ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

R T Vittalmurthy Column: ಅಹಿಂದ ಸೈನ್ಯಕ್ಕೆ ರಾಜಣ್ಣ ಫೆವಿಕಾಲ್‌

ಒಂದು ನೋವಿನಿಂದ ಬೆಂಬಲಿಗರು ತಾವಾಗೇ ಮಾಡಿದ ಪ್ರತಿಭಟನೆ ಅದು. ಅಲ್ಲಿ ಸಿದ್ದರಾಮಯ್ಯ ಅವರನ್ನು ಅವಮಾನಿಸಿ ಅಂತ ನಾನೇಕೆ ಹೇಳುತ್ತೇನೆ?’ ಅಂತ ಅವರು ಹೇಳುತ್ತಾರೆ. ಯಾವಾಗ ನೀವು ಪರಸ್ಪರ ದೂರ ಇರುತ್ತೀರೋ? ಆಗ ಹಚ್ಚಿ ಹಾಕುವವರು ಇಲ್ಲದ್ದನ್ನೆಲ್ಲ ಬಂದು ಹೇಳುತ್ತಾರೆ. ಸತೀಶ್ ಜಾರಕಿಹೊಳಿ ಅವರ ವಿಷಯದಲ್ಲಿ ಅಗಿದ್ದೂ ಇದೇ. ಈ ಹಚ್ಚಿ ಹಾಕುವ ಜನ ಇರುತ್ತಾರಲ್ಲ? ಅವರು ನಿಮ್ಮ ಬಳಿ ಬಂದು, ‘ಜಾರಕಿಹೊಳಿ ನಿಮಗೆ ಕೈ ಕೊಟ್ಟರು. ಲೀಡರ್ ಶಿಪ್ ಚೇಂಜ್ ಮಾಡಿ ಅಂತ ಹೈಕಮಾಂಡಿಗೆ ಲೆಟರು ಕೊಟ್ಟರು ಅಂತೆಲ್ಲ ಕತೆ ಹೇಳುತ್ತಾರೆ. ಆದರೆ ನಾನು ಜಾರಕಿಹೊಳಿಯವರ ಜತೆ ಮಾತನಾಡಿದ್ದೇನೆ.

ಮೂರ್ತಿಪೂಜೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ತುಮಕೂರಿಗೆ ಹೋದರು. ಹೀಗೆ ಹೋದವರು ಮಾಜಿ ಸಚಿವ ಕ.ಎನ್.ರಾಜಣ್ಣ ಅವರ ಮನೆಗೆ ಭೇಟಿ ನೀಡಿದರು. ಅಂದ ಹಾಗೆ ಈ ಹಿಂದೆ ತಮ್ಮ ಸಂಪುಟದಲ್ಲಿ ಸಚಿವರಾಗಿದ್ದ ರಾಜಣ್ಣ ಅವರ ವಿಷಯದಲ್ಲಿ ಸಿದ್ದರಾಮಯ್ಯ ಅವರಿಗೆ ತುಂಬು ವಿಶ್ವಾಸ. ಕಾರಣ, ತಮಗೇನೇ ಅನ್ನಿಸಿದರೂ ಅದನ್ನು ಮುಕ್ತವಾಗಿ ಹೇಳುವುದು, ಒಬ್ಬರು ಇಟ್ಟ ನಂಬಿಕೆಗೆ ಮೋಸ ಮಾಡದೆ ಇರುವುದು ರಾಜಣ್ಣ ಅವರ ಗುಣ. ಇದೇ ಗುಣ ಸಿದ್ದರಾಮಯ್ಯ ಅವರಿಗೆ ಇಷ್ಟ.

