಾಗಿ ವರ್ಣಿಸಲಾಗಿದೆ. ರಾಮಾಯಣದಲ್ಲಿ ಆಂಜನೇಯನು ಚಿಕ್ಕವನಿದ್ದಾಗ ಸೂರ್ಯನನ್ನು ಸೇಬು ಹಣ್ಣು ಎಂದುಕೊಂಡು ಹಿಡಿಯಲಿಕ್ಕೆ ಯತ್ನಿಸಿದ್ದನು ಎಂಬಲ್ಲಿ ಸೇಬು ಬದಲಿಗೆ ದಾಳಿಂಬೆ ಎಂದು ಕೂಡ ಹೇಳಲಾಗಿದೆ.

ಪಕ್ವ ದಾಳಿಂಬೆಯು ಕೆಂಪು ಚೆಂಡಿನಂತೆ ಕಾಣುವುದರಿಂದ ಅದು ಸಮಂಜಸವೇ. ಕಪಿಗೆ ಸೂರ್ಯನೇ ದಾಳಿಂಬೆ ಹಣ್ಣಿನಂತೆ ಕಂಡುಬಂದರೆ ಕವಿಗೆ ಹೆಣ್ಣಿನ ರೂಪರಾಶಿಯ ಬಣ್ಣನೆಗೂ ದಾಳಿಂಬೆ ಒದಗಿ ಬಂದಿದೆ. “ಗೀತಾಂಜಲಿ... ಹಾಲುಗೆನ್ನೆಗೆ ವಾರೆಗಣ್ಣಿಗೆ ನಮ್ಮೂರ ಹೆಣ್ಣಿಗೆ... ಪುಷ್ಪಾಂಜಲಿ... ತೊಂಡೆ ಹಣ್ಣಿಗೆ ಬಾಳೆ ದಿಂಡಿಗೆ ದಾಳಿಂಬೆ ಹಣ್ಣಿಗೆ..." ಅಥವಾ “ಕೆನ್ನೆ ಮೇಲೆ ಸೇಬಿದೆ ಅಲ್ಲೇ ಗಿಣಿಯ ಮೂಗಿದೆ... ತೊಂಡೆ ಹಣ್ಣು ತುಟಿಯಲಿ ದಾಳಿಂಬೆ ಕಾಳು ಬಾಯಲಿ..." ರೀತಿಯ ಹಂಸಲೇಖ ಸಾಹಿತ್ಯದಲ್ಲಷ್ಟೇ ಅಲ್ಲ.

ಕನ್ನಡದ ಆದಿಕವಿ ಪಂಪ, ರನ್ನ, ಜನ್ನ, ಹರಿಹರನಂತಹ ಮಹಾಕವಿಗಳು ತಮ್ಮ ಕಾವ್ಯಗಳಲ್ಲಿ ನಾಯಕಿಯರ ಸೌಂದರ್ಯವನ್ನು ವರ್ಣಿಸುವಾಗ ದಾಳಿಂಬೆಯನ್ನು ಧಾರಾಳವಾಗಿ ಬಳಸಿದ್ದಾರೆ. ಸುಂದರವಾದ, ಸಮನಾದ ಮತ್ತು ಹೊಳೆಯುವ ಹಲ್ಲುಗಳನ್ನು ವರ್ಣಿಸಲು ‘ದಾಡಿಮ ಬೀಜ’ (ದಾಳಿಂಬೆ ಬೀಜ) ಎಂಬ ಪದಬಳಕೆ. ಹಲ್ಲುಗಳ ಸಾಲು ದಾಳಿಂಬೆಯ ಬಿಳಿ ಅಥವಾ ಕೆಂಪು ಮಿಶ್ರಿತ ಬೀಜಗಳಂತೆ ಜೋಡಿಸಿದ ಹಾಗಿದೆ ಎಂದು ವರ್ಣಿಸುವ ಮೂಲಕ ಹೆಣ್ಣಿನ ಸೌಂದರ್ಯವರ್ಣನ, ಜೊತೆಗೇ ಕಾವ್ಯದ ಸೌಂದರ್ಯವರ್ಧನ ಕೂಡ.

