Lokesh Kayarga Column: ಕೇಜ್ರಿವಾಲ್ ಎಂಬ ನಂಬಿಕೆಯ ಕಗ್ಗೊಲೆ
ದಿಲ್ಲಿ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಎಂಬ ನಾಯಕ ಸೋತಾಗ ಬಿಜೆಪಿ ಕಾರ‍್ಯಕರ್ತರು, ನಾಯಕರು ಖುಷಿಪಟ್ಟಿದ್ದರೆ ಅದು ಸಹಜ. ಆಮ್ ಆದ್ಮಿ ಕಾರ‍್ಯಕರ್ತರ, ನಾಯಕರ ಬೇಸರವೂ ಸಹಜ ವಾದುದೇ. ಆದರೆ ಆಮ್ ಆದ್ಮಿ ಎಂಬ ಪಕ್ಷ ಚುನಾವಣೆಯಲ್ಲಿ ಸೋಲುವ ಮುನ್ನವೇ ಕೇಜ್ರಿವಾಲ್ ಎಂಬ ನಾಯಕನ ‘ಪತನ’ಕ್ಕಾಗಿ ದೇಶಾದ್ಯಂತ ಪರಿತಪಿಸಿದವರಿದ್ದಾರೆ. ಇವರಾರೂ ಆಪ್ ಅಥವಾ ಇನ್ನಾವುದೇ ಪಕ್ಷ, ಸಂಘಟನೆಯ ಕಾರ‍್ಯಕರ್ತರಲ್ಲ
2011. ಕರ್ನಾಟಕದಲ್ಲಿ ಗಣಿ ಹಗರಣ ತಾರಕಕ್ಕೇರಿದ ಕಾಲ. ಅಣ್ಣಾ ಹಜಾರೆ ಅವರ ಭ್ರಷ್ಟಾ ಚಾರ ವಿರೋಧಿ ಆಂದೋಲನಕ್ಕೆ ಬೆಂಬಲ ಸೂಚಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲೂ ನೂರಾರು ಯುವಕರು ಧರಣಿ ನಡೆಸಿದ್ದರು. ಮಾತಿಗೊಮ್ಮೆ ಕೆಮ್ಮುತ್ತಿದ್ದ, ಮಫ್ಲರ್‌ಧಾರಿ ಅರವಿಂದ್ ಕೇಜ್ರಿವಾಲ್ ಈ ಆಂದೋಲನದ ಬೆನ್ನೇರಿ ದಿಲ್ಲಿ ಗದ್ದುಗೆ ಏರಿದಾಗ ರಾಜ್ಯದ ಒಂದಷ್ಟು ಯುವ ಜನರು ಅವರ ಪಕ್ಷ ಸೇರಿದ್ದರು. ಇಂದು ಈ ಎಲ್ಲ ಯುವ ಮನಸ್ಸುಗಳಿಗೆ ಸೂತಕದ ಕಾಲ.
ದಿಲ್ಲಿ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಎಂಬ ನಾಯಕ ಸೋತಾಗ ಬಿಜೆಪಿ ಕಾರ‍್ಯಕರ್ತರು, ನಾಯಕರು ಖುಷಿಪಟ್ಟಿದ್ದರೆ ಅದು ಸಹಜ. ಆಮ್ ಆದ್ಮಿ ಕಾರ‍್ಯಕರ್ತರ, ನಾಯಕರ ಬೇಸರವೂ ಸಹಜವಾದುದೇ. ಆದರೆ ಆಮ್ ಆದ್ಮಿ ಎಂಬ ಪಕ್ಷ ಚುನಾವಣೆಯಲ್ಲಿ ಸೋಲುವ ಮುನ್ನವೇ ಕೇಜ್ರಿವಾಲ್ ಎಂಬ ನಾಯಕನ ‘ಪತನ’ಕ್ಕಾಗಿ ದೇಶಾದ್ಯಂತ ಪರಿತಪಿಸಿದವರಿದ್ದಾರೆ. ಇವರಾರೂ ಆಪ್ ಅಥವಾ ಇನ್ನಾವುದೇ ಪಕ್ಷ, ಸಂಘಟನೆಯ ಕಾರ‍್ಯಕರ್ತರಲ್ಲ.
