ಒಂದೊಳ್ಳೆ ಮಾತು
ಒಮ್ಮೆ ಒಂದು ರಾಜ್ಯದಲ್ಲಿ ಮೂರ್ತಿಗಳನ್ನು ಸಂಗ್ರಹಿಸುವ ಅಪಾರ ಆಸಕ್ತಿ ಇರುವ ಒಬ್ಬ ಮಹಾರಾಜನಿದ್ದ. ಅವನು ತನ್ನ ರಾಜ್ಯದೆಲ್ಲೆಡೆ, ದೇಶ-ವಿದೇಶಗಳಲ್ಲೂ ಅಪರೂಪದ, ಅಮೂಲ್ಯ ಮೂರ್ತಿಗಳನ್ನು ಹುಡುಕಿ ತರಿಸುತ್ತಿದ್ದನು. ಅವುಗಳನ್ನು ಅತ್ಯಂತ ಜಾಗರೂಕತೆ ಯಿಂದ ಸಂಗ್ರಹಿಸಿ, ಸ್ವತಃ ತಾನೇ ಅವುಗಳನ್ನು ದಿನಕ್ಕೊಮ್ಮೆಯಾದರೂ ನೋಡದಿದ್ದರೆ ಅವನಿಗೆ ಸಮಾಧಾನವೇ ಆಗುತ್ತಿರಲಿಲ್ಲ.
ಎಲ್ಲ ಮೂರ್ತಿಗಳಲ್ಲೂ ಮಹಾರಾಜನಿಗೆ ಅತ್ಯಂತ ಪ್ರಿಯವಾಗಿದ್ದ ಮೂರು ಮೂರ್ತಿಗಳು ಇದ್ದವು. ಅರಮನೆಯಲ್ಲಿದ್ದವರೆಲ್ಲರೂ ಅವನಿಗೆ ಈ ಮೂರು ಎಷ್ಟು ಪ್ರಿಯವೆಂದು ತಿಳಿದು ಕೊಂಡಿದ್ದರು. ಅದನ್ನು ನೋಡಿಕೊಳ್ಳಲು ವಿಶೇಷವಾಗಿ ಒಬ್ಬ ಆಳನ್ನು ನಿಯಮಿಸ ಲಾಗಿತ್ತು. ಆ ಮೂರ್ತಿಗಳ ಮೇಲೆ ಒಂದಿನಿತು ಧೂಳೂ ಕೂರದಂತೆ ಜಾಗರೂಕತೆಯಿಂದ ಅವನು ಅವುಗಳನ್ನು ವಿಶೇಷ ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದನು.
ರಾಣಿಗೂ ಸಹ ಅದನ್ನು ಮುಟ್ಟುವ ಅಧಿಕಾರವಿರಲಿಲ್ಲ. ರಾಜ ಆ ಮೂರು ಮೂರ್ತಿಗಳ ಜೊತೆ ಹೆಚ್ಚು ಕಾಲವನ್ನೇ ಕಳೆಯುತ್ತಿದ್ದನು. ಒಂದು ದಿನ ಆ ವಿಶೇಷ ಸೇವಕನು ಆ ಮೂರ್ತಿಗಳನ್ನು ಶುಚಿಗೊಳಿಸುತ್ತಿರುವಾಗ, ಅಕಸ್ಮಾತಾಗಿ ಅವನ ಕೈ ಮೀರಿ ಒಂದು ಮೂರ್ತಿ ಸ್ವಲ್ಪ ಭಗ್ನವಾಯಿತು. ಈ ಸುದ್ದಿ ಕೇಳಿದ ಮಹಾರಾಜನು ಅತ್ಯಂತ ಕ್ರೋಧದಿಂದ ಆ ಸೇವಕನಿಗೆ ಮರಣದಂಡನೆ ವಿಧಿಸಿದನು. ಆ ಕಠಿಣ ತೀರ್ಪು ಕೇಳಿದ ಸೇವಕನಿಗೆ ಅತೀವ ದುಃಖವಾಯಿತು.
ಇದನ್ನೂ ಓದಿ: Roopa Gururaj Column: ತಾಯಿಯ ಪ್ರೀತಿ ಅತಿ ಶ್ರೇಷ್ಠವಾದುದು
ಇಷ್ಟು ವರ್ಷಗಳ ಕಾಲ ತಾನು ಆ ಮೂರ್ತಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡರೂ ಸಹ, ರಾಜ ಶಿಕ್ಷೆ ನೀಡುವ ಮುನ್ನ ಬಂದು ಕ್ಷಣವೂ ತನ್ನ ಮಾತನ್ನು ಆಲಿಸಲಿಲ್ಲ ಎಂದು ಬೇಸರವೂ ಆಯಿತು. ಇನ್ನೇನು ಅವನಿಗೆ ಮರಣ ದಂಡನೆ ವಿಧಿಸಬೇಕು ಎಂದಾಗ ಅವನು ಒಂದು ಬಾರಿ ತಾನು ಎಲ್ಲಾ ಮೂರ್ತಿಗಳನ್ನು ನೋಡಿ ಬರುವೆನು ಅವಕಾಶ ಮಾಡಿ ಕೊಡಬೇಕು ಎಂದು ಕೇಳಿಕೊಂಡನು.
ಅವನನ್ನು ಮತ್ತೆ ಮೂರ್ತಿಗಳನ್ನು ಏರಿಸಿದ್ದ ಕೋಣೆಗೆ ಕರೆದೊಯ್ಯಲಾಯಿತು. ಅಲ್ಲಿ ಯಾರು ಊಹಿಸಿರದ ಒಂದು ಘಟನೆ ನಡೆಯಿತು. ಮರಣ ದಂಡನೆಗೆ ಗುರಿಯಾಗಿದ್ದ ಆ ಸೇವಕ, ಅಲ್ಲಿರುವವರು ನೋಡುತ್ತಿದ್ದಂತೆಯೇ ಇನ್ನೂ ಉಳಿದಿದ್ದ ಎರಡು ವಿಶಿಷ್ಟ ಮೂರ್ತಿಗಳನ್ನು ಕೂಡ ಉದ್ದೇಶಪೂರ್ವಕವಾಗಿ ಒಡೆದು ಹಾಕಿಬಿಟ್ಟನು.
