ಮೂರ್ತಿಪೂಜೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆತಂಕಗೊಂಡಿದ್ದಾರೆ. ಅವರ ಆತಂಕಕ್ಕೆ ಬಿಹಾರ ವಿಧಾನ ಸಭೆ ಚುನಾವಣೆಯೇ ಮೂಲ ಕಾರಣ. ಮೊನ್ನೆ ಮೊನ್ನೆಯ ತನಕ ಅವರಿಗೆ ಬಿಹಾರ ವಿಧಾನಸಭೆ ಚುನಾವಣೆಯ ವಿಷಯದಲ್ಲಿ ಆತ್ಮವಿಶ್ವಾಸವಿತ್ತು. ಆರ್‌ಜೆಡಿ, ಕಾಂಗ್ರೆಸ್ಸನ್ನು ಒಳಗೊಂಡ ‘ಇಂಡಿ’ ಮೈತ್ರಿಕೂಟ ಗೆದ್ದು ಅಧಿಕಾರ ಹಿಡಿಯುತ್ತದೆ ಎಂಬ ನಂಬಿಕೆ ಇತ್ತು. ಆದರೆ ದಿನ ಕಳೆದಂತೆ ರಾಹುಲ್ ಗಾಂಧಿಯವರ ವಿಶ್ವಾಸ ಕುಗ್ಗತೊಡಗಿದೆ. ಕಾರಣ? ಬಿಹಾರದ ರಣಾಂಗಣದಿಂದ ಬರುತ್ತಿರುವ ಮಾಹಿತಿ. ಕೆಲ ದಿನಗಳ ಹಿಂದೆ ಅವರಿಗೆ ಬರುತ್ತಿದ್ದ ಮಾಹಿತಿಯು ‘ಇಂಡಿ’ ಮೈತ್ರಿಕೂಟ ನಿರಾಯಾಸ ವಾಗಿ ಗೆಲ್ಲಲಿದೆ, ಗೆದ್ದು ಅಧಿಕಾರ ಹಿಡಿಯಲಿದೆ ಅಂತ ವಿವರಿಸುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬಗ್ಗೆ ಬಿಹಾರದ ಜನರು ಭ್ರಮನಿರಸನಗೊಂಡಿದ್ದಾರೆ.
ಮತ್ತದರ ಪರಿಣಾಮವಾಗಿ ‘ಇಂಡಿ’ ಮೈತ್ರಿಕೂಟದತ್ತ ವಾಲಿದ್ದಾರೆ ಎಂಬ ಮಾತನ್ನು ಅದು ಪುನರಾವರ್ತಿಸುತ್ತಿತ್ತು. ಆದರೆ ಈಗ ಬಿಹಾರದ ಕಣದಿಂದ ಬರುತ್ತಿರುವ ಮಾಹಿತಿಯು ರಾಹುಲ್ ಗಾಂಧಿ ಅವರಿಗೆ ಪಥ್ಯವಾಗುತ್ತಿಲ್ಲ. ಯಾಕೆಂದರೆ ಈ ಮುಂಚೆ ‘ಇಂಡಿ’ ಮೈತ್ರಿಕೂಟ ಕ್ಲೀನ್ ಸ್ವೀಪ್ ಮಾಡಲಿದೆ ಅಂತ ಮಾಹಿತಿ ನೀಡುತ್ತಿದ್ದ ಮೂಲಗಳು ಈಗ ನಿತೀಶ್ ಆಂಡ್ ಗ್ಯಾಂಗು ಮತ್ತು ‘ಇಂಡಿ’ ಮೈತ್ರಿಕೂಟದ ಮಧ್ಯೆ ‘ನೆಕ್-ಟು-ನೆಕ್’ ಫೈಟು ನಡೆಯಲಿದೆ ಅನ್ನುತ್ತಿವೆ.