ಹೀಗಾಗಿ ಇತ್ತೀಚೆಗೆ ತುಮಕೂರಿಗೆ ಹೋದವರು ರಾಜಣ್ಣ ಅವರ ಮನೆಗೆ ಹೋಗಿದ್ದಾರೆ. ಹೀಗೆ ಹೋದವರು ಊಟ ಮಾಡಿ ಲೋಕಾಭಿರಾಮವಾಗಿ ಮಾತುಕತೆಗೆ ಕುಳಿತಿದ್ದಾರೆ. ಈ ಮಾತುಕತೆಯ ಸಂದರ್ಭದಲ್ಲಿ ಒಂದು ವಿಷಯವನ್ನು ಪ್ರಸ್ತಾಪಿಸಿದ ರಾಜಣ್ಣ ಅವರು, ‘ನೀವೇನೇ ಹೇಳಿ ಸಾರ್, ಆದರೆ ನೀವು ಹೆಚ್.ಸಿ.ಮಹದೇವಪ್ಪ ಮತ್ತು ಸತೀಶ್ ಜಾರಕಿಹೊಳಿ ಅವರಿಂದ ದೂರ ನಿಂತಿರುವುದು ಸರಿಯಲ್ಲ. ನೀವೆಲ್ಲ ಒಗ್ಗಟ್ಟಾಗಿದ್ದರೆ ತಾನೇ ಅಹಿಂದ? ಆ ಸಮುದಾಯಗಳ ಹಿತ ಕಾಪಾಡುವ ದೃಷ್ಟಿಯಿಂದಲಾದರೂ ನೀವೆಲ್ಲ ಒಗ್ಗಟ್ಟಾಗಬೇಕು’ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಅಂದ ಹಾಗೆ ಸಿದ್ದರಾಮಯ್ಯ ಅವರು ಸಿಎಂ ಹುದ್ದೆಯಿಂದ ಕೆಳಗಿಳಿದರಲ್ಲ? ಇದಾದ ನಂತರ ಅಹಿಂದ ಸೈನ್ಯದ ಬ್ಯಾಕ್ ಬೋನ್ ಅನ್ನಿಸಿಕೊಂಡ ಡಾ.ಹೆಚ್.ಸಿ.ಮಹದೇವಪ್ಪ ಮತ್ತು ಸತೀಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ಅವರ ಕ್ಯಾಂಪಿನಿಂದ ದೂರ ಉಳಿದಿದ್ದಾರೆ. ಈ ಸೈನ್ಯದ ದಂಡನಾಯಕ ಸಿದ್ದರಾಮಯ್ಯ ಕೂಡಾ ಈ ಇಬ್ಬರು ನಾಯಕರಿಂದ ಅಂತರ ಕಾಪಾಡಿಕೊಂಡಿ ದ್ದಾರೆ.

ಇದನ್ನೂ ಓದಿ: R T Vittalmurthy Column: ಈಶ್ವರಾಯ ನಮಃ ಅನ್ನಲಿದೆಯೇ ಕುರುಬರ ಸೈನ್ಯ ?

ಹಾಗಂತಲೇ ಸಿದ್ದರಾಮಯ್ಯ ಅವರ ಜತೆ ಮಾತುಕತೆಗೆ ಕುಳಿತಾಗ ಈ ಅಂಶವನ್ನು ಒತ್ತಿ ಹೇಳಿದ ರಾಜಣ್ಣ ಅವರು, ‘ಈಗ ನೀವು ಪರಸ್ಪರ ಒಂದಾಗದಿದ್ದರೆ ಅಹಿಂದ ಸೈನ್ಯದ ಶಕ್ತಿಗೆ ಹೊಡೆತ ಬೀಳಲಿದೆ’ ಎಂದಿದ್ದಾರೆ. ಯಾವಾಗ ಅವರು ಈ ಮಾತು ಹೇಳಿದರೋ? ಆಗ ಮುಖ ಗಂಟು ಹಾಕಿ ಕೊಂಡ ಸಿದ್ದರಾಮಯ್ಯ ಅವರು, ‘ಅಲ್ರೀ ರಾಜಣ್ಣ, ಈ ಸರ್ಕಾರದಲ್ಲಿ ಮಂತ್ರಿ ಸ್ಥಾನ ಕೊಡಿಸಲಿಲ್ಲ ಅಂತ ಮಹದೇವಪ್ಪ ನನ್ನ ಮೇಲೆ ಸಿಟ್ಟಾಗಿದ್ದಾರೆ. ಆದರೆ ನನಗೊಂದು ಮಿತಿ ಇಲ್ಲವಾ? ನಾನು ಹೇಳಿದ್ದೆಲ್ಲ ಈಗ ನಡೆಯುತ್ತದೆಯಾ? ಆದರೆ ಇದನ್ನು ಗಮನಿಸದೆ ಮಹದೇವಪ್ಪ ಅವರ ಬೆಂಬಲಿಗರು ಟಿ.ನರಸೀಪುರದಲ್ಲಿ ನನ್ನ ವಿರುದ್ದ ಪ್ರತಿಭಟನೆ ನಡೆಸುತ್ತಾರೆ.

