ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

R‌ T Vittalmurthy Column: ಬಿಜೆಪಿಯಲ್ಲಿ ಮತ್ತೆ ಪ್ರೆಸಿಡೆಂಟ್‌ ವಾರ್

ಸರಕಾರ ಅಸ್ತಿತ್ವಕ್ಕೆ ಬಂದು 33 ತಿಂಗಳುಗಳು ಕಳೆದಿವೆ. ಈಗಲಾದರೂ ಸಂಪುಟ ಪುನಾರಚನೆ ಮಾಡದಿದ್ದರೆ ಹೇಗೆ? ಅಂತ ಹಿರಿಯ ಶಾಸಕರು ವರಾತ ತೆಗೆಯುತ್ತಿದ್ದಾರೆ. ಅವರ ಈ ವರಾತ ವನ್ನು ತಡೆಗಟ್ಟಲು ಮುಂದಾಗದಿದ್ದರೆ ಅಪಾಯ ಗ್ಯಾರಂಟಿ. ಹೀಗಾಗಿ ಸಂಪುಟ ಪುನಾರಚನೆಗೆ ಅನುಮತಿ ಕೊಡಿ ಅಂತ ಕೇಳುತ್ತಾರೆ.

ಮೂರ್ತಿಪೂಜೆ

ಕಳೆದ ವಾರ ಕೇಂದ್ರ ಸಚಿವರೊಬ್ಬರು ಕರ್ನಾಟಕಕ್ಕೆ ಬಂದರು. ಹೀಗೆ ಬಂದ ಅವರನ್ನು ಪ್ರತಿಪಕ್ಷದ ಕೆಲ ಶಾಸಕರು ಭೇಟಿ ಮಾಡಿ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು. ಹೀಗೆ ಕೇಂದ್ರ ಸಚಿವರ ಜತೆ ಈ ಶಾಸಕರು ಚರ್ಚಿಸುವ ಹೊತ್ತಿಗೆ ಕರ್ನಾಟಕದ ರಾಜಕಾರಣ ದಲ್ಲಿ ವಿಪ್ಲವದ ಮಾತುಗಳು ಕೇಳಿಬರತೊಡಗಿದ್ದವು.

ಅದರ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಯಾಂಪಿನ ನಾಯಕರು “ಬಜೆಟ್ ಅಧಿವೇಶನ ಮುಗಿಯಲಿ. ಸಿಎಂ ಸಾಹೇಬ್ರು ದಿಲ್ಲಿಗೆ ಹೋಗುತ್ತಾರೆ. ರಾಹುಲ್ ಗಾಂಧಿ ಯವರನ್ನು ಭೇಟಿ ಮಾಡಿ ಎರಡರಂದು ವಿಷಯವನ್ನು ಸೆಟ್ಲ್ ಮಾಡಿಕೊಂಡು ಬರುತ್ತಾರೆ. ಈ ಪೈಕಿ ಮೊದಲನೆಯದು ಸಂಪುಟ ಪುನಾರಚನೆಯ ವಿಷಯ.

ಸರಕಾರ ಅಸ್ತಿತ್ವಕ್ಕೆ ಬಂದು 33 ತಿಂಗಳುಗಳು ಕಳೆದಿವೆ. ಈಗಲಾದರೂ ಸಂಪುಟ ಪುನಾರಚನೆ ಮಾಡದಿದ್ದರೆ ಹೇಗೆ? ಅಂತ ಹಿರಿಯ ಶಾಸಕರು ವರಾತ ತೆಗೆಯುತ್ತಿದ್ದಾರೆ. ಅವರ ಈ ವರಾತ ವನ್ನು ತಡೆಗಟ್ಟಲು ಮುಂದಾಗದಿದ್ದರೆ ಅಪಾಯ ಗ್ಯಾರಂಟಿ. ಹೀಗಾಗಿ ಸಂಪುಟ ಪುನಾರಚನೆಗೆ ಅನುಮತಿ ಕೊಡಿ ಅಂತ ಕೇಳುತ್ತಾರೆ.