ಇದಕ್ಕಿಂತ ಆತಂಕದ ಸಂಗತಿ ಎಂದರೆ ‘ಇಂಡಿ’ ಮೈತ್ರಿಕೂಟದ ಮುಂಚೂಣಿಯಲ್ಲಿರುವ ಆರ್‌ಜೆಡಿ ಯ ಗಳಿಕೆ ಗಣನೀಯವಾಗಿದ್ದರೂ ಕಾಂಗ್ರೆಸ್ ಗಳಿಕೆ ಅಂದುಕೊಂಡಷ್ಟಾಗುವುದಿಲ್ಲ. ಹೀಗಾಗಿ 243 ಸದಸ್ಯ ಬಲದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಯಾರು ಗೆದ್ದರೂ ಕೈ ಪಾಳಯದ ಶಕ್ತಿ ಗಮನಾರ್ಹವಾಗಿರುವುದಿಲ್ಲ ಎಂಬ ಮೆಸೇಜು ಬಂದಿರುವುದು.
ಇದನ್ನೂ ಓದಿ: R T Vittalmurthy Column: ಡಿಸಿಎಂ ಪಟ್ಟಕ್ಕೆ ಪ್ರಿಯಾಂಕ್-ಜಮೀರ್ ?
ಪರಿಣಾಮ? ರಾಹುಲ್ ಗಾಂಧಿ ಎಷ್ಟು ಆತಂಕದಲ್ಲಿದ್ದಾರೆ ಎಂದರೆ ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಕೋಲಾಹಲ ಎಬ್ಬಿಸಿರುವ ವಿಷಯಗಳು ಅವರಿಗೆ ಮುಖ್ಯವಾಗಿ ಕಾಣುತ್ತಿಲ್ಲ. ಯಾಕೆಂದರೆ, ಬಿಹಾರ ಹೇಳಿ ಕೇಳಿ ಜಾತಿ ಕೇಂದ್ರಿತ ರಾಜಕಾರಣಕ್ಕೆ ಹೆಸರುವಾಸಿ. ಅಲ್ಲಿ ಧರ್ಮಾ ಧಾರಿತ ರಾಜಕಾರಣಕ್ಕೆ ಮತದಾರರು ಒತ್ತು ಕೊಡುವುದಿಲ್ಲ.
ಅಂತಲೇ ಇವತ್ತು ‘ಇಂಡಿ’ ಮೈತ್ರಿಕೂಟ ಹರಸಾಹಸ ಮಾಡಬೇಕಿದೆ ಎಂದರೆ ಧರ್ಮಾಧಾರಿತ ರಾಜಕಾರಣವನ್ನು ಕೇಂದ್ರವಾಗಿಸಿಕೊಂಡ ರಾಜ್ಯಗಳಲ್ಲಿ ಕಾಂಗ್ರೆಸ್ ಕತೆಯೇನು? ಎಂಬುದು ರಾಹುಲ್ ಗಾಂಽ ಅವರ ಚಿಂತೆ. ಇವತ್ತು ಬಿಹಾರದಲ್ಲಿ ಕಾಂಗ್ರೆಸ್ ನೆಚ್ಚಿಕೊಂಡಿರುವ ಭೂಮಿಹಾರ್, ದಲಿತ, ಮುಸ್ಲಿಂ ಮತಬ್ಯಾಂಕುಗಳ ಪೈಕಿ ಮುಸ್ಲಿಮರು ಓಕೆ. ಆದರೆ ಭೂಮಿಹಾರ್ ಮತಬ್ಯಾಂಕು ಆರ್‌ಜೆಡಿಗೆ ಬೆಂಬಲ ನೀಡುವುದಿಲ್ಲ.