16ನೇ ಶತಮಾನದ ಪ್ರಸಿದ್ಧ ಕವಿ ರತ್ನಾಕರವರ್ಣಿಯು ಭರತೇಶ ವೈಭವದಲ್ಲಿ ಅರಮನೆಯ ವೈಭೋಗ, ಉದ್ಯಾನವನಗಳು ಮತ್ತು ಋತುಮಾನಗಳನ್ನು ವರ್ಣಿಸುವಾಗ- “ತೋಟದಲ್ಲಿ ದಾಳಿಂಬೆ ಹಣ್ಣುಗಳು ಮಾಗಿ, ಅವುಗಳ ಸಿಪ್ಪೆ ಬಿರಿದು ಒಳಗೆ ಹೊಳೆಯುವ ಕೆಂಪು ಬೀಜಗಳು ಕಾಣುತ್ತಿರುವುದು ಅರಮನೆಯ ನಾಯಕಿಯರು ಮಂದಸ್ಮಿತರಾಗಿ ನಸುನಗುತ್ತ ಹಲ್ಲುಗಳನ್ನು ತೋರಿಸುತ್ತಿರುವಂತೆ ಭಾಸವಾಗುತ್ತಿದೆ" ಎಂದು ಪ್ರಕೃತಿಯನ್ನು ಹೆಣ್ಣಿನ ಸೌಂದರ್ಯಕ್ಕೆ ಹೋಲಿಸಿ ಕಾವ್ಯಾತ್ಮಕವಾಗಿಸಿದ್ದಾನೆ.

ಕುಮಾರವ್ಯಾಸನು ಕರ್ಣಾಟ ಭಾರತ ಕಥಾಮಂಜರಿಯಲ್ಲಿ ಕೃಷ್ಣನ ದ್ವಾರಕೆ ಅಥವಾ ರಾಜರ ಸಭೆಗಳ ವೈಭವವನ್ನು ಮತ್ತು ಪ್ರಕೃತಿಯ ಸಮೃದ್ಧಿಯನ್ನು ವರ್ಣಿಸುವ ಸಾಲುಗಳಲ್ಲಿ ದಾಳಿಂಬೆ ಯನ್ನು ಬಳಸಿದ್ದಾನೆ. ತೋಟಗಳಲ್ಲಿ ಅಡಿಕೆ, ಬಾಳೆ, ಮಾವುಗಳ ಜೊತೆಗೆ ‘ದಾಡಿಮ’ (ದಾಳಿಂಬೆ) ವನಗಳು ತುಂಬಿ ತುಳುಕುತ್ತಿರುವುದು ಅವನ ಪ್ರಕಾರ ದೇಶದ ಸುಭಿಕ್ಷೆ ಮತ್ತು ಫಲವತ್ತತೆಯ ಸಂಕೇತ. ಶರಣರು ಮತ್ತು ದಾಸರು ಭೌತಿಕ ವಸ್ತುಗಳನ್ನು ಆಧ್ಯಾತ್ಮಿಕ ಚಿಂತನೆಗೆ ರೂಪಕವಾಗಿ ಬಳಸುವುದು ಸಾಮಾನ್ಯ.