ಅಲ್ಲಿ ನನ್ನ ಭಾವಚಿತ್ರಕ್ಕೆ ಅವಮಾನ ಮಾಡುತ್ತಾರೆ. ಇದನ್ನು ಮಹದೇವಪ್ಪ ಇಲ್ಲವೇ ಅವರ ಮಗ ಮಾಡಿಸಿದ್ದು ತಾನೇ? ಅಂದ ಮೇಲೆ ಇದನ್ನೆಲ್ಲ ನಾನು ಸಹಿಸಿಕೊಳ್ಳಬೇಕಾ? ಅಂತ ಕೇಳಿದ್ದಾರೆ. ಆಗೆಲ್ಲ ಮಾತನಾಡಿದ ರಾಜಣ್ಣ ಅವರು, ‘ಯೇ ಅದೆಲ್ಲ ಈ ಮಧ್ಯದ ಜನ ಬಂದು ಹೇಳುವ ಕಟ್ಟು ಕತೆ ಸಾರ್, ನಾನು ಮಹದೇವಪ್ಪ ಅವರ ಬಳಿ ಮಾತನಾಡಿದ್ದೇನೆ.

ಒಂದು ನೋವಿನಿಂದ ಬೆಂಬಲಿಗರು ತಾವಾಗೇ ಮಾಡಿದ ಪ್ರತಿಭಟನೆ ಅದು. ಅಲ್ಲಿ ಸಿದ್ದರಾಮಯ್ಯ ಅವರನ್ನು ಅವಮಾನಿಸಿ ಅಂತ ನಾನೇಕೆ ಹೇಳುತ್ತೇನೆ?’ ಅಂತ ಅವರು ಹೇಳುತ್ತಾರೆ. ಯಾವಾಗ ನೀವು ಪರಸ್ಪರ ದೂರ ಇರುತ್ತೀರೋ? ಆಗ ಹಚ್ಚಿ ಹಾಕುವವರು ಇಲ್ಲದ್ದನ್ನೆಲ್ಲ ಬಂದು ಹೇಳುತ್ತಾರೆ. ಸತೀಶ್ ಜಾರಕಿಹೊಳಿ ಅವರ ವಿಷಯದಲ್ಲಿ ಅಗಿದ್ದೂ ಇದೇ. ಈ ಹಚ್ಚಿ ಹಾಕುವ ಜನ ಇರುತ್ತಾರಲ್ಲ? ಅವರು ನಿಮ್ಮ ಬಳಿ ಬಂದು, ‘ಜಾರಕಿಹೊಳಿ ನಿಮಗೆ ಕೈ ಕೊಟ್ಟರು. ಲೀಡರ್ ಶಿಪ್ ಚೇಂಜ್ ಮಾಡಿ ಅಂತ ಹೈಕಮಾಂಡಿಗೆ ಲೆಟರು ಕೊಟ್ಟರು ಅಂತೆಲ್ಲ ಕತೆ ಹೇಳುತ್ತಾರೆ. ಆದರೆ ನಾನು ಜಾರಕಿಹೊಳಿಯವರ ಜತೆ ಮಾತನಾಡಿದ್ದೇನೆ.

