ಒಂದೊಳ್ಳೆ ಮಾತು
ಒಮ್ಮೆ ನಾರದ ಮುನಿಗಳು ಹನುಮಂತನನ್ನು ಕಂಡಾಗ, ತುಸು ಹಾಸ್ಯಭಾವದಲ್ಲಿ, “ಪ್ರಪಂಚವೆಲ್ಲ ನಿನ್ನನ್ನು ದೊಡ್ಡ ರಾಮಭಕ್ತ ಎಂದು ಪೂಜಿಸುತ್ತದೆ. ಆದರೆ ನನ್ನ ಪ್ರಕಾರ ನೀನು ಭಕ್ತನೇ ಅಲ್ಲ!" ಎಂದರು.
ಇದರಿಂದ ಆಶ್ಚರ್ಯಗೊಂಡ ಹನುಮಂತನು, “ನಾರದರೇ, ನೀವು ಏಕೆ ಹೀಗೆ ಹೇಳುತ್ತಿದ್ದೀರಿ? ನಿಮಗೆ ಈ ರೀತಿ ಅನಿಸುವಂತೆ ನಾನು ಏನು ಮಾಡಿದೆ?" ಎಂದು ವಿನಯದಿಂದ ಕೇಳಿದನು. ಆಗ ನಾರದ ಮುನಿಗಳು ವಿಚಲಿತರಾಗದೆ “ವೇದ ಶಾಸಗಳ ಪ್ರಕಾರ ಆರು ವಿಧದ ಆಕ್ರಮಣಕಾರರು ಇರುತ್ತಾರಂತೆ. ಅವರಲ್ಲಿ ಒಬ್ಬರೆಂದರೆ ಇತರರ ಮನೆಗಳಿಗೆ, ಆಸ್ತಿ- ಪಾಸ್ತಿಗೆ ಬೆಂಕಿ ಹಚ್ಚುವವರು.
ಇಂಥ ಆಕ್ರಮಣಕಾರರನ್ನು ಸಂಹರಿಸಿದರೂ ಪಾಪ ಬರುವುದಿಲ್ಲ, ಏಕೆಂದರೆ ಅವರ ಕೃತ್ಯಗಳು ವಿನಾಶಕಾರಿಯಾದಂಥವು ಎಂದು ಶಾಸ್ತ್ರಗಳು ಹೇಳುತ್ತವೆ. ನೀನು ಸೀತಾಮಾತೆಯನ್ನು ಹುಡುಕಲು ಲಂಕೆಗೆ ಹೋದಾಗ, ಹಿಂದಿರುಗುವ ಮುನ್ನ ರಾಕ್ಷಸರ ಮನೆಗಳಿಗೆ ಬೆಂಕಿ ಹಚ್ಚಿದೆ. ಅಂಥ ವಿನಾಶ ಕಾರಿ ಕೆಲಸವನ್ನು ನೀನು ಕೂಡ ಮಾಡಿದ್ದೀಯಾ. ಹಾಗಿರುವಾಗ ನಿನ್ನನ್ನು ನಾನು ಹೇಗೆ ಭಕ್ತನೆಂದು ಕರೆಯಲಿ?" ಎಂದರು.
ಇದನ್ನೂ ಓದಿ: Roopa Gururaj Column: ನಾವೆಲ್ಲರೂ ಬೆಳೆಸಿಕೊಳ್ಳಬೇಕಾದ ಕ್ಷಮಾಗುಣ
ನಾರದರ ಉದ್ದೇಶವನ್ನು ಅರಿತ ಹನುಮಂತನು ನಗುತ್ತಾ, “ನಾರದರೇ, ರಾಮಭಕ್ತನ ಮಹತ್ವದ ಕರ್ತವ್ಯಗಳಲ್ಲಿ ಒಂದೆಂದರೆ ಯಾರಿಗೂ ಸಂಬಂಧಿಸದ ಶವಗಳ ಅಂತ್ಯ ಸಂಸ್ಕಾರಗಳನ್ನು ನೆರವೇರಿಸಿ, ಅವರಿಗೆ ಮುಂದಿನ ಜನ್ಮದಲ್ಲಿ ಉತ್ತಮ ಸ್ಥಿತಿ ದೊರಕುವಂತೆ ಮಾಡುವುದು.