ಇದನ್ನೂ ಓದಿ: Lokesh Kaayarga Column: ನಮ್ಮ ಮಕ್ಕಳನ್ನು ಅಬ್ಬೇಪಾರಿ ಸ್ಥಿತಿಗೆ ತಳ್ಳದಿರಿ
ಇವರು ಕೇಜ್ರಿವಾಲ್ ಎಂಬ ನಾಯಕನ ಮೇಲೆ ಅಪಾರ ವಿಶ್ವಾಸ, ನಂಬಿಕೆ ಇರಿಸಿಕೊಂಡಿದ್ದವರು. 10 ವರ್ಷಗಳ ಹಿಂದೆ ಕೇಜ್ರಿವಾಲ್ ಎಂಬ ನಾಯಕನನ್ನು ಇವರು ಕೇವಲ ಒಬ್ಬ ವ್ಯಕ್ತಿಯಾಗಿ, ರಾಜ ಕೀಯ ನಾಯಕನಾಗಿ ನೋಡಿರಲಿಲ್ಲ. ಕೇಜ್ರಿವಾಲ್ ಇವರ ಪಾಲಿಗೆ ಹೊಸ ನಂಬಿಕೆ, ಆಶಾಕಿರಣ, ಭರವಸೆ ಎಲ್ಲವೂ ಆಗಿದ್ದ. ಕೇಜ್ರಿವಾಲ್ ವಿರುದ್ಧ ಹತ್ತಾರು ಆರೋಪಗಳು ಬಂದಾಗಲೂ ಇವರು ನಂಬಿಕೆ ಕಳೆದುಕೊಂಡಿರಲಿಲ್ಲ.
ಆದರೆ ದಿಲ್ಲಿಯ ಶೀಷ್ ಮಹಲ್ ನವೀಕರಣದ ಹೆಸರಿನಲ್ಲಿ ಯಾವಾಗ ಈ ವ್ಯಕ್ತಿ 30 ಕೋಟಿ ರು. ಗಿಂತಲೂ ಹೆಚ್ಚು ಹಣ ವ್ಯಯಿಸಿ ತನಗಾಗಿ ಬಂಗಲೆ ನಿರ್ಮಿಸಿಕೊಂಡನೋ ಅಲ್ಲಿಗೆ ಈ ನಂಬಿಕೆ ಎಲ್ಲವೂ ನುಚ್ಚುನೂರಾಯಿತು. 2025ರ ಚುನಾವಣೆಗೆ ಮುನ್ನವೇ ಅರವಿಂದ್ ಕೇಜ್ರಿವಾಲ್ ಎಂಬ ವ್ಯಕ್ತಿ ದೇಶಕ್ಕಾಗಿ ತುಡಿಯುವ ಜನರ ಪಾಲಿಗೆ ವಿಶ್ವಾಸ ದ್ರೋಹಿಯಂತೆ ಕಾಣುತ್ತಿದ್ದ. ಆತನ ಸೋಲು ಆಗಲೇ ನಿಶ್ಚಯವಾಗಿತ್ತು. ಚುನಾವಣೆಯ ಸೋಲು ಈ ನಂಬಿಕೆ ಹುಸಿಯಾಗಿದ್ದನ್ನು ಅಧಿಕೃತವಾಗಿ ತೋರಿಸಿಕೊಟ್ಟಿದೆಯಷ್ಟೆ.
ಈ ದೇಶದಲ್ಲಿ ಅದೆಷ್ಟೋ ಚುನಾವಣೆಗಳು ನಡೆದಿವೆ. ಅದೆಷ್ಟೋ ನಾಯಕರು ಸೋತಿದ್ದಾರೆ, ಗೆದ್ದಿದ್ದಾರೆ. ಕೇಂದ್ರಸರಕಾರದ ಧೋರಣೆ ಖಂಡಿಸಿ ಆಂಧ್ರಪ್ರದೇಶದಲ್ಲಿ, ತಮಿಳುನಾಡಿನಲ್ಲಿ ಹುಟ್ಟಿದ ರಾಜಕೀಯ ಪಕ್ಷಗಳು ಇಂದಿಗೂ ಗಟ್ಟಿಯಾಗಿ ನೆಲೆಯೂರಿವೆ. ಆದರೆ ಮೊದಲ ಚುನಾವಣೆಯಲ್ಲಿಯೇ ಗೆದ್ದು ದಿಲ್ಲಿ ವಿಧಾನಸಭೆಯನ್ನು ಪ್ರವೇಶಿಸಿದ ಅರವಿಂದ್ ಕೇಜ್ರಿವಾಲ್ ಎಂಬ ವ್ಯಕ್ತಿಯ ಮೇಲೆ ರಾಜಧಾನಿಯ ಜನರಷ್ಟೇ ಅಲ್ಲ, ಇಡೀ ದೇಶದ ಜನತೆ ಹೊಸ ನಿರೀಕ್ಷೆಯೊಂದನ್ನು ಇಟ್ಟುಕೊಂಡಿ ದ್ದರು.