ಈ ವಿಷಯ ಮಹಾರಾಜನಿಗೆ ತಲುಪಿದಾಗ ಅವನಿಗೆ ಆಶ್ಚರ್ಯ, ಕೋಪ, ಕುತೂಹಲ ಎಲ್ಲಾ ಒಟ್ಟಿಗೆ ಆಯಿತು. ಮರಣ ದಂಡನಿಗೆ ಗುರಿಯಾಗಿದ್ದರೂ ಕೂಡ ಒಂದಿಷ್ಟೂ ಹೆದರದೆ, ಆ ಸೇವಕ ಮತ್ತೆರಡು ಮೂರ್ತಿಗಳನ್ನು ತನ್ನ ಮೇಲಿನ ಸಿಟ್ಟಿಗೆ ಹೊಡೆದನಲ್ಲ ಎಂದು ಮತ್ತಷ್ಟು ಕೋಪ ಉಕ್ಕಿ ಬಂತು.
ಕೋಪ, ಅಚ್ಚರಿಗಳ ನಡುವೆ ಮಹಾರಾಜನು ಹಲ್ಲು ಕಡಿಯುತ್ತಾ ಕೇಳಿದನು ‘ನೀನು ಹೀಗೆ ಯಾಕೆ ಮಾಡಿದೆ?’ ಸೇವಕನು ಒಂದಿಷ್ಟೂ ಪರಿತಪಿಸದೆ ಉತ್ತರಿಸಿದ: ‘ಮಹಾರಾಜ.. ಕ್ಷಮಿಸಿ, ಈ ಮೂರ್ತಿಗಳು ಮಣ್ಣಿನಿಂದ ಮಾಡಿದವು, ತುಂಬಾ ನಾಜೂಕು. ಈಗ ನಾನೇನೋ ಮರಣದಂಡನೆಗೆ ಗುರಿಯಾಗಿದ್ದೇನೆ.
ಇನ್ನು ಆ ಮೂರ್ತಿಗಳನ್ನು ನೋಡಿಕೊಳ್ಳಲು ಮತ್ತೊಬ್ಬ ಸೇವಕ ನಿಯುಕ್ತಿಗೊಳ್ಳುತ್ತಾನೆ. ಮುಂದೊಂದು ದಿನ ಅವನ ಕೈತಪ್ಪಿ ಮತ್ತೊಂದು ಮೂರ್ತಿ ಒಡೆದರೆ ಅವನು ಕೂಡ ಅನ್ಯಾಯವಾಗಿ ಸಾಯಬೇಕಾಗುತ್ತದೆ. ಹೀಗೆ ಮಣ್ಣಿನ ವಿಷಯವಾಗಿ ಇನ್ನೂ ಇಬ್ಬರ ಪ್ರಾಣ ಹೋಗುವ ಬದಲು ಹೇಗೂ ನನ್ನ ಸಾವು ನಿಶ್ಚಿತವಾಗಿದೆ, ನಾನೇ ಒಡೆದು ಬಿಟ್ಟರೆ ಮುಂದೆ ಯಾರೂ ಸಾಯುವುದಿಲ್ಲ ಎಂದನು’.
ಅವನ ಮಾತನ್ನು ಕೇಳಿ ರಾಜ ಸಭೆಯಲ್ಲಿದ್ದವರೆಲ್ಲರೂ ದುಃಖದಿಂದ ತಲೆತಗ್ಗಿಸಿದರು. ಈ ಮಾತುಗಳನ್ನು ಕೇಳಿ ಮಹಾರಾಜನಿಗೆ ತನ್ನ ದುಡುಕಿನ ನಿರ್ಧಾರಕ್ಕೆ ನಾಚಿಕೆಯಾಯಿತು. ತನ್ನ ತಪ್ಪನ್ನು ಅರಿತು ಸೇವಕನನ್ನು ತಕ್ಷಣ ಕ್ಷಮಿಸಿದನು. ಯೋಚಿಸಿ ನೋಡಿ, ಕೆಲವೊಮ್ಮೆ ನಾವು ಕೂಡ ಚಿಕ್ಕ ಚಿಕ್ಕ ವಿಷಯಕ್ಕೆ ಅನಗತ್ಯವಾಗಿ ದುಡುಕಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡು ಬಿಡುತ್ತೇವೆ. ಅಕಸ್ಮಾತಾಗಿ ಯಾರಾದರೂ ತಪ್ಪು ಮಾಡಿರಬಹುದು, ಕೆಲವೊಮ್ಮೆ ಅದು ಅವರ ನಿಯಂತ್ರಣದಲ್ಲಿ ಇರುವುದಿಲ್ಲ ಎನ್ನುವುದನ್ನು ಅರಿತುಕೊಳ್ಳಬೇಕಾಗುತ್ತದೆ. ಎಲ್ಲದಕ್ಕೂ ಒಂದೇ ರೀತಿಯ ನಿರ್ಧಾರ ಸರಿ ಹೋಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಮನುಷ್ಯ ಸಂಬಂಧ ಗಳು ಬಹಳ ಮುಖ್ಯ. ದುಡುಕಿ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಮಾಧಾನದಿಂದ ಯೋಚಿಸಿ ಹೆಜ್ಜೆ ಮುಂದಿರಿಸಬೇಕು.