ಒಂದು ಕಾಲದಲ್ಲಿ ಶೋಷಿತ ಮತದಾರರು ಮತಗಟ್ಟೆಗೆ ಬರದಂತೆ ನೋಡಿಕೊಳ್ಳುತ್ತಿದ್ದ ಭೂಮಿ ಹಾರ್ ಸಮುದಾಯಕ್ಕೆ ನಿರ್ಣಾಯಕ ಹೊಡೆತ ಕೊಟ್ಟವರು ಲಾಲೂ ಪ್ರಸಾದ್ ಯಾದವ್. ಚುನಾವಣೆಯ ಸಮಯದಲ್ಲಿ ಶೋಷಿತ ಮತದಾರರು ಹೆಚ್ಚಿರುವ ಮತಗಟ್ಟೆಗಳಿಗೆ ಹೆಚ್ಚಿನ ಪೊಲೀಸ್ ಭದ್ರತೆ ನೀಡಲು ಲಾಲೂ ಪ್ರಸಾದ್ ಯಾದವ್ ನಿರ್ಧರಿಸಿದ್ದರಿಂದ ಅಲ್ಲಿನ ಮತಗಟ್ಟೆಗಳ ಮೇಲೆ ಭೂಮಿಹಾರರಿಗಿದ್ದ ಕಂಟ್ರೋಲು ತಪ್ಪಿ ಹೋಯಿತು.
ಇದೇ ಕಾರಣಕ್ಕಾಗಿ ಭೂಮಿಹಾರರು ಆರ್‌ಜೆಡಿಯನ್ನು ಬೆಂಬಲಿಸುವುದಿಲ್ಲ. ಇವತ್ತು ಅವರು ಕಾಂಗ್ರೆಸ್ ಜತೆಗಿದ್ದರೂ ಇಂಡಿ ಮೈತ್ರಿಕೂಟದಲ್ಲಿರುವ ಆರ್‌ಜೆಡಿಯ ಜತೆಗಿಲ್ಲ. ಆ ದೃಷ್ಟಿಯಿಂದ ಕಾಂಗ್ರೆಸ್ ಜತೆಗಿನ ಸಖ್ಯದಿಂದ ಆರ್‌ಜೆಡಿಗೆ ಒಂದಷ್ಟು ಮುಸ್ಲಿಂ ಮತಗಳು ದಕ್ಕುತ್ತವೆ. ಪರಿಣಾಮ ವಾಗಿ ತೇಜಸ್ವಿ ಯಾದವ್ ಅವರು ಕಾಂಗ್ರೆಸ್ ಪಕ್ಷಕ್ಕೆ ಹೇಳಿಕೊಳ್ಳುವಂಥ ಆದ್ಯತೆ ಕೊಡುತ್ತಿಲ್ಲ.
ಹೀಗಾಗಿ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್ ಪಕ್ಷದ ಶಕ್ತಿ ಅಂದು ಕೊಂಡಷ್ಟು ಗಟ್ಟಿಯಾಗುವುದಿಲ್ಲ. ರಾಹುಲ್ ಗಾಂಧಿಯವರ ಸದ್ಯದ ಅತಂಕಕ್ಕೆ ಇವೆಲ್ಲವೂ ಕಾರಣ. ಹೀಗಾಗಿ ಕರ್ನಾಟಕದಲ್ಲಿ ಸಿಎಂ ಹುದ್ದೆಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ನಡೆಯುತ್ತಿರುವ ಶೀತಲ ಸಮರದ ಬಗ್ಗೆ ರಾಹುಲ್ ಗಾಂಧಿ ಉತ್ಸುಕತೆ ತೋರಿಸುತ್ತಿಲ್ಲ.
ಸ್ವತಃ ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಉತ್ಸುಕತೆ ತೋರಿಸಿದರೂ ರಾಹುಲ್ ಗಾಂಧಿ ಮಾತ್ರ ನಿರಾಸಕ್ತಿ ತೋರಿಸು ತ್ತಿದ್ದಾರೆ. ಅವರಿಗೀಗ ಯಾವುದೇ ಗಂಡಾಂತರ ಎದುರಾಗುವುದು ಬೇಕಿಲ್ಲ. ಯಾಕೆಂದರೆ ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಲು ಅಂತ ಉಳಿದಿರುವ ಏಕೈಕ ರಾಜ್ಯ ಕರ್ನಾಟಕ.