ಈ ಪ್ರಸ್ತಾಪವನ್ನು ರಾಹುಲ್ ಗಾಂಧಿ ಒಪ್ಪಿದರೆ ಫೈನ್. ಮುಂದಿನ ತಿಂಗಳು ಸಂಪುಟ ಪುನಾರಚನೆ ಕಾರ್ಯ ಪೂರ್ಣವಾಗುತ್ತದೆ. ಹೀಗೆ ಸಂಪುಟ ಪುನಾರಚನೆ ಕಾರ್ಯ ನಡೆದರೆ ಅನುಮಾನವೇ ಬೇಡ, ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಮಾತು ಸದ್ಯಕ್ಕಿಲ್ಲ ಎಂಬುದು ಕನ್ʼಫರ್ಮ್.

ಇದನ್ನೂ ಓದಿ: R T Vittalmurthy Column: ದೇವೇಗೌಡ್ರು ಮತ್ತೆ ರಾಜ್ಯಸಭೆಗೆ ಹೋಗುತ್ತಾರೆ

ಒಂದು ವೇಳೆ ಸಂಪುಟ ಪುನಾರಚನೆಗೆ ಅನುಮತಿ ಸಿಗದಿದ್ದರೆ, ಅಧಿಕಾರ ತ್ಯಾಗಕ್ಕೆ ಸಜ್ಜಾಗಿ ಎಂಬ ಮೆಸೇಜು ಸಿಕ್ಕರೆ ಸಿಎಂ ನಿರ್ಣಾಯಕ ಆಟಕ್ಕೆ ಸಜ್ಜಾಗುತ್ತಾರೆ. ಅಂಥ ಆಟ ಶುರು ವಾದರೆ ಕಷ್ಟ"- ಅಂತ ನಿರ್ಣಾಯಕ ಆಟದ ಬಗ್ಗೆ ಮಾತನಾಡಿದರೆ ಡಿಸಿಎಂ ಡಿ.ಕೆ.ಶಿವ ಕುಮಾರ್ ಅವರ ಪಾಳಯದ ನಾಯಕರು ಕೂಡಾ ನಿರ್ಣಾಯಕ ಆಟದ ಮಾತನಾಡುತ್ತಾರೆ.

ಈ ಪೈಕಿ ಡಿಕೆಶಿ ಬ್ರಿಗೇಡ್‌ನ ಲೆಪ್ಟಿನೆಂಟ್ ಕರ್ನಲ್, ಶಾಸಕ ಇಕ್ಬಾಲ್ ಹುಸೇನ್ ಅವರು, “ಯುಗಾದಿಯ ನಂತರ ಶುಭಸುದ್ದಿ ಬರುತ್ತದೆ. ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ" ಎಂದರೆ ಇನ್ನು ಕೆಲವರು, “ಕಳೆದ ವಾರ ಐಟಿಸಿ ಗಾರ್ಡೇನಿಯಾದಲ್ಲಿ ಡಿ.ಕೆ.ಶಿವಕುಮಾರ್ ಅಯೋಜಿಸಿದ ಭೋಜನಕೂಟಕ್ಕೆ ಪಕ್ಷದ ಬಹುತೇಕ ಶಾಸಕರು ಬಂದರು. ಇದು ಶಿವಕುಮಾರ್ ಅವರ ನಾಯಕತ್ವವನ್ನು ಎಲ್ಲರೂ ಒಪ್ಪಿಕೊಳ್ಳುತ್ತಿರುವ ಸಂಕೇತ" ಎಂದು ಬಣ್ಣಿಸುತ್ತಾರೆ.

ಆದರೆ ಇದನ್ನು ಸಿಎಂ ಸಿದ್ದರಾಮಯ್ಯ ಪಾಳಯ ಒಪ್ಪುವುದಿಲ್ಲ. ಬದಲಿಗೆ, “ಶಿವಕುಮಾರ್ ಅವರು ಆಯೋಜಿಸಿದ ಭೋಜನಕೂಟಕ್ಕೆ ಹೋಗಲು ಬಹುತೇಕ ಶಾಸಕರು ಸಿದ್ದರಾಮಯ್ಯ ಅವರ ಒಪ್ಪಿಗೆ ಪಡೆದಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ನಾನೇ ಅ ಭೋಜನಕೂಟಕ್ಕೆ ಹೋಗುತ್ತಿದ್ದೇನೆ. ಹೀಗಾಗಿ ಅಲ್ಲಿಗೆ ಹೋಗುವ ವಿಷಯದಲ್ಲಿ ಗೊಂದಲ ಬೇಡ ಅಂತ ಸ್ವತಃ ಸಿದ್ದರಾಮಯ್ಯ ಅವರೇ ಹೇಳಿದ್ದರು. ಹೀಗಾಗಿ ಭೋಜನಕೂಟದಲ್ಲಿ ಪಾಲ್ಗೊಂಡ ಶಾಸಕರು, ಶಿವಕುಮಾರ್ ಅವರನ್ನು ಒಪ್ಪಿಕೊಂಡು ಬಿಟ್ಟಿದ್ದಾರೆ ಎಂಬುದು ಸುಳ್ಳು" ಎಂದು ವಿವರಿಸುತ್ತಾರೆ.

