ಯುದ್ಧಕಾಂಡ
ರವೀ ಸಜಂಗದ್ದೆ
ರಾಜಕೀಯವು ನಿಂತ ನೀರಲ್ಲ, ಅದು ಸದಾ ಹರಿಯುವ ನದಿ, ಆಗೀಗ ಧುಮ್ಮಿಕ್ಕಿ ಭೋರ್ಗರೆಯುವ ಜಲಪಾತ-ಪ್ರಪಾತ! ರಾಜಕಾರಣ ಎಂಬುದು ಕೇವಲ ಅಧಿಕಾರ ಮತ್ತು ಸ್ಥಾನಮಾನ ಮಾತ್ರ ಅಲ್ಲ, ಅದು ನಿರಂತರ ಬದಲಾಗುವ, ಸಂಚಲನ ಮೂಡಿಸುವ, ಏರಿಳಿತದ ಹಾವು ಏಣಿಯಾಟ.
ರಾಜ್ಯಸಭೆಯಲ್ಲಿ ತಮ್ಮದೇ ಆದ ವಿಶಿಷ್ಟ, ಸ್ಪಷ್ಟ ಮತ್ತು ತೀಕ್ಷ ವಾಗ್ಝರಿಯಿಂದ ಗಮನ ಸೆಳೆಯುತ್ತಿದ್ದ ಆಪ್‌ನ ಯುವ ನಾಯಕ, ಉತ್ತಮ ಸಂಸದೀಯ ಪಟು, ರಾಜ್ಯಸಭಾ ಸದಸ್ಯ ರಾಘವ್ ಛಡ್ಡಾ ಅವರ ರಾಜಕೀಯ ಪಯಣದಲ್ಲಿ ಅನಿರೀಕ್ಷಿತ ತಿರುವು, ಆಘಾತ, ಹಿಂಬಡ್ತಿ ಎದುರಾಗಿದೆ. ರಾಜ್ಯಸಭೆಯಲ್ಲಿ ಆಪ್‌ನ ಉಪನಾಯಕ ಸ್ಥಾನದಿಂದ ಕೆಳಗಿಳಿಸಿ ಸಂಸತ್ತಿನಲ್ಲಿ ಛಡ್ಡಾಗೆ ಮಾತನಾಡಲು ಪಕ್ಷದ ಕೋಟಾದಡಿ ಅವಕಾಶ ನೀಡಬಾರದೆಂದು ಆಪ್ ರಾಜ್ಯಸಭಾ ಸಚಿವಾಲಯಕ್ಕೆ ಪತ್ರ ಬರೆದು ಮನವಿ ಮಾಡಿರುವುದು ದೆಹಲಿಯ ರಾಜಕೀಯ ಪಡಸಾಲೆಯಲ್ಲಿ ಸಂಚಲನ ಮೂಡಿಸಿದ ’ಬ್ರೇಕಿಂಗ್ ನ್ಯೂಸ್’!
ರಾಘವ್ ಛಡ್ಡಾರನ್ನು ಈಗಿರುವ ಹುದ್ದೆಯಿಂದ ಕೆಳಗಿಳಿಸಿದ್ದು ಯಾಕೆ? ಆತುರಾತುರವಾಗಿ ಈ ನಿರ್ಧಾರ ಕೈಗೊಳ್ಳಲಾಯಿತೇ ಅಥವಾ ಖೆಡ್ಡಾ ಮೊದಲೇ ರೆಡಿಯಾಗಿತ್ತೇ? ಪಕ್ಷದ ಆಸ್ತಿಯಾಗಬಲ್ಲ ಯುವ ನಾಯಕನನ್ನು ಆಪ್ ಈ ರೀತಿ ನಡೆಸಿಕೊಳ್ಳುತ್ತಿರುವುದು ಯಾಕೆ? ಇತ್ತೀಚಿನ ದಿನಗಳಲ್ಲಿ ರಾಘವ್ ಛಡ್ಡಾ ಆಪ್‌ನ ಹೇಳಿಕೆ-ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡದ್ದಕ್ಕೆ ಸಿಕ್ಕ ಉಡುಗೊರೆಯೇ ಇದು? ಸಣ್ಣ ವಯಸ್ಸಿನಲ್ಲಿ ರಾಜಕಾರಣದಲ್ಲಿ ಪ್ರಸಿದ್ಧಿ ಮತ್ತು ಒಂದಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಸಾಗುತ್ತಿರುವ ಛಡ್ಡಾ ಯಾರು, ಏನು, ಹೇಗೆ ಎಂಬುದನ್ನು ಅರಿಯುವ ಪ್ರಯತ್ನವಿದು.