ಹಾಗೆ ಕೆಲವು ತತ್ತ್ವಪದಗಳಲ್ಲಿ ಮಾನವನ ದೇಹ ಅಥವಾ ಸಂಸಾರವನ್ನು ದಾಳಿಂಬೆ ಹಣ್ಣಿಗೆ ಹೋಲಿಸಿದ್ದಿದೆ. ಮೇಲ್ನೋಟಕ್ಕೆ ಗಟ್ಟಿಯಾದ ಸಿಪ್ಪೆ (ಅಹಂಕಾರ ಅಥವಾ ಲೌಕಿಕ ಜಗತ್ತು) ಹೊಂದಿದ್ದರೂ, ಅದನ್ನು ಒಡೆದು ನೋಡಿದಾಗ ಒಳಗೆ ನೂರಾರು ಜೀವಗಳು ಅಥವಾ ಭಗವಂತನ ನಾಮಸ್ಮರಣೆಯೆಂಬ ಸವಿಯಾದ ಬೀಜಗಳು ತುಂಬಿರುತ್ತವೆ ಎಂಬ ತಾತ್ತ್ವಿಕ ಅರ್ಥವನ್ನು ನೀಡಲು ದಾಳಿಂಬೆಯ ಬಳಕೆ. ಸಂಸ್ಕೃತದಲ್ಲಿ ದಾಡಿಮ ಎಂದರೆ ದಾಳಿಂಬೆ.

ಲಲಿತಾಸಹಸ್ರನಾಮದಲ್ಲಿ “ತಾಂಬೂಲಪೂರಿತಮುಖೀ ದಾಡಿಮೀ ಕುಸುಮಪ್ರಭಾ..." ಎಂದು ದೇವಿಯ ವರ್ಣನೆ. ಆಕೆಯ ಹೊಳೆವ ಕೆಂಪು ಬಣ್ಣವು ದಾಳಿಂಬೆಯಂತೆ ಎಂದು. ಸಂಸ್ಕ ತದಲ್ಲಿ ದಾಳಿಂಬೆಯು ಬೇರೆ ಹೆಸರುಗಳಿಂದಲೂ ಕರೆಯಲ್ಪಟ್ಟಿದೆ. ‘ದಂತಬೀಜಂ’ (ಹಲ್ಲುಗಳನ್ನು ದಾಳಿಂಬೆ ಬೀಜಗಳಿಗೆ ಹೋಲಿಸಿದ್ದರ ಉಲ್ಟಾ ಇದು.

ಹಲ್ಲುಗಳಂಥ ಬೀಜಗಳಿರುವುದು ಆದ್ದರಿಂದ ದಂತಬೀಜ), ‘ರಕ್ತಬೀಜಂ’ (ನೆತ್ತರಿನ ಬಣ್ಣದ ಬೀಜ ಗಳುಳ್ಳದ್ದು), ‘ಕುಚಫಲಂ’ (ತರುಣಿಯ ಸ್ತನಗಳಂತೆ ಕಾಣಿಸುವುದು), ‘ವೃತ್ತಫಲಂ’ (ದುಂಡಗೆ ಉರುಟಾಗಿ ಕಾಣಿಸುವುದು), ‘ಪಿಂಡೀರಂ’ (ಪಿಂಡದಂತೆ ಗೋಲಾಕಾರದಲ್ಲಿ ಕಾಣಿಸುವುದು), ‘ಸತಲಂ’ (ನೋಡಲಿಕ್ಕೂ ಚಂದ, ಔಷಧಿಯತೆಯಿಂದ ಗುಣದಲ್ಲೂ ಶ್ರೇಷ್ಠ ಆದ್ದರಿಂದ ಅತ್ಯುತ್ತಮ ಹಣ್ಣು ಎಂಬ ಭಾವನೆ) ಮುಂತಾಗಿ ಸಂದರ್ಭೋಚಿತವಾಗಿ ವಿವಿಧ ನಾಮಾವಳಿ.