K N Rajanna and Siddu

ಅವರಿಗೆ ನಿಮ್ಮ ಬಗೆಗಿರುವ ಬೇಸರ ಎಂದರೆ, ‘ಸಿದ್ದರಾಮಯ್ಯನವರು ಯಾವುದಕ್ಕೂ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ’ ಎಂಬುದು. ‘ದಿಲ್ಲಿಯಲ್ಲಿ ಯಾರ‍್ಯಾರ ಜತೆ ಸಂಪರ್ಕದಲ್ಲಿರಬೇಕು ಅಂತ ನನಗೆ, ಮಹದೇವಪ್ಪನವರಿಗೆ, ಜಾರ್ಜ್ ಅವರಿಗೆ ಹೇಳಿದರೆ ಸಾಕಿತ್ತು. ನಾವು ನೋಡಿಕೊಳ್ಳು ತ್ತಿದ್ದಿವಿ. ಆದರೆ ಸಿದ್ದರಾಮಯ್ಯ ಅವರು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಎಲ್ಲದಕ್ಕೂ ಆ ‘ಈಶ’ನನ್ನು ನಂಬಿದರು. ಅ ಈಶ ದಿಲ್ಲಿಯಲ್ಲಿ ಏನು ಮಾಡಿದ್ನೊ? ಏನು ಕತೆಯೋ? ಯಾರಿಗೂ ಗೊತ್ತಿಲ್ಲ. ಹೀಗಾಗಿ ಪರಿಸ್ಥಿತಿ ಉಲ್ಟಾ ಅಯಿತು’ ಅಂತ ಅವರು ಹೇಳುತ್ತಾರೆ.

‘ಹೀಗೆ ನೋಡಲು ಹೋದರೆ ನಿಮಗೆಲ್ಲರಿಗೂ ಮಿಸ್ ಕಮ್ಯುನಿಕೇಶನ್ ಇದೆ. ಅದರ ಬದಲು ನೀವು ಮೂವರು ಒಟ್ಟಿಗೆ ಕೂತು ಮಾತನಾಡಿಕೊಂಡರೆ, ನಿಮ್ಮಲ್ಲಿರುವ ಅನುಮಾನಗಳನ್ನು ಹೇಳಿ ಕೊಂಡರೆ ಪಿಕ್ಚರ್ ಕ್ಲಿಯರ್ ಆಗುತ್ತದೆ. ಪರಸ್ಪರರಲ್ಲಿರುವ ಅನುಮಾನ ದೂರವಾಗುತ್ತದೆ’ ಎಂದಿದ್ದಾರೆ.

ಅಷ್ಟೇ ಅಲ್ಲ,‘ ಇವತ್ತು ಜನ ಬಂದು ಅವರು ನಿಮ್ಮನ್ನು ಹೀಗೆ ಬೈದರು, ಹಾಗೆ ಬೈದರು ಅಂತ ಹೇಳಿದಾಗ ನೀವು ರಿಯಾಕ್ಟ್ ಮಾಡಲು ಹೋಗಬೇಡಿ. ನೀವು ರಿಯಾಕ್ಟ್ ಮಾಡಿದಾಗ ಅದನ್ನೇ ಮಹದೇವಪ್ಪ, ಜಾರಕಿಹೊಳಿ ಬಳಿ ಹೋಗಿ ಕಡ್ಡಿಯನ್ನು ಗುಡ್ಡ ಮಾಡುವ ಜನ, ‘ನಿಮ್ಮನ್ನು ಸಿದ್ದರಾಮಯ್ಯ ಹಾಗೆ ಬೈದ್ರು, ಹೀಗೆ ಬೈದ್ರು ಅಂತ ಹಚ್ವಿ ಹಾಕುತ್ತಾರೆ.

