ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lokesh kaayarga Column: ಕೊಬ್ಬಿನ ಸಮಸ್ಯೆ ಕೊಬ್ಬಿದ ನಮ್ಮ ವ್ಯವಸ್ಥೆಯಲ್ಲಿದೆ !

ಭಾರತೀಯರು ಪ್ರತಿ ತಿಂಗಳು ಶೇ.10ರಷ್ಟು ಕಡಿಮೆ ಅಡುಗೆ ಎಣ್ಣೆಯನ್ನು ಬಳಸಬೇಕೆಂದು ಪ್ರಧಾನಿ ಕರೆ ನೀಡಿದ್ದಾರೆ. ಈ ಸಂಬಂಧ ಜಾಗೃತಿ ಮೂಡಿಸಲು ಇನ್ಫೋಸಿಸ್ ಸಹ-ಸಂಸ್ಥಾ ಪಕ ನಂದನ್ ನಿಲೇಕಣಿ, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ, ಸಂಸದೆ ಸುಧಾಮೂರ್ತಿ ಸೇರಿದಂತೆ ನಾನಾ ಕ್ಷೇತ್ರಗಳ ಗಣ್ಯರ ತಂಡವೊಂದನ್ನು ಪ್ರಧಾನಿ ಹೆಸರಿಸಿದ್ದಾರೆ

ಕೊಬ್ಬಿನ ಸಮಸ್ಯೆ ಕೊಬ್ಬಿದ ನಮ್ಮ ವ್ಯವಸ್ಥೆಯಲ್ಲಿದೆ !

ಕಾರ್ಯನಿರ್ವಾಹಕ ಸಂಪಾದಕ ಹಾಗೂ ಅಂಕಣಕಾರ ಲೋಕೇಶ್‌ ಕಾಯರ್ಗ

Profile Lokesh Kaayarga Mar 5, 2025 6:44 AM

ಲೋಕಮತ

ಒಂದು ಕಡೆ ಅಪೌಷ್ಟಿಕತೆ. ಇನ್ನೊಂದು ಕಡೆ ಬೊಜ್ಜು. ಇದು ನವ ಭಾರತದ ಸಮ ಸ್ಯೆ. ದೇಶದ ಶೇ. 14.5ರಷ್ಟು ಮಂದಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇನ್ನೊಂ ದೆಡೆ ಸ್ಥೂಲಕಾಯ ಮತ್ತು ಹೃದ್ರೋಗಿಗಳ ಪ್ರಮಾಣ ಬೆಚ್ಚಿ ಬೀಳಿಸುವಷ್ಟು ಪ್ರಮಾ ಣದಲ್ಲಿ ಏರುತ್ತಿದೆ. ಅಂಕ ಕೇಂದ್ರಿತ, ದೈಹಿಕ ಕಸರತ್ತು ಶೂನ್ಯವಾಗಿರುವ ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ಆರೋಗ್ಯಕರ ಆಹಾರ ಪದ್ಧತಿಯಿಂದ ದೂರವಾದ ನಮ್ಮ ಜೀವನ ಶೈಲಿ ಈ ಸಮಸ್ಯೆಯ ಮೂಲ. ಕಲುಷಿತ ಪರಿಸರ, ಕಲಬೆರಕೆ ಆಹಾರವೂ ಬೊಜ್ಜಿನ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ವಿಶ್ವಸ್ಥೂಲಕಾಯ ದಿನ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಗಳ ಮಧ್ಯೆ ಈ ಬಗ್ಗೆ ಒಂದು ವಿಶ್ಲೇಷಣೆ.