sunil and Shwath

ಹೀಗೆ ಉಭಯ ಬಣಗಳ ಮೂಲಕ ತೇಲಿಬರುತ್ತಿರುವ ಸುದ್ದಿಗಳನ್ನು ಆಧಾರವಾಗಿಟ್ಟು ಕೊಂಡ ಪ್ರತಿಪಕ್ಷದ ಕೆಲ ಶಾಸಕರು ಕೇಂದ್ರದ ಆ ಸಚಿವರು ಬಂದಾಗ ಅವರನ್ನು ಭೇಟಿ ಮಾಡಿ ಈ ಬಗ್ಗೆ ವಿವರಿಸಿzರೆ. ಯಾವಾಗ ಈ ಶಾಸಕರು ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ವಿವರಿಸಿದರೋ, ಆಗ ಕೇಂದ್ರದ ಅ ಸಚಿವರು, “ರೀ, ಕರ್ನಾಟಕದಲ್ಲಿ ಸಿಎಂ-ಡಿಸಿಎಂ ಮಧ್ಯೆ ನಡೆಯುತ್ತಿರುವ ಸಂಘರ್ಷ ಒಂಥರಾ ಕಾವೇರಿ ವಿವಾದ ಇದ್ದ ಹಾಗೆ. ಕಾಂಗ್ರೆಸ್ ಹೈಕಮಾಂಡ್ ಅನ್ನುವ ಕೋರ್ಟು ಅದನ್ನು ಬಗೆಹರಿಸುವುದು ಕಷ್ಟ" ಎಂದಿದ್ದಾರೆ.

ಕೇಂದ್ರ ಸಚಿವರ ಮಾತು ಕೇಳಿ ಬೆಕ್ಕಸ ಬೆರಗಾದ ಶಾಸಕರು, “ಇದೇನು ಸರ್ ಹೀಗೆ ಹೇಳು ತ್ತಿದ್ದೀರಿ?" ಎಂದು ಕೇಳಿದರಂತೆ. ಆದರೆ ಈ ಪ್ರಶ್ನೆಯಿಂದ ವಿಚಲಿತರಾಗದ ಕೇಂದ್ರ ಸಚಿವರು, “ನಾನು ಹೇಳುತ್ತಿರುವುದು ನಿಮಗೆ ವಿಚಿತ್ರ ಅನ್ನಿಸಬಹುದು. ಅದರೂ ಇದು ನಿಜ. ಅಧಿಕಾರಕ್ಕಾಗಿ ಸಿಎಂ-ಡಿಸಿಎಂ ನಡೆಸುತ್ತಿರುವ ಕದನವು ಕಾವೇರಿ ವಿವಾದದ ತರಹ.

ಇದನ್ನು ಎರಡೂ ಪಾರ್ಟಿಗಳು(ಸಿಎಂ-ಡಿಸಿಎಂ)ಪರಸ್ಪರ ಕೂತು ಮಾತನಾಡಬೇಕು. ಅಮೈಕಬಲ್ ಅಗಿ ಸೆಟ್ಲ್ ಮಾಡಿಕೊಳ್ಳಬೇಕು. ಇಲ್ಲ ಇದು ಹೈಕಮಾಂಡ್ ಅನ್ನೋ ಕೋರ್ಟಿನ ಸೆಟ್ಲ್ ಅಗಲಿ ಎಂದರೆ ಅವರು ಸೆಟ್ಲ್ ಮಾಡುವುದಿಲ್ಲ.