ಏಕೆಂದರೆ ಕೇಜ್ರಿವಾಲ್ ರಾಜಕೀಯ ಪ್ರವೇಶಿಸಿದ ಕಾರಣಗಳು ಈ ದೇಶದ ಸಾಮಾನ್ಯ ಜನರಿಂದ ಶ್ರೀಮಂತ ವರ್ಗದವರೆಗೆ ಎಲ್ಲರಿಗೆ ಸಂಬಂಧಿಸಿದ್ದಾಗಿತ್ತು. ಸ್ವಾತಂತ್ರ್ಯಾನಂತರ ಈ ದೇಶದ ಬೆಳವಣಿ ಗೆಗೆ ಪ್ರಮುಖ ಅಡ್ಡಿಯಾಗಿದ್ದು ಭ್ರಷ್ಟಾಚಾರ. ಇದರ ವಿರುದ್ಧದ ಹೋರಾಟದ ನೆಪದಲ್ಲಿ ಈ ದೇಶದ ಆಮ್ ಆದ್ಮಿಗಳ ಹೃದಯದಲ್ಲಿ ಸ್ಥಾನ ಪಡೆದ ಕೇಜ್ರಿವಾಲ್, ಈಗ ಮನೆ ಸೇರಿಕೊಂಡಿರುವುದು ಇದೇ ಕಾರಣಕ್ಕಾಗಿ. ಇವರ ಪಾಲಿಗೆ ಕೇಜ್ರಿವಾಲ್ ಎಂಬ ನಾಯಕನ ಸೋಲು ಬರೀ ಸೋಲಲ್ಲ, ಒಂದು ನಂಬಿಕೆಯ ಕಗ್ಗೊಲೆ. ಈ ಕಗ್ಗೊಲೆಯ ರೂವಾರಿ ಇದೇ ಕೇಜ್ರಿವಾಲ್.
ಹುಸಿಯಾದ ನಿರೀಕ್ಷೆ
ಇಂದು ಕೇಜ್ರಿವಾಲ್ ಪತನವನ್ನು ವಿಶ್ಲೇಷಿಸುತ್ತಿರುವ ಮಾಧ್ಯಮಗಳು ಸರಿಯಾಗಿ 12 ವರ್ಷಗಳ ಹಿಂದೆ ಪ್ರಯಾಗ ಕುಂಭಮೇಳದ ಅವಧಿಯಲ್ಲಿ ದಿಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ ಅರವಿಂದ್ ಕೇಜ್ರಿವಾಲ್ ಅವರನ್ನು ‘ಬದಲಾವಣೆಯ ಮಾತ್ರಿಕ’ ಎಂದು ಚಿತ್ರಿಸಿದ್ದವು. 2012ರಲ್ಲಿ ಆಮ್ ಆದ್ಮಿ ಪಕ್ಷ ಹುಟ್ಟು ಹಾಕಿದ ಮರು ವರ್ಷವೇ ಚುನಾವಣೆಗೆ ಸ್ಪರ್ಧಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ ಕೇಜ್ರಿವಾಲ್ ಅಂದು, ‘ಬದಲಾವಣೆ ಬಯಸುವ ಮನಸ್ಸುಗಳ ಹೀರೋ’ ಆಗಿ ನಿಂತಿದ್ದರು.
Change Begins with small things ಇದು ಆಮ್ ಆದ್ಮಿ ನೇತಾರನಾಗಿದ್ದ ಅರವಿಂದ್ ಕೇಜ್ರಿವಾಲರ ಧ್ಯೇಯವಾಕ್ಯವಾಗಿತ್ತು. ದೇಶದ ಮಧ್ಯಮ ವರ್ಗದ ಜನತೆ ಅವರನ್ನು ಜಾಗೃತ ಭಾರ ತದ ಸಾಕಾರ ರೂಪವಾಗಿ ಕಂಡಿದ್ದರು. ಸದಾ ಕನಸುಗಳನ್ನು ಕಾಣುವ ಮಧ್ಯಮ ವರ್ಗಕ್ಕೆ ಅಂದು ಕೇಜ್ರಿವಾಲ್, ರಾತ್ರೋರಾತ್ರಿ ಇಡೀ ವ್ಯವಸ್ಥೆಯನ್ನು ಬದಲಿಸುವ ರಜನಿಕಾಂತ್ ಸಿನಿಮಾದ ಹೀರೋ ರೀತಿ, ಅರ್ಜುನ್ ಸರ್ಜಾ ಅಭಿನಯದ ಮುದಲ್ವನ್ (ಹಿಂದಿಯಲ್ಲಿ ನಾಯಕ್) ಸಿನಿಮಾದ ನಾಯಕ ನಂತೆ ಕಂಡಿದ್ದರಲ್ಲಿ ಅಚ್ಚರಿಯೇನೂ ಇರಲಿಲ್ಲ.