ಇದನ್ನೂ ಓದಿ: Ravi Sajangadde Column: ಗುಡ್ ಬೈ ನಕ್ಸಲಿಸಂ, ಆರ್‌ಐಪಿ ಮಾವೋಯಿಸಂ
ಈಗ ಎದ್ದಿರುವ ಕಿಚ್ಚು ಇಂತಿದೆ. ರಾಜ್ಯಸಭೆಯಲ್ಲಿ ಕಿರಿಯ ವಯಸ್ಸಿಗೇ ಪ್ರಭಾವಿ ನಾಯಕರಾಗಿ ಬೆಳೆದಿದ್ದ ರಾಘವ್ ಛಡ್ಡಾ (37 ವರ್ಷ) ಜಾಗಕ್ಕೆ ಇದೀಗ ಮತ್ತೋರ್ವ ಸದಸ್ಯ ಅಶೋಕ್ ಮಿತ್ತಲ್ರನ್ನು ಆಪ್ ನೇಮಿಸಿದೆ. ಈ ಹಠಾತ್ ಬದಲಾವಣೆ ಮತ್ತು ಮಾತನಾಡಲು ಅವಕಾಶ ನಿರಾಕರಿಸಿರುವ ನಡೆಯ ಹಿಂದೆ ಪಕ್ಷದೊಳಗಿನ ಹಲವು ಬೆಳವಣಿಗೆಗಳು ಪ್ರಮುಖ ಕಾರಣ ಎಂದು ವಿಶ್ಲೇಷಿಸ ಲಾಗುತ್ತಿದೆ.
ಇತ್ತೀಚಿನ ತಿಂಗಳುಗಳಲ್ಲಿ ಪಕ್ಷದ ಪ್ರಮುಖ ಚಟುವಟಿಕೆಗಳಿಂದ, ಸಂಘಟನಾತ್ಮಕ ವಿಷಯಗಳಿಂದ ಮತ್ತು ಪಕ್ಷದ ನಾಯಕರಿಂದ ಛಡ್ಡಾ ಅಂತರ ಕಾಯ್ದುಕೊಂಡಿದ್ದರು. ಜತೆಗೆ ಬಿಜೆಪಿ-ಮೋದಿ ಕುರಿತು ಮೌನವಾಗಿದ್ದು ಯಾವುದೇ ರಾಜಕೀಯ ವಿರೋಧಿ ಹೇಳಿಕೆ ನೀಡದೇ ಇದ್ದುದರ ಒಟ್ಟಾರೆ ಫಲಿತಾಂಶ ಈಗಿನ ಮೂಲೆಗುಂಪು. ಈ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯಿಸಿರುವ ನೂತನ ಉಪ ನಾಯಕ ಅಶೋಕ್ ಮಿತ್ತಲ್, ‘ಇದೊಂದು ಸಾಮಾನ್ಯ ಪ್ರಕ್ರಿಯೆ ಮತ್ತು ಪಕ್ಷದ ಆಂತರಿಕ ವಿಚಾರ.
ಪಕ್ಷದ ಎಲ್ಲ ಸದಸ್ಯರಿಗೂ ಆಡಳಿತಾತ್ಮಕ ಕೌಶಲ್ಯ ಕಲಿಯಲು ಹಾಗೂ ಸದನದ ಪ್ರಕ್ರಿಯೆಗಳನ್ನು ಅರಿಯಲು ಅವಕಾಶ ನೀಡುವ ಉದ್ದೇಶದಿಂದ ಜವಾಬ್ದಾರಿಗಳನ್ನು ಬದಲಾಯಿಸಲಾಗಿದೆ’ ಎಂಬ ಹೇಳಿ ಪಕ್ಷದ ನಡೆಯನ್ನು ಸಮರ್ಥಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ’ನಾನೀಗ ಪ್ರಶಾಂತ ನದಿಯಾಗಿ ದ್ದೇನೆ.