ಬದಲಿಗೆ ಹಿಯರಿಂಗ್ ಡೇಟನ್ನು ಮುಂದೂಡುತ್ತಾ ಹೋಗುತ್ತಾರೆ. ಒಂದು ವೇಳೆ ಯಾರ ಪರವಾಗಿಯಾದರೂ ಕೇಸು ಸೆಟ್ಲ್ ಮಾಡಬೇಕು ಅಂತ ಹೊರಟರೆ ಯಾವ ಲೆವೆಲ್ಲಿನ ಡ್ಯಾಮೇಜ್ ಅಗುತ್ತದೆ ಅಂತ ಕಾಂಗ್ರೆಸ್ ಹೈಕಮಾಂಡ್‌ಗೆ ಗೊತ್ತು. ಹೀಗಾಗಿ ಅದು ಹಿಯರಿಂಗ್ ಡೇಟುಗಳನ್ನು ಮುಂದೂಡುತ್ತಾ ಹೋಗುತ್ತಿದೆ.

ಒಂದು ವೇಳೆ ಅದು ತಾಳ್ಮೆ ಕಳೆದುಕೊಂಡು ಕೇಸು ಸೆಟ್ಲ್ ಮಾಡಲು ಹೋದರೆ ಬರೆದಿಟ್ಟು ಕೊಳ್ಳಿ, ಈ ಸರಕಾರ ಉರುಳಿ ಬೀಳುತ್ತದೆ. ಆದರೆ ಸರಕಾರ ಬಿದ್ದು ಮಧ್ಯಂತರ ಚುನಾವಣೆ ಎದುರಾಗಲಿ ಅಂತ ಎಷ್ಟು ಜನ ಶಾಸಕರು ಬಯಸುತ್ತಿದ್ದಾರೆ? ಅರ್ಥಾತ್, ಮಧ್ಯಂತರ ಚುನಾವಣೆ ಯಾರಿಗೂ ಬೇಡ.

ಹೀಗಾಗಿ ಸಿಎಂ-ಡಿಸಿಎಂ ಮಧ್ಯೆ ನಡೆಯುತ್ತಿರುವ ಅಧಿಕಾರ ಹಂಚಿಕೆಯ ಕಚ್ಚಾಟವನ್ನು ಕೋರ್ಟಿನಿಂದ (ಹೈಕಮಾಂಡ್) ಹೊರಗೇ ಬಗೆಹರಿಸಿಕೊಳ್ಳುವ ಜಾಣ್ಮೆ ಇರಬೇಕು. ಇಲ್ಲದಿದ್ದರೆ ಸದ್ಯಕ್ಕಿದು ಸೆಟ್ಲಾಗುವ ಕೇಸಲ್ಲ" ಎಂದಿದ್ದಾರೆ. ಯಾವಾಗ ಅವರು ಈ ಮಾತು ಹೇಳಿದರೋ, ಅಗ ಪ್ರತಿಪಕ್ಷದ ಈ ಶಾಸಕರು “ನಿಜ ಸರ್" ಎಂದು ಸುಮ್ಮನಾದರಂತೆ.

ಬಾಗಲಕೋಟೆಗೆ ಚರಂತಿ ಮಠ್?

ಈ ಮಧ್ಯೆ ಕರ್ನಾಟಕದ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ವೀರಣ್ಣ ಚರಂತಿಮಠ್ ಅವರು ಬಿಜೆಪಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಮಾಜಿ ಸಚಿವ ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿರುವ ಬಾಗಲಕೋಟೆ ಕ್ಷೇತ್ರದಲ್ಲಿ ಹಿರಿಯ ನಾಯಕ ಮುರುಗೇಶ್ ನಿರಾಣಿ ಅವರನ್ನು ಕಣಕ್ಕಳಿಸುವ ಮಾತುಗಳು ಕೇಳಿ ಬಂದಿದ್ದವಾದರೂ ಈಗ ನಿರಾಣಿಯವರ ಹೆಸರು ಹಿಂದೆ ಸರಿದು ಚರಂತಿಮಠ್ ಅವರ ಹೆಸರು ಮುಂದೆ ಬಂದಿದೆ.