ನಾನು ಲಂಕೆಗೆ ಹೋದಾಗ, ಅಲ್ಲಿ ಇರುವ ಭವ್ಯ ಮಹಲುಗಳಲ್ಲಿ ಎಲ್ಲಿಯೂ ಭಗವಂತನ ನಾಮ ಸ್ಮರಣೆ ನಡೆಯುತ್ತಿರುವುದನ್ನು ಕೇಳಲಿಲ್ಲ. ಶಾಸ್ತ್ರಗಳ ಪ್ರಕಾರ, ಯಾರು ಭಗವಂತನ ನಾಮ ಮತ್ತು ಕೀರ್ತನೆಯನ್ನು ಜಪಿಸುವುದಿಲ್ಲವೋ, ಅವರನ್ನು ಜೀವಂತ ಶವಗಳೆಂದು ಪರಿಗಣಿಸಲಾಗುತ್ತದೆ. ಅವರು ಈಗಾಗಲೇ ಮೃತರಾಗಿದ್ದರಿಂದ, ಅವರನ್ನು ಅತ್ಯಂತ ದುಃಖಕರ ಸ್ಥಿತಿಯಿಂದ ಬಿಡುಗಡೆ ಗೊಳಿಸಲು, ನಾನು ಅವರ ಮಹಲುಗಳೊಂದಿಗೆ ಅವರನ್ನೂ ಬೆಂಕಿಗೆ ಆಹುತಿ ನೀಡಿದೆ. ನಾನು ಬೆಂಕಿ ಹಚ್ಚದೆ ಬಿಟ್ಟ ಏಕೈಕ ಮಹಲೆಂದರೆ ವಿಭೀಷಣನ ಅರಮನೆ. ಅಲ್ಲಿ ಮಾತ್ರ ನಾನು ಶ್ರೀರಾಮ ನ ನಾಮಸ್ಮರಣೆಯನ್ನು ಕೇಳಿದೆ" ಎಂದ.
ಹನುಮಂತನು ಮಾತನ್ನು ಮುಂದುವರಿಸುತ್ತಾ, “ಇಷ್ಟೇ ಅಲ್ಲ, ನಾನು ಇನ್ನೊಂದು ಹೆಜ್ಜೆ ಮುಂದೆ ಹೋಗಿ ದೊಡ್ಡ ಗರ್ಜನೆ ಮಾಡಿದೆ. ಆ ಗರ್ಜನೆಯಿಂದ ಲಂಕೆಯಲ್ಲಿದ್ದ ಎಲ್ಲಾ ರಾಕ್ಷಸರೂ ಭಯ ಭೀತರಾದರು. ಆ ಧ್ವನಿಯನ್ನು ಕೇಳಿ ಅನೇಕ ಗರ್ಭಿಣಿ ರಾಕ್ಷಸಿಯರ ಗರ್ಭಪಾತವಾಯಿತು. ಈ ಮೂಲಕ ಭವಿಷ್ಯದಲ್ಲಿ ಲಂಕೆಯಲ್ಲಿ ಮತ್ತೆ ರಾಕ್ಷಸ ವಂಶವು ಹುಟ್ಟಿ ಲೋಕಕ್ಕೆ ಕಾಟ ನೀಡದಂತೆ ಮಾಡಿದೆ" ಎಂದ ಅತ್ಯಂತ ವಿನಯದಿಂದ.