ಪ್ರವಾಹದ ವಿರುದ್ಧ ಹೇಗೆ ಈಜಬೇಕು ಎಂದು ನನಗೆ ಗೊತ್ತು. ನಾನು ಮೌನವಾಗಿದ್ದೇನೆ, ಅದರೆ ಯಾರಿಗೂ ಶರಣಾಗಿಲ್ಲ’ ಎಂದು ಛಡ್ಡಾ ತಿರುಗೇಟು ನೀಡಿzರೆ. ಒಟ್ಟಿನಲ್ಲಿ ಆಪ್ ಮತ್ತು ರಾಘವ್ ಛಡ್ಡಾ ನಡುವೆ ಎಲ್ಲವೂ ಸರಿಯಿಲ್ಲ, ಸರಿಪಡಿಸಲಾಗದಷ್ಟು ದೊಡ್ಡ ಕಂದಕ ಸೃಷ್ಟಿಯಾಗಿದೆ, ಶೀತಲ ಸಮರ, ’ನಾನೊಂದು ತೀರಾ; ನೀನೊಂದು ತೀರ’ ಎನ್ನುವುದಂತೂ ಸ್ಪಷ್ಟ!
ಛಡ್ಡಾ ಮತ್ತು ವಿವಾದಗಳು ಒಂದೇ ನಾಣ್ಯದ ಎರಡು ಮುಖಗಳು! 2024ರ ಅಬಕಾರಿ ಹಗರಣ ದಂತಹ ಆಪ್‌ನ ಬಿಕ್ಕಟ್ಟಿನ ಸಮಯದಲ್ಲಿನ ಛಡ್ಡಾ (ಕಣ್ಣಿನ ಚಿಕಿತ್ಸೆಗಾಗಿ) ತಿಂಗಳುಗಳ ಕಾಲ ವಿದೇಶದಲ್ಲಿ ಇದ್ದದ್ದು ಸ್ವಪಕ್ಷೀಯರ ಟೀಕೆಗೆ ಗುರಿಯಾಯಿತು. ಅವರು ಉದ್ದೇಶಪೂರ್ವಕವಾಗಿಯೇ ಅಂತರ ಕಾಯ್ದುಕೊಂಡಿದ್ದಾರೆ ಎಂಬ ವದಂತಿಗಳೆದ್ದವು.
2023ರಲ್ಲಿ ’ದೆಹಲಿ ಸೇವೆಗಳ ಮಸೂದೆ’ಯನ್ನು ಪರಿಶೀಲಿಸಲು ಆಯ್ಕೆ ಸಮಿತಿಯನ್ನು ರಚಿಸುವ ನಿರ್ಣಯವನ್ನು ಮಂಡಿಸುವಾಗ, ಒಪ್ಪಿಗೆ ಪಡೆಯದೇ ಐದು ರಾಜ್ಯಸಭಾ ಸದಸ್ಯರ ಹೆಸರನ್ನು ಪ್ರಸ್ತಾಪಿಸಿ, ನಕಲಿ ಸಹಿ ಮಾಡಲಾಗಿದೆ ಎಂಬ ಗಂಭೀರ ಆರೋಪ ಅವರ ಮೇಲೆ ಕೇಳಿಬಂದಿತ್ತು.
ನಿಯಮಗಳ ಉಲ್ಲಂಘನೆಗಾಗಿ 2023ರ ಆಗಸ್ಟ್‌ನಲ್ಲಿ ಛಡ್ಡಾರನ್ನು ರಾಜ್ಯಸಭೆಯಿಂದ ಅಮಾನತು ಗೊಳಿಸಲಾಯಿತು. ನಂತರ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಅಂತಿಮವಾಗಿ ವಿಶೇಷಾಧಿಕಾರ ಸಮಿತಿಯ ಮುಂದೆ ಕ್ಷಮೆಯಾಚಿಸಿದ ನಂತರ ಡಿಸೆಂಬರ್ 2023ರಲ್ಲಿ ಅಮಾನತು ರದ್ದಾಯಿತು.