ಅಂದ ಹಾಗೆ, ಕ್ಷೇತ್ರದಿಂದ ಸ್ಪರ್ಧಿಸಲು ತಮಗೆ ಟಿಕೆಟ್ ನೀಡಬೇಕು ಅಂತ ವಿಧಾನಪರಿಷತ್ ಸದಸ್ಯ ಪಿ.ಎಸ್.ಪೂಜಾರ್ ಅವರು ಪಟ್ಟು ಹಿಡಿದಿದ್ದಾರಾದರೂ ಅವರ ಪರಿಷತ್ ಸದಸ್ಯತ್ವ ದ ಅವಧಿ ಇನ್ನೂ ಇರುವುದರಿಂದ ಚರಂತಿಮಠ್ ಅವರೇ ಅಭ್ಯರ್ಥಿಯಾಗಲಿ ಎಂಬ ನಿಲುವಿಗೆ ಪಕ್ಷದ ನಾಯಕರು ಬಂದಿದ್ದಾರೆ. ಇಷ್ಟಾದರೂ ಬಿಜೆಪಿಯ ಕೋರ್ ಕಮಿಟಿ ಸಭೆ ಚರಂತಿಮಠ್ ಹಾಗೂ ಪಿ.ಎಸ್.ಪೂಜಾರ್ ಅವರಿಬ್ಬರ ಹೆಸರುಗಳನ್ನು ಹೈಕಮಾಂಡ್‌ಗೆ ಶಿಫಾರಸು ಮಾಡಿದೆ ಎಂಬುದು ಮೂಲಗಳ ಹೇಳಿಕೆ.

ಈ ಮಧ್ಯೆ ‘ಡೆಡ್ಲಿ ವಾರ್’ಗೆ ಸಾಕ್ಷಿಯಾಗಲಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ದಿಂದ ಯಾರನ್ನು ಕಣಕ್ಕಿಳಿಸಬೇಕು ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಅದರೆ ಕಣಕ್ಕೆ ಮಾಜಿ ಮೇಯರ್ ಅಜಯ್ ಕುಮಾರ್ ಅವರನ್ನು ಇಳಿಸಬೇಕು ಅಂತ ಎಂ.ಪಿ.ರೇಣುಕಾ ಚಾರ್ಯ ಗ್ಯಾಂಗು ಪಟ್ಟು ಹಿಡಿದಿದ್ದರೆ, ಯಶವಂತರಾವ್ ಅವರನ್ನು ಕಣಕ್ಕಿಳಿಸಬೇಕು ಅಂತ ಜಿ.ಎಂ.ಸಿದ್ದೇಶ್ವರ್ ಅವರ ಗ್ಯಾಂಗು ಪ್ರತಿಪಟ್ಟು ಹಾಕಿದೆ. ಆದರೆ ಕ್ಷೇತ್ರದಿಂದ ಯಾರನ್ನು ಕಣಕ್ಕಿಳಿಸಬೇಕು ಎಂಬ ವಿಷಯದಲ್ಲಿ ಕಾಂಗ್ರೆಸ್ ಪಾಳಯ ಇನ್ನೂ ಕಸರತ್ತು ನಡೆಸುತ್ತಿರುವುದರಿಂದ ಅದು ಸೆಟ್ಲ್ ಅಗುವವರೆಗೆ ಬಿಜೆಪಿ ಅಭ್ಯರ್ಥಿ ಆಯ್ಕೆ ಯಾಗುವುದು ಕಷ್ಟ ಎಂಬುದು ಕಮಲ ಪಾಳಯದ ಗುಸು ಗುಸು.

ಡೆವಿಲ್ ವರ್ಕರ್ ರೇವಣ್ಣ

ಇನ್ನು, ಕಳೆದ ಮಂಗಳವಾರ ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳಲು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಹೊಳೆನರಸೀಪುರದಿಂದ ಬೆಂಗಳೂರಿಗೆ ಬಂದಿದ್ದಾರೆ. ಹೀಗೆ ಬಂದವರು ಪ್ರಶ್ನೋತ್ತರ ವೇಳೆ ಶುರುವಾಯಿತು ಅಂತ ವಿಧಾನಸಭೆಯ ಪ್ರವೇಶದ್ವಾರದ ಬಳಿ ಬಂದಾಗ ಸಹಾಯಕರು ಓಡೋಡಿ ಬಂದು ಅವರಿಗೆ ಒಂದು ವಿಷಯ ತಿಳಿಸಿದ್ದಾರೆ.