ಮಾರ್ಚ್ 4 ವಿಶ್ವ ಸ್ಥೂಲಕಾಯ ದಿನ. ಮಾರ್ಚ್ 8 ಅಂತಾರಾಷ್ಟ್ರೀಯ ಮಹಿಳಾ ದಿನ. ಈ ಎರಡೂ ದಿನಗಳ ಮಧ್ಯೆ ಇರುವುದು ಕೇವಲ 4 ದಿನಗಳ ಅಂತರ. ಮಹಿಳೆಯರ ದಿನದಂದು ಚರ್ಚಿಸುವ ಮಹಿಳೆಯರ ಪ್ರಮುಖ ಸಮಸ್ಯೆಗಳಲ್ಲಿ ಬೊಜ್ಜು ಮತ್ತು ಅದರಿಂದ ಕಾಣಿಸಿ ಕೊಳ್ಳುವ ಇತರ ಸಮಸ್ಯೆಗಳೇ ಪ್ರಧಾನ. ಎರಡು ವರ್ಷಗಳ ಹಿಂದಿನ ಅಧ್ಯಯನದ ಪ್ರಕಾರ ಶೇಕಡಾ 40ರಷ್ಟು ಭಾರತೀಯ ಮಹಿಳೆಯರು ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದಾರೆ. 30 ರಿಂದ 49 ವಯಸ್ಸಿನ ಪ್ರತಿ 10 ಮಹಿಳೆಯರಲ್ಲಿ 5 ರಿಂದ 6 ಜನರು ಸ್ಥೂಲಕಾಯದ ಸಮಸ್ಯೆ ಹೊಂದಿದ್ದಾರೆ. ಹಾಗೆಂದು ಪುರುಷರ ಕೊಬ್ಬಿನ ಪ್ರಮಾಣವೇನೂ ಕಡಿಮೆ ಇಲ್ಲ. ದೇಶದ ಶೇ.12ರಷ್ಟು ಪುರುಷರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಧಡೂತಿ ಪುರುಷರ ಪ್ರಮಾಣ ಸೆನ್ಸಕ್ಸ್ ಗಿಂತ ಹೆಚ್ಚು ವೇಗದಲ್ಲಿ ಏರುತ್ತಿದೆ. ಲಾನ್ಸೆಟ್ ನಿಯತಕಾಲಿಕದ ಹೊಸ ವರದಿ ಪ್ರಕಾರ ಇನ್ನು 25 ವರ್ಷಗಳಲ್ಲಿ ಭಾರತದಲ್ಲಿ ಸ್ಥೂಲ ಕಾಯರ ಸಂಖ್ಯೆ 45 ಕೋಟಿ ಮೀರಲಿದೆ. ಧಡೂತಿಗಳ ದಿನದ ಪೂರ್ವಭಾವಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಕಾರ‍್ಯಕ್ರಮದ 119ನೇ ಸಂಚಿಕೆಯಲ್ಲಿ ಭಾರತೀಯರಲ್ಲಿ ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆ ಬಗ್ಗೆ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Lokesh Kayarga Column: ಕೇಜ್ರಿವಾಲ್‌ ಎಂಬ ನಂಬಿಕೆಯ ಕಗ್ಗೊಲೆ

ಭಾರತೀಯರು ಪ್ರತಿ ತಿಂಗಳು ಶೇ.10ರಷ್ಟು ಕಡಿಮೆ ಅಡುಗೆ ಎಣ್ಣೆಯನ್ನು ಬಳಸಬೇಕೆಂದು ಪ್ರಧಾನಿ ಕರೆ ನೀಡಿದ್ದಾರೆ. ಈ ಸಂಬಂಧ ಜಾಗೃತಿ ಮೂಡಿಸಲು ಇನ್ಫೋಸಿಸ್ ಸಹ-ಸಂಸ್ಥಾ ಪಕ ನಂದನ್ ನಿಲೇಕಣಿ, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ, ಸಂಸದೆ ಸುಧಾಮೂರ್ತಿ ಸೇರಿದಂತೆ ನಾನಾ ಕ್ಷೇತ್ರಗಳ ಗಣ್ಯರ ತಂಡವೊಂದನ್ನು ಪ್ರಧಾನಿ ಹೆಸರಿಸಿದ್ದಾರೆ.

ಸ್ವತ: ಪ್ರಧಾನಿ ಈ ಸಮಸ್ಯೆ ಪ್ರಸ್ತಾಪಿಸಿದ್ದರಿಂದ ಕಳೆದ ನಾಲ್ಕೈದು ದಿನಗಳಿಂದ ಈ ಬಗ್ಗೆ ಹೆಚ್ಚು ಹೆಚ್ಚು ಚರ್ಚೆಯಾಗುತ್ತಿದೆ. ನಾಲ್ಕು ದಶಕಗಳ ಹಿಂದೆ ಒಂದಂಕಿಯಲ್ಲಿದ್ದ ಭಾರತೀ ಯರ ಸರಾಸರಿ ಬೊಜ್ಜಿನ ಪ್ರಮಾಣ ಈಗ ಎರಡಂಕಿ ದಾಟಿದೆ. ಅದರಲ್ಲೂ ಮಹಿಳೆಯರಲ್ಲಿ ಬೊಜ್ಜಿನ ಪ್ರಮಾಣ ಶೇ.10ಕ್ಕೆ ಏರಿದೆ.

ಪುರುಷರಲ್ಲಿ ಶೇಕಡಾ 0.5 ರಿಂದ ಶೇಕಡಾ 6 ಕ್ಕೆ ಏರಿದೆ. ಇದೇ ಪ್ರಮಾಣದಲ್ಲಿ ದೇಶದಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಕೇವಲ ಎರಡು ದಶಕಗಳ ಹಿಂದೆ ಶ್ರೀಮಂತರ ಕಾಯಿಲೆ ಎನ್ನಲಾಗುತ್ತಿದ್ದ ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್, ಹೃದ್ರೋಗ ಈಗ ಹಳ್ಳಿ- ಪಟ್ಟಣಗಳೆಂಬ ಭೇದವಿಲ್ಲದೆ ಸಾರ್ವತ್ರಿಕವಾಗಿ ಕಾಣಿಸಿಕೊಳ್ಳುತ್ತಿದೆ.