ಏಕೆಂದರೆ ಕೇಜ್ರಿವಾಲ್ ಅವರ ಹೋರಾಟದ ಹಿನ್ನೆಲೆ ಯಾವ ಸಿನಿಮಾ ಕಥೆಗೂ ಕಡಿಮೆ ಇರಲಿಲ್ಲ. ಕೇಜ್ರಿವಾಲ್ ಕುರಿತ ಕ್ರೇಜ್ ದೇಶದಗುಲಕ್ಕೆ ತಲುಪಿದ್ದು 2011ರಲ್ಲಿ. ಇಂಡಿಯಾ ಅಗೈನ್ಸ್ಟ್ ಕರಪ್ಷನ್ (ಐಎಸಿ) ಹೆಸರಿನಲ್ಲಿ ಭ್ರಷ್ಟಾಚಾರದ ವಿರುದ್ಧ ಜನಲೋಕಪಾಲ ವಿಧೇಯಕ ಜಾರಿಗೆ ಒತ್ತಾಯಿಸಿ ಅಣ್ಣಾ ಹಜಾರೆ ಅವರು ಆರಂಭಿಸಿದ ಭ್ರಷ್ಟಾಚಾರ ವಿರೋಧಿ ಆಂದೋಲನ ಅಂದು ರಾಷ್ಟ್ರಮಟ್ಟ ದಲ್ಲಿ ಸಂಚಲನ ಸೃಷ್ಟಿಸಿತ್ತು.
ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಕಿರಣ್ ಬೇಡಿ, ಶಾಂತಿ ಭೂಷಣ್, ಪ್ರಶಾಂತ್ ಭೂಷಣ್, ಕಿರಣ್ ಬೇಡಿ, ರಾಮ್ ಜೇಠ್ಮಲಾನಿ, ಮೇಧಾ ಪಾಟ್ಕರ್, ಸ್ವಾಮಿ ಅಗ್ನಿವೇಶ್, ಬಾಬಾ ರಾಮ್‌ದೇವ್, ರವಿಶಂಕರ ಗುರೂಜಿ, ಕರ್ನಲ್ ದೇವಿಂದರ್ ಸೆಹ್ರಾವತ್, ನ್ಯಾಯ ಮೂರ್ತಿ ಡಿ.ಎಸ್. ತೆವಾಟಿಯಾ, ದೇವಿಂದರ್ ಶರ್ಮಾ ಮತ್ತಿತರರು ಈ ಆಂದೋಲನ ದೊಂದಿಗೆ ಕೈ ಜೋಡಿಸಿದ್ದರು.
ಇದಕ್ಕೆ ಜತೆಯಾಗಿ ನಿಂತವರು ಕುಮಾರ್ ವಿಶ್ವಾಸ್, ಮನೀಷ್ ಸಿಸೋಡಿಯಾ, ಸತ್ಯೇಂದ್ರ ಜೈನ್, ಸಂಜಯ್ ಸಿಂಗ್ ಮತ್ತಿತರ ಕೇಜ್ರಿ ಟೀಮ್. ಯುಪಿಎ ಸರಕಾರದ ಸರಣಿ ಹಗರಣಗಳಿಂದ ಬೇಸತ್ತ ಜನತೆ ಅಂದು ಈ ಮಾದರಿಯ ಆಂದೋಲನವನ್ನು ಮನಸಾರೆ ಬೆಂಬಲಿಸಿದ್ದರು. ಜೆಪಿ ಚಳವಳಿ ಬಳಿಕ ನಡೆದ ಅತಿ ದೊಡ್ಡ ಹೋರಾಟವಾಗಿಯೂ ಈ ಚಳವಳಿಯನ್ನು ಗುರುತಿಸಲಾಗಿತ್ತು.