ಕೇಂದ್ರದ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರ ಅಪಾಯಿಂಟ್‌ಮೆಂಟ್ ಫಿಕ್ಸಾಗಿದೆ. ಹೀಗಾಗಿ ಇವತ್ತು ಸಂಜೆ ಆರು ಗಂಟೆಗೆ ನೀವು ದಿಲ್ಲಿಯಲ್ಲಿರುವ ಅವರ ಕಚೇರಿಗೆ ಹೋಗಬೇಕು ಎಂಬುದು ಈ ಮೆಸೇಜು. ಈ ಮೆಸೇಜು ಕಿವಿಗೆ ಬೀಳುತ್ತಿದ್ದಂತೆಯೇ ವಿಧಾನ ಸಭೆಯ ಪ್ರವೇಶ ದ್ವಾರದ ಗಕ್ಕನೆ ನಿಂತ ರೇವಣ್ಣ ರಪ್ಪಂತ ರೈಟ್ ಟರ್ನು ಹೊಡೆದು ಬೆಂಗಳೂರಿನ ತಮ್ಮ ನಿವಾಸಕ್ಕೆ ಧಾವಿಸಿzರೆ. ಹೀಗೆ ಹೋದವರು ಹದಿನೈದೇ ನಿಮಿಷದಲ್ಲಿ ರೆಡಿಯಾಗಿ ಲಗೇಜು ಎತ್ತಿಕೊಂಡು ಏರ್‌ಪೋರ್ಟಿಗೆ ಹೋಗಿದ್ದಾರೆ, ದಿಲ್ಲಿಯ ವಿಮಾನ ಹಿಡಿದು ಸರಿಯಾಗಿ ಐದೂ ಮುಕ್ಕಾಲು ಗಂಟೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಒಂದು ಫೈಲನ್ನು ಗಡ್ಕರಿಯವರಿಗೆ ಕೊಟ್ಟ ರೇವಣ್ಣ, ಹಾಸನ ಜಿಯ ಮೊಸಳೆ ಹೊಸಳ್ಳಿ ಬಳಿಯ ರಸ್ತೆ ಮತ್ತು ಹಾಸನದ ಹೊರ ವರ್ತುಲ ರಸ್ತೆ ನಿರ್ಮಾಣದ ಪ್ರಪೋಸಲ್ಲು ಕೊಟ್ಟು, “ಈ ಕೆಲಸ ಆಗ್ಲೇಬೇಕು ಸಾಹೇಬರೇ" ಎಂದು ಪಟ್ಟು ಹಿಡಿದಿದ್ದಾರೆ.

ಎಷ್ಟೇ ಆದರೂ ಮಾಜಿ ಪ್ರಧಾನಿಯ ಪುತ್ರ ರೇವಣ್ಣ ಅವರದು ಉಡದ ಹಿಡಿತ ಎಂಬುದು ಗಡ್ಕರಿಯವರಿಗೆ ಗೊತ್ತಲ್ಲ? ಹೀಗಾಗಿ ದೂಸ್ರಾ ಮಾತನಾಡದೆ ಅವರು ರೇವಣ್ಣ ಮುಂದಿಟ್ಟ ಪ್ರಪೋಸಲ್ಲಿಗೆ ಯಸ್ ಎಂದರಂತೆ.

ಹೀಗೆ ಒಂದು ಪ್ರಪೋಸಲ್ಲು ತಂದು ಕ್ಲಿಯರ್ ಮಾಡಿಸಿಕೊಂಡ ರೇವಣ್ಣ ಅವರನ್ನು ನೋಡಿದ ಸಚಿವ ಗಡ್ಕರಿ ಅವರ ಆಪ್ತರು ಮೂಗಿನ ಮೇಲೆ ಬೆರಳಿಟ್ಟುಕೊಂಡರಂತೆ. ಅಂದ ಹಾಗೆ, ಯಾರೇನೇ ಹೇಳಲಿ, ಕೆಲಸದ ವಿಷಯ ಬಂದರೆ ಮಾತ್ರ ರೇವಣ್ಣ ‘ಡೆವಿಲ್ ವರ್ಕರ್’ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ.