ಹೀಗಿರುವಾಗ ಅಧಿಕಾರ ಹಂಚಿಕೆಯ ಸಂಘರ್ಷವು ಕರ್ನಾಟಕ ಎಂಬ ನೆಲೆಯು ಕೈ ತಪ್ಪುವಂತೆ ಮಾಡುವುದು ಅವರಿಗೆ ಬೇಕಿಲ್ಲ. ಹೀಗಾಗಿ ಅವರು ತೋರುತ್ತಿರುವ ನಿರಾಸಕ್ತಿಯು ಕರ್ನಾಟಕದಲ್ಲಿ ನಡೆಯುತ್ತಿರುವ ಅಧಿಕಾರ ಹಂಚಿಕೆಯ ಸಂಘರ್ಷಕ್ಕೆ ಬ್ರೇಕ್ ಹಾಕುವ ಸಾಧ್ಯತೆ ಜಾಸ್ತಿ. ಡಿಕೆಶಿ ಪಾಳಯದಲ್ಲೇನು ನಡೆಯುತ್ತಿದೆ? ಹೀಗೆ ದಿಲ್ಲಿ ಮೂಲಗಳು ರಾಹುಲ್ ಗಾಂಧಿ ಅವರ ನಿರಾಸಕ್ತಿಯ ಬಗ್ಗೆ ಹೇಳುತ್ತಿದ್ದರೆ, ಇಲ್ಲಿ ಕರ್ನಾಟಕದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪಾಳಯದಲ್ಲಿ ಒಂದು ವಿಶ್ವಾಸ ಕಾಣಿಸಿಕೊಂಡಿತ್ತು.
ಕಳೆದ ವಾರ ಕಾಣಿಸಿಕೊಂಡಿದ್ದ ಈ ವಿಶ್ವಾಸದ ಪ್ರಕಾರ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆಯ ಬಗ್ಗೆ ಒಲವು ಹೊಂದಿದ್ದಾರೆ ಮತ್ತು ರಾಹುಲ್ ಗಾಂಧಿಯವರ ಮೇಲೆ ಒತ್ತಡ ಹೇರಿ ಡಿ. ಕೆ.ಶಿವಕುಮಾರ್ ಅವರ ದಾರಿ ಸುಗಮ ವಾಗುವಂತೆ ಮಾಡುತ್ತಾರೆ.
ಇದು ಸ್ಪಷ್ಟವಾಗಿರುವುದರಿಂದಲೇ ಡಿ.ಕೆ.ಶಿವಕುಮಾರ್ ಅವರು ಬಹುವಾಗಿ ನಂಬುವ ಸ್ವಾಮೀಜಿ ಯೊಬ್ಬರು ನವೆಂಬರ್ ೨೧, ೨೪ ಮತ್ತು ೨೬ರ ಡೇಟು ಕೊಟ್ಟಿದ್ದು, ಈ ಪೈಕಿ ಒಂದು ದಿನ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬುದು ಡಿಕೆಶಿ ಕ್ಯಾಂಪಿನ ವಿಶ್ವಾಸವಾಗಿತ್ತು. ಆದರೆ ಈ ಕ್ಯಾಂಪಿನ ವಿಶ್ವಾಸ ದಟ್ಟವಾಗಿದ್ದ ಕಾಲದ ಡಿ.ಕೆ.ಶಿವಕುಮಾರ್ ಅವರು, “ಅಧಿಕಾರ ಹಂಚಿಕೆಯ ಬಗ್ಗೆ ಮಾತನಾಡಿ ಯಾರೂ ದಣಿವು ಮಾಡಿಕೊಳ್ಳಬೇಡಿ. ಈ ಬಗ್ಗೆ ನಾನು ಮತ್ತು ಸಿಎಂ ಮಾತನಾಡಿದರೆ ಕಿಮ್ಮತ್ತು" ಅನ್ನುವ ಮೂಲಕ ಇಡೀ ಎಪಿಸೋಡಿಗೆ ಟ್ವಿಸ್ಟು ಕೊಟ್ಟಿದ್ದಾರೆ.