ಮೊದಲು 60 ವರ್ಷ ದಾಟಿದವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಈಗ ಎಲ್‌ಕೆಜಿ ಮಕ್ಕಳಲ್ಲೂ ಹೃದ್ರೋಗ ಕಾಣಿಸಿಕೊಳ್ಳುತ್ತಿದೆ. ಶಾಲಾ ಮಕ್ಕಳು ಆಟದ ಮೈದಾನದಲ್ಲಿ, ಶಾಲಾ ಕೊಠಡಿಗಳಲ್ಲಿ ಕುಸಿದು ಬಿದ್ದು ಮೃತಪಟ್ಟ ವರದಿಗಳು ಆಗಾಗ ಬರುತ್ತಿವೆ. ಭಾರತೀ ಯರಲ್ಲಿ ಹೆಚ್ಚುತ್ತಿರುವ ಸ್ಥೂಲಕಾಯದ ವಿಷಯ ಬಂದಾಗ ಪ್ರಮುಖವಾಗಿ ಚರ್ಚೆಯಾಗು ವುದು ಬದಲಾದ ನಮ್ಮ ಆಹಾರ ಪದ್ಧತಿ ಮತ್ತು ಜೀವನ ಶೈಲಿ. ಎಣ್ಣೆ ಬಳಸದೆ ಅಥವಾ ತೀರಾ ಕಡಿಮೆ ಎಣ್ಣೆ ಬಳಸಿದ ನಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ತೊರೆದು ಹೆಚ್ಚು ಕೊಬ್ಬು, ಸಕ್ಕರೆ ಅಂಶಗಳುಳ್ಳ ಆಹಾರ ಪದ್ಧತಿಯತ್ತ ವಾಲಿರುವುದು ಸಮಸ್ಯೆಯ ಮೂಲ ಎಂದು ವಿಶ್ಲೇಷಿಸಲಾಗುತ್ತದೆ.

ಪ್ರಧಾನಿ ಮೋದಿಯವರೂ ಇದನ್ನೇ ಉಲ್ಲೇಖಿಸಿದ್ದಾರೆ. ಹಾಗೆಂದು ಅಡುಗೆ ಎಣ್ಣೆ ಪದಾರ್ಥ ಗಳನ್ನು, ಕೊಬ್ಬು ಜಾಸ್ತಿ ಇರುವ ಪದಾರ್ಥಗಳನ್ನು ತೀರಾ ಕಡಿಮೆ ಪ್ರಮಾಣದಲ್ಲಿ ಸೇವಿಸಿ ದವರೂ ಬೊಜ್ಜಿನ ಸಮಸ್ಯೆಯಿಂದ ಹೊರತಾಗಿಲ್ಲ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿದ ಬಳಿಕವೂ ಹಲವರಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ನಿಯಂತ್ರಣ ಮೀರುತ್ತಿದೆ.

ಇದರ ನಿಯಂತ್ರಣಕ್ಕೆ ಚಿಕ್ಕ ವಯಸ್ಸಿನಲ್ಲಿಯೇ ಮಾತ್ರೆಗಳನ್ನು ತೆಗೆದುಕೊಳ್ಳುವುದು ಅನಿ ವಾರ‍್ಯವಾಗುತ್ತಿದೆ. ಇದರ ಮೂಲ ಹುಡುಕಿದರೆ ನಮ್ಮ ಜೀವನ ಶೈಲಿ ಬದಲಾಗಿರುವು ದು ಮಾತ್ರವಲ್ಲ , ನಮ್ಮ ವ್ಯವಸ್ಥೆಯ ಬದಲಾವಣೆಯೂ ಬೊಜ್ಜುತನಕ್ಕೆ ಪ್ರಧಾನ ಕೊಡುಗೆ ನೀಡಿದೆ. ಅದರಲ್ಲೂ ಬದಲಾದ ನಮ್ಮ ಶಿಕ್ಷಣ ವ್ಯವಸ್ಥೆ ಬಾಲ್ಯಾವಸ್ಥೆಯಲ್ಲಿಯೇ ಮಕ್ಕಳ ನ್ನು ಧಡೂತಿಗಳನ್ನಾಗಿ ಮಾಡುತ್ತಿದೆ.

ಹೊಸ ವ್ಯವಸ್ಥೆ, ಹೊಸ ಸಮಸ್ಯೆ

90ರ ದಶಕಕ್ಕಿಂತ ಮೊದಲಿನ ನಮ್ಮ ಶಾಲಾ ಮಕ್ಕಳ ಚಿತ್ರಣವನ್ನು ಒಮ್ಮೆ ಕಣ್ಮುಂದೆ ತಂದುಕೊಳ್ಳಿ. ಈ ಮಕ್ಕಳಲ್ಲಿ ಬಹುತೇಕರು ಮನೆಗೆ ಹತ್ತಿರ ಇರುವ ಸರಕಾರಿ ಇಲ್ಲವೇ ಖಾಸಗಿ ಶಾಲೆಗಳಲ್ಲಿ ಓದಿದವರು. ಪಟ್ಟಣಗಳಲ್ಲಿ ಮನೆಯಿಂದ ಮೂರ‍್ನಾಲ್ಕು ಕಿ.ಮೀ. ದೂರದ ಶಾಲೆಗೆ ಹೋಗಲು ಮಕ್ಕಳು ಸೈಕಲ್ ಬಳಸುತ್ತಿದ್ದರು. ಹಳ್ಳಿಗಳಲ್ಲಿ ಮಣಭಾರದ ಪುಸ್ತಕ ಮೂಟೆ ಹೊತ್ತು ನಡೆದುಕೊಂಡೇ ಸಾಗುತ್ತಿದ್ದರು.