ಒಂದೇ ದಿನದಲ್ಲಿ ಹೊಳೆನರಸೀಪುರದಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ದಿಲ್ಲಿಗೆ ಹೋಗಿ ಹಿಡಿದ ಕೆಲಸವನ್ನು ಪೂರೈಸಿಕೊಂಡು ಬರುವುದೆಂದರೆ ತಮಾಷೆಯ ಮಾತೇ? ಇವತ್ತು ಜನರ ಕೆಲಸ ಹೇಗೆ ಮಾಡಬೇಕು ಎಂಬುದನ್ನು ಈಗಿನ ಬಹುತೇಕ ಜನಪ್ರತಿನಿಧಿಗಳು ರೇವಣ್ಣ ಅವರನ್ನು ನೋಡಿ ಕಲಿಯಬೇಕು.

ಬಿಜೆಪಿಯಲ್ಲಿ ಪ್ರೆಸಿಡೆಂಟ್ ವಾರ್

ಕೆಲ ಕಾಲದಿಂದ ತಣ್ಣಗಿದ್ದ ರಾಜ್ಯ ಬಿಜೆಪಿಯಲ್ಲಿ ಪುನಃ ಪ್ರೆಸಿಡೆಂಟ್ ವಾರ್ ಶುರುವಾಗಿದೆ. ಅಂದ ಹಾಗೆ, ಹಾಲಿ ಅಧ್ಯಕ್ಷ ವಿಜಯೇಂದ್ರ ಅವರ ಅಧಿಕಾರಾವಧಿ ಈ ವರ್ಷ ಪೂರ್ಣ ವಾಗಲಿದ್ದು ಮತ್ತೆ ಅವರನ್ನು ಮುಂದುವರಿಸಬಾರದು ಎಂಬುದು ಬಿಜೆಪಿಯ ಕೆಲ ಬಣಗಳ ವಾದ. ಈ ಹಿನ್ನೆಲೆಯಲ್ಲಿಯೇ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಂದ್ರ ಮಂತ್ರಿ ವಿ.ಸೋಮಣ್ಣ, ಮಾಜಿ ಸಚಿವರಾದ ಡಾ.ಅಶ್ವತ್ಥನಾರಾಯಣ ಮತ್ತು ಸುನೀಲ್ ಕುಮಾರ್ ಅವರ ಹೆಸರು ಗಳು ಕೇಳಿ ಬರುತ್ತಿವೆ. ಈ ಪೈಕಿ ವಿ.ಸೋಮಣ್ಣ ಅವರ ಪರವಾಗಿ ಬಹುತೇಕ ಸಂಸದರು, ಮಾಜಿ ಮುಖ್ಯಮಂತ್ರಿಗಳು ಲಾಬಿ ಶುರುಮಾಡಿದ್ದು, ಸಂಘ ಪರಿವಾರದ ನಾಯಕರು ಟಾನಿಕ್ ಕೊಡತೊಡಗಿದ್ದಾರೆ.

ಇನ್ನು ಬೆಂಗಳೂರು, ಮೈಸೂರು ಸೇರಿದಂತೆ ಹಲ ಭಾಗದ ಶಾಸಕರು “ಒಕ್ಕಲಿಗ ನಾಯಕ ಡಾ.ಅಶ್ವತ್ಥನಾರಾಯಣ ಅವರು ಫ್ರೂಟ್ ಫುಲ್ ಪ್ರೆಸಿಡೆಂಟ್ ಅಗಬಲ್ಲರು" ಅನ್ನತೊಡಗಿ ದ್ದರೆ, ಮಾಜಿ ಸಚಿವ, ಹಿಂದುಳಿದ ಸಮುದಾಯಕ್ಕೆ ಸೇರಿದ ಸುನೀಲ್ ಕುಮಾರ್ ಅವರ ಹೆಸರಿಗೂ ಫೋರ್ಸು ಬಂದಿದೆ. ಪರಿಣಾಮ? ಮೊನ್ನೆ ಮೊನ್ನೆಯವರೆಗೆ ಕೂಲಾಗಿದ್ದ ರಾಜ್ಯ ಬಿಜೆಪಿಯಲ್ಲಿ ಪ್ರೆಸಿಡೆಂಡ್ ವಾರ್ ಶುರುವಾಗಿದೆ.

ಆರ್‌.ಟಿ. ವಿಠ್ಠಲಮೂರ್ತಿ‌

View all posts by this author