ಹನುಮಂತನ ಉತ್ತರವನ್ನು ಕೇಳಿ ನಾರದ ಮುನಿಗಳು ಅತ್ಯಂತ ಸಂತೋಷಪಟ್ಟರು. ಅವರು ಹನುಮನನ್ನು ಅಪ್ಪಿಕೊಂಡು, ಶ್ರೀರಾಮನ ಮೇಲಿನ ಅವನ ಅತೀತ ಭಕ್ತಿಯನ್ನು ಹೃದಯ ಪೂರ್ವಕವಾಗಿ ಪ್ರಶಂಸಿಸಿದರು. ಹನುಮಂತನ ಈ ಸ್ವರೂಪವನ್ನು ನೋಡಲೆಂದೇ ಅವರು ಬೇಕಾಗಿ ಹೀಗೆ ಕೆಣಕಿ ಮಾತನಾಡಿದ್ದರು. ಆ ರೀತಿ ಮಾತನಾಡಿದಾಗ ಹನುಮ ಹೇಗೆ ಪ್ರತಿಕ್ರಿಯಿಸುತ್ತಾನೆ ಎನ್ನುವು ದನ್ನು ಅವರು ನೋಡಬೇಕಿತ್ತು.
ಈ ಕಥೆಯನ್ನು ಓದುವಾಗ ನಮಗೊಂದು ಸೂಕ್ಷ್ಮದ ಅರಿವಾಗುತ್ತದೆ. ರಾಕ್ಷಸರ ಮಧ್ಯೆ ಇದ್ದರೂ ವಿಭೀಷಣ ತನ್ನ ಭಕ್ತಿಯನ್ನು ಬಿಡಲಿಲ್ಲ. ಅವನ ಮನೆಯಿಂದ ಹನುಮಂತನಿಗೆ ನಿರಂತರವಾಗಿ ರಾಮನಾಮ ಸ್ಮರಣೆ ಕೇಳುತ್ತಿತ್ತು. ಅಂತೆಯೇ ನಾವು ಎಲ್ಲಿದ್ದೀವಿ, ಯಾರ ಮಧ್ಯೆ, ಎಂಥ ಪರಿಸ್ಥಿತಿ ಯಲ್ಲಿ ಇದ್ದೇವೆ ಎನ್ನುವುದಕ್ಕಿಂತ, ಇದೆಲ್ಲದರ ಮಧ್ಯೆಯೂ ನಾವು ಏನಾಗಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ.
ನಮ್ಮ ಸ್ವತಂತ್ರ ಮನೋಭಾವ, ಅಸ್ತಿತ್ವ ಇವೆಲ್ಲವೂ ಯಾವುದೇ ಸಂದರ್ಭಗಳಿಂದ ಬದಲಾಗು ವಂಥದಲ್ಲ. ಪರಿಸ್ಥಿತಿಗಳ ಜತೆ ರಾಜಿ ಮಾಡಿಕೊಳ್ಳುವಂಥದ್ದೂ ಅಲ್ಲ. ನಮಗೆ ಸರಿ ಎನಿಸಿದ್ದನ್ನು ಮಾಡಲು ಸರಿಯಾದ ದಾರಿಯಲ್ಲಿ ನಡೆಯಲು ನಮ್ಮ ಸುತ್ತಲಿರುವವರು ಸಹಕರಿಸಬೇಕಾಗಿಲ್ಲ. ನಾವು ದೃಢವಾದ ಸಂಕಲ್ಪ ಮಾಡಿದರೆ, ಆ ದಾರಿಯಲ್ಲಿ ನಡೆಯಬೇಕು ಎಂದು ನಿರ್ಧರಿಸಿದರೆ ಸಾಕು, ಅದೇನೇ ಆದರೂ ನಮ್ಮಲ್ಲಿ ಬದಲಾವಣೆ ಇರುವುದಿಲ್ಲ.
ಆದ್ದರಿಂದಲೇ ಬದುಕಿನಲ್ಲಿ ಗುರಿ ಮತ್ತು ಗುರು ಸಮರ್ಥವಾಗಿದ್ದಾಗ ದೃಢಸಂಕಲ್ಪ ಮಾಡಿ ಆ ದಾರಿ ಯಲ್ಲಿ ಹೆಜ್ಜೆ ಹಾಕಬೇಕು. ಆ ಗಟ್ಟಿತನ ಬೆಳೆಸಿಕೊಂಡಾಗ ಹಲವರಿಗೆ ಪ್ರೇರಣೆಯಾಗುತ್ತೇವೆ.