ಹೀಗೆ ಜನ ಬಂದು ಆಡುವ ಮಾತಿಗೆ ಕಿವಿ ಕೊಡುತ್ತಾ ಹೋದರೆ ಮನೆ ಹಾಳು ಮಾಡಿಬಿಡುತ್ತಾರೆ’ ಎಂದು ಹೇಳಿದ್ದಾರೆ. ಯಾವಾಗ ರಾಜಣ್ಣ ನೇರಾ ನೇರವಾಗಿ ಈ ಮಾತು ಹೇಳಿದರೋ? ಅಗ ಕೆಲ ಹೊತ್ತು ಸುಮ್ಮನಿದ್ದ ಸಿದ್ದರಾಮಯ್ಯ, ‘ಅಯ್ತು ಬಿಡ್ರೀ ರಾಜಣ್ಣ. ಅದೇನೇನು ಆಗಿದೆಯೋ ಆಗಲಿ. ಇನ್ನೊಂದೆರಡು ತಿಂಗಳು ಸುಮ್ಮನಿದ್ದು ಬಿಡೋಣ. ಅಮೇಲೆ ಈ ಬಗ್ಗೆ ಮಾತನಾಡೋಣ’ ಎಂದಿದ್ದಾರೆ. ಅಲ್ಲಿಗೆ ಅಹಿಂದ ಸೈನ್ಯದ ಬಿರುಕಿಗೆ ಫೆವಿಕಾಲ್ ಹಚ್ಚುವ ರಾಜಣ್ಣ ಅವರ ಪ್ರಯತ್ನಕ್ಕೆ ಮೊದಲ ಹಂತದ ಯಶಸ್ಸು ಸಿಕ್ಕಂತಾಗಿದೆ.

ಬಿಜೆಪಿಯಲ್ಲಿ ಕಲಹ ನಿಲ್ಲುತ್ತಿಲ್ಲ

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಕೆಂಡದಂತ ಕೋಪ ಬಂದಿದೆ. ಇದಕ್ಕೆ ಕಾರಣ ಅವರಿಗೆ ತಲುಪಿದ ಆಡಿಯೋ ಕ್ಲಿಪ್ಪಿಂಗು. ಬಿಜೆಪಿ ಮೂಲಗಳ ಪ್ರಕಾರ ಈ ಆಡಿಯೋ ಕ್ಲಿಪ್ಪಿಂಗಿ ನಲ್ಲಿರುವುದು ವಿಧಾನ ಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ಬೆಂಬಲಿಗನದು.

ಅಕ್ಟೋಬರ್ 3ರ ಶನಿವಾರ ಅಶೋಕ್ ಮುಂದಾಳತ್ವದಲ್ಲಿ ನಡೆಸಲುದ್ದೇಶಿಸಲಾದ ಸೇವಾ ಸಂಕಲ್ಪ ಅಭಿಯಾನ ಕಾರ್ಯಕ್ರಮದ ಬಗ್ಗೆ ಮಾತನಾಡುವ ಈ ಬೆಂಬಲಿಗ, ‘ಯಾವ ಕಾರಣಕ್ಕೂ ಈ ಪ್ರೋಗ್ರಾಮಿಗೆ ವಿಜಯೇಂದ್ರ ಅವರನ್ನು ಕರೆಸಬಾರದು’ಎನ್ನುತ್ತಾನೆ. ಹೀಗೆ ಆತ ಆಡಿದ ಮಾತು ಗಳನ್ನು ಹತ್ತಿರದಲ್ಲಿದ್ದವರು ರೆಕಾರ್ಡು ಮಾಡಿ ವಿಜಯೇಂದ್ರ ಅವರಿಗೆ ಕಳಿಸಿದ್ದಾರೆ.