ಹಾಗೆಯೇ ಸದ್ಯದ ಚಿತ್ರಣವನ್ನು ಊಹಿಸಿಕೊಳ್ಳಿ. ಹಳ್ಳಿಯ ಕೆಲವೇ ಕೆಲವು ಬಡ ಮಕ್ಕಳು ಅನಿವಾರ‍್ಯ ಕಾರಣಕ್ಕೆ ಸರಕಾರಿ ಶಾಲೆಗಳಲ್ಲಿ ಉಳಿದುಕೊಂಡಿದ್ದಾರೆ. ಇನ್ನುಳಿದಂತೆ ಕೆಳ ಮಧ್ಯಮ ವರ್ಗದ ಮಕ್ಕಳೂ ಖಾಸಗಿ ಶಾಲೆ ಸೇರಿಕೊಂಡಿದ್ದಾರೆ. ಬಹುತೇಕ ಖಾಸಗಿ ಶಾಲೆ ಗಳು ತಮ್ಮದೇ ಸಾರಿಗೆ ವ್ಯವಸ್ಥೆ ಕಲ್ಪಿಸಿವೆ.

ಬಸ್ ವ್ಯವಸ್ಥೆ ಇಲ್ಲದ ಕಡೆ ವ್ಯಾನ್, ಆಟೋಗಳಂತೂ ಇದ್ದೇ ಇರುತ್ತವೆ. ಎಲ್‌ಕೆಜಿಯಿಂದ ಹಿಡಿದು ಹೈಸ್ಕೂಲ್ ವರೆಗೆ ಮಕ್ಕಳಿಗೆ ಮನೆ ಗೇಟ್ ಮುಂದೆ ನಿಂತ ವಾಹನ ಹತ್ತುವುದಷ್ಟೇ ಕೆಲಸ. ಕೆಲವು ವಿದ್ಯಾರ್ಥಿಗಳ ತಾಯಂದಿರು ಪುಸ್ತಕದ ಮೂಟೆಯನ್ನು ವ್ಯಾನ್‌ಗೆ ಏರಿಸುವ, ಇಳಿಸುವ ಕೆಲಸವನ್ನೂ ನಿರ್ವಹಿಸುತ್ತಾರೆ.

ಈ ಮಕ್ಕಳಿಗೆ ಪಿ.ಟಿ. ಪೀರಿಯಡ್ ಎಂದು ಕ್ಲಾಸ್ ರೂಮಿನಿಂದ ಹೊರಗೆ ಬಿಟ್ಟರೆ ಸರಿ, ಇಲ್ಲ ವಾದರೆ ಸೂರ‍್ಯನ ಬೆಳಕಿನಲ್ಲಿ ದಿನಕ್ಕೆ ಅರ್ಧ ಗಂಟೆಯಷ್ಟು ಕಾಲ ಕಳೆಯುವ ಅವಕಾಶವೂ ಇರುವುದಿಲ್ಲ. ನಗರದ ಬಹುತೇಕ ಖಾಸಗಿ ಶಾಲೆಗಳು ಕ್ರೀಡಾಂಗಣಕ್ಕೆ ಮೀಸಲಾದ ಜಾಗ ದಲ್ಲೂ ಬಹುಮಹಡಿ ಕಟ್ಟಡಗಳನ್ನು ಕಟ್ಟಿ ಮಕ್ಕಳ ಪ್ರವೇಶ ಸಂಖ್ಯೆಯನ್ನು ಹೆಚ್ಚಿಸಿ ಕೊಂಡಿವೆ.

ಸಾವಿರಾರು ಮಕ್ಕಳು ಓದುವ ಶಾಲೆಗಳಲ್ಲಿ ವಾರಕ್ಕೆ ಒಂದು ಅಥವಾ ಎರಡು ದೈಹಿಕ ತರಬೇತಿ ಅವಧಿಗಳಿದ್ದರೆ ಹೆಚ್ಚು. ಬಹುತೇಕ ಮಕ್ಕಳ ದಿನಚರಿ ವಾರಗಟ್ಟಲೆ ಮನೆಯಿಂದ ಕ್ಲಾಸ್ ರೂಮ್, ಕ್ಲಾಸ್ ರೂಮ್‌ನಿಂದ ಎಂಬಂತಾಗಿರುತ್ತದೆ. ಇನ್ನು ನಮ್ಮ ನಗರಗಳಲ್ಲಿ ಒತ್ತೊತ್ತಾಗಿರುವ ಬಹು ಅಂತಸ್ತಿನ ಕಟ್ಟಡಗಳ ನಡುವೆ ಸೂರ‍್ಯನ ಕಿರಣ ನೆಲವನ್ನು ಸ್ಪರ್ಶಿಸುವುದೇ ಕಷ್ಟ. ಹೆಚ್ಚಿನ ಮಕ್ಕಳು ಸೂರ‍್ಯನ ತಾಪವನ್ನು, ಚಂದ್ರನ ಬೆಳದಿಂಗಳನ್ನು ಅನುಭವಿಸದೆ ಪಠ್ಯಗಳಲ್ಲಷ್ಟೇ ಓದಿ ಬೆಳೆಯುತ್ತಿದ್ದಾರೆ.