2023ರಲ್ಲಿ ಸಂಸದರಾದ ಅವರಿಗೆ ದೆಹಲಿಯಲ್ಲಿ ದೊಡ್ಡದಾದ ’ಟೈಪ್ 7’ ಸರಕಾರಿ ಬಂಗಲೆಯನ್ನು ನೀಡಲಾಗಿತ್ತು. ಮೊದಲ ಬಾರಿಗೆ ಆಯ್ಕೆಯಾದ ಸಂಸದರು ’ಟೈಪ್ 5’ ಬಂಗಲೆಗೆ ಮಾತ್ರ ಅರ್ಹ ರಾಗಿದ್ದಾರೆ ಎಂದು ತಿಳಿಸಿ, ರಾಜ್ಯಸಭಾ ಸಚಿವಾಲಯವು ಹಂಚಿಕೆಯನ್ನು ರದ್ದುಪಡಿಸಿ ಮನೆ ತೆರವುಗೊಳಿಸುವಂತೆ ನೋಟಿಸ್ ನೀಡಿತ್ತು.
ನಿರ್ಧಾರವನ್ನು ವಿರೋಧಿಸಿ ಛಡ್ಡಾ ನ್ಯಾಯಾಲಯದ ಮೊರೆ ಹೋದರು. ಏಪ್ರಿಲ್ 2023ರಲ್ಲಿ ನ್ಯಾಯಾಲಯವು ಅವರನ್ನು ಮನೆಯಿಂದ ಹೊರಹಾಕದಂತೆ ಮಧ್ಯಂತರ ತಡೆಯಾe ನೀಡಿತ್ತು. ನಂತರ ಅಕ್ಟೋಬರ್ 2023ರಲ್ಲಿ ಇದೇ ನ್ಯಾಯಾಲಯವು ತನ್ನ ಹಳೆಯ ಆದೇಶವನ್ನು ಹಿಂಪಡೆದು ತಡೆಯಾe ತೆರವುಗೊಳಿಸಿತ್ತು. ಇದರ ಬೆನ್ನ ಛಡ್ಡಾ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.
ಹೈಕೋರ್ಟ್ ವಿಚಾರಣೆ ನಡೆಸಿ, ಕೆಳ ನ್ಯಾಯಾಲಯವು ಅರ್ಜಿಯನ್ನು ಸರಿಯಾಗಿ ಪರಿಶೀಲಿಸು ವವರೆಗೆ ಬಂಗಲೆಯಿಂದ ಹೊರಹಾಕಬಾರದು ಎಂದು ಸೂಚಿಸಿ ಅವರಿಗೆ ರಿಲೀಫ್ ನೀಡಿತ್ತು. ಪ್ರಸ್ತುತ ಈ ವಿಷಯದಲ್ಲಿ ಛಡ್ಡಾ ನ್ಯಾಯಾಲಯದಿಂದ ಪಡೆದ ರಕ್ಷಣೆಯಲ್ಲಿದ್ದಾರೆ. ಈ ವಿವಾದವು ರಾಜಕೀಯ ವಲಯದಲ್ಲಿ ಸಾಕಷ್ಟು ಪರ-ವಿರೋಧ ಚರ್ಚೆಗೆ ಗ್ರಾಸವಾಗಿತ್ತು.
ಇದೆಲ್ಲದರ ಹೊರತಾಗಿಯೂ ಅತ್ಯುತ್ತಮ ವಾಗ್ಮಿಯಾಗಿರುವ ರಾಘವ್ ಛಡ್ಡಾ, ತಮ್ಮ ಕರಾರು ವಾಕ್ಕಾದ ಅಂಕಿ-ಅಂಶಗಳು, ತಾರ್ಕಿಕ ಚಿಂತನೆ, ಜನಪರ ವಿಚಾರಗಳ ಮೇಲೆ ಬೆಳಕು ಚೆಲ್ಲುವ ಮತ್ತು ಸ್ಪಷ್ಟವಾದ ವಿಷಯ ಮಂಡನೆಯಿಂದಾಗಿ ಸಂಸತ್ತಿನಲ್ಲಿ ಹಲವು ಬಾರಿ ಸರ್ಕಾರ ಮತ್ತು ದೇಶದ ಗಮನ ಸೆಳೆದಿದ್ದಾರೆ.