ಯಾವಾಗ ಈ ಆಡಿಯೋ ಕ್ಲಿಪ್ಪಿಂಗು ತಮ್ಮ ಕೈ ಸೇರಿತೋ? ಇದಾದ ನಂತರ ವಿಜಯೇಂದ್ರ ಮತ್ತಷ್ಟು ಕ್ರುದ್ದರಾಗಿದ್ದಾರೆ. ಈ ಹಿಂದೆ ಬಳ್ಳಾರಿ ಚಲೋ ಪಾದಯಾತ್ರೆ ಮಾಡಿದಾಗ ನಾನು ಅಶೋಕ್ ಅವರಿಗೆ ಪ್ರಾಮಿನೆನ್ಸು ಕೊಟ್ಟೆ. ಕುರುಡುಮಲೈನಿಂದ ಆರಂಭಿಸಿದ ವಿಜಯ ಸಂಕಲ್ಪ ಯಾತ್ರೆಗೆ ಬನ್ನಿ ಅಂತ ಕರೆದೆ. ಆದರೆ ಇವರು ಒಂದು ಕಾರ್ಯಕ್ರಮಕ್ಕೆ ನನ್ನನ್ನು ಕರೆಯಲು ಬಯಸಲಿಲ್ಲ ಎಂದರೆ ಏನರ್ಥ? ಎಂಬುದು ವಿಜಯೇಂದ್ರ ಅವರ ಸಿಟ್ಟು. ಅಂದ ಹಾಗೆ ಅವರು ಹೀಗೆ ಸಿಟ್ಟಿಗೆದ್ದ ಕಾಲದ ಅಶೋಕ್ ಅವರ ವಿರುದ್ದ ಹಲವು ದೂರುಗಳನ್ನು ಹೊತ್ತ ಇ-ಮೇಲ್‌ಗಳು ವರಿಷ್ಟರ ಕಂಪ್ಯೂಟರಿಗೆ ಹೋಗಿ ಬೀಳುತ್ತಿವೆ. ಇದಕ್ಕೆ ಯಾರು ಕಾರಣ?ಎಂಬುದು ಮಾತ್ರ ಚಿದಂಬರ ರಹಸ್ಯ.

ನಿಗಮ-ಮಂಡಳಿ ಫೈಟು

ಈ ಮಧ್ಯೆ ರಾಜ್ಯದ ವಿವಿಧ ನಿಗಮ-ಮಂಡಳಿಗಳ ನೇಮಕಾತಿ ವಿಷಯ ಇನ್ನೂ ಸೆಟ್ಲಾಗುತ್ತಿಲ್ಲ. ಕಾರಣ? ನಿಗಮ-ಮಂಡಳಿಗಳಿಗೆ ಇಂತಿಂಥವರನ್ನು ನೇಮಕ ಮಾಡಬೇಕು ಅಂತ ಸಿಎಂ ಡಿ.ಕೆ.ಶಿವಕುಮಾರ್ ಅವರು ವರಿಷ್ಠರ ಮುಂದೆ ಒಂದು ಪಟ್ಟಿಯನ್ನು ಇಟ್ಟಿದ್ದರೆ, ಮಾಜಿ ಸಿಎಂ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರೂ ಕೂಡಾ ತಮ್ಮ ತಮ್ಮ ಪಟ್ಟಿ ಇಟ್ಟಿದ್ದಾರೆ.

ಮೂಲಗಳ ಪ್ರಕಾರ, ತಮ್ಮ ಪಟ್ಟಿಯನ್ನು ವರಿಷ್ಠರ ಮುಂದಿಟ್ಟ ಡಿಕೆಶಿ, ‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಬೇಕಿದೆ. ಹೀಗಾಗಿ ನೇಮಕಾತಿಗಳ ವಿಷಯದಲ್ಲಿ ಫುಲ್ಲು ಫ್ರೀಡಂ ಕೊಡಬೇಕು’ಎಂದಿದ್ದಾರೆ. ಆದರೆ, ‘ನಾವು ಕೂಡಾ ಪಕ್ಷದ ಹಿತಾಸಕ್ತಿಯಿಂದಲೇ ಪಕ್ಷಕ್ಕೆ ಅನುಕೂಲ ಕರವಾಗುವ ಹೆಸರುಗಳನ್ನು ನಿಗಮ-ಮಂಡಳಿಗಳಿಗೆ ಸೂಚಿಸಿದ್ದೇವೆ’ಅಂತ ಸಿದ್ದರಾಮಯ್ತ ಮತ್ತು ಬಿ.ಕೆ.ಹರಿಪ್ರಸಾದ್ ರಾಹುಲ್ ಗಾಂಧಿಯವರಿಗೆ ವಿವರಿಸಿದ್ದಾರೆ.