ತಜ್ಞ ವೈದ್ಯರೊಬ್ಬರ ಪ್ರಕಾರ ಮಕ್ಕಳು ಸೂರ‍್ಯನ ಬೆಳಕಿಗೆ ತಮ್ಮ ದೇಹವನ್ನು ಒಡ್ಡಿಕೊಳ್ಳದ ಕಾರಣಕ್ಕೆ ತೀರಾ ಸಣ್ಣ ವಯಸ್ಸಿಗೆ ವಿಟಮಿನ್ ಡಿ ಕೊರತೆ ಕಂಡು ಬರುತ್ತಿದೆ. ಇದು ನಾವು ಪ್ರಕೃತಿಯಿಂದ ದೂರವಾಗಿ ಕೃತಕ ಬದುಕನ್ನು ಕಟ್ಟಿಕೊಂಡಿರುವುದರ ಫಲ. ಸಹಜವಾಗಿ ಸಿಗುತ್ತಿದ್ದ ಆರೋಗ್ಯ ಭಾಗ್ಯವನ್ನು ದೂರ ತಳ್ಳಿ ಕಾಂಪ್ಲಾನ್, ಬೋರ್ನ್‌ವಿಟಾಗಳ ಮೂಲಕ ಮಕ್ಕಳ ದೇಹ ಮತ್ತು ಬುದ್ಧಿ ಶಕ್ತಿಯನ್ನು ಹೆಚ್ಚಿಸಲು ಮುಂದಾಗಿರುವುದರ ಪರಿಣಾಮ. ವಿಟಮಿನ್ ಡಿ ಕೊರತೆ ಕಾಣಿಸಿಕೊಂಡರೆ ನಮ್ಮ ದೇಹ ಇನ್ನುಳಿದ ವಿಟಮಿನ್ ಸತ್ವಗಳನ್ನು ಹೀರಿಕೊಳ್ಳಲು ವಿಫಲವಾಗುತ್ತದೆ. ಉಳಿದ ಎಲ್ಲ ಆರೋಗ್ಯ ಸಮಸ್ಯೆಗಳಿಗೆ ಹೆಬ್ಬಾಗಿಲು

ತೆರೆದಂತಾಗುತ್ತದೆ.

ಡಿಗ್ರಿಗಳಷ್ಟೇ ಮುಖ್ಯ

ಒಂದೆಡೆ ದೇಶ ಒಲಿಂಪಿಕ್ಸ್ ಆತಿಥ್ಯ ವಹಿಸುವ ತುಡಿತದಲ್ಲಿದ್ದರೆ, ನಗರ ಪ್ರದೇಶದ ನಮ್ಮ ಮಕ್ಕಳು ಯಾವುದೇ ಪ್ರಮುಖ ದೈಹಿಕ ಕಸರತ್ತುಗಳಿಲ್ಲದೆಯೇ ತಮ್ಮ ಇಡೀ ಶಿಕ್ಷಣವನ್ನು ಮುಗಿಸಿ ಉದ್ಯೋಗ ಪ್ರಪಂಚಕ್ಕೆ ಕಾಲಿಡುತ್ತಿದ್ದಾರೆ. ನೀಟ್, ಜೆಇಇ ಎಂದು ಮಾರ್ಕ್ಸ್‌ಗಳ ಮೇಲೆ ಕಣ್ಣಿಟ್ಟ ಪೋಷಕರು ಶಾಲೆ, ಕಾಲೇಜು, ಟ್ಯೂಷನ್ ಬಿಟ್ಟರೆ ಮತ್ತೆಲ್ಲೂ ತಮ್ಮ ಮಕ್ಕಳನ್ನು ಕಳುಹಿಸುತ್ತಿಲ್ಲ. ವಾರಕ್ಕೊಂದು ಸಲವಾದರೂ ಮನೆಯಿಂದ ಹೊರಗೆ ಹೋಗಿ ಆಟವಾಡಿಕೊಂಡು ಬರಲು ಮಕ್ಕಳಿಗೆ ಅವಕಾಶವೇ ಸಿಗುತ್ತಿಲ್ಲ. ದುಬಾರಿ ಹಣ ಕೊಟ್ಟು ಖರೀದಿಸಿದ ಸೈಕಲ್‌ಗಳು ಮನೆ ವರಾಂಡದಲ್ಲಿ ಸುತ್ತು ಹೊಡೆಯಲು ಸೀಮಿತವಾಗುತ್ತಿವೆ.