ಅವುಗಳಲ್ಲಿ ಕೆಲವು: ಇತ್ತೀಚೆಗಷ್ಟೇ ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮವಾಗಿ ಭಾರತೀಯ ಷೇರುಪೇಟೆಯಲ್ಲಿ ಬರೋಬ್ಬರಿ 48 ಲಕ್ಷ ಕೋಟಿ ರು. ಸಂಪತ್ತು ಕರಗಿರುವ ಬಗ್ಗೆ ಅವರು ಧ್ವನಿ ಯೆತ್ತಿದ್ದರು. ಇದು ಭಾರತದ ಆರ್ಥಿಕತೆಯ ಮೂಲಭೂತ ಸಮಸ್ಯೆ ಅಲ್ಲದಿದ್ದರೂ, ಈ ಅನಿರೀಕ್ಷಿತ ಘಟನೆಯಿಂದ ನಷ್ಟ ಅನುಭವಿಸಿದ ಸಾಮಾನ್ಯ, ಸಣ್ಣ ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು ಮತ್ತು ಈ ಕುರಿತು ನೀತಿ ರೂಪಿಸುವ ಅಗತ್ಯವಿದೆ ಎಂದು ಆಗ್ರಹಿಸಿದ್ದರು.
ಟೆಲಿಕಾಂ ಕಂಪನಿಗಳು ತಿಂಗಳಿಗೆ 30 ದಿನಗಳ ಬದಲಾಗಿ ಕೇವಲ 28 ದಿನಗಳ ವ್ಯಾಲಿಡಿಟಿ ನೀಡುವ ಮೂಲಕ, ಗ್ರಾಹಕರು ವರ್ಷಕ್ಕೆ 12ರ ಬದಲಾಗಿ 13 ಬಾರಿ ರಿಚಾರ್ಜ್ ಮಾಡುವಂತೆ ಈಗಿರುವ ತಂತ್ರ ವನ್ನು ರಾಜ್ಯಸಭೆಯಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟು, ಇದು ಸಾಮಾನ್ಯ ಜನರ ಮೇಲೆ ಅನಗತ್ಯ ಆರ್ಥಿಕ ಹೊರೆ ಎಂದು ಆರೋಪಿಸಿದರು. ಅನಂತರದ ದಿನಗಳಲ್ಲಿ ಇದೆಲ್ಲ ಟ್ರಾಯ್ ನಿಯಮಗಳ ಅಡಿಯಲ್ಲಿ ಬರುವ ವಿಚಾರ ಎಂದು ಹೇಳಿ ಟೆಲಿಕಾಂ ಕಂಪನಿಗಳು ಕೈ ತೊಳೆದುಕೊಂಡವು ಎನ್ನುವುದು ಬೇರೆ ವಿಚಾರ.
ಸ್ವಿಗ್ಗಿ, ಝೊಮ್ಯಾಟೊ ಮುಂತಾದ ಆನ್‌ಲೈನ್ ಪ್ಲಾಟ್ ಫಾರ್ಮ್‌ಗಳಲ್ಲಿ ಹಗಲಿರುಳು ದುಡಿಯುವ ಗಿಗ್ ಕಾರ್ಮಿಕರ ಶೋಚನೀಯ ಸ್ಥಿತಿ, ಶೋಷಣೆ ಹಾಗೂ ಅವರಿಗೆ ಕನಿಷ್ಠ ಸಾಮಾಜಿಕ-ಆರ್ಥಿಕ ಭದ್ರತೆ ಒದಗಿಸುವ ಅಗತ್ಯತೆಯ ಬಗ್ಗೆ ಸಂಸತ್ತಿನಲ್ಲಿ ಗಂಭೀರ ಚರ್ಚೆ ಹುಟ್ಟು ಹಾಕಿದ್ದರು. ಈ ವಿಚಾರದ ಕುರಿತು ಪಕ್ಷಾತೀತವಾಗಿ ಹಲವರು ಸಹಮತ ವ್ಯಕ್ತಪಡಿಸಿ, ಈ ಸೇವೆ ಒದಗಿಸುವ ಸಂಸ್ಥೆಗಳು ’ಹತ್ತು ನಿಮಿಷಗಳೊಳಗೆ ಡೆಲಿವರಿ’ ವಾಗ್ದಾನ ಹಿಂಪಡೆಯುವಂತೆ ಆದೇಶಿಸಿತು.