ಪರಿಣಾಮ: ನಿಗಮ-ಮಂಡಳಿಗಳ ನೇಮಕಾತಿ ವಿಷಯದಲ್ಲಿ ಕಾಂಗ್ರೆಸ್ ವರಿಷ್ಠರು ಇನ್ನೂ ಮುಂದಡಿ ಇಟ್ಟಿಲ್ಲ.

ಕುಮಾರಣ್ಣನ ಕಿವಿಗೆ ಬಿದ್ದ ರಹಸ್ಯ?

ನೈಸ್ ಯೋಜನೆ ವ್ಯಾಪ್ತಿಯಲ್ಲಿ ಭೂಮಿ ಕಳೆದುಕೊಂಡ ರೈತರ ಅಹವಾಲು ಆಲಿಸಲು ಮೊನ್ನೆ ಕೇಂದ್ರ ಸಚಿವ ಕುಮಾರಸ್ವಾಮಿ ಹೋಗಿದ್ದರಲ್ಲ? ಆ ಸಂದರ್ಭದಲ್ಲಿ ಕೆಲ ರೈತ ಪ್ರಮುಖರಾಡಿದ ಮಾತು ಕೇಳಿ ಅವರು ದಿಗ್ಬ್ರಾಂತರಾದರಂತೆ. ಕಾರಣ, ನೈಸ್ ಯೋಜನೆಗೆ ಸ್ವಾಧೀನಪಡಿಸಿಕೊಳ್ಳಲಾದ ಹೆಚ್ಚುವರಿ ಭೂಮಿಯನ್ನು ಬಿಡಿಸಿಕೊಡಿ ಅಂತ ನಾವು ಹಿಂದಿನ ಸರಕಾರದ ಅವಧಿಯಲ್ಲಿ ಬೇಡಿಕೆ ಇಟ್ಟಿದ್ದೆವು.

ನಾವು ಇಟ್ಟ ಬೇಡಿಕೆಗೆ ಸರಕಾರ ನಡೆಸುತ್ತಿದ್ದ ಪಕ್ಷದ ಟಾಪ್ ಲೀಡರು ಪೂರಕವಾಗಿ ಸ್ಪಂದಿಸಿದ್ದರು. ಆದರೆ ಆ ಸಂದರ್ಭದಲ್ಲಿ ಒಬ್ಬ ಸಚಿವರು, ‘ನನಗೆ ಇನ್ನೂರು ಕೋಟಿ ಕೊಟ್ಟರೆ ಕೆಲಸ ಮಾಡಿ ಕೊಡುತ್ತೇನೆ. ಯಾಕೆಂದರೆ ಹೆಚ್ಚುವರಿ ಭೂಮಿ ಬಿಡಿಸಿಕೊಟ್ಟರೆ ನಿಮಗೆ ಹತ್ತು ಸಾವಿರ ಕೋಟಿ ಉಳಿಯುತ್ತದೆ’ ಎಂದರು. ಅಗ ನಾವು ಸರಕಾರದ ಮತ್ತೊಬ್ಬ ನಾಯಕರ ಬಳಿ ಹೋದೆವು. ಆದರೆ ಅವರು, ‘ನನಗೆ ಇನ್ನೂರೈವತ್ತು ಎಕರೆ ಭೂಮಿ ಕೊಡುವುದಾದರೆ ಕೆಲಸ ಮಾಡಿಸಿಕೊಡುತ್ತೇನೆ’ ಅಂದರು.