ಹೈಸ್ಕೂಲ್, ಕಾಲೇಜುಗಳಲ್ಲಿ ಸ್ಕೌಟ್ಸ್, ಎನ್‌ಸಿಸಿ, ಎನ್ನೆಸ್ಸೆಸ್ ಸೇರುವ ವಿದ್ಯಾರ್ಥಿಗಳನ್ನು ಬದುಕಿನಲ್ಲಿ ಯಾವುದೇ ಗುರಿ ಇಲ್ಲದವರೆಂಬಂತೆ ನೋಡಲಾಗುತ್ತಿದೆ. ತಮ್ಮ ಮಕ್ಕಳ ಸರ್ವಾಂಗೀಣ ಬೆಳವಣಿಗೆಯನ್ನು ಬಯಸುವ ಪೋಷಕರು ಇಲ್ಲ ಎಂದಲ್ಲ. ಆದರೆ ನಗರದ ಒತ್ತಡದ ಬದುಕಿನಲ್ಲಿ ಮಕ್ಕಳಿಗೆ ಪ್ರತ್ಯೇಕವಾಗಿ ಕ್ರೀಡಾ ಕೋಚಿಂಗ್ ಕೊಡಿಸಲು ಅವರಿಗೆ ಸಮಯವಿಲ್ಲ.

ಕ್ರಿಕೆಟ್, ಟೆನಿಸ್, ಬ್ಯಾಡ್ಮಿಂಟನ್ ನಂತಹ ಆಟಗಳಿಗೆ ಮಕ್ಕಳನ್ನು ಸೇರಿಸಬೇಕಾದರೆ ದುಬಾರಿ ಫೀಸು ಭರಿಸಬೇಕು. ದುಡ್ಡಿಲ್ಲದೆ ಆಡಬಹುದಾದ ಕಬಡ್ಡಿ, ಖೋಖೋ, ಲಗೋರಿ ಮುಂತಾದ ಆಟಗಳಿಗೆ ನಗರದ ಶಾಲೆಗಳಲ್ಲಿ ಅವಕಾಶವೇ ಇಲ್ಲ. ಇದರಿಂದ ತಿನ್ನು, ಓದು, ಮಲಗು ಎಂಬಲ್ಲಿಗೆ ಸೀಮಿತವಾದ ಯುವ ಪೀಳಿಗೆ ದೊಡ್ಡ ಸಂಬಳದ ನೌಕರಿ ಹಿಡಿದರೂ ಏರು ಜವ್ವನದಲ್ಲಿರುವಾಗಲೇ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಬಹುರಾಷ್ಟ್ರೀಯ ಕಂಪನಿಗಳ ಎಚ್.ಆರ್.ವಿಭಾಗದ ಸಿಬ್ಬಂದಿಯೊಬ್ಬರ ಪ್ರಕಾರ, 40 ವರ್ಷ ದಾಟಿದವರಿಗಿಂತಲೂ ಹೊಸದಾಗಿ ಸೇರಿದ ಉದ್ಯೋಗಿಗಳು ಅನಾರೋಗ್ಯ ನೆಪದಡಿ ರಜೆ ಪಡೆದುಕೊಳ್ಳುತ್ತಿದ್ದಾರೆ. ಇದು ನಮ್ಮ ನೌಕರಿ ಹಿಡಿಯಲಷ್ಟೇ ಸೀಮಿತವಾದ ನಮ್ಮ ಶಿಕ್ಷಣ ವ್ಯವಸ್ಥೆಯ ಪ್ರತಿಫಲನವೂ ಹೌದು.

ನಾಲ್ಕು ದಶಕಗಳ ಹಿಂದೆ ಈ ದೇಶದಲ್ಲಿ ಹುಟ್ಟಿದ ಬಹುತೇಕರಿಗೆ ಬಾಲ್ಯದಲ್ಲಿ ತಾಯಿ ಅಥವಾ ಮನೆಯ ಹಿರಿಯರು ತಟ್ಟೆಗೆ ಬಡಿಸಿದ್ದನ್ನು ತಿನ್ನುವುದು ಬಿಟ್ಟರೆ ಬೆಳಗ್ಗಿನ ತಿಂಡಿಗೆ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಹೆಚ್ಚೇನೂ ಆಯ್ಕೆಗಳಿರಲಿಲ್ಲ. ಐಸ್‌ಕ್ರೀಮ್‌ಗಿಂತ ನಾಲ್ಕಾಣೆಗೆ ಸಿಗುತ್ತಿದ್ದ ಐಸ್ ಕ್ಯಾಂಡಿ ಹೆಚ್ಚು ಜನಪ್ರಿಯವಾಗಿತ್ತು. ಸಿಹಿ ಎಂದರೆ ಪಾಯಸ, ಹೋಳಿಗೆಗೆ ಸೀಮಿತವಾಗಿರುತ್ತಿತ್ತು.