ಜೆಪಿ ಚಳವಳಿಗೆ ರಾಜಕೀಯ ನಾಯಕರ ಬೆಂಗಾವಲು ಇತ್ತು. ಆದರೆ ಇಂಡಿಯಾ ಅಗೈನ್ಸ್ಟ್ ಕರಪ್ಷನ್ (ಐಎಸಿ) ಆಂದೋಲನದಿಂದ ರಾಜಕೀಯ ನಾಯಕರನ್ನು ದೂರವಿಡಲಾಗಿತ್ತು. ದೆಹಲಿಯಲ್ಲಿ ಅದಾಗಲೇ ಭ್ರಷ್ಟಾಚಾರದ ವಿರುದ್ಧ ಜನಾಂದೋಲನ ರೂಪಿಸಿ 2006ರಲ್ಲಿ ಮ್ಯಾಗ್ಸೆಸ್ಸೆ ಪ್ರಶಸ್ತಿಗೂ ಪಾತ್ರರಾಗಿದ್ದ ಕೇಜ್ರಿವಾಲ್ ಅವರನ್ನು ಸಹಜವಾಗಿಯೇ ಅಣ್ಣಾ ತಂಡ ತೆರೆದ ತೋಳಿನಿಂದ ಸ್ವಾಗ ತಿಸಿತ್ತು.
ವಿಪರ‍್ಯಾಸ ಎಂದರೆ ಅಂದೋಲನದಲ್ಲಿದ ಯಾವ ನಾಯಕರೂ ಇಂದು ಕೇಜ್ರಿವಾಲ್ ಜತೆಗಿಲ್ಲ. ಇನ್ನು ಕೇಜ್ರಿವಾಲ್ ಆಪ್ತ ಕುಮಾರ್ ವಿಶ್ವಾಸ್ ವರ್ಷಗಳ ಹಿಂದೆಯೇ ದೂರವಾಗಿದ್ದಾರೆ. ಉಳಿದ ಮೂವರು ಕೇಜ್ರಿವಾಲ್ ಅವರಂತೆ ಭ್ರಷ್ಟಾಚಾರದ ಆರೋಪದಲ್ಲಿ ಜೈಲು ದರ್ಶನ ಮಾಡಿದ್ದಾರೆ.
ಅಪ್ಪಟ ಹೋರಾಟಗಾರ
ಹಾಗೆಂದು ಈ ಚಳವಳಿಗಿಂತ ಮುಂಚೆಯೇ ಕೇಜ್ರಿವಾಲ್ ಅಪ್ರಾಮಾಣಿಕರಾಗಿದ್ದರು. ರಾಜಕೀಯ ಮಹತ್ವಾಕಾಂಕ್ಷಿಯಾಗಿದ್ದರು ಎಂದು ಹೇಳುವಂತಿಲ್ಲ. ಇಂದು ಸಾಲು ಸಾಲು ಹಗರಣಗಳು ಬೆಳಕಿಗೆ ಬರಲು ಕಾರಣವಾದ ಮಾಹಿತಿ ಹಕ್ಕಿಗಾಗಿ 25 ವರ್ಷಗಳ ಹಿಂದೆ ಎಲ್ಲರಿಗಿಂತಲೂ ಮುಂಚೆ ಧ್ವನಿ ಎತ್ತಿದ್ದು ಇದೇ ಕೇಜ್ರಿವಾಲ್. ದೇಶದಲ್ಲಿ ಮೊದಲ ಬಾರಿಗೆ 2006ರಲ್ಲಿ ದೆಹಲಿ ಸರಕಾರ ಮಾಹಿತಿ ಹಕ್ಕು ಕಾಯಿದೆ ಜಾರಿಗೆ ತರಲು ಕಾರಣವಾಗಿದ್ದು ಇದೇ ಕೇಜ್ರಿವಾಲ್.