ಆಯುರ್ವೇದದ ಪ್ರಮುಖ ಗ್ರಂಥಗಳಾದ ಚರಕಸಂಹಿತೆ ಮತ್ತು ಸುಶ್ರುತಸಂಹಿತೆಗಳಲ್ಲಿ ದಾಳಿಂಬೆ ಯ ಔಷಧಿಯ ಗುಣಗಳನ್ನು ವಿಸ್ತಾರವಾಗಿ ವಿವರಿಸಲಾಗಿದೆ. ರಕ್ತಹೀನತೆ, ಜೀರ್ಣಕ್ರಿಯೆಯ ತೊಂದರೆಗಳು ಮತ್ತು ದೇಹದ ಉಷ್ಣತೆಯನ್ನು ಕಡಿಮೆ ಮಾಡುವಲ್ಲಿ ಇದರ ಪಾತ್ರವನ್ನು ಈ ವೈದ್ಯಕೀಯ ಸಾಹಿತ್ಯದಲ್ಲಿ ದಾಖಲಿಸಲಾಗಿದೆ. ಇಷ್ಟೆಲ್ಲ ಜನಮನ್ನಣೆ ಗಳಿಸಿದ ದಾಳಿಂಬೆಯು ಜನಪದದಲ್ಲೂ ಹಾಸುಹೊಕ್ಕಿರುವುದು ಸಹಜವೇ.

ಬಂಗಾಳಿ ಜನಪದ ಕಥೆಗಳ ಪ್ರಸಿದ್ಧ ಸಂಗ್ರಹವಾದ ಠಾಕೂರ್‌ಮಾರ್ ಝುಲಿಯಲ್ಲಿ ‘ದಾಳಿಂಬೆ ರಾಜಕುಮಾರ’ ಅಂತಲೇ ಒಂದು ಪ್ರಸಿದ್ಧ ಕಥೆ ಇದೆಯಂತೆ. ಸಾಹಸ, ಮಾಂತ್ರಿಕತೆ, ಶಿಷ್ಟರಕ್ಷಣ ದುಷ್ಟಸಂಹಾರದ ರೋಚಕ ಕಥೆ ಅದು. ಒಂದಾನೊಂದು ರಾಜ್ಯದ ರಾಜ ಮತ್ತು ರಾಣಿಗೆ ಒಬ್ಬನೇ ಮಗ, ಅವನ ಹೆಸರು ದಾಳಿಂಬೆ ರಾಜಕುಮಾರ (ಡಾಲಿಮ್ ಕುಮಾರ್). ಆತನ ತಾಯಿಯಾದ ರಾಣಿಯ ಪ್ರಾಣವು ಒಂದು ವಿಶೇಷವಾದ ಪಗಡೆಯಾಟದ ದಾಳಗಳಲ್ಲಿ ಅಡಗಿರುತ್ತದೆ. ಈ ರಹಸ್ಯವು ಅರಮನೆಯ ಆವರಣದಲ್ಲಿದ್ದ ತಾಳೆ ಮರದಲ್ಲಿ ವಾಸಿಸುತ್ತಿದ್ದ ಒಬ್ಬ ದುಷ್ಟ ರಾಕ್ಷಸಿಗೆ ತಿಳಿದಿರುತ್ತದೆ.

ಒಂದು ದಿನ ರಾಜನು ಬೇಟೆಗೆ ಹೋದಾಗ, ಬಾಲಕ ರಾಜಕುಮಾರ ಗೆಳೆಯರೊಂದಿಗೆ ಆ ದಾಳಗಳನ್ನಿಟ್ಟು ಕೊಂಡು ಆಟವಾಡುತ್ತಿರುತ್ತಾನೆ. ಆಗ ರಾಕ್ಷಸಿಯು ಭಿಕ್ಷುಕಿಯ ವೇಷದಲ್ಲಿ ಬಂದು ಆ ದಾಳಗಳನ್ನು ತನಗೆ ತೋರಿಸುವಂತೆ ಕೇಳುತ್ತಾಳೆ. ಅದರ ಮಹತ್ತ್ವ ತಿಳಿಯದ ರಾಜಕುಮಾರ ದಾಳಗಳನ್ನು ಕೊಟ್ಟಾಗ, ಅವಳು ಅದರ ಮೇಲೆ ಮಾಯಾಮಂತ್ರವನ್ನು ಊದುತ್ತಾಳೆ.