ಮಗು ಜನಿಸಿದಾಗ ಅದರ ಲಾಲನೆ-ಪಾಲನೆ ತಾಯಿ ಮತ್ತು ತಂದೆ ಇಬ್ಬರದೂ ಕರ್ತವ್ಯ. ಹಾಗಾಗಿ ತಾಯಿಗೆ ಮಾತ್ರ ರಜೆ ನೀಡದೇ ತಂದೆಗೂ ಪಿತೃತ್ವ ರಜೆ ನೀಡುವ ಶಾಸನ ಜಾರಿಗೆ ತರಲು ಆಗ್ರಹಿಸಿ ದರು. ಹಬ್ಬದ ಮತ್ತು ತುರ್ತು ಸಂದರ್ಭಗಳಲ್ಲಿ ವಿಮಾನಯಾನ ಸಂಸ್ಥೆಗಳು ವಿಧಿಸುವ ದುಬಾರಿ ದರಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸರಕಾರವನ್ನು ಒತ್ತಾಯಿಸಿದ್ದರು.
ಜತೆಗೆ ಯುವಜನರ ಉದ್ಯೋಗ, ಮೂಲಸೌಕರ್ಯ ಮತ್ತು ನಗರಾಭಿವೃದ್ಧಿ ಕುರಿತಾದ ನೀತಿಗಳ ಬಗ್ಗೆ ಸರ್ಕಾರವನ್ನು ನಿರಂತರವಾಗಿ ಎಚ್ಚರಿಸುತ್ತಲೇ ಇದ್ದಾರೆ. ಈ ಎಲ್ಲಾ ಅಂಶಗಳನ್ನು ಸರ್ಕಾರ ಬಹುತೇಕ ಸಕಾರಾತ್ಮಕವಾಗಿ ತೆಗೆದುಕೊಂಡು ಕೆಲವು ವಿಚಾರಗಳಲ್ಲಿ ಸೂಕ್ತ, ಜನೋಪಯೋಗಿ ನಿರ್ಣಯ ಕೈಗೊಂಡಿರುವುದು ಸಂತಸದ ಸಂಗತಿ.
‘ಕನಿಷ್ಠ ಬ್ಯಾಂಕ್ ಬ್ಯಾಲೆನ್ಸ್ ಇಲ್ಲದಿದ್ದರೆ ಬ್ಯಾಂಕುಗಳು ಶುಲ್ಕ ವಿಧಿಸುವಂತಿಲ್ಲ’, ’ತೆರಿಗೆ ಕಟ್ಟುವ ತೆರಿಗೆದಾರರಿಗೆ ಸೂಕ್ತ-ಕನಿಷ್ಠ ಸವಲತ್ತು ಸಿಗಬೇಕು’, ’ಶಾಲಾ ಶುಲ್ಕಗಳ ಹೆಸರಿನಲ್ಲಿ ನಡೆಯುತ್ತಿರುವ ಲೂಟಿ ನಿಲ್ಲಿಸಲು ಕಠಿಣ ಕಾನೂನು ತಂದು ಅದನ್ನು ಜಾರಿ ಮಾಡಬೇಕು’ ಮುಂತಾದ ಜನಪರ ವಿಚಾರಗಳನ್ನು ರಾಜ್ಯಸಭೆಯಲ್ಲಿ ಮಂಡಿಸಿ ’ಜನರ ಧ್ವನಿ’ ಎನಿಸಿಕೊಂಡರು.
ಜನಪ್ರತಿನಿಧಿಯ ನೈಜ ಶಕ್ತಿ ಇರುವುದು ಅವರು ಜನರ ಧ್ವನಿಯಾಗಿ ಸಧನದಲ್ಲಿ ಕೇಳುವ ಪ್ರಶ್ನೆಗಳು ಹಾಗೂ ಮಂಡಿಸುವ ವಿಚಾರಗಳಲ್ಲಿ. ರಾಘವ್ ಛಡ್ಡಾ ರಾಜ್ಯಸಭೆಯಲ್ಲಿ ಸಾರ್ವಜನಿಕರ ಪರವಾಗಿ ಅತ್ಯಂತ ಪ್ರಭಾವಶಾಲಿಯಾಗಿ, ಜ್ವಲಂತ ಸಮಸ್ಯೆಗಳ ಕುರಿತು ಮಾತನಾಡಿ, ಸರಕಾರದ ಕಿವಿ ಹಿಂಡುವ ಕೆಲಸವನ್ನು ಮಾಡಿಕೊಂಡು ಬಂದು, ಒಂದಷ್ಟು ಪ್ರಚಾರ-ಪ್ರಸಿದ್ಧಿ ಪಡೆದಿದ್ದಾರೆ.