ಅಣ್ಣಾಹಜಾರೆ, ಅರುಣಾ ರಾಯ್, ಶೇಖರ್ ಸಿಂಗ್ ಮತ್ತಿತರರು ಈ ಕಾಯಿದೆ ಪರ ಆಂದೋಲನ ರೂಪಿಸಿದಾಗ ಮೊದಲು ಕೈ ಜೋಡಿಸಿದ್ದು ಇದೇ ವ್ಯಕ್ತಿ. ಹರಿಯಾಣ ರಾಜ್ಯದ ಸಾಮಾನ್ಯ ಮಧ್ಯಮ
ವರ್ಗದ ಕುಟುಂಬದಿಂದ ಬಂದ ಕೇಜ್ರಿವಾಲ್, ಖರಗ್‌ಪುರ ಐಐಟಿಯಲ್ಲಿ ಮೆಕ್ಯಾನಿಕಲ್ ಎಂಜಿನಿ ಯರಿಂಗ್ ಪಾಸ್ ಮಾಡಿದ ಬಳಿಕ ಮೊದಲು ಸೇರಿದ್ದು ಟಾಟಾ ಸ್ಟೀಲ್ ಸಂಸ್ಥೆಯನ್ನು. ಆಗಲೇ ಕೊಲ್ಕತ್ತಾದ ರಾಮಕೃಷ್ಣ ಮಿಷನ್‌ನಲ್ಲಿ ಮತ್ತು ನೆಹರೂ ಯುವ ಕೇಂದ್ರದಲ್ಲಿ ಅವರು ಸಾಮಾಜಿಕ ಸೇವೆಯಲ್ಲಿ ತೊಡಗಿದ್ದರು. 1995ರಲ್ಲಿ ಐಆರ್‌ಎಸ್ ಪರೀಕ್ಷೆ ತೇರ್ಗಡೆಯಾಗಿ ಆದಾಯ ತೆರಿಗೆ ಇಲಾಖೆ ಜಂಟಿ ಆಯುಕ್ತರಾಗಿ ಭಾರತ ಆಡಳಿತ ಸೇವೆಗೆ ಸೇರ್ಪಡೆಗೊಂಡ ಕೇಜ್ರಿವಾಲ್ ಸರಳವಾದ ತೆರಿಗೆ ನೀತಿಯನ್ನು ಅನುಷ್ಠಾನಕ್ಕೆ ತಂದು ಮೆಚ್ಚುಗೆಗೆ ಪಾತ್ರರಾಗಿದ್ದರು.
ಇದಾದ ನಾಲ್ಕೇ ವರ್ಷದಲ್ಲಿ ಮನೀಷ್ ಸಿಸೋಡಿಯಾ ಜತೆಗೂಡಿ ‘ಪರಿವರ್ತನ’ ಹೆಸರಿನ ಸ್ವಯಂ ಸೇವಾ ಸಂಸ್ಥೆ ಸ್ಥಾಪಿಸಿದ್ದ ಕೇಜ್ರಿವಾಲ್ ದಿಲ್ಲಿಯ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದರು. ಕುಡಿಯುವ ನೀರು, ಪಡಿತರ ಚೀಟಿ, ವಿದ್ಯುಚ್ಛಕ್ತಿ ಮತ್ತಿತರ ಅಗತ್ಯಗಳಿಗೆ ಸರಕಾರಿ ಕಚೇರಿ ಮುಂದೆ ತಿಂಗಳುಗಟ್ಟಲೆ ಕ್ಯೂ ನಿಲ್ಲುತ್ತಿದ್ದ ದಿಲ್ಲಿಯ ಆಮ್ ಆದ್ಮಿಗಳಿಗೆ ಕೇಜ್ರಿವಾಲ್ ಭರವಸೆಯಾಗಿ ಕಂಡಿ ದ್ದರು.
2000ನೇ ಇಸವಿಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಕೇಜ್ರಿವಾಲ್ ಪೂರ್ಣ ಪ್ರಮಾಣದಲ್ಲಿ ಸ್ವಯಂ ಸೇವಾ ಸಂಘಟನೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದು ಮಾತ್ರವಲ್ಲ ಜನರ ಪರ ಬೀದಿಗಿಳಿದು ಹೋರಾಟ ಆರಂಭಿಸಿದ್ದರು. ಇದೇ ವರ್ಷ ಆದಾಯ ಕರ ಸಂಗ್ರಹ ಪ್ರಕ್ರಿಯೆಯಲ್ಲಿ ಪಾರದರ್ಶಕತೆಗೆ ಆಗ್ರಹಿಸಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದ ಕೇಜ್ರಿವಾಲ್, ತಾವು ಕೆಲಸ ಮಾಡಿದ ಕಚೇರಿ ಮುಂದೆಯೇ ಜನರ ಪರ ಧರಣಿ ಕುಳಿತಿದ್ದರು.