ಯಡಿಯೂರಪ್ಪ ನೋವಿಗೆ ಕಾರಣವೇನು?
ಈ ಮಧ್ಯೆ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನೊಂದಿದ್ದಾರೆ. ಅವರ ನೋವಿಗೆ ಪಕ್ಷದ ವರಿಷ್ಠರೇ ಕಾರಣ. ಕರ್ನಾಟಕದಲ್ಲಿ ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಪಕ್ಷದ ಅಧ್ಯಕ್ಷ ರಾಗಿದ್ದರೂ ಅವರ ಕೈಗಳನ್ನು ವರಿಷ್ಠರು ಕಟ್ಟಿಹಾಕಿದ್ದಾರೆ ಎಂಬುದು ಯಡಿಯೂರಪ್ಪ ಅವರ ನೋವು. ಇವತ್ತು ವಿಜಯೇಂದ್ರ ಅವರ ನಾಯಕತ್ವದ ವಿರುದ್ಧ ಕೆಲವರು ಕೂಗು ಹಾಕುತ್ತಿದ್ದರೂ ವರಿಷ್ಠರು ಅದಕ್ಕೆ ಬ್ರೇಕ್ ಹಾಕಿಲ್ಲ.
ದೇಶದ ಬಹುತೇಕ ರಾಜ್ಯಗಳಲ್ಲಿ ಪಕ್ಷದ ಅಧ್ಯಕ್ಷರ ಜಾಗವನ್ನು ಗಟ್ಟಿ ಮಾಡಿದ್ದರೂ ಇಲ್ಲಿ ಆ ಕೆಲಸ ವಾಗುತ್ತಿಲ್ಲ. ಸಾಲದೆಂಬಂತೆ, ವಿಜಯೇಂದ್ರ ಅವರು ಪಕ್ಷದ ಕೋರ್ ಕಮಿಟಿಯ ಸಮ್ಮತಿ ಯೊಂದಿಗೆ ಸೆಂಟ್ರಲ್ ಬೋರ್ಡುಗಳಿಗೆ ಶಿಫಾರಸು ಮಾಡುತ್ತಿರುವ ಹೆಸರುಗಳನ್ನು ಕೇಂದ್ರದವರು ಪರಿಗಣಿಸು ತ್ತಿಲ್ಲ.
ಹೀಗಾಗಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಖಾತೆಗಳ ಭಾಗವಾಗಿರುವ ಬೋರ್ಡುಗಳಲ್ಲಿ ವಿಜಯೇಂದ್ರ ಶಿಫಾರಸು ಮಾಡಿದ ಹೆಸರುಗಳನ್ನು ನಾಮಿನೇಟ್ ಮಾಡುತ್ತಿಲ್ಲ. ಹೀಗೆ ಪಕ್ಷದ ರಾಜ್ಯಾಧ್ಯಕ್ಷರನ್ನು ನಿರ್ಲಕ್ಷಿಸುತ್ತಾ, ಕರ್ನಾಟಕದಲ್ಲಿ ಪಕ್ಷ ಸಂಘಟನೆಯಾಗಬೇಕು ಅಂತ ಬಯಸಿದರೆ ಹೇಗೆ? ಅನ್ನುವುದು ಯಡಿಯೂರಪ್ಪ ಅವರ ನೋವು.