ಒಡನೆಯೇ ರಾಣಿ ಪ್ರಜ್ಞೆ ತಪ್ಪಿ ಬೀಳುತ್ತಾಳೆ. ಆಮೇಲೆ ರಾಕ್ಷಸಿಯು ರಾಣಿಯ ರೂಪವನ್ನು ಧರಿಸಿ ಅರಮನೆ ಯನ್ನು ಸೇರಿಕೊಳ್ಳುತ್ತಾಳೆ. ಆದರೆ ರಾಜಕುಮಾರನಿಗೆ ಮಾತ್ರ ಆಕೆ ತನ್ನ ನಿಜವಾದ ತಾಯಿಯಲ್ಲ ಎಂಬ ಅನುಮಾನವಿರುತ್ತದೆ. ರಾಜಕುಮಾರ ಬೆಳೆದು ದೊಡ್ಡವನಾದಾಗ, ರಾಕ್ಷಸಿ ರಾಣಿ ಅವನನ್ನು ಸಂಚಿನಿಂದ ದೂರದ ರಾಜ್ಯಕ್ಕೆ ಕಳುಹಿಸುತ್ತಾಳೆ. ಅರಮನೆ, ಅಽಕಾರ ತನಗೇ ಸಿಗಬೇಕೆಂಬ ಹುನ್ನಾರ. ದಾಳಿಂಬೆ ರಾಜಕುಮಾರ ರೆಕ್ಕೆಗಳಿರುವ ಕುದುರೆಯ ಮೇಲೆ ಪ್ರಯಾಣ ಬೆಳೆಸುತ್ತಾನೆ. ದಾರಿಯಲ್ಲಿ ಅವನು ಮತ್ತೊಂದು ರಾಜ್ಯದ ರಾಜಕುಮಾರಿಯನ್ನು ರಾಕ್ಷಸಮೃಗದಿಂದ ಕಾಪಾಡುತ್ತಾನೆ.

ದುಷ್ಟ ಶಕ್ತಿಗಳ ಕೈಗೆ ಸಿಲುಕಿದ್ದ ತನ್ನ ಏಳು ಜನ ಅಣ್ಣಂದಿರನ್ನು (ಬಾಲ್ಯದ ಸಹಚರರನ್ನು) ಮುಕ್ತ ಗೊಳಿಸಿ ಅವರೆಲ್ಲರಿಗೂ ನಾಯಕನಾಗುತ್ತಾನೆ. ಇತ್ತ ಅರಮನೆಯಲ್ಲಿದ್ದ ರಾಕ್ಷಸಿಯು ರಾಜಕುಮಾರನ ಪ್ರಾಣದ ರಹಸ್ಯವನ್ನು ಪತ್ತೆಹಚ್ಚುತ್ತಾಳೆ. ರಾಜಕುಮಾರನ ಜೀವವು ಒಂದು ದಾಳಿಂಬೆ ಹಣ್ಣಿನ ಬೀಜಗಳಲ್ಲಿ ಅಡಗಿರುತ್ತದೆ ಎಂದು (ಅದಕ್ಕಾಗಿಯೇ ಆತ ‘ದಾಳಿಂಬೆ ರಾಜಕುಮಾರ’). ರಾಕ್ಷಸಿಯು ಆ ಬೀಜಗಳನ್ನು ಅರಮನೆಯ ಸಾವಿರ ಮೆಟ್ಟಿಲುಗಳ ಕೆಳಗೆ ಕತ್ತಲೆಯಲ್ಲಿ ಹೂತಿಡಲು ಸಂಚು ಹೂಡುತ್ತಾಳೆ.