‘ಪರಿವರ್ತನ’ ಸಂಸ್ಥೆ ಒತ್ತಡಕ್ಕೆ ಮಣಿದು ದೆಹಲಿ ಸರಕಾರ 2001ರಲ್ಲಿ ಮಾಹಿತಿ ಹಕ್ಕು ಕಾಯಿದೆ ಜಾರಿಗೆ ತಂದ ಬಳಿಕ ಕೇಜ್ರಿ ಟೀಮ್, ಸರಕಾರದ ಹತ್ತಾರು ಹಗರಣಗಳನ್ನು ಬಯಲಿಗೆಳೆದಿತ್ತು. 2005 ರಲ್ಲಿ ಶೀಲಾ ದೀಕ್ಷಿತ್ ಸರಕಾರ ಕುಡಿಯುವ ನೀರಿನ ಪೂರೈಕೆಯನ್ನು ಖಾಸಗೀಕರಣಗೊಳಿಸುವ ವಿಶ್ವಬ್ಯಾಂಕ್ ನೆರವಿನ ಯೋಜನೆ ಜಾರಿಗೊಳಿಸಲು ಮುಂದಾದಾಗ ಅದರ ವಿರುದ್ದ ಜನಾಂದೋ ಲನ ರೂಪಿಸಿ ತಡೆದಿದ್ದು ಇದೇ ಕೇಜ್ರಿವಾಲ್ ಅವರ ಪರಿವರ್ತನ ಸಂಸ್ಥೆ.
2006ರಲ್ಲಿ ಮ್ಯಾಗೆಸ್ಸೆಗೆ ಪ್ರಶಸ್ತಿ ಬಂದ ದುಡ್ಡಲ್ಲಿ Public Cause Research Foundation ಸ್ಥಾಪಿಸಿದ್ದ ಕೇಜ್ರಿವಾಲ್, ಪ್ರಶಾಂತ್ ಭೂಷಣ್, ಕಿರಣ್ ಬೇಡಿ ಮತ್ತಿತರರನ್ನು ಟ್ರಸ್ಟಿಗಳಾಗಿ ಸೇರಿಸಿ ಕೊಂಡಿದ್ದರು. ದಿಲ್ಲಿ ಕಾಮನ್ ವೆಲ್ತ್ ಗೇಮ್ಸ್ ಹಗರಣ ಬಯಲಾಗಲು ಈ ಸಂಸ್ಥೆಯೂ ಬಹುಮಟ್ಟಿಗೆ ಕಾರಣ ವಾಗಿತ್ತು.
ಹಾದಿ ತಪ್ಪಿದ ನಾಯಕ
ಭ್ರಷ್ಟಾಚಾರದ ವಿರುದ್ದ ಚಳವಳಿ ಆರಂಭಿಸಿ, ಕಾಂಗ್ರೆಸ್ ಪಕ್ಷವನ್ನು ಗುಡಿಸಿ ಹಾಕುತ್ತೇನೆ ಎಂದು ಘೋಷಿಸಿದ್ದ ಅರವಿಂದ ಕೇಜ್ರಿವಾಲ್, ಮುಂದೆ ಇದೇ ಪಕ್ಷದ ಬೆಂಬಲದೊಂದಿಗೆ ಸಿಎಂ ಗಾದಿಗೆ ಏರಿದ್ದು ಕೇಜ್ರಿ ಹೋರಾಟದ ಮೊದಲ ವಿಪರ‍್ಯಾಸ. ತಮ್ಮ ಚಳವಳಿಯನ್ನು ಹೈಜಾಕ್ ಮಾಡಿ ಕೇಜ್ರಿವಾಲ್, ರಾಜಕೀಯ ಲಂಘನ ಪಡೆದಿದ್ದಾರೆ ಎನ್ನುವುದು ಅಣ್ಣಾ ಹಜಾರೆ ಮತ್ತು ಬೆಂಬಲಿಗರ ಆರೋಪವಾಗಿತ್ತು.
ಆದರೆ ದಿಲ್ಲಿಯ ಜನತೆ ತಮಗೆ ಪರಿಚಿತರಾಗಿದ್ದ ಕೇಜ್ರಿವಾಲ್, ತಾನು ರಾಜಕೀಯ ಶಕ್ತಿ ಪಡೆದು ಆಮ್ ಆದ್ಮಿಗಳ ಪರ ಹೋರಾಟ ನಡೆಸುತ್ತೇನೆ ಎಂದಾಗ 2013ರ ವಿಧಾನ ಸಭೆ ಚುನಾವಣೆಯಲ್ಲಿ 23 ಸ್ಥಾನಗಳನ್ನು ಕೊಟ್ಟು ಆಶೀರ್ವದಿಸಿದ್ದರು. ತಮ್ಮ ಭರವಸೆಯಂತೆ ಜನ್ ಲೋಕ್ ಪಾಲ್ ವಿಧೇಯಕ ಜಾರಿಗೆ ತರಲು ಸಾಧ್ಯವಾಗಲಿಲ್ಲ ಎಂದು ಕೇವಲ ಒಂದೂವರೆ ತಿಂಗಳಲ್ಲಿ ರಾಜೀನಾಮೆ ನೀಡಿದಾಗ ಕೇಜ್ರಿವಾಲ್ ಅಪ್ಪಟ ಚಿನ್ನವಾಗಿ ಕಂಡಿದ್ದರು.