ಅಂದ ಹಾಗೆ, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ.ಸಂತೋಷ್ ಅವರೇನೂ ‘ವಿಜಯೇಂದ್ರ ಹಟಾವೋ’ ಯೋಜನೆಗೆ ಬೆಂಬಲ ನೀಡುತ್ತಿಲ್ಲ. ಕಳೆದ ವಾರ ದಿಲ್ಲಿಯ ತಮ್ಮ ನಿವಾಸದಲ್ಲಿ ಕೆಲ ನಾಯಕರ ಜತೆ ಚರ್ಚಿಸಿದ ಸಂತೋಷ್ ಅವರು, “ವಿಜಯೇಂದ್ರ ಪಕ್ಷಾಧ್ಯಕ್ಷರಾಗಿ ಮುಂದುವರಿಯಲಿ ಬಿಡ್ರೀ" ಅಂದಿದ್ದಾರಂತೆ. ಆದರೆ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಸಿದ್ದೇಶ್, ಅರವಿಂದ ಬೆಲ್ಲದ್, ಕುಮಾರ್ ಬಂಗಾರಪ್ಪ ಅವರಂಥವರು ಸುಮ್ಮನೆ ಕೂತಿಲ್ಲ.
ಬದಲಿಗೆ ವಿಜಯೇಂದ್ರ ವಿರುದ್ಧ ಮತ್ತೊಂದು ಸುತ್ತಿನ ಕದನಕ್ಕೆ ಮುಹೂರ್ತ ಫಿಕ್ಸು ಮಾಡಿ ಕುಳಿತಿದ್ದಾರೆ ಎಂಬುದು ಯಡಿಯೂರಪ್ಪ ಅವರಿಗಿರುವ ಮಾಹಿತಿ. ಹೀಗಾಗಿ ಅವರು ನೋವು ಮಾಡಿಕೊಂಡಿದ್ದಾರೆ.
ಬಿಜೆಪಿಯಲ್ಲಿ ಲೆಟರ್ ಬಾಂಬ್
ಇನ್ನು ರಾಜ್ಯ ಬಿಜೆಪಿಯಲ್ಲಿ ‘ಲೆಟರ್ ಬಾಂಬ್’ ಎಪಿಸೋಡು ಶುರುವಾಗಿದೆ. ಅರ್ಥಾತ್, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರಾಜ್ಯ ಬಿಜೆಪಿಯ ಕಾರ್ಯಕರ್ತರು ನಿರಂತರವಾಗಿ ಪತ್ರ ಬರೆಯುತ್ತಿದ್ದಾರೆ. ಅವರ ಪತ್ರದ ಸಾರಾಂಶ ವೆಂದರೆ, ‘ಆಡಳಿತಾರೂಢ ಕಾಂಗ್ರೆಸ್ ವಿರುದ್ಧದ ಆರೋಪಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುವ ಕೆಲಸವು ನಮ್ಮ ನಾಯಕರಿಂದ ಆಗುತ್ತಿಲ್ಲ’ ಎಂಬುದು.
‘ಈ ಹಿಂದೆ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿದ್ದ ಕೆಂಪಣ್ಣ ಅವರು ಬಿಜೆಪಿ ಸರಕಾರದ ವಿರುದ್ಧ ನಲವತ್ತು ಪರ್ಸೆಂಟ್ ಕಮಿಷನ್ನಿನ ಆರೋಪ ಹೊರಿಸಿದಾಗ ವಿಪಕ್ಷ ಕಾಂಗ್ರೆಸ್ ‘ಪೇ ಸಿಎಂ ಚಳವಳಿ’ ಆರಂಭಿಸಿ ಲಾಭ ಪಡೆಯಿತು. ಆದರೆ ಈಗ ಕಾಂಗ್ರೆಸ್ ಸರಕಾರದ ವಿರುದ್ಧ ಗುತ್ತಿಗೆದಾರರು ಎಂಬತ್ತು ಪರ್ಸೆಂಟ್ ಕಮಿಷನ್ನಿನ ಆರೋಪ ಮಾಡಿದರೂ ನಮ್ಮ ನಾಯಕರು ಅದನ್ನು ಎನ್‌ಕ್ಯಾಶ್ ಮಾಡಿ ಕೊಳ್ಳುತ್ತಿಲ್ಲ.