ಆಪ್‌ನ ಆಂತರಿಕ ರಾಜಕೀಯ ಸಮೀಕರಣಗಳು ಬದಲಾಗಿ ಅವರನ್ನು ಪಕ್ಷದ ಉಪನಾಯಕ ಸ್ಥಾನದಿಂದ ಕೆಳಗಿಳಿಸಿದ ಪರಿಣಾಮ ಛಡ್ಡಾರಿಗೆ ರಾಜ್ಯಸಭೆಯಲ್ಲಿ ಮಾತನಾಡಲು ಸದ್ಯಕ್ಕೆ ಅವಕಾಶ ಮೊಟಕುಗೊಂಡಿದೆ. ಈ ತಾತ್ಕಾಲಿಕ ಹಿನ್ನಡೆಯಿಂದಾಗಿ ಅವರ ರಾಜಕೀಯ ನಡೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಸದ್ಯದ ಕದನ ಕುತೂಹಲ!
ರಾಘವ್ ಛಡ್ಡಾ ಇನ್ನಷ್ಟು ಮತ್ತಷ್ಟು ಪಕ್ವತೆ ಮೈಗೂಡಿಸಿಕೊಳ್ಳಬೇಕು ಎನ್ನುವುದು ಹೌದಾದರೂ ಅವರಂತಹ ಸಂಸದೀಯ ಪಟುಗಳು ಯಾವುದೇ ಪಕ್ಷಕ್ಕೆ ಮತ್ತು ಸಂಸತ್ತಿಗೆ ನಿಜಾರ್ಥದಲ್ಲಿ ಆಸ್ತಿ! ಆಪ್ ಇದನ್ನು ಶೀಘ್ರದ ಮನಗಂಡು, ಆಗಿರುವ ದೋಷ ಸರಿಪಡಿಸಿದರೆ ಒಳಿತು; ಇಲ್ಲವಾದಲ್ಲಿ ಅವರು ಬೇರೆ ಪಕ್ಷಗಳ ಕದ ತಟ್ಟುವುದು ಖಂಡಿತ! ಡಜನ್‌ಗಟ್ಟಲೆ ಪಕ್ಷಗಳು ಛಡ್ಡಾರನ್ನು ಸ್ವಾಗತಿ ಸಲು, ಕೆಂಪು ಹಾಸು ಹಾಸಿ ತುದಿಗಾಲಲ್ಲಿ ನಿಂತಿವೆ! ಸದ್ಯದ ಮಾಹಿತಿಗಳ ಪ್ರಕಾರ ಅವರು ಬಿಜೆಪಿ ಸೇರುವ ನಿರೀಕ್ಷೆಯಿದೆ.
ಛಡ್ಡಾ ಅವರೇ, ನಿಮ್ಮತನವನ್ನು ಮತ್ತು ಜನರ ಧ್ವನಿಯಾಗುವ ನಿಮ್ಮ ಸಿದ್ಧಾಂತವನ್ನು ಯಾವುದೇ ಪಕ್ಷದಲ್ಲಿ ಇದ್ದರೂ, ಯಾವುದೇ ಕಾರಣಕ್ಕೂ ತ್ಯಜಿಸದಿರಿ. ಯಾಕೆಂದರೆ ಅದು ನಿಮ್ಮ ವ್ಯಕ್ತಿತ್ವ ಮತ್ತು ಅಸ್ಮಿತೆ. ಮಾಡಿದ ತಪ್ಪು ತಿದ್ದಿಕೊಂಡು, ಮತ್ತಷ್ಟು ಪಕ್ವವಾಗಲು ಇಂಥಾ ಹಿನ್ನಡೆಗಳು ಸುವರ್ಣಾ ವಕಾಶ.
ಸ್ವಯಂ ಪ್ರಕಾಶವಾಗಿ ಮಿನುಗಿದವರೇ ರಾಜಕಾರಣದಲ್ಲಿ ಗಟ್ಟಿ ಕಾಳು ಎನಿಸಿಕೊಳ್ಳುತ್ತಾರೆ, ನೆನಪಿರಲಿ. ರಾಜಕೀಯ ಭವಿಷ್ಯ ಮತ್ತಷ್ಟು ಉಜ್ವಲವಾಗಲಿ. ಬೆಸ್ಟ್ ವಿಷಸ್ ಛಡ್ಡಾಜಿ; ಗೆಟ್ ವೆಲ್ ಸೂನ್ ‘ಆಪ್’!
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)