ಮದುವೆ ಮನೆಗಳಲ್ಲಿ ಮೂರ‍್ನಾಲ್ಕು ಬಗೆಯ ಪಾಯಸ ಸವಿದ ಬಳಿಕವೂ ನಮ್ಮ ಹೊಟ್ಟೆ ಸಪಾಟಾಗಿಯೇ ಇರುತ್ತಿತ್ತು. ಚಾಕಲೇಟ್ ಎಂದರೆ 5 ಪೈಸೆ, 10 ಪೈಸೆಗೆ ಸಿಗುತ್ತಿದ್ದ ಅಕ್ಲೇರ‍್ಸ್ ಎಂದಷ್ಟೇ ಗೊತ್ತಿತ್ತು. ಬರ್ತ್ ಡೇ ಆಚರಣೆ ಶ್ರೀಮಂತ ಗೆಳೆಯ, ಗೆಳತಿಯರಿಗಷ್ಟೇ ಸೀಮಿತ ವಾಗಿತ್ತು. ಅದೂ ಕೇಕ್ ಕಟ್ಟಿಂಗ್ ಇಲ್ಲದೆ ಚಾಕಲೇಟ್ ಇಲ್ಲವೇ ಬಿಸ್ಕತ್ ಹಂಚಿಕೆಯಲ್ಲಿ ಮುಗಿಯುತ್ತಿತ್ತು.

ಅಂದು ಕೈಯಲ್ಲಿ ಹೆಚ್ಚು ದುಡ್ಡಿರಲಿಲ್ಲ. ಹಾಗೆಂದು ಯಾರೂ ಹೊಟ್ಟೆ ಹಸಿದುಕೊಂಡು ಇರುತ್ತಿರಲಿಲ್ಲ. ಮನೆಯ ಅಂಗಳಕ್ಕೆ ಕಾಲಿಟ್ಟರೆ ಪೇರಳೆ, ಪಪ್ಪಾಯ, ಅನಾನಸು, ಗೆಣಸು, ಸೌತೆಕಾಯಿ..ಹೀಗೆ ಯಾವುದಾದರೊಂದು ತಿನ್ನಲು ಸಿಗುತ್ತಿತ್ತು. ಬೇಸಿಗೆ ಬಂತೆಂದರೆ ತರಾವರಿ ಮಾವಿನ ಹಣ್ಣುಗಳನ್ನು, ಗೇರು ಹಣ್ಣಿನ ಘಮಲನ್ನು ಆಸ್ವಾದಿಸಲು ಅವಕಾಶ ವಿತ್ತು.

ಮನೆ ಹಿಂದಿನ ಹಿತ್ತಲಲ್ಲಿ ಸಿಗುತ್ತಿದ್ದ ಬಿಂಬುಳ, ಚಳ್ಳೆ, ಅರಮದ್ಲು, ಗೊಂಬಳೆ, ಕವಳಿ, ಅಮಟೆ ಕಾಯಿಗಳಿಗೆ ಸ್ವಲ್ಪ ಉಪ್ಪು ಬೆರೆಸಿ ತಿಂದರೆ ದೇಹಕ್ಕೆ ಹೊಸ ಚೈತನ್ಯವೇ ಸಿಗುತ್ತಿತ್ತು. ಗುಡ್ಡ ಹತ್ತಿ ಸಾಗಿದರೆ ಮುಳ್ಳುಕಾಯಿ, ಸರೋಳಿಕಾಯಿ, ಅಬ್ಲುಂಕ, ಅತ್ತಿಹಣ್ಣು, ಜಂಬು ನೇರಳೆ ನೆಲ್ಲಿಕಾಯಿ, ಜಾರಿಗೆ ಕಾಯಿ, ಮುರುಗಲ, ನೇರಳೆ, ಪನ್ನೇರಳೆ, ಕುಂಟನೇರಳೆ, ಬೋರೆ, ಇಳ್ಳಿ, ಸಕ್ಕರೆ ಕಂಚಿ ಹೀಗೆ ಯಾವುದಾದರೂ ಒಂದು ಹಣ್ಣು ಸಿಕ್ಕೇ ಸಿಗುತ್ತಿತ್ತು.

ಮಳೆಗಾಲದಲ್ಲಿ ಹಲಸಿನ ಹಪ್ಪಳ, ಸಂಡಿಗೆ, ಮಾವಿನ ರಸಾಯನ ರೆಡಿ ಇರುತ್ತಿತ್ತು. ಏನಿಲ್ಲ ವೆಂದರೂ ಹಲಸಿನ ಬೀಜ, ಹುಣಿಸೆ ಬೀಜ, ಒಣ ಗೇರು ಬೀಜಗಳನ್ನು ಒಲೆಯಲ್ಲಿ ಹಾಕಿ ಸುಟ್ಟು ತಿನ್ನಬಹುದಿತ್ತು. ಈ ವಾತಾವರಣ ಈಗ ಪೇಟೆ ಬಿಡಿ, ಹಳ್ಳಿಗಳಲ್ಲೂ ಇಲ್ಲ. ಬಹುತೇಕ ಕಾಡು ಹಣ್ಣುಗಳು ಹೇಳಹೆಸರಿಲ್ಲದೆ ಮಾಯವಾಗಿವೆ. ಹಳ್ಳಿಗಳಲ್ಲೂ ಈಗ ಲಗೋರಿ, ಕುಂಟಾಬಿಲ್ಲೆ ಆಡುವವರಿಲ್ಲ.