ಇದೇ ರೀತಿ, ಟನಲ್ ರಸ್ತೆಯ ಯೋಜನೆಯಿಂದ ಹಲವು ಬಡಾವಣೆಗಳಲ್ಲಿರುವ ಅಸಂಖ್ಯಾತ ಬೋರ್ ವೆಲ್ ಗಳು ನಾಶವಾಗಿ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ. ಆದರೆ ಅ ಬಗ್ಗೆಯೂ ನಮ್ಮವರು ಚಕಾರ ವೆತ್ತುತ್ತಿಲ್ಲ’ ಎಂಬುದು ಈ ಪತ್ರಗಳಲ್ಲಿರುವ ಆರೋಪ.
ಕಾರ್ಯಕರ್ತರ ಈ ಆರೋಪಗಳಿಂದ ಮುಜುಗರಗೊಂಡ ಅಮಿತ್ ಶಾ ಅವರು ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಅವರನ್ನು ಈ ವಾರ ಕರ್ನಾಟಕಕ್ಕೆ ಕಳಿಸಲಿದ್ದಾರೆ ಎಂಬುದು ಲೇಟೆಸ್ಟು ಸುದ್ದಿ.
ಲಾಸ್ಟ್ ಸಿಪ್: ಅಂದ ಹಾಗೆ, ಇತ್ತೀಚಿನ ದಿನಗಳಲ್ಲಿ ತುಂಬಾ ಗಮನ ಸೆಳೆಯುತ್ತಿರುವವರು ಕರ್ನಾ ಟಕದ ಸಂಸದರು. ಇತ್ತೀಚೆಗೆ ಅತಿವೃಷ್ಟಿಯಿಂದ ರೈತರು ಅಪಾರ ಪ್ರಮಾಣದ ಹಾನಿ ಅನುಭವಿಸಿದ ರಲ್ಲ? ಈ ಬಾಬ್ತಿನಲ್ಲಿ ಕೇಂದ್ರ ಸರಕಾರ ರಾಜ್ಯಕ್ಕೆ ಅತ್ಯಲ್ಪ ಪರಿಹಾರ ನೀಡಿದರೂ ಕರ್ನಾಟಕದ ಸಂಸದರು, ಸಚಿವರು ಚಕಾರವೆತ್ತುತ್ತಿಲ್ಲ. ತಮಗೆ ಅವಕಾಶ ಸಿಕ್ಕಾಗಲೆಲ್ಲ ರಾಜ್ಯ ರಾಜಕಾರಣದ ಬಗ್ಗೆ ಮಾತನಾಡುವ ಸಂಸದರು, ಸಚಿವರು ತಮ್ಮ ಕಾರ್ಯವ್ಯಾಪ್ತಿ ದಿಲ್ಲಿ ತಲುಪಿದೆ ಎಂಬುದನ್ನೇ ಮರೆತಂತಿದೆ.
ಒಂದು ವೇಳೆ, ತಮಿಳುನಾಡಿಗೋ, ಆಂಧ್ರಕ್ಕೋ ಕೇಂದ್ರವು ಮಲತಾಯಿ ಧೋರಣೆ ತೋರಿಸಿದ್ದಿದ್ದರೆ ಅಲ್ಲಿನ ಸಂಸದರು ಒಗ್ಗಟ್ಟಾಗಿ ಹೋರಾಟಕ್ಕಿಳಿಯುತ್ತಿದ್ದರು. ಆದರೆ ನಮ್ಮ ಸಂಸದರು ‘ಅದೆಲ್ಲ ನಮಗಲ್ಲ ಬಿಡಿ’ ಎಂಬಂತಿದ್ದಾರೆ. ಇಂಥ ಮಾದರಿಯ ಸಂಸದರು ಬೇರೆ ಯಾವ ರಾಜ್ಯದಲ್ಲಿರಲು ಸಾಧ್ಯ?