ಒಂದು ಬೀಜವು ಮೆಟ್ಟಿಲುಗಳ ಕೆಳಗೆ ಬಿದ್ದಾಗ, ಕಾಡಿನಲ್ಲಿದ್ದ ರಾಜಕುಮಾರನಿಗೆ ದೃಷ್ಟಿ ಹೋಗಿ ಕತ್ತಲಾವರಿಸುತ್ತದೆ. ಆದರೆ, ರಾಜಕುಮಾರನ ಪ್ರಾಣ ಸಂಪೂರ್ಣವಾಗಿ ಹೋಗುವ ಮೊದಲೇ ರಾಕ್ಷಸಿಯ ತಾಳೆಮರದ ರಹಸ್ಯ ಬಯಲಾಗುತ್ತದೆ. ರಾಜಕುಮಾರ ಮತ್ತು ಅವನ ಅಣ್ಣಂದಿರು ರಾಕ್ಷಸಿಯ ಅರಮನೆಯ ತಾಳೆಮರದಲ್ಲಿದ್ದ ಮಾಂತ್ರಿಕ ಸರ್ಪವನ್ನು ಕಂಡುಹಿಡಿದು, ಅದನ್ನು ಕತ್ತರಿಸಿ ಏಳು ತುಂಡುಗಳನ್ನಾಗಿ ಮಾಡುತ್ತಾರೆ. ಆ ಸರ್ಪ ಸತ್ತ ಕೂಡಲೇ ರಾಕ್ಷಸಿಯ ಮಾಯಾಶಕ್ತಿ ಅಳಿಯುತ್ತದೆ.

ಅರಮನೆಯ ಮೆಟ್ಟಿಲುಗಳು ಕುಸಿದುಬೀಳುತ್ತವೆ ಮತ್ತು ಅಲ್ಲಿ ಸಾವಿರ ಕೊಂಬೆಗಳ ಬಂಗಾರದ ದಾಳಿಂಬೆ ಮರವೊಂದು ಚಿಗುರೊಡೆಯುತ್ತದೆ. ರಾಕ್ಷಸಿಯ ನಾಶದೊಂದಿಗೆ, ದಾಳಿಂಬೆ ರಾಜಕುಮಾರನಿಗೆ ಮರಳಿ ದೃಷ್ಟಿ ಮತ್ತು ಶಕ್ತಿ ಬರುತ್ತದೆ. ಅವನು ತನ್ನ ರಾಜ್ಯಕ್ಕೆ ಮರಳಿ ಬಂದು ಮಾಂತ್ರಿಕ ದಾಳಗಳನ್ನು ವಶಪಡಿಸಿಕೊಳ್ಳುತ್ತಾನೆ. ಆ ದಾಳಗಳ ಶಕ್ತಿಯಿಂದ ಅವನ ನಿಜವಾದ ತಾಯಿ(ರಾಣಿ) ದೀರ್ಘ ನಿದ್ರೆಯಿಂದ ಎಚ್ಚರಗೊಳ್ಳುತ್ತಾಳೆ.

ಮರುದಿನ ಬೆಳಿಗ್ಗೆ ಬಂಗಾರದ ದಾಳಿಂಬೆ ಮರದಲ್ಲಿ ಸಾವಿರಾರು ಹೂವುಗಳು ಅರಳಿ, ಕ್ರಮೇಣ ಅವು ಹಣ್ಣುಗಳಾಗಿ, ರಾಜ್ಯದಲ್ಲಿ ಮತ್ತೆ ಸುಖಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ. ಹಾಗಾಗಿ, ಮುಂದಿನ ಸಲ ನೀವು ಅಂಗಡಿಯಿಂದ ದಾಳಿಂಬೆ ತರುವಾಗ, ತಂದು ತಿನ್ನುವಾಗ, ಇಷ್ಟೆಲ್ಲ ಸಾಂಸ್ಕ ತಿಕ ಹಿನ್ನೆಲೆ ಇದೆಯೆಂದು ಗೊತ್ತಿರಲಿ. ಆದ್ದರಿಂದಲೇ, ದಾಳಿಂಬೆ ನಿನ್ನ ರೂಪ ಗುಣ ಮಹಿಮೆಯನು ಏನೆಂಬೆ!

ಶ್ರೀವತ್ಸ ಜೋಶಿ

View all posts by this author