ಹೀಗಾಗಿ ಟಾಪ್ ಲೀಡರು ನಮ್ಮ ಪರವಾಗಿದ್ದರೂ ನ್ಯಾಯ ಮಾತ್ರ ಸಿಗಲಿಲ್ಲ’ ಅಂತ ಈ ರೈತ ಮುಖಂಡರು ಅಲವತ್ತುಕೊಂಡಾಗ ಕುಮಾರಸ್ವಾಮಿ ಮೌನಕ್ಕೆ ಜಾರಿದರಂತೆ.

ಲಾಸ್ಟ್ ಸಿಪ್

ಈ ಮಧ್ಯೆ ರಾಜ್ಯ ಕಾಂಗ್ರೆಸ್ ಮತ್ತು ಬಿಜೆಪಿಯ ಕೆಲ ಶಾಸಕರು ಗುಟ್ಟಾಗಿ ಮಾತುಕತೆ ಆರಂಭಿಸಿದ್ದಾರೆ. ಇದಕ್ಕೆ ಕಾರಣ, ತಮ್ಮ ಪಕ್ಷದ ನಾಯಕತ್ವದ ಬಗ್ಗೆ ಇರುವ ಅಸಮಾಧಾನ. ಮುಂದಿನ ಚುನಾವಣೆ ಯಲ್ಲಿ ಈಗಿರುವ ನಾಯಕತ್ವದ ಜತೆ ಹೋಗಲು ನಮಗೆ ಸಾಧ್ಯವಿಲ್ಲ. ಹೀಗಾಗಿ ನಮ್ಮಂತೆ ವೈಯಕ್ತಿಕ ಶಕ್ತಿ ಇರುವ 25ರಿಂದ 30 ಜನರ ಒಂದು ಶಕ್ತಿಯನ್ನು ಕಟ್ಟೋಣ. ಅದು ಫ್ರೆಷರ್ ಗ್ರೂಪ್ ಆಗಿ ನೆಲೆಯಾಗಲಿ. ಹಾಗೇನಾದರೂ ಇದು ಸಾಧ್ಯವಾದರೆ ಮುಂದಿನ ಚುನಾವಣೆಯ ನಂತರ ನಮ್ಮಿಚ್ಛೆ ಬಂದ ಕಡೆ ಹೋಗಬಹುದು ಎಂಬುದು ಈ ಶಾಸಕರ ಲೆಕ್ಕಾಚಾರ. ಅಂದ ಹಾಗೆ ಇಂತಹ ಲೆಕ್ಕಾಚಾರ ನಾಳೆಯೇ ಕೈಗೂಡಿ ಬಿಡುತ್ತದೆ ಎಂದಲ್ಲ.

ಯಾಕೆಂದರೆ ಕ್ಷೇತ್ರಗಳ ಪುನರ್ವಿಂಗಡಣೆ ಕಸರತ್ತು ಶುರುವಾದರೆ ಯಾರ್ಯಾರ ಕ್ಷೇತ್ರಗಳ ಕತೆ ಏನಾಗುತ್ತದೋ ಗೊತ್ತಿಲ್ಲ. ಹೀಗಾಗಿ ಆ ಕತೆ ಯಾವ ತಿರುವು ಪಡೆಯುತ್ತದೋ ಕಾಯೋಣ. ಅಲ್ಲಿಯವರೆಗೆ ಆಗಾಗ ಸಭೆ ಸೇರಿ ಮುಂದಿನ ದಾರಿಯ ಬಗ್ಗೆ ಚರ್ಚಿಸೋಣ ಅಂತ ಈ ಶಾಸಕರು ಮಾತನಾಡಿಕೊಂಡಿದ್ದಾರೆ. ಮುಂದೇನು ಕತೆಯೋ?

ಆರ್‌.ಟಿ. ವಿಠ್ಠಲಮೂರ್ತಿ‌

View all posts by this author