ಗ್ರಾಮೀಣರ ಮಕ್ಕಳೂ ಟಿ.ವಿ. ಜಾಹೀರಾತಿನ ಅಮ್ಮ ಹೇಳುವ ‘ಪೌಷ್ಟಿಕ ಡ್ರಿಂಕ್’ ಸೇವಿಸಿ ಬೆಳೆಯುತ್ತಿದ್ದಾರೆ. ಹಳ್ಳಿಗರ ಹಟ್ಟಿ, ಕೊಟ್ಟಿಗೆಗಳು ಖಾಲಿಯಾಗಿವೆ. ಎಲ್ಲೆಡೆ ನಂದಿನಿ ಹಾಲು, ತುಪ್ಪ ಸಿಗುವುದರಿಂದ ಹಾಲಿನ ಸೇವನೆಗೆ ಯಾವ ಕೊರತೆಯೂ ಇಲ್ಲ. ಆದರೆ ಹಳ್ಳಿ ಮತ್ತು ಪೇಟೆಯ ಬಹುತೇಕ ಮಕ್ಕಳಿಗೆ ತಿನ್ನಲು ಸಮಯವಿಲ್ಲ. ಬೆಳಿಗ್ಗೆ ಏಳರೊಳಗೆ ಮನೆ ಬಿಡುವ ಹೆಚ್ಚಿನ ಮಕ್ಕಳು ಏನನ್ನೂ ತಿನ್ನುವ ಮೂಡ್ ನಲ್ಲಿರುವುದಿಲ್ಲ.

ಅಮ್ಮ ತಿನ್ನಲೇಬೇಕೆಂದು ಒತ್ತಾಯಿಸಿದರೆ ‘ಮ್ಯಾಗಿ’ ಮಾಡಮ್ಮ ಎನ್ನುವವರೇ ಹೆಚ್ಚು. ನೂಡಲ್ಸ್, ಗೋಬಿ, ಬರ್ಗರ್, ಪಿಜ್ಜಾ, ಸ್ಯಾಂಡ್‌ವಿಚ್, ಪಾಪ್‌ಕಾರ್ನ್, ದುಬಾರಿ ಚಾಕಲೇಟ್, ದುಬಾರಿ ಕೇಕ್ ಮತ್ತು ಐಸ್ ಕ್ರೀಂಗಳಿಗೆ ಮನಸೋತ ನಮ್ಮ ಮಕ್ಕಳ ನಾಲಿಗೆ ಈಗ ರಾಗಿ ಮುದ್ದೆ, ರಾಗಿ ಮಾಲ್ಟ್, ಅನ್ನ, ಅಕ್ಕಿ ರೊಟ್ಟಿ, ದೋಸೆಗಳಿಗೆ ಸುಲಭದಲ್ಲಿ ಮಾರು ಹೋಗುವುದಿಲ್ಲ.

ಇದರ ಒಟ್ಟಾರೆ ಪರಿಣಾಮ ಎಂದರೆ ಲಾನ್ಸೆಟ್ ನಿಯತಕಾಲಿಕ ವರದಿಯಂತೆ, ಇನ್ನು 25 ವರ್ಷಗಳಲ್ಲಿ ಭಾರತದ ಮೂರನೇ ಒಂದರಷ್ಟು ಜನರು ಸ್ಥೂಲಕಾಯ ಸಮಸ್ಯೆಯಿಂದ ಬಳಲಲಿದ್ದಾರೆ. ಬೊಜ್ಜುತನದಲ್ಲಿ ಚೀನಾ ಮತ್ತು ಅಮೆರಿಕವನ್ನು ಹಿಂದಿಕ್ಕಿ ನಾವು ಒಂದನೇ ಸ್ಥಾನ ಏರಲಿದ್ದೇವೆ. ಅಂದರೆ ಕೊಬ್ಬಿನ ಸಮಸ್ಯೆ ಕೊಬ್ಬಿದ ನಮ್ಮ ವ್ಯವಸ್ಥೆ ಯಲ್ಲಿದೆ !

ಇದರಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯೂ ಸೇರಿದಂತೆ ಇಡೀ ವ್ಯವಸ್ಥೆಯ ಪಾಲಿದೆ. ಈ ವ್ಯವಸ್ಥೆ ನಮ್ಮನ್ನು ಅಧಿಕ ತೂಕ, ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಾಘಾತ, ಪಾರ್ಶ್ವವಾಯು, ಕ್ಯಾನ್ಸರ್ ಮತ್ತು ಅಕಾಲಿಕ ಮರಣದ ಅಪಾಯದತ್ತ ದೂಡುತ್ತಿದೆ.