2015ರ ಮರು ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 67 ಸೀಟುಗಳಲ್ಲಿ ಆಪ್ ಸದಸ್ಯರು ಆಯ್ಕೆ ಯಾಗಿದ್ದರು. ಮೊದಲ ಅವಧಿಯಲ್ಲಿ ಕೇಜ್ರಿವಾಲ್ ಸರಕಾರ ಜನಪರವಾಗಿಯೇ ಇತ್ತು. ಮೊಹಲ್ಲ ಕ್ಲಿನಿಕ್‌ಗಳ ಮೂಲಕ ರಾಜಧಾನಿ ಆರೋಗ್ಯ ಸೇವೆ ಜನಸಾಮಾನ್ಯರಿಗೆ ದೊರಕುವಂತಾಗಿತ್ತು. ಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ವಿದ್ಯುಚ್ಛಕ್ತಿ ದರವನ್ನು ಇಳಿಸಿ ಬಡವರಿಗೆ ಅನುಕೂಲ ಮಾಡಿಕೊಡಲಾಗಿತ್ತು. ಆದರೆ ಯಮುನಾ ನದಿ ಕಲುಷಿತಗೊಳ್ಳಲು ಕಾರಣವಾದ ಉದ್ದಿಮೆಗಳಿಗೆ ಪರವಾನಗಿ ನೀಡಿದ್ದು ಸಂಶಯಕ್ಕೆ ಕಾರಣ ವಾಗಿತ್ತು. ಎರಡನೇ ಅವಧಿಯ ಆರಂಭದಿಂದಲೂ ಕೇಜ್ರಿವಾಲ್ ಸರಕಾರ ತೆಗೆದುಕೊಂಡ ನಿರ್ಧಾರ ಗಳು ವಿವಾದಾಸ್ಪದವಾಗಿಯೇ ಇತ್ತು. ಪಂಜಾಬ್ ಚುನಾವಣೆಯನ್ನೂ ಗೆದ್ದ ಬಳಿಕ ಕೇಜ್ರಿವಾಲ್ ರಾಷ್ಟ್ರೀಯ ನಾಯಕರಾಗುವ ಕನಸು ಕಂಡಿದ್ದರು.
ಆಪ್ತ ಮಿತ್ರ ಕುಮಾರ್ ವಿಶ್ವಾಸ್ ಪ್ರಕಾರ, ಈ ಚುನಾವಣೆಗೆ ಅವರು ಖಲಿಸ್ತಾನಿ ಉಗ್ರರ ಬೆಂಬಲಿಗ ರಿಂದಲೂ ದೇಣಿಗೆ ಪಡೆದಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ “ ಮುಂದೊಂದು ದಿನ ನಾನು ಸ್ವತಂತ್ರ ಪಂಜಾಬ್ ದೇಶದ ಪ್ರಧಾನಿಯಾಗಬಹುದು" ಎಂದು ಹೇಳಿಕೊಂಡಿದ್ದರು. ಇದರ ಸತ್ಯಾ ಸತ್ಯತೆ ಏನೇ ಇರಲಿ ಸಾರಾಯಿ ಘಟಕಗಳಿಗೆ ಅನುಮತಿ ನೀಡಿದ ವಿಚಾರದಲ್ಲಿ, ತನಗಾಗಿ ಭವ್ಯ ಬಂಗಲೆ ನಿರ್ಮಿಸಿದ ವಿಚಾರದಲ್ಲಾಗಲೀ ಕೇಜ್ರಿವಾಲ್ ನಡೆಯನ್ನು ಯಾರೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ.
ಕನ್ನಡದ ಜನಪ್ರಿಯ ಚಿತ್ರ ‘ಚಿನ್ನಾರಿ ಮುತ್ತ’ದ ಹಾಡನ್ನು ಗುನುಗುನಿಸುವುದಾದರೆ, “ಹೇಗಿದ್ದ ಹೇಗಾ ದ ಗೊತ್ತಾ ? ನಮ್ಮ ಕೇಜ್ರಿವಾಲಾ, ಮಣ್ಣಲ್ಲಿ ಬಿದ್ದ" ಎಂಬಲ್ಲಿಗೆ ಕೊನೆಗೊಳಿಸಬಹುದು.